ಟೈಗರ್ ಹಿಲ್ ನ ಸುರ್ಯೋದಯ ನೋಡಿ ಬಂದು ಒಂಭತ್ತು ಗಂಟೆಗೆಲ್ಲಾ ತಯಾರಾಗಿ ಹೋಟೆಲ್ ಹೊರಗೆ ನಿಂತವರ ಮುಖಗಳು ಲವಲವಿಕೆಯಿಂದ ಕಂಗೊಳಿಸುತ್ತಿದ್ದವು. ಯಾಕಂತೀರಾ? ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ತಾನು ಹೇಳಿದ್ದ ಟೈಮಿಗೆ ನಾವು ಸರಿಯಾಗಿ ಬಂದಿಲ್ಲಾ ಅಂತ ನೀಮಾ ಮುಖ ಸಿಂಡರಿಸಿಕೊಂಡಿದ್ದ. ಮೊದಲೇ ಕೆಂಪಗಿದ್ದವನು ಇನ್ನೂ ಕೆಂಪಾಗಿದ್ದ ಏನೇನೋ ಪ್ರಯತ್ನಗಳನ್ನು ಮಾಡಿ ಅವನ ಮುಖದ ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿದೆವು. ನೀ ಮಾ ಮೂಕನಾದರೆ ನಮಗೆ ಮಾಹಿತಿಗಳು ಸಿಗುವುದು ಹೇಗೆ ಅಲ್ಲವೆ?
ಈ ಊರಿಗೆ ದಾರ್ಜಿಲಿಂಗ್ ಅಂತ ಹೆಸರು ಹೇಗೆ ಬಂತು ಅಂತ ಕೇಳಿದ್ದಕ್ಕೆ ನೀಮಾ ಹೇಳಿದ ಕತೆ ಹೀಗಿದೆ…
ದೋರ್ಜೇ ಲೀ ಅನ್ನೋದು ಆ ಊರಿನಲ್ಲಿದ್ದ ಒಬ್ಬನ ಹೆಸರು. ಒಂದು ದಿನ ಅವನ ಮನೆಗೊಬ್ಬ ಬ್ರಿಟೀಶ್ ಅಧಿಕಾರಿ ಕುದುರೆಯಲ್ಲಿ ಬಂದನಂತೆ. ಅವನ ಹೆಸರನ್ನು ಅಪಭ್ರೌಂಶಗೊಳಿಸಿ ಬ್ರಿಟೀಶ್ ಅಧಿಕಾರಿ ಅವನನ್ನು ದಾರ್ಜಿಲಿ ಅಂದನಂತೆ. ಆಮೆಲೆ ಅದು ದಾರ್ಜಿಲಿಂಗ ಆಯಿತಂತೆ! ಆ ಮನುಷ್ಯನಿಂದಾಗಿ ಆ ಊರಿಗೆ ಈ ಹೆಸರು ಅಂತಾಯ್ತು. ಹೆಸರಿನಲ್ಲೇನಿದೆ ಅನ್ನುವ ಹಾಗೇ ಇಲ್ಲ. ಹೆಸರಿನ ಹಿಂದೊಂದು ಇತಿಹಾಸವಿದ್ದೇ ಇರುತ್ತದೆ. ಆದರೆ ’ನಿನಗ್ಯಾಕೆ ನೀ ಮಾ ಅಂತ ಹೆಸರಿಟ್ಟರು? ನೀನು ಹುಟ್ಟಿದಾಗ ಸುರ್ಯೋದಯವಾಗಿತ್ತೆ’ ಅಂತ ಕೇಳುವ ಅಧಿಕ ಪ್ರಸಂಗ ಮಾಡದೇ ಸುಮ್ಮನಿದ್ದೆವು. ಮತ್ತೆ ಅವನನ್ನು ಕೋಪಗೊಳಿಸಲು ನಮಗ್ಯಾರಿಗೂ ಮನಸ್ಸಿರಲಿಲ್ಲ!
ಮೊಟ್ಟ ಮೊದಲನೆಯದಾಗಿ, ಬುಧ್ಧನ ದೇವಾಲಯಕ್ಕೆ (ಘೂಮ್ ಮೊನೆಸ್ಟರಿ) ಕರೆದೊಯ್ದ. ಅಷ್ಟೇನು ದೊಡ್ಡದಿರಲಿಲ್ಲವದು. ನಾವು ಒಳಗೆ ಹೋಗುವ ದಾರಿಯಲ್ಲಿ ಅಕ್ಕ ಪಕ್ಕದಲ್ಲಿ ಸ್ವೇಟರ್ ಮಾರುವ ಅಕ್ಕಂದಿರು ಕೂತಿದ್ದರು. ನಾವೂ ಕೂಡ ನಮ್ಮ ನಮ್ಮ ಬಂಧು ಬಳಗ, ಸ್ನೇಹಿತರಿಗೆ ಅಲ್ಲಿಂದ ಏನಾದರೂ ಒಂದು ತೆಗೆದುಕೊಂಡು ಹೋಗಲೇಬೇಕಿತ್ತು. ಇದಕ್ಕಿಂತ ಚೆನ್ನಾಗಿರೋ ಸ್ವೇಟರು ಬೆಂಗಳೂರಲ್ಲಿ ಸಿಕ್ಕರೂ ಇಲ್ಲಿಂದ ತೊಗೊಂಡು ಹೋಗಿದ್ದು ಅನ್ನೊ ಖುಷಿ ಇರುತ್ತದಲ್ಲವೇ? ಹಾಗೇ ಒಂದೆರಡು ಸ್ವೇಟರು, ಟೋಪಿ ಅಂತೇನೇನೊ ತೊಗೊಂಡು ಯಶಸ್ವಿಯಾಗಿ ಟೋಪಿ ಹಾಕಿಸಿಕೊಂಡು ಬಂದೆವು! ಅಲ್ಲಿಂದ ಸ್ವಲ್ಪ ಮುಂದೆಯೇ ಇರುವ ಫ್ರೀಡಂ ಪಾರ್ಕಿಗೆ ನೀ ಮಾ ನಮ್ಮನ್ನು ಮಾರ್ಚ್ ಮಾಡಿಸಿದ! ಆ ಪಾರ್ಕಿನಲ್ಲಿ ಒಳ್ಳೆಯ ಹೂ ಗಿಡಗಳು, ವಿಶ್ವದ ಅತಿ ಎತ್ತರದಲ್ಲಿರುವ ಹಳಿಯೂ ಇದೆ. ಆ ಹಳಿಯ ಮೇಲೆ ಪುಟಾಣಿ ರೈಲಿನಂತಿರುವ ಮೂರು ಡಬ್ಬಿಗಳ ರೈಲೂ ದಿನಕ್ಕೆರಡು ಬಾರಿ ಓಡುತ್ತದೆ. ನಮ್ಮ ಅದೃಷ್ಟಕ್ಕೆ ನಾವಲ್ಲಿದ್ದಾಗಲೇ ನಮಗೆ ದರ್ಶನವ ಕರುಣಿಸಿತು. ಅದಕ್ಕೆ ಟಿಕೇಟು ಪಡೆಯಲು ಮೂರು ತಿಂಗಳು ಮೊದಲೇ ಬುಕ್ ಮಾಡಬೇಕೆಂದು ನೀ ಮಾ ಹೇಳಿದ. ಅವನು ರೈಲು ಬಿಟ್ಟಿರಲಿಕ್ಕಿಲ್ಲ ಅಂತ ಅಂದುಕೊಂಡೆವು.
ನಂತರ ಹೋಗಿದ್ದು The Himalayan Mountaineering Institute ಮತ್ತು PNZ Zoological Park ತುಂಬಾ ಬೇರೆ ತರಹದ ಮ್ಯುಸಿಯಮ್ ಹಾಗೂ ಪ್ರಾಣಿ ಸಂಗ್ರಹವದು. ಇಷ್ಟು ದಿನ ನೋಡದೇ ಇದ್ದ ಪ್ರಾಣಿಗಳು ಅಲ್ಲಿ ಇದ್ದವು. ಯಾಕ್, ನೀಲಿ ಜಿಂಕೆ, ಕೆಂಪು ಪಾಂಡಾ ಹೀಗೆ ಅಪರೂಪದ ಪ್ರಾಣಿಗಳು. ನಮ್ಮ ಬನ್ನೇರು ಘಟ್ಟ ಪ್ರಾಣಿಗಳಿಗಿಂತ ಲವಲವಿಕೆ ಹಾಗೂ ಆರೋಗ್ಯದಿಂದಿದ್ದವು. ಬಹುಷಃ ಅವುಗಳಿಗೆ ದಿನಾಲೂ ಊಟ ಹಾಕುತ್ತಾರೆ ಅಂತ ಕಾಣುತ್ತೆ!
ಹಾಗೆಯೇ ಮುಂದೆ ವಸ್ತು ಸಂಗ್ರಹಾಲಯ. ಅಲ್ಲಿ ತೇನ್ ಸಿಂಗ ನೋರ್ಗೆ ಗೌರಿ ಶಂಕರ (ಎವೆರೆಸ್ಟ್) ಹತ್ತಲು ಬಳಸಿದ ಉಡುಪುಗಳು, ಬೂಟುಗಳು, ಆಮ್ಲಜನಕದ ಸಿಲಿಂಡರು ಎಲ್ಲ ಇವೆ. ಜೊತೆಗೆ ಬೇರೆ ಯಾರಾರು ಯಾವ್ಯಾವ ಹಿಮಪರ್ವತಗಳನ್ನು ಏರಿದರು ಅನ್ನುವ ಸಕಲ ಮಾಹಿತಿಗಳು ಅವರುಗಳು ಬಳಸಿದ ಸಲಕರಣೆಗಳು ಅಲ್ಲಿವೆ. ಹೊರಗೊಂದು ತೇನ್ ಸಿಂಗ ರ ದೊಡ್ಡ ಆಕರ್ಷಕ ಪ್ರತಿಮೆ ಇದೆ.
ಎಲ್ಲಾ ನೋಡಿಯಾದ ಮೇಲೆ ಹೊರಗೆ ಬಂದಾಗ ಅಲ್ಲೆಲ್ಲಾ ಸೈನಿಕರ ಸಣ್ಣ ಸಣ್ಣ ತುಕಡಿಗಳು ಇದ್ದವು. ಅದು ಯಾಕೆ ಅಂತ ನೀ ಮಾ ನನ್ನು ಕೇಳಲಾಗಿ ಅವನುಸುರಿದ್ದು ಹೀಗೆ
"ನಮ್ಮ ಗೊರ್ಖ ಲ್ಯಾಂಡ್ ಹಾಗೂ ಇನ್ನಿತರ ಬೇಡಿಕೆಗಳನ್ನು ಹತ್ತಿಕ್ಕಲು ಸರ್ಕಾರ ಈ ರೀತಿ ಪ್ರಯತ್ನಿಸುತ್ತಿದೆ. ಅವರು ಮಾಡೋದು ಒಂದೆ, ಎರಡೆ?! ಇಲ್ಲಿಯ ಜನ ತುಂಬಾ ಶಾಂತಿ ಪ್ರೀಯರು. ಆದರೂ ನಮ್ಮ ಮೇಲೆಲ್ಲಾ ಸುಳ್ಳು ಕೇಸ್ ಹಾಕುತ್ತಾರೆ. ನನ್ನ ಮೇಲೇಯೇ ಮೂರು ಕೇಸುಗಳಿವೆ" ಅಂದಾಗ ನಮಗೆ ಅವನ ಮೇಲೆ ಕನಿಕರ ಹುಟ್ಟದೇ ಇರಲಿಲ್ಲ. ಆದರೂ ಸೈನಿಕರ ಮೇಲಿನ ಗೌರವದಿಂದ ಅವರ ಜೊತೆಗೊಂದು ಫೋಟೊ ಹೊಡೆಸಿಕೊಂಡು, ಅವರಿಗೊಂದು ಸೆಲ್ಯುಟ್ ಮಾಡಿ ಬಂದೆವು.
ಆದರೆ ನೀ ಮಾ ಹೇಳುವ ಎಲ್ಲಾ ಸಂಗತಿಗಳೂ ನಂಬಲರ್ಹವಲ್ಲ ಅಂತ ಮುಂದೆ ನಮಗೆ ಮನವರಿಕೆಯಾಯ್ತು. ಅದರ ಬಗ್ಗೆ ಆಮೇಲೆ ಪ್ರಸ್ತಾಪಿಸುವೆ. ಅವನು ಸ್ವಲ್ಪ ಮಟ್ಟಿಗೆ ಮಸಾಲೆ ಬೆರೆಸಿ ಮತ್ತೆ ಮತ್ತೆ ಗೋರ್ಖಾಲ್ಯಾಂಡ ಸಮಸ್ಯೆಗೇ ಎಲ್ಲವನ್ನೂ ಜೋಡಿಸುತ್ತಿದ್ದ. ಅದೇನೇ ಇದ್ದರೂ ಅವನೊಂದು ದೊಡ್ಡ ಟೈಮ್ ಪಾಸ್ ನಮಗೆ. ಮಸಾಲೆ ಇಲ್ಲದಿದ್ದರೆ ಆಹಾರಕ್ಕೊಂದು ರುಚಿ ಇರುತ್ತೆಯೆ?! ಆ ಮಸಾಲೆಯ ವಾಸನೆ ಹಿಡಿದುಕೊಂಡೇ ಅಲ್ಲವೇ ಪಾಶ್ಚಾತ್ಯರು ಭಾರತಕ್ಕೆ ನೊಣಗಳಂತೆ ಮುಕುರಿದ್ದು? ಇರಲಿ…
ಆ ಪಾರ್ಕಿನಿಂದ ಹೊರಗೆ ಬಂದು ಅಲ್ಲಿಯೇ ಇದ್ದ ಒಂದು ಚಿಕ್ಕ ಹೋಟಲ್ ನಲ್ಲಿ ಒಳ್ಳೆಯ ಊಟ ಸಿಕ್ಕಿತು. ತುಂಬಾ ಕಡಿಮೆ ಬೆಲೆ ಹಾಗೂ ರುಚಿಕಟ್ಟಾಗಿತ್ತು. ಪ್ರಮಾಣವೂ ಜಾಸ್ತಿ. ನೇಪಾಳದ ಊಟಕ್ಕಿಂತ ಸಾವಿರ ಪಾಲು ಚೆನ್ನಾಗಿತ್ತು. ಅಲ್ಲಿನ ಜನರು ತುಂಬಾ ಒಳ್ಳೆಯವರು. ಜಾಸ್ತಿ ದುಡ್ಡಿಗೆ ಆಸೆ ಪಡುವವರಲ್ಲ ಅಂತ ಅನಿಸಿತು.
ಊಟ ಮಾಡಿದ ಬಳಿಕ ನಮ್ಮ ಕಾರಿನ ಕಡೆಗೆ ಹೊರಟಾಗ ಅಲ್ಲೊಂದು ಹೆಣ್ಣುಮಗಳು ಇಂಗ್ಲಿಷಿನ ನಡುವೆ ಕನ್ನಡ ಶಬ್ಧಗಳ ಬಳಸಿ ಮಾತನಾಡುವುದು ಕೇಳಿ ನಮ್ಮ ಕಿವಿ ನಿಮಿರಿದವು! ನಾವು ಖುಷಿಯಿಂದ ಕಣ್ಣಗಲಿಸಿ, ಹಲ್ಲರಳಿಸಿ "ನೀವು ಎಲ್ಲಿಂದ ಬಂದಿದ್ದು? ಬೆಂಗಳೂರಾ?!" ಅಂತ ಕೇಳಿದರೆ ಆಕೆ ತಣ್ಣಗೆ ತನಗೇನೂ ಆಶ್ಚರ್ಯವೇ ಆಗಿಲ್ಲವೆನ್ನುವಂತೆ "ಹೂಂ" ಅಂದು ತಾನು ಕನ್ನಡ ಪದಗಳ ಬಳಸಿದ್ದೇ ತಪ್ಪಾಯ್ತೇನೋ ಅನ್ನೋ ಥರ ಮುಖ ಮಾಡಿದಳು. ಬೇರೆ ಭಾಷೆಯವರು ಹೀಗೆ ಒಬ್ಬರಿಗೊಬ್ಬರು ತಮ್ಮ ರಾಜ್ಯ ಬಿಟ್ಟು ಬೇರೆ ಎಲ್ಲೋ ಸಿಕ್ಕರೆ ಇಷ್ಟು ನಿರುತ್ಸಾಹ ತೋರುತ್ತಾರೆಯೆ? ಖಂಡಿತವಾಗಿಯೂ ಹಾಗೆ ಮಾಡಲಿಕ್ಕಿಲ್ಲ ಅಲ್ಲವೆ? ಕನ್ನಡಿಗರು ಯಾಕೆ ಹೀಗೆ ಅಂತ ಯೋಚಿಸುತ್ತ ಗಾಡಿ ಹತ್ತಿದೆವು.
ಅಲ್ಲಿಂದ ಹೋಗಿದ್ದು ಚಹಾದ ತೋಟಗಳ ನೋಡಲು. ಅದೇನು ಅಷ್ಟು ಅಪರೂಪದ ದೃಶ್ಯವಾಗಿರಲಿಲ್ಲ. ನೀ ಮಾ ಒಂದು ಚಹಾದ ಅಂಗಡಿಯ ಮುಂದೆ ಗಾಡಿ ತರುಬಿದ! ಅದು ಅವನ ಮಾಮೂಲಿ ಅಂಗಡಿಯಿರಬೇಕು, ಅವನಿಗಲ್ಲಿ ರಾಜ ಮರ್ಯಾದೆ. ಯಾಕಂದರೆ ಅವನು ನಮ್ಮಂಥ ಕುರಿಗಳನ್ನಲ್ಲಿ ಕರೆತಂದಿದ್ದನಲ್ಲ? ಆ ಅಂಗಡಿಯಲ್ಲಿ ಸಾವಯವ ಚಹಾ ಪುಡಿ ಸಿಗುತ್ತಿತ್ತು. ಮೊದಲು ಎಲ್ಲರಿಗೂ ಒಂದೊಂದು ಸಣ್ಣ ಕಪ್ಪಿನಲ್ಲಿ ಅಮೃತಕ್ಕೆ ಸವಾಲೊಡ್ಡುವಂತಿದ್ದ ಚಹಾ ಕೊಟ್ಟರು. ಅದರ ರುಚಿಗೆ ಮಾರು ಹೋಗಿ, ಕುಡಿದ ಚಹಾದಲ್ಲಿ ಬಳಸಿದ ಪುಡಿಯೇ ಬೇರೆ, ಅವರು ಮಾರುತ್ತಿರುವ ಚಹಾ ಪುಡಿಯೇ ಬೇರೆ ಅಂತ ಗೊತ್ತಿದ್ದೊ ಒಂದಿಷ್ಟು ಚಹಾದ ಪೊಟ್ಟಣಗಳನ್ನು ಕೊಂಡೆವು.
ಅಲ್ಲಿಂದ ನೇರವಾಗಿ ಹೋಗಿದ್ದು ಟಿಬೇಟಿ ನಿರಾಶ್ರಿತರ ಶಿಬಿರಕ್ಕೆ. ಅಲ್ಲಿ ವೃದ್ಧೆಯರ ಸಂಖ್ಯೆಯೇ ಜಾಸ್ತಿ. ನಾಲ್ಕೈದು ಹಣ್ಣು ಹಣ್ಣು ಮದುಕಿಯರೂ ಇದ್ದರು. ಆದರೆ ಎಲ್ಲರೂ ಏನಾದರೊಂದು ಕೆಲಸ ಮಾಡುತ್ತಾ ಲವಲವಿಕೆಯಿಂದಿದ್ದರು. ಅಲ್ಲಿ ಈ ಎಲ್ಲ ನಿರಾಶ್ರಿತರೂ ಕೈ ಮಗ್ಗದ ಕೆಲಸವನ್ನು ಮಾಡುತ್ತಾರೆ. ತುಂಬಾ ಸುಂದರವಾದ ಕಲಾಕೃತಿಗಳನ್ನು ಬಟ್ಟೆಗಳಲ್ಲಿ ಮೂಡಿಸಿದ್ದರು. ಅಲ್ಲೊಬ್ಬ ಅಜ್ಜಿ ಚರಕವನ್ನು ತಿರುಗಿಸುತ್ತ ಕುಳಿತಿದ್ದಳು. ನಾವು ಕನ್ನಡದಲ್ಲಿ ಮಾತಾಡುವುದ ಕೇಳಿ ನಮ್ಮನ್ನು ಮಾತಾಡಿಸಿದಳು. ಅವಳು ಮೊದಲು ಕರ್ನಾಟಕದ ಮುಂಡಗೋಡದ ನಿರಾಶ್ರಿತರ ಶಿಬಿರದಲ್ಲಿದ್ದಳಂತೆ. ಅವಳಿಗೆ ಅಲ್ಪ ಸ್ವಲ್ಪ ಕನ್ನಡವೂ ಬರುತ್ತಿತ್ತು. ನಮ್ಮ ಬೆಂಗಳೂರಿನ ಹೆಣ್ಣುಮಗಳಿಗಿಂತ ಅಕ್ಕರೆಯಿಂದ ತಾನು ಕನ್ನಡದವಳೆಯೇನೋ ಅನ್ನೊ ತರಹ ಈ ಅಜ್ಜಿ ಮಾತಾಡಿದ್ದು ಕೇಳಿ ಖುಷಿಯಾಯ್ತು. ನಮಗೆ ಚರಕವ ತಿರುಗಿಸುವುದು ಹೇಗೆ ಅಂತ ಕಲಿಸಿದಳು. ಅದು ಅಂದುಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ. ಜೈ ಬಾಪುಜೀ ಅಂತ ನಮ್ಮನ್ನು ಬೀಳ್ಕೊಟ್ಟಳು.
ನಂತರ ಹೋಗಿದ್ದು ಜಪನೀಸ್ ಬುಧ್ಧ ಟೆಂಪಲ್ ಗೆ. ತುಂಬಾ ಶಾಂತವಾದ ಪರಿಸರ ಅಲ್ಲಿದೆ. ಆ ದೇವಸ್ಥಾನದಲ್ಲಿ ಪ್ರಸಾದ ಅಂತ ಕೊಟ್ಟಿದ್ದು ನಾವು ಸಂಕ್ರಾಂತಿಯಲ್ಲಿ ಹಂಚಿಕೊಳ್ಳುವ ಕುಸುರೆಳ್ಳು! ಏನೇ ಆದರೂ ಬುಧ್ಧ ನಮ್ಮವನೇ ಅಲ್ಲವೇ? ಅಲ್ಲಿ ಒಂದಿಷ್ಟು ಅಡ್ಡಾಡಿ ಸಂಜೆ ಹೋಟೇಲಿಗೆ ವಾಪಸ್ಸಾದೆವು. ರಾತ್ರಿ ಊಟಕ್ಕೇನು ಮಾಡುವುದು ಅಂತ ಯೋಚನೆಗೆ ತೊಡಗಿದೆವು. ಬರೀ ಫಲಾಹಾರ ಸೇವಿಸಿದರೆ ಹೇಗೆ? ಅದು ಆರೋಗ್ಯಕ್ಕೂ ತುಂಬಾ ಒಳ್ಳೆಯದು… ಅನ್ನುವ ನಮ್ಮ ಯೋಚನಾ ಲಹರಿಯ ಹಿಂದೆ ಒಂದು ಬಲವಾದ ಕಾರಣವಿತ್ತು. ಅದೇನೆಂದರೆ ನಾವಿಳಿದುಕೊಂಡಿದ್ದ ಹೋಟೇಲಿನಲ್ಲಿ ದೊರೆಯುತ್ತಿದ್ದ ಊಟದ ಬೆಲೆ! ಅದು ಸಿಕ್ಕಾಪಟ್ಟೆ ದುಬಾರಿಯಾಗಿತ್ತು. ಅಲ್ಲಿಯೇ ಸ್ವಲ್ಪ ಕೆಳಗೆ ನಡೆದುಕೊಂಡು ಹೋದರೆ ಒಂದೆರಡು ಕಿರಾಣಿ ಅಂಗಡಿಗಳಿದ್ದವು. ಅಲ್ಲಿ ಒಳ್ಳೆಯ ಹಣ್ಣು, ತರಕಾರಿಗಳು ದೊರೆಯುತ್ತಿದ್ದವು. ಅವತ್ತಿನ ರಾತ್ರಿಗೆ ಹೊಟ್ಟೆ ತುಂಬುವಷ್ಟು ಕೊಂಡು ವಾಪಸ್ಸು ಬರುವಾಗ ದಾರಿಯಲ್ಲೊಂದು ದೇವಸ್ಥಾನದಲ್ಲಿ ಕೆಲವು ಹೆಣ್ಣು ಮಕ್ಕಳು ಭಜನೆ ಮಾಡುತ್ತಿದ್ದರು. ಅವರ ಹಾಡು ಅಲೆಯಲೆಯಾಗಿ, ಕಗ್ಗತ್ತಲೆಯ ಬೀದಿದೀಪವಿಲ್ಲದ ಆ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ನಮ್ಮಗಳ ಕಿವಿಗೆ ಹಿತವನ್ನುಂಟು ಮಾಡಿತ್ತು. ಆ ಹಾಡಿಗೆ ಹಸಿವೆಯಿಂದ ಕಂಗಾಲಾಗಿದ್ದ ನಮ್ಮ ಹೊಟ್ಟೆಗಳು ತಾಳ ಹಾಕುತ್ತಿದ್ದವೇನೊ? ನಡಿಗೆಯ ವೇಗವನ್ನು ಹೆಚ್ಚಿಸಿದೆವು …
*****
(ಮುಂದುವರಿಯುವುದು…)
ಅದನ್ನ ಅರುಂಧತಿ ರಾಯ್ GOD OF SMALL THINGS ಅಂತಾ ಕರೆದರು. ಸಣ್ಣ ಸಣ್ಣ ವಿಷಯಗಳನ್ನು ಗ್ರಹಿಸಿ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತಿಳಿಸಿರುವ ವಿಷೇಶತೆ ಈ ಬಾರಿಯ ಭಾಗಕ್ಕೆ ಒಲಿದಿದೆ. ಸಂಕ್ರಾಂತಿ ಕಾಳನ್ನು ಪ್ರಸಾದವಾಗಿ ಕೊಟ್ಟಿದ್ದು, ಚರಕ ತಿರುಗಿಸುವ ವೃಧ್ಧೆ 'ಜೈ ಬಾಪೂಜಿ' ಎಂದು ಬೀಳ್ಕೊಟ್ಟಿದ್ದು ಇತ್ಯಾದಿ ಕೆಲವು ಉದಾಹರಣೆಗಳು.
ಕನ್ನಡ ಮಾತನಾಡಿದ್ದಕ್ಕೆ ಸಂಕೋಚ ಪಟ್ಟುಕೊಂಡ ಬೆಂಗಳೂರು ಮಹಿಳೆ ಹಾಗೂ ಎಂದೋ ಕಲಿತ ಕನ್ನಡ ನೆನಪಿಸಿಕೊಂಡು ಖುಶಿ ಪಟ್ಟ ಟಿಬೆಟೀಯನ್ ಮಹಿಳೆಯನ್ನು ಸೂಕ್ಷಮವಾಗಿ ಗಮನಿಸಿ ಹೋಲಿಸಿದ್ದೀರಿ. ಇದು ಲೇಖನದಲ್ಲಿ ಗಮನಾರ್ಹವಾಗಿ ಸೆಳೆಯುತ್ತದೆ. ಯಾಕೋ 'ನೀಮಾ' ಎಂಬ ವ್ಯಕ್ತಿ ನಿಮ್ಮಮೇಲೆ ಭಾರೀ ಪ್ರಭಾವ ಬೀರಿದಂತೆ ಕಾಣುತ್ತಿದೆ. ಆತನ ಮುಖದ ಗಂಟುಗಳನ್ನು ಬಿಡಿಸಿದಂತೆಯೇ ಆತನ ವ್ಯಕ್ತಿತ್ವವನ್ನೂ ಬಿಡಿಸಿಡುವ ಪ್ರಯತ್ನ ತುಸು ಹೆಚ್ಚೇ ಆಯಿತೇನೊ ಎನ್ನುವಂತೆ ಎದ್ದು ಕಾಣುತ್ತಿದೆ ( ಹಿಂದಿನ ಭಾಗವನ್ನೂ ಗಣನೆಗೆ ತೆಗೆದುಕೊಂಡು). ಆದರೆ ಅದರಿಂದ ಲೇಖನದ ಓಘಕ್ಕೆ ಅಥವಾ ಅಂದಕ್ಕೆ ಕುಂದೇನೂ ಬಂದಿಲ್ಲ ಅನ್ನುವುದೂ ನಿಜ.
ಸಣ್ಣ ತಿದ್ದುಪಡಿಯ ಅಗತ್ಯ ಹೇಳದಿದ್ದರೆ ಸಮಂಜಸವಾಗಲಿಕ್ಕಿಲ್ಲ. 'ಗೌರೀ ಶಂಕರ' ಹಾಗೂ 'ಎವರೆಸ್ಟ್' ಎರಡೂ ಬೇರೆ ಬೇರೆ ಶಿಖರಗಳು. ಅವೆರಡೂ ಒಂದೇ ಅನ್ನುವ ಅರ್ಥ ಕೊಡುವ ಸಾಲೊಂದು ನಡುವೆ ಸೇರಿಕೊಂಡಿದೆ.
ಮೂರ್ತಿ, ಪ್ರಾಮಣಿಕವಾಗಿ, ಚೆನ್ನಾಗಿದ್ದುದನ್ನು ಹೊಗಳಿ,ಸರಿ ಇಲ್ಲದ್ದನ್ನು ಅಷ್ಟೇ ಸೂಕ್ಷ್ಮವಾಗಿ ಬೈದು ಇನ್ನೂ ಚೆನ್ನಾಗಿ ಬರೆಯುವಂತೆ ಪ್ರೋತ್ಸಾಹಿಸುವ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು! ನೀವು ಹೇಳಿದಂತೆ ನೀಮಾ ನಿಂದ ನಾನು ಸಲ್ಪ ಜಾಸ್ತಿಯೇ ಪ್ರಭಾವಿತನಾಗಿರುದು ಹೌದು. ಮುಂದಿನ ಕಂತಿನಿಂದ ಅವನ ವ್ಯಕ್ತಿ ಚಿತ್ರಣ ಇಳಿಮುಖವಾಗಲಿದೆ. ಅದು ಹೇಗೋ ನಾನು ಎವೆರೆಸ್ಟನ್ನು ಗೌರಿ ಶಂಕರ ಅಂದುಕೊಂಡು ಬಿಟ್ಟಿದ್ದೆ, ಅದನ್ನು ತಿದ್ದಿದ್ದಕ್ಕೆ ಧನ್ಯವಾದಗಳು.
ನಿಮ್ಮ ಲೇಖನ ಓದಿದ ನಂತರ , ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ಎನ್ನುವ ನಿಮ್ಮ ಮಾತುಗಳು ಪ್ರಾಮಾಣಿಕತೆಯ ಅವಿಷ್ಕಾರ . ಡಾರ್ಜಿಲಿಂಗ್ ಅಪಬ್ರಂಶ ಸೃಷ್ಟಿ -ಪ್ರಕೃತಿ ವಿಷಯದಲ್ಲಿ , ಬ್ರಿಟೀಶ್ ಅಧಿಕಾರಿ ಅವನನ್ನು ದಾರ್ಜಿಲಿ ಅಂದನಂತೆ, ಅಕ್ಕ ಪಕ್ಕದಲ್ಲಿ ಸ್ವೇಟರ್ ಮಾರುವ ಅಕ್ಕಂದಿರು ಕೂತಿದ್ದರುಎನ್ನುವ ನಿಮ್ಮ ಜನಪದ ಶೈಲಿ ಚೆನ್ನಾಗಿದೆ .ಅವನು ರೈಲು ಬಿಟ್ಟಿರಲಿಕ್ಕಿಲ್ಲ ಅಂತ ಅಂದುಕೊಂಡೆವು. ಎಂಬ ನಿಮ್ಮ ಅನಿಸಿಕೆಗೆ ರೈಲು ತಲೆದೂಗಿದನ್ತೆ ಫೋಟೋ ಇದೆ . ಇನ್ನೂ ಸಿದ್ದಾಂತಿ ಕೃಷ್ಣಮೂರ್ತಿ ನಿಮ್ಮ ಪರವಾಗಿ ಬ್ಯಾಟಿಂಗ್ ಆಡುತ್ತಿರುವಾಗ ನಾವು ಹೇಗೆ ತಾನೇ ಬೌಲ್ ಮಾಡಿ ಬೋಲ್ಡ್ ಮಾಡಲು ಸಾ ದ್ಯ?
ಗುರುಗಳೆ, ಲೇಖನವನ್ನು ತಾಳ್ಮೆಯಿಂದ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! ಅಂದ ಹಾಗೆ ಮೂರ್ತಿಗಳು ನನ್ನ ಪರವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ಅವರು ಪ್ರೇಕ್ಷಕರಾಗಿದ್ದುಕೊಂಡು ನಾನು ಉತ್ತಮವಾಗಿ ಆಡಿದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ ಅಷ್ಟೆ. ಕೆಟ್ಟದಾಗಿ ಆಡಿದಾಗ ಬೈಯುತ್ತಾರೆ ಕೂಡ. ನೀವು ನಿಮ್ಮ ಬೌಲಿಂಗ ಮುಂದುವರಿಸಿ 🙂
@ಶೀಧರ್ ಸರ್- ಗುರು ಹೇಳಿದ್ದು ಸರಿಯಾಗಿಯೇ ಇದೆ. ನಾನು ಕೇವಲ ಪ್ರೇಕ್ಷಕ ಅಷ್ಟೇ. ಅದರಲ್ಲೂ ನೀವು 'ಶೇನ್ ವಾರ್ನ್'. ನಿಮ್ಮ ಮುಂದೆ ಬ್ಯಾಟ್ ಮಾಡುವ ಧೈರ್ಯ ಯಾರಿಗಿದೆ ಹೇಳಿ?
Good one Guru
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಅಂಬಿಕಾ!
ಈಗಾಗಲೇ ಮೂರ್ತಿ ವಿವರಿಸಿದಂತೆ ಈ ಭಾಗದಲ್ಲಿ ನೀವು ಕೊಟ್ಟಿರುವ ಹೋಲಿಕೆಗಳು, ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿ ಅದನ್ನು ಲೇಖನ ದಲ್ಲಿ ಮೂಡಿಸಿರುವ ಪರಿ ನಿಜಕ್ಕೂ ಪ್ರಶಂಶನಾರ್ಹ... ನಾನು ತುಂಬಾ ಮೆಚ್ಚಿದ್ದು, ಬೆಂಗಳೂರಿನ ಮಹಿಳೆ ಮತ್ತು ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿರುವ ಅಜ್ಜಿಯ ನಡುವಿನ ಹೋಲಿಕೆ. ಅಂದ ಹಾಗೆ ನಾನು ಕೂಡ ಗೌರಿ ಶಂಕರ ಆಂದ್ರೆ ಎವೆರೆಸ್ಟ್ ಅಂತಾನೆ ಅನ್ಕೊಂಡಿದ್ದೆ 🙂..... ಮುಂದಿನ ಭಾಗದ ನಿರೇಕ್ಷೆಯಲ್ಲಿ......
ನಿರ್ಮಲಾ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ನಮ್ಮ ಭಾಷೆಯಲ್ಲಿ ನಮ್ಮನ್ನು ಪ್ರೀತಿಯಿಂದ ಮಾತಾಡಿಸಿದ ಟಿಬೇಟಿಯನ್ ಅಜ್ಜಿ ನಿಜಕ್ಕೊ ತುಂಬಾ ಆಪ್ತ ಅನಿಸಿದಳು.
ಗುರು ನನ್ನ ಮೆಚ್ಚಿನ ನೀ ಮಾ ಬಗ್ಗೆ ಜಾಸ್ತಿ ವಿವರ ಇಲ್ಲ ಬೆಂಗಳೂರಿನಲ್ಲಿ ಈಗೀಗ ಕೇಳದ ಕನ್ನಡ ನೀವು ಅಲ್ಲಿ ಕೇಳಿದ್ದು ಓದಿ ಖುಷಿಯಾಯಿತು…
ಉಮೇಶ, ನಿಮ್ಮ ನೆಚ್ಚಿನ ನೀ ಮಾ ಬಗ್ಗೆ ಸಲ್ಪ ಜಾಸ್ತಿಯೇ ಬರೆದೆನೆಂದು ಮೂರ್ತಿ ಹೇಳುತ್ತಿದ್ದಾರೆ. ನೀವು ಜಾಸ್ತಿ ವಿವರಗಳಿಲ್ಲ ಅನ್ನುತ್ತಿದ್ದೀರಿ. ಲೊಕೋ ಭಿನ್ನ ರುಚಿಃ ಅನ್ನೋಣವೇ? 🙂
ಹೌದು, ಬೆಂಗಳೂರಿನಲ್ಲಿ ಕೇಳದ ಅಥವಾ ಬೇಡದ ಕನ್ನಡ ಅಲ್ಲಿ ಕೇಳಿದ್ದು ನಮ್ಮ ಪುಣ್ಯವೇ ಸರಿ 🙁
ಅಲಾ ಕಣ್ಲಾ, ಈ ಗುರು ಸಿಸ್ಯರ ಜಗ್ಳಾ ನಂಗೆ ಅರಥಾ ಆಗಾಕಿಲ್ಲಾ ಕಣ್ಲಾ. ಇಬ್ರೂನುವೆ ಓತಿಕ್ಯಾತ ಬೆಲಿ ಕಿತ್ತಾಡ್ಕಂಡಂಗೆ ಕಚ್ಚಾಡಕ್ ಅತ್ತವ್ರೆ! ಆವಯ್ಯಾ ಗುರುಪ್ರಸಾದು ಕೆಲ್ಸಾ ಇಲ್ಲಾ ಅಂತಾ ಅದ್ಯಾವುದೋ ಡಾರ್ಜೀಲಿಂಗೂ ಡಾರ್ಲಿಂಗೂ ಅಂತಲ್ಲಾ ಸುತ್ತಾಡ್ಕಂಡ್ ಬ್ಯಂದು ಬೆಟ್ಟ ಗುಡ್ಡ, ಸೂರೋದ್ಯ ಸೂರಾಸ್ತ್ಯ ಅಂತಲ್ಲಾ ಲೇಖ್ನಾ ಬರೀತವ್ನೆ. ಈ ಗುರು ಸಿಸ್ಯಂದ್ರು ಸೇರ್ಕಂಡು ಅದು ಗೋರೀ ಸಂಕ್ರಾ ಅಲ್ಲಾ… ಎವರಿಸ್ಟೂ ಅಲ್ಲಾ… ಅಂತೆಲ್ಲಾ ಕ್ಯಾತೆ ಸುರು ಹಚ್ಕಂಡವ್ರೆ. ಅಲ್ಲಾ ಕಣ್ಲಾ ಈ ಸೂರೋದ್ಯ ನೋಡಾಕೆ ಗಂಟು ಮೂಟೆ, ಹೆಂಡ್ರು ಮಕ್ಳನ್ನ ಕರ್ಕೊಂಡ್ ದೇಸಾಂತ್ರಾ ಓಗ್ಬೇಕಾ…?? ದಿನಾ ಬೆಳಿಗ್ಗೆ ಕೈಯಾಗೊಂದ್ ಚಂಬು ಹಿಡ್ಕೊಂಡು ನಮ್ಮೂರ ಬೆಟ್ಟದ್ ಮ್ಯಾಕೆ ಹೋದಾಗ ಹುಟ್ಟೋ ಸೂರ್ಯಾ ಚೆಂದಾಕ್ ಕಾಣಾಕಿಲ್ವಾ? ಈ ಪ್ಯಾಟೆ ಹೈದ್ರ ಬುರಡೇಗೆ ಏನು ಬಡಿದೈತೆ? ಇವರುಗಳ್ ಜೊತೆ ಅದ್ಯಾರೋ ಹೆಣ್ಮಗ್ಳು ಬೇರೇ ಸೇರ್ಕಂಡು 'ಪ್ರಸ್ನಾಸ್ರಾಹಾ..' ಅಂತಲ್ಲಾ ಯಾವ್ದೋ ಹೇಳಾಕೇ ಆಗ್ದಿರೋ ಶಬ್ದಗಳ್ನೆಲ್ಲಾ ಬರ್ದು ನಮ್ಗೇ ಕನ್ಬ್ಯೂಸ್ ಮಾಡ್ತವ್ಳೇ. ಆಯಮ್ಮಂಗೆ ಬ್ಯೇಕಿತ್ತಾ ಈ ಕ್ಯಾಮೆ?
ಇತ್ಲಾಕಡೆ; ಸ್ತ್ರೀಯುತ ಸ್ರೀದರಯ್ಯನೋರು, ಮೂರ್ತೈನೋರೂ ಅದ್ಯೇನೋ ಬಾಲು.. ಬ್ಯಾಟು.. ಕ್ರಿಕಿಟ್ಟು… ಬಕಿಟ್ಟೂ …ಅಂತಾ ಬೋ ಜೋರಾಗಿ ವಾದ ಸುರು ಹಚ್ಕಂಡವ್ರೆ. ನಾನಿಲ್ಲಿ- ನಮ್ಮ ಸಚೀಣು 'ಈ ಬಾಲು ಬ್ಯಾಟಿನ ಸಾವಾಸ ಇನ್ನು ಸಾಕು ಕಣ್ಲೇ…' ಅಂತಾ ಅದೇನೋ ನೀರ್ವತ್ತಿ ಗೀರ್ವತ್ತಿ ಆಗೋದ್ರೆ ನಮ್ಮ ಬಾರ್ತ ದ್ಯೇಸದ ಮಾನಾ ಕ್ರಿಕೀಟಿನಲ್ಲಿ ಕಾಪಾಡೋರು ಯಾರೂ ಅನ್ನೋ ಚಿಂತೇಲಿ 'ಊಟದ ಪಿಲೇಟ್ನಾಗೆ ದೊಡ್ ದೊಡ್ಡ ರಾಗೀ ಬಾಲ್ ಗಳಿದ್ರೂ ಬ್ಯಾಟಿಂಗ್ ಮಾಡಾಕ್ ಆಯ್ಕಿಲ್ವಲ್ಲಪ್ಪೋ ಮಲೈ ಮಾದೇಸಾ…..' ಅನ್ನೋ ಸಂಕುಸ್ಟದಲ್ಲವ್ನಿ. ಇವರ್ಗಳ್ ನೋಡಿದ್ರೆ ಅದ್ಯಾವನೋ ಸೇನ್ ವಾರ್ನು ಅವನ್ ಗಿರಲ್ ಪ್ರೆಂಡು ಬೋ ಸಾರ್ನು ಅಂತಾ ಒಬ್ರನ್ನೊಬ್ರು ಬೋಲ್ಡು ಮಾಡಾದ್ರಲ್ಲೇ ಬ್ಯೂಸಿಯಾಗವ್ರೆ.
ಯೇನೇ ಆಗ್ಲೀ, ಲೇಕ್ನಾ ಬೋ ಪಸಂದಾಗೈತೆ. ಗುರುಪ್ರಸಾದಯ್ಯನವರೂ ಹೀಗೇ ದೇಸಾಂತರ ಓಗಿ ಬಂದು ಹೀಗೆ ಪಸಂದಾಗಿರೋ ಲೇಕ್ನಾ ಬರ್ಕಂಡಿದ್ರೆ; ಅವ್ರ ಗುರು ಸಿಸ್ಯ ವ್ರಂದ ಹೀಗೇ ಬಾಲಿಂಗೂ ಬೋಲ್ಡಿಂಗೂ ಮಾಡ್ಕಂಡಿದ್ರೆ ನಮ್ಗೂ ಸಂತೋಸಾನೆಯಾ. ನಾನೂ ಚೂರು ಪಾರೂ ಓದ್ಕಂಡಿದ್ದಿದಕ್ಕೆ ಸಾರುಥಕ ಆಗ್ತದೆ ಕಣ್ಲಾ.
ಮಲವಳ್ಳಿ ಗೌಡ್ರಿಗೆ ಶರಣು! ನಾವೇನೋ ಕೆಲ್ಸಾ ಇಲ್ಲಾ ಅಂತ ದೇಶಾಂತರಾ ಓಗಿ ಬಂದ್ವಿ. ಆದ್ರೆ ಪಾಪಾ ನೀವು ಇಷ್ಟೋಂದು ಬ್ಯುಸಿ ಇದ್ರೂನುವೆ ಏಸೊಂದು ತಾಳ್ಮೆಯಿಂದ ಲೇಖನ ಓದಿ, ಪ್ರತಿಯೊಂದು ಕಮೆಂಟು ಗಳನ್ನೂ ಓದಿ, ಅವುಗಳ ಮೇಲೆ ನನ್ನ ಲೇಖನಕ್ಕಿಂತ ದೊಡ್ಡದಾದ ಟಿಪ್ಪಣಿ ಬರೆದದ್ದು ಓದಿ ನನ್ನ ಜೀವನ ಪಾವನವಾಯ್ತು! ಆದ್ರೂ ನಾವು ಬರೆದದ್ದನ್ನು ಮೆಚ್ಚಿದ್ದಿರಿ, ನಿಮಗೆ ಧನ್ಯವಾದಗಳು!
ನಿಮ್ಮ ಬರವಣಿಗೆಯ ಶ್ಯೆಲಿ ಚೆನ್ನಾಗಿದೆ.