ಪ್ರಭಾವತಿ ದೇಸಾಯಿಯವರ ಗಜಲ್‌ ಸಂಕಲನ “ಭಾವಗಂಧಿ”: ಶಿವಕುಮಾರ ಮೋ ಕರನಂದಿ

ಕೃತಿ: ಭಾವಗಂಧಿ (ಗಜಲ್ ಸಂಕಲನ)
ಲೇಖಕಿ: ಶ್ರೀಮತಿ ಪ್ರಭಾವತಿ ದೇಸಾಯಿ
ಪ್ರಕಾಶನ: ಗಗನ ಪ್ರಕಾಶನ ವಿಜಯಪುರ

ಸುಕೋಮಲವಾದ ಭಾವನೆಗಳ ಅಭಿವ್ಯಕ್ತಿಯೇ ‘ಗಜಲ್’ ಅರಬ್ಬಿ ಭಾಷೆಯ ಕಾವ್ಯರೂಪವಾದ ಇದು ಉರ್ದುವಿನಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಪ್ರಕಾರವಿದು. ಉರ್ದುವಿನಲ್ಲಿ ಗಜಲ್ ಗೆ ಕಾವ್ಯರಾಣಿ ಎಂದು ಕರೆಯುತ್ತಾರೆ. ಕನ್ನಡ ಮಣ್ಣಿನೊಂದಿಗೆ ಬೆರೆತು ಸಮೃದ್ಧವಾಗಿ ಬೆಳೆಯುತ್ತಿರುವ ಗಜಲ್ ಕಾವ್ಯ ಪ್ರಕಾರವೂ ಹೈದ್ರಾಬಾದ್ ಕರ್ನಾಟಕದ ಶಾಂತರಸರಿಂದ ಕನ್ನಡಕ್ಕೆ ಪರಿಚಿತವಾಯಿತು, ಶಾಂತರರಸರು, ಎಚ್ ಎಸ್ ಮುಕ್ತಾಯಕ್ಕ, ಬಸವರಾಜ ಸಬರದ, ದಸ್ತಗಿರಸಾಬ್ ದಿನ್ನಿ, ಕಾಶಿನಾಥ ಅಂಬಲಿಗೆ, ಅಲ್ಲಾಗಿರಿರಾಜ್, ಗಿರೀಶ್ ಜಕಾಪುರೆ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಚಿದಾನಂದ ಸಾಲಿ, ಪ್ರೇಮಾ ಹೂಗಾರ, ನೂರಅಹ್ಮದ ನಾಗನೂರ, ಯು ಸಿರಾಜ ಅಹ್ಮದ, ರಮೇಶ ಗಬ್ಬೂರ, ಚಂಪೂ, ಅರುಣಾ ನರೇಂದ್ರ ಹಾಗೂ ಮುಂತಾದವರ ಗಜಲ್ ಪ್ರೀತಿ ಕರ್ನಾಟಕದ ತುಂಬ ಸಂಭ್ರಮಿಸುತ್ತಿದೆ.

ಕೆಲವೇ ಕೆಲವು ಗಜಲ್ ಲೇಖಕಿಯರಲ್ಲಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರು ಒಬ್ಬರು ಈಗಾಗಲೇ ಕವನಸಂಕಲನಗಳು, ಪ್ರಬಂಧ ಸಂಕಲನ, ಆಧುನಿಕ ವಚನಗಳು, ಪ್ರವಾಸ ಕಥನ, ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವರು ಹಾಗೂ ‘ಮೌನ ಇಂಚರ’ ‘ಮಿಡಿತ’ , ‘ನಿನಾದ’ ಎಂಬ ಗಜಲ್ ಸಂಕಲನಗಳನ್ನು ಹೊರತಂದು ನಾಡಿನ ಗಜಲ್ ಪ್ರಿಯರ ಮನ್ನಣೆಗೆ ಪಾತ್ರರಾಗಿದ್ದಾರೆ. ಈಗ ಇವರ ನಾಲ್ಕನೆಯ ಗಜಲ್ ಸಂಕಲನ ‘ಭಾವಗಂಧಿ’ ಗಜಲ್ ಸಂಕಲನ ವನ್ನು ತರುವ ಮೂಲಕ ಮಹಿಳೆಯರಲ್ಲಿಯೇ ಅತಿ ಹೆಚ್ಚು ಗಜಲ್ ಹೊರತಂದವರಲ್ಲಿ ಮೊದಲಿಗರಾಗಿದ್ದಾರೆ.

ಭಾವಗಂಧಿ ಗಜಲ್ ಸಂಕಲನವೂ ೫೦ ಹೂಗಳಿಂದ(ಗಜಲ್) ಸಿಂಗರಿಸಿದ ಕೃತಿಯಾಗಿದ್ದು
ತಳಮಳ, ಕಳವಳ,ಪ್ರೇಮ, ಏಕಾಂಗಿತನ, ಪ್ರೀತಿ, ಅಂತಃ ಕರಣ, ಸಾತ್ವಿಕ ಪ್ರತಿಭಟನೆ, ಬದುಕುವ ಛಲ ಈ ಎಲ್ಲಾ ಭಾವಗಳ ಸಮ್ಮಿಶ್ರಣವೇ ಈ ಭಾವಗಂಧಿ ಗಜಲ್ ಸಂಕಲನವಾಗಿದೆ.

“ಹಚ್ಚಿದ ಹಣತೆಯ ಪ್ರಕಾಶ ಕೋಣೆಯ ಕತ್ತಲೆ ದೂಡಿತು”
“ರವಿಯ ಕಿರಣ ಬಯಲ ಆಲಯಕೆ ಬೆಳಕು ಚೆಲ್ಲುವುದು ತಿಳಿ (ಗ-೧)”
ಮರುಳ ಮನುಜನಿಗೆ ತಿಳಿಮಾತನ್ನು ಹೇಳುತ್ತಿದ್ದಾರೆ ಕವಯತ್ರಿಯವರು ಹಚ್ಚಿದ ಹಣತೆಯ ಬೆಳಕು ಅಂಧಕಾರವನ್ನು ಹೊಡೆದೋಡಿಸುತ್ತದೆ ಅದೇ ರೀತಿ ಜ್ಞಾನದ ಬೆಳಕನ್ನು ನಾವು ಪಡೆಯಬೇಕಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ರವಿಯ ಕಿರಣ ಬಯಲ ಆಲಯಕೆ ಬೆಳಕು ಚೆಲ್ಲುತ್ತದೆ ಅದೇ ರೀತಿ ಪ್ರೀತಿ ವಿಶ್ವಾಸದಿಂದ ನಾವೂ ಬೆಳಕು ಚೆಲ್ಲಬೇಕಿದೆ ಅಲ್ಲವೇ……!

“ಮೌನದ ಚೂರಿಯಿಂದ ಚುಚ್ಚಿ ಹೃದಯ ಗಾಯ ಮಾಡದಿರು”
“ನಗುವ ಹಣತೆಗಳ ಬತ್ತಿ ಜಗ್ಗಿ ಕತ್ತಲೆಯ ಮಾಡದಿರು(ಗ-೨)”
ಮಾತಿಗಿಂತ ಮೌನ ತುಂಬಾ ಅಪಾಯಕಾರಿಯೂ ಹೌದು ಉಪಯೋಗಕಾರಿಯೂ ಹೌದು ಮೌನದ ಚೂರಿಯಿಂದ ಚುಚ್ಚಿ ಗಾಯಬೇಡ ಎಂದಾಗ ಆ ಹೃದಯ ಎಷ್ಟು ನೊಂದುಕೊಂಡಿರಬೇಡ, ನಗುವ ಹಣತೆಯನ್ನು ಕತ್ತಲಿಗೆ ದೂಡಬೇಡ ಎಂದು ನೋವಿನಿಂದ ಹೇಳುವ ಮಾತು ಮನಸಿಗೆ ತಾಕುತ್ತವೆ.

“ಅವಳ ತನುವಿನ ಕಾಂತಿಗೆ ಕನ್ನಡಿಯ ಹೊಳಪು ಮಂಕಾಯಿತು”
“ಅವಳ ಮೈಮಾಟ ಕಂಡು ಲತೆ ನಾಚಿ ಮರವ ಬಳಸಿ ನಿಂತಿತು(ಗ-೮)”
ಅವಳನ್ನು ವರ್ಣಿಸಿ ಬರೆದಿದ್ದಾರೆ ಕವಯತ್ರಿಯವರು, ಅವಳ ಮೈ ಬಣ್ಣಕೆ ಕನ್ನಡಿ ನಾಚಿದೆ, ಮೈಮಾಟಕೆ ಬಳ್ಳಿ ಮರವ ತಬ್ಬಿದೆ ಎನ್ನುತ್ತಾ ಒಂದೊಳ್ಳೆ ಗಜಲ್ ರಚಿಸಿದ್ದಾರೆ.

“ಜಗದಲ್ಲಿ ಏನು ಮಾಡಿದರೇನು ಕಾಲಚಕ್ರ ಉರುಳಿ ಸವಿದ ಮೇಲೆ”
“ಅವನ ಕರೆ ಬಂದಾಗ ಮೋಹ ಸರಿಸಿ ಪ್ರಭೆಯ ಉಸಿರು ಹಾರಿತು(ಗ-೧೦)”
ವಿರಹದ ಉರಿ ಬೆಂಕಿ ಮುಚ್ಚಿದ ಕೆಂಡದಂತಿದೆ ,ಕಾಲಚಕ್ರ ಉರುಳಿ ಹೋದ ಮೇಲೆ ಏನು ಮಾಡಲಾಗುವುದಿಲ್ಲ ಎಂದು ತೀರ್ವ ವಿರಹರೋದನೆಯನ್ನು ಹೊರಹಾಕುತ್ತಾರೆ, ದೇವನ ಕರೆ ಬಂದಾಗ ಸುಮ್ಮನೆ ಹೊರಡಬೇಕಿದೆ ಎನ್ನುವ ವಾಸ್ತವ ಸತ್ಯವನ್ನು ದರ್ಶನ ಮಾಡಿಸುತ್ತಾರೆ.

“ನಿತ್ಯ ಇರುಳ ಕರಾಳ ಕಥೆಯನು ಕಂಬನಿಯಲಿ ಕರಗಿಸಿದೆ”
“ಧ್ಯಾನದಲಿ ನಿನ್ನ ಕರುಣೆಯ ಕಂದೀಲ ಪ್ರಭೆಯ ಅರಸುತಾ ಹೊರಟೆ(ಗ-೧೯)”
ಕಂಬನಿಯಲಿ ಕರಾಳ ಕಥೆಯನ್ನು ಕರಗಿಸಿದೆ ಎಂದಾಗ ತೀರ್ವ ನೋವಿನಿಂದ ಬಳಲುತ್ತಿರುವುದು ಕರುಳು ಚುರಕ್ ಎಂದು ಅನುಭವವಾಗುತ್ತದೆ. ಧ್ಯಾನದಲ್ಲಿ ನಿನ್ನ ಕರುಣೆಯ ಕಂದೀಲ ಬೆಳಕಿಗಾಗಿ ಅರಸುತ್ತಾ ಹೊರಟೆ ಎಂದಾಗ ತುಸು ಜೀವ ಹಿಡಿದುಕೊಂಡು ನಿನ್ನನ್ನೆ ಕಾಯುತ್ತಿದ್ದೇನೆ ಎನ್ನುವದನ್ನು ಚಿತ್ರಿಸಿದ್ದಾರೆ.

“ಮಾಗಿ ಚಳಿಯಲಿ ಕೋಗಿಲೆ ಮೌನದಂತೆ ಅವನ ನೆನಪುಗಳು ಕಾಡುವವು”
“ಚೈತ್ರಕೆ ವನ ಚಿಗುರುವಂತೆ ನಿನ್ನೊಲುವು ಮನ ಅರಳಿಸುವುದು ಆಗಾಗ(ಗ-೨೧)”
ಅವನ ನೆನಪು ಹೇಗೆಲ್ಲಾ ಕಾಡುತ್ತದೆ, ಕಚಗುಳಿ ಕೊಡುತ್ತದೆ ಎಂದು ಈ ಗಜಲ್ ಆಶಯವಾಗಿದೆ ರೂಪಕಗಳ ಮುಖೇನ ಬರೆದಿದ್ದಾರೆ ಮಾಗಿ ಚಳಿ, ಕೋಗಿಲೆಯ ಮೌನದಂತೆ ಅವನ ನೆನಪು

“ಮನೆಯ ಒಳಹೊರಗೆ ಹೊನ್ನಕಿರಣ ಹರಡಲು ಆಶಿಸಿದವಳು”
“ಸಮಾಧಿಯ ಒಳಗೆ ಹಣತೆ ಇಟ್ಟು ಪ್ರಭೆಯ ಹುಡುಕಿದರೇನು ಪ್ರಯೋಜನ (ಗ-೨೪)”
ಕಾಲ ಮಿಂಚಿದ ಮೇಲೆ ಕೊಡುವ ಯಾವ ಬೆಲೆಯೂ ಶೂನ್ಯ ಎನ್ನುವ ಆಶಯವನ್ನು ಹೊಂದಿದ ಗಜಲ್ ಇದಾಗಿದ್ದು ಇದ್ದಾಗ ಬೆಳಕಾಗದ ಜನ ಸಮಾಧಿಯ ಒಳಗೆ ಹಣತೆ ಇಟ್ಟರೆ ಫಲವೇನು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮಹಿಳಾಪರ ಧ್ವನಿಯೆತ್ತುತ್ತಿದ್ದಾರೆ ಕವಯತ್ರಿಯವರು.

“ನೆಲ ಜಲ ಮೋಹ ಬಿಡದೆ ಕಟ್ಟಿ ನೂರು ಗೂಡು ಚಕ್ರಾಧಿಪತಿಯಾದೆ”
“ಕಾಲನ ಚಕ್ರದ ಹೊಡೆತಕೆ ಎಲ್ಲಾ ಉರುಳಿ ಸೇರಿತು ಪ್ರಭೆಯಿಲ್ಲದ ಊರು(ಗ-೩೨)”
ಹೆಣ್ಣು ಮಣ್ಣು ಹೊನ್ನಿನ ಮೋಹವನ್ನು ತಲೆಗೆರಿಸಿಕೊಂಡಾಗ ಆಗುವ ಅನಾಹುತದ ಕುರಿತು ಸೂಚ್ಯವಾಗಿ ತಿಳಿಸುವ ಗಜಲ್ ಇದಾಗಿದೆ ಕಾಲದ ಹೊಡೆತಕ್ಕೆ ಸಿಕ್ಕರೆ ಪ್ರಭೆಯಿಲ್ಲದ(ಬೆಳಕಿಲ್ಲದ) ಊರಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ಸ್ವಾರ್ಥ ಜನಗಳಿಗೆ.

“ಕಣ್ಣಲ್ಲಿ ಒಲವಿನ ಕಾಮನ ಬಿಲ್ಲು ಮೂಡಿಸಿದವನೆ ಎಲ್ಲಿ ಮಾಯವಾದೆ”
“ಮರುಭೂಮಿಗೆ ಸೋನೆ ಸುರಿಸಿ ಹಸಿರು ಹುಟ್ಟಿಸಿದವನೆ ಎಲ್ಲಿ ಮಾಯವಾದೆ(ಗ-೩೯)”
ಪ್ರೀತಿಯ ಭಾವವನ್ನು ಕಂಗಳಲ್ಲಿ ಬಿತ್ತಿ ಕಾಮನ ಬಿಲ್ಲು ಮೂಡಿಸಿದ ಹುಡುಗನ ಕುರಿತು ಅದೆಷ್ಟು ಸುಂದರವಾಗಿ ಬರೆದಿದ್ದಾರೆ ಮರುಭೂಮಿಗೆ ಸೋನೆಮಳೆ ಸುರಿಸಿ ಅಂದರೆ ಬರಡಾದ ಹೃದಯದಲ್ಲಿ ಒಲವ ಮಳೆ ಸುರಿಸಿ ಒಲವಿನ ಸಸಿ ಚಿಗುರಿಸಿದ ಚೆಲುವಾಂತ ಚೆನ್ನಿಗನನ್ನು ನೆನಪಿಸಿಕೊಂಡು ಅದೆಷ್ಟು ರಮ್ಯತೆಯಿಂದ ಗಜಲ್ ರಚಿಸಿದ್ದಾರೆಂದರೆ ಪೂರ್ತಿ ಗಜಲ್ ಓದಲೇಬೇಕು….

“ನೆನಪಿನ ಅಮಲಿನಲಿ ಮಧು ಹೂಜಿ ಖಾಲಿ ಮಾಡಬಾರದಿತ್ತು”
“ಮುತ್ತಿನ ಹೊಳಪಿಗೆ ಮನ ಸೋತು ಕಡಲಿಗೆ ಬೀಳಬಾರದಿತ್ತು(ಗ-೪೨)”
ತೊರೆದು ಹೋದ ಇನಿಯನ ಕುರಿತು ನೊಂದು ಬರೆದಿದ್ದಾರೆ ನೆನಪಿನ ಅಮಲಿನಲಿ ಮಧು ಹೂಜಿ ಖಾಲಿ ಮಾಡಬಾರದಿತ್ತು ಎಂದು ಅವಲತ್ತುಕೊಳ್ಳುತ್ತಿದ್ದಾರೆ

“ಚಂದ್ರ ಬೆಳಕು ಪಡೆಯಲು ಕತ್ತಲೆಯನು ಸವರುತ್ತಾ ಹೊರಟನು”
“ನಿಗಿ ನಿಗಿ ಅಗ್ಗಿಯ ತುಳಿದವರಿಗೆ ಮುಲಾಮು ಹಚ್ಚ ಬಯಸಿಸವನು(ಗ-೪೭)”
ಬುದ್ದ ಎಂಬ ಮೌನಮೂರ್ತಿ ಎಲ್ಲರನ್ನೂ ಕಾಡುತ್ತಾನೆ, ಧ್ಯಾನಿಸುವಂತೆ ಮಾಡುತ್ತಾನೆ ಕವಯತ್ರಿಯವರಿಗೂ ಬಿಟ್ಟಿಲ್ಲ ಪ್ರತಿಮೆ ರೂಪಕಗಳೊಂದಿಗೆ ಬುದ್ಧನ ಕುರಿತು ಅದೆಷ್ಟು ಸುಂದರವಾಗಿ ಮತ್ಲಾದೊಂದಿಗೆ ಪ್ರಾರಂಭಿಸಿದ್ದಾರೆಂದರೆ ಚಂದ್ರ ಬೆಳಕು ಪಡೆಯಲು ಕತ್ತಲೆಯನು ಸವರುತ್ತಾ ಹೊರಟನು (ಚಂದ್ರ ಬೆಳಕು)ಜ್ಞಾನದ ಬೆಳಕನ್ನು ಪಡೆಯಲು ‌ವಾವ್ಹ್ ವರ್ಣಿಸಲು ಸಾಧ್ಯವಿಲ್ಲ ಅಷ್ಟು ಚೆಂದ ರೂಪಕಗಳನ್ನು ಬಳಸಿ ಬರೆದಿದ್ದಾರೆ.

“ತುಸು ಮೌನ ಮುರಿದು ಪಿಸುಮಾತಲಿ ಪ್ರೀತಿಯ ಬಿತ್ತೋಣ ಬಾ ಧರೆಯಲಿ”
“ಕೊಟ್ಟು ಕೊಳ್ಳುವ ಸುಂಕವಿಲ್ಲದ ಸಂತೆಯಲಿ ಸೇರೋಣ ಬಾ ಧರೆಯಲಿ(ಗ-೪೮)”
ಇನಿಯನಿಗೆ ಮುನಿಸು ತೊರೆದು ಪ್ರೀತಿಯ ಬೀಜ ಬಿತ್ತೋಣ ಈ ಭೂಮಿಯಲ್ಲಿ ಎಂದು ನಿವೇದನೆ ಮಾಡಿಕೊಳ್ಳುವ ಪರಿ ತುಂಬಾ ಚೆನ್ನಾಗಿದೆ, ಪ್ರೀತಿಯ ಬಾಂಧವ್ಯದಲ್ಲಿ ಕೊಡುಕೊಳ್ಳುವಿಕೆ ಬೇಡ ಶುದ್ಧ ಪ್ರೀತಿಯಲ್ಲಿ ಮೀಯೋಣ ಎನ್ನುವಲ್ಲಿ ಅದೆಷ್ಟು ಪರಿಶುದ್ಧವಾಗಿ ಪ್ರೀತಿಸುತ್ತಿರಬಹುದು ಎಂಬ ಊಹೆ ಮೂಡುತ್ತದೆ ಅದ್ಬುತ ಮತ್ಲಾದೊಂದಿಗೆ ಗಜಲ್ ಪ್ರಾರಂಭಿಸಿದ್ದಾರೆ. ಪೂರ್ತಿ ಗಜಲ್ ಓದಲು ಭಾಗಗಂಧಿ ಸಂಕಲನ ಓದಲೇಬೇಕು ಇಂತಹ ೫೦ ಗಜಲ್ ಗಳು ಭಾವಗಂಧಿಯಲ್ಲಿ ಅಡಕಗೊಂಡಿವೆ.

‘ಭಾವಗಂಧಿ’ ಗಜಲ್ ಸಂಕಲನವೂ ಶಾಂತಿ, ನೆಮ್ಮದಿ, ಮಾನವೀಯ ಮೌಲ್ಯ, ಬದುಕಿನ ಸುಖ ದುಃಖಗಳಿಗೆ, ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿ ಸಾಂತ್ವನ ನೀಡುತ್ತದೆ. ಶರಣರ ನಾಡಿನ ಪ್ರಭಾವ, ವಚನಗಳ ಆಧ್ಯಾತ್ಮಿಕ ಛಾಯೆ ಇವರ ಗಜಲ್ ಗಳ ಮೇಲೆ ಬಿದ್ದಿದೆ. ಎಲ್ಲಾ ರೀತಿಯ ವಿಷಯ ವಸ್ತುಗಳನ್ನು ಒಳಗೊಂಡ ಕೃತಿಯು ಗಮನ ಸೆಳೆಯುತ್ತದೆ. ಈ ಗಜಲ್ ಸಂಕಲನದ ಗಜಲ್ ಗಳು ವಿವಿಧ ಪ್ರಕಾರಗಳಲ್ಲಿ ಮೂಡಿಬಂದಿವೆ. ಒಳ್ಳೆಯ ಕೃತಿಯನ್ನು ಗಜಲ್ ಸಾಹಿತ್ಯ ಲೋಕಕೆ ಕೊಡುಗೆಯಾಗಿ ನೀಡಿದ ಶ್ರೀಮತಿ ಪ್ರಭಾವತಿ ದೇಸಾಯಿ ಅವರಿಗೆ ಅಭಿನಂದನೆಗಳು ಇನ್ನೂ ಅನೇಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಲಿ ಹಾಗೂ ಗಜಲ್ ನ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ತರಲಿ ಎಂದು ಶುಭ ಹಾರೈಸುತ್ತೇನೆ.

-ಶಿವಕುಮಾರ ಮೋ ಕರನಂದಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x