ಗೆಳೆತನ ಅಂದ್ರೆ ಯಾರಿಗಿಷ್ಟ ಇಲ್ಲ..! ಪ್ರಪಂಚದಲ್ಲಿ ಪ್ರತಿಯೊಬ್ಬರು ಗೆಳೆತನದ ನೆರಳಿನ ತಂಪಿನಲ್ಲಿ ಪವಡಿಸುತ್ತಾ ಇರುವ ಕನಸು ಕಾಣುವವರೇ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಇಂತಹ ಬಯಕೆ ಸಹಜವಾಗಿಯೇ ಮೂಡುತ್ತದೆ.
ನಮ್ಮನೆಯ ನಾಯಿ ಟೈಗರ್. ಅದು ಪುಟ್ಟ ಮರಿಯಾಗಿದ್ದಾಗ ಅದರ ಜೊತೆಗಾರ ಜ್ಯಾಕ್ ನೊಂದಿಗೆ ಆಟವಾಡುತ್ತಲೇ ಬೆಳೆದದ್ದು. ಎರಡೂ ಮರಿಗಳು ಮಾಡದ ತುಂಟತನವಿಲ್ಲ. ದಿನಾ ಈ ಎರಡು ನಾಯಿ ಮರಿಗಳು ಮುಚ್ಚಿದ್ದ ಗೇಟಿನ ಗ್ರಿಲ್ಲುಗಳೆಡೆಯಲ್ಲಿ ತೂರಿ ಮನೆಯೊಳಗೆ ಬಂದು ಅಲ್ಲಿಲ್ಲಿ ಸುತ್ತಿ ಸುಳಿಯುವುದು, ಮಂಚದ ಮೇಲೆ ಕಾಲಿಟ್ಟು ಏರಲು ಪ್ರಯತ್ನಿಸುವುದು, ಒಳಗಿನ ಕೋಣೆಯಲ್ಲಿರುವ ಸೋಫಾಕ್ಕೆ ಚಂಗನೆ ನೆಗೆದು ಏರುವುದು ಮುಂತಾದ ಕಸರತ್ತುಗಳನ್ನು ಅಭ್ಯಾಸ ಮಾಡಿಕೊಂಡಿದ್ದವು. ಸ್ವಚ್ಚತೆಯ ದೃಷ್ಟಿಯಿಂದ ಇದು ನಮ್ಮ ಮನೆಯಲ್ಲಿ ಕಾನೂನು ಬಾಹಿರ ಕೆಲಸವಾಗಿತ್ತು. ಇಂತಹ ಘಟನೆಗಳು ಘಟಿಸಿದಾಗಲೆಲ್ಲಾ ನಾಯಿ ಮರಿಗಳನ್ನು ತಂದ ನನ್ನ ಕಡೆಯೇ ಕಣ್ಣುಗಳು ಹೊರಳುತ್ತಿದ್ದುದರಿಂದ ಈ ಅಭ್ಯಾಸವನ್ನು ಬಿಡಿಸಲೆಂದು ಗೇಟಿನ ಗ್ರಿಲ್ ಗಳ ನಡುವೆ ತಂತಿ ಹೆಣೆದು ಬೇಲಿಯಂತೆ ಮಾಡಿದ್ದೆ. ಆ ದಿನ ಇಡೀ ನಾಯಿ ಮರಿಗಳು ಮನೆಯನ್ನೇ ಪ್ರದಕ್ಷಿಣೆ ಹಾಕುತ್ತ ಒಳ ನುಗ್ಗುವ ಜಾಗ ಹುಡುಕುತ್ತಿದ್ದವು. ಅವಕ್ಕೆಂದೇ ಇದ್ದ ಗೂಡಿನೊಳಗೆ ಮುದುಡಿ ಮಲಗಿದರೂ ಆಗಾಗ ಒಳ ನುಗ್ಗುವ ದಾರಿಯನ್ನು ಅರಸುವುದೂ ಕಾಣುತ್ತಿತ್ತು.
ಕತ್ತಲಾಯಿತು. ಅವುಗಳೂ ನಾವೂ ನಿದ್ರಾಲೋಕಕ್ಕೆ ನಡೆದೆವು. ಬೆಳಗ್ಗೆ ಎದ್ದು ಕೋಣೆಯಿಂದ ಹೊರಬರುವಾಗ ಕಂಡ ದೃಶ್ಯ ನೋಡಿ ನನ್ನ ಕಣ್ಣುಗಳು ಅಚ್ಚರಿಯಿಂದ ಮೇಲೇರಿದವು. ಎರಡೂ ನಾಯಿ ಮರಿಗಳು ಒಂದರ ಮೇಲೊಂದು ಬೆಚ್ಚಗೆ ಸೋಫಾದ ಮೇಲೆ ಹಾಯಾಗಿ ಪವಡಿಸಿವೆ. ನನ್ನ ಹೆಜ್ಜೆಯ ಸದ್ದಿಗೆ ಕಣ್ತೆರೆದು ಮೈಮುರಿದು ಎದ್ದು ಬಾಲ ಬೀಸಿ ಸ್ವಾಗತ ಕೋರಿದವು.
ಇದ್ಯಾವ ಮಾಯದಲ್ಲಿ ಒಳಗೆ ಬಂದವಪ್ಪ ಅಂದುಕೊಂಡು ಮೆಲ್ಲನೆ ಎತ್ತಿಕೊಂಡು ಹೋಗಿ ಅವರ ಗೂಡಿಗೆ ಬಿಟ್ಟು ಬಂದೆ. ಸ್ವಲ್ಪ ಹೊತ್ತಿನಲ್ಲಿ ತಿರುಗಿ ನೋಡಿದರೆ ಮತ್ತೆ ನನ್ನ ಕಾಲ ಬಳಿಯಲ್ಲೇ ಸುಳಿದಾಡುತ್ತಿದ್ದವು. ಅರೇ ! ತಂತಿಯ ಬಲೆಯ ಸಂದಿನಲ್ಲಿ ಅವುಗಳ ಕಾಲು ಮಾತ್ರ ನುಸುಳುವಷ್ಟು ಸ್ಥಳವಿತ್ತು. ಅಲ್ಲಿಂದ ಬರಲಂತೂ ಸಾಧ್ಯವಿರಲಿಲ್ಲ. ಮತ್ತೆಲ್ಲಿಂದ ಒಳ ಬರುತ್ತವಪ್ಪಾ ಎಂದು ಅವುಗಳನ್ನು ಮತ್ತೆ ಹೊರಗೆ ಬಿಟ್ಟು ನಾನೂ ಅವುಗಳ ಬೆನ್ನ ಹಿಂದೆ ಕಳ್ಳ ಕಿಂಡಿಯನ್ನು ಹುಡುಕುತ್ತಾ ನಡೆದೆ. ಮನೆಯ ಬದಿಯಲ್ಲಿದ್ದ ಟೆರೇಸಿನ ಮೆಟ್ಟಿಲನ್ನು ಪುಟುಪುಟನೆ ಏರುತ್ತಾ ಹೋದ ಅವುಗಳು ಅಲ್ಲಿ ತೆರೆದಿದ್ದ ಉಪ್ಪರಿಗೆಯ ಕಿಟಕಿಯೊಳಗೆ ಸಲೀಸಾಗಿ ನುಗ್ಗಿ ಒಳಗಿನ ಮೆಟ್ಟಿಲಿಳಿದು ಮನೆಯೊಳಗೆ ನಡೆದವು !
ಇಂತಹಾ ಎಲ್ಲಾ ತುಂಟತನಗಳನ್ನು ಜೊತೆಯಾಗಿಯೇ ಮಾಡುತ್ತಿದ್ದವು. ರಾತ್ರಿಯಿಡೀ ಅವಕ್ಕೆ ಸ್ವಾತಂತ್ರ್ಯ. ಬೆಳಗ್ಗೆ ಎದ್ದ ಕೂಡಲೇ ಕಟ್ಟಿ ಹಾಕುವುದು ನಮ್ಮಲ್ಲಿನ ಕ್ರಮ. ಒಂದು ದಿನ ಬೆಳಗ್ಗೆ ಟೈಗರ್ ಮಾತ್ರ ಕಟ್ಟುವ ಜಾಗದಲ್ಲಿದೆ. ಆದರೆ ಕಟ್ಟಲು ಸಿಗದೆ ದೂರ ದೂರ ನಮ್ಮನ್ನು ಕರೆಯುವಂತೆ ಓಡುತ್ತಿದೆ. ನನ್ನ ಮಗನ ಶಾಲೆಯಲ್ಲಿ ಆ ದಿನ ವಾರ್ಷಿಕೋತ್ಸವ. ನಾನೂ ಬೇಗ ಕೆಲಸ ಮುಗಿಸಿ ಅವನೊಡನೆ ಹೋಗುವವಳಿದ್ದೆ. ಹಾಗಾಗಿ ಅದನ್ನು ಕಟ್ಟುವ ಕೆಲಸ ಮಗನಿಗೆ ವಹಿಸಿಕೊಟ್ಟು ಒಳ ನಡೆದೆ. ಸ್ವಲ್ಪ ಹೊತ್ತಿನಲ್ಲಿ ಮಗನ ಕೂಗು ತೋಟದ ಮೂಲೆಯಿಂದ ಕೇಳಿಸಿತು. ಏನಾಯಿತಪ್ಪ ಎಂದು ಗಾಭರಿಯಿಂದ ಹೊರಗೋಡಿ ಬಂದರೆ ಜ್ಯಾಕ್ ನಾಯಿಯ ಕಳೇಬರವನ್ನು ಅಳುತ್ತಲೇ ಹೊತ್ತು ತರುತ್ತಿದ್ದ ಮಗ ಕಾಣಿಸಿದ. ಜೊತೆಗೆ ಅವನಷ್ಟೇ ದುಃಖದ ಮುಖಭಾವದಲ್ಲಿದ್ದ ಟೈಗರ್. ಹಾರ್ಟ್ ಅಟ್ಯಾಕಿನಿಂದಾದ ಸಾವು ಎಂದು ಡಾಕ್ಟರ್ ಹೇಳಿದ್ದು ನಮಗರ್ಥವಾಗಿ ದುಃಖವನ್ನು ನುಂಗಿಕೊಂಡರೂ ಟೈಗರ್ ತನ್ನ ಗೆಳೆಯನ ಸಾವಿನಿಂದ ಕಂಗೆಟ್ಟಿತ್ತು. ಅದಕ್ಕೆ ಜೊತೆಯಾಗಲೆಂದು ಬಂದ ಇನ್ನೊಂದು ನಾಯಿ ಮರಿ ಫ್ರಾಂಕಿ. ಅದೂ ನನ್ನಣ್ಣನ ಮನೆಯ ಮುದ್ದಿನ ನಾಯಿ. ಟೈಗರಿನ ದುಗುಡ ನೋಡಲಾಗದೇ ಅದನ್ನು ನನಗೆ ಕೊಟ್ಟಿದ್ದ. ಬಹುಬೇಗ ಎರಡೂ ಸ್ನೇಹಿತರಾದವು. ಮೊದಲಿನಂತೆ ಆಟ,ಊಟ, ತುಂಟಾಟ. ಮತ್ತೆರಡೇ ವರ್ಷ.. ಮನೆಯಿಂದ ಪರ್ಲಾಂಗಿನಷ್ಟು ದೂರದಲ್ಲಿದ್ದ ರಸ್ತೆಗೆ ರಾತ್ರಿ ಭೇಟಿ ನೀಡುತ್ತಿದ್ದ ಅದು ಯಾವುದೋ ವಾಹನದ ಹೊಡೆತಕ್ಕೆ ಸಿಕ್ಕಿ ಸತ್ತಿತ್ತು.
ಇನ್ನು ಟೈಗರಿನ ಜೊತೆಗೆಂದು ಬೇರೆ ನಾಯಿ ತರುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಕೊಂಡೆ. ಸ್ವಲ್ಪ ದಿನದ ಶೋಖಾಚರಣೆಯ ಬಳಿಕ ಅದೂ ಪರಿಸ್ಥಿತಿಗೆ ಹೊಂದಿಕೊಂಡಿತು. ಈಗ ನಮ್ಮೊಡನೆ ಆಟ ಮಾತ್ರ ಅದರ ಮನರಂಜನೆ. ರಾತ್ರೆ ಬಿಟ್ಟ ಕೂಡಲೇ ಇಲಿ ಹೆಗ್ಗಣಗಳ ಭೇಟೆ ಇದ್ದರೆ ಅದನ್ನು ಮುಗಿಸಿ ಮನೆಯ ಹಿಂದಿನ ಜಾಗದಲ್ಲಿ ಸುಮ್ಮನೆ ಮಲಗುವುದು ಅದರ ಅಭ್ಯಾಸ. ಬೆಕ್ಕು ಕಂಡರೆ ಅದಕ್ಕೆ ಆಗದು. ಎಲ್ಲಾದರೂ ಮನೆಯ ಸುತ್ತ ಮುತ್ತ ಅದು ಸುಳಿಯುವುದು ಕಂಡರೆ ಓಡಿಸಿಕೊಂಡು ಹೋಗುತ್ತಿತ್ತು. ಅದು ಹೆದರಿಕೆಯಿಂದ ಹತ್ತಿರದ ಮರವೇರಿದರೆ ಇದು ಅದೇ ಮರದ ಕೆಳಗೆ ಕುಳಿತು ಅದು ಇಳಿಯುವುದನ್ನೇ ಕಾಯುತ್ತಿತ್ತು. ಆದರೆ ಕಟ್ಟಿ ಹಾಕಿದ ಜಾಗದಲ್ಲಿ ಅದರ ತಟ್ಟೆಯಿಂದ ಅನ್ನ ತಿನ್ನಲು ಬರುವ ಹಕ್ಕಿಗಳನ್ನು ಮಾತ್ರ ಕುಷಿಯಿಂದೆಂಬಂತೆ ನೋಡುತ್ತಾ ಕುಳಿತುಕೊಳ್ಳುತ್ತಿತ್ತು.
ಈಗ ಸ್ವಲ್ಪ ದಿನದ ಮೊದಲು ಟೈಗರ್ ಏನನ್ನೋ ಬಾಯಲ್ಲಿ ಕಚ್ಚಿಕೊಂಡು ಮನೆಯಂಗಳದಲ್ಲಿ ಕುಣಿಯುತ್ತಿತ್ತು. ಏನೋ ಹುಳ ಹುಪ್ಪಟೆ ಸಿಕ್ಕಿರಬಹುದು. ವಿಷ ಜಂತುಗಳೇನಾದರೂ ಆಗಿದ್ದರೆ ಎಂಬ ಭಯದಲ್ಲಿ ಅದರ ಹತ್ತಿರ ಹೋಗಿ ‘ ಎಂತ ಅದು? ಹಾಕು ಕೆಳಗೆ’ ಎಂದು ಜೋರು ಮಾಡಿದೆ. ಜೀವಂತ ಹಲ್ಲಿಯೊಂದು ಅದರ ಬಾಯಿಯಿಂದ ಹೊರ ಬಿದ್ದು ಸರ ಸರನೆ ಹರಿದು ಹತ್ತಿರದ ಗೋಡೆಯೇರಿತು. ಎಲ್ಲೋ ಅದು ಅತ್ತಿತ್ತ ಹೋಗುತ್ತಿರುವಾಗ ಹಿಡಿದಿರಬೇಕೆಂದು ಸುಮ್ಮನಾದೆ.
ಅದಾಗಿ ಕೆಲ ದಿನ ಕಳೆದಿತ್ತು. ಮತ್ತೊಮ್ಮೆ ಅದೇ ದೃಶ್ಯ. ಇದು ಹಲ್ಲಿಯೊಂದನ್ನು ಹಿಡಿದು ಬಾಯಿಯಿಂದ ಕೆಳ ಹಾಕುವುದು , ಅದು ಸ್ವಲ್ಪ ಮುಂದೆ ಹೋದಾಗ ಮತ್ತೆ ಹಿಡಿಯುವುದು ಮಾಡುತ್ತಿತ್ತು. ನಾನು ಬಯ್ದಾಗ ಅದು ಹಲ್ಲಿಯ ಸಮೇತ ಮನೆಯ ಹಿಂದೆ ಅದರ ಮಲಗುವ ಜಾಗಕ್ಕೆ ನಡೆಯಿತು. ಅಲ್ಲಿ ತಾನು ಮಲಗುವ ಜಾಗದಲ್ಲೇ ಅದನ್ನು ಮಲಗಿಸಿ ಪಕ್ಕದಲ್ಲಿ ತಾನೂ ಬಿದ್ದುಕೊಂಡು ಸಂತೋಷದಿಂದ ಅತ್ತಿತ್ತ ಹೊರಳಾಡಿತು. ಮೊದ ಮೊದಲು ಅಚ್ಚರಿ ಹುಟ್ಟಿಸುತ್ತಿದ್ದ ಈ ಆಟ ಈಗ ನೋಡಿ ನೋಡಿ ಅಭ್ಯಾಸವಾಗುತ್ತಿದೆ. . ಅದು ಹಲ್ಲಿಗೆ ಒಂದು ಚೂರೂ ಅಪಾಯವಾಗದ ರೀತಿಯಲ್ಲಿ ಅದನ್ನು ಹಿಡಿದು ಆಟವಾಡಿ ಮತ್ತೆ ಬಿಡುತ್ತದೆ. ಹಲ್ಲಿಯೂ ಕೂಡಾ ಬೇಕೆಂದೇ ಅದರ ಬಳಿಗೆ ಬರುತ್ತದೇನೋ ಎನ್ನುವ ಸಂಶಯ ನನ್ನದು.
ಬಹುಶಃ ಎರಡೂ ಹೊಸ ಗೆಳೆಯನನ್ನು ಈ ರೀತಿ ಹುಡುಕಿಕೊಂಡಿವೆಯೇನೋ..!!
ವಿದ್ಯೆ ಬುದ್ಧಿಗಳೆಂಬ ಕೊಂಬು ಹೊತ್ತಿರುವ ನಾವುಗಳು ಉತ್ತಮ ನಡತೆಯನ್ನು ಮರೆತು ಜಾತಿ ಧರ್ಮ, ರಾಜಕೀಯ ಭಿನ್ನತೆಗಳ ಹೆಸರಿನಲ್ಲಿ ಒಬ್ಬರಿಗೊಬ್ಬರು ಹಾಯುತ್ತಾ ನೆತ್ತರಿಳಿಸಿಕೊಳ್ಳುವುದು ಕಾಣಿಸಿದಾಗ ‘ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು’ ಎಂಬ ಹಾಡಿನ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತದೆ.
-ಅನಿತಾ ನರೇಶ್ ಮಂಚಿ.
"ಪ್ರಾಣಿಗಳೇ ಗುಣದಲಿ ಮೇಲು" ತುಂಬಾ ಚೆನ್ನಾಗಿದೆ.ಬೇರೆ ಪ್ರಾಣಿಗಳ ಮರಿಗಳಿಗೆ ಹಾಲುಣ್ಣಿಸುವುದು, ಬೇರೆ ಪ್ರಾಣಿಗಳ ಮರಿಗಳನ್ನು ಜೋಪಾನ ಮಾಡುವುದು…ಹೀಗೆ ಎಷ್ಟೋ ವಿಷಯಗಳಲ್ಲಿ ಅವು ನಮಗಿಂತ ಮೇಲು ಅಂತ ಸಾಬೀತು ಪಡಿಸಿವೆ.ಅವರನ್ನು ನೋಡಿ ನಾವು ಕಲಿಯೋಣ ಎಂಬ ಸಂದೇಶ ನೀಡಿದ್ದೀರಾ ಶುಭಾಶಯಗಳು