ಪಂಜು-ವಿಶೇಷ

ಪ್ರಾಣೇಶ-ಕಲ್ಲೋಳ ಹಾಸ್ಯದ್ವಯರ ಸಂಗಮ:ಗುಂಡೇನಟ್ಟಿ ಮಧುಕರ ಕುಲಕರ್ಣಿ


ಸುಮಾರು ಹತ್ತು ವರ್ಷಗಳ ಹಿಂದೆ ಹಾಸ್ಯಲೇಖಕ ಅನಂತ ಕಲ್ಲೋಳರಿಂದ ಒಂದು ಕಾಗದ ನನಗೆ ಬಂದಿತ್ತು. ನಾನೊಂದು ಕಾರ್‍ಯಕ್ರಮದಲ್ಲಿ ಯುವಕನೊಬ್ಬನ ಹಾಸ್ಯ ಭಾಷಣವನ್ನು ಕೇಳಿದೆ, ತುಂಬಾ ಚನ್ನಾಗಿ ಮಾತನಾಡುತ್ತಾರೆ. ಜನ ಬಿದ್ದು ಬಿದ್ದು ನಕ್ಕರು. ನೀವು ’ಕ್ರಿಯಾಶೀಲ ಬಳಗ’ದಿಂದ ಆ ಯುವ ಹಾಸ್ಯಭಾಷಣಕಾರನ ಕಾರ್‍ಯಕ್ರಮವನ್ನಿಟ್ಟುಕೊಳ್ಳಬೇಕು. ಬೆಳಗಾವಿ ಜನರಿಗೆ ಅವರ ಭಾಷಣವನ್ನು ಕೇಳುವ ಅವಕಾಶ ಮಾಡಿಕೊಡಿ ಎಂದು ಕಾಗದ ಬರೆದಿದ್ದರು. ಅನಂತ ಕಲ್ಲೋಳರ ಪತ್ರದಲ್ಲಿ ಬರೆದಿರುವಂತೆ ಮುಂದೆ ನಗರದ ಸಾಹಿತ್ಯ ಭವನದಲ್ಲಿ ಆ ನಗೆಭಾಷಣಕಾರನ ಭಾಷಣವನ್ನಿಟ್ಟುಕೊಂಡಿದ್ದೆವು. ಅಂದು ಸಾಹಿತ್ಯ ಭವನ ತುಂಬುವಷ್ಟು ಜನ ಸೇರಿದ್ದರು. ಆ ನಗೆಭಾಷಣಕಾರನ ಮಾತುಗಳನ್ನು ಕೇಳಿ ಮನದುಂಬಿ ನಕ್ಕಿದ್ದರು. ಅಂದು ಎಲ್ಲರನ್ನು ನಗಿಸಿದ ಯುವಕನೇ ಇಂದಿನ ವಿಶ್ವಖ್ಯಾತಿ ಪಡೆದಿರುವ ಗಂಗಾವತಿಯ ಬಿ. ಪ್ರಾಣೇಶ. ಮುಂದೆ ಪ್ರಾಣೇಶರು ಬೆಳಗಾವಿಗೆ ಬಂದಾಗ ಅನಂತ ಕಲ್ಲೋಳರ ಮನೆಗೆ ಹೋಗಿ ಆದರಾತಿಥ್ಯ ಸ್ವಿಕರಿಸಿ ಬಂದಿದ್ದೆವು. ಇತ್ತೀಚೆಗೆ ಏಕೋ ಪ್ರಾಣೇಶರಿಗೆ ಅವಸರದ ಜೀವನದಿಂದ ಕಲ್ಲೋಳರ ಮನೆಗೆ ಹೋಗಲಾಗಿಲಾಗಿರಲಿಲ್ಲ.

ಇದೇ ರವಿವಾರದಂದು ನಗರದ ಜೆ. ಎನ್. ಎಮ್. ಸಿ. ಕಾಲೇಜಿನ ಜೀರಗೆ ಸಭಾಂಗಣದಲ್ಲಿ ನಗೆಮಾತುಗಾರ ಬಿ. ಪ್ರಾಣೇಶರ ಭಾಷಣವಿದೆಯಂದು ಕೇಳಿದೆ. ಒಡನೆಯೇ ನನಗೆ ನೆನಪಾದದ್ದು ಹಾಸ್ಯಲೇಖಕ ಅನಂತ ಕಲ್ಲೋಳ ಅವರು ಪ್ರಾಣೇಶ ಭೇಟಿಯಾಗಿ ಹಲವು ವರ್ಷಗಳೇ ಕಳೆದವು, ನನ್ನ ಆರೋಗ್ಯ ಅಷ್ಟಕಷ್ಟೇ ಎಂದ ಮಾತು ನೆನಪಾಯಿತು. ಕಲ್ಲೋಳರ ಮಾತುಗಳನ್ನು ಪ್ರಾಣೇಶರಲ್ಲಿ ಹಂಚಿಕೊಂಡಾಗ ಹಿರಿಯ ಜೀವ ನನ್ನನ್ನು ನೆನೆಸುತ್ತಿದೆ. ಯಾವುದೇ ಕಾರಣಕ್ಕೂ ಈ ಬಾರಿ ಭೇಟಿಯಾಗಿಯೇ ಬರೋಣ. ಏನೋ ಕೆಲಸದ ಒತ್ತಡದ ಕಾರಣದಿಂದ ಅವರನ್ನು ಭೇಟಿಯಾಗಲಾಗಿಲ್ಲ ಅಷ್ಟೆ ಎಂದು ಕಲ್ಲೋಳರ ಮನೆಗೆ ಹೋಗುವದಾಗಿ ಮಾತನಾಡಿಕೊಂಡು ಮೊದಲು ಹಿಂದವಾಡಿಯಲ್ಲಿರುವ ನಮ್ಮ ಮನೆಗೆ ಬಂದ ಪ್ರಾಣೇಶರನ್ನು ನೋಡಿದ ಅವರ ಅಭಿಮಾನಿ ಬಳಗ ಲಗ್ಗೆ ಇಡಲಾರಂಭಿಸಿತು. ಎಲ್ಲರಿಗೂ ಪ್ರಾಣೇಶರೊಂದಿಗೆ ಫೋಟೊ ತೆಗೆಯಿಸಿಕೊಳ್ಳುವ ಹುರುಪು. ಮನೆಯಲ್ಲಿಯೇ ಸುಮಾರು ಒಂದು ಗಂಟೆಗಳ ಕಾಲ ಪ್ರಾಣೇಶರೊಂದಿಗೆ ಮಾತುಕತೆಗಳಾದವು. ಹತ್ತು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದಿದ್ದ ವಿಷಯವನ್ನು ಚಾಚೂ ತಪ್ಪದೇ ನೆನಪಿಸಿಕೊಂಡರು. ಪ್ರಾಣೇಶರ ಜ್ಞಾಪಕ ಶಕ್ತಿ ಅಗಾಧವಾದುದು. ೨೦೦೧ ರಲ್ಲಿ ನನ್ನ ಮೊದಲ ಕೃತಿ ನಗೆಬರಹಗಳ ಸಂಕಲನ ’ತಲೆಬೇಕು’ ಕೃತಿ ಬಿಡುಗಡೆ ಕಾರ್‍ಯಕ್ರಮ ಸಂದರ್ಭ ಹಿರಿಯ ಸಾಹಿತಿ ದಿ. ಎನ್ಕೆಯವರು ಹಾಗೂ ಬಿ. ಪ್ರಾಣೇಶ ನಮ್ಮ ಮನೆಗೆ ಬಂದಿದ್ದರು.

ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಹಿಂದಿರುವ ಮುಖ್ಯ ಶಕ್ತಿ ಎಂದರೆ ಬೀಚಿ. ಎಂದೆಂದಿಗೂ ಬೀಚಿಯವರೇ ನನ್ನ ಗುರುಗಳು. ಇಂದು ದಿನಕ್ಕೊಬ್ಬ ಗುರುಗಳನ್ನು ಬದಲಿಸುವ ಪರಂಪರೆ ಬಂದಿದೆ. ಅನಕೂಲಕ್ಕೊಬ್ಬ ಗುರುಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಮಾತನಾಡುತ್ತ ಕುಳಿತಿದ್ದ ಪ್ರಾಣೇಶ ಹೇಳಿದರು.
’ನಿಮ್ಮ ಹಾಸ್ಯಭಾಷಣದ ಹಿಂದೆ ಸಮಾಜಿಕ ಕಳಕಳಿಯೂ ಇರುತ್ತದೆ ಅದಕ್ಕಾಗಿ ನಿಮ್ಮ ಭಾಷಣ ನನಗೆ ಇಷ್ಟ’ ಎಂದು ನಾನೆಂದಾಗ
’ಹಾಸ್ಯ ಭಾಷಣಕಾರನಲ್ಲಿ ಕೇವಲ ಹಾಸ್ಯ, ವಿಡಂಬನೆಗಳಷ್ಟೆ ಇರೆದೇ ಸಮಾಜಕ್ಕೊಂದು ಸಂದೇಶವಿರಬೇಕು. ನಗೆಯೊಂದಿಗೆ ಜನಸಮುದಾಯಕ್ಕೆ ತಿಳುವಳಿಕೆ ಮಾತುಗಳನ್ನು ನೀಡಬೇಕು ಎಂಬುದು ನೀವು ಸರಿಯಾಗಿ ತಿಳಿದುಕೊಂಡಿದ್ದೀರಿ ನನ್ನ ಸಹವರ್ತಿಗಳೊಂದಿಗೆ ಈ ವಿಷಯ ಚರ್ಚೆಗೆ ಬಂದಿರುತ್ತದೆ. ಸಮಾಜಕ್ಕೆ ಉಪದೇಶ ನೀಡಲು ದಾಸರು, ಶರಣರು ಇದ್ದಾರೆ ಕೇವಲ ನಗಿಸುವುದಷ್ಟೇ ನಮ್ಮ ಕೆಲಸ ಎನ್ನುವುದು ಅವರ ವಾದ ಆದರೆ ನಾನು ಇದನ್ನು ಒಪ್ಪುವುದಿಲ್ಲ. ನಗೆಭಾಷಣಕಾರನಿಗೆ ಸಮಾಜಿಕ ಕಳಕಳಿಯೂ ಬೇಕಾಗುತ್ತದೆ’ ಎಂದರು.

ಈ ಮೊದಲು ಜೆ.ಎನ್. ಮೆಡಕಲ್ ಕಾಲೇಜಿಗೆ ಪ್ರಾಣೇಶ ಅತಿಥಿಗಳಾಗಿ ಬಂದಿದ್ದಾಗ ಅವರನ್ನು ಭೇಟಿಯಾಗಲು ಹೋಗಿದ್ದೆ. ಅವರನ್ನು ಭೇಟಿಯಾಗಿ ಅವರೊಂದಿಗೆ ಚಹ ಕುಡಿದು ಮಾತನಾಡುತ್ತ ಕುಳಿತಿದ್ದಾಗ ಫೋಟೊಗ್ರಾಫರನೊಬ್ಬ ಬಂದು ಏನೂ ಮಾತನಾಡದೇ ಮುಖದ ಮೇಲೆ ಯಾವುದೇ ಹಾವ ಭಾವವಿಲ್ಲದೇ ನಮ್ಮಿಬ್ಬರ ಫೋಟೊವೊಂದನ್ನು ಹೊಡೆದುಕೊಂಡು ಹೋಗಿಬಿಟ್ಟ. ಇದನ್ನು ಗಮನಿಸುತ್ತಿದ್ದ ಪ್ರಾಣೇಶ ಅವರು ಅಲ್ಲಿಯೇ ಇದ್ದ ಸಂಘಟಕರನ್ನು ಕರೆದು, "ಇವನೆಂಥಾ ಪೋಟೋಗ್ರಾಫರ್‌ರಿ… ನಮ್ಮನ್ನು ಏನೂ ಕೇಳದೇ ಫೋಟೋ ಹೊಡೆದುಕೊಂಡು ಹೋಗಿಬಿಟ್ಟ… ಮುಖಾ ಮ್ಯಾಲ ಮಾಡ್ರಿ… ಕೆಳಗ ಮಾಡ್ರಿ… ಅಂತ ಏನೂ ಹೇಳಲೇ ಇಲ್ಲ ಕನಿಷ್ಠಪಕ್ಷ ಸ್ಮೈಲ್ ಪ್ಲೀಜ್ ಅಂತ ಕೂಡ ಅನ್ನಲಿಲ್ಲ ಇವನೆಂಥಾ ಫೋಟೊಗ್ರಾಫರ್‌ರಿ?" ಎಂಬ ಪ್ರಶ್ನೆಗೆ ಆ ಸಂಘಟಕ "ನೋಡ್ರಿ ಇವತ್ತ ರೆಗ್ಯುಲರ್ ಫೋಟೊಗ್ರಾಫರ್ ಬಂದಿಲ್ರಿ. ಇಂವಾ ನಮ್ಮ ಮೆಡಕಲ್ ಕಾಲೇಜಾಗ ಬರೇ ಹೆಣಗೋಳ ಪೋಟೋ ತೆಗ್ಯಾಂವರಿ!" ಎಂಬ ಉತ್ತರ ಕೇಳಿ ಇಬ್ಬರೂ ಮನಸಾರೆ ನಕ್ಕಿದ್ದೆವು. ಮುಂದೆ ಅದನ್ನೇ ಪ್ರಾಣೇಶರು ತಮ್ಮ ಭಾಷಣದಲ್ಲಿ ಹೇಳಿ ಜನರನ್ನು ನಗಿಸಿದ್ದರು.

ಉಪಹಾರ ಮುಗಿಸಿಕೊಂಡು (ಬೆಳಗಾವಿಯ) ಕುಲಕರ್ಣಿ ಬೀದಿಯಲ್ಲಿರುವ ಕಲ್ಲೋಳರ ಮನೆಗೆ ಹೋದೆವು. ಕಲ್ಲೋಳರಿಗೆ ನಾವು ಬರುವ ವಿಷಯವನ್ನು ಮೊದಲೇ ತಿಳಿಸಿದ್ದರಿಂದ ನಾವು ಬರುವ ದಾರಿಯನ್ನು ನೋಡುತ್ತಲಿದ್ದರು. ಪ್ರಾಣೇಶರನ್ನು ನೋಡಿದೊಡನೆ ಕಲ್ಲೋಳರಿಗೆ ತುಂಬಾನೆ ಖುಷಿಯುಂಟಾಯಿತು. ಅವರ ಅಪ್ಪಿಕೊಂಡು ಒಳಗೆ ಸ್ವಾಗತಿಸಿದರು. ಪ್ರಾಣೇಶರನ್ನು ಮೊದಲು ಭೇಟಿಯಾದ ಘಟನೆಯೊಂದಿಗೆ ಕಲ್ಲೋಳರ ನೆನಪುಗಳು ಬಿಚ್ಚಿಕೊಳ್ಳತೊಡಗಿದವು. ಹಾಸ್ಯ ಕಾರ್‍ಯಕ್ರಮವೊಂದರಲ್ಲಿ ಪ್ರಾಣೇಶರ ಭೇಟಿಯಾಯಿತು. ಆವಾಗ್ಯೆ ಸುಮಾರಾಗಿ ಎಲ್ಲ ಪತ್ರಿಕೆಗಳಲ್ಲಿಯೂ ನನ್ನ ಲೇಖನಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದ್ದವು ಅವುಗಳನ್ನು ನೋಡಿ, ನಾನೇನೋ ದೊಡ್ಡ ಭಾಷಣಕಾರನೆಂದು ಅವರು ತಿಳಿದುಕೊಂಡಿರಬೇಕು. ನಾನಂತಹ ಭಾಷಣಕಾರನಲ್ಲ. ಆನೆ ದಾಟಿ ಹೋದ ದಾರಿಯಲ್ಲಿ ನಡೆಯುವುದು ಸುಲಭವನ್ನುವ ಮಾತನ್ನು ನನ್ನ ಬಗ್ಗೆ ಹೇಳಿದ್ದರು.

ಅದೇ ದಿನ ನಾನು ಹೇಳಿದ್ದೆ ಮುಂದೆ ಈ ಯುವಕ ವಿಶ್ವವಿಖ್ಯಾತ ವ್ಯಕ್ತಿಯಾಗುತ್ತಾನೆ. ಇವರಲ್ಲಿ ಮಾತನಾಡುವ ಕಲೆಯಿದೆ ಉಳಿದವರು ಮಾತನಾಡುವ ಮುಂದೆ ಮಾತನಾಡಲು ಬಾರದ ಮೂಗನ ತರಹ ಕೂಡವ ಇವರು ಮಾತಿನ ಝರಿ ಒಮ್ಮೆ ಪ್ರಾರಂಭವಾಯಿತೆಂದರೆ ಆಯಿತು ಜನರನ್ನೆಲ್ಲ ತಮ್ಮಡೆಗೆ ಸೆಳೆದುಕೊಂಡು ಬಿಡುತ್ತಾರೆ. ಅಂದು ನಾನು ನುಡಿದ ಮಾತನ್ನು ಪ್ರಾಣೇಶ ಇಂದು ನಿಜ ಮಾಡಿ ತೋರಿಸಿದ್ದಾರೆ. ವಿದೇಶಗಳಲ್ಲಿಯೂ ಕೂಡ ಕನ್ನಡ ನಗೆಭಾಷಣಗಳನ್ನು ಮಾಡಿ ಕನ್ನಡ ಪತಾಕೆ ಹಾರಿಸಿದ್ದಾರೆ. ಇಂದು ನನ್ನ ಅಣ್ಣ ತಮ್ಮಂದಿರು ಇಷ್ಟೊಂದು ಪ್ರಸಿದ್ಧಿ ಪಡೆದಿದ್ದರೂ ನಾನಿಷ್ಟು ಖುಷಿ ಪಡುತ್ತಿರಲಿಲ್ಲ ಅಷ್ಟೊಂದು ಖುಷಿ ನನಗಾಗುತ್ತಲಿದೆ. ಎಂದು ಕಲ್ಲೋಳ ಅಭಿಮಾನದಿಂದ ನುಡಿದರು.

’ಈಗ ಕೇವಲ ನಾನು ಹೇಳಿದ್ದನಷ್ಟೇ ನೀವು ಕೇಳಬೇಕು. ನೀವು ಹೇಳಿದ್ದನ್ನು ನಾನು ಕೇಳುವದಿಲ್ಲ, ಏಕೆಂದರೆ ನನ್ನ ಕಿವಿ ಕೇಳಿಸುವುದಿಲ್ಲ!’ ಎಂದು ಹಾಸ್ಯ ಚಟಾಕಿಯೊಂದನ್ನು ಹಾರಿಸಿದರು. ಎರಡನೇ ಬಾರಿ ಪ್ರಾಣೇಶರು ಬಂದಿದ್ದಾಗ ಅನಂತ ಕಲ್ಲೋಳ ಕಾರ್‍ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದರು ಅಂದು ಪ್ರಾಣೇಶರಾಡಿದ ಮಾತುಗಳನ್ನು ನೆನೆದುಕೊಂಡು ’ಪಾಪಿಷ್ಠರಿಗೆ ಕಣ್ಣು ಹೋಗ್ತಾವ, ಪುಣ್ಯವಂತರಿಗೆ ಕಿವಿ ಹೋಗ್ತಾವ’ ಎಂದು ಪ್ರಾಣೇಶರಾಡಿದ್ದ ಮಾತನ್ನು ಮೆಲಕು ಹಾಕಿದರು.

ಮರಾಠಿ ಭಾಷೆಯಲ್ಲಿ ಸಾಕಷ್ಟು ಜನ ಹಾಸ್ಯ ಭಾಷಣವನ್ನು ಮಾಡುವವರಿದ್ದರು ಆದರೆ ನಮ್ಮಲ್ಲಿ ಹಾಸ್ಯ ಭಾಷಣ ಮಾಡುವವರು ಇದ್ದಿರಲೇ ಇಲ್ಲ. ಏನಾದರೂ ವಿನೋದಿ ಭಾಷಣ ಮಾಡಿಸಬೇಕೆಂದರೆ ನಾವು ಮತ್ತೆ ಬೇಂದ್ರೆಯವರನ್ನೇ ಕರೆಯಿಸಬೇಕಾಗುತ್ತಿತ್ತು. ಕನ್ನಡದಲ್ಲಿಯ ಹಾಸ್ಯ ಭಾಷಣದ ಒಂದು ಪಥ ಪ್ರಾರಂಭಿಸಿದವರು ಪ್ರಾಣೇಶ. ಅವರನ್ನು ಕಂಡರೆ ನನಗೆ ತುಂಬಾನೇ ಅಭಿಮಾನವಾಗುತ್ತದೆ. ಹಾಸ್ಯ ಭಾಷಣಕ್ಕೆ ನೀವೊಂದು ಚಾಲನೆ ಕೊಟ್ಟಿರಿ ಅದರಂತೆ ಮರಾಠಿ ಭಾಷಿಕರಲ್ಲಿ ವಿಡಂಬನೆ ಗೀತಗಳು ಜನಪ್ರಿಯತೆ ಪಡೆದಿವೆ, ಅವುಗಳ ಕುರಿತು ನೀವು ವಿಚಾರ ಮಾಡಿ ಎಂದರು.

ಈ ಹಾಸ್ಯದ್ವಯರ ಸಂಗಮದ ಸಂಭ್ರಮವನ್ನು ನೋಡುತ್ತ ಕುಳಿತುಕೊಂಡಿದ್ದೆ. ಕಲ್ಲೋಳರಿಗಂತೂ ನಾವು ಹೇಳಿದ್ದು ಏನೂ ಕೇಳಿಸುತ್ತಲೇ ಇರಲಿಲ್ಲ. ಅವರು ಹೇಳಿದ್ದನ್ನು ಕೇಳಿ ಬಂದೆವು.


ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಪ್ರಾಣೇಶ-ಕಲ್ಲೋಳ ಹಾಸ್ಯದ್ವಯರ ಸಂಗಮ:ಗುಂಡೇನಟ್ಟಿ ಮಧುಕರ ಕುಲಕರ್ಣಿ

  1. ಇಂದಿನ ದಿನಗಳಲ್ಲಿ ಓದುಗರೇ  ಕಡಿಮೆಯಾಗುತ್ತಿದ್ದಾರೆ. ನನ್ನ ಲೇಖನವನ್ನು ಓದಿ ಪ್ರತಿಕ್ರಿಯೆ ನೀಡಿದ  ಎಲ್ಲ   ಓದುಗರಿಗೂ ವಂದನಗಳು
     
    ಗುಂಡೇನಟ್ಟಿ  ಮಧುಕರ (ಲೇಖಕ) ಮೊ:9448093589

Leave a Reply

Your email address will not be published. Required fields are marked *