ಪ್ರವಾಸದ ನಿಮಿತ್ತ ಅಲಹಾಬಾದಿಗೆ ಬಂದಿದ್ದೆವು. ಇಲ್ಲಿನ ಸುಪ್ರಸಿದ್ಧ ಪ್ರಯಾಗಕ್ಕೆ ಭೇಟಿ ಕೊಟ್ಟಾಗ ನದಿಯಲ್ಲಿ ತ್ರಿವೇಣಿ ಸಂಗಮ , ಪ್ರಯಾಗ ನೋಡಲು ಉತ್ಸುಕರಾಗಿದ್ದೆವು. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದ ಪವಿತ್ರ ಸ್ಥಳ ಅದು. ಸಂಜೆಯ ಆರೂವರೆಯ ಸುಮಾರಿಗೆ ತಲುಪಿದೆವು. ಅಲ್ಲಿದ್ದದ್ದು ಒಂದೋ, ಎರಡೋ ದೋಣಿಗಳು. ಅವರಲ್ಲಿ ವಿಚಾರಿಸಿದಾಗ ಒಬ್ಬರು ಬರಲು ಒಪ್ಪಿದರು. ನದೀ ದಡ ನಿರ್ಜನ. ನಾವಿದ್ದ ದೋಣಿ ನೀರಿನಲ್ಲಿ ಸಾಗುವಾಗ ಬಿಳಿಯ ಸೈಬೀರಿಯನ್ ಹಕ್ಕಿಗಳು ಜೊತೆ ಜೊತೆಗೆ ಬರತೊಡಗಿದವು. ಅವಕ್ಕೆ ಬಿಸ್ಕತ್ತು, ಹಣ್ಣು ಕೊಡುವ ಅಭ್ಯಾಸವಾಗಿತ್ತು ಪ್ರವಾಸಿಗರಿಂದ. ಅದಕ್ಕೇ ಹಿಂಬಾಲಿಸುತ್ತಿದ್ದವು.
ದೋಣಿಯಲ್ಲಿ ಸುಮಾರು ಮುಂದೆ ಬರುವಾಗ ಅಲ್ಲಿ ತ್ರಿವೇಣಿ ಸಂಗಮ ಸ್ಥಳಕ್ಕೆ ತಲುಪಿದೆವು. ಅಲ್ಲಿ ಮತ್ತೊಂದು ದೋಣಿಯಲ್ಲಿ ಒಬ್ಬ ಗುರೂಜಿ ಕುಳಿತು ಪ್ರವಾಸಿಗರ ನಿರೀಕ್ಷೆಯಲ್ಲಿದ್ದರು. ಅವರಿದ್ದ ದೋಣಿಯ ವಿಶೇಷತೆ ಏನೆಂದರೆ ಅದರ ಅಡಿ ಭಾಗದ ಹಲಗೆಗಳ ನಡುವೆ ಎರಡು ಅಡಿ ಸುತ್ತಳತೆಗೆ ಕೊರೆದು ಅಲ್ಲಿಯೇ ತ್ರಿವೇಣಿ ಸಂಗಮದ ಪವಿತ್ರ ಸ್ನಾನ ಮಾಡುವ ಅನುಕೂಲವಿತ್ತು. ಅಲ್ಲಿ ಕೊರೆದ ಜಾಗದ ಮೇಲ್ಭಾಗದಲ್ಲಿ ಕಬ್ಬಿಣದ ಹಿಡಿಕೆ ಆಧಾರಕ್ಕೆ ಹಿಡ್ಕೊಳ್ಳಲು ಇತ್ತು. ದೋಣಿಯ ಒಳಗಿಂದಲೇ ಸ್ನಾನದ ಅವಕಾಶ. ನದಿ ಅಲ್ಲಿ ಅಪಾರವಾದ ರಭಸ ಮತ್ತು ಆಳ ಎರಡೂ ಇದೆ ಎನ್ನುವುದು ತಿಳಿಯಿತು.
ನೀರು ರಭಸವಾಗಿ ಹರಿಯುವುದು ತಿಳಿಯುತ್ತಿತ್ತು. ಕೈಲಿದ್ದ ನೀರಿನ ಬಾಟಲಿಯ ನೀರು ಚೆಲ್ಲಿ ದೋಣಿಯಲ್ಲಿದ್ದ ಹಾಗೆ ಕೈಗೆ ಎಟುಕುವ ನೀರನ್ನು ಬಾಟಲಿಯಲ್ಲಿ ತುಂಬಿದ್ದೆವು. ಕೆಳಗೆ ನೀಲ ಜಲ ;ಮೇಲೆ ನೀಲಾಕಾಶ. ಆಗ ದೂರದಿಂದ ಮಲಯಾಳಂ ಭಾಷೆಯಲ್ಲಿ “ಸ್ವಾಮಿಯೇ ಶರಣಮಯ್ಯಪ್ಪಾ. ಸ್ವಾಮಿ ಶರಣಂ, ಅಯ್ಯಪ್ಪ ಶರಣಂ, ಸ್ವಾಮಿಯೇ . . . . . . ಕೇಳಿ ಬರತೊಡಗಿತು. ಸಹಜವಾಗಿ ಕಿವಿ ನೆಟ್ಟಗಾಯಿತು. ಎಲ್ಲಿಯ ಉತ್ತರ ಪ್ರದೇಶ’;ಎಲ್ಲಿಯ ಕೇರಳ!ನಾವು ಕೇರಳಿಗರು. ಮಲಯಾಳ ಸುಪರಿಚಿತ ಭಾಷ . ಅರೆಬರೆ ಮಾತನಾಡಲೂ ಗೊತ್ತಿದೆ. ಗಡಿ ನಾಡಿನ ಕನ್ನಡಿಗರು ಎನ್ನಬಹುದು. ಅದಕ್ಕೇ ಮಲಯಾಳಂ ಭಾಷೆ ಕೇಳಿ ಕಿವಿ ನೆಟ್ಟಗಾಗಿದ್ದು ಸುಳ್ಳಲ್ಲ.
ವೇಗವಾಗಿ ತ್ರಿವೇಣಿ ಸಂಗಮದತ್ತ ದೋಣಿಯೊಂದು ದೌಡಾಯಿಸಿ ಬರುವುದು ಕಾಣಿಸಿತು. ಅದರ ಹಿಂದೆ ಮತ್ತೊಂದು ದೋಣಿಯಲ್ಲಿ “ಹರಿವರಾಸನಂ; ವಿಶ್ವಮೋಹನಂ. ಹರಿದಧೀಶ್ವರಂ, . . ಆರಾಧ್ಯ. . . ” ಅಯ್ಯಪ್ಪಸ್ವಾಮಿಯ ಜೋಗುಳದ ಹಾಡು. )ಭಕ್ತಿಯಿಂದ ಏರು ದನಿಯಲ್ಲಿ ಹಾಡುತ್ತ ಆಗಾಗ “ಸ್ವಾಮಿಯೇ ಶರಣಂ ಅಯ್ಯಪ್ಪಾ”ಎನ್ನುತ್ತ ಅದರಲ್ಲಿ ಬರುತ್ತಿದ್ದವರು ಇವರದೇ ತಂಡದವರೇ ಎಂದು ಗೊತ್ತಾಯಿತು. ಅನಿರ್ವಚನೀಯ ಆನಂದ, ಸಂಭ್ರಮ ಇಲ್ಲಿ ತಾಯ್ನೆಲದ ನುಡಿ ಕೇಳುವಾಗ. ಎರಡೂ ದೋಣಿಯವರಿಗೆ ಪರಸ್ಪರ ಪರಿಚಯವಾಯಿತು. ಕಾಸರಗೋಡಿನಿಂದ ಶುರುವಾಗಿ ತಿರುವನಂತಪುರದ ವರೆಗಿನ ಯುವಕರಿದ್ದರು. ನಿತ್ಯದ ಪರಿಚಿತರಂತೆ ಮಾತುಕಥೆ ಆಯಿತು.
“ಇಲ್ಲಿಗೆ ಬಂದ ನಂತರ ಅಮವಾಸ್ಯೆ, ಹುಣ್ಣಿಮೆ ಗೊತ್ತಾಗ್ತಿಲ್ಲ. ಚೇಚಿ( ಅಕ್ಕ) ಯಾವ ಊರು?ಏಟ( ಅಣ್ಣ) ಕರ್ನಾಟಕದೋರಾ? ಭಕ್ಷಣ ( ಊಟ) ಹಿಡಿಸುತ್ತಾ? ರೋಟಿ ಅಭ್ಯಾಸವಾಗಿದಾ? ಯಾವಾಗ ಊರಿಗೆ ಎನ್ನುತ್ತ ಸಹೋದರರಂತೆ ವಿಚಾರಿಸ್ಕೊಂಡರು. ಸಂಗಮ ಸ್ನಾನ ಮಾಡಲಿದ್ದೀರಾ?ಎಂದು ಕೇಳಿದಾಗ ಸಮಯ ಸಾಲದು . ಎಂದರು. ಕತ್ತಲಾವರಿಸತೊಡಗಿತು ಆಗಲೇ. ಫಕ್ಕನೆ ನೆನಪಾಗಿ ನನ್ನಲ್ಲಿದ್ದ ಮಲಯಾಳಂ ಪಾಕೆಟ್ ಡೈರಿಯನ್ನು ಅವರಿಗೆ ಕೊಟ್ಟೆ. ಆಗ ಅರಳಿದ ಮುಖವೇ ಅವರಿಗಾದ ಸಂತೋಷಕ್ಕೆ ಸಾಕ್ಷಿ. ಅವರು ಕೈ ಬೀಸುತ್ತ ವಿದಾಯ ಕೋರಿ ಸಂಗಮ ನೋಡಲು ಮುಂದುವರಿದರೆ ನಾವು ದಡ ಸೇರಲು ಹೊರಟೆವು.
ಎತ್ತ ನೋಡಿದರೂ ನೀರವತೆ, ನಿರ್ಜನತೆ, ಕತ್ತಲ ಛಾಯೆ. ನಮ್ಮದು ಬಿಟ್ಟರೆ ಬೇರೆ ದೋಣಿಯಿಲ್ಲ. ಅನುಮಾನವಾಗಿ ವಿಚಾರಿಸಿದೆವು ಅಂಬಿಗನಲ್ಲಿ.
“ಸಂಜೆ ಆರು ಘಂಟೆ ಕಳೆದ ನಂತರ ದೋಣಿ ನೀರಿಗಿಳಿಸಬಾರದು ಇಲ್ಲಿ. ಅದಕ್ಕೇ ಖಾಲಿಯಾಗಿದೆ”
ಫಕ್ಕನೆ ನೆನಪಾಯಿತು. ನಾವು ನದಿ ದಡಕ್ಕೆ ಬರುವಾಗಲೆ ಅಲ್ಲಿ ಜನರಿಲ್ಲ. ನದಿಯಲ್ಲಿ ದೋಣಿ ವಿಹಾರವಿರಲೇ ಇಲ್ಲ.
“ನಮಗ್ಯಾಕೆ ಆಗಲೇ ತಿಳಿಸಲಿಲ್ಲ. ನಾವು ದೂರದ ಪ್ರವಾಸಿಗರು. ಇಲ್ಲಿನ ಕಟ್ಟುಕಟ್ಟಲೆ ಅರಿಯದು. “
ಸುಮ್ಮನಾದ. ಬಹುಶ ಪ್ರವಾಸಿಗರನ್ನು ಕರೆದೊಯ್ದರೆ ಸಿಗುವ ದುಡ್ಡು ಅಂದಿನ ಮನೆಯ ವೆಚ್ಚಕ್ಕೆ ಸಿಗಬಹುದು ಎನ್ನುವ ಅನಿವಾರ್ಯತೆ ಇರಬಹುದೇನೋ.
“ಹಾಗೇಕೆ ?”
“ಇಲ್ಲಿ ಬೇಗನೆ ಕತ್ತಲಾಗುತ್ತದೆ. ಆರು ಘಂಟೆ ಕಳೆದ ಮೇಲೆ ಜಲವಿಹಾರ ನಿಲ್ಲಿಸಬೇಕು. ದೋಣಿ ಮುಳುಗಿದರೆ ನೆರವಿಗೆ ಯಾರೂ ಬರುವುದಿಲ್ಲ”
ಭಯದಿಂದ ಮೈಯೆಲ್ಲ ಹೆಪ್ಪುಗಟ್ಟಿತು. ಉಸಿರಿಲ್ಲ. ನೀರವತೆ ಒಮ್ಮೆಲೇ.
“ನಿಮಗೆ ?”
“ನಮಗೆಲ್ಲ ಚೆನ್ನಾಗಿ ಈಜು ಬರುತ್ತದೆ. ” ನಿರ್ಲಿಪ್ತ ಉತ್ತರ.
ಆಳವಾದ ನದಿಯ ಮಧ್ಯೆ ಇದ್ದೇವೆ ಆಗ. ಹಾಡು, ನಗು , ಜೋಕ್ಸ್ , ಹರಟೆ ಎಲ್ಲ ನಿಂತು ನಿಶ್ಶಬ್ದ ಆವರಿಸಿತು. ರಾಮಸ್ಮರಣೆಯೊಂದೆ ಉಳಿದಿದ್ದು.
ಸುರಕ್ಷಿತವಾಗಿ ದಡ ಸೇರಿಸಿದ ಅಂಬಿಗ. ನಮ್ಮನ್ನು ಬಿಟ್ಟರೆ ನರ ಹುಳ ಇಲ್ಲ ವಿಶಾಲವಾದ ನದಿ ದಂಡೆಯಲ್ಲಿ.
ಇಂದಿಗೆ ಸಿಹಿ, ಕಹಿ ನೆನಪು ಉಳಕೊಂಡಿದೆ.
-ಕೃಷ್ಣವೇಣಿ ಕಿದೂರ್.