ಪ್ರಶಸ್ತಿ ಅಂಕಣ

ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ ಅಂಕಣ


ಮಹಾತ್ಮ ಗಾಂಧಿಯವರ ಮಾತೊಂದು ನೆನಪಾಗ್ತಿದೆ."ಪುಸ್ತಕ ಓದೋ ಹವ್ಯಾಸವುಳ್ಳವನು ಎಲ್ಲಿ ಹೋದರೂ ಖುಷಿಯಾಗಿರಬಲ್ಲ" ಎಂದು. ಚಿಕ್ಕವನಿದ್ದಾಗಿಂದ್ಲೂ ಪುಸ್ತಕ ಒಂದಿದ್ರೆ ಸಾಕು. ಎಲ್ಲಿಗೆ ಬೇಕಾದ್ರೂ ಬರ್ತಾನೆ ಈ ಮಾಣಿ ಅಂತ ನಮ್ಮ ನೆಂಟರೆಲ್ಲಾ ತಮಾಷೆ ಮಾಡೋವಷ್ಟು ಪುಸ್ತಕಗಳ ಪ್ರೀತಿ ನನಗೆ. ನನ್ನ ಅಪ್ಪ, ದೊಡ್ಡಪ್ಪಂದಿರಲ್ಲದೇ, ಅಜ್ಜ, ಮಾವಂದಿರಲ್ಲೂ ಇದ್ದ ಸಾಮಾನ್ಯ ಹವ್ಯಾಸ ಪುಸ್ತಕಪ್ರೀತಿ. ಈ ವಾತಾವರಣದ ಪ್ರಭಾವವೇ ನನ್ನ ಮೇಲೆ ಬಿದ್ದಿರಲೂ ಸಾಕು. ನನ್ನ ಮಾವ ಅಂದಾಕ್ಷಣ ಒಂದು ಮಜೆಯ ಪ್ರಸಂಗ ನೆನಪಾಗುತ್ತೆ. ಅವರ ಬಾಲ್ಯದ ಕಾಲ. ಹಳ್ಳಿಯಲ್ಲಿದ್ದ  ನಮ್ಮಜ್ಜಿ ಮನೆಯಲ್ಲಿ ಮಳೆಗಾಲದಲ್ಲೊಂದು ಕಾರ್ಯಕ್ರಮ. ಮಳೆ ಅಂದರೆ ಘೋರ ಮಳೆ. ಹೊರಗೆ ಕಾಲಿಡಲೂ ಬೇಸರಿಸುವಷ್ಟು ಉಧೋ ಎನ್ನುತ್ತಿದ್ದ ಮಳೆ. ಕಾರ್ಯಕ್ರಮ ನಡೀತಾ ಇದೆ. ಬೆಳಗ್ಗೆ ತಿಂಡಿ ತಿಂದು ಮೇಲ್ಮೆತ್ತು (ಅಟ್ಟದ ಮೇಲಿರೋ ಅಟ್ಟ) ಹತ್ತಿದ್ದ ನಮ್ಮ ಮಾವನಿಗೆ ಯಾವುದೋ ಪುಸ್ತಕ ಕಂಡಿದೆ. ಅದನ್ನು ಓದುತ್ತಾ ಕುಳಿತ ಅವರಿಗೆ ಸಮಯ ಹೋಗಿದ್ದೇ ತಿಳಿದಿಲ್ಲ. ಮಧ್ಯಾಹ್ನವಾಯ್ತು. ಊಟದ ಪಂಕ್ತಿಗಳು ಮುಗೀತಾ ಬಂತು. ಎಲ್ಲೂ ನಮ್ಮ ಮಾವನ ಸುಳಿವಿಲ್ಲ. ಮೊದಲ ಪಂಕ್ತಿಗೆ ಕೂತವರು ನಮ್ಮ ಮಾವ ಎರಡನೇ ಪಂಕ್ತಿಗೆ ಕೂರಬಹುದು ಎಂದುಕೊಂಡರಂತೆ. ಎರಡನೆಯದರಲ್ಲೂ ಇರಲಿಲ್ಲ. ಅವರು ನಮ್ಮ ಮಾವ ಮೊದಲನೆಯದರಲ್ಲೇ ಕೂತಿರಬಹುದು ಎಂದುಕೊಂಡರಂತೆ. ಮೊದಲನೆಯದು, ಎರಡನೆಯದು ಎರಡರಲ್ಲೂ ನಮ್ಮ ಮಾವ ಕೂತಿರದ್ದನ್ನು ನೋಡಿದ್ದ ಕೆಲವರು ಮನೆಯವರ ಮೂರನೇ ಪಂಕ್ತೀಲಿ ಕೂರಬಹುದು ಎಂದುಕೊಂಡರಂತೆ! ಸಿಕ್ಕಾಪಟ್ಟೆ ನೆಂಟರಲ್ಲಿ ಯಾರಿಗೆ ಊಟವಾಯ್ತು, ಆಗಿಲ್ಲ ಅಂತ ನೆನಪಿರೋದಾದ್ರೂ ಹೆಂಗೆ ? ಮೂರು ಪಂಕ್ತಿಗಳಾದ್ರೂ ನಮ್ಮ ಮಾವನ ಪತ್ತೆ ಇಲ್ಲ. ಹೀಗೇ ಸಂಜೆ ಆಯ್ತು. ಕತ್ತಲಾಗಿ ಓದಲು ಮೆತ್ತಿಯಲ್ಲಿದ್ದ ಬೆಳಕು ಸಾಲದೆಯೋ (ಆಗ ಈಗಿನಂತೆ ಕರೆಂಟಿರಲಿಲ್ಲ) ಪುಸ್ತಕ ಮುಗಿದ ಮೇಲೆ ಈ ಲೋಕಕ್ಕೆ ವಾಪಸ್ಸು ಬಂದಿದ್ದಕ್ಕೋ ನಮ್ಮ ಮಾವ ಕೆಳಗಿಳಿದು ಬಂದರಂತೆ. ಆಗ ಒಬ್ಬೊಬ್ಬರಿಗೆ ನಮ್ಮಾವನಿಗೆ ಊಟವೇ ಆಗಿಲ್ಲ ಅನ್ನೋದು ನೆನಪಾಯಿತಂತೆ. ಹಸಿವಿನ ಚಿಂತೆಯೂ ಇಲ್ಲದೇ ಪುಸ್ತಕಲೋಕದಲ್ಲಿ ಮುಳುಗಿ ಹೋಗಿದ್ದರಂತೆ ಮಾವ! ಪುಸ್ತಕಲೋಕದಲ್ಲಿದ್ದಾಗ ಈ ಲೋಕದ ಎಲ್ಲಾ ಚಿಂತೆಗಳೂ ಮರೆಯುತ್ತವೆ ಎಂದರೂ ಅತಿಶಯೋಕ್ತಿಯಿಯಾಗಲಾರದೇನೋ. ಹಸಿವನ್ನೇ ಮರೆತ ಮೇಲಿನದು ಒಂದು ಉದಾಹರಣೆಯಷ್ಟೇ. 

ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಕೆಲವೊಮ್ಮೆ ತಿಂಗಳುಗಟ್ಟಲೇ ಕರೆಂಟಿರಲ್ಲ. ಮಳೆಗಾಲದ ಸಮಯದಲ್ಲಿ ಅಲ್ಲಿಗೆ ರಜೆಗೆ ಹೋದ ಪೇಟೆ ಬದಿ ನೆಂಟರಿಗೆ ಟೈಂ ಪಾಸಾಗೋದೇ ಪುಸ್ತಕಗಳಿಂದ. ಪುಸ್ತಕಗಳೆಂದರೆ ಕಾದಂಬರಿಗಳೆಂದಲ್ಲ. ವಾರಪತ್ರಿಕೆಗಳು, ಪಾಕ್ಷಿಕಗಳು ಕೂಡ ನಮ್ಮ ಆಡುಮಾತಲ್ಲಿ ಪುಸ್ತಕಗಳೇ. "ಏ ನಮ್ಮನೆಗೆ ಬಾರೋ" ಅಂತ ಊರುಮನೆಯವರು ಕರೆದರೆ "ನಿಮ್ಮನೇಲಿ ಎಂತಾರೂ ಪುಸ್ತಕ ಇದ್ದಾ..?" ಅನ್ನೋದೇ ಮೊದಲ್ನೇ ಪ್ರಶ್ನೆ. ನೆಂಟ್ರು ಬರ್ತಾರೆ ಅಂತಾನೆ ಅಲ್ಲ. ಓದುವಿಕೆ ಸಹಜ ಹವ್ಯಾಸ ಅಲ್ಲಿ. ಪೇಟೆಗೆ ಹೋದ್ರು ಅಂದ್ರೆ ಒಂದು ತರಂಗನೋ, ಸುಧಾ, ಕರ್ಮವೀರನೋ ಹಿಡಿದೇ ಬರೋದು. ಮಕ್ಕಳಿಂದ ಹೆಂಗಸರವರೆಗೆ ಎಲ್ರೂ ಓದೋರೆ. ಪಕ್ಕದ ಮನೆಗೆ ಹೋದಾಗ ಅವ್ರ ಮನೆಯ ತರಂಗವನ್ನು ಓದೋಕೆ ತಂದು, ಅವ್ರು ಮನೆಗೆ ಬಂದಾಗ ಇವ್ರ ಮನೆ ಸುಧಾ ತಗೊಂಡು ಹೋಗೋದು ತೀರಾ ಕಾಮನ್ನು ಅಲ್ಲಿ. ಒಟ್ನಲ್ಲಿ ಈ ಪುಸ್ತಕಗಳು/ಮ್ಯಾಗಜೀನ್ಗಳು ಮಕ್ಕಳಲ್ಲಿ ತನ್ನಿಂತಾನೇ ಓದುವಿಕೆಯ ಹವ್ಯಾಸ ಬೆಳೆಸುತ್ತಾ… ಗೊತ್ತಿಲ್ಲ. ಹಳ್ಳಿಯಲ್ಲಿ ಈ ಪತ್ರಿಕೆಗಳ ಮುಖೇನ ಓದುವಿಕೆಯ ಮೊಳಕೆಯೊಡೆದಿದ್ರೆ ಪೇಟೆಯಲ್ಲಿ ಇದಕ್ಕೆ ನೀರೆರಿರೆದ್ದು ಸಂಚಾರಿ ಮತ್ತು ಸಾರ್ವಜನಿಕ ಗ್ರಂಥಾಲಯಗಳು. ಇದರಲ್ಲಿ ಸಂಚಾರಿ ಗ್ರಂಥಾಲಯಗಳು ಬಗ್ಗೆಯಂತೂ ಹೇಳಲೇಬೇಕು.ಸಾಗರದಲ್ಲಿ ಹೆಗಡೆ ಸಂಚಾರಿ ಲೈಬ್ರರಿ ಅಂತ ಇತ್ತು. ಅವರು ಪ್ರತೀ ಎರಡು ಮೂರು ದಿನಕ್ಕೊಮ್ಮೆಯಂತೆ ತಮ್ಮ ಗಾಡಿಯಲ್ಲಿ ಮನೆ ಮನೆಗೆ ಬರೋರು. ಕಾದಂಬರಿಗಳಿಂದ, ಪ್ರತೀ ಮೆಂಬರ್ ಮನೆಗೆ ಇಂತಿಷ್ಟು ಕಾದಂಬರಿ ಅಥವಾ ಮ್ಯಾಗಜೀನೆಂದು ಕೊಡುವರು. ಹಿಂದಿನ ಸಲ ಕೊಟ್ಟದ್ದು ವಾಪಾಸ್ ಪಡೆದು ಹೋಗೋರು.. ಪಠ್ಯಪುಸ್ತಕಗಳಷ್ಟೇ ಬೇರೆ ಪುಸ್ತಕಗಳನ್ನೂ ಓದೋ ಹವ್ಯಾಸವನ್ನು ಹುಚ್ಚಿನಂತೆ ನಮಗೆ ಹಚ್ಚಿದ್ದು ಇದೇ ಎನ್ನಬಹುದೇನೋ.

ಮುಂಚೆಯೇ ಹೇಳಿದಂತೆ ನಮ್ಮನೇಲಿ ಅಪ್ಪ, ಅಮ್ಮ ಹೀಗೆ ಎಲ್ಲಾ ಓದೋರೆ ಆಗಿದ್ದರಿಂದ ತೇಜಸ್ವಿಯವರ ಒಂದು ಹಕ್ಕಿಯ ಕತೆ, ಕರ್ವಾಲೋ, ಯಶವಂತ ಚಿತ್ತಾಲರ ಶಿಕಾರಿ ಬುಕ್ಕುಗಳು ನಮ್ಮ ಮನೆಯಲ್ಲೇ ಇದ್ದರು. ನಾನು ಓದಿದ ಮೊದಲ ಕಾದಂಬರಿ ಒಂದು ಹಕ್ಕಿಯ ಕತೆ ಎಂದೇ ಹೇಳಬಹುದೇನೋ. ಅಲ್ಲಿನ ಕಿವೀ ನಾಯಿ, ಬೇಟೆಯ ಕತೆ ಆಗಲೇ ಇಷ್ಟವಾಗಿತ್ತು. ಸ್ವತಃ ಮಲೆನಾಡಲ್ಲಿ ಹುಟ್ಟಿ ಬೆಳೆದದ್ದರಿಂದಲೋ ಏಕೋ ತೇಜಸ್ವಿಯವರ ಮಲೆನಾಡಿನ ತಿರುಗಾಟಗಳು, ಜೇನು ಪೆಟ್ಟಿಗೆಯ ಹೀಗೆ ಅವರು ಬರೆದಿದ್ದೆಲ್ಲಾ ಭಾವನಾಲೋಕದಲ್ಲಿ ಕರೆದೊಯ್ತಿತ್ತು. ಹೈಸ್ಕೂಲಿಗೆ ಬರುವ ಹೊತ್ತಿಗೆ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ ,ಕಿಂದರಿ ಜೋಗಿ ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಎಂದು ಪಠ್ಯದಲ್ಲಿ ಓದೋಕೆ ಸಿಕ್ಕರೂ ಅವರ ನಾಟಕಗಳನ್ನ ಓದೋಕೆ ಸಿಕ್ಕಿದ್ದು ಹೈಸ್ಕೂಲಿನಲ್ಲೇ. ಜಲಗಾರ, ನನ್ನಗೋಪಾಲನಂತಹ ಕೆಲವು ಕಾದಂಬರಿಗಳನ್ನು ಓದುವ ಹೊತ್ತಿಗೆ ಯಂಡಮೂರಿ ವೀರೇಂದ್ರನಾಥ್ ಕಾದಂಬರಿಗಳನ್ನು ಓದೋ ಗೆಳೆಯರು ಸಿಕ್ಕಿದರು. ಅಜ್ಜಂಪುರ ಸೂರಿ, ಯಂಡಮೂರಿ ಪುಸ್ತಕಗಳಲ್ಲಿ ಯಾಕೋ ವಯಸ್ಕರ, ಸಾಮಾಜಿಕ ವಿಷಯಗಳೇ ತುಂಬಿ, ಕಾದಂಬರಿ ಓದೋದು ಅಂದ್ರೆ ಸಾಮಾಜಿಕ ಕಾದಂಬರಿ ಓದೋದು, ಸಾಮಾಜಿಕ ಕಾದಂಬರಿ ಅಂದರೆ ಕಾಲಹರಟೆಯಷ್ಟೇ. ನಯಾಪೈಸೆ ಬೆಲೆ ಇಲ್ಲ. ವಿದ್ಯಾರ್ಥಿಗಳಿಗೆಂತೂ ಅದು ಕೂಡದು ಅನ್ನೋ ಅಭಿಪ್ರಾಯ ಕೆಲವರ ಮನೇಲಿ. ಪ್ರತ್ಯಕ್ಷವಾಗಿ ಯಾರೂ ನನಗೆ ಹೇಳದಿದ್ದರೂ ಯಾಕೋ ನನ್ನ ಓದು ಎಲ್ಲಾ ತರದ ಪುಸ್ತಕಗಳಿಗೆ ಆವರಿಸದೇ ವಿಸ್ಮಯ ವಿಜ್ಞಾನ, ನಿಗೂಢ ವಿಶ್ವ, ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ವಿಜ್ಞಾನ ಕೋಶ ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಮತ್ತು ಮ್ಯಾಗಜೀನ್ಗಳಿಗೆ ಸೀಮಿತಗೊಂಡಿತು.

ಮತ್ತೆ ಓದೋ ಹುಚ್ಚು ಹತ್ತಿದ್ದು ಪದವಿಯಲ್ಲೇ ಎಂದೆನ್ನಬಹುದು. ಇಂಜಿನಿಯರ್ ಗೆಳೆಯರಲ್ಲಿ ಸಿಕ್ಕ ಸ್ನೇಹಿತರಲ್ಲಿ ಸುಮಾರು ಜನ ಹ್ಯಾರಿ ಪಾಟರ್ ಅಭಿಮಾನಿಗಳು. ಅದರ ಆ ಭಾಗ ಹಾಗಿದೆ, ಈ ಭಾಗ ಹೀಗಿದೆ ಎಂದೇ ಮಾತುಕತೆ. ಅದು ಅಷ್ಟೇನೂ ಹುಚ್ಚು ಹತ್ತಿಸಿದಿದ್ದರೂ ಡಾನ್ ಬ್ರೌನ್ ನ ಆಂಜೆಲ್ಸ್ ಅಂಡ್ ಡೆಮನ್ಸ್ ಮತ್ತೆ ಪುಸ್ತಕಲೋಕಕ್ಕೆ ಸೆಳೆಯಿತು ಎಂದೇ ಅನ್ನಬಹುದೇನೊ. ಪೀಯುಸಿಯಲ್ಲಿ ಓದಿದ್ದ ಸೂಪರ್ ಕಂಡಕ್ಟಿವಿಟಿಯಂತಹ ವಿಷಯಗಳನ್ನೂ ಒಂದು ಕಾದಂಬರಿ ಮಾಡಿದ್ದು.. ವಿಜ್ಞಾನದ ವಿದ್ಯಾರ್ಥಿಯಾದ ನನಗೆ ತಿಳಿಯದೇ ಇಷ್ಟವಾಯಿತೋ ಗೊತ್ತಿಲ್ಲ, ಒಟ್ಟು ಅದು ಇಷ್ಟವಾಯಿತು. ಅವನ ಡಿಜಿಟಲ್ ಫೋರ್ಟೆಸ್, ಲಾಸ್ಟ್ ಸಿಂಬಲ್, ಡಾವಿನ್ಸಿ ಕೋಡ್, ಡಿಸೆಪ್ಟನ್ ಪಾಯಿಂಟ್ ಹೀಗೆ ಐದು ಪುಸ್ತಕಗಳೂ ಓದಿಸಿಕೊಂಡವು. ಅದೇ ಸಮಯದಲ್ಲಿ ಒಂದು ಸ್ಪರ್ಧೆಯಲ್ಲಿ ನನಗೆ ಬಹುಮಾನವಾಗಿ ಬಂದ ರಾಬಿನ್ ಶರ್ಮನ ಮಾಂಕ್ ಹೂ ಸೋಲ್ಡ್ ಹೀಸ್ ಫೆರಾರಿಯೂ ಓದಿಸಿಕೊಂಡಿತು. ಅದು ಪ್ರಪಂಚದ ಎಲ್ಲಾ ಭಾಷೆಗಳಿಗೂ ಅನುವಾದವಾಗಿದ್ದು, ಬೆಸ್ಟ್ ಸೆಲ್ಲರ್ ಎನಿಸಿಕೊಂಡಿದ್ದು ಬೇರೆ ಮಾತು. ಆಮೇಲೆ ಪರಿಚಯವಾಗಿದ್ದು ಪಾಲ್ ಕೊಹ್ನಿಮೋ. ಅವನ ಜಗತ್ಪ್ರಸಿದ್ದ ಕಾದಂಬರಿ ಅಲ್ಕೆಮಿಸ್ಟ್. ಆಧ್ಯಾತ್ಮ, ತತ್ವಶಾಸ್ತ್ರವನ್ನು ಹೇಳತೊಡಗಿಯೂ ಎಲ್ಲೂ ಬೋರೆನಿಸದೇ ಓದಿಸಿಕೊಂಡ ಪುಸ್ತಕ. ಹಾಗೆಯೇ ಸಿಡ್ನಿ ಶೆಲ್ಡನಿನ ಟೆಲ್ ಮಿ ಯುವರ್ ಡ್ರೀಮ್ಸ್. ಬರೀ ಇಂಗ್ಲೀಷಿನದೇ ಕತೆ ಹೇಳ್ತಿದ್ದಾನೆ ಅಂತ ಬಯ್ತಾ ಇದೀರಾ ? ಯಾಕೋ ಗೊತ್ತಿಲ್ಲ. ಗ್ರಂಥಾಲಯಗಳಿಗೆ ಮಾತ್ರ ಸೀಮಿತಗೊಂಡ ನಿನ್ನೆಗಳ ಕನ್ನಡ ಕಾದಂಬರಿಗಿಂತ ಇಂದು, ನಾಳೆಯ ಬಗೆಗಿನ, ಎಲ್ಲೆಂದರಲ್ಲಿ ಕೈಗೆಟುಕುತ್ತಿದ್ದ ಇಂಗ್ಲೀಷ್ ಕಾದಂಬರಿಗಳೇ ಇಷ್ಟವಾಗುತ್ತಿದ್ದವು ಆಗ…

ಹಾಗೇ ರಜ ಬಂತು. ರಜಾಕ್ಕೆ ಬೇಜಾರು ಕಳೆಯಲೆಂದು ಗೆಳೆಯನಿಂದ ಪಡೆದ ಪಿಢಿಎಫ್ಗಳಲ್ಲಿ ತೇಜಸ್ವಿಯವರದ್ದೂ ಇತ್ತು. ರಜಾ ಅಂದ್ರೆ ಸಾಗರದ ಲೈಬ್ರರಿಗೆ ದಾಳಿ ಇಡೋದು ಕಾಯಂ ಹವ್ಯಾಸ. ಸೈಕಲ್ ಹೊಡ್ಕೊಂಡು ಐದಾರು ಕಿ.ಮೀ ಲೈಬ್ರರಿಗೆ ಬಂದರೆ ಆಮೇಲೆ ಹನ್ನೊಂದುವರೆಗೆ ಅದು ಬಾಗಿಲು ಹಾಕೋ ಹೊತ್ತಿಗೆ ಅಥವಾ ಸಂಜೆ ಬಂದರೆ ಅದು ಏಳೂವರೆಗೆ ಬಾಗಿಲು ಹಾಕೋ ಹೊತ್ತಿಗೇ ಹೊತ್ತಿಗೆ ಹೋಗ್ತಿದ್ದ ನನ್ನಂತ ಸುಮಾರು ಹುಡುಗರಿದ್ದಿರಬಹುದು. ರಜಾವಾದ್ದರಿಂದ ಮನೆಯಲ್ಲೂ ಏನೂ ಹೇಳ್ತಿರಲಿಲ್ಲ. ಆ ಸಮಯದಲ್ಲೇ ಬೇಂದ್ರೆಯವರ ನಾಕುತಂತಿ, ಯು.ಆರ್ ಅನಂತಮೂರ್ತಿಯವರ ಭವ, ಸಂಸ್ಕಾರ, ತೇಜಸ್ವಿಯವರ ಚಂದ್ರನ ಚೂರು… ಹೀಗೆ ಮತ್ತೆ ಕನ್ನಡ ಪುಸ್ತಕಗಳನ್ನ ಓದಿದ್ದು. ಲಿಯೋ ಟಾಲ್ ಸ್ಟಾಯ್ನ ಹಕ್ಲಬರಿ ಫಿನ್ನನ ಕತೆಗಳು, ಟೇಲ್ ಆಫ್ ಟೂ ಸಿಟೀಸ್ ಕೂಡ ಅದೇ ಸಮಯದಲ್ಲಿ ಓದಿದ್ದು. ಶೇಕ್ ಸ್ಪಿಯರ್ನ ನಾಟಕಗಳನ್ನು ಕೂಡ ಓದಬೇಕೆಂದಿತ್ತು. ಆದರೆ ಯಾಕೋ ಆಗಲಿಲ್ಲ.

ಬೆಂದಕಾಳೂರಿಗೆ ಬಂದ ಮೇಲೆ ಯಾಕೋ ಓದೋ ಹವ್ಯಾಸ ಸತ್ತೇ ಹೋಯಿತು ಅನ್ನುವಷ್ಟು ಕಮ್ಮಿಯಾಯಿತು. ಲೈಬ್ರರಿಗಳನ್ನು ಹುಡುಕಿಕೊಂಡು ಎಲ್ಲೆಲ್ಲೋ ದೂರ ದೂರ ಅಲೆಯಬೇಕಾದದ್ದು ಒಂದು ಕಾರಣವಾಗಿರಬಹುದು. ಇಂಗ್ಲೀಷ್ ಓದೋದ್ನ ಬಿಟ್ಟೇ ಬಿಡು ಎಂಬ ಗೆಳೆಯರ ಮಾತಿನ ಮಧ್ಯೆಯೂ ಓದುವಿಕೆಯನ್ನು ಜೀವಂತವಿಟ್ಟಿದ್ದ ಶ್ರೇಯ ಅಮೀಶಿನ ಶಿವ ಟ್ರೈಲಜಿ, ತೇಜಸ್ವಿಯವರ  ಬುಕ್ಕುಗಳಿಗೆ ಸಲ್ಲಬೇಕೆನಿಸುತ್ತೆ. ಪುಸ್ತಕಗಳೆಂದರೆ ಕನ್ನಡದ್ದು ಮಾತ್ರ ಅನ್ನೋದು ಕೆಲವರ ಭಾವನೆ. ಕನ್ನಡದಲ್ಲಿ ಬರೆಯಬೇಕು ಅಂದರೆ ಕನ್ನಡ ಸಾಹಿತ್ಯದ ಅಧ್ಯಯನಶೀಲತೆ ಇರಬೇಕು, ಸುಮ್ಮನೇ ಬರೆಯೋದಲ್ಲ ಎಂದು ಎಷ್ಟೋ ಜನ ಬಯ್ಯುತ್ತಿದ್ದರು, ಬಯ್ಯುತ್ತಾರೆ ಕೂಡ. ನಾ ಬರೆದ ಬರಹಗಳೇ ಎಷ್ಟೋ ಸಮಯದ ಮೇಲೆ ನೋಡಿದಾಗ ಸಪ್ಪೆಯೆನಿಸುತ್ತೆ . ಆದರೆ ಇದೊಂದನ್ನ ಮಾತ್ರ ಓದು ಅನ್ನೋ ಮಾತುಗಳು ಯಾಕೋ ಮೆಚ್ಚುಗೆಯಾಗೋಲ್ಲ. ಇಂಗ್ಲೀಷಿನ ರವೀಂದ್ರ ಸಿಂಗ್ರ ಐ ಟೂ ಹ್ಯಾಡ್ ಅ ಲವ್ ಸ್ಟೋರಿ, ಕ್ಯಾನ್ ಲವ್ ಹ್ಯಾಪನ್ ಟ್ವೈಸ್ ಓದಿದ ಮಾತ್ರಕ್ಕೆ ಚೇತನ್ ಭಗತ್ ನ ಐದು ಪುಸ್ತಕಗಳನ್ನ ಓದಿದ ಮಾತ್ರಕ್ಕೆ ಕನ್ನಡದ ಭೈರಪ್ಪನವರ ಆವರಣ, ಭಿತ್ತಿ, ದಾಟು, ಕವಲು ಓದಬಾರದೆಂದೇನಿಲ್ಲವಲ್ಲ. ಹಿಂದಿನ ಬಾರಿಯ ರಜೆಯಲ್ಲಿ ಓದಿದ ಪುಸ್ತಕ ಕವಲು. ಈಗ ಸದ್ಯ ಓದುತ್ತಿರೋ ಪುಸ್ತಕ ಭಿತ್ತಿ. ರವಿ ಬೆಳೆಗೆರೆಯವರ ಹಿಮಾಲಯನ್ ಬ್ಲಂಡರ್ ಓದಲು ಇನ್ನೂ ಆಗಿಲ್ಲ… ಅಡಿಗರ ಕವನಗಳು, ಜಿ.ಎಸ್ ಶಿವರುದ್ರಪ್ಪನವರದ್ದು ಹೀಗೆ ಮೆಚ್ಚಿದ್ದು ಓದದ್ದು ಬಹಳ ಇವೆ.. ಆದರೆ.. ಒಂದೇ ತೊಂದರೆ ಅಂದರೆ ಎಲ್ಲವನ್ನೂ ಕೊಂಡು ಓದಬೇಕು. ಇಲ್ಲಾ ಎಲ್ಲೋ ಇರುವ ಗ್ರಂಥಾಲಯಗಳನ್ನು ಹುಡುಕಿ ಸಾಗಬೇಕು.

ಹಳೆಯ ಕಾಲದವರು ಒಪ್ಪಿ, ಬಿಡಿ, ಪುಸ್ತಕಗಳೆಂದರೆ ವಾಚನಾಲಯಗಳಿಗೆ/ಗ್ರಂಥಾಲಯಕ್ಕೇ ಹೋಗಬೇಕೆಂಬ ಕಾಲದಲ್ಲಿಲ್ಲ ನಾವೀಗ. ನೋಕಿಯಾ ೨೭೦೦ ಸೆಟ್ಟಿನಲ್ಲೂ ಓದಲು ಸಾಧ್ಯವಾಗುವಂತಹ ಈ ಬುಕ್ಕುಗಳು, ಬುಕ್ಕುಗಳನ್ನ ಓದೋಕೆಂದೇ ಬಂದಿರೋ ಕಿಂಡಲ್ ನಂತಹ ಓದುಗ ಸಾಧನಗಳು ಈಗ ಮತ್ತೆ ಓದುವಿಕೆಯತ್ತ ಯುವಜನರನ್ನ ಸೆಳೆಯುತ್ತಿದೆ. ಮಹಮ್ಮದ್ ಹುಸೇನಿಯ ಕೈಟ್ ರನ್ನರ್ ಅನ್ನೋ ಕಾದಂಬರಿಯನ್ನು ಬಸ್ಸಲ್ಲಿ ಹೋಗುತ್ತಿರುವಾಗ ಮೊಬೈಲಲ್ಲಿ ಓದಿಯೇ ಮುಗಿಸಿದ್ದಿದೆ. ಡೆಲ್ಲಿಗೆ ರೈಲಿನಲ್ಲಿ ಹೋಗುತ್ತಿದ್ದಾಗ ಸಮಯ ಕಳೆಯಲೆಂದೇ ಈ ಬುಕ್ ರೀಡರನ್ನೋ, ಪುಸ್ತಕಗಳನ್ನೋ ಹಿಡಿದು ಮಲಗಿರುತ್ತಿದ್ದ ಸುಮಾರು ಯುವಕ/ಯುವತಿಯರನ್ನು ಕಂಡಿದ್ದೆ. ಆಗೆಲ್ಲಾ ಅನಿಸಿದ್ದೊಂದೇ. ಓದುವ ಹವ್ಯಾಸ ಕಮ್ಮಿಯಾಗುತ್ತಿದೆ, ಯುವಜನರಲ್ಲಂತೂ ಅದು ಸತ್ತೇ ಹೋಗುತ್ತಿದೆ ಅಂತಾರೆ ಕೆಲೋರು. ಅದು ತಪ್ಪು. ಓದೋ ಆಯಾಮಗಳು ಬದಲಾಗುತ್ತಿವೆ ಅಷ್ಟೇ ಅಂತ ಅನಿಸುತ್ತೆ. ಎಲ್ಲಾ ಪುಸ್ತಕಗಳನ್ನೂ ಪಿಡಿಎಫ್ ಮಾಡಿದರೆ ಪ್ರಕಾಶಕರಿಗೆ, ಲೇಖಕರಿಗೆ ನಷ್ಟವೆಂಬುದನ್ನ ಒಪ್ಪುತ್ತೇನೆ. ಆದರೆ ಗ್ರಂಥಾಲಯದಲ್ಲಿ ಮೆಂಬರ್ಶಿಪ್ ಪಡೆದು ಓದುವಂತೆ ಅಂತರ್ಜಾಲದಲ್ಲೂ ಮೆಂಬರ್ ಶಿಪ್ ಪಡೆದು ಕನ್ನಡ ಪುಸ್ತಕಗಳನ್ನು ಆನ್ಲೈನಿನಲ್ಲಿ ಓದುವ ಅವಕಾಶ ಸಿಕ್ಕರೆ ಸಮಯದ ಅಭಾವದಿಂದಲೋ, ಇನ್ಯಾವುದರಿಂದಲೋ ಗ್ರಂಥಾಲಯಗಳಿಂದ ಮಾರು ದೂರ ಓಡುತ್ತಿರುವ ಯುವ ಜನತೆ ಮತ್ತೆ ಕನ್ನಡ ಪುಸ್ತಕಲೋಕದತ್ತ ಆಕರ್ಷಿತವಾಗಬಹುದು ಎಂದೂ ಅನಿಸುತ್ತೆ. ಸುಲಭವಾಗಿ ಸಿಕ್ಕೋದು, ತಮ್ಮ ಅಭಿರುಚಿಗೆ ಹಿಡಿಸೋದನ್ನೇ ಓದೋದು ಯುವಕರು.

ಅಂದ ಹಾಗೆ ಕನ್ನಡ ಲಿಪಿಯಲ್ಲಿ ಇಂಗ್ಲೀಷ್ ಸಾಹಿತ್ಯದ ಹೊಗಳುಭಟ್ಟಂಗಿಯ ತರ ಬರೆದಿದ್ದೇನೆ ಎಂದು ತಮ್ಮಲ್ಲನೇಕರು ಭಾವಿಸಿರಬಹುದು. ದಯವಿಟ್ಟು ಕ್ಷಮಿಸಿ. ಪುಸ್ತಕ ಪ್ರಪಂಚದಲ್ಲಿ ನನ್ನ ಮೈಮರೆಸಿದ ಕೆಲವನ್ನು ಕುರಿತು ಬರೆದಿದ್ದೇನೆ. ನಟ್ಟು ಭಾಯಿಯ ಪತ್ರ ಪ್ರಸಂಗದಿಂದ ಕವಯಿತ್ರಿಯೊಬ್ಬಳ ಕವನ ಸಂಕಲನದವರೆಗೆ, ಪ್ರಸನ್ನನ ಜೀನ್ ಕತೆಯಿಂದ ಆದಿ, ಗೋಪುವಿನ ಬುಕ್ಕುಗಳವರೆಗೆ ಓದಬೇಕಾದ್ದು ಬೇಕಷ್ಟಿವೆ. ತಕ್ಷಣಕ್ಕೆ ತೋಚಿದ ಗೀಚುಗಳಿಷ್ಟು ಅಷ್ಟೇ.. ಸರಿ ಸಾರ್.. ಹೊರಟೆ .. ಭೈರಪ್ಪನವರ ಭಿತ್ತಿ .. ಕಾಯ್ತಾ ಇದೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ ಅಂಕಣ

  1. ಧನ್ಯವಾದಗಳು . ನಿಮ್ಮೂರು ನಿಮ್ಮ ಹೆಸ್ರಲ್ಲೇ ಗೊತ್ತಾತು ಬಿಡಿ :-).. ನನ್ನೂರು ಕೆಳದಿ ಹತ್ರ 🙂

  2. ಒದಿದ್ದನ್ನ ಚೆನ್ನಾಗಿ ಬರೆದಿದ್ದೀಯಾ…:)
    ಒಂದು ಸಣ್ಣ ತಪ್ಪು.. ಮಾರ್ಕ್ ಟ್ವೇನ್ದು ಹಕಲ್ಬೆರೀ ಫಿನ್ ಮತ್ತೆ ಚಾರ್ಲ್ಸ್ ಡಿಕೆನ್ಸ್ ದು 'ಟೇಲ್ ಆಫ್ ಟು ಸಿಟೀಸ್'

    1. ವಾರ್ ಅಂಡ್ ಪೀಸ – ಟಾಲ್ಸ ಟಾಯ್,
      ಟೇಲ್ ಆಫ್ ಟೂ ಸಿಟೀಸ್ — ಚಾರ್ಲ್ಸ್ ಡಿಕನ್ಸ್
      ಹಕ್ಲಬರಿ ಫಿನ್ಸ್ — ಮಾರ್ಕ್ ಟ್ವೇನ್ .. ಅಂತ ಆಗ್ಬೇಕಿತ್ತು.. ತಪ್ಪಾಗಿದ್ದಕ್ಕೆ ಕ್ಷಮಿಸಿ 

  3. ನಿಮ್ಮ ಪುಸ್ತಕಪ್ರೀತಿ ಕಂಡು ಬಹಳ ಖುಷಿಯಾಯ್ತು! ಆದರೆ "ಇಂಗ್ಲೀಶ್ ಪುಸ್ತಕಗಳು ಇಷ್ಟ" ಅನ್ನುವುದರ ಬಗ್ಗೆ "ಅಪಾಲಜೆಟಿಕ್" ಆಗುವ ಅವಶ್ಯಕತೆ ಇಲ್ಲ ಅಂತ ನನ್ನ ಅನಿಸಿಕೆ…

  4. ಹ ಹ ವಾಸುಕಿ ಅವರೇ.. "ಅಪಾಲಜಿಕ್" ಅಂತೇನಿಲ್ಲ.. ಆದ್ರೆ ಇಲ್ಲೇ ಹುಟ್ಟಿ ಬೆಳೆದು ಬೇರೆದ್ರ ಬಗ್ಗೆ ಬರೆದ್ರೆ ಯಾಕೋ ಇಷ್ಟ ಆಗಲ್ಲ ಸುಮಾರು ಜನರಿಗೆ. ಹಾಗಾಗಿ ಮುಂಚೇನೆ ಹೇಳ್ಬಿಟ್ಟೆ..

  5. ನಿಮ್ಮ ಪುಸ್ತಕಪ್ರೀತಿ ಕಂಡು ಬಹಳ ಖುಷಿಯಾಯ್ತು! 
    ನಾನೂ ಪುಸ್ತಕ ಪ್ರಿಯಳು..
    ಬಾಲ್ಯದಲ್ಲಿ ಹಲವು ಸಂಧರ್ಭಗಳಲ್ಲಿ ಕತೆಪುಸ್ತಕ ಓದುತ್ತಾ ಇಹ ಪರ ಮರೆತದ್ದಿದೆ..
    ಈಗ ಏನಿದ್ದರೂ ಓದು ಟಿ.ವಿ ಯಿಂದ ಕಡಿತಗೊಂಡಿದೆ..
    Prashantavana..

  6. ತುಂಬಾ ಧನ್ಯವಾದಗಳು ಶಾರದಕ್ಕ 🙂
    ನಿಮ್ಮೆಲ್ಲರ ಮೆಚ್ಚುಗೆ ಕಂಡು ಖುಷಿಯಾಗುತ್ತಿದೆ

Leave a Reply

Your email address will not be published. Required fields are marked *