ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ರೀತಿಯ ಸಂಸ್ಕøತಿ, ಸಾಮಾಜಿಕ ಹಿನ್ನಲೆಯನ್ನು ಹೊತ್ತು ಬಂದಿರುವ ನಮ್ಮ ತೆನೆ ಗುಂಪಿನಲ್ಲಿ, ಕೌರವರ ಜೊತೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿ ಬೆತ್ತಲಾಗಿದ್ಲು, ಪ್ರಸ್ತುತ ಕತ್ತಲಲ್ಲೂ, ಬೆಳಕಲ್ಲೂ ದೇವದಾಸಿ ವ್ಯವಸ್ಥೆಯಲ್ಲಿ, ಲೈಂಗಿಕ ಕಾರ್ಯಕರ್ತೆಯರಾಗಿ, ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ, ಬೆತ್ತಲಾದ ವ್ಯವಸ್ಥೆಯಿಂದ ಬಂದವರು, ನಮ್ಮ ಜೀವನದಲ್ಲಿ ಇನ್ಯಾರೋ ಬಂದು ನಿರ್ಧಾರದ ಅಧಿಕಾರ ಚಲಾಯಿಸುವ ವ್ಯವಸ್ಥೆಯನ್ನು ಧಿಕ್ಕರಿಸಿ ಬಂದವರು, ಜಾತಿ, ಧರ್ಮ, ಹೆಣ್ಣು, ಗಂಡು, ಬಡತನದ ಕಾರಣಗಳಿಂದ ನೊಂದು, ಇವಗಳನ್ನು ಮೀರಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಆಶಯದಿಂದ ಬಂದವರ ಸ್ವಅನುಭವಗಳು, ಕೇಳಿದ, ಓದಿದ, ನೋಡಿದ ಅನುಭವಗಳನ್ನು ಇಟ್ಟುಕೊಂಡು, ಇವುಗಳನ್ನೆಲ್ಲಾ ಒಟ್ಟುಗೂಡಿಸುವ ಪ್ರಕ್ರಯೆಯ ಮತ್ತು ನಮ್ಮನ್ನ, ನಮ್ಮ ನಮ್ಮ ಸಾಮಾಜಿಕ ಹಿನ್ನಲೆಗಳನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳವ ಪ್ರಕ್ರಿಯೆಯ ಔಟ್ ಪುಟ್ ‘ಪುರಾಣಂ ಪರಾಭವಂ’.
ಒಂದು ಗಂಟೆ ನಾಟಕವನ್ನು ಇಪ್ಪತು ನಿಮಿಷಕ್ಕೆ ಇಳಿಸಿ ಫಾಸ್ಷ್ ಡೈಲಾಗ್ ಡಿಲಿವರಿ ಮಾಡಿ, ಖುಷಿಯಿಂದ ಇವತ್ತು ನಮ್ಮ ಮೊದಲ್ನೇ ಶೋ ಅಂತ ಬಸ್ ಹತ್ತುದ್ವಿ. ಕಮಲಾನಗರದ ಪ್ರಭಾತ್ ರಂಗಮಂದಿರದ ಮುಂದೆ ಇಳಿದಾಗ ಮಧ್ಯಾಹ್ನ 2.30, ಆತರ ಆತರದಿಂದ ನಮ್ಮ ಸೆಟ್ಟು ಪ್ರಾಪರ್ಟೀಸ್‍ನೆಲ್ಲಾ ಇಳಿಸಿ, ರಂಗಮಂದಿರದ ಒಳಕ್ಕೆ ಕಾಲಿಟ್ಟಾಗ ಎದೆ ಬಡಿತ ಹೆಚ್ಚಾಗಿತ್ತು. ನಾಟಕದ ಗಂಧ ಗಾಳಿ ಗೊತ್ತಿಲ್ದೇ ಇರೋ ಇಪ್ಪತ್ತೇಳ್ ಜನ ಸೇರ್ಕಂಡ್, ಹಗಲೂ ರಾತ್ರಿ ನಿದ್ದೆ ಗೆಟ್ಟು, ಕಷ್ಟದ ಜೊತೆ, ಇಷ್ಟಪಟ್ಟು ಕಟ್ಟಿರೋ ನಾಟಕ ಇದು. ನಿಜವಾಗ್ಲೂ ಜನ ಬರ್ತಾರಾ..? ಅಂತ ಮನದಲ್ಲೇ ಗುನುಗ್ತಾ ಸ್ಟೇಜ್‍ಗೂ ಕಾಲಿಟ್ವಿ. ನಮ್ ಕ್ಲಾಸ್ ರೂಂನ್ನೇ ಸ್ಟೇಜ್ ಮಾಡ್ಕಂಡು, ಅಷ್ಟ್ ಸಣ್ ಜಾಗ್‍ದಲ್ಲೇ ರಿಹರ್ಸಲ್ ಮಾಡ್ತಿದ್ವಿ. ಇವಾಗ ಇಷ್ಟ್ ದೊಡ್ ಸ್ಟೇಜ್‍ನ ಎಂಗ್ ಕವರ್ ಮಾಡ್ತೀವೋ, ಎಂಟ್ರಿ ಎಂಗೋ, ಎಗ್ಸಿಟ್ ಎಂಗೋ ಅಂತ ಚಿಂತೆ.. ಅಷ್ಟರಲ್ಲೇ ಇನ್ನು ಐದು ನಿಮಿಷದಲ್ಲಿ ಫಾಸ್ಟ್ ರನ್‍ಥ್ರೂ ಆಗ್‍ಬೇಕು, ಆಮೇಲೆ ಸ್ಟೇಜ್‍ನ ಲೈಟಿಂಗ್‍ಗೆ ಬಿಡ್‍ಬೇಕು, ಎಲ್ರೂ ಸೀರಿಯಸ್ಸಾಗಿ ಬಂದ್ ಸರ್ಕಲ್ ಮಾಡಿ ಅನ್ನೋ ರಕ್ಷತ್ ಸರ್ ಮಾತು, ಇನ್ನೂ ಟೆಕ್ಷನ್‍ನ ಜಾಸ್ತಿ ಮಾಡ್ತು. ಸಧ್ಯ ನಾನ್ ಯಾವ್ ಪಾರ್ಟೂ ಮಾಡ್ತಿಲ್ಲ ಅನ್ನೋ ಸಮಾಧಾನ ಒಂದ್ ಕಡೆಯಾದ್ರೆ, ಮ್ಯೂಸಿಕ್ ಟೀಂನಲ್ಲಿ ಹಾಡ್ ಎಲ್ಲಿ ಮಿಸ್ ಮಾಡಿ ನಾಟಕಾನ ಹಾಳ್‍ಮಾಡಿಬಿಡ್ತೀನೋ ಅನ್ನೋ ಭಯ ಇನ್ನೊಂದ್ ಕಡೆ. ಖುಷಿ, ಆತಂಕ, ಆಶ್ಚರ್ಯಗಳ ಜೊತೆನೇ, ನನ್ನ ಹಿಡಿಯೋರು ಯಾರು ಇಲ್ಲ ಅಂತ ಗಂಟೆ ಓಡ್ತಾನೇ ಇತ್ತು.
ಏಳ್ ಗಂಟೆ ಆಯ್ತು, ಒಂದ್ ಸಲ ಸೈಡ್‍ವಿಂಗ್‍ನಿಂದ ಆಡಿಯನ್ಸ್ ಕಡೆ ಇಣುಕಿ ನೋಡುದ್ರೆ, ಜನಾನೇ ಇಲ್ಲಾ..! ಮತ್ತೆ ಆತಂಕ ಶುರುವಾಯ್ತು. ಬನ್ನಿ.. ಬನ್ನಿ.. ಬೇಗ ಸರ್ಕಲ್ ಮಾಡಿ ಅಂತ, ನಮ್ ಡೈರೆಕ್ಟರ್ ಎಸ್.ಪಿ ಮಹೇಶ್‍ರವರ ಹಿನ್ನಲೆ ಧ್ವನಿ ಪ್ರತಿಧ್ವನಿಸುತ್ತಿದಂಗೆ, ಎಲ್ರೂ ಹೋಗಿ ಮೇಕಪ್ ರೂಂನಲ್ಲಿ ಒಬ್ರು ಕೈ ಒಬ್ರು ಇಡ್ಕಂಡು, ಸರ್ಕಲ್ ಮಾಡುದ್ವಿ.. ಮಹೇಶ್.. ಬೇಗ ಶುರು ಮಾಡಿ, ಜನ ಎಲ್ಲಾ ಕಾಯ್ತಾ ಇದಾರೆ, ಲೇಟ್ ಆಯ್ತು ಅಂತ ಬಂದ ಮುರುಳೀನೂ ಸರ್ಕಲ್‍ಗೆ ಸೇರ್ಕಂಡ್ರು. ಆಂಗಿಕಂ ಭುವನಂ ಯಸ್ಯಾ.. ಪ್ರಾರ್ಥನೆಯನ್ನು ಮುಗ್ಸಿ, ಒಬ್ಬರಿಗೊಬ್ರು ಆಲ್ ದಿ ಬೆಸ್ಟ್, ಚೆನ್ನಾಗ್ ಮಾಡಿ ಮಾಡಿ ಅಂತ ಬೆನ್ ತಟ್ಟಿ ಎಲ್ರೂ ಹೋಗಿ ಸೈಡ್ ವಿಂಗ್‍ನಲ್ಲಿ ನಿಂತೋ.. ಮತ್ತೆ ನಿಧಾನವಾಗಿ ಆಡಿಯನ್ಸ್ ಕಡೆ ತಿರುಗಿ ನೋಡಿದ್ ತಕ್ಷಣ ಮಳೆಗಾಲ್ದಲ್ಲಿ ಜೋಗ್ ಜಲಪಾತದಲ್ಲಿ ನೀರ್ ಧುಮುಕ್ತಂಗೆ ಆಶ್ಚರ್ಯ, ಖುಷಿ, ಆತಂಕ ಎಲ್ಲಾನೂ ಒಟ್ಟೋಟ್ಟಿಗೆ ಶುರುವಾಯ್ತು.
ಅಲ್ಲಿವರ್ಗೂ ಜನಾನೇ ಬಂದಿಲ್ಲ ಅನ್‍ಕೊಂಡಿದ್ದೆ, ಆದ್ರೆ ಇವಾಗ ಸುಮಾರು 300 ಜನ ಕೂತ್ಕೋಬಹುದಾದ ಆಡಿಟೋರಿಯಂನಲ್ಲಿ ಸೀಟೆಲ್ಲಾ ಫುಲ್ಲಾಗಿ ಇನ್ನೂ ಸುಮಾರು 50 ಜನ ನಿತ್ಕೊಂಡು ನಮ್ ನಾಟ್ಕ ನೋಡಕ್ಕೆ ಕಾಯ್ತಾ ಇದ್ರು. ಒಂದು ದೊ….ಡ್ಡ… ನಿಟ್ಟುಸಿರು.. ಏನೋ ದೊಡ್ಡ ಸಾಧನೆ ಮಾಡಿದೀವಿ ಅನ್ನೋ ಖುಷಿ, ನಮ್ಮ ಬೆನ್ನುಗಳನ್ನ ನಾವೇ ತಡ್ಕೊಂಡ್ವಿ..
ನಮ್ ನಾಟ್ಕ ನೋಡಕ್ಕೆ ಜನ ಬರಲ್ವೇನೋ..? ನಮ್ ನಾಟ್ಕ ನಿಜವಾಗ್ಲೂ ಆಡಿಯನ್ಸ್‍ಗೆ ಇಷ್ಟ ಆಗುತ್ತಾ..? ಅಂತ ಚಿಂತೆ ಮಾಡ್ತಿದ್ದ ನಮ್ಗೆ, ಅಷ್ಟು ಜನಾನ ನೋಡಿ, ನಾಟಕದ ಮಧ್ಯೆ ಮಧ್ಯೆ ಬರುತ್ತಿದ್ದ ಜನರ ಚಪ್ಪಾಳೆ, ನಗು, ನಾಟಕ ಮುಗಿದ್ ಮೇಲೆ, ನಾವೇ ಹೋಗ್ರಿ ಅಂತ ಬಾಯ್‍ಬಿಟ್ಟ್ ಹೇಳೋವರ್ಗೂ ಕದ್‍ಲ್ದೇ ಕೂತಿದ್ದ ಜನನ ನೋಡಿ, ನಮ್ಗಿದ್ದ ಹುಮ್ಮಸ್ಸು, ಉತ್ಸಾಹ, ನಂಬಿಕೆ ಇನ್ನಷ್ಟು ಜಾಸ್ತಿ ಆಯ್ತು. ಆ ಕ್ಷಣದ ನಮ್ ಖುಷಿನ ವರ್ಣಿಸೋದು ತುಂಬಾ ಕಷ್ಟ. ಈ ಖುಷಿಯ ಹಿಂದೆ ಬದುಕು ಕಮ್ಯನಿಟಿ ಕಾಲೇಜಿನ ಹುಡುಗ ಹುಡುಗಿಯರು, ಸಂಚಾಲಕರು, ನಕ್ಷತ್ರಿಕರೂ ಆದ ಮುರುಳಿ ಮೋಹನ್ ಕಾಟಿ ಮತ್ತು ಮಂಜುನಾಥ್, ನಮಗೋಸ್ಕರನೇ ಬಿಡುವು ಮಾಡ್ಕೊಂಡ್ ಬಂದು, ನಿರ್ಧೇಶನದಲ್ಲಿ ಮಾರ್ಗದರ್ಶನ ಮಾಡಿದ ಮಹೇಶ್ ಎಸ್.ಪಿ, ನೃತ್ಯಕ್ಕೆ, ಸಂಗೀತಕ್ಕೆ, ಸೆಟ್ ತಯಾರಿಕೆಗೆ ಮಾರ್ಗದರ್ಶನ ಮಾಡಿದ ಶಿವು, ತೇಜಸ್, ದಿವಾಕರ್ ಮತ್ತು ಬದುಕು ಕಮ್ಯನಿಟಿ ಕಾಲೇಜಿನ ತಾಯಿ ಸಂಸ್ಥೆಯಾದ ಸಂವಾದದ ಎಲ್ಲಾ ಸಿಬ್ಭಂಧಿಗಳು, ವಿಶಿಷ್ಠ ರೀತಿಯಲ್ಲಿ ತಯಾರಾದ ಪುರಾಣಂ ಪರಾಭವಂ ನಾಟಕದ ಸಾವಯವ ಕೃಷಿಗೆ ಬೀಜ ಬಿತ್ತಿ, ನೀರೆರೆದಿದ್ದಾರೆ.
ಪುರಾಣಂ ಪರಾಭವಂನ ತೆರೆಯ ಹಿಂದಿನ ಮಾತು:
ನಂಗೆ ನಾಟಕ ಮಾಡಕ್ಕೆ ಬರಲ್ಲಾ.. ಬರಲ್ಲಾ ಸರ್ ಅಂತ ಹೆಳ್ತಿದ್ದೆ. ಆಶಿಕ್ ‘ಇಲ್ಲಿ ಯಾರಿಗೂ ಏನು ಬರಲ್ಲ ಅಂತ, ಎಲ್ಲರಿಗೂ ಎಲ್ಲಾ ಬರುತ್ತೆ ಅಂತ ಅನ್ನೋದು ಅವರವರ ಪರಿಶ್ರಮದ ಮೇಲೆ ಇರುತ್ತೆ' ಅಂತ ಹೇಳಿದ್ರು.
ಮೊದಲು ಸರ್ ಬಂದು ಹೇಳಿದ್ರು ಎಲ್ಲರೂ ಕಥೇ ಬರೀರಿ ಅಂತ, ಯಾವುದಕ್ಕೆ ಅಂತ ಗೊತ್ತಿರಲಿಲ್ಲ . ನಾನು ನನ್ನ ಗೆಳೆಯ ಗೆಳತಿಯರು ಸೇರಿ ನಮಗೆ ತಿಳಿಯದ ನಮ್ಮ ನಾಟಕ್ಕೆ ಕಥೆ ಬರೆಯಾಲಾರಂಭಿಸೆದೆವು . ನಮ್ಮ ಪುರಾಣಂ ಪರಾಭವಂ ನಟಕದ ಮೊದಲ ಹಂತದಲ್ಲೆ 22 ಕತೆ ಇದ್ದವು . ಅದೀಗ ಒಂದು ಕತೆಯಾಗಿ ಮತ್ತು ನಾಟಕವಾಗಿ ನಿಮ್ಮ ಬಂದಿದೆ . ಮೊದಲನೇ ಪ್ರದರ್ಶನ ಆದಾಗ ತುಂಬಾ ಖುಷಿಯಾಯಿತು . ಆಗ ಸರ್ ಕೇಳಿದ್ರು “ ನಿಂಗೆ ನಾಟಕ ಮಾಡಕ್ಕೆ ಬರುತ್ತಾ” ಅಂತಾ . ನನಗೆ ಇದೊಂದು ಹೊಸ ಅನುಭವವಾಗಿತ್ತು.
-ಆಶಿಕ್ ಮುಲ್ಕಿ, ಮಂಗಳೂರು
ನನಗೆ ಕೊಟ್ಟ ಪಾತ್ರ ಅಮ್ಮ .ಪುರುಷ ಪ್ರಧಾನ ಸಮಾಜದಲ್ಲಿ ಕೃಷಿ ಪ್ರಧಾನ ಕುಟುಂಬದಲ್ಲಿ ಗಂಡನೇ ಮನೆಯ ಒಡೆಯ . ಆತನ ನಿರ್ಧಾರವೇ ಅಂತಿಮವಾಗಿರುತ್ತದೆ . ಮನೆಯಲ್ಲಿ ಬಡತನ, ಇಬ್ಬರು ಮಕ್ಕಳು ,ಒಬ್ಬ ಮಗ ಚೆನ್ನಾಗಿ ಓದಿದ್ದರೆ ಇನ್ನೊಬ್ಬ ಮಗ ಚೆನ್ನಾಗಿ ಓದುತ್ತಿರಲಿಲ್ಲ ಅಂತಾ ಅವನನ್ನು ಕೀಳಾಗಿ ಕಾಣುವುದು . ಕಷ್ಟ ಬಂತು ಅಂತಾ ಜೀತಕ್ಕೆ ಇಡುವುದು . ಹೆಂಡತಿ ಮಾತನ್ನು ಲೆಕ್ಕಿಸದೆ ಗಂಡನ ನಿರ್ದಾರವೇ ಅಂತಿಮವಾಗಿರುತ್ತದೆ . ಆ ಪಾತ್ರ ಮಾಡುವಾಗ ನನಗೆ ತುಂಬಾ ಮನಸ್ಸಿಗೆ ನೋವಾಯಿತು . ತಾಯಿ ನಿರ್ದಾರಕ್ಕೆ ಮನ್ನಣೆ ಕೊಡದೆ, ಅವಳು ಹೆತ್ತ ಮಗುವನ್ನು ಜೀತಕ್ಕೆ ಇಡುವುದು ಅಂತಾ ನನ್ನ ಒಳಗೆ ಪ್ರಶ್ನೆ ಕಾಡುತ್ತಿದ್ದವು . ಆದರೆ ಏನು ಮಾಡುವುದು ವಾಸ್ತವ್ಯ ಸ್ಥಿತಿ ಇದೇತಾನೆ ಇರುವುದು .ಆ ಪಾತ್ರದಲ್ಲಿ ಇರುವಾಗ ಅದೇ ಸರಿ ಅನಿಸುತ್ತಿತ್ತು , ಆದರೆ ಆ ಪಾತ್ರದಿಂದ ಹೊರ ಬಂದು ನೋಡಿದಾಗ ಕೋಪ ಬಂದಿತ್ತು .
-ಜಯಶ್ರೀ, ಬೆಳಗಾವಿ
ನಾಟಕವೆಂದರೆ, ಅದು ಕೇವಲ ಸಂಭಾಷಣೆಯನ್ನು ಕಂಠಪಾಠ ಮಾಡಿ ಸ್ಟೇಜಿನ ಮೇಲೆ ಒಪ್ಪಿಸುವುದು ಎಂದು ತಿಳಿದಿದ್ದ ನನಗೆ, ನಮ್ಮ ನಾಟಕ ‘ಪುರಾಣಂ ಪರಾಭವಂ’ ಒಂದು ನಾಟಕ ಸೃಷ್ಠಿಗೊಳ್ಳುವ ಎಲ್ಲಾ ಆಯಾಮಗಳನ್ನು ತಿಳಿಸಿಕೊಟ್ಟಿತು. ಸಾಮಾಜಿಕ ಕಳಕಳಿಯನ್ನು ಹೊಂದಿದ ನಮ್ಮ ನಾಟಕ ಅತ್ಯಂತ ವಿಭಿನ್ನವಾದ ನಾಟಕ. ಏಕೆಂದರೆ, ಕಥೆ ಹುಟ್ಟುವ ಕ್ಷಣದಿಂದ ಹಿಡಿದು ಪ್ರದರ್ಶನ ಮುಗಿದು ಪ್ರೇಕ್ಷಕರು ಚೆಪ್ಪಾಳೆ ತಟ್ಟುವ ಸಮಯದವರೆಗೂ ನಡೆದ ಪ್ರತೀ ಹಂತದಲ್ಲಿಯೂ ನಾವೆಲ್ಲರೂ ಅಂದರೆ 27 ವಿದ್ಯಾರ್ಥಿ ಜನರು ಭಾಗಿಯಾಗಿದ್ದೆವು. ನಿರ್ದೇಶಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಕಥೆ, ಸಂಭಾಷಣೆ, ಹಾಡು, ಸಂಗೀತ, ನೃತ್ಯ ಸಂಯೋಜನೆ ನಿರ್ಮಾಣ ಹೀಗೆ ಪ್ರತೀ ಕೆಲಸವನ್ನು ನಾವೇ ಮಾಡಿದ್ದೇವೆ. ಇವರೆಗೂ ಕವನಗಳ ಗಾಳಿಗಂಧವು ಇರದ ನಾನು ಬರೆದ ಹಾಡು ನಮ್ಮ ನಾಟಕದಲ್ಲಿ ಬಳಸಲ್ಪಟ್ಟು ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದದ್ದು ನನಗೆ ಅತೀವ ಸಂತಸ ನೀಡಿದೆ. ನಮ್ಮ ನಾಟಕದ ಉಳಿದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಉತ್ತಮವಾಗಿದೆ. ಅವುಗಳನ್ನು ನಮ್ಮ ತಂಡವೇ ರಚಿಸಿದೆ ಎನ್ನುವುದು ನನಗೆ ಹೆಮ್ಮೆಯ ವಿಷಯ. ನಟನೆಯ ಬಗ್ಗೆ ಹೇಳುವುದಾರೆ ನನಗೆ ಸಿಕ್ಕ ಪಾತ್ರವನ್ನು ಅತ್ಯಂತ ಖುಷಿಯಿಂದ ಅನುಭವಿಸಿ ಮಾಡಿದ್ದೇನೆ. ನಾಟಕÀ ಕಟ್ಟುವ ಪ್ರತಿಕ್ಷಣವನ್ನು ಆನಂದಿಸಿದ್ದೇನೆ. ನಾವೆಲ್ಲರೂ ಹೀಗೆ ಸುಮಾರು ಒಂದು ತಿಂಗಳ ಕಾಲ ಜೊತೆ ಸೇರಿ ನಾಟಕ ಕಟ್ಟಿದ್ದು ನಮ್ಮ ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗ. ನನ್ನ ತಿಳುವಳಿಕೆಯ ಮಟ್ಟಿಗೆ ಯಾರು ಈ ತರ ನಾಟಕ ಕಟ್ಟಿರಲಿಕ್ಕಿಲ್ಲ. ಸಮಾಜದ ಅನಿಷ್ಟಗಳನ್ನು ಜನರ ಮುಂದೆ ತೆರೆದಿಟ್ಟು ಆ ಬಗ್ಗೆ ನೋಡುಗರನ್ನು ಚಿಂತನಗೆ ಹಚ್ಚುವ ಈ ಪುರಾಣಂ ಪರಾಭವಂ ನಾಟಕವನ್ನು ನಾವು ಇನ್ನೂ ಕೆಲವು ಬಾರಿ ಪ್ರದರ್ಶಿಸಲಿದ್ದೆವೆ. ಮುಂದಿನ ಪ್ರದರ್ಶನಗಳನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಬದುಕು ಕಮ್ಯೂನಿಟಿ ಕಾಲೇಜಿನ ಪತ್ರಿಕೊದ್ಯಮ ವಿದ್ಯಾರ್ಥಿಗಳಾದ ನಾವೂ ನಾಟಕ ಮಾಡಿದ್ದು ನಮ್ಮ ಪಠ್ಯಕ್ರಮದ ಒಂದು ಭಾಗವಾಗಿ. ನಮ್ಮ ಪಠ್ಯಕ್ರಮದಲ್ಲಿ ನಾಟಕವನ್ನು ಅಳವಡಿಸಿದ ನಮ್ಮ ಎಲ್ಲಾ ಗುರುಗಳಿಗೆ ತುಂಬಾ ದನ್ಯವಾದಗಳು. ನಾಟಕ ನಮ್ಮ ಪಠ್ಯಕ್ರಮದ ಒಂದು ಭಾಗವಾಗಿರದೆ ಹೊಗಿದ್ದರೆ ನಾನು ನಾಟಕ ಮಾಡುವ ಕನಸನ್ನು ಸಹ ಕಾಣುತ್ತಿರಲಿಲ್ಲ.
-ರಾಜಶೇಖರ್ ಶಕುಂತಲಾ ಆರ್, ಬಾದಾಮಿ
ನಮ್ಮ ನಾಟಕದ ಮುಂದಿನ ಪ್ರದರ್ಶನ ದಿನಾಂಕ:17.1.2016 ರ ಸಂಜೆ 7.30 ಕ್ಕೆ, ಕೆ.ಹೆಚ್ ಕಲಾಸೌಧ, ಹನುಮಂತ ನಗರ, ಮರೆಯದಿರಿ ಮರೆತು ನಿರಾಶರಾಗದಿರಿ. ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ. ಎಲ್ಲರಿಗೂ ಆತ್ಮೀಯ ಸ್ವಾಗತ.
-ಮಂಜುಳ.ಎಸ್
ತೆನೆ ತಂಡ
ಬದುಕು ಕಮ್ಯುನಿಟಿ ಕಾಲೇಜು