ಪ್ರತಿಭೆಗಿಂತ ಹುಚ್ಚು ದೊಡ್ಡದು: ವಾಸುಕಿ ರಾಘವನ್ ಅಂಕಣ

ಪ್ರತಿಭೆಗೆ ನಮ್ಮ ದೇಶದಲ್ಲಿ ಸಿಗುವಷ್ಟು ಮಾನ್ಯತೆ ಬಹುಷಃ ಪ್ರಪಂಚದ ಯಾವ ದೇಶದಲ್ಲೂ ಸಿಗಲಿಕ್ಕಿಲ್ಲ. ನನ್ನ ಹೇಳಿಕೆ ನೀವು ದೇಶಾಭಿಮಾನದ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರೆ ಕ್ಷಮಿಸಿ, ನಾನು ಅದನ್ನು ವ್ಯಂಗ್ಯವಾಗಿ ಹೇಳಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದವರ ಬಗ್ಗೆ ಮಾತಾಡುವಾಗ ಗಮನಿಸಿ, ನಿಮಗೆ ಕೇಳಸಿಗುವುದು ಅವರ “ಟ್ಯಾಲೆಂಟ್” ಅಥವಾ “ಬುದ್ಧಿವಂತಿಕೆ”ಯ ಬಗ್ಗೆ.
 
“ನೀನು ನಿನಗಿಂತ ಬುದ್ಧಿವಂತರ ಜೊತೆ ಸ್ನೇಹ ಮಾಡಬೇಕು” ಅಂತ ಸದುದ್ದೇಶದಿಂದಲೇ ಹೇಳುವ ಟಿಪಿಕಲ್ ಮಿಡ್ಲ್ ಕ್ಲಾಸ್ ಪೇರೆಂಟ್ಸ್ ಇರಬಹುದು, “ಆಶಾ ಭೋಸ್ಲೆ ಎಂತಹ ಗಿಫ್ಟೆಡ್ ಸಿಂಗರ್ ಆಲ್ವಾ, ಈ ವಯಸ್ಸಲ್ಲೂ ಎಷ್ಟು ಚನ್ನಾಗಿ ಹಾಡ್ತಾರೆ” ಅನ್ನುವ ಸಂಗೀತಪ್ರಿಯರು ಇರಬಹುದು, ಅಥವಾ “ಸಚಿನ್ ಏನ್ ಆಡ್ತಾನೆ ಗುರೂ, ಅವನಂತಹ ಟ್ಯಾಲೆಂಟೆಡ್ ಬ್ಯಾಟ್ಸಮನ್ ಇನ್ನೊಬ್ಬ ಹುಟ್ಟಿಬರಕ್ಕೆ ಸಾಧ್ಯಾನೇ ಇಲ್ಲ ಬಿಡು” ಅನ್ನುವ ಉತ್ಕಟ ಕ್ರಿಕೆಟ್ ಪ್ರೇಮಿ ಇರಬಹುದು, ನಿಮಗೆ ಪದೇ ಪದೇ ಕೇಳಿಬರುವುದು ಇದೇ “ಸಾಮರ್ಥ್ಯ” ಅಥವಾ “ಪ್ರತಿಭೆ”ಯ ಉಲ್ಲೇಖ! ತನಗೆ ಮೊದಲ ಸಲ ಓದಿದಾಗ ಸರಿಯಾಗಿ ಅರ್ಥ ಆಗದಿದ್ದರೂ ಬಿಡದೇ ಮತ್ತೆಮತ್ತೆ ಅದೇ ಪಾಠವನ್ನು ಓದಿ ತಿಳಿದುಕೊಂಡು, ಅತೀ ಹೆಚ್ಚು ಅಂಕಗಳನ್ನು ಪಡೆದ ಕ್ಲಾಸ್ ಟಾಪರ್ ಬಗ್ಗೆ ಯಾರಾದರೂ ಮಾತಾಡೋದು ಕೇಳಿದೀರಾ? ಇಲ್ಲ! ನಲವತ್ತು ವರ್ಷವಾದರೂ ಪ್ರತೀದಿನ ಬೆಳಗಿನ ಜಾವ ತಪ್ಪದೇ ಪ್ರಾಕ್ಟೀಸ್ ಮಾಡುವ ಸಚಿನ್ ಬಗ್ಗೆ ಹೆಚ್ಚಾಗಿ ಹೇಳ್ತಾರಾ? ಉಹೂಂ! ಎಷ್ಟು ‘ಅನಾಯಾಸವಾಗಿ’ ಸೆಂಚುರಿ ಹೊಡೆದ ನೋಡಿ ಅನ್ನುವ ಕಥೆಗೇ ಕೇಳುಗರು ಹೆಚ್ಚು. ತಮ್ಮ ಜೀವಮಾನದುದ್ದಕ್ಕೂ ದಿನವೂ ಗಂಟೆಗಟ್ಟಲೆ ‘ರಿಯಾಜ್’ ಮಾಡುವ ಗಾಯಕರ ಬಗ್ಗೆ ಯಾರೂ ಹೇಳಲ್ಲ, ನಮಗೆ ಕೇಳಸಿಗುವುದು “ದೈವದತ್ತವಾಗಿ” ಬಂದ ಸುಮಧುರ ಕಂಠದ ಬಗ್ಗೆ!
 

ಹಾಗಂತ ನಾನು ಒಬ್ಬ ವ್ಯಕ್ತಿಗೆ ಸ್ವಾಭಾವಿಕವಾಗಿ ಬಂದಿರಬಹುದಾದ ಸಾಮರ್ಥ್ಯವನ್ನು ಅಲ್ಲಗಳೀತಾ ಇಲ್ಲ. ಆದರೆ ಅದಕ್ಕಿಂತ ಮುಖ್ಯವಾದದ್ದು ಛಲಬಿಡದ ಪರಿಶ್ರಮ, ಇದನ್ನು ಮಾಡದೇ ನನ್ನ ಜೀವನ ಇಲ್ಲ ಅನ್ನುವ ಹುಚ್ಚು. ಇವು ಮಾತ್ರ ಯಾವುದೇ ಒಂದು ಅಸಾಧಾರಣ ಕಾರ್ಯಕ್ಕೆ ಪ್ರೇರಣೆಯಾಗುತ್ತದೆ. ಈ ಗುಣಗಳಿರುವ ವ್ಯಕ್ತಿ ತನಗಿಂತಲೂ “ಪ್ರತಿಭೆ” ಹೊಂದಿರುವ ಆದರೆ ತನ್ನಷ್ಟು “ಡ್ರೈವ್” ಇಲ್ಲದಿರುವ ವ್ಯಕ್ತಿಯನ್ನು ಸುಲಭವಾಗಿ ಹಿಮ್ಮೆಟ್ಟಿಸುತ್ತಾನೆ.

ಈ “ಹುಚ್ಚಿನ” ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ನೆನಪಾಗುವುದು ಕೆ. ಆಸಿಫ್. ಮುಘಲ್-ಎ-ಆಜಮ್ ಚಿತ್ರದ ನಿರ್ದೇಶಕ ಈತ. ಈ ಚಿತ್ರವನ್ನು ಮುಗಿಸಲು ಈತ ತೆಗೆದುಕೊಂಡ ಸಮಯ ಹೆಚ್ಚೂಕಡಿಮೆ ಹತ್ತು ವರ್ಷ! ತನ್ನ ಜೀವನದ, ಅದರಲ್ಲೂ ತನ್ನ ಮಧ್ಯವಯಸ್ಸಿನ ಬಹುತೇಕ ಸಮಯವನ್ನು ಕೇವಲ ಒಂದು ಚಿತ್ರಕ್ಕಾಗಿ ಎತ್ತಿಡುವ ಹುಚ್ಚುತನ ಎಂತಹುದು ಅಂತ ಯೋಚಿಸಿದಾಗ  ನನಗೆ ಈಗಲೂ ಗೌರವ ಮಿಶ್ರಿತ ದಿಗ್ಭ್ರಮೆ ಮೂಡುತ್ತದೆ.

ಮುಘಲ್-ಎ-ಆಜಮ್ ಅಂದ ತಕ್ಷಣ ಬಹುಷಃ ನಿಮಗೆ ನೆನಪಿಗೆ ಬರುವ ಹಾಡು “ಪ್ಯಾರ್ ಕಿಯಾ ತೋ ಡರ್ನಾ ಕ್ಯಾ”. ಒಬ್ಬ ಸಾಮಾನ್ಯ ನರ್ತಕಿ ಇಡೀ ಭಾರತಖಂಡದ ಒಡೆಯನಾದ ಅಕ್ಬರ್ ಎದುರು ನಿಂತು ಸವಾಲು ಹಾಕುವುದು ಇದೆಯಲ್ಲಾ, ಅದು ಬೆಳ್ಳಿಪರದೆಯ ಒಂದು ಮರೆಯಲಾಗದ ಕ್ಷಣ. ಆ ಶೀಶ್ ಮಹಲ್ ಪ್ರತಿಫಲನದಲ್ಲಿ ವ್ಯಕ್ತವಾಗುವ ಉತ್ಕಟ ಪ್ರೇಮ, ಅದರ ತಾಕತ್ತನ್ನು ತೋರಿಸಿರುವ ರೀತಿ ನಿಜಕ್ಕೂ ಅಮೋಘ. ಆದರೆ ನನಗೆ ಈ ಹಾಡಿಗಿಂತಲೂ ಹೆಚ್ಚು ಪ್ರಿಯವಾದ ಹಾಡು “ಪ್ರೇಮ್ ಜೋಗನ್ ಬನಕೆ”. ಮೊದಲು ಹೇಳಿದ ಹಾಡು ಪ್ರೀತಿಯ ಪರಾಕಾಷ್ಠೆಯನ್ನು ತೋರಿದರೆ, ಈ ಹಾಡು ಆ ಸ್ಥಿತಿಗೆ ತಲುಪುವ ಪ್ರೀತಿ ಮೊಳಕೆಯೊಡೆದದ್ದು ಹೇಗೆ ಅನ್ನುವುದನ್ನು ತೋರಿಸುತ್ತದೆ. ದೇವತೆಯಂತೆ ಕಂಗೊಳಿಸುವ ಮಧುಬಾಲ ಕಣ್ಣಿನಲ್ಲಿ ಇಡೀ ಮುಘಲ್ ಸಾಮ್ರಾಜ್ಯವನ್ನು ಎದುರುಹಾಕಿಕೊಳ್ಳುವ ತಾಕತ್ತು ಕಾಣಿಸುತ್ತದೆ, ಅದಕ್ಕಿಂತಲೂ ಒಂದು ಕೈ ಹೆಚ್ಚೆನ್ನುವಂತೆ ಇರುವುದು ಉಸ್ತಾದ್ ಬಡೇ ಘುಲಾಮ್ ಅಲಿ ಖಾನ್ ಅವರ ಭಾವಪರವಶ ಗಾಯನ.

ಈ ಹಾಡಿನ ಹಿಂದೆ ಒಂದು ಸ್ವಾರಸ್ಯಕರವಾದ ಘಟನೆ ಇದೆ. ಆಸಿಫ್ ಅವರಿಗೆ ತಮ್ಮ ಚಿತ್ರ ಹೀಗೇ ಇರಬೇಕೆಂಬ ಸ್ಪಷ್ಟ ಪರಿಕಲ್ಪನೆ ಇತ್ತು. “ಪ್ರೇಮ್ ಜೋಗನ್” ಹಾಡನ್ನು ಉಸ್ತಾದ್ ಬಡೇ ಘುಲಾಮ್ ಅಲಿ ಖಾನ್ ಅವರಿಂದಲೇ ಹಾಡಿಸಬೇಕು ಅನ್ನುವ ಆಶಯ ಹೊಂದಿದ್ದರು ಆಸಿಫ್. ಖಾನ್ ಆ ವೇಳೆಗಾಗಲೇ ಪ್ರಖ್ಯಾತ ಹಿಂದೂಸ್ತಾನಿ ಗಾಯಕ, ಅವರಿಗೆ ಚಲನಚಿತ್ರಗಳಲ್ಲಿ ಹಾಡುವುದಕ್ಕೆ ಸುತರಾಂ ಇಷ್ಟವಿರಲಿಲ್ಲ. ಆದರೂ ಆಸಿಫ್ ಪಟ್ಟು ಬಿಡದೇ ಖಾನ್ ಅವರನ್ನು ಹಾಡುವಂತೆ ಪೀಡಿಸುತ್ತಿದ್ದರು. ಎಷ್ಟು ಪ್ರಯತ್ನ ಪಟ್ಟರೂ ಆಸಿಫ್ ಅವರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದ ಖಾನ್, ತಾವು ಹಾಡಬೇಕೆಂದರೆ ಒಂದು ಹಾಡಿಗೆ ಇಪ್ಪತ್ತೈದು ಸಾವಿರ ಕೊಡಬೇಕು ಅಂತ ಬೇಡಿಕೆ ಇಟ್ಟರಂತೆ. ಇದು ಐವತ್ತು ವರ್ಷಕ್ಕೂ ಮುಂಚಿನ ಮಾತು. ಆಗ ಲತಾ ಮಂಗೇಶ್ಕರ್, ಮೊಹಮದ್ ರಫಿ ಅಂತಹ ಖ್ಯಾತ ಗಾಯಕರಿಗೆ ಒಂದು ಹಾಡಿಗೆ ಸಿಗುತ್ತಿದ್ದ ಸಂಭಾವನೆ ಮುನ್ನೂರು-ನಾನೂರು ರೂಪಾಯಿಗಳು ಅಷ್ಟೇ. ಎಲ್ಲಿಯ ಮುನ್ನೂರು, ಎಲ್ಲಿಯ ಇಪ್ಪತ್ತೈದು ಸಾವಿರ? ಆದರೂ ಹಿಂದುಮುಂದು ನೋಡದೆ ಆಸಿಫ್ ಒಪ್ಪಿಕೊಂಡು, ಅರ್ಧದಷ್ಟು ದುಡ್ಡನ್ನು ಅಡ್ವಾನ್ಸ್ ಆಗಿ ಕೊಟ್ಟುಬಿಟ್ಟರಂತೆ. ಖಾನ್ ವಿಧಿಯಿಲ್ಲದೇ ಹಾಡಲೇ ಬೇಕಾಯಿತಂತೆ. ಆ ಹಾಡನ್ನು ಒಮ್ಮೆ ಕಣ್ಣುಮುಚ್ಚಿಕೊಂಡು ಕೇಳಿ ನೋಡಿ, ಆ ಇಪ್ಪತ್ತೈದು ಸಾವಿರದ ಒಂದೊಂದು ಪೈಸೆಗೂ ನ್ಯಾಯ ದೊರಕಿದೆ ಅನಿಸದಿರದು!

ಈ ಒಂದು ವಿಚಾರವನ್ನು ನಮ್ಮ ದೊಡ್ಡವರಾಗಲೀ, ನಮ್ಮ ಶಿಕ್ಷಣ ವ್ಯವಸ್ಥೆಯಾಗಲೀ ನಮಗೆ ಸಾಮಾನ್ಯವಾಗಿ ಹೇಳಿಕೊಡುವುದಿಲ್ಲ. ಆದರೆ ಜೀವನ ಸ್ವಲ್ಪ ನಿಧಾನವಾಗಿಯಾದರೂ ನನಗೆ ಕಲಿಸಿಕೊಟ್ಟ ಸತ್ಯ – “ಪ್ರತಿಭೆಗಿಂತ ಹುಚ್ಚು ದೊಡ್ಡದು”!

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Venkatesh
Venkatesh
11 years ago

Yes you r rt…ಪ್ರತಿಭೆಗಿಂತ ಹುಚ್ಚು ದೊಡ್ಡದು !

1
0
Would love your thoughts, please comment.x
()
x