ಬಿರುಬಿಸಿಲಿನ ಈ ದಿನದಲ್ಲಿ ಕಾಗೆಯೊಂದಕ್ಕೆ ಬಾಯಾರಿಕೆಯಾಗಿತ್ತು. ಮಡಿಕೆಯಲ್ಲಿ ಅರ್ಧ ಮಾತ್ರ ನೀರು. ಬುದ್ಧಿವಂತ ಕಾಗೆ ಹತ್ತಿರದಲ್ಲಿದ್ದ ಕಲ್ಲುಗಳನ್ನು ಕೊಕ್ಕಿನಿಂದ ಕಚ್ಚಿಕೊಂಡು ಬಂದು ಮಡಿಕೆಗೆ ಹಾಕುತ್ತದೆ. ಮಡಿಕೆಯಲ್ಲಿದ್ದ ನೀರು ಮೇಲೆ ಬರುತ್ತದೆ. ಕೊಕ್ಕಿನಿಂದ ಆ ನೀರನ್ನು ಹೀರಿ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತದೆ. ಇಂತದೊಂದು ಕತೆಯಿತ್ತು. ಈ ಕತೆ ಕಲ್ಪನೆಯದ್ದೇ ಇರಬಹುದು. ಆದರೂ ನಮ್ಮ ಕಲ್ಪನೆಗೂ ಮೀರಿ ಪ್ರಾಣಿಲೋಕ ತನ್ನ ಮಿತಿಯಲ್ಲಿ ಬುದ್ಧಿವಂತಿಕೆ ತೋರುತ್ತವೆ. ಈಗೀಗ ಕಾರ್ಪೋರೇಟ್ ವಲಯದಲ್ಲಿ ಮ್ಯಾನೇಜ್‍ಮೆಂಟಿನದ್ದೇ ಸವಾಲಾಗಿದೆ. ಒಂದು ಕಂಪನಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವುದು ಪೈಪೋಟಿಯ ಈ ದಿನಗಳಲ್ಲಿ ದೊಡ್ಡ ಸಾಹಸವೆ ಸರಿ. ಟನ್‍ಗಟ್ಟಲೆ ಪುಸ್ತಕ ಓದಿ, ವರ್ಷಗಟ್ಟಲೆ ಟ್ರೈನಿಂಗ್ ಪಡೆದು, ವಿವಿಧ ಹುದ್ಧೆಗಳಲ್ಲಿ ಅನುಭವ ಪಡೆದೂ ಕೂಡ ಮನುಷ್ಯನ ಸಾಮಥ್ರ್ಯ ಪೂರ್ತಿಯಾಗಿ ವಿನಿಯೋಗವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಸುತ್ತ-ಮುತ್ತ ಜೀವಿಸುತ್ತಿರುವ ಪ್ರಾಣಿ-ಪ್ರಪಂಚದ ಸೋಜಿಗಗಳು ಮಾದರಿಯಾಗುತ್ತಿವೆ.
ಅಂಟಾರ್ಕ್ಟಿಕಾದ ಎಂಪರರ್ ಪೆಂಗ್ವಿನ್‍ಗಳ ವಿಶೇಷವೆಂದರೆ, ಚಳಿಗಾಲದ ಅತ್ಯಂತ ತಣ್ಣನೆಯ ಪರಿಸರದಲ್ಲಿ ಗುಂಪು-ಗುಂಪಾಗಿರುವ ಇವು ಸಾವಿರಾರು ಸಂಖ್ಯೆಯಲ್ಲಿ ಒಟ್ಟು ಸೇರಿ ಪರಸ್ಪರ ದೇಹದ ಶಾಖವನ್ನು ಕಾಪಾಡಿಕೊಳ್ಳುತ್ತವೆ. ನೋಡಿದರೆ ಅವನ್ನೆಲ್ಲಾ ತಂದು ಯಾರೋ ಗುಡ್ಡೆ ಹಾಕಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಅವಕ್ಕೆ ಗೊತ್ತು ಈ ಸಮಯದಲ್ಲಿ ಬೇರೆ-ಬೇರೆಯಾಗಿದ್ದರೆ ತಮಗೆ ಉಳಿಗಾಲವಿಲ್ಲ. ಹೆಣ್ಣನ್ನು ಓಲೈಸಿಕೊಳ್ಳುವಾಗ ನಡೆದ ಜಗಳವನ್ನು ಮರೆತು ತಮ್ಮ ಸಮಷ್ಟಿಯ ಉಳಿವಿಗಾಗಿ ಅವೆಲ್ಲಾ ಒಂದಾಗುತ್ತವೆ. ಸಾಂಘಿಕ ಶಕ್ತಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಈ ಪೆಂಗ್ವಿನ್‍ಗಳು ಮೊಟ್ಟೆಯಿಡುವುದೂ ಇದೇ ಸಮಯದಲ್ಲಿ. ಇಂತಹ ಚಳಿಯಲ್ಲಿ ಮೊಟ್ಟೆಯೊಡೆದು ಮರಿ ಹೊರಗೆ ಬರುವುದು ಸಾಧ್ಯವಿಲ್ಲ. ಗಂಡು ಪೆಂಗ್ವಿನ್‍ಗಳು ಮೊಟ್ಟೆಗಳನ್ನು ಕಾಲಡಿಯಲ್ಲಿಟ್ಟುಕೊಂಡು ಗುಂಪಾಗಿ ಕುಳಿತುಕೊಳ್ಳುತ್ತವೆ. ಆಹಾರ ಒದಗಿಸುವುದು ಹೆಣ್ಣುಗಳ ಕೆಲಸ. ಹೇರಳವಾಗಿ ಆಹಾರ ಸೇವಿಸುವ ಹೆಣ್ಣುಗಳ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಚಳಿಗಾಲ ಕಡಿಮೆಯಾದ ಮುಂದಿನ ಎರೆಡು ತಿಂಗಳ ನಂತರ ಇವುಗಳು ಬಂದು ಕಾವು ಕೊಡಲು ಕೂರುತ್ತವೆ. ಈಗ ಆಹಾರ ತರುವುದು ಗಂಡಿನ ಕೆಲಸ.
ಬೇಹುಗಾರ ಇರುವೆ ಗೂಡಿನಿಂದ ಆಹಾರ ಅರಸುತ್ತಾ ಹೊರಡುತ್ತದೆ. ಅನತಿ ದೂರದಲ್ಲಿ ಆಹಾರ ಸಿಗುತ್ತದೆ. ಈಗ ಆಹಾರವನ್ನು ಗೂಡಿಗೆ ಸೇರಿಸಬೇಕು. ಫೆರಮಿನ್ ಎಂಬ ರಾಸಾಯನಿಕವನ್ನು ಸೋಸುತ್ತಾ ಹೋದ ಹಾದಿಯಲ್ಲಿ ಇನ್ನಷ್ಟು ಕೆಲಸಗಾರ ಇರುವೆಗಳು ಬೇಹುಗಾರ ಇರುವೆಯನ್ನು ಹಿಂಬಾಲಿಸುತ್ತವೆ. ಆಹಾರ ಸಣ್ಣ ಪ್ರಮಾಣದಲ್ಲಿದ್ದಲ್ಲಿ ಗೂಡಿನಿಂದ ಆಹಾರದೆಡೆಗೆ ಬರುವ ಇರುವೆಗಳ ಸಂಖ್ಯೆ ಆ ಆಹಾರವನ್ನು ಹೊತ್ತೊಯ್ಯಲು ಎಷ್ಟು ಬೇಕೋ ಅಷ್ಟೇ ಇರುತ್ತವೆ. ಒಂದೊಮ್ಮೆ ಆಹಾರದ ಪ್ರಮಾಣ ದೊಡ್ಡದಿದ್ದಲ್ಲಿ ಹೆಚ್ಚು ಸಂಖ್ಯೆಯ ಕೆಲಸಗಾರ ಇರುವೆಗಳು ಒಟ್ಟಾಗುತ್ತವೆ. ಅಂದರೆ ಅನವಶ್ಯಕವಾಗಿ ಶಕ್ತಿಯ ದುರುಪಯೋಗವಾಗದ ಹಾಗೆ ನೋಡಿಕೊಳ್ಳುವ ತಂತ್ರ ಇರುವೆಗಳಿಗೆ ಗೊತ್ತು. ನಮಗಾದರೆ ಪ್ರತಿಯೊಂದಕ್ಕೂ ಕಾನೂನಿದೆ. ಉದಾ: ಒಬ್ಬ ವ್ಯಕ್ತಿಯಿಂದ ಎಂಟು ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡಿಸಬಾರದು. ಹೆಚ್ಚಿಗೆ ಕೆಲಸ ಮಾಡಿಸಿದರೆ ಅವರಿಗೆ ಸೂಕ್ತ ಹೆಚ್ಚುವರಿ ಸಂಭಾವನೆ ನೀಡಬೇಕು. ಆದರೆ ಒಬ್ಬ ವ್ಯಕ್ತಿ ಎಂಟುಗಂಟೆಗಿಂತ ಕಡಿಮೆ ಕೆಲಸ ಮಾಡಿದಲ್ಲಿ ಅವನನ್ನು ವಿಚಾರಿಸಲು ಯಾವುದೇ ಕಾನೂನಿಲ್ಲ. ಇಲ್ಲಿ ಇರುವೆಯಿಂದ ಕಲಿಯಬಹುದೇನೆಂದರೆ ಕೆಲಸದೆಡೆಗಿನ ಆಸಕ್ತಿ ಮತ್ತು ಜವಾಬ್ದಾರಿ. ಮೈಗಳ್ಳತನಕ್ಕೆ ಅವಕಾಶವೇ ಇಲ್ಲ. ಆ ಇರುವೆ ಜಾಸ್ತಿ ಕೆಲಸ ಮಾಡಿತು, ಈ ಇರುವೆ ಕಡಿಮೆ ಮಾಡಿತು ಎಂಬ ಮಾತೇ ಇಲ್ಲ. ತಮ್ಮ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಷ್ಟೇ ಅವಕ್ಕೆ ಗೊತ್ತು.
ಸಾವಿರದ ಒಂಬೈನೂರಾ ತೊಂಬ್ಬತ್ತೇಳರ ಮಾರ್ಚ್ ಇಪ್ಪತ್ತೆರಡನೇ ತಾರೀಖಿನಂದು ಜಪಾನ್ ದೇಶದಲ್ಲಿ ವಿದ್ಯುತ್‍ಚಾಲಿತ ರೈಲು ಶಿನ್-ಓಸಾಕ ಮತ್ತು ಟೋಕಿಯೊ ನಗರಗಳ ನಡುವೆ 1076 ಕಿ.ಮಿ. ದೂರದ ಓಡಾಟವನ್ನು ಪ್ರಾರಂಭಿಸಿತು. ಗಂಟೆಗೆ ಮೂರು ನೂರು ಕಿ.ಮಿ. ವೇಗವಾಗಿ ಚಲಿಸುವ ಈ ರೈಲು ಇಷ್ಟು ದೂರವನ್ನು ಬರೀ ನಾಲ್ಕು ಮುಕ್ಕಾಲು ತಾಸಿನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿತು. ಸತತ ಪ್ರಯತ್ನ ಮತ್ತು ತಂತ್ರಜ್ಞಾನದ ನೆರವಿನಿಂದ ವೇಗವಾಗಿ ಚಲಿಸುವ ರೈಲನ್ನು ನಿರ್ಮಿಸಲು ಜಪಾನಿಗರಿಗೆ ಬಹಳ ಕಷ್ಟವೇನು ಆಗಲಿಲ್ಲ. ತೊಂದರೆ ಬಂದಿದ್ದು ರೈಲಿನ ಅಗಾಧ ವೇಗದಿಂದಾಗುವ ಶಬ್ದ-ಮಾಲಿನ್ಯ!! ಅಲ್ಲಿನ ನಿಯಮದಂತೆ ರೈಲು ಹಳಿಯಿಂದ ಇಪ್ಪತೈದು ಮೀಟರ್ ದೂರದೊಳಗಡೆ ಶಬ್ಧ ಎಪ್ಪತೈದು ಡೆಸಿಬಲ್ ಮೀರುವಂತಿಲ್ಲ. ನಿಲ್ದಾಣದಿಂದ ಹೊರಡುವಾಗಲೇ ಇದರ ಶಬ್ದ ಮಿತಿಗಿಂತ ತುಂಬಾ ಹೆಚ್ಚಾಗಿತ್ತು. ರೈಲ್ವೆ ಇಂಜಿನಿಯರ್‍ಗಳಿಗೆ ದೊಡ್ಡ ತಲೆನೋವಾಗಿದ್ದೆ ರೈಲಿನ ಶಬ್ದ. ಇದೊಂದೆ ಕಾರಣಕ್ಕಾಗಿ ಇಡೀ ಯೋಜನೆಯನ್ನು ನಿಲ್ಲಿಸುವಂತಿಲ್ಲ. ರೈಲ್ವೆ ಇಂಜಿನಿಯರ್ ಟೀಮಿನ ಮುಖ್ಯಸ್ಥ ನಾಕಾಟ್ಸು ಇಜಿ ಓರ್ವ ಪಕ್ಷಿತಜ್ಞನಾಗಿದ್ದ. ಇವನು ಇಡೀ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ ಮತ್ತು ವಿಭಿನ್ನವಾಗಿ ಯೋಚಿಸಲಾರಂಭಿಸಿದ. ರಾತ್ರಿ ವೇಳೆ ಸಂಚರಿಸುವ ಬೇಟೆಗಾರ ಪಕ್ಷಿಯಾದ ಗೂಬೆ ತನ್ನ ಬೇಟೆಯನ್ನು ನಿಶ್ಯಬ್ಧವಾಗಿ ಬಲಿ ಹಾಕುತ್ತದೆ. ಬೇರೆ ಯಾವುದೇ ಹಕ್ಕಿಗಳಲ್ಲಿ ಇಲ್ಲದ ವಿಶೇಷ ಗೂಬೆಯಲ್ಲಿದೆ. ಗೂಬೆಯ ರೆಕ್ಕೆಗಳಲ್ಲಿಯ ಪುಕ್ಕಗಳು ಬೇರೆಯದೆ ತರನಾದ ರಚನೆಯನ್ನು ಹೊಂದಿವೆ. ಗರಗಸದ ಹಲ್ಲಿನಾಕಾರದಲ್ಲಿರುವ ಪುಕ್ಕಗಳ ಮೂಲಕ ಗಾಳಿ ನಿಶಬ್ಧವಾಗಿ ತೂರಿಹೋಗುತ್ತದೆ. ಹೊಲದಲ್ಲಿನ ಇಲಿಗೆ ಸ್ವಲ್ಪವೂ ಅನುಮಾನ ಬರದಂತೆ ಗೂಬೆ ಬೇಟೆಯಾಡುವ ರಹಸ್ಯ ಈ ಪುಕ್ಕಗಳ ರಚನೆ ಎಂದು ಕಂಡುಕೊಂಡು ಈ ನಿಟ್ಟಿನಲ್ಲಿ ರೈಲಿನ ರಚನೆಯನ್ನು ಮಾರ್ಪಾಡಿಸುತ್ತಾರೆ. ನೂರಾರು ತಂತ್ರಜ್ಞರು ಅಹೋರಾತ್ರಿ ಶ್ರಮಿಸಿ ಆ ದೇಶದ ನಿಮಯದಂತೆ ಮತ್ತು ಶಬ್ದಮಾಲಿನ್ಯವಾಗದಂತೆ ಈ ಅಪೂರ್ವ ರೈಲನ್ನು ಪ್ರಪಂಚದಲ್ಲೇ ಮೊದಲ ಬಾರಿ ನಿರ್ಮಿಸಿ ಯಶಸ್ವಿಯಾಗುತ್ತಾರೆ. ಇದೇ ತರಹದ ಮಾದರಿಯನ್ನು ಆಮೇಲೆ ಫ್ರಾನ್ಸ್ ದೇಶದವರು ಅಳವಡಿಸಿಕೊಳ್ಳುತ್ತಾರೆ.
ಡಾಲ್ಫಿನ್‍ಗಳನ್ನು ನೋಡಿ ಯಾರು ತಾನೆ ಸಂತೋಷಪಡುವುದಿಲ್ಲ. ಅತ್ಯಂತ ಮೇಧಾವಿ ಪ್ರಾಣಿಯಾದ ಡಾಲ್ಫಿನ್‍ಗಳು ಮನುಷ್ಯರಿಗೆ ಅತ್ಯಂತ ಆಪ್ತವಾದ ಸ್ನೇಹಿತರೆನ್ನಬಹುದು. ಅದಷ್ಟೋ ಬಾರಿ ಶಾರ್ಕ್‍ಗಳ ದಾಳಿಯಿಂದ ಮನುಷ್ಯನನ್ನು ರಕ್ಷಿಸಿದ ಉದಾಹರಣೆಗಳಿವೆ. ಮುಳುಗುತ್ತಿರುವ ಸಮುದ್ರಯಾನಿಗಳನ್ನು ಬಚಾವು ಮಾಡಿದ ದೃಷ್ಟಾಂತಗಳಿವೆ. ಗುಂಪಾಗಿ ವಾಸಿಸುವ ಈ ಸುಂದರ ಜೀವಿಗಳ ತಾಳಮೇಳ ಹೇಗಿದೆಯೆಂದರೆ, ಇಡೀ ಗುಂಪು ಒಂದೇ ಬಾರಿಗೆ ನೀರಿನಿಂದ ಮೇಲೆ ಬರುತ್ತವೆ ಮತ್ತು ಹಾಗೆ ಒಟ್ಟಾಗಿಯೆ ನೀರಿನೊಳಗೆ ಹೋಗುತ್ತವೆ. ಮನುಷ್ಯರಂತೆ ಡಾಲ್ಫಿನ್‍ಗಳು ತಮ್ಮ ಮರಿಗಳನ್ನು ವರ್ಷಗಟ್ಟಲೆ ಜೊತೆಗಿಟ್ಟುಕೊಂಡು ಸಾಕುತ್ತವೆ. ನಮ್ಮ ಮೆದುಳಿಗಿಂತ ಡಾಲ್ಫಿನ್‍ಗಳ ಮೆದುಳಿನ ಗಾತ್ರ ದೊಡ್ಡದು. ತಳಿಗಳ ಮಟ್ಟದಲ್ಲಿ ಹೇಳುವುದಾದಲ್ಲಿ ಅವು ನಮಗಿಂತ ಬುದ್ಧಿವಂತ ಪ್ರಾಣಿಗಳು ಎಂದು ಹೇಳಬಹುದು. ಅವು ನಿದ್ದೆ ಮಾಡುವುದು ದಿನದಲ್ಲಿ ಎಂಟು ಗಂಟೆಗಳು. ನಾವು ನಿದ್ದೆಹೋದಾಗ ನಮ್ಮ ಮೆದುಳು ಸಂಪೂರ್ಣವಾಗಿ ವಿಶ್ರಾಂತಿಯಲ್ಲಿದ್ದರೆ, ಡಾಲ್ಫಿನ್‍ನ ಅರ್ಧಭಾಗ ಮೆದುಳು ಎಚ್ಚರವಾಗಿರುತ್ತದೆ. ಮಿಸಿಸಿಪ್ಪಿಯ ಡಾಲ್ಫಿನ್‍ಗಳು ತಮ್ಮ ಆಹಾರ ಪಡೆಯುವ ಕ್ರಮ ನಿಜಕ್ಕೂ ವಿಚಿತ್ರವಾಗಿದೆ. ಎಲ್ಲಾ ಡಾಲ್ಫಿನ್‍ಗಳು ಅರ್ಧಚಂದ್ರಾಕಾರದಲ್ಲಿ ಸೇರಿ ಮೀನುಗಳನ್ನು ಒತ್ತಿಕೊಂಡು ಬರುತ್ತವೆ. ಹೀಗೆ ವೇಗವಾಗಿ ಒತ್ತಿಕೊಂಡು ಬಂದು ನದಿಯ ತೀರಕ್ಕೆ ತಳ್ಳುತ್ತವೆ. ಈಗ ಮೀನುಗಳೆಲ್ಲಾ ನದಿಯ ದಡದ ಮೇಲೆ, ನೀರು ನದಿಯಲ್ಲಿ. ಹೀಗೆ ಅತ್ಯಂತ ಶಿಸ್ತಾಗಿ, ಯೋಜನಬದ್ದವಾಗಿ ತಮ್ಮ ಆಹಾರವನ್ನು ಪಡೆಯುತ್ತವೆ.
ಏಳುನೂರಾ ಐವತ್ತು ಕೋಟಿ ಜನರಿರುವ ಈ ಪ್ರಪಂಚದಲ್ಲಿ ಇಷ್ಟೇ ಬಗೆಯ ವಿಭಿನ್ನ ಪ್ರಾಣಿಗಳು, ಪಕ್ಷಿಗಳು, ಜಲಚರಗಳು, ಮರಗಿಡಗಳು ಇವೆ. ಒಂದೊಂದು ತಳಿಯ ಜೀವಿಗಳು ಪ್ರಕೃತಿಯ ಕಾರಣಕ್ಕೆ ಉಪಯೋಗವಿರುವಂತಹವೇ ಆಗಿವೆ. ಯಾವುದೇ ಒಂದು ತಳಿಯ ಸಂಪೂರ್ಣ ನಾಶ ಒಂದು ದೊಡ್ಡ ರೂಪದ ಅವಘಡವೇ ಆಗಬಹುದು ಅಂದರೆ ಮನುಷ್ಯನ ಹೊಸ-ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ಅವಕಾಶವೇ ಇಲ್ಲದಂತೆ ಆಗಬಹುದು. ಪೆಂಗ್ವಿನ್‍ಗಳ ಕೆಲಸಗಳ ಸಮಾನ ಹಂಚಿಕೆ ಮತ್ತು ಸಂಘಶಕ್ತಿ, ಇರುವೆಗಳ ಕಾರ್ಯ ನಿರ್ವಹಣೆ ತಂತ್ರ, ಗೂಬೆಯ ಪುಕ್ಕ ರಚನೆ ಮತ್ತು ಡಾಲ್ಫಿನ್‍ಗಳ ಒಗ್ಗಟ್ಟು ಇವುಗಳನ್ನು ಮಾದರಿಯಾಗಿಟ್ಟುಕೊಂಡು ಕಾರ್ಪೊರೇಟ್ ಪ್ರಪಂಚ ಕಾರ್ಯನಿರ್ವಹಿಸುತ್ತದೆಯೆಂದರೆ, ಈ ಪ್ರಾಣಿಗಳು ನಮಗಿಂತ ಕರಾರುವಕ್ಕು ಮತ್ತು ಬುದ್ದಿವಂತ ಪ್ರಾಣಿಗಳು ಎಂದು ಒಪ್ಪಿಕೊಂಡ ಹಾಗೆಯೆ ಅಲ್ಲವೆ?
*****