ಪುಷ್ಪ: ಈಶ್ವರ ಭಟ್ ಕೆ


ಇತ್ತೀಚೆಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬರುತ್ತಿರುವ ಸುದ್ಧಿಗಳನ್ನು ನೋಡುತ್ತಾ, ನಿರೀಕ್ಷೆಗೂ ಮೀರಿ ಜಗತ್ತು ಬೆಳೆದರೂ ವಾಹಿನಿಗಳಲ್ಲಿ ಸುದ್ಧಿಯೇ ಆಗದ ಒಂದು ಕತೆಯಿದೆ. ನಮ್ಮೂರಿನ ಪುಷ್ಪಕ್ಕ ದಿನ ಕಳೆದಂತೆ ಜನರಿಗೆ ಅಚ್ಚರಿಯೂ ಜನರ ಅನುಕಂಪಕ್ಕೂ ಕಾರಣಳಾಗಿ ಉಳಿದ ಕತೆ. ಈ ಕತೆ ಹೇಳುವ ನನಗೆ ಆಗ ಹದಿನೇಳು ವಯಸ್ಸು, ಈಗ ಇಪ್ಪತ್ತೆಂಟು. ಈ ಪುಷ್ಪಕ್ಕ ಎನ್ನುವ ನನ್ನ ಕತೆಯ ನಾಯಕಿಯ ಪೂರ್ಣ ಹೆಸರು ಪುಷ್ಪಲತ.

ಊರು ಎರಡು ಮೂರು ಬೆಟ್ಟಗಳ ನಡುವಿನ ಗ್ರಾಮ. ವಿಶಾಲವಾದ ಗ್ರಾಮದಲ್ಲಿ ಸುಮಾರು ನಲುವತ್ತು ಮನೆಗಳಷ್ಟೇ. ಸಹಜ ಸುಂದರವಾದ ಬೆಟ್ಟಗಳು, ಕೊರಕಲುಗಳು. ಆ ಬೆಟ್ಟಗಳನ್ನು ಹತ್ತಿ ಇಳಿದೇ ನಾವು ದಾರಿ ಸವೆಸಬೇಕು. ಹೆಚ್ಚಾಗಿ ಇಂತಹಾ ದಾರಿಗಳಲ್ಲಿ ಸಂಜೆ ಏಳರ ನಂತರ ಜನಸಂಚಾರ ಅತ್ಯಂತ ವಿರಳ. ಒಬ್ಬರೋ ಇಬ್ಬರೋ ನಡೆದಾಡಬಹುದಷ್ಟೆ. ಊರಿನಲ್ಲಿ ಹೆಚ್ಚಿನದು ಕೂಡುಕುಟುಂಬದ ವ್ಯವಸ್ಥೆಗಳೇ. ಇದ್ದಂತಗ ಎರಡು ಮೂರು ಎಕರೆ ಭೂಮಿಯಲ್ಲಿ ಐದಾರು ಮನೆಕಟ್ಟಿಕೊಳ್ಳುವುದು ಅಷ್ಟು ಲಾಭದಾಯಕವಾಗಿಯೂ ಇರಲಿಲ್ಲ. ತೆಂಗು ಕಂಗುಗಳಷ್ಟೇ ಬೆಳೆಯೂ.

ಅತ್ಯಂತ ಹತ್ತಿರದಲ್ಲಿ ಮನೆಗಳಿದ್ದಿದ್ದು ಒಂದೋ ಎರಡೋ. ಮತ್ತೆಲ್ಲವೂ ದೂರ ದೂರ. ಹತ್ತಿರದಲ್ಲಿದ್ದ ಇಂತಹಾ ಒಂದು ಮನೆ ಪುಷ್ಪಕ್ಕನದ್ದು. ಅಲ್ಲಿಂದ ಸುಮಾರು ನೂರೈವತ್ತು ಮೀಟರ್ ದೂರದಲ್ಲಿ ನಮ್ಮ ಮನೆ. ಜೋರಾಗಿ ಮಾತನಾಡಿದರೂ ಕೇಳುವಷ್ಟು ನೀರವ ಮೌನವಿರುತ್ತಿತ್ತು ರಾತ್ರಿಗಳಲ್ಲಿ.

ಪುಷ್ಪಲತ, ತಾಯಿ ತಂದೆಯರಿಲ್ಲದ ಅನಾಥೆಯೂ ಅಲ್ಲದ ಹುಡುಗಿ. ತಂದೆ ಪುಷ್ಪಳ ಸಣ್ಣ ಪ್ರಾಯದಲ್ಲೇ ತೀರಿಹೋಗಿದ್ದರೆ ತಾಯಿ ಐದಾರು ವರ್ಷದ ಹಿಂದೆ ಗತಿಸಿದ್ದಳು. ಪುಷ್ಪ ಓದುವುದರಲ್ಲಿ ಚುರುಕಲ್ಲದಿದ್ದರೂ ದಡ್ಡಿಯಲ್ಲ. ಈಗ ಇಪ್ಪತ್ತರ ಮೇಲೆ ವಯಸ್ಸಾಗಿದ್ದವಳು. ಮನೆಯಲ್ಲಿ ಬೇರೆ ಸಮವಯಸ್ಕರಿಲ್ಲದ್ದಕ್ಕೋ ಏನೋ ಒಬ್ಬಂಟಿಯಾಗಿದ್ದಂತೆ ಇದ್ದಳು. ಸ್ವಲ್ಪ ಊದಿಕೊಂಡೂ ಓದಿಕೊಂಡೋ ಇದ್ದವಳವಳು. ಮನೆಯಲ್ಲಿ ದೊಡ್ಡಣ್ಣ ರಮೇಶ ಮತ್ತು ಅತ್ತಿಗೆ ಮತ್ತು ಇನ್ನೊಬ್ಬ ಅಣ್ಣ ಜಯಂತ. ಸುಮಾರು ಹತ್ತನೇ ಕ್ಲಾಸಿನ ವರೆಗೆ ಓದಿದ ಪುಷ್ಪ ತಾಯಿ ತೀರಿಕೊಂಡ ಮೇಲೆ ಓದುವುದನ್ನ ಬಿಟ್ಟಳು. ಬೀಡಿ ಕಟ್ಟುವುದು ಅವಳ ಮುಖ್ಯ ಕಸುಬಾಯಿತು. ಅತ್ತಿಗೆ ವನಜಳೊಂದಿಗೆ ಜಗಳವೂ ನಿತ್ಯನೂತನವಾಯಿತು. ವನಜಳಂತೂ ದೂರದ ಸಂಬಂಧವೇ ಆಗಬೇಕು, ಆದರೆ ಅವಳೇ ಮುಖ್ಯ ಸ್ತ್ರೀಪಾತ್ರಧಾರಿಯಾದ್ದರಿಂದ ಮನೆಯಲ್ಲಿ ಇನ್ನೊಬ್ಬಳು ಸಿಕ್ಕಿದ್ದು ಪುಷ್ಪಳಾದ್ದರಿಂದ ಜಗಳವಾಗಲೇ ಬೇಕಾಯಿತು. ಸಣ್ಣಣ್ಣ ಜಯಂತನಿಗೆ ಮದುವೆಯಾಗಿರಲಿಲ್ಲ. ವಯಸ್ಸೂ ಸುಮಾರು ಮೂವತ್ತರಷ್ಟಾಗಿತ್ತು. ಅವನು ತನ್ನ ಕೆಲಸವಾಯಿತು, ತನ್ನ ತಿರುಗಾಟವಾಯಿತು ಎಂದುಕೊಂಡು ಮನೆಗೆ ಬಂದು ಊಟ ಮಾಡಿ ಮಲಗುವುದನ್ನು ಅಭ್ಯಾಸಮಾಡಿಕೊಂಡಿದ್ದ.

ಟೈಲರಿಂಗ್ ಕಲಿತಿದ್ದಳು ಪುಷ್ಪ. ಹಾಗೇ ಹೆಚ್ಚಿನವರ ಸುಲಭದ ಉದ್ಯೋಗವಾದ ಬೀಡಿ ಕಟ್ಟುವುದನ್ನೂ. ಪುಷ್ಪ ಸಂಜೆಯಾಗುತ್ತಿದ್ದಂತೆ ಕಟ್ಟಿದ ಬೀಡಿಗಳನ್ನು ತೆಗೆದುಕೊಂಡು ಹೀಗೇ ಎರಡು ಮೈಲಿ ದೂರದಲ್ಲಿದ್ದ ಬೀಡಿ ಬ್ರಾಂಚ್ ಗೆ ಹೋಗಿ ಬರುತ್ತಿದ್ದಳು. ಊರಿನ ಅದೆಷ್ಟೋ ಸಮವಯಸ್ಕ ಹುಡುಗಿಯರನ್ನು ಭೇಟಿಯಾಗುತ್ತಿದ್ದಳು, ದಾರಿಯಲ್ಲಿ ಅದೆಷ್ಟೋ ಮದುವೆಯ ಬಗೆಗಿನ ಮಾತು, ತೆಗೆದುಕೊಂಡ ಹೊಸಾ ನೈಟಿಯ ಬೆಲೆ ಇತ್ಯಾದಿ ಚರ್ಚೆಯಾಗುತ್ತಿತ್ತು. ಅದಲ್ಲದೇ ದಾರಿಯಲ್ಲಿ ಸಿಗುವಂತಹ ಕೆಣಕುನೋಟಗಳು, ಹುಡುಗರ ಆಟಗಳನ್ನೆಲ್ಲಾ ನೋಡಿಕೊಂಡು ದಾರಿಯ ಶ್ರಮವಿಲ್ಲದೇ ಮನೆಗೆ ಬರುತ್ತಿದ್ದಳು.

ಎಂದಿನಂತೆ ಯಾವತ್ತೂ ಇದ್ದರೆ ಜಗತ್ತಿನಲ್ಲಿ ಬದಲಾವಣೆ ಎನ್ನುವುದಕ್ಕೆ ಬೆಲೆ ಇಲ್ಲದೇ ಹೋದೀತು. ಒಂದು ದಿನ ಹೀಗೇ ಪುಷ್ಪ ಬೀಡಿಗೆಂದು ಹೋದವಳು ಸಂಜೆ ಬರಲೇ ಇಲ್ಲ. ನಮ್ಮ ಮನೆಗೂ ರಮೇಶ ಹುಡುಕಿಕೊಂಡು ಬಂದಾಗಲೇ ತಿಳಿದದ್ದು. ರಾತ್ರಿ ಎಂಟುಘಂಟೆಯಾದರೂ ಬರದಿದ್ದುದರಿಂದ ಸಾಧ್ಯವಿದ್ದೆಡೆಯೆಲ್ಲಾ ಹುಡುಕಿಯಾಯಿತು. ಪುಷ್ಪ ನಾಪತ್ತೆ. ರಾತ್ರಿಯಾದುದರಿಂದ ಹುಡುಕುವುದೂ ಅಸಾಧ್ಯವಾಗಿತ್ತು. ಬೀಡಿ ಬ್ರಾಂಚಿನವರೆಗೂ ಹೋಗಿ ಬಂದಾಯಿತು. ಬೀಡಿ ಕೊಟ್ಟು ವಾಪಸ್ಸು ಹೋಗಿದ್ದಾಳೆ ಎಂಬ ವಿಷಯ ಮಾತ್ರ ತಿಳಿಯಿತು. ಅವಳು ಹೋಗುವ ಸಾಧ್ಯತೆ ಇರುವ ಎಲ್ಲಾ ಜಾಗಗಳಿಗೂ ಹೋಗಿಯಾಯಿತಾದರೂ ಪುಷ್ಪಳ ಪತ್ತೆ ಇರಲಿಲ್ಲ. ಹಾಗೆಂದು ಹೇಳದೇ ಕೇಳದೇ ಬೇರೆಡೆಗೆ ಹೋಗುವವಳೂ ಅಲ್ಲ, ಮತ್ತೆ ಬೇರೆಡೆಗೆ ಹೋಗಲು ಒಬ್ಬಳಿಗೆ ಸಾಧ್ಯವೂ ಇರಲಿಲ್ಲ, ಏಕೆಂದರೆ ನೆಂಟರ ಮನೆಗಳೆಲ್ಲಾ ದೂರವಿತ್ತು.

ಆ ರಾತ್ರಿ ಬರಲೇ ಇಲ್ಲ ಪುಷ್ಪ. ಬೆಳಗ್ಗಿನ ಜಾವ ಸುಮಾರು ಐದು ಘಂಟೆಗೆ ಈ ಪುಷ್ಪ ನರಳುತ್ತ ನಮ್ಮ ಮನೆಯ ಅಂಗಳಕ್ಕೆ ಬಂದಿದ್ದಳು. ನಸುಕಿನಲ್ಲೇ ಏಳುವ ಅಮ್ಮನಿಗೆ ಪುಷ್ಪಳ ಗುರುತು ಸಿಕ್ಕಿತು. ಯಾವುದೋ ಕೆಟ್ಟ ಘಟನೆಯಿಂದಾಗಿ ಸಂಪೂರ್ಣವಾಗಿ ನಲುಗಿಹೋಗಿದ್ದಳು ಪುಷ್ಪ. ಕೂದಲು ಕೆದರಿದ, ನತದೃಷ್ಟೆ ಪುಷ್ಪನನ್ನು ನನ್ನ ಅಮ್ಮನೇ ಉಪಚರಿಸಿದಳು. ಬಿಸಿನೀರಿಟ್ಟು ಸ್ನಾನ ಮಾಡಿಸಿ, ಊಟ ಕೊಟ್ಟು ಹೇಗೋ ನಿದ್ದೆ ಮಾಡುವಂತೆ ಮಾಡಿದಳು.

ಆ ದಿನ ಅತ್ಯಂತ ಘೋರವಾಗಿತ್ತು ರಮೇಶನಿಗೆ. ಬೆಳಗ್ಗಿನಿಂದಲೇ ಹುಡುಕುತ್ತಿದ್ದ ಪುಷ್ಪಳನ್ನು, ಕೊನೆಗೆ ನಮ್ಮ ಮನೆಗೆ ಬಂದಿರುವ ಸುದ್ಧಿ ತಿಳಿದಂತೇ ಓಡೋಡಿ ಬಂದ. ಆಘಾತದಿಂದ ಚೇತರಿಸಿಕೊಳ್ಳಲಾಗಲಿಲ್ಲ ರಮೇಶನಿಗೆ. ನನ್ನ ಅಪ್ಪ ಮತ್ತು ಅಮ್ಮ ಸೇರಿ ಈ ವಿಷಯವನ್ನು ಯಾರಿಗೂ ಹೇಳದಂತೆ ಮತ್ತು ಪುಷ್ಪ ತಕ್ಕಮಟ್ಟಿಗೆ ಸುಧಾರಿಸುವ ವರೆಗೆ ಇಲ್ಲಿಯೇ ಇರಲಿ ಎಂದು ಸಮಾಧಾನ ಮಾಡಿ ಕಳುಹಿಸಲಾಯಿತು. ಆ ದಿನ ಸಂಜೆ ಪುಷ್ಪಳನ್ನು ಅವಳ ಮಾವನ ಮನೆಗೆ ಹೋಗಿ ಎರಡು ದಿನಕ್ಕೆಂದು ಬಿಟ್ಟು ಬಂದಾಯಿತು.

ಮೊದಲ ದಿನ ಸಂಜೆ ಬೀಡಿ ಕೊಟ್ಟು ಬರುತ್ತಿದ್ದಂತೆ ಇಬ್ಬರು ತರುಣರು ಪುಷ್ಪಳನ್ನು ಎಳೆದುಕೊಂಡು ಬೆಟ್ಟದ ತುದಿಗೆ ಕರೆದೊಯ್ದಿದ್ದರಂತೆ. ಕಾಮದ ತೆವಲಿನಲ್ಲಿ ಈ ಹುಡುಗರಿಗೆ ಪುಷ್ಪ ಅತ್ಯಂತ ಸುಂದರಳಾಗಿ ಮತ್ತು ಸುಪುಷ್ಟವಾಗಿ ಕಂಡಿದ್ದಿರಬೇಕು. ಕೇವಲ ಕ್ಷಣಿಕವಾದ ಸುಖಕ್ಕಾಗಿ, ಅದೂ ಬಲಾತ್ಕಾರವಾಗಿ ಅತ್ಯಾಚಾರವನ್ನೆಸಗಿದ್ದರು. ಅವರ್ಯಾರು ಎಂದು ಪುಷ್ಪಳಿಗೆ ತಿಳಿದಿದ್ದರೂ ಅದನ್ನು ಹೇಳಲಿಲ್ಲ ಅವಳು. ಈ ಹಿಂಸೆಯಿಂದ ನರಳಿದ ಪುಷ್ಪ ಬೆಳಕೇರುವ ಹೊತ್ತಿಗೆ ನಮ್ಮ ಮನೆಗೆ ಬಂದು ಬಿದ್ದಿದ್ದಳು.  

ಸುಮಾರು ಒಂದು ತಿಂಗಳು ಪುಷ್ಪ ಎಲ್ಲಿಗೂ ಹೋಗುತ್ತಿರಲಿಲ್ಲ. ಯಾವುದೋ ಕೋಣೆಯಲ್ಲಿ ಏನೋ ಮಾಡುತ್ತಾ ಸುಮ್ಮನೇ ಬಿದ್ದಿರುತ್ತಿದ್ದಳು. ಅತ್ತಿಗೆ ವನಜಳಿಗೆ ಇವಳನ್ನು ಕಂಡರೇ ಅಸಹ್ಯವಾಗುತ್ತಿತ್ತು. ಪುಷ್ಪಳೇ ಯಾರನ್ನೋ ಕರೆದುಕೊಂಡು ಹೋಗಿರಬೇಕು, ಮೊದಲೇ ಸ್ವಲ್ಪ ಚೆಲ್ಲು ಚೆಲ್ಲು. ಬೀಡಿಗೆ ಹೋಗುವ ನೆಪದಲ್ಲಿ ಯಾರನ್ನೆಲ್ಲಾ ಮೈಗೆಳೆದುಕೊಂಡಿದ್ದಾಳೋ ಏನೋ ಎಂದೆಲ್ಲ ಜರೆಯುತ್ತಿದ್ದಳು. ಮನೆಯಲ್ಲಿ ನಿತ್ಯವೂ ಜಗಳವಾಗುತ್ತಿದ್ದದ್ದು ರಾತ್ರಿ ಕೂಗುವ ಗೂಬೆಗಳಿಗೆ ನಿತ್ಯಪಾಠವಾಗಿತ್ತು. ಕೆಲವೊಂದು ಸಂಜೆ ಪುಷ್ಪ ನಮ್ಮ ಮನೆಗೆ ಬರುತ್ತಿದ್ದಳು. ನನ್ನಮ್ಮ ಅವಳಿಗೆ ತುಂಬಾ ಇಷ್ಟ. ಮೊದಲಿನಿಂದಲೂ, ಆದರೂ ಮೊದಲಿನ ಚೆಲ್ಲುಚೆಲ್ಲು ನಗುವಿಲ್ಲ. ತುಂಬಾ ಗಂಭೀರವಾಗಿ ಮಾತನಾಡುತ್ತಾ ತಾನೇನನೋ ಕಳೆದುಕೊಂಡೆ ಎನ್ನುವುದರ ಸಂಕೇತವಾಗಿದ್ದಳು.

ಸ್ವಲ್ಪ ಸಮಯದ ನಂತರ ಕೇಳಿ ಕೇಳಿ ರೋಸಿ ಹೋದ ಪುಷ್ಪ ಮನೆಯಿಂದ ಹೊರಗಡೆ ಬರುವ ಪ್ರಯತ್ನ ಮಾಡತೊಡಗಿದಳು. ಒಬ್ಬಳೇ ಹೊರಗೆ ಬರುವಂತೆಯೂ ಇರಲಿಲ್ಲ. ಕೊನೆಗೆ ಹೇಗೋ ಪುಷ್ಪ ಮನೆಯ ಹೊರಗೆ ಒಂದು ಸಣ್ಣ ಗುಡಿಸಲು ಕಟ್ಟಿಸಿಕೊಂಡಳು. ಇದಾಗುವಾಗ ಜಯಂತ ಮನೆಯ ತೋಟದ ಮೂಲೆಯಲ್ಲೊಂದು ಮನೆ ಕಟ್ಟಿಸಿದ ಅವನಿಗಾಗಿ. ಸ್ವಲ್ಪವಾದರೂ ತಂಗಿಯೆನ್ನುವ ಮಮತೆಯಿದ್ದುದರಿಂದ ಆ ಮನೆಯನ್ನು ಪುಷ್ಪಳಿಗೇ ಕೊಟ್ಟ. ಅದನ್ನು ಪುಷ್ಪ ಪಡೆದುಕೊಂಡು ಅಲ್ಲಿಯೇ ಇರತೊಡಗಿದಳು. ಕ್ರಮೇಣ ಜಯಂತನಿಗೂ ಮದುವೆಯಾಗಿ, ದೂರದ ಇನ್ನೊಂದು ಹಳ್ಳಿಯಲ್ಲಿ ವಾಸಿಸತೊಡಗಿದ.

ಈ ಘಟನೆಯಾಗಿ ಎರಡು ವರ್ಷ ಕಳೆದಿರಬಹುದು. ಪುಷ್ಪಳಿಗೆ ಮದುವೆಯ ಆಲೋಚನೆಗಳು ಬರತೊಡಗಿದವು. ದೂರದೂರಿನ ನೆಂಟರೆಲ್ಲಾ ಪುಷ್ಪಳ ಬಗ್ಗೆ ವಿಚಾರಿಸಿದರು. ಮೊದಲು ನಡೆದಿದ್ದ ಘಟನೆ ಎಲ್ಲಿಯೂ ಗೊತ್ತಾಗದಂತೆ ಕಾಯ್ದುಕೊಂಡಿದ್ದ ಅಣ್ಣಂದಿರು ಮದುವೆಯ ಸುದ್ಧಿ ತೆಗೆಯುತ್ತಲೇ ಪುಷ್ಪ ಖಂಡಿತವಾಗಿಯೂ ವಿರೋಧಿಸಿದಳು. ತಾನು ಹಠಮಾರಿ ಎಂದೂ, ಮದುವೆಯಾಗುವ ಆಸೆಯೂ ಇಲ್ಲವೆಂದು ಖಡಾಖಂಡಿತವಾಗಿ  ಹೇಳಿ ತನ್ನ ಬೀಡಿ ಕಟ್ಟುವ ಕ್ರಿಯೆಯಲ್ಲಿ ಮದುವೆಯನ್ನು ವಿರೋಧಿಸಿ ಸ್ವಾವಲಂಬಿಯಾಗಿದ್ದಳು. ಅಣ್ಣಂದಿರು ಹೆಚ್ಚಿನ ಒತ್ತಾಯಕ್ಕೇನೂ ಹೋಗಲಿಲ್ಲ. ಅವರ ಸಮಸ್ಯೆಗಳು ಅವರಿಗಿತ್ತು. ಮೌನವಾದರು.

ಹೀಗೇ ಕಾಲದ ಬಲವು ಮುಂದುವರಿಯುತ್ತಾ ಬಂತು. ಕ್ರಮೇಣ ಪುಷ್ಪ ತನ್ನ ಕಾರ್ಯಸಾಧನೆಗಾಗಿ ಕೆಲವರನ್ನು ಹಿಡಿದುಕೊಂಡಳು. ಮೊದಲು ಸ್ವಲ್ಪ ಹೆಸರು ಇದ್ದಂತಹ ವ್ಯಕ್ತಿಗಳ ಜೊತೆ ಒಡನಾಟ ಇಟ್ಟುಕೊಂಡರೂ ಕೂಡ ಕ್ರಮೇಣವಾಗಿ ಎಲ್ಲರಿಂದಲೂ ದೂರವಾಗುತ್ತಾ ಸಾಮಾನ್ಯ ಜನರೊಂದಿಗೆ ಬೆರೆಯತೊಡಗಿದಳು. ಯಾವುದೇ ಕಾರ್ಯಕ್ರಮವಿರಲಿ ಪುಷ್ಪ ಹಾಜರಾಗತೊಡಗಿದಳು ಮತ್ತು ತನ್ನನ್ನು ಬೇರೆಯವರು ಗುರುತಿಸುವಂತೆ ನಡೆದುಕೊಳ್ಳತೊಡಗಿದಳು. ಯಾವುದೋ ಸ್ತೀ ಸಂಘ, ಅದಲ್ಲದೇ ಎಲ್ಲಿಯೋ ಚಟುವಟಿಕೆಗಳು ಎಂದೆಲ್ಲಾ ಊರೂರು ಅಲೆಯತೊಡಗಿದಳು. 

ಮರ ಬೆಳೆಯುತ್ತಿದ್ದಂತೆ ಹಕ್ಕಿಗಳೂ ಬರತೊಡಗುತ್ತವೆ, ಹಾಗೆಯೇ ಮರ ಕಡಿಯುವವನ ಕತ್ತಿಯೂ ಮಸೆಯುತ್ತಲಿರುತ್ತದೆ. ಹಕ್ಕಿಗಳಿಗೆ ಇಲ್ಲವೆನ್ನಲಿಲ್ಲ. ತಾನು ಧಾರಾಳವಾಗಿ ಇದ್ದುದರಲ್ಲಿ ಕೊಡುತ್ತಾ ಬಂದಳು. ಬ್ಯಾಂಕಿನ ಎಕೌಂಟ್ ಓಪನಿಂಗು, ಗ್ರಾಮಸಭೆಯ ವಿಚಾರಗಳು ಮುಂತಾದುದರಲ್ಲಿಯೂ ಸಹಾಯ ಮಾಡತೊಡಗಿದಳು.  ಬೇರೆಯವರು ತನ್ನ ಬಗ್ಗೆ ಕೆಟ್ಟ ಮಾತುಗಳನ್ನಾಡಿದರೆ ಅದಕ್ಕೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದಳು.

ಅವಳ ಗಟ್ಟಿತನದ ಬಗ್ಗೆ ಒಂದು ಘಟನೆಯನ್ನೂ ಹೇಳಬೇಕು. ಅವಳ ಇಮೇಜ್ ಎನ್ನುವಂತದ್ದು ಕೆಲವು ಕಡೆ ಅವಳಿಗೆ ಹಾದರದ ಪಟ್ಟವನ್ನು ಕೊಟ್ಟಿತ್ತು. ಹೀಗೇ ಒಂದು ದಿನ ದಾರಿಯಲ್ಲಿ ಬರುತ್ತಿರಬೇಕಾದರೆ "ಬರ್ತೀಯಾ" ಎಂದು ಕೇಳಿದ್ದಕ್ಕೆ ಕೋಪಗೊಂಡವಳು ಅವನ ಮುಖಕ್ಕೆ ಉಗಿದು, ಓಡಿಸಿಕೊಂಡು ಹೋಗಿ ಹೊಡೆದು ಹಾಕಿದ್ದಳು. ಮತ್ತದೇ ಮನುಷ್ಯ ಯಾವುದೋ ಜಾತ್ರೆಯಲಿ ಸಿಕ್ಕಾಗ "ಈಗ ಬರ್ತೇನೆ, ಬಾರೋ ತಾಕತ್ತಿದ್ರೆ" ಎಂದು ಎಲ್ಲರ ಎದುರೇ ಕರೆದಿದ್ದಳು. ನಿಮಗೇನು ಹೆಂಗಸರೆಂದರೆ ಇಂತದ್ದಕ್ಕೇ ಹುಟ್ಟಿದ್ದು ಎನ್ನುವ ಅರ್ಥವಾ ಎಂದು ಸಿಡಿದಿದ್ದಳು. ಇದರಿಂದಲಾಗಿ ಎಷ್ಟೋ ಹೆಣ್ಣುಮಕ್ಕಳ ತಾಕತ್ತಿಗೆ ಪ್ರತಿರೂಪವೂ ಆದಳು. ಕಾಲೇಜಿಗೆ ಹೋಗುವ ಹುಡುಗಿಯರು ಇವಳನ್ನು ತಮ್ಮ ಹೀರೋಯಿನ್ ಎಂದೇ ಭಾವಿಸಿಬಿಟ್ಟಿದ್ದರು ಕೂಡಾ.

ಇಂತಹಾ ಗಟ್ಟಿತನ ಬರುತ್ತಿದ್ದಂತೆ ಕೆಲವು ಸ್ನೇಹಿತೆಯರು, ಮುಖಂಡರುಗಳು ಇವಳನ್ನು ರಾಜಕೀಯಕ್ಕಿಳಿಯುವಂತೆ ಪ್ರೇರೇಪಿಸಿದರು. ಮನಸ್ಸಿನ ಸುಪ್ತ ಆಕಾಂಕ್ಷೆಯೂ ಇದ್ದಿರಬೇಕು, ಯನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ಹೇಗೋ ಮನಸ್ಸು ಮಾಡಿ ಚುನಾವಣೆಗೂ ನಿಂತುಬಿಟ್ಟಳು. ಹೆಚ್ಚಾಗಿ ವಯ್ಯುಕ್ತಿಕ ವಿಚಾರಗಳಿಂದ ಬೇಕಾದಷ್ಟು ಮತಗಳನ್ನು ಪಡೆಯಲಾಗಲಿಲ್ಲ ಪುಷ್ಪಳಿಗೆ. ಸೋತಳು. 

ಮೊದಲ ಚುನಾವಣೆಗೆ ಸೋತರೂ ಹೆದರಲಿಲ್ಲ, ಬದಲು ಗಟ್ಟಿಯಾದಳು.  ಐದು ವರುಷದ ಬಳಿಕ ಪುನಃ ಒಂದು ಚುನಾವಣೆ ಬರುತ್ತಿದ್ದಂತೆ ಮೊದಲಿಗಿಂತ ತುಂಬಾ ಹೆಸರು ಮಾಡಿದ್ದಳು ಪುಷ್ಫ.ಚುನಾವಣೆಯ ಪ್ರಚಾರದಲ್ಲಿ ಯಾರೋ "ಇವಳು ಟಿಕೆಟ್ಟಿಗಾಗಿ ಎಷ್ಟು ಜನರೊಂದಿಗೆ ಮಲಗಿದ್ದಾಳೋ" ಎನ್ನುವ ಪ್ರಶ್ನೆಗೆ ನಗುತ್ತಾ ಹೌದು, ಹೇಳಿದವನ ಅಮ್ಮನೇ ನನ್ನನ್ನೂ ತಯಾರು ಮಾಡಿ ಕಳುಹಿಸಿದ್ದು ಎಂದ ಮಾತು ತುಂಬಾ ಮಾರ್ಮಿಕವಾಗಿ ಹೇಳಿದ್ದಳು. ಬೆಂಬಲಿಗರಿದ್ದರು, ಸಂಘದವರು, ಸಹಾಯ ಪಡಕೊಂಡವರು, ಅಭಿಮಾನಿಗಳು ಎಲ್ಲಾ ಸೇರಿ ಚುನಾವಣೆಯಲ್ಲಿ ಗೆಲ್ಲಿಸಿಯೂ ಬಿಟ್ಟರು. ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೇ ಪುಷ್ಪಕ್ಕನ ಬೆಂಬಲಿಗರಾಗಿ ತುಂಬಾ ಜನರಾದರು.

~

ನಿಮ್ಮೂರಿನ ಯಾರೋ ಇಬ್ಬರನ್ನು ನಿನ್ನೆ ರಾತ್ರಿ ಕೊಲೆಮಾಡಿದ್ದಾರೆ ಕಣೋ, ಪೇಪರಲ್ಲಿ ನೋಡಿದೆ ಎಂದ ಪಕ್ಕದೂರಿನ ಮಿತ್ರನ ಮಾತು ಕೇಳಿದೆ. ಅದೂ ಮರ್ಮಾಂಗವನ್ನೇ ಕತ್ತರಿಸಿ ಬರ್ಭರ ಹತ್ಯೆ ಮಾಡಲಾಗಿದೆ ಎನ್ನುವ ಸುದ್ಧಿ. ಅಚ್ಚರಿ ಮೂಡಿತಾದರೂ ಒಮ್ಮೆ, ಪುಷ್ಪಕ್ಕ ನೆನಪಾದಳು. ಅವಳೇ ಮಾಡಿಸಿದ್ದಾಳೆ ಅಥವಾ ಮಾಡಿದ್ದಾಳೆ ಎನ್ನುವ ನಂಬಿಕೆ ನನಗೊಂದು ವಿಚಿತ್ರವಾದ ಸಂತೃಪ್ತಿಯನ್ನು ತಂದಿತ್ತು.

 ಇಂತಹ ಘಟನೆಯಾಗಲು ಕಾರಣವಾದ ಜಗತ್ತಿನ ಬಗ್ಗೆ ಒಂದು ಭ್ರಾಂತಿ ಮತ್ತು ಛಲದ ಪುಷ್ಪಕ್ಕನಿಗೆ ನಮಸ್ಕಾರ ಹೇಳಬೇಕೆನ್ನಿಸಿತು. ಊರಿಗೆ ಬಂದವನೇ ಪುಷ್ಪಕ್ಕನನ್ನು ನೋಡಿದೆ. ಆ ಮುಖದಲ್ಲಿ ಅತ್ಯಂತ ದೊಡ್ಡ ಮಂದಹಾಸವನ್ನು ಕಂಡೆ. ಪುಷ್ಪಕ್ಕಾ ಹೇಗಿದ್ದೀರಿ? ಚುನಾವಣೆಯಲ್ಲಿ ಗೆದ್ದ ಮೇಲೆ ದೊಡ್ಡ ರಾಜಕಾರಣಿಯಾಗಿ ನಮ್ಮನ್ನೆಲ್ಲಾ ಮರೆತ್ರಾ? ಇತ್ತೀಚೆಗೆ ಕೊಲೆ ನಡೆಯಿತಲ್ಲಾ ಊರಲ್ಲಿ ಎಂದೆ?!

ಪುಷ್ಪಕ್ಕ ಗಂಭೀರಳಾದಳು. ಯಾವುದೋ ಒಂದು ಭೀಕರಮಳೆಯ ಮೊದಲು ಬರುವಂತಹಾ ತಂಪಗಿನ ಗಾಳಿಯಂತೆ ಶಾಂತಳಾದಳು. ಒಂದು ನಿಟ್ಟುಸಿರಿನಲ್ಲಿಯೇ ಅಸಂಖ್ಯ ನೋವುಗಳನ್ನೂ ಹೊರಹಾಕಿದಂತೆ ಕಂಡಳು. ಹೇಳಬೇಕೋ ಬೇಡವೋ ಎನ್ನುವ ಒಂದು ಮುಖಮಾಡಿ, ಕೊನೆಗೆ ಹೇಳತೊಡಗಿದಳು.

ನೋಡು ತಮ್ಮಾ, ನಿನಗೆ ಗೊತ್ತಿಲ್ಲ. ಒಂದು ಹೆಣ್ಣು ತನ್ನ ಜೀವಮಾನದಲ್ಲಿ ಪಡುವ ಎಲ್ಲಾ ಯಾತನೆಯನ್ನೂ ನಾನು ಕೇವಲ ಕೆಲವು ಘಂಟೆಗಳಲ್ಲಿ ಪಡೆದಿದ್ದೆ. ನಿನಗೆ ಗೊತ್ತಿರುವಂತಹದ್ದೇ ವಿಷಯ. ನಿನ್ನ ಅಮ್ಮ ಇಲ್ಲದಿದ್ದರೆ ನಾನು ಬದುಕಿ ಉಳಿಯುತ್ತಿದ್ದೆನೋ ಇಲ್ಲವೋ ತಿಳಿಯದು. ಕೇವಲ ಒಂದು ಹೆಣ್ಣು ಎಂದಾಕ್ಷಣ ಕೆರಳುವ ಗಂಡಸು ಭೂಮಿಯಲ್ಲಿ ಬದುಕಲು ಯೋಗ್ಯನೇ ಅಲ್ಲ ಎನ್ನುವುದು ನನ್ನ ತೀರ್ಮಾನ.

ಆ ಘಟನೆಯಾದ ನಂತರ ಎರಡು ಮೂರು ತಿಂಗಳುಗಳ ಕಾಲ ನರಕಯಾತನೆಯನ್ನು ಅನುಭವಿಸಿದ್ದೆ. ಮಾನಸಿಕವಾಗಿಯೂ ದೈಹಿಕವಾಗಿಯೂ ಕೂಡ. ಒಂದು ಕ್ಷಣಕ್ಕೆ ಸಾಯುವ ಯೋಚನೆಯನ್ನೂ ಮಾಡಿದ್ದೆ. ಆ ಹೊತ್ತಿಗೆ ನಿನ್ನಮ್ಮ ಧೈರ್ಯ ತುಂಬದೇ ಹೋಗುತ್ತಿದ್ದರೆ ಈಗ ಪುಷ್ಪಕ್ಕ ನೆನಪು ಮಾತ್ರ. ಅತ್ತಿಗೆ ಅಣ್ಣಂದಿರು ತಮ್ಮ ಲೋಕದಲ್ಲಿ ತಾವಿದ್ದರು, ಅತ್ತಿಗೆಯಂತೂ ನನ್ನನ್ನು ಬೈಯ್ಯುವುದೇ ಅವಳ ಜೀವನದ ಪರಮೋದ್ದೇಶ ಮತ್ತು ಗುರಿ ಎಂದುಕೊಂಡಿದ್ದಳೇನೋ?. ನಾನು ಒಬ್ಬಳಾಗಿ ಮನೆಯಿಂದ ಆಚೆಗೂ ಬರುವಂತಿಲ್ಲ ಮತ್ತು ಹೆಣ್ಣಾಗಿ ಹುಟ್ಟಿದ ತಪ್ಪಿನಿಂದ ಸ್ವತಂತ್ರವೇ ಇಲ್ಲ. ಕೊನೆಗೆ ಜಯಂತಣ್ಣ ಆಸೆಯಿಂದ ತನಗಾಗಿ ಕಟ್ಟಿಸಿದ ಆ ಹೊಸಾ ಮನೆಯೊಂದು ನನ್ನ ಪಾಲಿಗೆ ಹೊಸಾ ಬದುಕನ್ನು ಕಟ್ಟಿಕೊಟ್ಟಿತು. 

ಮೊದಲು ಹೆದರಿಕೆಯಿದ್ದಿತು ಒಬ್ಬಂಟಿ ಜೀವನದಲ್ಲಿ.ಬೀಡಿ ಕಟ್ಟುವುದು, ಟೈಲರಿಂಗ್ ಕೆಲವು ತಿಂಗಳುಗಳ ಕಾಲ ನನಗೆ ಬದುಕು ಕೊಟ್ಟಿತು. ಅಣ್ಣಂದಿರೂ ಸ್ವಲ್ಪ ಹಣ ಕೊಡುತ್ತಿದ್ದರು. ಒಬ್ಬಳ ಜೀವನ ನಿರ್ವಹಣೆಯಾಗಿಯೂ ಹಣ ಉಳಿಸುತ್ತಿದ್ದೆ. ಕ್ರಮೇಣ ಹೊಂದಿಕೊಂಡೆ. ನನ್ನ ಆಶಾಗೋಪುರದ ನಿರ್ಮಾಣಕ್ಕಾಗಿ ಕೆಲವರ ಜೊತೆಗೆ ಸಂಬಂಧವನ್ನೂ ಇಟ್ಟುಕೊಂಡೆ. ನನಗೆ ಬೇರೆ ದಾರಿ ಇರಲಿಲ್ಲ, ಹಾಗೂ ಅದನ್ನು ನಾನು ತಪ್ಪೆಂದು ಯಾವ ಕಾರಣಕ್ಕೂ ಭಾವಿಸಲಿಲ್ಲ. ಹಣ ಮಾಡದ್ದನ್ನು, ಗುಣ ಮಾಡದ್ದನ್ನು ಹೆಣ್ಣಿನ ಅಂಗಾಂಗಗಳು ಮಾಡುತ್ತವೆ ಎಂದಾದಾಗ ಅದನ್ನು ಉಪಯೋಗಿಸುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ ನನಗೆ. ಆದರೂ ನನ್ನಿಂದ ಯಾವುದೇ ಬದಲಾವಣೆಗಳು ಸಮಾಜದಲ್ಲಿ ಆಗುವುದು ಬೇಡ ಎಂದೇ ನಾನು ಎಲ್ಲವನ್ನು ಗೌಪ್ಯವಾಗಿರಿಸಿದ್ದೆ. 

ಆದರೂ ಕೊಲೆ ಮಾಡಿದ್ದೇಕೆ ಪುಷ್ಪಕ್ಕಾ? ಕೊಲೆ ಮಾಡುವಂತಹಾ ಮನಸ್ಸು ಹೇಗೆ ಬಂತು?

 ತಮ್ಮಾ, ನನ್ನ ಮಟ್ಟಿಗೆ ಅವರು ನನ್ನ ಕೊಲೆಯನ್ನು ಎಂದೋ ಮಾಡಿದ್ದಾರೆ. ಅವರೂ ಒಳಗೊಳಗೇ ಸತ್ತಿರಬೇಕು ಮೊದಲೇ. ನನಗೆ ಆ ಘಟನೆ ನಡೆದಂದಿನಿಂದ ಅವರನ್ನು ಕೊಲ್ಲುವುದು ಬಹಳ ಆಸೆಯ ವಿಷಯವಾಗಿತ್ತು. ಕನಸಿನಲ್ಲಿ ಅವರನ್ನು ಎಷ್ಟೋ ಬಾರಿ ನರಕಯಾತನೆಯೊಡ್ಡಿ ಕೊಂದಿದ್ದೇನೆ. ಸ್ತ್ರೀಯ ಮೇಲಿನ ಅತ್ಯಾಚಾರದಂತೆ ಐದಾರು ಹೆಂಗಸರು ಹುಡುಗರ ಮೇಲೆ ಅತ್ಯಾಚಾರ ಮಾಡಿದರೇನಾದೀತು ಎನ್ನುವ ವಿಕೃತ ಚಿಂತನೆಯನ್ನೂ ಮಾಡಿದ್ದೆ. ಹಾಗೆಂದು ನಾನೇನೂ ದೈಹಿಕ ಆಸೆಗಳಿಲ್ಲದವಳಲ್ಲ. ನಾನಾಗಿ ಒಂದುವೇಳೆ ಯಾರನ್ನೋ ಕರೆದು ಅವರ ಜೊತೆ ಸಂಬಂಧವಿರಿಸಿಕೊಂಡರೆ ಇದೇ ಜಗತ್ತು ನನ್ನನ್ನು ಕೊಂಡಾಡುವುದೇನು? ಒಂದೋ ಈ ಗಂಡು ಹೆಣ್ಣುಗಳ ಸಂಬಂಧ ತೆರೆಮರೆಯಲ್ಲಿ ನಡೆಯಬಾರದು, ಇಲ್ಲವೇ ಬಲವಂತದಿಂದ ಜರುಗಬಾರದು. ಅದಕ್ಕೆಂದೇ ನಾನು ಈ ಎರಡನ್ನೂ ಪಡೆದ ಹೆಣ್ಣು ಕಣೋ. 

ನಿನಗೆ ಗೊತ್ತಿರಲಿಕ್ಕಿಲ್ಲ, ನನ್ನ ಅತ್ತಿಗೆ ಕೂಡಾ ಒಂದು ತರಹದಲ್ಲಿ ಶೋಷಣೆಗೆ ಒಳಗಾದವಳೇ. ಅದಕ್ಕೆಂದೇ ಅವಳು ನನ್ನ ಮೇಲೆ ಅತ್ಯಂತ ಕ್ರೂರಿಯಾಗಿದ್ದಳು. ಇದು ನನಗೆ ನಂತರದಲ್ಲಿ ತಿಳಿಯಿತಾದರೂ ಎಷ್ಟು ಸತ್ಯ ನೋಡು. ನೀನೇನೂ ಸಣ್ಣ ಹುಡುಗನಲ್ಲವಾದ್ದರಿಂದ, ಮತ್ತು ನನಗೆ ಇಂತಹ ಮಾತುಗಳನ್ನು ಹೇಳಲು ಯಾರೂ ಇಲ್ಲದಿರುವುದರಿಂದ ಕೆಲವೊಂದು ಸತ್ಯಗಳನ್ನು ಬಿಚ್ಚಿಡುತ್ತೇನೆ. ನಾನೂ ಒಳಗಿನ ಒತ್ತಡಕ್ಕೆ ಬಲಿಯಾದವಳೇ, ಹೇಳದೇ ಇದ್ದರೆ ಸತ್ಯ ಅರ್ಧವಾದೀತು ನೋಡು.

ಕೆಲವರ್ಷಗಳ ಹಿಂದೆ ನನ್ನ ಅತ್ತಿಗೆ ಒಂದು ದಿನ ನನ್ನ ಮನೆಗೆ ಬಂದು ಗೋಳೋ ಎಂದು ಅತ್ತರು. ನಾನು ಏನೆಂದು ಕೇಳಿದರೆ, ನನ್ನಣ್ಣನ ನಪುಂಸಕತ್ವ ಮತ್ತು ತನಗೆ ಮಕ್ಕಳಾಗುವುದಿಲ್ಲ ಎಂಬ ಚಿಂತೆಯನ್ನು ನನ್ನ ಬಳಿ ಬಿಚ್ಚಿಟ್ಟಳು. ಯಾಕೆ ಮಕ್ಕಳಾಗಲಿಲ್ಲ ಎನ್ನುವುದು ಎಲ್ಲರೂ ಕೇಳುವ ಒಂದು ವಿಷಯವಾದರೂ ನನ್ನಣ್ಣನೇ ಪೂರ್ಣ ಪುರುಷನಲ್ಲ ಎನ್ನುವುದು ನನಗೆ ಹೊಸ ವಿಷಯವಾಗಿತ್ತು. ಅದೂ ಸ್ತ್ರೀಯ ಮೇಲಿನ ದೌರ್ಜನ್ಯದಂತೆಯೇ ಭಾಸವೂ ಆಯಿತು. ಇದು ಸಾಮಾನ್ಯವಾಗಿ ಮುಚ್ಚಿಹೋಗುವ ವಿಷಯ. ದೂರಬೇಕಾದ್ದು ಹೆಣ್ಣನ್ನಲ್ಲವೇ? ಇದು ಅವಳೊಬ್ಬಳ ಸಮಸ್ಯೆಯಲ್ಲ. ತುಂಬಾ ಪ್ರಾಯದ ಅಂತರವಿರುವ ಗಂಡನ್ನು ಮದುವೆಯಾದ ಹೆಣ್ಣುಮಕ್ಕಳೂ ಇದ್ದಾರೆ ಈ ಜಾಗದಲ್ಲಿ. ಈಗ ಅವರ ದೈಹಿಕ ಬಯಕೆಗಳಿಗೇನು ಉತ್ತರವನ್ನು ಕೊಡಬಹುದು? ಸಮಾಜದ ಕಟ್ಟುಪಾಡುಗಳಿಗೆ ಅವರೆಂದೂ ಹೊರಗೆ ಕಾಲಿಡಲಾರರು. ಮತ್ತೆ ಪತಿಯೇ ದೈವ ಎನ್ನುವಂತಹ ಆದರ್ಶದ ಹೆಣ್ಣುಮಕ್ಕಳು ತೊಂಬತ್ತು ಮಂದಿ ಇದ್ದರೂ ಉಳಿದ ಹತ್ತು ಮಂದಿಯ ಸಮಸ್ಯೆಗೆ ಉತ್ತರ ಸಿಕ್ಕೀತೇ?

ಅದೇ ಗಂಡು, ನೀನೂ ಕತೆ ಕೇಳಿರಬಹುದು. ನಾನೊಬ್ಬನಿಗೆ ಹೊಡೆದಿದ್ದೆ ಸುಮಾರು ವರ್ಷಗಳ ಹಿಂದೆ. ಅಂತಹಾ ಗಂಡಸರು ಹಲವಾರು ನೋಡಿದ್ದೇನೆ ನಾನು. ಯಾವನೋ ಒಬ್ಬ ಹೆಂಡತಿಯ ಏಕತಾನತೆ ಎಂದು ಹೊರಗೆ ಹೋಗುತ್ತಾನೆ, ಇನ್ನೊಬ್ಬ ಹೆಂಡತಿಯಿಂದ ಸುಖವಿಲ್ಲ ಎನ್ನುತ್ತಾನೆ, ಮಗದೊಬ್ಬ ಹೆಂಡತಿ ಊರಲ್ಲಿಲ್ಲವೆನ್ನುತ್ತಾನೆ. ನಾನು ಹೊಡೆದಿದ್ದೆನಲ್ಲ, ಆತ ಮದುವೆಯಾಗಿ, ಮಕ್ಕಳಾಗಿದ್ದರೂ ಅವನಿಗೆ ಹೊರಗಿನ ಸಹವಾಸ ಬೇಕು. ನಾಳೆ ಯಾರದೋ ಒಬ್ಬನ ಹೆಂಡತಿ ಈ ವಿಷಯದಲ್ಲಿ ಹೊರಗೆ ನಡೆಯಲಿ, ಸಮಾಜ ಏನನ್ನುತ್ತದೆ? ಹೆಣ್ಣುಮಕ್ಕಳೇನು ತಪ್ಪು ಮಾಡಿದ್ದಾರೆ ಈ  ವಿಷಯದಲ್ಲಿ? 

ಮತ್ತೆ ಕೊಳಕು ಸಮಾಜದ ಒಂದು ಭಾಗವೂ ಹೌದು. ಗಂಡಸರಲ್ಲೂ ಹೆಂಗಸರಲ್ಲೂ ಕೆಟ್ಟವರಿದ್ದಾರೆ. ಮತ್ತೆ ಎಲ್ಲವೂ ಸಮಯಾನುಸಾರ ಕೆಟ್ಟವರಾಗುತ್ತಾರೆ. ಅದೂ ವಿವೇಚನೆಯನ್ನು ಬಿಟ್ಟು.

ನನ್ನನ್ನು ಹಾಳು ಮಾಡಿದರು ಎನ್ನುವುದು ನಿನ್ನ ಸಮಾಜದ ಮಾತಾಗಿರಬಹುದು. ಆದರೆ ಆ ನರಸತ್ತ ಹುಡುಗರು ನನ್ನನ್ನು ಬಲಾತ್ಕರಿಸಿ ನನಗೆ ಒಳ್ಳೆಯದೇ ಮಾಡಿದ್ದಾರೆ. ನಾನೊಬ್ಬಳು ಸುಖಿ, ಮನುಷ್ಯಳು. ಅವರನ್ನು ಕೊಂದಿದ್ದೇನೆ ಎನ್ನುವುದು ನಾನು ಗೆಲ್ಲುವುದಕ್ಕಾಗಿ ಅಲ್ಲ. ನನ್ನ ಒಪ್ಪಿಗೆ ಇಲ್ಲದೆ ನನ್ನ ಮೇಲೆ ಎರಗಿದ ಅವರ ಶಕ್ತಿಯನ್ನು ಪ್ರಶ್ನಿಸಿಯೇ ಕೊಂದಿದ್ದೇನೆ. ಅದೂ ಅವರನ್ನು ನಾನು ಮುಕ್ತ ಆಹ್ವಾನ ಕೊಟ್ಟೇ ಬರಮಾಡಿಕೊಂಡು ಕೊಂದಿದ್ದೇನೆ. ಇದಕ್ಕೆ ಯಾವ ಶಿಕ್ಷೆಯೂ ನನಗೆ ಆಗಲಾರದು. ಏಕೆಂದರೆ ನಾನು ಇನ್ನೂ ಬದುಕಬೇಕು ಎನ್ನುವ ಆಸೆಯಿಂದ ಆ ಕೊಲೆಗಳನ್ನು ಆಧಾರರಹಿತವಾಗಿಸುತ್ತೇನೆ. 

ಆದರೂ ಈ ಕೊಲೆಮಾಡಿದ ಮೇಲೆ ಒಂದು ತೆರನಾದ ಖಿನ್ನತೆಯೂ ಇದೆ. ಅದೇನೇ ಇರಲಿ. ಮತ್ತೆ ರಾಜಕೀಯದ ಕೆಲಸ! ಅದನ್ನೂ ಮಾಡಬಹುದು. ನನಗೇನೂ ದೊಡ್ಡ ಆಸೆಯಿಲ್ಲ. ನಾನಂದುಕೊಂಡದ್ದನ್ನು ಸಾಧಿಸಿದ್ದೇನೆ, ಇನ್ನು ನಾನಂದುಕೊಂಡದ್ದು ನಡೆಯುತ್ತದೆ ನನ್ನ ಜೀವನದಲ್ಲಿ. ನಾನು ಅತ್ಯಂತ ಸುಖವಾಗಿದ್ದೇನೆ. ಎಲ್ಲರಿಂದ ಚೆನ್ನಾಗಿರುವ ನಿದ್ದೆ ಬರುತ್ತದೆ ನನಗೆ. ಅಂದ ಹಾಗೆ ನಿನ್ನ ತಂಗಿಯ ಮದುವೆಗೆ ದಿನ ನೋಡಿದ್ದಾರಂತಲ್ಲ. ಇನ್ನು ನಿನ್ನದೂ ಒಂದ್ ಮದುವೆ ನೋಡಬೇಕು. 

ನಾನು ಯಾರಲ್ಲಿಯೂ ಹೇಳಿಕೊಳ್ಳಲಾಗದ ವಿಷಯಗಳನ್ನು, ಎತ್ತಲಾಗದ ಕೆಲವು ಹೊರೆಗಳನ್ನು ನೀನು ಇಳಿಸಿದ್ದಕ್ಕೆ ನಿನಗೆ ಅತ್ಯಂತ ಕೃತಜ್ಞ ತಮ್ಮಾ. ನಿನ್ನ ಕಣ್ಣುಗಳಲ್ಲಿ ಪುಷ್ಪಕ್ಕ ಎಂದೂ ಆ ಮೊದಲಿನ ಚೆಲ್ಲು ಚೆಲ್ಲು ಪುಷ್ಪಕ್ಕಳಾಗಿಯೇ ಇರಲಿ ಎಂದು ನನ್ನ ಬಯಕೆ.

~

ಪುಷ್ಪಕ್ಕ ಯಾವ ಕೊಲೆಯನ್ನೂ ಮಾಡಿಲ್ಲ. ಏಕೆಂದರೆ ಅವಳು ಸ್ವಯಂ ಕೊಲೆಯಾದವಳು. ಹುಟ್ಟು ಸಾವು ಎರಡೂ ತೋರಬಲ್ಲ ಅವಳು ಎಲ್ಲ ಜನರ ಮಧ್ಯೆ ದೇವಿಯೂ ಆದಾಳು ಎಂದು ನನ್ನ ಮನಸ್ಸು ಹೇಳುತ್ತಿದೆ. ನನಗೆ ಪುಷ್ಪಕ್ಕನ ಜೀವನ ಎನ್ನುವುದು ದೊಡ್ಡ ಪಾಠವನ್ನೂ ಕಲಿಸಿದೆ. ಅವಳು ನೂರ್ಕಾಲ ಬಾಳಬೇಕು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nice

karthik kote
karthik kote
10 years ago

Ishwaranna chennagide 🙂

umesh desai
10 years ago

ಭಟ್ರೆ ಸೊಗಸಾದ ಕಥಿರೀ…ಭಾಳ ಸೇರತು…

bhagyashree
bhagyashree
10 years ago
Reply to  umesh desai

ತು೦ಬಾ ಚೆನ್ನಾಗಿದೆ

4
0
Would love your thoughts, please comment.x
()
x