ಈ ವಾರ ಯಾವ ವಿಷಯದ ಬಗ್ಗೆ ಬರೆಯೋದಪ್ಪ ಅಂತ ಯೋಚ್ನೆ ಮಾಡ್ದಾಗೆಲ್ಲಾ ಐಡಿಯಾಗಳ ಚೌಚೌಭಾತ್ ಮನಸಲ್ಲಿ. ಅದೋ , ಇದೋ ಅಥವಾ ಮತ್ತೊಂದೋ ಅಂತ ಒಂದಿಷ್ಟು ಬಿಡಿಬಿಡಿ ಎಳೆಗಳು ಹೊಳೆದಿರುತ್ತೆ. ಈ ಸಲ ೧೦೦% ಇದ್ರ ಬಗ್ಗೆನೇ ಬರಿಬೇಕು ಅಂತ ಧೃಢ ನಿರ್ಧಾರ ಮೂಡೋವರೆಗೆ ಈ ಬಿಡಿ ಬಿಡಿ ಐಡಿಯಾಗಳು ಮನದ ಒಂದಿಷ್ಟು ಪ್ರತಿಶತ ಭಾಗ ಆಕ್ರಮಿಸಿಕೊಂಡಿರುತ್ತೆ. ಸ್ವಸ್ತಿಕ್ಕು, ಸೂಪರ್ರು, ಎ,ಐ,ಝೆಡ್ ಹೀಗೆ ಚಿಹ್ನೆಗಳು ಅಕ್ಷರಗಳೆಲ್ಲಾ ಸಿನಿಮಾ ಆಗೋದು ನೋಡಿದ್ವಿ, ಇದೇನಿದು ಪ್ರತಿಶತದ ಚಿಹ್ನೆ(%) ಅಂದ್ಕೊಂಡ್ರಾ ? ಇವತ್ತಿನ ಲೇಖನದ ಶೀರ್ಷಿಕೆ ಏನಪ್ಪ ಅಂತ ಕೇಳೋಕೆ ಹೊರಟ್ರಾ ? ಎಲ್ಲಿ ಚೌಚೌ ಭಾತು, ಎಲ್ಲಿ ಸಿನಿಮಾ , ಏನಪ್ಪ ಇದು, ಎಲ್ಲಾ ಅರ್ಧಂಬರ್ದ ಅಂತಾ ಇದೀರಾ ? ಹೆ ಹೆ. ನಿಮ್ಮ ಪ್ರಶ್ನೆಯಲ್ಲೇ ಇದಕ್ಕೆ ಉತ್ರ ಇದೆ. ಅರ್ಧಂಬರ್ದ ಅಂದ್ರೆ ಐವತ್ತು ಪ್ರತಿಶತ ಅಂದ್ರೆ ೫೦% ಅನ್ನೋದು ಈ ಪ್ರತಿಶತದ ಮತ್ತೊಂದು ಬಳಕೆ ಅಷ್ಟೆ. ನಮ್ಮ ಜೀವನದಲ್ಲಿ ಈ ಪ್ರತಿಶತ ಅನ್ನೋದು ಅದೆಷ್ಟು ಹಾಸುಹೊಕ್ಕಾಗಿದೆ. ಅದ್ರ ಬಗ್ಗೆನೇ ಒಂದಿಷ್ಟು ಬರಿಬಾರದ್ಯಾಕೆ ಅನಿಸಿದ್ರ ಫಲವೇ ಈ ಲೇಖನ. ಇದ್ರಲ್ಲಿ ಬಂದಿರೋ ಪಾತ್ರಗಳಿಗೆ ** ಪ್ರತಿಶತ ಸ್ಪೂರ್ತಿಯಾದ ಎಲ್ಲಾ ನಾಯಕ, ನಾಯಕಿಯರೇ ಈ ಶೀರ್ಷಿಕೆಗೆ ಸ್ಪೂರ್ತಿ.
ಮಾಧ್ಯಮಿಕ ಶಾಲಾ ದಿನಗಳು. ಗಣಿತದಲ್ಲಿ ಅಂಕಗಣಿತ, ರೇಖಾ ಗಣಿತ, ಬೀಜಗಣಿತ ಅಂತ ಮೂರು ಭಾಗಗಳಿವೆ ಅಂತ ಮಾಡಿ ಅದರಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸೋಕೆ ಚೂರು ಮೊದಲು ಬಂದದ್ದು ಈ ಪ್ರತಿಶತದ ಕಲ್ಪನೆ. ಏ ನಂದು ತೊಂಭತ್ತು ಪರ್ಸೆಂಟು ಕಣೋ, ನಂದು ತೊಂಭತ್ತೆಂಟೋ ಅಂತೆಲ್ಲಾ ಹುಡುಗರ ಮಾತು ಕೇಳಿದ್ರೂ ಅಂಕಗಳಿಂದ ಪ್ರತಿಶತ ಪಡೆಯೋ ಪರಿ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರ್ಲಿಲ್ಲ. ಮೂರು ಬಾಳೆ ಹಣ್ಣುಗಳಿಂದ ಐದು ರೂಪಾಯಿ ಲಾಭ ಪಡೆಯೋ ರಾಮನಿಗೆ ಐದು ಬಾಳೆ ಹಣ್ಣುಗಳಿಂದ ಎಷ್ಟು ಪ್ರತಿಶತ ಲಾಭ ಅನ್ನುವ ಲೆಕ್ಕಗಳೆಲ್ಲಾ ಬಂದಿದ್ದು ಆಮೇಲೆ ಬಿಡಿ.
ನಾನೂರಕ್ಕೆ ಮುನ್ನೂರ ತೊಂಭತ್ತು ಅಂತ ಟೀಚರು ಬರೆದ ಮಾರ್ಕ್ ಕಾರ್ಡೇ, ಅದರಲ್ಲಿ ಎಲ್ಲಾದ್ರೂ ಇರ್ತಿದ್ದ ಪರ್ಸೆಂಟೇಜೇ ನಮ್ಮ ಪಾಲಿನ ಚರ್ಚೆಯ ವಿಷಯ. ಒಂದು ಮಾರ್ಕು ಹೆಚ್ಚಾದ್ರೆ ಎಷ್ಟು ಪ್ರತಿಶತ ತಲೆಕೆಡಿಸಿಕೊಳ್ಳದಿದ್ರೂ ಈ ಪ್ರತಿಶತ ಅನ್ನೋ ಮಾತು ಬಹಳ ಕಡೆ ಕಿವಿಗೆ ಬಿದ್ದಿರ್ತಿತ್ತು. ತೊಂಭತ್ತೈದು ಪರ್ಸೆಂಟು ಅಂತ ಖುಷಿ ಪಟ್ಟರೂ ಇನ್ನೈದು ಪರ್ಸೆಂಟು ಮಾರ್ಕು ಎಲ್ಲೋಯ್ತು ? ಸಂಜೆ ಮನೆಗೆ ಬಂದ್ಕೂಡ್ಲೆ ಆಟಕ್ಕೆ ಹೋಗ್ಬೇಡ ಅಂದ್ರೆ ಅರ್ಥ ಆಗಲ್ವಾ ? ಇಡೀ ದಿನ ಆಡೋದು ಆಡೋದು. ಮುಂದಿನ ಸಲ ಹಂಡ್ರೆಡ್ ಪರ್ಸೆಂಟ್ ತೆಗಿಬೇಕು ಗೊತ್ತಾಯ್ತಾ ಅಂತ ಬಯ್ಯೋ ಪೋಷಕರು , ನೀನು ಒಂದೈವತ್ತು ಪರ್ಸೆಂಟ್ ತೆಗೆದ್ರೂ ಸಾಕು ಮಗ್ನೆ. ವಿದ್ಯೆ ಅನ್ನೋದು ಅರ್ಥ ಮಾಡ್ಕೊಳೋಕೆ, ಬದುಕ ಕಲಿಯೋಕೆ. ಬರೀ ಅಂಕಗಳೊಂದೇ ನಿನ್ನ ಗುರಿಯಾಗದಿರ್ಲಿ. ಒಳ್ಳೆ ಆರೋಗ್ಯದಿಂದ, ಲವಲವಿಕೆಯಿಂದ, ಸಮಾಕಕ್ಕೊಂದು ಸಂಪನ್ಮೂಲವಾಗೋ ತರ ನೀ ಬೆಳಿ ಅಂತ ಪ್ರತೀ ಹೆಜ್ಜೆಗೂ ಬೆನ್ನುತಟ್ಟುತ್ತಿದ್ದ ಪೋಷಕರು.. ಹೀಗೆ ಹಲವು ಕೋನಗಳ ನಡುವೆ ನಮ್ಮ ಬಾಲ್ಯದ ದಿನಗಳು ಸಾಗ್ತಾ ಇತ್ತು.
ಒಂದಿಷ್ಟು ಪ್ರತಿಶತ ಬುದ್ದಿ ಮತ್ತೊಂದಿಷ್ಟು ವರ್ಷ ವಯಸ್ಸು ಬೆಳವಣಿಗೆಯಾಗ್ತಾ ಬಂದಂತೆ ಈ ಪ್ರತಿಶತದ ಹಲವಾಯಾಮಗಳು ತಿಳಿತಾ ಬಂತು. ೯೧.೧೬% ಅಂತ ಇರೋದನ್ನ ತೊಂಭತ್ತೊಂದು ಪಾಯಿಂಟ್ ಒಂದು ಆರು ಅಂತ ಓದಬೇಕೇ ಹೊರತು ತೊಂಭತ್ತೊಂದು ಪಾಯಿಂಟು ಹದಿನಾರು ಅಂತ ಓದೋ ಹಾಗಿಲ್ಲ ಅಂತ ತಿಳೀತು.ಪಾಸಿಗೆ ೩೫% , ಫಸ್ಟ್ ಕ್ಲಾಸಿಗೆ ೬೦% ಬರ್ಬೇಕು ಅಂತ ತಿಳೀತು. ಒಂದು ಎಲ್.ಐಸಿ ಪಾಲಿಸಿ ಮಾಡಿಸಿದ್ರೆ ಅದ್ರಲ್ಲಿ ಇಷ್ಟು ಪರ್ಸೆಂಟ್ ವಿಮಾ ಏಜೆಂಟರಿಗೆ ಸಿಗುತ್ತೆ ಅಂತ ಕೇಳಿದಾಗ ಪರ್ಸೆಂಟೇಜನ್ನು ಹೀಗೂ ಉಪಯೋಗಿಸಬಹುದಾ ಅನ್ನಿಸ್ತು. ಅದಾದ ಮೇಲೆ ನೀವು ಕಟ್ಟೊ ಮೊದಲ ಪಾಲಿಸಿಯಲ್ಲಿ ಇಂತಿಷ್ಟು ಪರ್ಸೆಂಟು rebate ಕೊಡ್ತೀನಿ ಅನ್ನೋ ಅವರ ಮಾತುಗಳಲ್ಲಿ, ನಮ್ಮ ಬಸ್ಸಿಗೆ ಹತ್ತಿ ನಮ್ಮ ಬಸ್ಸಿಗೆ ಹತ್ತಿ ಅಂತ ಬಸ್ಟಾಂಡಲ್ಲಿ ದುಂಬಾಲು ಬೀಳ್ತಿದ್ದ ಜನಗಳಿಗೂ ಅವರಿಂದ ಜನ ಹತ್ತಿರ್ದೇನೇ ಇಷ್ಟ್ ಪರ್ಸೆಂಟ್ ಕಮಿಷನ್ನು, ಹೊಟ್ಟೆಪಾಡು ಅನ್ನೋ ಅಂಶಗಳು ಈ ಪ್ರತಿಶತದ ಬಗೆಗಿನ ಆಲೋಚನಾಲಹರಿಯನ್ನೇ ಬದಲಿಸಿದವು.
ಇನ್ನು ವಿಜ್ನಾನಕ್ಕೂ, ಅಂತರ್ಜಾಲಕ್ಕೂ ಈ ಪ್ರತಿಶತದ ಕೊಡುಗೆ ಕಮ್ಮಿಯೇನಲ್ಲ. ಯಾವುದೋ ಜಾಲತಾಣದಲ್ಲಿ ಖಾಲಿಜಾಗ ಬರೀಬೇಕು. ಆದ್ರೆ ಖಾಲಿಜಾಗವನ್ನು ತಗೊಳ್ಳದ html ಅದನ್ನ %20 ಅಂತ ಬರೆದಿರುತ್ತೆ. ಹೊಂದಿಕೆಯಾಗದ ಬ್ರೌಸರ್ಗಳಲ್ಲಿ ಪರಭಾಷೆಯ ಲೇಖನಗಳು %[ ಗಳ ರೂಪದಲ್ಲಿ ಕಾಣೋದ ನೋಡಿರಬಹುದು. ಇವೆಲ್ಲಕ್ಕಿಂತ ಹೆಚ್ಚು ತಲೆತಿನ್ನೋದು ಮೊಬೈಲು ಮತ್ತು ಲ್ಯಾಪ್ಟಾಪ್ ಬ್ಯಾಟರಿ %. ಬ್ಯಾಟ್ರಿ ಪರ್ಸಂಟೇಜ್ ಹದಿನೈದಾಗುತ್ತಿದ್ದಂತೆಯೇ ಕೂಗಲು ಶುರು ಮಾಡೋ ಮೊಬೈಲು ನಂತರ ಮೊಬೈಲು ಮಖಾಡೆ ಮಲಗೋವರೆಗೂ ಕೂಗುತ್ಲೇ ಇರುತ್ತೆ. ಅಯ್ಯೋ. ಬೆಳಗ್ಗೆ ಅಷ್ಟೆ ೧೦೦% ಆಗೋ ತರ ಚಾರ್ಚು ಮಾಡಿದ್ದೆ. ಈಗ ನೋಡಿದ್ರೆ ೫೦%. ಇನ್ನು ಇಡೀ ದಿನ ಹೆಂಗೆ ಕಳೆಯೋದಪ್ಪ ಅನ್ನೋ ಚಿಂತೆ ಕೆಲವರದ್ದಾದ್ರೆ ಲ್ಯಾಪ್ಟಾಪ್ ಬ್ಯಾಟ್ರಿ ಆಗ್ಲೇ ಏ ಪ್ರತಿಶತಕ್ಕೆ ಬಂದು ಕೆಂಪಾಗಿದೆ. ಅದಿನ್ನು ಮಲಗೋದ್ರೊಳಗೆ ಬ್ಯಾಟ್ರಿ ಎಲ್ಲಪ್ಪ ಹುಡುಕ್ಲಿ ಅನ್ನೋದು ಇನ್ನುಳಿದವರರದ್ದು. ೧೦% ಬ್ಯಾಟ್ರಿ ಇತ್ತು ಈಗೊಂದು ಗಂಟೆ ಹಿಂದೆ. ಇನ್ನೂ ಒಂಭತ್ತು ಪರ್ಸೆಂಟ್. ಎಷ್ಟೊತ್ತು ಬರುತ್ತೆ ನೋಡು ನನ್ನ ಬ್ಯಾಟ್ರಿ ಅನ್ನೋ ಹೊಟ್ಟೆಯುರಿಸೋ ಮಾತುಗಳ ನಡುವೆಯೂ ಪುಕು ಪುಕು ಹೇಳಿದವನಿಗೆ. ಟ್ರಿಪ್ಪಿಗೆ ಅಂತ ಹೋದಾಗ ೪೦ ಪರ್ಸೆಂಟಿದ್ದ ಫೋನು ಇದ್ದಕ್ಕಿದ್ದಂಗೆ ಮೂವತ್ತೈದಾಗಿ, ಇಪ್ಪತ್ತಾಗಿ ಪರ್ಸೆಂಟೇಜ್ ಲೆಕ್ಕಾಚಾರನೇ ತಲೆಕೆಳಗೆ ಮಾಡಿ ಯಾವಾಗಾದ್ರೂ ಮಖಾಡೆ ಮಲಗಬಹುದು ಅನ್ನೋದು ಅವ್ನ ಹಿಂದಿನ ಅನುಭವಗಳಿಂದ ಕಲಿತ ಪಾಟ. ಆ ಕಂಪೆನಿಯಲ್ಲಿ ೫೧% ಶೇರು ಆ ಮನುಷ್ಯಂದೆ. ಅವನೀಗ ರಿಟೈರಾಗ್ತಾ ಇದಾನಲ್ಲ. ಮುಂದೆ ಹೆಂಗೇನಪ್ಪ ಅನ್ನೋ ಚಿಂತೆ ಹೂಡಿಕೆದಾರರದ್ದಾದ್ರೆ , ಈ ಬ್ಯಾಂಕಿನವ್ರು ಕಾರ್ ಸಾಲದ ಬಡ್ಡಿದರ ಒಂದೆರಡು ಪರ್ಸೆಂಟ್ ಆದ್ರೂ ಇಳಿಸಿದ್ರೆ ಒಂದು ಕಾರು ತಗೊಂಡು ಒಂದಿಷ್ಟು ಪ್ರತಿಶತ ಟ್ಯಾಕ್ಸ್ ಉಳಿಸ್ಬೋದಿತ್ತು ಅನ್ನೋ ಚಿಂತನೆ ವೇತನದಾರರದ್ದು. ಎಕ್ಸಾಮಿಗೆ ಎಷ್ಟು ಓದಿದ್ಯೋ ಅಂದ್ರೆ ಒಂದು ಅರವತ್ತು ಪರ್ಸೆಂಟಾಗಿದೆ ಮಗ ಅಂತ್ಲೋ. ಎಷ್ಟು ಓದಿದ್ರೂ ಇನ್ನೂ ಮೂವತ್ತು ಪರ್ಸೆಂಟೂ ಆಗಿಲ್ಲ ಲೋ, ಇನ್ನು ಓದ್ಬೇಕು. ನಿಂದೆಷ್ಟಾಯ್ತು ಅನ್ನೋ ತರದ ಉತ್ತರಗಳು ಕಾಮನ್ನು ಹುಡುಗ್ರ ಬಾಯಲ್ಲಿ.
ಇನ್ನು ಗಾಳಿಯಲ್ಲಿ ಆಮ್ಲಜನಕದ ಪರ್ಸೆಂಟೇಜ್ ಎಷ್ಟು , ಭೂಮಿಯಲ್ಲಿನ ನೀರಿನ ಪರ್ಸೆಂಟೇಜಲ್ಲಿ ಎಷ್ಟು ಪ್ರತಿಶತ ಹಿಮಗಡ್ಡೆಗಳಲ್ಲಿ ಅಡಗಿದೆ ಅನ್ನೋ ತರದ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಕಾಮನ್ನಾಗಿರ್ತಿತ್ತು ಮುಂಚೆ. ಆದರೀಗ ನೀವು ಕುಡಿಯೋ ಕೋಕ್, ಪೆಪ್ಸಿಗಳಲ್ಲಿರೋ ವಿಷದ ಪರ್ಸಂಟೇಜ್ ಎಷ್ಟು ಗೊತ್ತಾ ಆಂತ ಕೇಳೋ ಪರಿಸ್ಥಿತಿ ಬಂದಿರೋದು ಪರಿಸ್ಥಿತಿಯ ದುರಂತ. ಭಾರತದಲ್ಲಿರೋ ಮಹಿಳೆಯರಲ್ಲಿ ಇಷ್ಟು ಪ್ರತಿಶತ ಮಹಿಳೆಯರು ಇಂತಿಷ್ಟು ವರ್ಷ ದಾಟೋ ಹೊತ್ತಿಗೆ ಇಷ್ಟು ಶೋಷಣೆಗಳಿಗೆ ಒಳಗಾಗಿರುತ್ತಾರೆ ಅಂತಲೋ, ಇಲ್ಲಿ ಹೊಟ್ಟೋ ಮಕ್ಕಳಲ್ಲಿ ಇಷ್ಟು ಪ್ರತಿಶತ ಕುಪೋಷಣೆಗೆ ಒಳಗಾಗಿರುತ್ತಾರೆ ಅಂತ್ಲೋ ದಿನಪತ್ರಿಕೆಗಳಲ್ಲಿ ಓದೋ ಅಂಕಿ ಅಂಶಗಳು ಯಾಕೋ ಮನಕಲಕಿಬಿಡುತ್ತೆ. ಇನ್ನು ಈ ಪ್ರತಿಶತ ಅನ್ನೋದು ಬರೀ ಭೂಮಿಯ ವಿಚಾರವಲ್ಲ. ಇದ್ರ ವ್ಯಾಪ್ತಿ ವಿಶ್ವಮಯ. ಅಂತರಿಕ್ಷಕ್ಕೆ ತನ್ನ ಇಂತಿಷ್ಟನೇ ಉಪಗ್ರಹ ಉಡಾವಣೆಗೆ ತಯಾರಾಗ್ತಿರೋ ಇಸ್ರೋದ ಯಶಸ್ವೀ ಉಡ್ಡಯನದ ಸಾಧ್ಯತೆ ಇಂತಿಷ್ಟು ಪ್ರತಿಶತ ಅಂತ ಓದುತ್ತಿರುವಾಗಲೇ, ಮಂಗಳನ ಅಂಗಳದಲ್ಲಿ ಇಂತಿಷ್ಟು ಪ್ರತಿಶತ ಇಂಗಾಲವಿದೆಯಂತೆ ಅನ್ನೋ ಸುದ್ಧಿ ಬಂದಿರುತ್ತೆ. ಮುಂದಿನ ವರ್ಷ ಭೂಮಿಯ ಕಕ್ಷೆಗೆ ಹತ್ತಿರ ಬರಲಿರೋ ಉಲ್ಕೆ ಭೂಮಿಗೆ ಹೊಡೆಯೋ ಪ್ರತಿಶತ ಸಾಧ್ಯತೆ ತುಂಬಾ ಕಡಿಮೆ ಅಂದ್ರೂ ಆ ಸಾಧ್ಯತೆ ಇದ್ದೇ ಇದೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿರುತ್ತೆ ಇನ್ನೆಲ್ಲೋ. ಇನ್ನೊಂದು ಮಜಾದ ಸಂಗತಿಯೆಂದ್ರೆ ಒಂದು ಕಡತದ ಹೆಸರಲ್ಲಿ % ಅನ್ನು ಬಳಸಬಹುದು. ಇದೂ ಒಂದು ವಿಶೇಷ ಚಿಹ್ನೆ(special character) ಏ ಆಗಿದ್ರೂ ಇದಕ್ಕೆ, #,! ಮತ್ತೆ ಕೆಲವೇ ಕೆಲವಕ್ಕೆ ಈ ವಿನಾಯಿತಿ ಇದೆ ! ಅದೇನು ಮಹಾ ಅಂದಿರಾ ? * ಅಥವಾ / ಅಥವಾ \ ಅಥವಾ ? ಗಳಲ್ಲಿ ಯಾವುದನ್ನಾದ್ರೂ ಫೈಲ್ ಹೆಸ್ರಲ್ಲಿ ಹಾಕಿ ನೋಡೋಣ 🙂 ಈಗಷ್ಟೇ ಅಂದಂತೆ ಈ % ಅನ್ನೋದು ವಿಶ್ವಮಯ. ಅದ್ರ ಮಹಿಮೆಗಳಲ್ಲಿ ಒಂದಿಷ್ಟು % ಆದ್ರೂ ಇಲ್ಲಿ ಸ್ಮರಣೆ ಮಾಡಲಾಗಿದ್ರ, ಇದರಿಂದ ನಿಮ್ಮ ಮನದಲ್ಲೂ ಒಂದಿಷ್ಟು % ವಿಚಾರದ ಎಳೆಗಳು ಮೂಡಿದ್ರೆ ಲೇಖನದ ಶ್ರಮ ಸಾರ್ಥಕ. ಮುಂದಿನ ಬಾರಿ ಸಿಗೋವರ್ಗೆ ಒಂದಿಷ್ಟು % ಪ್ರಣಾಮಗಳು ಮತ್ತೊಂದಿಷ್ಟು % ಧನ್ಯವಾದಗಳು.
*****