ಅಂದು ಡಿಸೆಂಬರ್ 18 , ನಾನು 4-5 ತಿಂಗಳ ನಂತರ ಊರಿಗೆ ಹೊರಟಿದ್ದೆ. ಅವತ್ತು ಅವಳ ಜೊತೆ ಕಳೆದ ಕ್ಷಣಗಳು ನಮ್ಮ ಕೊನೆಯ ಕ್ಷಣಗಳು ಆಗಬಹುದು ಅನ್ನುವುದು ನನಗೆ ತಿಳಿದಿರಲಿಲ್ಲ. ಕಲ್ಪನೆಗಳಿಗೆ ಸಿಗದ ಆ ಸಂದರ್ಭ ಗಳನ್ನು ನೆನೆಯುತ ಮನಸ್ಸುಗಳು ಅಳದೇ ಇರಬಹುದೇ……
ನನ್ನ ಅವಳ ಪರಿಚಯ ಕಾಲೇಜು ದಿನಗಳಿಂದಲೇ ಹಸಿರು ಹುಲ್ಲಿನ ಮೇಲೆ ಪ್ರೀತಿಯ ಹೆಜ್ಜೆಗುರುತನ್ನು ಸಹಿ ಮಾಡಿತ್ತು. ಆ ಸಹಿ, ನಮ್ಮಿಬ್ಬರನ್ನು ಪ್ರೇಮದ ಬಂಧನದಲ್ಲಿ ಸಿಲುಕಿಸಿ ನಿತ್ಯವೂ ಖುಷಿ ಖುಷಿಯ ನೂತನ ಊಟವನ್ನು ಮನಸಿಗೆ ಬಡಿಸಿತ್ತು . ಆದರೆ ಆ ಸಹಿಯ ಪತ್ರ ಉಗ್ರರ ಬೆಂಕಿಗೆ ಬೂದಿಯಾಗಿ ಹೋಯಿತು.
ಎಲೆ ಉದುರಿದ ಮರಕ್ಕೆ ವಸಂತ ಋತುವಿನಲ್ಲಿ ಚಿಗುರೆಲೆಯ ಹಬ್ಬ ಆದರೆ ನನ್ನ ಅವಳ ಪ್ರೀತಿಗೆ ದಿನನಿತ್ಯವೂ ಯುಗಾದಿ ಹಬ್ಬ. ನಿತ್ಯವು ಪ್ರೀತಿಯ ಚಿಗುರೆಲೆ ಚಿಗುರುದನ್ನು ಕಂಡು ಹೊಟ್ಟೆಕಿಚ್ಚು ಆಗಿರಬಹುದೇನೋ ಮರಗಳಿಗೆ… ಆದರೂ ನಿತ್ಯ ನೆರಳಾಗುತಿತ್ತು ನಮ್ಮ ಮಾತಿನ ಸಮ್ಮಿಲನಕ್ಕೆ.
ವಾಟ್ಸಪ್ ಇರದ ಕಾಲ, ಸೆಲ್ಪಿ ಬಾರದ ಕಾಲ ನಮ್ಮ ಪ್ರೀತಿಗೆ ಎದುರಾಗಲಿಲ್ಲ ಅಂದು ಬರಗಾಲ. ಈಗಿನ ಹಾಗೆ ಅಂಗೈಯಷ್ಟು ಅಗಲದ ಮೊಬೈಲ್ ಇರಲಿಲ್ಲ, ಇದ್ದರು ನಮ್ಮಂತವರ ಪಾಲಿಗೆ ಅದು ವಜ್ರದ ಉಂಗುರದಂತೆ. ಅವತ್ತು ಕಾಲೇಜಿನಲ್ಲಿ ಒಂದು ಗ್ರೂಪ್ ಫೋಟೋ ತೆಗಿಬೇಕಾದರೆ ಫೋಟೋಗ್ರಾಫರ್ ಅನ್ನು ಕೈಕಾಲು ಹಿಡಿಯಬೇಕಿತ್ತು. ಹಾಗೆ ತೆಗೆಸಿದ ಫೋಟೋಗಳಿಗೆ ಚಿನ್ನದಂತಹ ವ್ಯಾಲ್ಯೂ ಇರುತ್ತಿತ್ತು. ಈಗ ನಿಂತರೆ ಸೆಲ್ಫಿ ಕುಳಿತರೆ ಸೆಲ್ಫಿ. ಉದುರೆಲೆ ಹಾಗೆ ಆಗಿದೆ ಮೊಬೈಲ್ ಗಳು. ಅವತ್ತು ಫೋಟೋಗ್ರಾಫರ್ ಅನ್ನು ಒತ್ತಾಯ ಮಾಡಿ ನಾನು ಅವಳು ಕಾಲೇಜಿನ ಗ್ರೌಂಡ್ ಬದಿಯಲ್ಲಿ ಅರಳಿದ ಸದಾಪುಷ್ಪ ಬಳಿಯಲ್ಲಿ ನಿಂತು ತೆಗೆಸಿದ ಸುಂದರ ಫೋಟೋ ಇಂದು ಉಗ್ರರ ಬೆಂಕಿಗೆ ಬೂದಿಯಾಗಿದೆ.
ಡಿಸೆಂಬರ್ 20ರಂದು ನಾನು ಅವಳು ಬಹಳ ತಿಂಗಳ ನಂತರ ಭೇಟಿಯಾಗಿದ್ದು. ಕೆಲವೊಂದು ಪುಣ್ಯಕ್ಷೇತ್ರಕ್ಕೆ ಇಬ್ಬರು ಭೇಟಿಕೊಟ್ಟು ದೇವರ ದರ್ಶನ ಮಾಡುತ್ತಾ ದೇವಾಲಯದಿಂದ ಹೊರಬರುತ್ತಿದ್ದಂತೆ ನಮ್ಮ ತಂಡದಿಂದ ‘ಭಾರತಾಂಬೆಯ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ ತಕ್ಷಣ ಬರುವಂತೆ’ ಮಾಹಿತಿ ಬರುತ್ತೆ. ಸೈನ್ಯದಲ್ಲಿ ಇರುವ ಪ್ರತಿಯೊಬ್ಬರಿಗೂ ಇಂತಹ ಮಾಹಿತಿ ಬಂದಾಗ ಅಪ್ಪ.ಅಮ್ಮ, ಹೆಂಡತಿ ಮಕ್ಕಳು ಸ್ನೇಹಿತರು ಪ್ರೀತಿ ಪ್ರೇಮ ಅಂಥ ನೋಡದೆ ಏಕಚಿತ್ತದಿಂದ ಹೊರಟು ನಿಲ್ಲುತ್ತಾರೆ. ನಾನು ಹೊರಟೆ..
ಡಿಸೆಂಬರ್ ಕಳೆಯಿತು ಜನವರಿ ಕಳೆದುಹೋಯಿತು. ಫೆಬ್ರವರಿ 14ರಂದು ನಮ್ಮ ತಂಡದ ಬಸ್ಸು ಮಧ್ಯಾಹ್ನ 3.13 ಕ್ಕೆ ಜಮ್ಮು ಶ್ರೀನಗರದ ಹೆದ್ದಾರಿ ಅವಂತಿಪೂರ ನಲ್ಲಿ ಸಾಗುತ್ತಿತ್ತು. ನಾನು ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಅವತ್ತು ಕಳೆದ ಕ್ಷಣಗಳನ್ನು ನೆನೆಯುತ್ತಾ ಕುಳಿತಿದ್ದೆ, ತಕ್ಷಣ ಏನಾಯಿತು ತಿಳಿಯದ ಹಾಗೆ ಭೂಮಿ ಸಿಡಿಯುವ ಶಬ್ದದೊಂದಿಗೆ ನಮ್ಮ ತಂಡದ ಸದಸ್ಯರ ದೇಹಗಳು ಬೆಂಕಿಯಲ್ಲಿ ಛಿದ್ರ ಛಿದ್ರವಾಗಿ ಸುಡುತ್ತಿರುವ ದೃಶ್ಯ…..ದೇವರೇ ಏನಾಯಿತೆಂದು ನೋಡಲು ಧಾವಿಸಿ ನಿಂತಾಗ ಕುಸಿದುಬಿದ್ದೆ, ಆಗ ನನಗೆ ತಿಳಿಯಿತು ನನ್ನ ದೇಹವು ಸುಟ್ಟುಹೋಗಿದೆ ಎಂದು. ನನ್ನ ಎದುರಲ್ಲಿ ನನ್ನ ಕೈಬೆರಳು ಒಂದು ಕರಿ ಕಪ್ಪಾಗಿ ಬಿದ್ದಿತ್ತು. ನನ್ನ ದೇಹದ ಯಾವ ಭಾಗವು ಸಿಗದೆ ಕೇವಲ ಒಂದು ಕೈಬೆರಳು ನನ್ನ ಊರಿಗೆ ತೆರಳಿತು. ಅದರ ಜೊತೆಗೆ ನನ್ನ ಆತ್ಮವು ತೆರಳಿತು. ನಾನು ನನ್ನ ದೇಹದಿಂದ ದೂರವಾಗಿದ್ದೇನೆ ಅನ್ನುವ ಕ್ಷಣ ನೆನೆದು ತುಂಬಾ ಅಳೋಕೆ ಶುರು ಮಾಡಿದೆ. ಮತ್ತೆ ನನ್ನ ದೇಹ ಸೇರುವ ತವಕ ಮಾಡಿದರು ಅಲ್ಲಿ ಇದ್ದದ್ದು ಕೇವಲ ಒಂದು ಕೈಬೆರಳು. ಪುಲ್ವಾಮದಲ್ಲಿ ನನ್ನ ಹಾಗೆ ತುಂಬಾ ಮಂದಿಯ ಪ್ರೇಮದ ಹೂವು ಬೆಂದು ಹೋಯಿತು….
–ಲೋಕೇಶ್ ಪೂಜಾರಿ