ಮದವಿಮನಿ ಅಂದ್ರ ಅದರ ಕಳೆನ ಬ್ಯಾರೆ ಇರತದ. ಹೆಣ್ಣು ಮಕ್ಕಳ ಹರಟಿ, ಸಣ್ಣ ಮಕ್ಕಳ ನಗುವಿನ ಕಲರವ. ಹಸಿರು ತೋರಣ, ಮಂಗಳಕರ ಚಪ್ಪರ. ನಗು, ಹಾಸ್ಯ, ಗಡಿಬಿಡಿಯಿಂದ ತುಂಬಿರತದ. ಅದರೊಳಗಂತು ಹಳ್ಳಿಯೊಳಗಿನ ಮದುವಿ ಸಂಭ್ರಮ ಅಂತು ಒಂಥರಾ ಬ್ಯಾರೆನ ಇರತದ.ಅದೊಂದ ಹಳೆಕಾಲದ್ದ ದೊಡ್ಡಂಕಣದ್ದ ಮನಿ. ಯಾವ ಆಡಂಬರ ಇಲ್ಲದ ಬಿಳಿಸುಣ್ಣದಿಂದ ಸಾರಿಸಿ ಅಲ್ಲಲ್ಲೆ ಇಳಿಬಿಟ್ಟ ಕೆಂಪು ಕ್ಯಾಂವಿ ಮಣ್ಣಿನ ಜೋರು. ಬಾಗಲಿಗೆ ಕಟ್ಟಿದ ಮಾವಿನ ತೊಳಲಿನ ತೊರಣ, ಮನಿಮುಂದ ಓಣಿಯ ತುಂಬ ಹಾಕಿದ ಹಂದರ ಹಂದರದೊಳಗ ಬಳೆಗಾರರು ಬಳಿ ಇಡಿಸುವ ಸಂಭ್ರಮ. ಎಲ್ಲಾ ಕಡೆ ಒಂಥರಾ ಕಳೆಕಳೆಯಾದಂಥಾ ವಾತಾವರಣ ಇರತದ.
ನಾನು ಹಳ್ಳಿ ಕಡೆ ಬರಲಾರದ ಎಷ್ಟೊ ವರ್ಷ ಆಗಿದ್ವು. ಇಷ್ಟ ವರ್ಷದ ಮ್ಯಾಲೆ ಗೆಳತಿ ಸುಶೀಲಾನ ಜುಲುಮಿಗೆ ಆಕಿಯ ದೊಡ್ದಅಣ್ಣನ ಮಗಳ ಮದವಿಗೆ ಬಂದಿದ್ದೆ. ಮೊದಲೆಲ್ಲಾ ನಮ್ಮಜ್ಜಿ ಜೋಡಿ ಹಳ್ಳಿಗೆ ಹೋಗತಿದ್ದೆ. ಆ ಹಳ್ಳಿಯೊಳಗ ನಮ್ಮ ಮನಿ ಬಾಜುಕನ ಸುಶೀಲಾನ ಮನಿ ಇತ್ತು. ನಾನು ಮತ್ತ ನನ್ನ ಪ್ರಿತಿಯ ಗೆಳತಿ ಸುಶೀ ಕುಡಿ ಎಷ್ಟ ಮಜಾ ಮಾಡತಿದ್ವಿ ಅಂದ್ರ,ಎಲ್ಲಾರು ಬಂದು ನಮ್ಮಜ್ಜಿ ಮುಂದ, " ಅವ್ವಾರ ನಿಮ್ಮ ಮಮ್ಮಗಳಿಗೆ ಮತ್ತ ಆ ರಾಮಣ್ಣಾರ ಮಗಳ ಸುಶೀಲಾಗ ಬಾಲಾ ಒಂದಿಲ್ಲ ನೋಡ್ರಿ,ಎರಡುಕೂಡೆ ತ್ವಾಟದಾಗ ಥೇಟ್ ಮಂಗ್ಯಾನಂಘ ಧಾಂದಲೇ ಹಾಕತಿರತಾವ.ಖರೆ ಖರೇನ್ ಆ ಗಿಡದಾಗಿನ ಮಂಗ್ಯಾಗೊಳ ಇವೆರಡನ್ನು ನೋಡಿನ ಗಿಡಾ ಹತ್ತಲಿಕ್ಕೆ ಕಲತಿರಬೇಕನಿಸ್ತದ ನೋಡ್ರಿ" ಅಂತ ನಮ್ಮಜ್ಜಿನ ಮಾತಾಡಿಸಿ ನಮ್ಮ ಫೀರ್ಯಾದಿ ಹೇಳಿ ಅಜ್ಜಿ ಕೊಟ್ಟ ಅವಲಕ್ಕಿ ಇಸಕೊಂಡ,ತಮ್ಮ ಕಷ್ಟಾ ಸುಖಾ ಹೇಳ್ಕೊಂಡ,ಪರಿಹಾರಾ ಕೇಳ್ಕೊಂಡ ಹೋಗ್ತಿದ್ರು.ಆದ್ರ ನಮ್ಮಜ್ಜಿ ಹಿರೇಮಮ್ಮಗಳಂತ ನನ್ನ ಮ್ಯಾಲೆ ಭಾಳ ಪ್ರೀತಿ ಇದ್ಲು, ನಂಗ ಭಾಳ ಎನು ಬೈತಿದ್ದಿಲ್ಲಾ,ಜ್ವಾಕಿಂದ ನೆಲದ ಮ್ಯಾಲಷ್ಟ ಆಡ್ರಿ,ಗಿಡಾಪಡಾ ಹತ್ತಬ್ಯಾಡ್ರಿ ಅಂತ್ತಿದ್ಲು ಅಷ್ಟ. ನಾವಿಬ್ಬರು ಕೂಡಿ ಹೊಳಿದಂಡಿ ಗೆ ಹೋಗಿ ಗಪ್ಪಚಿಪ್ಪ ಯಾರಿಗು ಕಾಣದ ಹಂಗಾ ಕೂತು ಮೀನಾ ಹಿಡಿತಿದ್ವಿ ಒಂದಿನಾ ಹಿಂಗ ಮೀನಾ ಹಿಡಿಬೇಕಾದ್ರ ಸುಶೀಯ ಅಪ್ಪಾ ರಾಮಣ್ಣಮಾಮಾನ ಕೈಯ್ಯಾಗ ಸಿಕ್ಕು, ಎನ ಅಪದ್ಧ ಹುಟ್ಟಿರಿ ಬ್ರಾಹ್ಮಣರ ಮನ್ಯಾಗ ಅಂದು ಇಬ್ಬರನು ಮನಿಗೆ ದರಾ ದರಾ ಎಳ್ಕೊಂಡ ಹೋಗಿ ಭಾವಿಕಟ್ಟಿಮ್ಯಾಲೆ ಕುಡಿಸಿ ನೀರ ಹಾಕಿಸಿ.ಇಬ್ಬರಿಗು ಪಂಚಗವ್ಯಾ ಕುಡಿಸಿದ್ದಾ.
ಹಿಂಗ ದಿನಾ ಒಂದ ಎನರೆ ಒಂದು ಕಿತಬಿ ಕೆಲಸಾ ಮಾಡ್ಕೊತ ಬಯ್ಸ್ಕೊತ ಇರ್ತಿದ್ವಿ. ಪಾತವ್ವನ ಕೋಳಿಗೊಳ ಎರಡು ಕಾಲ ಕುಡಿಸಿ ಧಾರಾ ಕಟ್ಟಿ ಅವು ನಡಿಲಿಕ್ಕೆ ಬರಲಾರದ ಎಡವೊದನ್ನ ನೋಡಿ ಕಿಸಿ ಕಿಸಿ ನಗತಿದ್ವಿ,ಆದ್ರ ಪಾತವ್ವ ಮುದಕಿ ನಾವ ಮಾಡಿದ್ದಕ್ಕ ಸಿಟ್ಟಿಗೆಳ್ತಿದ್ದಿಲ್ಲಾ,ಬಚ್ಚಬಾಯಿಲೆ ಮುಸಿ ಮುಸಿ ನಕ್ಕೊತ ಕೋಳಿ ಕಾಲಿನ ಧಾರಾ ಬಿಚ್ಚತಿದ್ಲು. ಮನ್ಯಾಗ ಯಾರಿಗು ಕಾಣಸಲಾರಧಂಗ ಹುಣಸಿಹಣ್ಣು,ಉಪ್ಪು,ಜಿರಿಗಿ,ಖಾರಪುಡಿ,ಬೆಲ್ಲಾ ಎಲ್ಲಾ ತಗೊಂಡು ಬಂದು,ಹಿತ್ತಲದಾಗ ಅರಬಿ ಒಗಿಯೊಕಟ್ಟಿ ಮ್ಯಾಲೆ ಹುಣಸಿಹಣ್ಣಿನ ಚಿಗಳಿ ಕುಟ್ಟಿ,ಒಂದ ಉದ್ದನ ಕಡ್ಡಿಗೆ ಅಂಟಿಸಿಕೊಂಡು,ನಮ್ಮ ಮನಿಮುಂದ ಒಂದು ಸಿನೇಮಾ ಟಾಕೀಸ್ ಇತ್ತು,ಅಲ್ಲೆ ಹೋಗಿ ಸಿನೇಮಾ ನೋಡ್ಕೊತ ಕುತುಬಿಡ್ತಿದ್ವಿ.ಆ ಟಾಕೀಸ್ ನ್ಯಾಗ ನಾವು ಯಾವಾಗ ಹೋದ್ರು ನಮಗ ಫ್ರೀ ಪ್ರವೇಶ ಇರ್ತಿತ್ತು. ಹಿಂಗ ಮನಸ್ಸು ನೆನಪಿನ ಪುಟಗೊಳನ್ನ ಒಂದೊಂದ ತಿರುವಿ ಹಾಕಲಿಕತ್ತಾಗ ಸುಶೀ ಬಂದು ಬಳಿ ಇಟಗೊಳ್ಳೊಣ ಬಾ ಅಂತ ಕರಕೊಂಡ ಹೋದ್ಲು. ಸುಶೀದು ಮದುವ್ಯಾಗಿ ಎರಡು ವರ್ಷ ಆಗಿತ್ತು. ಆಕಿ ಪಿಯುಸಿ ಆದಮ್ಯಾಲೆ ಮುಂದ ಕಲಿಲೆಯಿಲ್ಲಾ. ಆರಾಮಾಗಿ ತಿಂದು ಉಂಡು, ಕಥಿ ಕಾದಂಬರಿ ಓದ್ಕೋತ ಇದ್ದು, ಮನ್ಯಾಗ ವರಾ ನೋಡಿ ಮದವಿ ಮಾಡಿದಾಗ ಖುಷಿಯಿಂದ ಪಕ್ಕಾ ಗೃಹಿಣಿ ಆಗಿದ್ಲು. ಆದ್ರ ನಾನು ಮಾತ್ರ ಡಿಗ್ರಿ ಮುಗಿಸಿ ನೌಕರಿಗೆ ಹೊಂಟಿದ್ದೆ. ನಾ ಕಡಿ ಸಲಾ ಹಳ್ಳಿಗೆ ಹೋಗಿದ್ದ ಅಂದ್ರ ಸುಶೀಯ ಅಕ್ಕ ಶಶಿಯ ಮದವಿಗೆ. ಶಶಿ ಅಕ್ಕನ ಮದವಿ ನೆನಪಾದ ಕೂಡಲೆ ಮನಸ್ಸಿನ್ಯಾಗ ಒಂಥರಾ ತಂಗಾಳಿ ಸುಳಿಧಂಗ ಆತು. ಆ ಸೂಸುಗಾಳಿಗೆ ಮತ್ತ ತಾವಾಗಿನ ನೆನಪಿನ ಪುಟಗೊಳು ಹವರಗ ಒಂದೊಂದಾಗಿ ಹಾರಲಿಕತ್ವು.
ಶಶಿ ಅಕ್ಕನ ಮದುವ್ಯಾಗ ನಂದು ಅದ ಇನ್ನ ಎಸ್.ಎಸ್.ಎಲ್.ಸಿ ಮುಗಿದಿತ್ತು.ಏಪ್ರೀಲ್ ತಿಂಗಳ ಬ್ಯಾಸಗಿ ಸುಟಿಯೊಳಗನ ಮದವಿ ಇಟಗೊಂಡಿದ್ರು. ನಾನು ಆವಾಗ ಅಜ್ಜಿ ಜೋಡಿ ಹಳ್ಳಿಗೆ ಹೋಗಿದ್ದೆ. ನಾನು ಸುಶೀ ಇಬ್ಬರು ಮದವಿ ಮನಿಯೊಳಗ ಛಲ್ಲ ಛಲ್ಲ ಓಡಾಡಿದ್ದೆ ಓಡಾಡಿದ್ದು. ಎಲ್ಲಾರ ಹೇಳೊ ಕೆಲಸಾ ಭಾಳ ಹುರುಪಿನಿಂದ ಮಾಡತಿದ್ವಿ. ದೇವರಸಮಾರಾಧನಿಯ ಹಿಂದಿನ ದಿನಾ ಎಲ್ಲಾರು ಊರಿಂದ ಬರಲಿಕತ್ತಿದ್ರು. ಮದವಿ ಮನಿ ಕಳೆ ರಂಗೇರಲಿಕತ್ತಿತ್ತು. ಊರಿಂದ ಬಂದವರಿಗೆಲ್ಲಾ ಶರಬತ್ತ ಮಾಡಿಕೊಡಲಿಕತ್ತಾಗನ ಅಲ್ಲೇನು ಸುಶೀಯ ಮೂರನೆಯ ಅಣ್ಣನ ಗೇಳೆಯಾ ಮನೋಜ ಅಡಗಿ ಮನಿಯೊಳಗ ನೀರು ಬೇಕಂತ ಬಂದಿದ್ದಾ. ಹಾಲಿನ ಮುಖಬಣ್ಣದ, ಚಿಗುರು ಮಿಸೆಯ, ತುಂಟ ಕಂಗಳ ಆಂವನ್ನ ನೋಡಿ ಮನಸ್ಸು ಒಂದ ಕ್ಷಣಾ ಜೋಕಾಲಿ ಆಡಿತ್ತು. ಎತ್ತರಕ್ಕ ತಕ್ಕ ದಪ್ಪನಾದ ಚೆಲುವರ ಸಾಲಿನೊಳಗ ಮೊದಲಿಗೆ ನಿಲ್ಲಿಸೊ ಹಂಗಿದ್ದಾ. ಸುಶೀಗೆ ಮೊದಲಿನಿಂದನು ಪರಿಚಯ ಇದ್ದದ್ದರಿಂದ ಸಂಕೊಚ ಇಲ್ಲದ ಆಂವನ್ನ ಜೋಡಿ ಮಾತಾಡಿ ನೀರು ಕೊಟ್ಟಳು. ಆಂವಾ ನಾನು ಯಾರಂತ ಕೇಳಿ ತಿಳ್ಕೊಂಡು ನಗುವ ಕಂಗಳಿಂದ ನನ್ನ ನೋಡಿ ಹೊರಗ ಹೋಗಿದ್ದಾ. ಆವಾಗಿಂದ ಶೂರು ಆಗಿತ್ತು ಆಂವನ ನೋಟಾ ನಾ ಎಲ್ಲೆ ಹೋದ್ರು ನನ್ನ ಹಿಂಬಾಲಿಸ್ತಿತ್ತು. ಮೊದಲನೆ ಸಲಾ ಒಬ್ಬ ಹುಡುಗನ ಈ ಪರಿ ಮನಸ್ಸಿಗೆ ಹಿತಾ ಅನಿಸಿದ್ರು ಯಾವುದೊ ನಾಚಿಕಿಯಿಂದ ಆಂವನ ಕಣ್ಣ ತಪ್ಪಿಸಿ ಅಡ್ಡಾಡತಿದ್ದೆ. ದೇವರೂಟದ ದಿನಾ ನಾನು ಸುಶೀ ಇಬ್ರು ಒಂದೆ ಥರದ್ದ ರೇಷ್ಮಿ ಲಂಗಾ ದಾವಣಿ ಹಾಕ್ಕೊಂಡು ಕೈ ತುಂಬ ಹಸಿರು ಬಳಿ ಇಟಗೊಂಡು , ಉದ್ದನೆಯ ಹೆರಳಿಗೆ ಮುಡಿತುಂಬ ಮಲ್ಲಿಗಿ ಮಾಲಿ ಮುಡಕೊಂಡು ಭರ್ಜರಿ ರೆಡಿಯಾಗಿ ಓಡಾಡತಿದ್ವಿ.
ನನ್ನ ಅಲಂಕಾರ ನೋಡಿ ಮನೋಜ ಛಂದ ಕಾಣಿಸ್ಲಿಕತ್ತಿ ಅಂತ ಕಣ್ಣೊಳಗನ ತನ್ನ ಮೆಚ್ಚುಗೆನ ಹೇಳಿದ್ದಾ. ನಾ ಆಂವನ ಮುಂದ ಸುಳಿದಾಡಿದಾಗೊಮ್ಮೆ "ದುಂಡು ಮಲ್ಲಿಗೆ ಮಾತಾಡೆಯಾ, ಕೆಂಡ ಸಂಪಿಗೆ ನೀನಾಗೇಯಾ" ಅಂತ ಸಿನೆಮಾ ಹಾಡು ಹಾಡಿ ನನ್ನ ಕಾಡಸತಿದ್ದಾ. ಆಂವಾ ನನ್ನ ಹಂಗ ಕಾಡೊದು ಮದವಿ ಮನ್ಯಾಗ ಎಲ್ಲಾರಿಗು ಗೊತ್ತಾಗಿ ಬಿಟ್ಟಿತ್ತು. ಎಲ್ಲಾರು ಆಂವನ ಹೆಸರಿನ ಜೋಡಿ ನನ್ನ ಗಂಟ ಹಾಕಿ ಚಾಷ್ಟಿ ಮಾಡಿ ಮಾಡಿ ಗೋಳ ಹೊಯ್ಕೊತಿದ್ರು.ಆಂವನು ಹಂಗ ಮಾಡತಿದ್ದಾ ಊಟಕ್ಕ, ಫಳಾರಕ್ಕ ಮುದ್ದಾಮ ನನ್ನ ಬಾಜುಕನ ಬಂದು ಕೂತು, " ನೀನೆ ನನ್ನಾ ಪುಟಾಣಿ ರಂಭೆ ನಾನೇ ನಿನ್ನಾ ಜೋಡಿ ಬೊಂಬೆ" ಅಂತ ಹಾಡಿ ಕಾಡಿಸಿ ನಾ ಎಲಿ ಬಿಟ್ಟು ಓಡಿ ಹೋಗೊ ಹಂಗ ಮಾಡತಿದ್ದಾ. ಮದವಿ ಹಿಂದಿನ ದಿನಾ ಸಂಜಿಕೆ ವರ ಪೂಜಾದ್ದ ಹೊತ್ತಿಗೆ ಎಲ್ಲಾರು ಕಲ್ಯಾಣ ಮಂಟಪಕ್ಕ ಹೋಗಬೇಕಾದ್ರ ಬೇಕಂತನ ನನ್ನ ಬಾಜುದ್ದ ಸೀಟ್ ನ್ಯಾಗ ಬಂದುಕೂತಿದ್ದು ನೋಡಿ ಎಲ್ಲಾರೂ "ಹೆಂಗು ಜೋಡಿಮ್ಯಾಲೆ ಕೂತಿರಿ ಇಡಜೋಡ ಛೊಲೊ ಕಾಣಸ್ತದ ಇದ ಹಂದರದಾಗ ನಿಮ್ಮಿಬ್ಬರದು ಹೊಳಿಗಿ ಎಬ್ಬಿಸಿಬಿಡೋಣು ಅಂತ ಕಾಡಲಿಕ್ಕೆ ಶೂರು ಮಾಡಿದ್ರು. ಅವರೆಲ್ಲಾರ ಆ ಕಾಡೊಣಕಿ, ಬಾಜುಕ್ಕ ಕೂತ ಮನೋಜನ ತುಂಟತನಾ ನನ್ನ ನಾಚಿ ನೀರಾಗೊ ಹಂಗ ಮಾಡಿದ್ವು.
ಮರುದಿನಾ ಅಕ್ಷತಾದ ಹೊತ್ತಿಗೆ ನಮ್ಮಜ್ಜಿಯ ಜುಲುಮಿಗೆ ಮೊದಲನೇ ಸಲಾ ಸೀರಿ ಉಟಗೊಂಡಿದ್ದೆ. ಅವತ್ತಂತು ಮನೋಜನ ಕಣ್ಣು ನನ್ನ ಮ್ಯಾಲಿಂದ ಸರಿದಿರಲಿಲ್ಲಾ. ಆವತ್ತೆಲ್ಲಾ ನಾ ಆಂವನ ಕಣ್ತಪ್ಪಿಸಿ ಅಡ್ಡಾಡಿದ್ದೆ. ಮದವಿ ಕಾರ್ಯಕ್ರಮ ಎಲ್ಲಾ ಸೂಸುತ್ರ ಮುಗದಿತ್ತು. ಬೀಗರು ಶಶಿ ಅಕ್ಕನ್ನ ಕರಕೊಂಡು ಸಂತೃಪ್ತಿಯಿಂದ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದರು.ಆವತ್ತೆಲ್ಲಾ ಭಾಳ ಆಯಾಸ ಆಗಿತ್ತು ನಾನು ಸುಶೀ ಮನಿಗೆ ಹೋಗಲೇ ಇಲ್ಲಾ. ನಮ್ಮನಿಗೆ ಹೋಗಿ ಮಲಗಿಬಿಟ್ಟಿದ್ದೆ.
ಮರುದಿನಾ ಸ್ನಾನಾ ಮುಗಿಸಿ ಸುಶೀ ಮನಿಗೆ ಹೋದಾಗ ಅಲ್ಲೆ ಸತ್ಯನಾರಾಯಣ ಪೂಜಾದ್ದ ತಯಾರಿ ನಡದಿತ್ತು. ಅಲ್ಲೆ ಕೂತು ಚಹಾ ಕುಡಿಲಿಕತ್ತಿದ್ದ ಮನೋಜನ ಮುಖ ನನ್ನ ನೋಡಿದಕೂಡಲೆ ಒಂಥರಾ ಖುಷಿಯಿಂದ ಅರಳಿತು. ಆದ್ರು ನಾನು ಆಂವನ್ನ ನೋಡಿನು ನೋಡಲಾರಧಂಗ ಒಳಗ ಹೋದೆ.ಆವತ್ತೆಲ್ಲಾ ನಾ ಮತ್ತ ಆಂವನ ಕಣ್ನತಪ್ಪಿಸಿನ ಅಡ್ಡಾಡಿದ್ದೆ. ನಾ ಎಷ್ಟು ಆಂವನ್ನ ಕಣ್ಣ ತಪ್ಪಿಸಿ ಅಡ್ಡಾಡತಿದ್ನೊ ಅಷ್ಟ ಹಟಕ್ಕ ಬಿದ್ದು ಆಂವಾ ನನ್ನ ಹುಡಿಕ್ಕೊತ ಬರತಿದ್ದಾ. ನಂಗ ಸಾಕಾಗಿ ಹೊಗಿತ್ತು ಆಂವನ ಸಲುವಾಗಿ.
ಶಶಿ ಅಕ್ಕನ ಮನಿಯವರೆಲ್ಲಾ ಬಂದು ಊರಿಂದ ಬಂದಮ್ಯಾಲೆ ಹೊಸಾ ಮದಮಕ್ಕಳ ಕೈಯಿಂದನ ಪೂಜಾ ಮಾಡಿಸಿದ್ರು.ಬಂದ ಬೀಗರು ಬಳಗದವರು ಪೂಜಾ ಆದಮ್ಯಾಲೆ ಊಟಾ ಮುಗಿಸಿ ತಮ್ಮ ತಮ್ಮ ಊರಿಗೆ ಹೋಗಿ ಮನಿ ಸ್ವಲ್ಪ ಖಾಲಿ ಖಾಲಿ ಅನಿಸ್ಲಿಕತ್ತಿತ್ತು. ಮನಿ ಮಂದಿ ಅಷ್ಟ ಉಳದು ಶಾಂತ ಅನಿಸಿತ್ತು. ಆವತ್ತ ಭಾಳ ಬಿಸಲಿತ್ತು. ಇಡಿ ದಿನಾ ಝಳಾ ಹೊಯ್ದು ಮೂರು ಸಂಜಿಲೇ ಮಾಡಹಾಕಿ ಸಣ್ಣಗ ಮಳಿ ಬರೊಹಂಗಿತ್ತು. ಸುಶೀ ಹೊರಗ ಎಲ್ಲೊ ಇದ್ಲು, ಆವರಮ್ಮ ಅಲ್ಲೆ ಇದ್ದ ನಂಗ ಹಿಂದ ಹಿತ್ತಲದಾಗ ಒಣಹಾಕಿದ್ದ ಅರವಿ ತಗೊಂಡ ಬಾ ಅಂತ ಹೇಳಿದ್ರು. ಆತು ಅಂತ ನಾ ಹಿತ್ತಲಕ್ಕ ಹೋದೆ ತಂಪನೆಯ ಗಾಳಿ ಬೀಸಲಿಕತ್ತಿತ್ತು, ಜಿಟಿಜಿಟಿ ಮಳಿ ಶೂರುವಾಗಿತ್ತು . ಮೂರು ಸಂಜಿಯ ಚುಮುಚುಮು ಬೆಳಕಿನ್ಯಾಗ ಲಗು ಲಗು ಅರವಿ ತಕ್ಕೊಂಡ ಇನ್ನೆನ ಬರಬೇಕನ್ನೊದ್ರಾಗ ಬಾವಿಕಟ್ಟಿ ಕಡೆ ಮನೋಜ ನಿಂತಿದ್ದಾ. ಆ ಮಬ್ಬುಗತ್ತಲೊಳಗ ಆಂವನ್ನ ಅಲ್ಲಿ ನೋಡಿ ನಂಗೇನ ಮಾಡಬೇಕನ್ನೊದ ಗೊತ್ತಾಗಲಿಲ್ಲಾ. ಆಂವನ್ನ ದಾಟಿನ ನಾ ಮನಿಯೊಳಗ ಹೋಗಬೇಕಾಗಿತ್ತು.ಇನ್ನೆನು ನಾ ಆಂವನ್ನ ದಾಟಿ ಓಡಿಹೋಗಬೇಕನ್ನೊದ್ರಾಗ ಆಂವಾ ನನ್ನ ಕೈ ಹಿಡಿದೆಳಕೊಂಡು ತನ್ನ ಬಾಹುಗಳೊಳಗ ನನ್ನ ಬಂಧಿಸಿ ಗಲ್ಲಕ್ಕ ಮುತ್ತು ಕೊಟ್ಟುಬಿಟ್ಟಿದ್ದಾ. ಆ ಚಳಿಗಾಳಿ, ಜಿಟಿಜಿಟಿ ಮಳಿಯೊಳಗ ಮೊದಲನೆ ಸಲಾ ಹುಡುಗನ ಸ್ಪರ್ಷದಿಂದ ನಂಗ ಮೈಮರೆತು ಹೋಗಿತ್ತು.ಒಂದ ಘಳಿಗಿ ಜಗತ್ತೆಲ್ಲಾ ಸ್ತಬ್ಧ ಆತೆನೊ ಅನಿಸಿತ್ತು. ಏನಾಗಲಿಕತ್ತದ ಅಂತ ವಿಚಾರ ಮಾಡೊದ್ರಾಗ ಮಿಂಚು ಹರಿಧಂಗ ಏನೊ ಆಗಿಹೋಗಿತ್ತು. ಮಳಿ ಜೋರಾದಾಗ ಇನ್ನು ನಾ ಆಂವನ ಬಂಧನದೊಳಗ ಇದ್ದೇನಿ ಅಂತ ಗೊತ್ತಾಗಿ ಬಿಗಿಯಾದ ಆಂವನ ಹಿಡಿತದಿಂದ ಬಿಡಿಸಿಕೊಂಡು ಒಳಗ ಓಡಿದ್ದೆ.
ಅಲ್ಲೆ ಒಂದ ಕ್ಷಣಾನು ನಿಲ್ಲದನ ಸುಶೀ ಕರೆದ್ರು ಕೇಳಲಾರದ ಸುರಿಯೊ ಮಳಿಯೊಳಗ ಹಂಗ ಓಡಿ ನಮ್ಮನಿ ಸೇರಿದ್ದೆ. ಆವತ್ತ ರಾತ್ರಿಯಿಡಿ ಮಳಿ ಸುರಿದಿತ್ತು. ಮಳೆಯ ರಭಸ ನನ್ನ ಮನಸ್ಸಿನೊಳಗ ಆಗಲಿಕತ್ತಂಥಾ ಭಾವನೆಗಳ ಏಳಿರಿಳಿತದ ಸಂಗೀತಕ್ಕ ಶೄತಿ ಹಿಡಿಧಂಗ ಇತ್ತು. ಯಾವುದೊ ಒಂದು ಹೊಸ ಅನುಭವದ ಸೆಳೆತ. ಇನ್ನು ಬೇಕು ಬೇಕು ಅನ್ನೊ ತುಡಿತ. ರೂಮಿನೊಳಗ ಒಬ್ಬಾಕಿನ ಮಲಗಿದ್ರು ಇನ್ನು ಆಂವನ ಬಾಹು ಬಂಧನದ ಬಿಗಿಯಾದ ಹಿಡಿತದ ಅನುಭವ. ಒಂದು ಕ್ಷಣಾನು ಬಿಡದ ಬಿಸಿಯುಸಿರಿನ ಕಚಗುಳಿಯ ಅನುಭೂತಿ. ರಾತ್ರಿಯಿಡಿ ಹೇಳಲಾಗದ ಒಂದು ಸುಖದ ಆಮಲಿನೊಳಗನ ಹೊರಳಾಡಿ ಕಳೆದಿದ್ದೆ. ಮುಂಝಾನೆ ಎದ್ದಾಗ ನಾನು ನಾನಗಿರಲಿಲ್ಲ. ಕನ್ನಡಿಯೊಳಗ ನನ್ನ ಮುಖ ನಾನೆ ನೋಡಿಕೊಂಡು ನಾಚಿದ್ದೆ. ಆವತ್ತ ಸುಶೀ ಮನಿಗೆ ಹೋಗಲಿಕ್ಕೆ ತುದಿಗಾಲೊಳಗ ಕಾತರಿಸ್ತಿದ್ದೆ. ಅಜ್ಜಿಕೊಟ್ಟ ಹೂವಿನ ಬುಟ್ಟಿ ತಗೊಂಡು ಸುಶೀ ಮನಿಗೆ ಬಂದಾಗ ಎದುರಾದದ್ದು ಬ್ಯಾಗ ಹೆಗಲಿಗೆ ಹಾಕ್ಕೊಂಡು ಊರಿಗೆ ಹೊಂಟು ನಿಂತಿದ್ದ ಮನೋಜ. ಖುಷಿಯಿಂದ ಓಡಿ ಬಂದ ನಂಗ ಎಡವಿ ಬಿದ್ದಂಗಾಗಿತ್ತು. ಆದರ ಏನು ಅಂತ ಮಾತಾಡೊದು ಆಂವನ ಜೊತಿಗೆ ಸುಶೀ ಅಣ್ಣನು ಹೊಂಟಿದ್ದಾ. ಯಾವಾಗಲು ನಗು ಮುಖದಿಂದ ಇರತಿದ್ದ ಆಂವಾ ಇವತ್ತ ಭಾಳ ಗಂಭೀರ ಆಗಿದ್ದಾ. ಬಹುಶಃ ಆಂವಗು ಬ್ಯಾಸರಾಗಿರಬೇಕು ಅದನ್ನ ಮರೆಸಲಿಕ್ಕೆ ಹಂಗಿದ್ದಾ ಏನೊ. ಹೋಗಿಬರ್ತೇನಿ ಅಂತ ಕಣ್ಣೊಳಗಿಂದನ ಸನ್ನಿ ಮಾಡಿ ಹೋಗೆಬಿಟ್ಟಿದ್ದಾ. ಉಕ್ಕಿ ಬರೊ ಕಣ್ಣಿರನ್ನ ಹೇಂಗೊ ತಡಕೊಂಡು ಸುಮ್ನಾಗಿದ್ದೆ. ನನ್ನ ಜೀವನದೊಳಗಿನ ಚೇತನನ ಹೊಧಂಗ ಅನಿಸಿತ್ತು. ಮಾತೆ ಬರಧಂಗ ಮೌನಿ ಆಗಿಬಿಟ್ಟಿದ್ದೆ. ನನ್ನ ಈ ಬದಲಾವಣೆ ಸುಶೀ ಗಮನಕ್ಕ ಬಂದಿತ್ತು. ಮನೋಜ ಊರಿಗೆ ಹೋಗಿದ್ದನ ನನ್ನ ಈ ಸ್ಥಿತಿಗೆ ಕಾರಣಾ ಅಂತ ಆಕಿಗೆ ಗೊತ್ತಿತ್ತು. ಆಕಿ ಕೇಳಿದ್ದ ತಡಾ ಎಲ್ಲ ಹೇಳಿ ಅತ್ತು ಬಿಟ್ಟಿದ್ದೆ. ಮುಂದ ಎರಡು ದಿನದಾಗ ಅಜ್ಜಿ ಜೋಡಿ ವಾಪಸ ಊರಿಗೆ ಬಂದು ಬಿಟ್ಟಿದ್ದೆ. ಆಮ್ಯಾಲೆ ಹಳ್ಳಿ ಕಡೆ ಹೋಗಲಿಕ್ಕಾಗಲೇ ಇಲ್ಲಾ. ನಾನು ನನ್ನ ಕಾಲೇಜು,ಅಭ್ಯಾಸ ಅಂತ ವ್ಯಸ್ತ ಆಕ್ಕೊತನ ಹೋದೆ. ಸುಶೀ ಮತ್ತ ನನ್ನ ನಡುವ ಯಾವಾಗದ್ರು ಒಮ್ಮೊಮ್ಮೆ ಪತ್ರ ಇಲ್ಲಾ ಫೋನ್ ನ್ಯಾಗ ಮಾತುಕಥಿ ಆಗತಿತ್ತು. ಪರೀಕ್ಷಾ ಇದ್ದದ್ದರಿಂದ ಸುಶೀ ಮದವಿಗು ಹೋಗಲಿಕ್ಕಾಗಲಿಲ್ಲ.
ಆದರ ಮನೋಜ ಮಾತ್ರ ನನ್ನ ಸುಪ್ತ ಮನಸ್ಸಿನಾಳದೊಳಗ ಆವಾಗಿವಾಗ ಹಿತವಾದ ನೆನಪುಗಳನ್ನೆಬ್ಬಿಸಿಕೊತ ಆರಾಮಾಗಿ ನೆಲೆಸಿದ್ದಾ. ಇತ್ತಿತ್ತಲಾಗ ಮನ್ಯಾಗ ಅಮ್ಮಾ ಮತ್ತ ಅಣ್ಣಾ ವೈನಿ ಎಲ್ಲಾರು " ಮತ್ತೆನು ಓದೊದು ಆತು ನೌಕರಿನು ಆತು ಇನ್ನ ಮದವಿ ಅಂತ ಒಂದ ಮಾಡ್ಕೊಂಡು ನಮ್ಮ ಜವಾಬ್ದಾರಿ ಮುಗಿಸಲಿಕ್ಕೆ ಆವಕಾಶ ಕೊಡು " ಇಷ್ಟ ದಿನಾ ನೀ ಹೇಳಿದ್ದಕ್ಕೆಲ್ಲಾ ಹೂಂ ಅಂತ ಸುಮ್ನ ಇದ್ವಿ ಇನ್ನ ನಮ್ಮ ಮಾತು ನೀ ಕೇಳತಕ್ಕದ್ದು " ಅಂತ ಶೂರು ಮಾಡಿದ್ರು. ಯಾಕೊ ಮದವಿ ಅಂದ ಕೂಡಲೆ ಮನೋಜ ನೆನಪಾಗತಿದ್ದಾ. ಯಾವುದೊ ಒಂದು ಅವ್ಯಕ್ತ ನೋವು ನಿರಾಸೆಯ ಭಾವ ಮನಸ್ಸಿಗೆ ಬಂದಡರತಿತ್ತು. ಅದೇ ಹೊತ್ತಿನ್ಯಾಗ ಸುಶೀ ಫೋನ್ ಮಾಡಿದ್ಲು. ಆಕಿಯ ದೊಡ್ಡ ಅಣ್ಣನ ಮಗಳ ಮದವಿ ಇತ್ತು. ನಾ ಬರಬೇಕಂತ ಹಟಾ ಹಿಡದಿದ್ಲು. ನಂಗು ಯಾಕೊ ಹಳ್ಳಿಗೆ ಹೋಗಬೇಕಂತ ಮನಸ್ಸಾಗಿತ್ತು. ಒಂದವಾರ ರಜಾ ಹಾಕಿ ಮದವಿಗೆ ಅಂತ ಬಂದಿದ್ದೆ. ಹಿಂಗ ನೆನಪಿನ ಹಾಳಿಗೊಳನ್ನ ತಿರುವಿ ಹಾಕ್ಕೊತಕೂತಾಗ ಸುಶೀ ಬಂದು ವರಪೂಜಿಗೆ ಹೊತ್ತಾತು ಕಲ್ಯಾಣಮಂಟಪಕ್ಕ ಹೋಗಬೇಕು ತಯಾರಾಗೊಣ ಬಾ ಅಂತ ಕೈಹಿಡದು ಎಳಕೊಂಡು ಹೊದ್ಲು. ಎಲ್ಲಾರು ತಯಾರಾಗಿ ಹೊಂಟಾಗ ಮನೋಜನ ನೆನಪಾಗಿ ಮನಸ್ಸು ಭಾರ ಆತು. ಸಂಜಿ ಸರಿಲಿಕತ್ತಿತ್ತು ಕಲ್ಯಾಣಮಂಟಪದ ಒಂದೊಂದ ಮೆಟ್ಟಲಾ ಹತ್ತಿಹೊಂಟಿದ್ದೆ ಎದುರಿಗೆ ಯಾರೊ ನನ್ನ ನೋಡಕೊತನ ಬರಲಿಕತ್ತಾರ ಅನ್ನಿಸಿ ದಿಟ್ಟಿಸಿ ನೋಡಿದೆ. ಮನಸ್ಸಿನೊಳಗ ತಂಗಾಳಿ ಬೀಸಿದ ಅನುಭವ ಆತು. ಆಂವಾ ಮನೋಜ ಆಗಿದ್ದಾ. ಖುಷಿಯಿಂದ ಓಡಿ ಆಂವನ ಹತ್ತರ ಹೋಗಬೇಕನಿಸಿತ್ತು ಆದ್ರು ಹಂಗ ಬಂದ ಆ ಭಾವನೆಗಳನ್ನ ತಡಕೊಂಡೆ. ಇಷ್ಟು ವರ್ಷ ಮನಸ್ಸಿನೊಳಗಿದ್ದು ನನ್ನ ಕಾಡಿದ ಆಂವನ್ನ ಕಣ್ತುಂಬ ನೋಡಿದೆ. ಸ್ವಲ್ಪ ಗುಂಡಗುಂಡಗಾಗಿದ್ದಾ. ಕಣ್ಣಿಗೆ ಚಸ್ಮಾ ಬಂದು ಇನ್ನು ಛಂದ ಕಾಣಿತಿದ್ದಾ. ಆದ್ರ ಆಂವನ ಆ ತುಂಟು ನೋಟಾ ಮಾತ್ರ ಹಂಗೆ ಇತ್ತು ಏನು ಬದಲಾಗಿದ್ದಿಲ್ಲಾ. ಇಷ್ಟು ವರ್ಷದೊಳಗ ಆಂವಾ ಮದವಿ ಆಗಿದ್ರುನು ಆಗಿರಬಹುದು ಅಂತ ಅನ್ನಿಸಿ ಮನದ ಉತ್ಸಾಹ ಒಮ್ಮೆಲೆ ಜರ್ರಂತ ಇಳಧಂಗಾತು.
ಏನು ಮಾತಾಡಬೇಕಂತ ಗೊತ್ತಾಗದ ಸುಮ್ನಾ ನಿಂತಾಗ ಅಲ್ಲೆ ಬಂದ ಸುಶೀ ಮನೋಜನ್ನ ನೋಡಿ " ಅಪ್ಪಾ ಮಹಾರಾಯಾ ಬಂದ್ಯಾ, ನೀ ಹೇಳಿಧಂಗ ನಿನ್ನ ಹುಡಗಿನ್ನ ಕರೆಸಿ ನಿಂಗ ಒಪ್ಪಿಸಿನಿ. ಇಬ್ರು ಮಾತಾಡಿಕೊಂಡು ಲಗೂನ ಸಿಹಿ ಸುದ್ದಿ ಹೇಳ್ರಿ ಅಂದು ನಮ್ಮಿಬ್ಬರನ್ನ ಬಿಟ್ಟು ಹೊದ್ಲು. ನಂಗ ಆಶ್ಚರ್ಯ ಆತು. ಇದೇನು ಇವರೆಲ್ಲಾ ಮೊದಲ ಏನೊ ಪ್ಲ್ಯಾನ ಮಾಡಿಧಂಗ ಅದ ಅಂತ ಅನ್ನಿಸಿ ಮನೋಜನ್ನ ನೋಡಿದ್ರ ಆಂವನ ಮುಖದ ಮ್ಯಾಲೆ ಮುಗುಳನಗು ಇತ್ತು. ಇಬ್ಬರು ಹಂಗ ಹೋಳಿದಂಡಿಗುಂಟ ನಡಕೊತ ಹೋದಾಗ ಆಂವನ ಹೇಳಿದಾ " ಇನ್ನು ನಾ ಮದವಿ ಮಾಡಿಕೊಂಡಿಲ್ಲಾ. ನಿನ್ನ ಮೊದಲನೆ ಸಲಾ ನೋಡಿದಾಗನ ಅನ್ಕೊಂಡಿದ್ದೆ ಮದವಿ ಆದ್ರ ನಿನ್ನಾ ಅಂತ. ನಿಮ್ಮ ತಾಯಿ ಮತ್ತ ಅಣ್ಣನ ಒಪ್ಪಿಗಿನು ತಗೊಂಡನ ನಿನ್ನ ಕೇಳಲಿಕತ್ತೇನಿ "ನೀ ನನ್ನ ಮದುವಿ ಆಗ್ತಿಯಾ" ಅಂತ ಕೇಳಿದಾ. ಆವಾಗ ಅನಿಸಿತ್ತು ಇವರೆಲ್ಲಾರು ಮೊದಲ ಎಲ್ಲಾ ಪ್ಲ್ಯಾನ ಮಾಡ್ಯಾರ ಅಂತ. ಈಗ ಗೊತ್ತಾತು ಅಮ್ಮ , ಅಣ್ಣ , ಮತ್ತ ಸುಶೀ ಯಾಕ ನನ್ನ ಈ ಮದವಿಗೆ ನನ್ನ ಒತ್ತಾಯದಿಂದ ಕರೆಸಿದ್ರು ಅಂತ. ವೈನಿ ತಮ್ಮ ಹೊಸಾ ರೇಷ್ಮೀ ಸೀರಿ ಉಟಗೊಳ್ಳಿಕ್ಕೆ ಅಂತ ಜುಲುಮಿ ಮಾಡಿ ಕೊಟ್ಟಿದ್ದರ ಮರ್ಮ ಏನಂತ ಅರ್ಥ ಆಗಲಿಕತ್ತಿತ್ತು. ಯಾವ ಜಾಗಾದೊಳಗ ನಾವು ಒಬ್ಬರಿಗೊಬ್ಬರು ಅಗಲಿ ದೂರಾಗಿದ್ವೊ ಅಲ್ಲಿಂದನ ಮತ್ತ ನಮ್ಮ ಪುನರ್ ಮಿಲನ ಆಗಬೇಕನ್ನೊದು ಮನೋಜನ ಆಸೆ ಇತ್ತಂತ ಅದಕ್ಕ ಗಪ್ಪಚಿಪ್ಪಾಗಿ ಎಲ್ಲಾ ಮಾತುಕಥಿ ನಿರ್ಧಾರ ಮಾಡಿ ನಮ್ಮ ಈ ಭೇಟಿಯ ತಯಾರಿ ಮಾಡಿದ್ರು. ಅನಿರಿಕ್ಷಿತವಾಗಿ ಬಂದ ಈ ಖುಷಿಗೆ ಮನ ಕುಣಿಲಿಕತ್ತಿತ್ತು. ಅಷ್ಟರೊಳಗ ಯಾರೊ ವರಪೂಜಾ ಶೂರು ಆಗೇದ ಬರ್ರಿ ಅಂತ ಕರೆದು ಹೊದ್ರು. ದೂರದ ಗುಡಿಯೊಳಗ ಸಂಜಿಯ ಮಂಗಳಾರತಿಯ ಘಂಟಿ ಸಪ್ಪಳ ಕೇಳಸ್ಲಿಕತ್ತಿತು. ಮುಸ್ಸಂಜೆಯ ಹಿತವಾದ ತಂಗಾಳಿಯ ಸ್ಪರ್ಷದಂಗ ಆಂವಾ ಮತ್ತ ನನ್ನ ಬಳಸಿ ಗಟ್ಟಿಯಾಗಿ ಅಪ್ಪಿ " ಈ ಸಲಾ ಬಿಗಿಯಾಗಿ ಹಿಡಕೊಂಡೇನಿ, ಹೆಂಗ ಬಿಡಿಸ್ಕೊತಿ ನೋಡತೇನಿ. ಇಡಿ ಜೀವನ ಪರ್ಯಂತ ನನ್ನಿಂದ ಒಂದ ಘಳಿಗಿನು ದೂರಾಗಧಂಗ ಘಟ್ಟಿಯಾಗಿ ಹಿಡಕೋತೇನಿ " ಅಂದಾಗ ಆಂವನ ಪ್ರೀತಿಗೆ ಸೋತು ಆಂವನ ಎದಿಗೆ ಒರಗಿ ಕಣ್ಣು ಮುಚ್ಚಿದ್ದೆ. ನಮ್ಮ ಈ ಪುನರ್ ಮಿಲನದ ಖುಷಿಗಾಗಿ ಪ್ರಕೃತಿ ಮತ್ತ ಜಿಟಿಜಿಟಿ ಮಳೆಯ ಪನ್ನೀರನ್ನ ಸುರಿಸಿತು…….
*****
ಸಿಂಪಲ್ ಆಗಿ ಒಂದೊಳ್ಳೆ ಲವ್ ಸ್ಟೋರಿ ….. ಚೆನ್ನಾಗಿದೆ ….. ರೀ ….
Lovely romantic love story.. Really nice…
ಚೆಂದಾಗಿ ಬರ್ದೀರಿ ಮೇಡಂಮಾರೆ
madamji good as usual
ಛೊಲೊ ಬರ್ದೀರಿ! ಓದುಗನ ಮನಸ್ಸಿನ್ಯಾಗ ಹುಗಿದು ಹೋಗಿರೊ ಹಳೇ ನೆನಪಗೋಳ್ನ್ನ ತಾಜಾ ಮಾಡ್ತದ ನಿಮ್ಮ ಬರಹ!
matt manoj jote maduve ayita? writing style cholo ada,