ಪುರಂದರ ಮಂಟಪದತ್ತಣ ಪಯಣ: ಪ್ರಶಸ್ತಿ

ಆಚೆ ದಡದ ಸಾಲು ದೇಗುಲಗಳ ಬಗ್ಗೆ ಅಚ್ಚರಿಪಡುತ್ತಾ, ಎತ್ತ ಸಾಗಿದರೂ ಅದೇ ಸರಿಯಾದ ದಾರಿಯೇನೋ ಎಂಬತ್ತಿದ್ದ ದೇಗುಲಗಳ, ಅವುಗಳಿಗೆ ಕರೆದೊಯ್ಯುತ್ತಿದ್ದ ಕಾಲು ಹಾದಿಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಬೋರ್ಡ್ ಹಾಕಿ ಮುಗಿಯೋ ಬಾಬತ್ತಲ್ಲ ಎಂದು ಆಲೋಚಿಸುತ್ತಾ ಎದುರಿಗೆ ಕಂಡ ಧ್ವಜಸ್ಥಂಭದ ದೇಗುಲದತ್ತ ದಾಪುಗಾಲಿಟ್ಟೆವು. ಧ್ವಜಸ್ಥಂಭವಿದೆ, ಕೆಳಗಿಳಿಯೋ ಮೆಟ್ಟಿಲುಗಳೂ ಇವೆ. ಆದರೆ ಅದ್ಯಾವ ದೇಗುಲವೆಂಬ ಮಾಹಿತಿಯೇ ಇರಲಿಲ್ಲ ಅಲ್ಲೆಲ್ಲೋ. ದಾಳಿಗೆ ತುತ್ತಾಗಿ ಗರ್ಭಗೃಹದಲ್ಲಿ ಪೂಜಾ ಮೂರ್ತಿಯಿಲ್ಲದ ಆ ದೇಗುಲ ಬಿಕೋ ಅನ್ನುತ್ತಿತ್ತು. ಅಲ್ಲಿಂದ ಮುಂದೆ ಸಾಗಿದರೆ ಒಂದು ಹಾದಿ, ವಾಪಾಸ್ ಬಂದು ಎಡಕ್ಕೆ ಸಾಗಿದರೆ ಮತ್ತೊಂದು ಹಾದಿ ! ಎರಡು ಹಾದಿಯೂ ವಿಠಲದೇಗುಲಕ್ಕೇ ಕೊಂಡೊಯ್ಯುತ್ತದೆ ಅಂತ ವಾಪಾಸ್ ಬರುವಾಗ ಮತ್ತಿದೇ ದೇಗುಲ ಸಿಕ್ಕಿದಾಗ ಗೊತ್ತಾಯ್ತು !
ಕೆಳಗಿನ ಹಾದಿಯಲ್ಲಿ ಸಿಗೋ ಸಣ್ಣ ತೊರೆಯನ್ನು ದಾಟಿ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ವಿಠಲದೇಗುಲಕ್ಕೆ ದಾರಿ ಎಂಬ ಬೋರ್ಡ್ ಕಾಣುತ್ತೆ. 

ಹರಕೆ ಮರ: 
ಆ ಬೋರ್ಡ್ ಹಿಡಿದು ಹಾಗೇ ಮುಂದೆ ಸಾಗುತ್ತಿದ್ದಾಗ ಒಂದು ವಿಚಿತ್ರ ಮರ ಕಂಡಿತು. ಅದರ ಕೊಂಬೆಗಳಿಗೆಲ್ಲಾ ಬಟ್ಟೆಗಳನ್ನು ಜೋತುಬಿಟ್ಟಿದ್ದಾರೆ. ಕೆಳಗೆ ಒಂದರ ಮೇಲೆ ಒಂದರಂತೆ ಜೋಡಿಸಿಟ್ಟಿರೋ ಕಲ್ಲುಗಳು. ಮನೆ ಕಟ್ಟಲಾಗದಿದ್ದವರು ಇಲ್ಲಿ ಬಂದು ಸಣ್ಣ ಕಲ್ಲುಗಳ ಜೋಡಿಸುತ್ತಾರಂತೆ. ಕಲ್ಲುಗಳು ಉರುಳದೇ ನಿಂತರೆ ಅವರ ಆಸೆಗಳು ನೆರವೇರುತ್ತವಂತೆ ! . ಇದೇ ತರಹ ಕೆಂಪಭೂಪ ಮಾರ್ಗದಲ್ಲಿ ಸಿಗೋ ಕಲ್ಲಬಂಡೆಯೊಂದರ ಬಳಿಯೋ ಸಣ್ಣ ಕಲ್ಲುಗಳ ನಿಲ್ಲಿಸಿಟ್ಟಿದ್ದು ಕಾಣಿಸುತ್ತಿತ್ತು.ಅದೆಂತೆಂತಾ ಹರಕೆಗಳೋ ಶಿವನೇ ಅನ್ನಿಸ್ತು.

ಹಾಗೇ ಮುಂದೆ ಸಾಗಿದಾಗ ಮೊದಲು ಕಾಣೋದೇ ಪುರಂದರ ಮಂಟಪ. ರಸ್ತೆಯಿಂದ ಕೊಂಚ ಎಡಕ್ಕೆ ಸಾಗಿದರೆ ಪುರಂದರ ಮಂಟಪ, ಸೀದಾ ಮುಂದೆ ಸಾಗಿದರೆ ವಿಠಲ ದೇವಸ್ಥಾನ.

ಪುರಂದರ ಮಂಟಪ:
ವಿಜಯವಿಠಲ ದೇಗುಲದ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದೀ ತಟದಲ್ಲಿ ಪುರಂದರ ಮಂಟಪವಿದೆ. ಇಲ್ಲಿನ ದೇಗುಲಗಳ ಮೇಲೆ ದಾಳಿಯಾದಾಗ ಪುರಂದರದಾಸರು ವಿಠಲನ ಮೂರ್ತಿಯನ್ನು ಇಲ್ಲೇ ತುಂಗಭದ್ರಾ ನದಿಯಲ್ಲಿ ಅಡಗಿಸಿಟ್ಟರು ಎಂಬ ಐತಿಹ್ಯವಿದೆ. ತಣ್ಣಗೆ ಹರಿಯೋ ತುಂಗಭದ್ರೆಯ ದಡದಲ್ಲಿನ ಈ ಮಂಟಪದಲ್ಲಿ ಪುರಂದರದಾಸರ ವಿಗ್ರಹವಿದೆ. ಅದರೆದುರು ಉರಿಯೋ ದೀಪಗಳನ್ನೇ ದಿಟ್ಟಿಸುತ್ತ ಇಲ್ಲಿ ಧ್ಯಾನಮಗ್ನರಾದರೆ ಹೊತ್ತು ಕಳೆದದ್ದೇ ತಿಳಿಯೋಲ್ಲ. 

ವಿಜಯವಿಠಲ ಮಂದಿರ:
ಶಿಲೆಗಳು ಸಂಗೀತವಾ ಹಾಡಿದೆ ಎಂಬ ಹಾಡನ್ನು ನೀವು ಕೇಳಿರಬಹುದು. ಹಂಪೆಯ ವಿಜಯವಿಠಲ ದೇಗುಲ ಸಂಕೀರ್ಣದಲ್ಲಿನ ದೇಗುಲಗಳಲ್ಲಿ ಗೈಡುಗಳು ತಬಲಾ, ಮೃದಂಗ ಮುಂತಾದ ವಾದ್ಯಗಳ ಸರಿಗಮಪ ನುಡಿಸಿ ತೋರಿಸೋ ಇಲ್ಲಿನ ಕಂಬಗಳನ್ನು ನೋಡಿದಾಗ, ಅವುಗಳ ದನಿ ಆಲಿಸಿದಾಗ ಕವಿವಾಣಿ ಅಕ್ಷರಶಃ ಸತ್ಯ ಅನ್ನಿಸದಿರೋಲ್ಲ ! ಇಲ್ಲಿನ ಸಂಗೀತ ಮಂದಿರದ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು ಅಲ್ಲಿ ಯಾರನ್ನೂ ಬಿಡದಿದ್ದರೂ ಬೇರೆ ಮಂದಿರಗಳನ್ನು ಆಸ್ವಾದಿಸಬಹುದು. ಇಲ್ಲಿನ ಪ್ರಧಾನ ಆಕರ್ಷಣೆ ಕಲ್ಲಿನ ರಥ. ಕಿಡಿಗೇಡಿಗಳ ಕಾರಣದಿಂದ ಒಂದು ಚಕ್ರದ ಸ್ಥಾನ ಪಲ್ಲಟವಾಗಿದೆಯಾದರೂ ಉಳಿದ ಚಕ್ರಗಳು ಯಥಾಸ್ಥಾನದಲ್ಲಿದ್ದು ನೋಡುಗರ ಗಮನಸೆಳೆಯುತ್ತವೆ. ಇಲ್ಲಿನ ಕಡಿಯಲ್ಪಟ್ಟ ಆನೆಗಳ ಬಗ್ಗೆ, ಮುರಿದು ಬಿದ್ದ ಪ್ರವೇಶದ್ವಾರದ ಬಗ್ಗೆ, ಕಿಡಿಗೇಡಿಗಳ ದಾಂದಲೆಯ ಬಗ್ಗೆ ಹೇಳಿದಷ್ಟೂ ಬೇಜಾರೇ ಆಗೋದರಿಂದ ಅದರ ಬಗ್ಗೆ ಹೇಳದಿರೋದೇ ವಾಸಿ ಅನ್ನಿಸುತ್ತೆ. ಆದರೂ ಕಾಳಿಂಗಮರ್ಧನ ಕೃಷ್ಣ,ಶುಕಮುನಿ, ಯುದ್ದಾಶ್ವಗಳೇ ಮುಂತಾದ ಕೆತ್ತನೆಗಳು ಅಲ್ಲಲ್ಲಿ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡು ಗತವೈಭವವನ್ನು ಸಾರುತ್ತಿವೆ.ಕೆಲವೊಂದು ಶಿಲ್ಪಗಳ ಇತಿಹಾಸವನ್ನು ಕೆದಕಿದರೆ ಅದೇ ಒಂದು ಕುತೂಹಲಕಾರಿ ಕತೆಯಾಗಬಹುದು. ಉದಾಹರಣೆಗೆ: ಹಲಸಿನ ಕಾಯಿಯನ್ನು ಹೋಲುವ ಒಂದು ಕಾಯಿಯನ್ನು ಹಿಡಿದುಕೊಂಡಿರೋ ಮೂರ್ತಿ ! ರಾಮಾಯಣ ಮಹಾಭಾರತಗಳ, ಭಾಗವತದ, ರಾಜರುಗಳ ಕತೆ ಹೇಳೋ ಕೆತ್ತನೆಗಳನ್ನು ಎಲ್ಲೆಲ್ಲೋ ಕಾಣಬಹುದು. ಆದರೆ ಈ ತರದ ವಿಚಿತ್ರ ಮೂರ್ತಿಗಳು ಹಂಪೆಯುದ್ದಕ್ಕೂ ನಿಮ್ಮನ್ನು ಭೇಟಿಯಾಗುತ್ತಲೇ ಇರುತ್ತವೆ. ಇದನ್ನೆಲ್ಲಾ ನೋಡಿದಾಗ ಅನಿಸೋ ಒಂದು ಮಾತೆಂದ್ರೆ ನಾವು ಇತಿಹಾಸವನ್ನು ೯೦% ಅರಿತಿದ್ದೇವೆಂಬ ಭ್ರಮೆಯಲ್ಲಿರುತ್ತೇವೆ. ಆದ್ರೆ ಅರಿತಿದ್ದು ೧% ಮಾತ್ರವೇ ಆಗಿರುತ್ತೆ. ಗೊತ್ತಿರದ, ದಾಖಲಾಗದ ಇತಿಹಾಸದ ಅದೆಷ್ಟೋ ಮಜಲುಗಳು ಆದ್ಯಾವುದೋ ಮೂಲೆಯಲ್ಲಿ ತಣ್ಣಗೆ ಮಲಗಿರುತ್ತೆ !

ವಿಜಯವಿಠಲ ಮಂದಿರದ ಬಳಿಯಲ್ಲೇ ಕೆಳಗಿಳಿಯೋ ಮೆಟ್ಟಿಲುಗಳಿವೆ. ಅದರಲ್ಲಿ ಕೆಳಗಿಳಿದ್ರೆ ಭೂಮ್ಯಾಂತರ್ಗತ ಮಂದಿರವೊಂದು ಎದುರಾಗುತ್ತೆ ! ಸದ್ಯಕ್ಕೆ ಅಲ್ಲಿ ಪೂಜೆ ನಡೆಯದಿದ್ದರೂ ಅಂತಸ್ತುಗಳ ಮೇಲೆ ಅಂತಸ್ತು ಕಟ್ಟುತ್ತಾ ಆಗಸವ ತಲುಪ ಹೊರಟ ಇಲ್ಲಿನ ಶಿಲ್ಪಿಗಳು ಭೂಮಿಗಿಳಿಯೋದನ್ನೂ ಮರೆಯಲಿಲ್ಲ ಎಂಬ ಹೆಮ್ಮೆಯಾಗುತ್ತೆ. ಇದರ ಪಕ್ಕದಲ್ಲೇ ಕಲ್ಲಿನ ಕೆತ್ತನೆಯೊಂದಿದೆ. ಅದನ್ನು ತೋರೋ ಗೈಡುಗಳು ಅದರ ಹಲವು ಭಾಗಗಳನ್ನು ಬೇರೆ ಬೇರೆ ಕೋನಗಳಲ್ಲಿ ಮುಚ್ಚಿ ಅದರಲ್ಲಿ ಚಿಂಪಾಂಜಿ, ಆಂಜನೇಯ, ಕರಡಿ, ಹಾವು, ಹಸು ಹೀಗೆ ಎಂಟತ್ತು ಆಕಾರಗಳನ್ನು ತೋರಿಸಿ ಐದತ್ತು ನಿಮಿಷದ ಕತೆ ಹೇಳುತ್ತಾರೆ ! ಇತಿಹಾಸದ ಬಗೆಗಿನ ಆಸಕ್ತಿಯಿರೋ ವಿದ್ಯಾರ್ಥಿಗೆ ಈ ದೇಗುಲವೊಂದೇ ಹಲವು ದಿನಗಳ ಅಧ್ಯಯನದ ಆಗರವಾಗಬಹುದೇನೋ. ವಿಠಲಮಂದಿರದ ಹೊರಬಂದರೆ ಸಿಗೋ ಕಲ್ಲಿನ ರಥದೆದುರ ಬೃಂದಾವನ ಒಂದು ಫೋಟೋ ಪಾಯಿಂಟ್. ಇಲ್ಲಿಗೆ ಬರೋ ತಂಡಗಳಿಗೆಲ್ಲಾ ಇಲ್ಲಿನ ಗೈಡುಗಳು ಇದರೆದುರು ನಿಲ್ಲಿಸಿ ಫೋಟೋ ತೆಗೆಸೇ ತೆಗಿಸುತ್ತಾರೆ. ಅಂದ ಹಾಗೆ ಇಡೀ ದೇಗುಲದ ಪರಿಸರವ ತೋರಿಸೋ ಆ ಜಾಗದಲ್ಲೊಂದು ಪಟ ತೆಗೆಸಿಕೊಳ್ಳಲು ಮರೆಯಬೇಡಿ ! 

ಆ ಪರಿಸರದಲ್ಲಿ ಹಾಗೇ ಮುಂದೆ ಬಂದರೆ ಇಕ್ಕೆಲಗಳಲ್ಲಿ ಕಂಬಗಳಿರೋ ಮತ್ತೊಂದು ಬಜಾರ್ ಸಿಗುತ್ತೆ ! ಆ ಬಜಾರಲ್ಲೇ ಮುಂದೆ ಸಾಗುವವರಿಗೆ ಒಂದು ಆನಾಮಧೇಯ ದೇಗುಲ ಸ್ವಾಗತಿಸುತ್ತೆ. ದಶಾನನ ರಾವಣನ ಹತ್ತು ಬಾಣಗಳನ್ನ ರಾಮ ತನ್ನ ಹತ್ತು ಬಾಣಗಳಿಂದ ಎದುರಿಸುವಂತಹ ರಾಮಾಯಣದ ಅಧ್ಭುತ ಕಲ್ಪನೆಯ ಕೆತ್ತನೆಗಳಿರೋ ಈ ದೇಗುಲ, ಅದರ ಪಕ್ಕದಲ್ಲಿರೋ ಅನಾಮಧೇಯ ಧ್ವಜಸ್ಥಂಭದ ದೇಗುಲ, ಅದರ ಪಕ್ಕದಲ್ಲಿ ಇನ್ನೊಂದು , ಮತ್ತೊಂದೆನ್ನುವಂತೆ ಎದುರಾಗೋ ದೇಗುಲಗಳು… ಉಫ್.. ಸದ್ಯಕ್ಕೆ ಒಂದಿಷ್ಟು ಹುಲ್ಲು, ಲಂಟಾನದ ಪೊದೆಗಳು ಬೆಳೆದಿದೆಯಾದರೂ ಅವುಗಳತ್ತ ಸಾಗೋ ಹಾದಿ ಸವೆದೇ ಇದ್ದು ದಿನಾ ಒಂದಿಷ್ಟು ಜನರಾದರೂ ಅದರತ್ತ ಸಾಗೇ ಸಾಗುತ್ತಾರೆ ಎಂಬ ಭಾವನೆ ಮೂಡಿಸುತ್ತೆ. ಜೊತೆಗೆ ಇವುಗಳ ಮೂಲಸ್ವರೂಪವನ್ನ ಉಳಿಸಿಕೊಳ್ಳಲಾಗಲಿಲ್ಲವಲ್ಲ, ಇದರ ಬಗ್ಗೆ ಒಂದಿಷ್ಟು ಮಾಹಿತಿಫಲಕಗಳನ್ನಾದರೂ ಹಾಕಲಿಲ್ಲವಲ್ಲ ಎಂಬ ಬೇಸರವೂ ಕಾಡುತ್ತೆ. ಮಧ್ಯಾಹ್ನದ ಸಮಯದಲ್ಲಿ ಇಲ್ಲಿನ ದೇಗುಲಗಳ ಮೇಲೆ ಮೂಡಿದ್ದ ಮೋಡ ವಿಷ್ಣುವಿನ ಮೇಲೆ ಹೆಡೆ ಚಾಚಿರೋ ಅನಂತನನ್ನು ನೆನಪಿಸಿದ್ದು ಸುಳ್ಳಲ್ಲ ! ನಾವು ನಡೆದುಬಂದ ಹಾದಿಯಲ್ಲದೇ ವಿಜಯವಿಠಲ ದೇಗುಲಕ್ಕೆ ನೇರವಾಗಿ ಬರಬಹುದಾದ ಬಸ್ಸ ಹಾದಿಯಿದೆ. ಹಂಪಿದರ್ಶನ ಬಸ್ಸಿನವರು, ಆಟೋದವರು ಹಾಗೇ ಬರುತ್ತಾರಿಲ್ಲಿಗೆ

ಶಾಸನವುಳ್ಳ ವಿಷ್ಣು ದೇವಾಲಯ:
ದೇಗುಲದ ಎಡಭಾಗದಿಂದ ಪುರಂದರಮಂಟಪವನ್ನು ಕಂಡು ಒಳಹೊಕ್ಕಿದ್ದ ನಾವು ವಾಪಾಸ್ ಬರುವಾಗ ಮತ್ತೊಂದು ಹಾದಿಯಲ್ಲಿ ಹೊರಬಂದೆವು. ಅಲ್ಲೊಂದು ಮಂಟಪ ಎದುರಾಗುತ್ತೆ. ಪಕ್ಕದಲ್ಲೇ ನಂದಿಧ್ವಜವಿರೋ ಒಂದು ಭಗ್ನ ಶಿವಾಲಯ. ಅದರ ಪಕ್ಕದಲ್ಲೇ ಶಾಸನವುಳ್ಳ ವಿಷ್ಣು ದೇವಾಲಯ ಸಿಗುತ್ತೆ.

ತುಲಾಭಾರ ಮಂಟಪ(kings balanace)
ಅಲ್ಲಿಂದ ಹಾಗೇ ಮುಂದೆ ಬಂದರೆ ಅಲ್ಲಿರೋ ಬೃಹತ್ ಬೇವಿನ ಮರದ ಪಕ್ಕದಲ್ಲಿ ಶ್ರೀ ಕೃಷ್ಣದೇವರಾಯನ ತುಲಾಭಾರ ಮಂಟಪ ಸಿಗುತ್ತೆ. ತುಲಾಭಾರ ಮಂಟಪದಿಂದ ಮುಂದೆ ಸಾಗಿದಂತೆ ಅದೆಷ್ಟೋ ಹೆಸರಿಲ್ಲದ ದೇಗುಲಗಳು ಕಾಣುತ್ತೆ. ದಾರಿ ಪಕ್ಕ ಸಿಕ್ಕ ದೇಗುಲಗಳತ್ತ ಸುಳಿದ ನೆನಪಿಗೆ ಅವುಗಳದೊಂದೊಂದು ಚಿತ್ರ ತೆಗೆದುಕೊಂಡು ಇಟ್ಟುಕೊಂಡೆವಾದರೂ ಅವೇನು, ಅವುಗಳ ಹಿನ್ನೆಲೆಯೇನು ಎಂಬುದರಿಯದ ಬೇಸರದಲ್ಲಿ ಹಾಗೇ ಮುಂದೆ ಸಾಗಿದೆವು.  ಸಾಗಿದ್ದಾದರೂ ಎಲ್ಲಿಗೆ ? ನಾವು ಮುಂದೆ ಎಡಕ್ಕೋ ಬಲಕ್ಕೋ ಎಂಬ ಆಲೋಚನೆ ಮಾಡಿದಂತಹ ಧ್ವಜಸ್ಥಂಭದ ದೇಗುಲದತ್ತ. 

ಕೋದಂಡಸ್ವಾಮಿ ದೇಗುಲ
ಹಾಗೇ ಮುಂದೆ ಸಾಗಿದಾದ ಮುಂದೆ ಹರಿಯುತ್ತಿರುವ ತುಂಗಭದ್ರೆ ಕಾಣುತ್ತಾಳೆ. ಅಲ್ಲಿಂದ ಎಡಕ್ಕೆ ಹೊರಳಿದರೆ ಮುಂಚೆ ಬಂದ ಹಾದಿ. ಬದಲಿಗೆ ಕೆಳಕ್ಕಿಳಿದರೆ ಬೆಳಗ್ಗೆ ಕಂಡಂತೆ ತುಂಗಭದ್ರೆಯಲ್ಲಿ ದೋಣಿ ದಾಟಿಸುತ್ತಿದ್ದ ಸ್ಥಳ. ಅಂದರೆ ಅಲ್ಲಿಂದ ನಾವು ಸೈಕಲ್ಲಿಟ್ಟಲ್ಲಿಗೆ ಹತ್ತಿರವಿರೋ ಕೆಂಪಭೂಪ ಮಾರ್ಗಕ್ಕೆ ಯಾವುದಾದರೂ ಶಾರ್ಟ್ ಕಟ್ ಇದೆ ಅಂತಾಯ್ತು. ಇಲ್ಲಿ ಹಾದಿ ತಪ್ಪಿದೆವು ಅಂದುಕೊಂಡಿದ್ರೆ ಅದು ತಪ್ಪು. ಸರಿಯಾದ ಹಾದಿಯಲ್ಲೇ ಸಾಗಿದ್ದೆವು ನಾವು ! ತುಂಗಭದ್ರೆಯ ಎಡಭಾಗದಲ್ಲಿ ಮಂಟಪಗಳ ಸಾಲಂತೆ ದೂರದಿಂದ ಕಾಣುವುದೇ ಕೋದಂಡಸ್ವಾಮಿ ಮಂದಿರ. ರಾಮ, ಸೀತೆ, ಲಕ್ಷ್ಮಣನ ಜೊತೆ ಹನುಮಂತನ ಬದಲು ಸುಗ್ರೀವನಿರೋ ಅಪರೂಪದ ದೇಗುಲವಿದು. ಇಲ್ಲಿನ ನಿತ್ಯಪೂಜೆಯ ಜೊತೆ ಆಗಾಗ ಪ್ರಸಾದಭೋಜನವೂ ಇರುತ್ತಂತೆ. ನಾವು ಹೋದ ದಿನ ನಮಗೆ ಪ್ರಸಾದ ಭೋಜನ  ಸಿಕ್ಕದಿದ್ದರೂ ಸಿಕ್ಕ ಪಾಯಸ ಬೆಳಗ್ಗಿಂದ ನಡೆದ ಅಷ್ಟೂ ಸುಸ್ತನ್ನು ಪರಿಹರಿಸಿ ಮತ್ತಷ್ಟು ಸುತ್ತಾಡೋ ಶಕ್ತಿ ಕೊಟ್ಟಂತ್ತನಿಸಿತ್ತ್ತು

ಯಂತ್ರೋದ್ದಾರಕ ಆಂಜನೇಯ ದೇವಸ್ಥಾನ: 
ರಾಮನಿದ್ದ ಮೇಲೆ ಹನುಮನಿರಲೇ ಬೇಕಲ್ಲವೇ ? ಕೋದಂಡರಾಮ ಮಂದಿರದ ಪಕ್ಕದಲ್ಲೇ ತುಸು ಮೇಲ್ಗಡೆ ಯಂತ್ರೋದ್ದಾರಕ ಆಂಜನೇಯನ ಗುಡಿಯಿದೆ. ಅದನ್ನು ಹತ್ತಿ ಮತ್ತೆ ಕೋದಂಡರಾಮ ಮಂದಿರದತ್ತ ಇಳಿದ್ರೆ ಅದರ ಪಕ್ಕದಲ್ಲಿರೋ ಮಂಟಪಗಳ ಸಾಲು ಕಾಣುತ್ತೆ. ಆ ಮಂಟಪಗಳನ್ನು ಬಳಸಿ ಮುಂದೆ ಸಾಗಿದ್ರೆ ದಾರಿಯೊಂದು ಬಂಡೆಗಳ ಒಳಗೆ ನುಸುಳಿ ಮರೆಯಾಗುತ್ತೆ. ಇಲ್ಲಿನ ಸ್ಥಳೀಯರ ಬಳಿ ಏಕಶಿಲಾ ನಂದಿಯ ಬಳಿ ಹೋಗೋ ದಾರಿ ಯಾವುದು ಅಂದಾಗ ಅವರು ತೋರಿಸಿದ್ದು ಅದೇ ಹಾದಿ. ಬಂಡೆಗಳ ಮಧ್ಯೆ ಎಲ್ಲಪ್ಪ ಹೋಗೋದು ? ಇದ್ಯಾವುದಾದ್ರೂ ಸುರಂಗವಾ ಅಂತ ಬಂಡೆಗಳ ನಡುವಿನ ಮೆಟ್ಟಿಲುಗಳಲ್ಲಿ ಹೆಜ್ಜೆ ಹಾಕುತ್ತಲೇ ಬೆಳಗ್ಗೆ ಇಲ್ಲಿಂದ ಮುಂದೆ ಹಾದಿಯಿಲ್ಲ ಅಂದುಕೊಂಡಿದ್ದ ತಿರುವಿಗೆ ಬಂದು ಸೇರಿದೆವು ! ಅಲ್ಲಿ ಸ್ವಲ್ಪ ಕಿರಿದಾದ ಹಾದಿ. ಕಿರಿದಾದ ತಿರುವನ್ನು ನೋಡಿ ಬೆಳಗ್ಗೆ ವಾಪಾಸ್ ಮರಳದಿದ್ರೆ ಬೆಳಗ್ಗೆಯೇ ಕೋದಂಡಸ್ವಾಮಿಯ ದರ್ಶನ ಪಡೆಯುತ್ತಿದ್ದೆವು. ಯೋಗವೆಂಬುದಿದ್ರೆ ಅದು ಸಿಕ್ಕೇ ಸಿಗುತ್ತೆ ಎಂಬುದು ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾದ್ರೂ ಆ ಸಮಯದಲ್ಲಿ ಇನ್ನೊಂದು ಸತ್ಯದ ದರ್ಶನವಾದಂತಾಯ್ತು. ಅದೆಂದರೆ ಏನಾದ್ರೂ ಸಾಧಿಸಬೇಕು ಅಂತ ಮಾಡೋ ಪ್ರಯತ್ನವನ್ನು ಎಷ್ಟು ಕಷ್ಟ ಎದುರಾದ್ರೂ ಬಿಡಬಾರದು ಅಂತ. ನಾವು ಕೈಬಿಟ್ಟ ಪ್ರಯತ್ನದ ಹತ್ತು ಹೆಜ್ಜೆಗಳ ಆಚೆಗೇ ಗುರಿಯಿರಬಹುದು. ಯಾರಿಗೆ ಗೊತ್ತು !!

ಅಲ್ಲಿಂದ ಬೆಳಗ್ಗೆ ಸೈಕಲ್ಲು ನಿಲ್ಲಿಸಿದ್ದ ಹರಕೆಯ ಕಲ್ಲುಗಳ ಬಂಡೆಯನ್ನು ಬಳಸಿ ಏಕಶಿಲಾ ನಂದಿಯ ಹತ್ತಿರ ಬಂದು ನಿಂತಾಗ ಹಂಪಿಯ ಒಂದು ಭಾಗದ ಪ್ರದಕ್ಷಿಣೆ ಮಾಡಿದೆವಲ್ಲಾ ಎಂಬ ಖುಷಿ. ವಾಸ್ತವದಲ್ಲಿ ಅದು ಪ್ರದಕ್ಷಿಣೆಯಾಗದೇ ಅಪ್ರದಕ್ಷಿಣೆಯಾಗಿದ್ದರೂ ಅದೊಂದು ಖುಷಿ ಕೊಟ್ಟ ಸುತ್ತಾಟ ಎಂದೇ ಹೇಳಬಹುದು. ಬೆಳಗ್ಗಿಂದ ಬರಿಗಾಲಲ್ಲೇ ಸುತ್ತುತ್ತಿದ್ದೇವಲ್ಲಾ, ಇನ್ನಾದರೂ ಸೈಕಲ್ಲನ್ನು ಬಳಸೋಣ ಎಂಬ ಬಯಕೆಯಿಂದ ಮತ್ತೆ ಮುಂದೆ ಸಾಗಿದೆವು. ಹಂಪಿ ಬಜಾರನ್ನು ಬಳಸಿ ಹೇಮಕೂಟದತ್ತ ಸಾಗುತ್ತಿದ್ದ ಏರಿನಲ್ಲಿ ನಮ್ಮ ಸೈಕಲ್ಲನ್ನು ಓಡಿಸಿದೆವು. ಹೇಮಕೂಟ, ಹಜಾರರಾಮ, ಆನೆಲಾಯಗಳತ್ತಣ ನಮ್ಮ ಸುತ್ತಾಟದ ಬಗ್ಗೆ ಮುಂದಿನ ವಾರದಲ್ಲಿ ನೋಡೋಣ.. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x