ಪ್ರಸವ ಕಾಲ….: ಆಶಾಜಗದೀಶ್

 

ಮನೆ ಮುಂದಿನ ಮಲ್ಲಿಗೆ ತನ್ನ ಎಂದಿನ ತನ್ಮಯತೆಯಲ್ಲಿ ತಾರಸಿಯ ಮೇಲೆ ಧ್ಯಾನಸ್ಥವಾಗಿತ್ತು. ಮಿಸುಗಾಡುವ ಒಡಲು ಅದಕ್ಕೊಂದು ಗರ್ಭಿಣಿಯ ಕಳೆ ತಂದಿತ್ತಿತ್ತು. ಅದೂ ತೀರಾ ಇತ್ತೀಚಿನಿಂದ ಹೀಗೆ…..

ಅದು ನವೆಂಬರ್ ಡಿಸೆಂಬರಿನ ಸಂದರ್ಭ… ಗುಬ್ಬಿಯೊಂದು ತನ್ನ ಸಂಗಾತಿಯೊಂದಿಗೆ ಬಾಣಂತನಕ್ಕಾಗಿ ಬಂದಿತ್ತು… ಹೀಗೆ ಹಕ್ಕಿಗಳು ಮೇಲಿಂದ ಮೇಲೆ ನಮ್ಮ ತೋಟವಲ್ಲದ ಪುಟ್ಟ ತೋಟಕ್ಕೆ ಬರುವುದು ಮಾಮೂಲೇ ಇತ್ತಾದರೂ ಪ್ರತಿ ಬಾರಿಯೂ ಹೋಸದೆಂಬಂತಹ ಉತ್ಸಾಹ ಮಾತ್ರ ನಮ್ಮನ್ನು ಅದೇಕೆ ತುಂಬುತ್ತಿತ್ತೋ ಗೊತ್ತಿಲ್ಲ… ಬಹುಶಃ ಹುಟ್ಟು ಎನ್ನುವುದು ಸಕಲ ಜೀವರಾಶಿಯೊಳಗೆ ಪ್ರವೇಶಿಸುವಾಗ ತರುವ ಸಂಭ್ರಮವೇ ಅಂತದ್ದು ಕಾಣುತ್ತದೆ… ನಾವೆಲ್ಲ ಮತ್ತೆ ಮತ್ತೆ ಸಂಭ್ರಮಿಸುತ್ತಿದ್ದೆವು ಮತ್ತೆ ಮೊಟ್ಟೆಯೊಡೆದು ಮರಿ ಮಾಡಿದ ಹಕ್ಕಿ ತನ್ನ ಮರಿಯೊಟ್ಟಿಗೆ ಹಾರಿ ಹೋಗುವಾಗ ಎಂಥದೋ ಕಳೆದುಕೊಂಡ ಭಾವ… ಮನೆಯೆಲ್ಲ ಭಣಗುಟ್ಟಿದ ಹಾಗೆ…. ಇದೆಲ್ಲ ಸರಿಹೋಗಲಿಕ್ಕೆಂದು ಒಂದೆರೆಡು ದಿನ ಉರುಳುತ್ತಿದ್ದವು. ಜೊತೆಗಿದ್ದ ಯಾವುದರ ಬಗ್ಗೆಯಾದರೂ ಮನುಷ್ಯ ಬೆಳೆಸಿಕೊಳ್ಳುವ ಭಾವನಾತ್ಮಕ ಅಂಟಿಕೆ ಆಶ್ಚರ್ಯಪಡಿಸುತ್ತಲ್ಲದೆ ಹಾಗಿಲ್ಲದೆ ಅವ ಇರಲಾನೇನೋ…. ಅಂತಲೂ ಅನಿಸುತ್ತದೆ.

ಅದೇ ಎಡಪಿರಬೇಕು ನನ್ನ ಮಗನೂ ಹುಟ್ಟಿದ್ದು… ಅದೊಂಥರ ಮನೆ ಮಗಳೊಟ್ಟಿಗೆ ಮತ್ತೊಬ್ಬ ಮಗಳಂತೆ …… ಅದರ ಬಾಣಂತನವನ್ನೂ ಅಮ್ಮ ಸಂಭ್ರಮಿಸಿದ್ದಳು. ನನ್ನ ಕೂಸಿನ ಜೊತೆಗೆ ಅದರ ಮರಿಗಳ ಬಗೆಗೂ ಅವಳ ಎಲ್ಲಿಲ್ಲದ ಕಕ್ಕುಲಾತಿ. ದಿನಕ್ಕೆರೆಡು ಮೂರು ಬಾರಿಯಾದರೂ ಅವುಗಳನ್ನು ಇಣುಕಿ ನೋಡಿ ಬರದಿದ್ದರೆ ಅವಳು ಅವಳೇ ಅಲ್ಲ……. ಈಗ ಮತ್ತೆ ಐದು ವರ್ಷಗಳ ನಂತರ ಅದೇ ಸಂಭ್ರಮ ಮರುಕಳಿಸುತ್ತಿದೆ…

ಈ ಬಾರಿ ಒಟ್ಟೊಟ್ಟಿಗೆ ನಾಲ್ಕು ಬಸುರಿ ಬಾಣಂತನಗಳು… ಬಾಣಂತನಗಳೆಂದರೆ ಸಾಕು ತಾಯಂದಿರಿಗೆ ಕೈತುಂಬ ಕೆಲಸ… ಎಷ್ಟೇ ಒತ್ತಡವಿದ್ದರೂ ತಾವು ಅಜ್ಜ ಅಜ್ಜಿಯಾಗುವ ಸಂಭ್ರಮ ಅವರ ವೃದ್ಧಾಪ್ಯ ಅಡರಿದ ಕೈಕಾಲುಗಳಲ್ಲೂ ಹೊಸ ಚೈತನ್ಯ ತುಂಬಿ ಬಿಡುತ್ತದೆ…. ಹೆರಿಗೆ ದಿನ ಹತ್ತತ್ತಿರವಾದಂತೆ ಮಗುವನ್ನು ಕಾಣುವ ಹಂಬಲದ ಜೊತೆಗೆ “ದೇವರೇ ಇದೊಂದು ಹೆರಿಗೆಯಂತ ಸಸೂತ್ರವಾಗಿಬಿಡಲಿ…. ” ಎಂದು ಇಷ್ಟದ ದೇವರಿಗೆ ಮುಡಿಪು ಕಟ್ಟುತ್ತಾರೆ. ಬಾಳೆ ಸುಲಿದಷ್ಟು ಸಲೀಸಾಗಿ ಮಗುವೊಂದು ಮಡಿಲಿಗಿಳಿದುಬಿಟ್ಟರೆ ಇವರಿಲ್ಲಿ ನಿರಾಳ…. ಈಗಂತೂ ನಾರ್ಮಲ್ ಸಿಸಾರಿಯನ್ ಅಂತ ಕೇಳದೆ ಏನಾದರೂ ಸರಿ ಬಾಣಂತಿ ಮಗು ಕ್ಷೇಮವಾಗಿದ್ದರೊಂದು ಸಾಕು ಎನ್ನುವವರೆಗೂ ಹೆಚ್ಚು……

ನಮ್ಮ ಮನೆಯ ಮೇಲಿನ ಮನೆಯಲ್ಲಿ ಆಂಧ್ರದ ಕುಟುಂಬವೊಂದು ವಾಸವಾಗಿತ್ತು… ಆ ಹುಡುಗಿ ಎರಡನೇ ಬಾರಿ ಗರ್ಭ ಧರಿಸಿದ್ದಳು. ಅದೇನು ಕಾಕತಾಳೀಯವೋ…. ಅವಳ ಮನೆ ಮುಂದಿನ ವೆರಾಂಡದ ಮೂಲೆಯೊಂದರಲ್ಲಿ ಮೆಟ್ಟಿಲುಗಳ ಕೆಳಗೆ ಬೆಕ್ಕೊಂದು ತನ್ನ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಈ ಮರಿಗಳೋ ಇನ್ನು ಉಸಿರು ತೆಗೆಯಲು ದನಿ ಬಲಗೊಂಡಿರಲಿಲ್ಲವಾದರೂ ಅವುಗಳ ಕೀರಲು ದನಿಯ ವರಾತ ಒಂದು ನಮೂನಿ ಮುದವಾಗಿತ್ತು. ಆದರೆ ಅವುಗಳ ಬಳಿ ಹೋಗಲೆಂತದೋ ಅಂಜಿಕೆ. ಬಾಣಂತಿ ಬೆಕ್ಕಿನ ವ್ಯಘ್ರತೆ ಕಣ್ಣಲ್ಲೆ ಹೆದರಿಸುತ್ತಿತ್ತು. ಮೇಲಿನ ಮನೆ ಹುಡುಗಿ ಹೆದರಿ ಹತ್ತಿರ ಹೋಗದಿದ್ದರೂ ತಾನೂ ಸಹ ಸಮಾನಸ್ಥೆಯೆನ್ನುವ ಮನಸಿನಿಂದಲೋ ಮರಿಗಳ ಮೇಲಿನ ಪ್ರೀತಿಯಿಂದಲೋ ಪ್ರತಿನಿತ್ಯ ಅವುಗಳಿಗೊಂದಿಷ್ಟು ಕಲಸಿದ ಹಾಲು ಅನ್ನವನ್ನು ಇಟ್ಟು ದೂರದಿಂದ ಅವು ತಿನ್ನುವುದನ್ನು ನೋಡಿ ಸಮಾಧಾನಗೊಳ್ಳುತ್ತಿದ್ದಳು. ಇದೊಂದು ಹೀಗೆ ನಡೆಯುತ್ತಿತ್ತಾದರೂ ಅವಳು ತವರಿಗೆ ಹೊರಟು ನಿಂತ ದಿನ ಈ ಬೆಕ್ಕು ತನ್ನ ಮೂರು ಮರಿಗಳೊಂದಿಗೆ ಬೇರೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ ಇಂದಿಗೂ ನಮಗೆ ಅಚ್ಚರಿಯೇ…..

ಅವಳು ಹಾಗೆ ತವರಿಗೆ ಹೋಗಿ ಎರೆಡು ತಿಂಗಳೊಪ್ಪತ್ತಿಗೆ ನಾನು ಬಾಣಂತನಕ್ಕೆಂದು ಬಂದಿಳಿದಿದ್ದೆ….. ಮನೆ ಮುಂದೆ ಮಕ್ಕಳ ಓ ಎನ್ನುವ ಕಲರವ…. ಕಾರಣ ಮನೆ ಮುಂದಿನ ಕನಕಾಂಬರ ಗಿಡದ ಪೊದೆಯಲ್ಲಿ ಗುಬ್ಬಿಯೊಂದು ಮೊಟ್ಟೆಯಿಟ್ಟು ಮರಿಮಾಡಿದ್ದುದು… ನನಗೋ ಈ ಪುನರಪಿ ಕಾಕತಾಳೀಯತೆ ಕಂಡು ಖುಷಿಯ ಜೊತೆಗೆ ವಿಸ್ಮಯವೂ…. ಪ್ರತಿನಿತ್ಯ ಅವುಗಳ ಬೆಳವಣಿಗೆ ನೋಡುತ್ತ ನನ್ನ ದಿನಗಳು ಗಣನೆಗೊಳ್ಳುತ್ತಿದ್ದವು. ಪ್ರಸವಕ್ಕೆಂದು ಆಸ್ಪತ್ರೆ ಸೇರಿ ಆಸ್ಪತ್ರೆವಾಸ ಮುಗಿಸಿ ಬರುವ ಹೊತ್ತಿಗೆ ಮರಿಗಳು ರೆಕ್ಕೆಯೊಂದಿಷ್ಟು ಬಲಿತು ಇನ್ನೇನು ಹಾರುವ ತಾಲೀಮಿನಲ್ಲಿ ಮುಳುಗಿದ್ದವು. ಕೆಲವೇ ದಿನಗಳಲ್ಲಿ ಹಾರಲು ಕಲಿತ ಮರಿ ಹಕ್ಕಿಗಳು ತಾಯಿಯೊಂದಿಗೆ ಎತ್ತಲೋ ಮತ್ತೊಂದು ತಾವ ಹುಡುಕಿ ಹಾರಿ ಹೋದವು…. ಒಂದಷ್ಟು ದಿನ ಮನೆ ಮುಂದಿನ ಹಜಾರ ಅಭಣಗುಟ್ಟಿತು…. ಈ ಮಾಮೂಲಿಗೆ ಒಗ್ಗಿದ ನಾವು ಮೆಲ್ಲನೆ ನಮ್ಮ ದಿನಗಳೊಳಗೆ ನುಸುಳಿಕೊಂಡೆವು….

-ಆಶಾಜಗದೀಶ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x