ಪ್ರಜೆಗಳ ಕೈಯಲ್ಲಿ ಕೊರೋನ ನಿಯಂತ್ರಣ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

 ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
 ಧರೆ ಹತ್ತಿ ಉರಿದರೆ ನಿಲಲುಬಾರದು

ಈ ಮೇಲಿನ ಬಸವಣ್ಣನವರ ಮಾತ ನೆನಪಿಸುವಂತೆ ಮಾಡಿದೆ ಇಟಲಿಯ ಇಂದಿನ ಪರಿಸ್ಥಿತಿ. ಕರೋನ ರೋಗಕ್ಕೆ ಚಿಕಿತ್ಸೆ ಕೊಡಲು ಆಗದಂತೆ ಇಟಲಿಯಲ್ಲಿ ರೋಗ ಹರಡಿದೆ. ದಿನ ದಿನಕ್ಕೂ ಹೆಚ್ಚು ಹರಡುತ್ತಾ ಹೆಚ್ಚು ಬಲಿಗಳ ಪಡೆಯುತ್ತಿದೆ. ಚಿಕಿತ್ಸೆ ದೊರೆಯದೆ ರೋಗಿಗಳು ಬೀದಿ ಬೀದಿಗಳಲ್ಲಿ ಓಡುವುದು ಬೀಳವುದು ಒಬ್ಬ ರೋಗಿಗಳ ಮೇಲೆ ಮತ್ತೊಬ್ಬರೋಗಿ ಬಿದ್ದು ಒದ್ದಾಡುವ ಕೆಲವರು ಬಿದ್ದು ಎದ್ದು ಓಡುವ, ಇನ್ನು ಕೆಲವರು ಮಿಸುಕಾಡದೆ ಮಲಗಿರುವ, ಚಿಕಿತ್ಸೆಗಾಗಿ ಅಂಗಲಾಚುವ, ಆರೋಗ್ಯವಂತರು ಇವರ ಕಂಡು ಓಡುವ ದೃಶ್ಯಗಳ ಕಂಡು ತನ್ನ ಪ್ರಜೆಗಳಿಗೆ ಚಿಕಿತ್ಸೆ ಕೊಡಿಸಿ ಬದುಕಿಸಲಾಗದೆ, ಸತ್ತು ರಸ್ತೆಯಲ್ಲಿ ಬಿದ್ದಿರುವವರ ಸಂಸ್ಕಾರ ಮಾಡಲಾಗದೆ, ಸಾಯುವವರ ತಡೆಯಲಾಗದೆ ಇಟಲಿ ದೇಶದ ಅಧ್ಯಕ್ಷರು ದುಃಖಿಸುತ್ತಾ ಅಸಹಾಯಕತೆಯಿಂದ ಗಳಗಳನೆ ಅತ್ತ ಕರುಣಾಜನಕ ದೃಶ್ಯ ಮರುಕ ಹುಟ್ಟಿಸುತ್ತಿದೆ. ಸಾವನ್ನು ತಡೆಯಲಾಗದ ಮಾನವನ ಅಸಹಾಯಕತೆ ಮಾನವನಿಗೆ ತನ್ನ ಶಕ್ತಿಯ ಅಲ್ಪತೆಯ ಅರಿವನ್ನು ಮೂಡಿಸಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು, ನಮಗೂ ಬರಬಾರದು. ಅನೇಕರು ನಮಗೆ ಬರುವುದಿಲ್ಲ ಅಂದುಕೊಳ್ಳುತ್ತಿದ್ದಾರೆ. ಆದರೆ ಬರಲಾರದು ಅಂದುಕೊಳ್ಳುವಂತಿಲ್ಲ! ಅದ್ದರಿಂದ ನಾವು ಜಾಗೃತರಾಗಬೇಕಿದೆ. ರೋಗ ಹರಡದಂತೆ ತಡೆಯುವುದು ಸರಕಾರದ ಕೆಲಸ ಅಂತ ಪ್ರಜೆಗಳು ಸುಮ್ಮನೆ ಕೂತರೆ ರೋಗ ನಿಯಂತ್ರಣಕ್ಕೆ ಬರದು! ಸರಕಾರದ ಜತೆಗೆ ಪ್ರಜೆಗಳು ಕೈ ಜೋಡಿಸಿದಾಗ ಮಾತ್ರ ರೋಗ ಹರಡುವುದನ್ನು ತಡೆಯಬಹುದು!

ರೋಗ ನಿಯಂತ್ರಿಸಲು ನಮ್ಮ ಸರಕಾರ ಮುಂಚಿತವಾಗಿಯೆ ಪ್ರಯತ್ನ ಆರಂಭಿಸಿ ಉತ್ತಮ ಕಾರ್ಯಕ್ರಮಗಳ ರೂಪಿಸಿ ಪ್ರಜಾ ಪ್ರೇಮ ಮೆರೆಯುತ್ತಿದೆ. ಬೇರೆಬೇರೆ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರ ವಿಶೇಷ ವಿಮಾನದಲ್ಲಿ ಕರೆತಂದು ಸೋಂಕಿತರಿಗೆ ಚಿಕಿತ್ಸೆ ಕೊಡುತ ಆರೋಗ್ಯವಂತರ ನಿಗಾಘಟಕದಲ್ಲಿಟ್ಟು ಅವರ ರಕ್ಷಣೆ ಮಾಡುತ್ತಾ, ಒಂದು ವಾರ ಅಂತರಾಷ್ಟ್ರೀಯ ವಿಮಾನಗಳಿಗೆ ನಿಷೇದ ಏರಿ, ಒಂದು ದಿನ ಜನತಾ ಕರ್ಪ್ಯೂ ಜಾರಿ ಮಾಡಿ ರೋಗ ನಿಯಂತ್ರಣದ ಪ್ರಯತ್ನಗಳ ಉತ್ತಮವಾಗಿ ಮಾಡುತ್ತಿದೆ. ಒಂದು ದಿನ ಜಾರಿಯಾದ ಜನತಾ ಕರ್ಪ್ಯೂ ಜನರು ಸುಮಾರ 14 ಗಂಟೆಗಳ ಕಾಲ ರೋಗ ಹರಡದಂತೆ ನಿಯಂತ್ರಿಸುವ ಉತ್ತಮ ಯೋಚನೆ. ಅದು ಸಹಸ್ರಾರು ರೋಗಾಣುಗಳ ಮಾರಣ ಹೋಮ ಮಾಡಿದ ಅವಧಿ . ಭಾರತ ಸರಕಾರ ತನ್ನ ದೇಶವಾಸಿಗಳಿಗೆ ರೋಗದ ಬಗ್ಗೆ, ಅದು ಹರಡುವ ರೀತಿಯ ಬಗ್ಗೆ ಮಾಹಿತಿ ಕೊಟ್ಟು ಅದು ಹರಡದಂತೆ ತಡೆಯಲು ಪ್ರಜೆಗಳು ಹೇಗೆ ಇರಬೇಕೆಂದು ಸಲಹೆ ಸೂಚನೆಗಳನ್ನು ಕೊಡುತ್ತಿದೆ. ಈ ರೋಗದ ವಿಷಯದಲ್ಲಿ ಸಲಹೆ ಸೂಚನೆಗಳನ್ನು ಕೊಡುವುದು ಸರಕಾರವಾದರೂ ಅದನ್ನು ಅನುಸರಿಸಿ ರೋಗ ಹರಡದಂತೆ ತಡೆಯುವವರು ದೇಶವಾಸಿಗಳಾಗಿರುತ್ತಾರೆ. ಇದರಲ್ಲಿ ಸರಕಾರದ ಪಾತ್ರ ಇರುವುದಿಲ್ಲವೆಂದಲ್ಲ. ಸರಕಾರದ ಪಾತ್ರವೂ ಇರುತ್ತದೆ. ಆದರೆ ಪ್ರಜೆಗಳ ಮೇಲೆ ಕಾನೂನಿನ ಬೆದರಿಕೆಯೊಡ್ಡಿ ತಾನು ಹೇಳಿದಂತೆ ಕೇಳುವಂತೆ ಮಾಡುವುದಕ್ಕು ಸ್ವಯಂ ಆಗಿ ಪ್ರಜೆಯೇ ಈ ಕಾರ್ಯ ಮಾಡುವುದಕ್ಕೂ ವ್ಯತ್ಯಾಸವಿದೆ. ದೇಶವಾಸಿಯೇ ದೇಶದ ಸಲಹೆ ಸೂಚನೆಗಳನ್ನು ಚ ಚು ತಪ್ಪದೆ ಪಾಲಿಸಿ ರೋಗ ಹರಡದಂತೆ ಮಾಡಿ ಉತ್ತಮ ಪ್ರಜೆಯಾಗುವುದು ಎಲ್ಲಾ ದೇಶದ ಜವಬ್ದಾರಿಯುತ ಪ್ರಜೆಗಳ ಕರ್ತವ್ಯ! ರೋಗ ಹರಡದಂತೆ ತಡೆಯುವುದೆಂದರೆ ತನ್ನನ್ನು ತಾನು ಕೊರೋನ ಸೋಂಕು ತಾಗದಂತೆ ರಕ್ಷಿಸಿಕೊಳ್ಳುವುದು. ತನ್ನನ್ನು ತಾನು ರಕ್ಷಿಸಿಕೊಂಡರೆ ರೋಗ ಹರಡುವುದ ತಡೆದಂತೆ!

ಭಾರತದಲ್ಲಿ ಜನರಿಗೆ ಈ ರೋಗದ ಬಗ್ಗೆ ತಿಳುವಳಿಕೆ ಕೊಟ್ಟು ಜಾಗೃತಿ ಮೂಡಿಸುವುದು ಒಂದು ಸವಾಲಾದರೆ ಗೃಹಬಂಧನದಲ್ಲಿರಿಸುವುದು ಅದಕ್ಕಿಂತ ದೊಡ್ಡ ಸವಾಲೆಂದು ತಪ್ಪಿಸಿಕೊಂಡು ಹೋದವರನ್ನು ಹಿಡಿತರುವವರ ಕಂಡು ಎಲ್ಲರಿಗೂ ಅನಿಸುತ್ತಿದೆ. ಕಾರ್ಮಿಕರು, ಬಡವರು, ದಿನಗೂಲಿಗಳು ಮುಂತಾದವರು ಹೆಚ್ಚು ತೊಂದರೆಗಳ ಎದುರಿಸುತ ಸವಾಲಾಗುವಂತೆ ಸಮಸ್ಯೆಗಳು ತೆರೆದುಕೊಳ್ಳುತ್ತಿವೆ. ಹಾಗಂತ ತಡೆಯದೆ ಹೋದರೆ ಪರಿಣಾಮ ಊಹಾತೀತ! ಆದ್ದರಿಂದ ಪ್ರತಿಯೊಬ್ಬರೂ ಇದನ್ನು ತಡೆಯಲು ಪ್ರಯತ್ನಿಸಬೇಕು. ಕೊರೋನ ಒಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ. ಅಂದರೆ ಕೊರೋನಾ ರೋಗಿಗಗಳಿಂದ ಆರೋಗ್ಯವಂತರಿಗೆ ಹರಡುವುದು. ಕೆಮ್ಮು, ಸೀನು ಮತ್ತು ಮಲದಿಂದ ಈ ರೋಗ ಹರಡುತ್ತದೆ. ರೋಗಿ ಕೆಮ್ಮಿದಾಗ, ಸೀನಿದಾಗ ರೋಗಿಯ ಬಾಯಿಂದ ಕೆಲವು ಹನಿಗಳು ಹೊರ ಚಿಮ್ಮುತ್ತವೆ. ಸಾಮಾನ್ಯವಾಗಿ ಸೀನುವಾಗ ಕೆಮ್ಮುವಾಗ ಆ ಹನಿಗಳು ಇತರರಿಗೆ ಸಿಡಿಯಬಾರದೆಂದು ಕೈಗಳನ್ನೋ, ಕರವಸ್ತ್ರವನ್ನೋ ಬಾಯಿಗೆ ಅಡ್ಡ ತರುತ್ತಾರೆ. ಹಾಗೆ ಅಡ್ಡ ತಂದಾಗ ಆ ಬಹಳಷ್ಟು ಜೋಲ್ಲಿನ ಹನಿಗಳು ಕೈಯಿಯಲ್ಲೋ, ಕರವಸ್ತ್ರದಲ್ಲೋ ಉಳಿದರೆ, ಕೆಲವು ಅವರ ಉಡುಪಿನ ಮೇಲೆ, ಇನ್ನು ಕೆಲವು ರೋಗಿಯ ಸುತ್ತಲ ವಸ್ತುಗಳ ಮೇಲ್ಮೈಮೇಲೆ ಬೀಳುತ್ತವೆ. ಇತರರು ಅವುಗಳನ್ನು ಕೈಯಿಂದ ಸ್ಪರ್ಷಿಸಿದಾಗ ಅವರ ಕೈಗೆ ಅವು ವರ್ಗಾವಣೆಯಾಗುತ್ತವೆ. ಕೈ ತೊಳೆಯದೆ ಬಾಯಿಯನ್ನೋ ಮೂಗನ್ನೋ ಕಣ್ಣನ್ನೋ ಸ್ಪರ್ಷಿಸಿದಾಗ ಸ್ಪರ್ಷಿಸಿದ ಆರೋಗ್ಯವಂತ ವ್ಯಕ್ತಿಯ ದೇಹವನ್ನು ರೋಗಾಣುಗಳು ಪ್ರವೇಶಿಸುತ್ತವೆ ಆಗ ಸೋಂಕುಂಟಾಗಿ ರೋಗ ಬರುವುದು. ಪ್ರಯುಕ್ತ ಕೈ ಕುಲುಕುವುದ, ಅಪ್ಪಿಕೊಳ್ಳುವುದ ಮಾಡಬಾರದು. ಮತ್ತೆ ಮತ್ತೆ ಸೋಪು ಹಚ್ಚಿ ಕೈ ತೊಳೆಯುವುದ ಮರೆಯಬಾರದು, ಮಾಸ್ಕ್ ಹಾಕಿಕೊಳ್ಳುವುದು ಬಿಡಬಾರದು, ಒಂದು ಮೀಟರ್ ಅಂತರ ಕಾಯ್ದಕೊಳ್ಳುವುದ ತಪ್ಪಬಾರದು. ಆದಷ್ಟು ಹೊರಗೆ ಸುತ್ತದೆ ಮನೆಯಲ್ಲೇ ಇರುವುದು. ಗುಂಪು ಸೇರಬಾರದು. ಹೀಗೆ ಇರುವುದರಿಂದ ರೋಗ ಹರಡದಂತೆ ತಡೆಯಬಹುದು. ಇದು ಡಬ್ಲ್ಯು ಹೆಚ್ ಒ ದ ಮಾಹಿತಿ.

ಆರೋಗ್ಯವಂತರು ಕೊರೋನ ರೋಗಗ್ರಸ್ತರ ಸಂಪರ್ಕಕ್ಕೆ ಹೋಗದಿದ್ದರೆ, ಬಾಯಿ, ಮೂಗು, ಕಣ್ಣು ಸ್ಪರ್ಷಿಸುವ ಮುನ್ನ ಕೈ ಶುದ್ಧಗೊಳಿಸಿಕೊಂಡರೆ ಆರೋಗ್ಯವಂತರಿಗೆ ರೋಗ ಹರಡುವುದಿಲ್ಲ. ಆದರೆ ರೋಗಿಗಳು ಯಾರು? ರೋಗ ಯಾರಿಗೆ ಇಲ್ಲ ಎಂದು ಗುರುತಿಸುವುದು ಕಷ್ಟ! ಹಾಗೆ ಯಾರಾದರೂ ಒಬ್ಬ ವ್ಯಕ್ತಿಗೆ ರೋಗಾಣು ಸೋಂಕು ತಗುಲಿದ್ದರೂ ರೋಗ ಪ್ರಕಟವಾಗಲು ಕೆಲವು ದಿನಗಳ ಸಮಯ ಹಿಡಿಯುವುದರಿಂದ ತನಗೆ ರೋಗ ಬಂದಿದೆ ಎಂದು ರೋಗಿಗೆ ಗೊತ್ತಾಗುವುದಿಲ್ಲ. ಕೊರೋನ ಆರಂಭದಲ್ಲಿ ಸಾಮಾನ್ಯ ನೆಗಡಿ ಶೀತ ಕೆಮ್ಮು ತಲೆನೋವಿನ ಲಕ್ಷಣ ಹೊಂದಿರುವುದರಿಂದ ಕೆಮ್ಮಿದವರನ್ನೆಲ್ಲಾ ಸೀನಿದವರನ್ನೆಲ್ಲಾ ಕೊರೋನ ಪೀಡಿತರು ಎಂದು ಭಾವಿಸಲಾಗುವುದಿಲ್ಲ. ಆದ್ದರಿಂದ ಯಾರ ಕೈ ಕುಲುಕದೆ, ಯಾರನ್ನೂ ಅಪ್ಪಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು … ಎಂದು ಮುಂತಾಗಿ ಕೊಟ್ಟ ಸಲಹೆ ಸೂಚನೆಗಳನ್ನು ಪಾಲಿಸುವುದರಿಂದ ರೋಗ ಹರಡದಂತೆ ತಡೆಯಬಹುದು. ಮುಖ್ಯವಾಗಿ ಮನೆಯಲ್ಲೇ ನಾಲ್ಕುದಿನ ಇದ್ದುಬಿಡುವುದರಿಂದ ರೋಗ ನಿಯಂತ್ರಿಸಬಹುದು. ಹೀಗಿರುವುದು ಹೇಳಿದಷ್ಟು ಸುಲಭವಲ್ಲ. ಆದರೆ ಅನಿವಾರ್ಯ. ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯ! ಹಾಗೆ ಮಾಡಿ ಅಮೂಲ್ಯ ಜೀವಗಳ ರಕ್ಷಿಸಿ, ಆ ಮೂಲಕ ದೇಶವನೂ ರಕ್ಷಿಸಬೇಕು.

-ಕೆ ಟಿ ಸೋಮಶೇಖರ್ ಹೊಳಲ್ಕೆರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x