(ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ)
ಅವತ್ತು ಬೆಳಿಗ್ಗೆ ದಾರ್ಜಿಲಿಂಗ್ ಗೆ ವಿದಾಯ ಹೇಳಿ ಕಾಲಿಮ್ ಪಾಂಗ್‍ಗೆ ನಮ್ಮ ಸವಾರಿ ಸಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದು ಅದ್ಭುತ ಜಾಗದಲ್ಲಿ ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟು ನಮ್ಮನ್ನು ಕುತೂಹಲಿಗಳನ್ನಾಗಿರಿಸಿದ್ದ ನಮ್ಮ ನೀ ಮಾ. ನಾವು ಹೊರಟು ಸುಮಾರು ಎರಡು ಗಂಟೆಗಳಾಗಿತ್ತೇನೊ ಲಾಮಾ ಹಟ್ಟಾ ಅನ್ನುವ ಒಂದು ಹಳ್ಳಿಯಲ್ಲಿ ನಮ್ಮ ಗಾಡಿ ನಿಂತಿತು. ಅದು ಮುಖ್ಯ ರಸ್ತೆಯಲ್ಲೇ ಇರುವ ಒಂದು ಹಳ್ಳಿ. ವಿಚಿತ್ರವೆಂದರೆ ಅಲ್ಲಿಂದಲೂ ಕಾಂಚನಜುಂಗಾದ ಮತ್ತೊಂದು ಸುಂದರವಾದ ನೋಟ ಕಾಣುತ್ತದೆ. ನಾವು ನಿಂತಿದ್ದ ಬಲಗಡೆ ಒಂದು ಸುಂದರ ಹೂದೋಟ. ಅದರೊಳಗಿಂದ ಸಾಗಿದರೆ ಮೇಲೆ ಬೆಟ್ಟಕ್ಕೆ ಹೋಗುವ ಕಾಲು ದಾರಿ. ನೀ ಮಾ ಮುಂದೆ ನಾವು ಅವನ ಹಿಂದೆ ಸಾಗಿದೆವು. ಅದು ನಲವತ್ತೈದು ನಿಮಿಷದ ದಾರಿಯಿರಬಹುದು. ಬೆಟ್ಟದ ತುದಿಗೆ ತಲುಪಿದೆವು. ಅಲ್ಲಿರುವ ರಮಣೀಯ ಸೌಂದರ್ಯವನ್ನು ಅಲ್ಲಿದ್ದುಕೊಂಡೇ ಸವಿಯಬೇಕು. ಅಲ್ಲೊಂದು ಚಿಕ್ಕದಾದ, ಚೊಕ್ಕದಾದ ಸರೋವರವಿದೆ, ಸುತ್ತಲೂ ಒಂದಕ್ಕಿಂತ ಒಂದು ಪೈಪೋಟಿಗಿಳಿದಂತೆ ಬೆಳೆದು ನಿಂತ ಪೈನ್ ಮರಗಳು. ಆ ಸರೋವರದಲ್ಲಿ ಕಾಣುವ ಆ ಹೆಮ್ಮರಗಳ ಪ್ರತಿಫಲನವಂತೂ ಕಣ್ಣಿಗೆ ಹಾಗೂ ಛಾಯಾಚಿತ್ರಗ್ರಾಹಕರಿಗೆ ಹಬ್ಬ!
ಅಲ್ಲೊಂದಿಷ್ಟು ಹೊತ್ತು ಸೌಂದರ್ಯವನ್ನು ಕಣ್ಣಿಗಿಂತ ಕ್ಯಾಮರಾ ಕಣ್ಣಿನಿಂದಲೇ ಜಾಸ್ತಿ ವೀಕ್ಷಿಸಿ ಮನದಣಿಯೇ ವಿಹರಿಸಿ, ಬೆಟ್ಟವಿಳಿದು ಕೆಳಗೆ ಬಂದೆವು. ನಮಗಿಂತ ಮೊದಲೇ ಕೆಳಗೆ ಬಂದಿದ್ದ ನಮ್ಮ ಸಾರಥಿಗಳು ದಾರಿ ಪಕ್ಕದ ಸಣ್ಣ ಹೋಟೇಲಿನಲ್ಲಿ ನೂಡಲ್ ಗಳನ್ನು ಒಂದು ಎಳೆಯೂ ಬಿಡದಂತೆ ಸವಿಯುತ್ತಿರುವುದ ನೋಡಿ ನಮಗೂ ಹೊಟ್ಟೆ ಇರುವುದರ ಅರಿವಾಗಿ ನಾವೂ ನೂಡಲ್ಸ್ ಆರ್ಡರ್ ಮಾಡಿ ಕುಂತೆವು. ಅದು ತಯಾರಾಗಿ ಬರುವವರೆಗಿರಲಿ ಅಂತ ಮೋಮೋನೂ ತಿಂದೆವು. ಎಲ್ಲ ತಿಂದಾದ ಬಳಿಕ, ಇಲ್ಲೇ ಸ್ವಲ್ಪ ಕೆಳಗೆ ಹೋದರೆ ನಿಜವಾದ ಹಳ್ಳಿಯ ಸೌಂದರ್ಯ ಸವಿಯಬಹುದು ಅಂತ ಮತ್ತೆ ನಮ್ಮಲ್ಲೊಂದು ಆಸೆ ಹುಟ್ಟಿಸಿದ ನೀಮಾ. ನಮ್ಮಲ್ಲಿಬ್ಬರು ಅದನ್ನೂ ನೋಡಿಯೇ ಬಿಡೋಣ ಅಂತ ಅವನ ಜೊತೆಗೆ ಹೊರಟೆವು. ಹೆಚ್ಚು ಕಡಿಮೆ ನಮ್ಮ ಮಲೆನಾಡ ಬದಿಯ ಮನೆಯ ಹಿಂದಿನ ತೋಟಕ್ಕೆ ಹೋಗುವ ದಾರಿಯ ತರಹವೇ ಇತ್ತದು. ಹಾಗೇ ಮುಂದೆ ಹೋದಾಗ ಎರಡು ಡೇರೆಗಳು ಗೋಚರಿಸಿದವು. ಥೇಟು ನಕ್ಸಲರ ಅಡಗು ತಾಣಗಳೇ! ನಾವು ಸ್ವಲ್ಪ ಮಟ್ಟಿಗೆ ಬೆವತೆವು. ವಾಪಸ್ಸು ಓಡಿ ಹೋಗಲು ಅನುಕೂಲವಾಗುವಷ್ಟು ಸರಳ ದಾರಿಯೂ ಅದಾಗಿರಲಿಲ್ಲ. ನಮ್ಮ ಭಯವನ್ನು ಗ್ರಹಿಸಿದವನಂತೆ ನೀ ಮಾ, ಅವು ಪ್ರವಾಸಿಗರಿಗೋಸ್ಕರ ಮಾಡಿದ ಟೆಂಟುಗಳೆಂದು ಹೇಳಿದಾಗ ಸ್ವಲ್ಪ ಸಮಾಧಾನವಾಯಿತು. ಆ ಟೆಂಟುಗಳಿಗೆ ಒಂದು ದಿನದ ಬಾಡಿಗೆ ಒಂದು ಸಾವಿರವಂತೆ. ಒಳಗಡೆ ನಮ್ಮನ್ನು ಕರೆದೊಯ್ದು ಎಲ್ಲ ವ್ಯವಸ್ಥೆಗಳ ಪರಿಚಯ ಮಾಡಿ ಕೊಟ್ಟ. ಒಳಗಡೆ ಎಲ್ಲ ವ್ಯವಸ್ಥಿತವಾಗಿತ್ತಾದರೂ ಸಂಸಾರಿಗಳು ವಾಸಿಸಲು ಎಳ್ಳಷ್ಟು ಯೋಗ್ಯವಿರಲಿಲ್ಲವದು. ಟೆಂಟಿನ ಕೆಲವು ಕಡೆಗೆಲ್ಲಾ ಕಿಂಡಿಗಳಿದ್ದವಲ್ಲದೆ, ಅಷ್ಟೊಂದು ಸುರಕ್ಷಿತವಾಗಿರಲಿಲ್ಲ ಕೂಡ. ನಾವೇನು ಅಲ್ಲಿ ಉಳಿಯುವರಿರಲಿಲ್ಲ ಬಿಡಿ. ಮುಂದಿನ ಸಲ ಬಂದರೆ ಇಲ್ಲಿಯೇ ಉಳಿದುಕೊಳ್ಳುವುದಾಗಿ ನೀ ಮಾಗೆ ಹೇಳಿದೆವು. ನಾವೇನು ಸತ್ಯ ಹರಿಶ್ಚಂದ್ರನ ಕುಲದವರೆ?! ಅದನ್ನು ನೋಡಿಕೊಳ್ಳುವ ಹಳ್ಳಿಯವನೊಬ್ಬ ಅಲ್ಲಿದ್ದ. ಅವನ ಹೆಸರು ಪೆಂಬಾ. ನೀ ಮಾ ನಮಗಲ್ಲಿ ಕಾಡಿನಲ್ಲಿ ಬೆಳೆಯುವ ಯಾಲಕ್ಕಿಯನ್ನು ಭೂಮಿ ಬಗೆದು ತೆಗೆದು ತಿನ್ನಲು ಕೊಟ್ಟ. ಅದರ ಪರಿಮಳ ಅಮೋಘವಾಗಿತ್ತು. ಯಾಲಕ್ಕಿ ನೆಲಗಡಲೇ ಥರ ನೆಲದ ಕೆಳಗೆ ಬೆಳೆಯುವುದೆಂದು ಅವತ್ತೇ ನನಗೇ ಗೊತ್ತಾಗಿದ್ದು! ಅದರೊಟ್ಟಿಗೆ ಕಾಡು ಟೊಮ್ಯಾಟೊ ಕೂಡ ಸವಿದೆವು. ಅಲ್ಲಿ ಸ್ಥಳಿಯರು ಮಾಡುವ ಬೀಯರೂ ಸಿಗುತ್ತದೆ ಕುಡಿಸುತ್ತೇನೆ ಇರಿ ಅಂದಾಗ ನಾವು ಇನ್ನೊಮ್ಮೆ ಕುಡಿದರಾಯ್ತು ಬಿಡ್ರೀ ಅಂತ ಅಲ್ಲಿಂದ ಕಾಲ್ತೆಗೆದೆವು!
ಅಲ್ಲಿಂದ ಮುಂದುವರೆದು ಒಂದು View point ನಿಂದ ತೀಸ್ತಾ ಹಾಗೂ ರಂಗಪೋ ನದಿಯ ಅಪೂರ್ವ ಸಂಗಮದ ವಿಹಂಗಮ ನೋಟ ಕಾಣುತ್ತದೆ. ಎರಡೂ ನದಿಗಳದೂ ಒಂದೊಂದು ಬಣ್ಣ, ಅವೆರಡು ವಿಲೀನವಾದಮೇಲೆ ಬೇರೆಯದೇ ಬಣ್ಣ. ತುಂಬಾ ಸುಂದರವಾದ ನೋಟ. ಅಲ್ಲಿ ಪಕ್ಕದಲ್ಲೇ ಡಬ್ಬಿ ಅಂಗಡಿಗಳಲ್ಲಿ, ನಮ್ಮಲ್ಲಿ ಅಡಿಕೆ ಚೀಟು, ತಂಬಾಕು ಮಾರುವಂತೆ ಬೀಯರು ಸಿಗುತ್ತದೆ. ಅದೇ ಅಲ್ಲಿನ ಲೋಕಲ್ ಬೀಯರು. ಅಲ್ಲಿಗೆ ಬರುವ ’ಬೀರು’ಬಲ್ಲರು ಕುಡಿದಾದ ಮೇಲೆ ಅಲ್ಲಿಯೇ ಬಾಟಲಿಗಳನ್ನು ಎಸೆದು ಅದರ ಜೊತೆಗೆ ಇನ್ನಿತರ ಬಾಟಲಿಗಳನ್ನು ಸೇರಿಸಿ ಅಲ್ಲೊಂದು ಅಪರೂಪದ ಸಂಗಮವನ್ನೂ ಸೃಷ್ಠಿಸಿದ್ದಾರೆ!
ಮುಂದೆ ತಲುಪಿದ್ದು ಕಾಲಿಮ್ ಪಾಂಗ್. ಅಲ್ಲಿ ಎಲ್ಲಾ ಖಾಲಿ ಖಾಲಿ. ಅಲ್ಲೇನೂ ಅಂಥ ಆಸಕ್ತಿದಾಯಕವಾದದ್ದಿರಲಿಲ್ಲ. ಒಂದು ಆರ್ಕಿಡ್ ನರ್ಸರಿಗೆ ಹೋದೆವು. ಅಲ್ಲಿ ನಮನಮೂನೆಯ ಆರ್ಕಿಡ್ ಗಳು. ನಂತರ ಒಂದು ಹೂದೊಟ. ಅಲ್ಲಿಂದ ಪರ್ವತ ಶ್ರೇಣಿಗಳ ಪನೋರಮಿಕ್ ನೋಟ. ಅಮೇಲೆ ಹೋಗಿದ್ದು ಮಂಗಲ ಧಾಮ ಅನ್ನುವ ಒಂದು ದೇವಾಲಯಕ್ಕೆ. ಅದು "ಕೃಷ್ಣ ಪ್ರಣಾಮಿ" ಅನ್ನುವ ಧರ್ಮದವರ ಆರಾಧ್ಯ ದೈವ ಕೃಷ್ಣನ ದೇಗುಲ. ಭಾರತ ಎಷ್ಟೊಂದು ಧರ್ಮಗಳಿಗೆ ಜನ್ಮ ನೀಡಿದ ಮಹಾ ತಾಯಿ!
ಕೊನೆಗೆ ಹೋಗಿ ಸೇರಿದ್ದು ಒಂದು ಐತಿಹಾಸಿಕ ಹೋಟೆಲು. ಅದ್ಯಾಕೊ ಅದನ್ನು ನೋಡಿದರೆ ಬ್ರಿಟೀಶರ ಕಾಲದಲ್ಲಿ ಕಟ್ಟಿದ್ದೆ ಇರಬೇಕು ಅನಿಸಿತು. ಅಷ್ಟೊಂದು ವ್ಯವಸ್ಥಿತವಾಗಿರಲಿಲ್ಲ. ಅಲ್ಲಿ ಎಲ್ಲೂ ಜನರೇ ಕಾಣುತ್ತಿಲ್ಲ. ಇಡೀ ಹೋಟೇಲಿನಲ್ಲಿ ನಾವಷ್ಟೆ. ಅಲ್ಲಿದ್ದವರಲ್ಲಿ ವ್ಯವಸ್ಥಾಪಕನೂ, ಸಪ್ಲೈಯರೂ, ಅಡಿಗೆಯವನೂ ಎಲ್ಲಾ ಒಬ್ಬನೇ ಆಗಿದ್ದ ಗೂರ್ಖಾ ಪಂಡಿತನೊಬ್ಬ ಸಿಕ್ಕಾಪಟ್ಟೆ ಸಲಾಮು ಹೋಡೆಯುತ್ತ ಬಂದು ನಿಂತ. ನಾಳೆ ಬೆಳಿಗ್ಗೆ ಉಪಹಾರಕ್ಕೆ ಏನು ಮಾಡಲಿ ಅಂತ ಕೇಳಿದಾಗ ಅಲ್ಲಿ ಬೇರೆ ಗಿರಾಕಿಗಳಿಲ್ಲಾ ಅಂತ ನಮಗೆ ಮನವರಿಕೆಯಾಗಿತ್ತು. ಯಾಕೆ ಇಲ್ಲಿ ಜನರೇ ಕಾಣುತ್ತಿಲ್ಲಾ ಅಂತ ಕೇಳಿದಾಗ ಆತ, ಗೋರ್ಖಾ ಲ್ಯಾಂಡಿನ ವಿಷಯವಾಗಿ ಕೆಲವು ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದಾರೆಂದೂ, ಅದಕ್ಕೆ ಯಾರೂ ಪ್ರವಾಸಿಗರು ಬರುತ್ತಿಲ್ಲವೆಂದು, ಇಲ್ಲದಿದ್ದರೆ ಈ ಹೋಟೆಲ್ ನಲ್ಲಿ ನಿಂತುಕೊಳ್ಳಲೂ ಜಾಗವಿರುವುದಿಲ್ಲ ಅಂತ ಹೇಳಿದ! ಅದಕ್ಕೆ ಇದು ತುಂಬಾ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಲ್ಲಲ್ಲಿ ಮಿಲಿಟರಿ ತುಕಡಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ನಿಯಮಿಸಿದ್ದಾರೆಂದ. ಅಂದರೆ ನಾವು ಬಂದಿದ್ದು ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಅಂತ ಆಗ ನಮಗೆ ಗೊತ್ತಾಗಿ ಆ ಚಳಿಯಲ್ಲೂ ಸಣ್ಣಗೆ ಬೆವರಿದೆವು.
ಮರುದಿನ ಬೆಳಿಗ್ಗೆ ಅಲ್ಲಿ ತಿಂದ ಉಪಹಾರವು ಇತಿಹಾಸ ಸೃಷ್ಠಿ ಮಾಡಬಹುದೆಂದು ನಾವಂತೂ ಅಂದುಕೊಂಡಿರಲಿಲ್ಲ! ಅಲ್ಲಿ ಬೇರೆ ಯಾರೂ ಗಿರಾಕಿಗಳಿಲ್ಲದಿದ್ದುದರಿಂದಲೋ ಏನೊ ತಿನ್ನಲು ಎರಡೆರಡೇ ಪುರಿ, ಎರಡೆರಡೇ ಬ್ರೆಡ್ಡು ಅಂತೆಲ್ಲಾ ಕೊಟ್ಟು ನಮ್ಮ ತಾಳ್ಮೆ ಪರೀಕ್ಷಿಸಿದರು. ಆದರೂ ಕೆಲ ಸಮಯದ ನಂತರ ತಾಳ್ಮೆ ಕಳೆದುಕೊಂಡ ನಾವು ಕ್ರಾಂತಿಕಾರಿಗಳಾದೆವು. ಪರಿಣಾಮವಾಗಿ ಇನ್ನೊಂದಿಷ್ಟು ಪೂರಿಗಳನ್ನು ಗಿಟ್ಟಿಸಿಕೊಂಡೆವು, ಆದರೆ ಅದರೊಟ್ಟಿಗೆ ಪಲ್ಯ ಕೊಡಲಿಲ್ಲವೆಂಬ ವಿಷಯವಾಗಿ ಮತ್ತೆ ಕ್ರಾಂತಿಯ ಕಹಳೆ ಮೊಳಗಿಸಬೇಕಾಯ್ತು! ಮಕ್ಕಳಿಗೆ ಬೋರ್ನವಿಟಾ ಮಾಡಿಕೊಡೆಂದರೆ ಸೊಟ್ಟ ಮುಖ ಮಾಡಿಕೊಂಡೇ ತಂದು ಇಟ್ಟ ಒಂದು ಕಪ್ಪಿನಲ್ಲಿ ಒಂದು ಹುಳು ತೇಲುತ್ತಿದ್ದುದು ಕಂಡು ನಮಗೆ ತುಂಬಾ ಹೇಸಿಗೆ ಉಂಟು ಮಾಡಿ ಬಿಟ್ಟರು. ಎಲ್ಲಿ ನಿಮ್ಮ ಮ್ಯಾನೇಜರು ಅಂತ ಘರ್ಜಿಸಲಾಗಿ, ಒಬ್ಬ ಹುಡುಗನನ್ನು ತುರ್ತಾಗಿ ಗಲ್ಲೆ ಮೇಲೆ ತಂದು ಕೂರಿಸಿ, ನಮ್ಮ ಮ್ಯಾನೇಜರು ನಿಮ್ಮನ್ನು ಕರೀತಿದಾರೆ ಅಂತವನು ಅಂದಾಗ, "ಮ್ಯಾನೇಜರಾದರೆ ನಿನಗೆ, ನಮಗಲ್ಲ. ಅವನನ್ನು ಇಲ್ಲಿ ಕರೆಸು ನಾವ್ಯಾಕೆ ಅಲ್ಲಿ ಹೋಗಬೇಕು… ನಾವು ನಿಮ್ಮ ಗ್ರಾಹಕರು..!!" ಅಂತ ನಮ್ಮ ಕಡೆ ಮತ್ತೆ ಬೈಸಿಕೊಂಡ ಗೂರ್ಖಾ ಪಂಡಿತ. ನಮ್ಮ ಪ್ರವಾಸದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದ ಸಂಸ್ಥೆಗೆ ಕರೆ ಮಾಡಿ ಅಲ್ಲಾಗಿದ್ದನ್ನೆಲ್ಲಾ ವಿವರಿಸಿ ಹೇಳಿ ದೂರಿದರೆ, ಅಲ್ಲಿನ ನಿರ್ವಾಹಕಿ ನೀವು ಮೊದಲೇ ಹೇಳಿದ್ದರೆ ನಾನು ಹೋಟೆಲ್ ಬದಲಾಯಿಸುತ್ತಿದ್ದೆ ಅಂತ ಹೇಳಿ ತನ್ನ ಅದ್ಬುತ ಪರಿಜ್ಞಾನವನ್ನು ತೋರಿದಳು. ಬೋರ್ನವಿಟಾದಲ್ಲಿ ಹುಳು ಬೀಳುವುದೆಂದು ನಮಗೇನು ಮೊದಲೇ ಕನಸು ಬಿದ್ದಿತ್ತೆ!?
ಅಂತೂ ಆ ಹೋಟೆಲಿನಲ್ಲಾದ ಕಟು ಅನುಭವ ನಮ್ಮೆಲ್ಲರ ಮೂಡನ್ನು ಹಾಳು ಮಾಡಿತ್ತು. ಅದೂ ಅಲ್ಲದೇ ಅಲ್ಲಿನ ಆಹಾರದ ಪ್ರಭಾವವೊ ಏನೊ ನಮ್ಮಲ್ಲೊಬ್ಬರಿಗೆ ಹೊಟ್ಟೆಯಲ್ಲಿ ಗುಡು ಗುಡು ಶುರುವಾಗಿತ್ತು. ಕಾಲಿಪಾಂಗ್ ಗೆ ವಿದಾಯ ಹೇಳಿ ಗ್ಯಾಂಗಟಾಕ್ ಗೆ ನಮ್ಮ ಪಯಣ ಮುಂದುವರಿಯಿತು.
(ಮುಂದುವರಿಯುವುದು…)
ನಿಮ್ಮ ಪ್ರವಾಸ ಕಥನ ಈಗ ಮೆದೆಗೆ ಬರುತ್ತಿದೆ . ಕಾಲಿಮ್ ಪಾಂಗ್ ಪ್ರವಾಸದ ವಿವರಗಳು ಮನೋಜ್ಞವಾಗಿ ಪ್ರತಿಬಿಂಬಿತ ವಾಗುತ್ತಿದೆ . ಬೇಸರ, ಮುಜುಗರ, ಸಿಟ್ಟು ಇತ್ಯಾದಿಗಳನ್ನು ಉಂಟುಮಾಡುವುದಕ್ಕೆ ನಮ್ಮೊಳಗಿನ ಗ್ರಹಿಕೆಗಳ ತಾಕಲಾಟಗಳೇ ಕಾರಣ ಎನ್ನುವುದನ್ನು ಪ್ರವಾಸ ಸಂದರ್ಭದಲ್ಲಿ ಉಂಟಾಗುತ್ತದೆ ಅವಕ್ಕೆ ಅನುಗುಣವಾಗಿಯೇ ಪ್ರವಾಸದ ಅಭಿರುಚಿ ರೂಪಿತವಾಗುತ್ತದೆ. ಪ್ರಾಯೋಜಕರು ಇಂತಹ ಅವ್ಯವಸ್ತೆಗಳನ್ನು ನಿರಂತರ ಮಾಡಲು ಸಿದ್ದಹಸ್ತರಿರುತ್ತಾರೆ. ಕೆಟ್ಟ ನೆನಪು ಹೊರತು ಪಡಿಸಿ,ಹಾಸ್ಯ ಪೂರ ಕ ವಾಗಿ ಪ್ರವಾಸದ ಮಹತ್ವಗಳಿಂದ ಲೇಖನ ಮುಂಬರಲಿ .
ಗುರುಗಳೆ, ತಮ್ಮ ವಿಮರ್ಶಾತ್ಮಕ ಅನಿಸಿಕೆಗಳು ಯಾವಗಲೂ ಓದಲು ಖುಷಿ ಕೊಡುತ್ತವೆ!
ಪ್ರವಾಸ ಕೊನೆಗೊಳ್ಳುತ್ತಿರುವ ಬೇಸರಿಕೆಯಿಂದಿದ್ದಾಗಲೇ ಈ ತರಹದ ಕಟು ಅನುಭವಗಳಾದಾಗ ಅದು ಕೋಪದಲ್ಲಿ ಪರಿವರ್ತನೆಯಾಗುತ್ತದೆ. ಆದರೆ ಇದೆಲ್ಲ ಇದ್ದಾಗಲೇ ಪ್ರವಾಸಕ್ಕೊಂದು ಮೆರಗು! ಈ ಬೇಸರಿಕೆ ಮುಂದೆ ಮಾಯವಾಗಿ ನಮ್ಮಲ್ಲಿ ಹೊಸ ಲವಲವಿಕೆ ತಂದು ಕೊಟ್ಟಿದ್ದು ಗ್ಯಾಂಗ್ ಟಾಕ್ ನಲ್ಲಿ. ಮುಂದಿನ ಭಾಗ ಓದಲು ಮರೆಯದಿರಿ 🙂
ಶ್ರೀಧರವರು ಹೇಳಿದ ಮಾತಿಗೆ ನನ್ನ ಸಹಮತವಿದೆ. ಈ ಕಂತು ಒಳ್ಳೆಯ ಹೂರಣಗಳನ್ನು ತುಂಬಿಕೊಂಡ ರುಚಿಯಾದ ಸಮೋಸಾದಂತಾಗಿದೆ. ತಿರುಗಾಟದ ವಿಷಯಗಳೊಡನೆ ಇನ್ನಿತರ ಹಲವಾರು ಸಂಗತಿಗಳು ಬೆರೆತಿತುವುದೇ ಅದಕ್ಕೆ ಕಾರಣವೇನೋ. ನಿಮ್ಮ ಗ್ಯಾಂಟಕ್ ಪ್ರವಾಸದ ಭಾಗಕ್ಕಾಗಿ ಕಾಯುತ್ತಿದ್ದೇವೆ.
ಮೂರ್ತಿ, ಸಮೋಸ ದ ರುಚಿ ಇಷ್ಟವಾಗಿದ್ದಕ್ಕೆ ಖುಷಿಯಾಯ್ತು! ಮುಂದಿನ ಸಲ ಒಳ್ಳೇ ಊಟ ಹಾಕಿಸುವ ಜವಾಬ್ದಾರಿ ನನ್ನದು 🙂
ನಿಮ್ಮ ಲೇಖನ ಚೆನ್ನಾಗಿದೆ ಮತ್ತು ಹಾಸ್ಯೋಕ್ತ ವಾಗಿದೆ ಕೂಡ, ಓದಿ ಖುಷಿ ಆಯ್ತು… ಎಲ್ಲವನ್ನು ಕಣ್ಣಿಗೆ ಕಟ್ಟಿರೋ ಥರ ವಿವರಿಸಿದ್ದೀರಿ …. ಕಾಲಿಂಗ್ ಪಾಂಂಗ್ ಹೊಟೆಲ್, bournvita ನಲ್ಲಿ ಹುಳ , ದೂರ್ವಾಸ ರೂಪ, ಮೇನಕೆ ಕರೆ ಇತ್ಯಾದಿ ಇತ್ಯಾದಿ …..
ನೀ ಮಾ ತೋರಿಸಿದ ಹಳ್ಳಿ ಮತ್ತು ಅಲ್ಲಿನ ಟೆಂಟ್ ಗಳು ಹೀಗಿದ್ದವು ಅಂತ ನೀವು ಹೇಳಿದಾಗ ನನಗನಿಸಿರಲಿಲ್ಲ… ಆದರೆ ನಿಮ್ಮ ಲೇಖನ ಓದಿದ ಮೇಲೆ ನನಗೆ ಊಹಿಸಲು ಸಾದ್ಯವಾದದ್ದು! ಮುಂದಿನ ಭಾಗದ ನಿರೀಕ್ಷೆ ಯಲ್ಲಿ …..
ನಿರ್ಮಲಾ, ಓದಿ ಮೆಚ್ಚಿದ್ದಕ್ಕೆ ಖುಷಿಯಾಯ್ತು! ನೀ ಮಾ ಅಂತೂ ಮುಂದಿನ ಸಲ ನೀವು ಇಲ್ಲೇ ಟೆಂಟು ಹಾಕಿರೆಂದು ಗಂಟುಬಿದ್ದಿದ್ದ!
ಪ್ರವಾಸ ನೀವು ಮಾಡಿದ್ರೂ ಖರ್ಚಿಲ್ಲದೇ ಅದರ ಮಜಾ ನಮಗೂ ಒದಗಿಸಿ ಕೊಟ್ಟ್ರಿ :). ಲೇಖನ ಸರಳ, ಸುಂದರ ಮತ್ತು ನಿಮ್ಮ ಪ್ರವಾಸದ ಹಂಗೆ ಉಲ್ಲಾಸದಾಯಕ . ಧನ್ಯವಾದಗಳು !
ಶೈಲೇಶ್, ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಕೊನೆಯ ಕಂತು ಈ ವಾರ ಪ್ರಕಟವಾಗಿದೆ. ದಯವಿಟ್ಟು ಅದನ್ನೂ ಓದಿ.
https://www.panjumagazine.com/?p=5432