ಕಾವ್ಯಧಾರೆ

ಪೂರ್ಣತೆಯ ಕಡೆಗೆ

 

ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ

ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||

 

ಬಗೆಹರಿಯದ ಮೌಲ್ಯವದು ’ಪೈ’ ಎಂದು

ಪರಿಧಿ ವ್ಯಾಸದ ಸರಳ ಅನುಪಾತವದು

ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ

ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ

ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ

ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ

ಸನಿಹವಾದರೂ ಎಂದೂ ನಿಖರವಲ್ಲ

ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ

ತೀರದ ಹಠಕೆ ಅರ್ಪಣೆಯೇನು ಕಡಿಮೆಯ

ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|

 

ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ

ಯಾವ ಮಾಯದಲ್ಲೋ ಜೀವ ಹುಟ್ಟಿತಂತೆ

ನಿರ್ಜೀವ ತಾ ಜೀವಕೆ ಜನ್ಮಕೊಟ್ಟಿತೇ ಇಲ್ಲಿ?

ದೇವ ತಾನೆಲ್ಲರನು ಸೃಷ್ಟಿಸಿದನೇ ಆದಿಯಲ್ಲಿ?

ನಿಜದ ಪೂರ್ಣತೆಗೆ ಅದೆಷ್ಟು ವ್ಯಾಖ್ಯಾನಗಳೋ

ಎಷ್ಟು ವಿಜ್ಞಾನಿ, ಅದೆಷ್ಟು ಕಾಲಜ್ಞಾನಿಗಳೋ

ಹಿಂದೆ ಬಿದ್ದವರು, ತಿರುಗಿ ವಿವರಿಸಹೋದವರು

ಸೃಷ್ಟಿನಿಗೂಢವ ಮುಟ್ಟಬಹುದೆ ಎಂದಿಗಾದರೂ||೨||

 

ಪ್ರೇಮ,  ದ್ವೇಷವಂತೆ, ಮತ್ತಿಷ್ಟು ಅರಿಷಡ್ವರ್ಗಗಳಂತೆ

ಮೂರು ದಿನದ ಬದುಕಿನಲಿ ನೂರೊಂದು ಭೇಧವಂತೆ

ತಪ್ಪೆಂದು ಗೊತ್ತಿದ್ದರೊ ಮೀರಲಾಗದ ದೌರ್ಬಲ್ಯವೇ

ತಿಳಿದರೂ ಅರಿಯದ ಮನಸ್ಸಿನ ಮೂಢತನವೇ

ಒಂದ ಮೆಟ್ಟಿದೆನೆಂದರೆ ತಲೆಯೆತ್ತಿದ್ದು ಮತ್ತೊಂದೆ

ಈ ಸಾಧನೆಯನಿಲ್ಲೇ ಸಾಧಿಸಿ ಮುಗಿಸಬಹುದೇ

ಪೂರ್ಣತೆಯೆಂಬ ಕಲ್ಪನೆಯೇ ಒಂದು ಭ್ರಮೆಯೇ

ದೂರದ ಮರೀಚಿಕೆಗೆ ತುಡಿವುದೇ ಬದುಕ ಮಾಯೆ||೩||

-ಸುಬ್ರಮಣ್ಯ ಹೆಗಡೆ
ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಪೂರ್ಣತೆಯ ಕಡೆಗೆ

  1. ಪರಿಪೂರ್ಣತೆಯನ್ನು ಹುಟ್ಟು ಹಾಕುವ ಕವನ ಮಿತ್ರರೆ………………………..

  2. "ಪೂರ್ಣತೆಯೆಂಬ ಕಲ್ಪನೆಯೇ ಒಂದು ಭ್ರಮೆಯೇ" – ತುಂಬಾ ವಿಚಾರ ಮಾಡಬೇಕಾದ ಸಾಲಿದು.

Leave a Reply

Your email address will not be published. Required fields are marked *