ಅಡಕೆಯಿಂದ ಹೋದ ಮಾನ ಆನೆ ಕೊಟ್ಟರೂ ಬರದು ಎಂಬುದೊಂದು ಮಾತಿದೆ. ಅಂದರೆ ಒಂದು ಅಡಕೆಯನ್ನು ಕದ್ದೊಯ್ದರೆ ತಿರುಗಿ ಆನೆಯನ್ನೇ ವಾಪಾಸು ಕೊಟ್ಟರೂ ಹೋದ ಮಾನ ವಾಪಾಸು ಬರುವುದಿಲ್ಲ. ದಿನೇ ದಿನೇ ಸಾಮಾನ್ಯ ಜನರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ಬಿಗಡಾಯಿಸುವಿಕೆಗೆ ಕಾರಣ ಬೆಲೆಯೇರಿಕೆ, ಬಿಸಿಯೇರಿಕೆ, ಸರ್ಕಾರದ ನೀತಿ ಇತ್ಯಾದಿಗಳು. ಅತ್ಯಂತ ಸಂಪದ್ಭರಿತ ನಾಡು ಮಲೆನಾಡು. ಪಶ್ಚಿಮಘಟ್ಟಗಳ ಸೊಬಗು ಎಂತವರನ್ನೂ ಆಕರ್ಷಿಸುತ್ತದೆ. ಜೀವಿವೈವಿಧ್ಯದ ತವರೂರು ಈ ಮಲೆನಾಡು. ಪ್ರಕೃತಿದತ್ತವಾಗಿ ಅತ್ಯಂತ ಸುರಕ್ಷಿತ ಪ್ರದೇಶವೂ ಹೌದು. ಸುನಾಮಿಯ ಭಯವಿಲ್ಲ. ಚಂಡಮಾರುತವಿಲ್ಲ. ಜ್ವಾಲಾಮುಖಿಗಳಿಲ್ಲ. ಅತೀವೃಷ್ಟಿಯಿಂದ ಜನಹಾನಿ ಸಂಭವಿಸುವುದಿಲ್ಲ. ಅನಾವೃಷ್ಟಿಗೊಳಗಾಗಿ ಜನ-ಜಾನುವಾರು ಸಾಯುವುದಿಲ್ಲ. ಒಳ್ಳೆಯ ನೀರು-ಗಾಳಿ ಲಭ್ಯ. ಅತಿಯಾದ ಬಿಸಿಲಿನಿಂದಾಗಿ ಅಥವಾ ಅತಿಯಾದ ಚಳಿಯಿಂದಾಗಿ ಇಲ್ಲಿ ಸಾವು-ನೋವು ಸಂಭವಿಸುವುದಿಲ್ಲ. ಮಲೆನಾಡಿನ ಪ್ರಶಾಂತ ವಾತಾವರಣದಂತೆ ಇಲ್ಲಿನ ಜನರು ಸ್ವಾಭಾವಿಕವಾಗಿ ಶಾಂತಿಪ್ರಿಯರು ಮತ್ತು ಸಂತೃಪ್ತರು. ಇಂತಹ ಸುರಕ್ಷಿತ ಪ್ರದೇಶದ ಜನ ಸಂತೋಷವಾಗಿ ಬದುಕಲೆಂದು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಬಹುಮುಖ್ಯ ಕಸುಬು ಕೃಷಿ ಮತ್ತು ತೋಟಗಾರಿಕೆ. ಭತ್ತ, ಕಬ್ಬು, ಜೋಳ ಇತ್ಯಾದಿಗಳು ಕೃಷಿ ಉತ್ಪನ್ನಗಳಾದರೆ, ಅಡಕೆ-ತೆಂಗು, ಸಾಂಬಾರ ಪದಾರ್ಥಗಳು ತೋಟಗಾರಿಕೆ ಅಡಿಯಲ್ಲಿ ಬರುತ್ತವೆ. ಪ್ರಾಕೃತಿಕ ವಿಕೋಪಗಳಿಲ್ಲದ ನಾಡಿನಲ್ಲಿ ಜನರು ಸಂತೋಷದಿಂದಿರಬೇಕಿತ್ತು. ಆದರೆ, ಆಗೊಮ್ಮೆ-ಈಗೊಮ್ಮೆ ಸರ್ಕಾರದಿಂದ ಜನರ ನೆಮ್ಮದಿ ಕೆಡುತ್ತದೆ. ಹಿಂದೆ ಇಕ್ಕೇರಿ ಪ್ರದೇಶದಲ್ಲಿ ಚಿನ್ನದ ಗಣಿಯಾಗುತ್ತದೆ ಎಂಬ ಗುಮಾನಿಯೆದ್ದು, ಜನರ ನೆಮ್ಮದಿ ಹಾಳಾಗಿತ್ತು. ಇದೀಗ ಪಶ್ಚಿಮಘಟ್ಟಗಳು ವಿಶ್ವ ಪಾರಂಪಾರಿಕ ಪಟ್ಟಿಯಲ್ಲಿ ಸೇರಿರುವುದು ಮತ್ತು ಕಸ್ತೂರಿರಂಗನ್ ವರದಿಯಿಂದಾಗಿ ಗಣಿ ಭೂತದ ಭಯ ದೂರಾಗಿದೆ.
ಈ ದೇಶದ ದುರಂತವೋ ಅಥವಾ ವೈಜ್ಞಾನಿಕವಾಗಿ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಂಡು ಬಂದ ವಿಫಲತೆಯೋ, ಅಂತೂ ಇಂಡಿಯಾದ ಯಾವುದೇ ರೈತನ ಜೀವನ ಸುಖದಾಯಕವಾಗಿಲ್ಲ. ರೈತನಿಗೆ ನೀಡುವ ಬೆಲೆಗೂ ಮಾರುಕಟ್ಟೆಯಲ್ಲಿ ಇರುವ ದರಕ್ಕೂ ಅರ್ಥಾತ್ ಸಂಭಂದವಿರುವುದಿಲ್ಲ. 50 ಪೈಸೆ ಕೆ.ಜಿ. ಟೊಮೊಟೊ ರೈತನ ತೋಟದಲ್ಲಿ ಖರೀದಿಯಾಗುತ್ತದೆ. ಮಾರುಕಟ್ಟೆಯಲ್ಲಿ ಇದೇ ಟೊಮೊಟೊ 20-25 ರೂಪಾಯಿಗಳಿಗೆ ಮಾರಾಟವಾಗುತ್ತದೆ. ರೈತನಿಗೂ ಲಾಭವಿಲ್ಲ, ಅಂತಿಮ ಗ್ರಾಹಕನಿಗೂ ಲಾಭವಿಲ್ಲ. ಎಲ್ಲಾ ಬೆಳೆಗಳ ಬೆಲೆಯ ಕತೆಯೂ ಇದೇ ರೀತಿ. 1980ರ ದಶಕದಲ್ಲಿ ಅಡಕೆಗೊಂದು ಹೊಸ ರೂಪ ಬಂತು. ಅದರ ಹೆಸರು ಗುಟ್ಕಾ. ಹಲವಾರು ಬಗೆಯ ರಾಸಾಯನಿಕಗಳನ್ನು ಸೇರಿಸಿ, ತಂಬಾಕು ಬೆರೆಸಿ ಚಿಕ್ಕ-ಚಿಕ್ಕ ಸಾಚೆಟ್‍ನಲ್ಲಿ ರೂಪಾಯಿಗೊಂದರಂತೆ ದೇಶದ ಎಲ್ಲಾ ಭಾಗಗಳಲ್ಲೂ ಮಾರಾಟವಾಗುತ್ತಿತ್ತು. ಸಿಗರೇಟು ಸೇವನೆ ಮಾಡುವ ಹೆಚ್ಚು ಮಂದಿ ಗುಟ್ಕಾದ ಮೊರೆ ಹೋದರು. ಗುಟ್ಕಾ ಕಂಪನಿಗಳು ಇನ್ನಿಲ್ಲದಷ್ಟು ಲಾಭಗಳಿಸಿದರು. ಕೆಲವೇ ಗ್ರಾಂನಷ್ಟು ಅಡಿಕೆ ಅಂಶವಿರುವ ಗುಟ್ಕಾದಲ್ಲಿ ಆರೋಗ್ಯ ಹಾನಿಯಾಗುವ ಹಲವು ಅಂಶಗಳಿದ್ದವು. ಮೊದಲನೆಯದಾಗಿ ತಂಬಾಕು. ತಂಬಾಕು ಕ್ಯಾನ್ಸರ್‍ಕಾರಕವೆಂದು ಎಂದೋ ಸಾಬೀತಾದ ವಿಚಾರ. ಸಿಗರೇಟು ಸೇವನೆಯಿಂದಲೂ ಕ್ಯಾನ್ಸರ್ ಬರುತ್ತದೆ ಎಂದು ಆರೋಗ್ಯ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ಸರ್ವೋಚ್ಛ ನ್ಯಾಯಾಲಯಕ್ಕೆ ಅಡಕೆಯಲ್ಲಿ ವಿಷಕಾರಿ ಅಂಶವಿದೆ ಆದ್ದರಿಂದ ಅಡಕೆ ಬೆಳೆಯನ್ನೇ ನಿಷೇಧಿಸಬೇಕು ಎಂದು ಮನವಿ ಮಾಡಿಕೊಂಡ ವಿಚಾರ ಮಲೆನಾಡಿನ ಭಾಗದ ರೈತರ ನಿದ್ದೆಗೆಡಿಸಿದೆ. ಅಡಕೆಯನ್ನು ಮಾದಕ ವಸ್ತುಗಳ ಗುಂಪಿಗೆ ಸೇರಿಸಬೇಕು ಎಂಬ ವಾದವೂ ಕೇಳಿ ಬಂದಿದೆ. ಅಂದರೆ ಗಾಂಜ-ಅಫೀಮು ಇತ್ಯಾದಿಗಳನ್ನು ರೈತ ಬೆಳೆದು ಮಾರುವ ಹಾಗಿಲ್ಲ. ಕಾನೂನಿನಲ್ಲಿ ಗಾಂಜ ಬೆಳೆಯಲು ಪರವಾನಿಗೆಯಿಲ್ಲ. ಅಡಕೆಯನ್ನು ಇದೇ ವರ್ಗಕ್ಕೆ ಸೇರಿಸಲು ಶಿಪಾರಸ್ಸು ಮಾಡಲಾಗಿದೆ ಎಂಬುದು ಪತ್ರಿಕೆಗಳಲ್ಲಿ ವರದಿಯಾಗಿದೆ. ದ್ರಾಕ್ಷಿಯಿಂದ ವೈನನ್ನೂ, ಕಬ್ಬಿನಿಂದ ಮಧ್ಯವನ್ನು ತಯಾರಿಸಲಾಗುತ್ತದೆ ಮತ್ತು ಇವುಗಳು ಮಾದಕ ವಸ್ತುಗಳಾಗಿವೆ. ಅಡಕೆಯಿಂದ ವೈನ್ ತಯಾರಿಕೆಯ ಪ್ರಯತ್ನವೂ ನಡೆದರೂ ಅದರಲ್ಲಿ ಯಶಸ್ವಿಯಾಗಿಲ್ಲ. ಅಡಕೆಯಲ್ಲಿ ಅಂತಹ ವಿಷದ ವಸ್ತುವೇನಿದೆ? ಏನೂ ಇಲ್ಲ. ಬದಲಿಗೆ ತಾಂಬೂಲ ಸೇವನೆಯೂ ಆರೋಗ್ಯಕ್ಕೆ ಪೂರಕವಾಗಿದೆ. ಅಡಕೆಯಲ್ಲಿ ವಿಷದ ಅಂಶವಿಲ್ಲ ಎಂಬುದು ವೈಜ್ಞಾನಿಕವಾಗಿ ದೃಡಪಟ್ಟಿದ್ದು, ಇದರಲ್ಲಿ ಯಾವುದೇ ಸಂದೇಹ ಪಡುವ ಕಾರಣವಿಲ್ಲ.
ಅಡಕೆ ನಿಷೇಧ 3 ಕೋಟಿ ಜನರ ಮೇಲೆ ಪ್ರತ್ಯಕ್ಷ-ಪರೋಕ್ಷ ಪರಿಣಾಮಗಳನ್ನು ಬೀರುತ್ತದೆ ಎಂಬ ವಿಚಾರ ಒತ್ತಟ್ಟಿಗಿರಲಿ. ಅಡಕೆಯ ವಹಿವಾಟು ವಾರ್ಷಿಕವಾಗಿ 50 ಸಾವಿರ ಕೋಟಿಗಳು ಎಂಬುದನ್ನು ಬದಿಗಿಡೋಣ. ಅಡಕೆ ಒಂದು ವಸ್ತುವಲ್ಲ ಅದೊಂದು ಸಂಸ್ಕ್ರತಿ ಎಂಬ ಹಿನ್ನೆಲೆಯಿಂದ ನೋಡಿದಾಗ ಹೊಸ ಹೊಳಹುಗಳು ಕಾಣ ಸಿಗುತ್ತವೆ. ಅಡಕೆ ಒಂದು ವಾಣಿಜ್ಯ ಬೆಳೆಯಾಗಿದ್ದು, ಆಹಾರ ಪದಾರ್ಥದಂತೆ ಮನುಷ್ಯನಿಗೆ ಅನಿವಾರ್ಯವಲ್ಲ ಎಂಬ ವಾದವೂ ಇದೆ. ಇದನ್ನು ಪರಿಗಣಿಸುವುದು ಬೇಡ. ಅಡಕೆಯೊಂದು ಬೆಳೆಯಾಗಿ ಪರಿಸರಕ್ಕೆಷ್ಟು ಪೂರಕವೆಂಬ ವಿಚಾರವನ್ನು ನೋಡೋಣ. ಈ ಮೊದಲೇ ಹೇಳಿದಂತೆ ಪಶ್ಚಿಮಘಟ್ಟಗಳ ಸಾಲಿನಲ್ಲಿ ಹೆಚ್ಚಿನ ಅಡಕೆಯನ್ನು ಬೆಳೆಯಲಾಗುತ್ತದೆ. ಅಡಕೆಯು ಒಂದು ಬಹುವಾರ್ಷಿಕ ಬೆಳೆಯಾಗಿದ್ದು, ಅಡಕೆ ತೋಟವನ್ನು ಬೆಳೆಸುವಲ್ಲಿ ಅಪಾರ ಶ್ರಮ-ಶ್ರದ್ಧೆ ಇರಬೇಕು. ಭತ್ತದಂತೆ ಮೂರ್ನಾಲ್ಕು ತಿಂಗಳಿಗೆ ಇದರಿಂದ ರೈತನಿಗೆ ಆದಾಯ ಬರುವುದಿಲ್ಲ. ಹೊಸತಾಗಿ ಅಡಕೆ ತೋಟವನ್ನು ಮಾಡುವವರು ಉಪಬೆಳೆಗಳನ್ನು ಅವಲಂಬಿಸಬೇಕಾಗುತ್ತದೆ. ಸಾಮಾನ್ಯವಾಗಿ ಅಡಕೆ ತೋಟದಲ್ಲಿ ಉಪಬೆಳೆಗಳೆಂದರೆ, ಬಾಳೆ, ಏಲಕ್ಕಿ, ಕಾಳುಮೆಣಸು, ಕೋಕ, ವೀಳ್ಯೆದೆಲೆ, ಕಾಫಿ, ಜಾಯಿಕಾಯಿ ಇತ್ಯಾದಿಗಳು. ಉಪಬೆಳೆಗಳು ರೈತನಿಗೆ ಲಾಭ ತರುವುದಲ್ಲದೆ, ರಫ್ತು ಮಾಡುವುದರಿಂದ ಸರ್ಕಾರಕ್ಕೂ ತೆರಿಗೆಯ ರೂಪದಲ್ಲಿ ಸಾಕಷ್ಟು ಆದಾಯವಿದೆ.
ಇನ್ನೂ ಸಾಂಪ್ರದಾಯಿಕ ಅಡಕೆ ಕೃಷಿಯಲ್ಲಿ ಹಲವು ಒಳಸುಳಿಗಳಿವೆ. ಕೃಷಿಗೆ ಗೊಬ್ಬರದ ಅವಶ್ಯಕತೆ ಇರುವುದರಿಂದ ಅಡಕೆ ಬೆಳೆಗಾರ ಸ್ವಂತಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾನೆ. ಹಾಲು ಮಾರಾಟ ಮಾಡುವುದರಿಂದ ರೈತನಿಗಷ್ಟೇ ಲಾಭವಲ್ಲ. ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಅವಶ್ಯಕತೆಗಳೂ ಇದೇ ಹೈನುಗಾರಿಕೆಯಿಂದ ಪೂರೈಸ್ಪಡುತ್ತವೆ. ಅದೆಷ್ಟೋ ನಿರುದ್ಯೋಗಿ ಯುವಕರು ಜಾನುವಾರುಗಳ ಮೇವು ತಯಾರು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಡಕೆ ಬೆಳೆಯುವ ಹೆಚ್ಚಿನ ರೈತರು ಸಾವಯವ ಕೃಷಿಯನ್ನು ಅವಲಂಬಿಸಿದ್ದಾರೆ. ಯಾವುದೇ ತರಹದ ರಾಸಾಯನಿಕಗಳು ಅಡಕೆ ತೋಟದಲ್ಲಿ ಬಳಸಲ್ಪಡುವುದಿಲ್ಲ. ಕೊಳೆರೋಗಕ್ಕೆ ಭೋರ್ಡೊ ದ್ರಾವಣವನ್ನು ಸಿಂಪಡಿಸುತ್ತಾದರೂ, ಇತರೆ ರಾಸಾಯನಿಕಗಳಿಗೆ ಹೋಲಿಸಿದಲ್ಲಿ ಭೋರ್ಡೊ ಮಿಶ್ರಣ ಹಾನಿಕಾರಕವಲ್ಲ. ಇಲ್ಲಿ ಯಾವುದೇ ತರಹದ ಎಂಡೋಸಲ್ಪಾನ್ ಅಂತಹ ವಿಷಕಾರಿ, ಜೀವದ್ರೋಹಿ ರಾಸಾಯನಿಕಗಳನ್ನು ಉಪಯೋಗಿಸುವುದಿಲ್ಲ. ಆದ್ದರಿಂದ, ಅಡಕೆ ತೋಟದಲ್ಲಿ ಬೆಳೆಯುವ ವಸ್ತುಗಳು ಸಾವಯವ ಪದಾರ್ಥಗಳಾಗಿದ್ದು, ಆರೋಗ್ಯಪೂರ್ಣವಾಗಿರುತ್ತವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಅಡಕೆ ಬೆಳೆಯುವ ಪ್ರದೇಶವೂ ಅತ್ಯಂತ ನಿಭಿಡವಾದ ಜೀವವೈವಿಧ್ಯ ಪ್ರದೇಶವಾಗಿದೆ. ಅಡಕೆಯು ಏಕಜಾತಿಯ ನೆಡುತೋಪು ವರ್ಗದಲ್ಲಿ ಬರುವುದಾದರೂ, ನೀಲಗಿರಿ, ಅಕೇಶಿಯಾದಂತೆ ಹಸಿರು ಮರಳುಗಾಡಲ್ಲ. ಅಡಕೆ ತೋಟಕ್ಕೆ ಹೊಂದಿಕೊಂಡಂತೆ ಇರುವ ಸೊಪ್ಪಿನ ಬೆಟ್ಟಗಳೂ ಜೀವಿವೈವಿಧ್ಯದ ತೊಟ್ಟಿಲು. ಮಲೆನಾಡಿನಲ್ಲಿ ಏನಾದರೂ ಕಾಡು ಉಳಿದಿದ್ದರೆ ಅದು ಸೊಪ್ಪಿನ ಬೆಟ್ಟದ ರೂಪದಲ್ಲಿ ಎಂದು ಉಲ್ಲೇಖಿಸುವುದು ಉತ್ಪ್ರೇಕ್ಷೆಯಾಗಲಾರದು. ಅಡಕೆಯಲ್ಲಿ ಉಪಬೆಳೆಗಳು ಇರುವುದರಿಂದ, ಇದನ್ನು ಅವಲಂಬಿಸಿದ ಇತರ ಅನೇಕ ಜೀವಿಗಳು ಅಡಕೆ ತೋಟವನ್ನವಲಂಬಿಸಿವೆ. ಅಪರೂಪದ ಕಪ್ಪೆಗಳನ್ನು ನೀವು ಮಲೆನಾಡಿನ ತೋಟದಲ್ಲಿ ಕಾಣಬಹುದು. ಮಳೆಗಾಲದ ನಂತರವೂ ಸುಮಾರು 4 ತಿಂಗಳು ಅಡಕೆ ತೋಟದಲ್ಲಿ ಅಧಿಕ ತೇವಾಂಶವಿರುತ್ತದೆ. ಶೀತರಕ್ತದ ಪ್ರಾಣಿಗಳಿಗೆ ಅಡಕೆ ತೋಟವು ಬದುಕುಳಿಯಲು ಅನಿವಾರ್ಯ ಸ್ಥಳವಾಗಿದೆ. ಅಲ್ಲದೆ ಆಹಾರ ಬೆಳೆಗಳಿಗೆ ಹಾನಿಕಾರಕವಾಗಿ ಪರಿಣಮಿಸಿರುವ ಇಲಿ ಸಂತತಿಯನ್ನು ನಿಯಂತ್ರಣದಲ್ಲಿಡುವ ಉರಗ ಸಂತತಿಯೂ ಕೂಡ ಅಡಕೆ ತೋಟದಲ್ಲಿ ಆಶ್ರಯ ಪಡೆಯುತ್ತವೆ. ಅಲ್ಲದೆ ಅಳಿವಿನಂಚಿನಲ್ಲಿರುವು ಹಾರುಬೆಕ್ಕು, ಕಬ್ಬೆಕ್ಕು ಇತ್ಯಾದಿಗಳು ಅಡಕೆ ಹಣ್ಣಿನ ರಸವನ್ನು ಹೀರುತ್ತವೆ. ಬಾವಲಿಗಳಿಗೂ ಅಡಕೆ ಆಹಾರವಾಗಿದೆ. ಕಾಡಿನಲ್ಲಿ ಆಹಾರದ ಅಭಾವವಿದ್ದಾಗ, ಮಂಗಗಳು ಅಡಕೆಯನ್ನು ನೆಚ್ಚಿಕೊಂಡು ಬದುಕುತ್ತುವೆ. ಮಂಗನ ಕಾಟದಿಂದ ರೈತನಿಗೆ ತೊಂದರೆಯಾದರೂ, ಅಳಿವು-ಉಳಿವಿನ ಪ್ರಶ್ನೆ ಬಂದಾಗ ಮಂಗಗಳಿಗೆ ರೈತನ ಬೆಳೆ ಆಹಾರವಾಗುತ್ತದೆ. ನೈಸರ್ಗಿಕವಾಗಿ ಅಡಕೆ ಪ್ರದೇಶವು ತಂಪಾಗಿರುವುದರಿಂದ ಇಲ್ಲಿ ಎರೆಹುಳುಗಳು ಹೇರಳವಾಗಿ ಇರುತ್ತವೆ. ಅಲ್ಲದೆ ಅಡಕೆ ತೋಟದಲ್ಲಿ ಹರಿಯುವ ಚಿಕ್ಕ ಹೊಳೆಗಳಲ್ಲಿ ಜಲಪ್ರಭೇಧಗಳು, ಏಡಿಗಳು ವಾಸಿಸುತ್ತವೆ. ಅಡಕೆ ಹೂ ಬಿಡುವ ಸಂದರ್ಭದಲ್ಲಿ ಕಾಡಿನ ಜೇನುಗಳಿಗೆ ಆಹಾರವಾಗುತ್ತದೆ. ಆಹಾರ ಸರಪಣಿಯಲ್ಲಿ ಬಲು ಮಹತ್ವದ ಸ್ಥಾನ ಅಡಕೆ ಬೆಳೆಯುವ ಪ್ರದೇಶಕ್ಕಿದೆ. ಅಂತರ್ಜಲ ಕಾಪಾಡುವಲ್ಲಿ ಕೂಡ ಅಡಕೆ ಬೆಳೆ ಮಹತ್ವದ ಪಾತ್ರ ವಹಿಸುತ್ತದೆ. ಅಡಕೆ ಮರದ ಚಂಡೆಯು ಅಗಲವಾಗಿದ್ದು, ಬೀಳುವ ಮಳೆಹನಿಗಳನ್ನು ಒಟ್ಟು ಮಾಡಿ ನೆಲಕ್ಕಿಳಿಸುತ್ತದೆ. ಪ್ರತಿ ಮರವೂ ಮಳೆಗಾಲದಲ್ಲಿ ಒಂದೊಂದು ನಲ್ಲಿಯ ತರಹ ಕೆಲಸ ಮಾಡುತ್ತದೆ. ಅಡಕೆ ಮರದ ಬುಡದಲ್ಲಿ ಮಳೆಯಿಂದ ಮಣ್ಣು ಕೊಚ್ಚಿಹೋಗಬಾರದೆಂಬ ಕಾರಣಕ್ಕೆ ಮುಚ್ಚಿಗೆಯನ್ನು ಹಾಕಿರುತ್ತಾರೆ. ಇದೇ ಮಳೆನೀರು ನಿಧಾನಕ್ಕೆ ಭೂಮಿಗೆ ಇಂಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತದೆ. ಅಡಕೆ ತೋಟಕ್ಕಾಗಿ ಕಾಪಿಟ್ಟುಕೊಂಡು ಬಂದಿರುವ ಸೊಪ್ಪಿನ ಬೆಟ್ಟಗಳು ಮಳೆನೀರನ್ನು ಇಂಗಿಸಲು ನೆರವಾಗುತ್ತವೆ. ಅಪರೂಪದ ಹಾರುವ ಓತಿಯನ್ನು ಹೊಸಬಾಳೆ ಮಂಜುನಾಥ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಅಡಕೆ ತೋಟದಲ್ಲೇ. ಇದಲ್ಲದೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮಾಣು ಜೀವಿಗಳು ಹೇರಳವಾಗಿ ಕಂಡುಬರುತ್ತವೆ.
ಗುಟ್ಕಾದ ಆವಿಷ್ಕಾರ ಅಡಕೆ ಬೆಳೆಗಾರರ ಜೀವನ ಮಟ್ಟವನ್ನು ಸುಧಾರಿಸಿತು ಎಂಬುದು ಒಂದು ಮಿಥ್ಯೆಯ ವಿಚಾರ. ಅಡಕೆ ಬೆಳೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗುಟ್ಕಾದ ಇತಿಹಾಸ ಬರೀ 25-30 ವರ್ಷಗಳದ್ದು ಮಾತ್ರ. ಆದ್ದರಿಂದ ಅಡಕೆ ಬೆಳೆಗಾರರ ಆರ್ಥಿಕ ಸಭಲತೆಗೆ ಗುಟ್ಕಾದ ಕೊಡುಗೆಯಿದೆ ಎಂಬುದು ಒಪ್ಪುವ ಸಂಗತಿಯಾಗುವುದಿಲ್ಲ. ಬಹಳಷ್ಟು ಅಡಕೆ ಬೆಳೆಗಾರರು ಅತೀ ಕಡಿಮೆ ವ್ಯಾಪ್ತಿಯ ತೋಟವನ್ನು ಹೊಂದಿದ್ದು, ಕಷ್ಟದಿಂದ ಜೀವನ ನಿರ್ವಹಣೆ ಮಾಡುತ್ತಾರೆ ಎಂಬುದು ಸುಳ್ಳಲ್ಲ. ತನ್ಮಧ್ಯೆ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಡಕೆ ಬೆಳೆಗಾರ ಸಂಘ ಹೆಚ್ಚು-ಕಡಿಮೆ ಎಲ್ಲಾ ತಾಲ್ಲೂಕುಗಳಲ್ಲೂ ಕಾರ್ಯನಿರ್ವಹಿಸುತ್ತದೆ. ಚುನಾವಣೆ ಬಂದಾಗ ಚುರುಕಾಗಿ ನಂತರ ತಣ್ಣಗಾಗಿ ಕೂರುವ ಸಂಘಗಳೇ ಹೆಚ್ಚು. ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಅದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ನಿಜವಾಗಲೂ ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಇವರು ಹಾರ್ದಿಕವಾಗಿ ಸ್ಪಂದಿಸಿದ ಉದಾಹರಣೆ ಸಿಗುವುದಿಲ್ಲ. ಕೆಂಪಡಕೆಗೆ ಬೆಲೆ ಬಂದು ಅಡಕೆ ಬೆಳೆಗಾರ ಉದ್ದಾರವಾದ ಎಂಬ ಪರಿಸ್ಥಿತಿ ಮಧ್ಯದಲ್ಲಿ ಉದ್ಬವಿಸಿತ್ತು. ಆದರೆ, ಧೂರ್ತ ಅಡಕೆ ದಲಾಲರು ದುಡ್ಡಿನಾಸೆಗೆ ಚಾಲಿ ಅಡಕೆಗೆ ಕಾವಿ (ರೆಡ್‍ಆಕ್ಸೈಡ್) ಯೆಂಬ ವಿಷದ ಬಣ್ಣವನ್ನು ಹಾಕಿ ಕೆಂಪಡಕೆಗೆ ಮಿಶ್ರಣ ಮಾಡಿ ದೂರದ ದೆಹಲಿಗೆ ಕಳುಹಿಸಿದರು. ಈ ವಿಷಯುಕ್ತ ಅಡಕೆಯನ್ನು ಕತ್ತರಸಿ ಗುಟ್ಕಾ ಕಂಪನಿಯ ಮಾಲೀಕರು ಗುಟ್ಕಾ ತಯಾರಿಸಿದರು. ಪ್ರಾಯಶ: ಕಾವಿಯುಕ್ತ ಅಡಕೆಯನ್ನೇ ಆರೋಗ್ಯ ವಿಜ್ಞಾನಿಗಳು ತಪಾಸಣೆ ಮಾಡಿ ಅಡಕೆಯಲ್ಲಿ ವಿಷಯುಕ್ತ ಅಂಶವಿದೆ ಎಂಬ ವರದಿಯನ್ನು ನೀಡಿರಬೇಕು. ಸಿಮೇಂಟ್-ಜಲ್ಲಿ ಮಿಶ್ರಣ ಮಾಡುವ ಯಂತ್ರಗಳನ್ನು ಉಪಯೋಗಿಸಿಕೊಂಡು ಹಗಲು-ರಾತ್ರಿ ಚಾಲಿ ಅಡಕೆಗೆ ಕಾವಿ ಬಣ್ಣವನ್ನು ಹಾಕಿ ಕೋಟ್ಯಾಧಿಶರಾದ ಅಡಕೆ ವರ್ತಕರು ಸಾಕಷ್ಟು ಮಂದಿಯಿದ್ದಾರೆ. ಅಡಕೆಯ ಮೇಲಿನ ಇಂತಹ ಪ್ರಾಥಮಿಕ ದೌರ್ಜನ್ಯವನ್ನು ತಡೆಯುವಲ್ಲಿ ಅಡಕೆ ಬೆಳೆಗಾರರ ಸಂಘ ಸಂಪೂರ್ಣ ವಿಫಲವಾಗಿದ್ದು, ಇವತ್ತಿನ ಅಡಕೆ ನಿಷೇಧಕ್ಕೆ ಮುನ್ನುಡಿಯಾಗಿತ್ತು ಎಂಬ ಸತ್ಯವನ್ನು ಇವತ್ತು ಅಡಕೆ ಬೆಳೆಗಾರರ ಸಂಘ ಒಪ್ಪಿಕೊಳ್ಳಬೇಕು.
ಅಡಕೆಗೆ ಕಾವಿ ತೊಡಿಸಿ ಕುಲಗೆಡಿಸಿದ ವರ್ತಕರು ಅಡಕೆಯು ವಿಷಯುಕ್ತ ಪದಾರ್ಥ ಎಂದು ಆರೋಗ್ಯ ಸಂಸ್ಥೆಗಳಲ್ಲಿ ಅಭಿಪ್ರಾಯ ಮೂಡುವ ಹಾಗೆ ಮಾಡಿದರು ಎಂಬುದನ್ನು ಬದಿಗಿಟ್ಟು ನೋಡಿದರೂ. ಸಾರಾಸಗಟು ಅಡಕೆ ವಿಷ ಎಂಬ ತೀರ್ಮಾನವನ್ನು ಯಾವುದೇ ಸರ್ಕಾರಗಳು ತೆಗೆದುಕೊಳ್ಳುವ ಹಾಗಿಲ್ಲ. ಆಹಾರ ಕಲಬೆರಕೆಯೂ ಕೂಡ ಅಪರಾಧವೇ ಸೈ. ಹಾಲಿಗೆ ನೀರು ಬೆರೆಸುವುದು ಕೂಡ ತಪ್ಪು. ಇವತ್ತು ಹಾಲಿಗೆ ಯೂರಿಯಾದಂತಹ ರಾಸಾಯನಿಕಗಳನ್ನು ಸೇರಿಸಿ ಮಾರಾಟ ಮಾಡುವ ವರ್ತಕರು, ತಯಾರಕರಿಗೆ ನೈತಿಕತೆ, ನೀತಿ ಇವ್ಯಾವುದೂ ಪಥ್ಯವಲ್ಲ. ಅಡಕೆಗೆ ವಿಷ ಸೇರಿಸಿದ್ದು, ರೈತ ಅಲ್ಲ. ಮಧ್ಯವರ್ತಿಗಳು ಮಾಡಿದ ಅಪರಾಧಕ್ಕೆ ಬಡ ರೈತ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ. ಅಡಕೆಯಿಂದ ಕೋಟ್ಯಾಂತರ ಗಳಿಸಿದ ಯಾರೂ ಇವತ್ತು ಅಡಕೆ ಬೆಳೆಗಾರನ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವ ಹೊಂದಿಲ್ಲ. ಆದಾಗ್ಯೂ ಬಲುದೊಡ್ಡ ಸಂಖ್ಯೆಯಲ್ಲಿರುವ ಅಡಕೆ ಅವಲಂಬಿತರ ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ. ಅಡಕೆಯು ಒಂದು ವಿಷ ಮತ್ತು ಮಾದಕ ಪದಾರ್ಥವಲ್ಲ ಎಂಬುದನ್ನು ಖುದ್ದು ಸರ್ಕಾರವೇ ತನಿಖೆ ಮಾಡಿ ಬಹಿರಂಗ ವರದಿಯೊಪ್ಪಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನೆಗಡಿಯಾದರೆ ಮೂಗು ಕೊಯ್ಯುವ ಗಾದೆ ಮಾತನ್ನು ಸತ್ಯ ಮಾಡಿದಂತಾಗುತ್ತದೆ. ಅಸಹಾಯಕ ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತದೆ. ಆಮೇಲೆ ಆನೆ ಕೊಟ್ಟರೂ ಅಡಕೆಯ ಹೋದ ಮಾನ ವಾಪಾಸು ಬರುವುದಿಲ್ಲ.
*****