“ಪುನರ್ಜನ್ಮ” ದ ಕಥೆಯ ಸಿನೆಮಾ ಮತ್ತು ಅಪಘಾತ: ಅಮರ್ ದೀಪ್ ಪಿ. ಎಸ್.

 

 

 

 

 

 

ಮದುವೆಯನ್ನೂ ಸಹ ಲಘು ದುಃಖ ಬಲು ಹರ್ಷದಿಂದ “ಅಪಘಾತ ” ವೆಂದು ಬಣ್ಣಿಸುವವರೂ ಇದ್ದಾರೆ.. ಆದರೆ, ನಿಜವಾದ ಅಪಘಾತಗಳನ್ನು ಕಣ್ಣಾರೆ ಕಂಡಿದ್ದೇ ಆದಲ್ಲಿ ಅಥವಾ ಅನುಭವಿಸಿದಲ್ಲಿ ಈ ಮಾತನ್ನು ನಾನಾದರೂ ಹಿಂತೆಗೆದುಕೊಳ್ಳುತ್ತೇನೆ.  ನನಗೆ ನೆನಪಿದ್ದಂತೆ ನಾನು ಕನಿಷ್ಠ ಮೂರರಿಂದ ನಾಲ್ಕು ಬಾರಿ ಅಪಘಾತವನ್ನು ಸ್ವತಃ ಅನುಭವಿಸಿದ್ದೇನೆ.. ಮತ್ತು ಕಣ್ಣಾರೆ ನೋಡಿದ್ದಂತೂ ಹಲವು…

ಅದಿನ್ನು ಓದು “ಸುತ್ತುತ್ತಿದ್ದ ” ಕಾಲ.. ಮತ್ತು ಸಹಜವಾಗಿ ದುಡುಕು ಹಾಗೂ ಹುಡುಗು ಬುದ್ಧಿ. ಹದಿನಾರರಿಂದ ಹದಿನೆಂಟರ ವಯಸ್ಸಿನಲ್ಲಿ ಕತ್ತೆ ಕೂಡ ಸುಂದರವಾಗಿ ಕಾಣುತ್ತೆ ಅಂತಾರೆ. ಆದರೆ ನಾವು ಕೋತಿಗಳಾಗಿದ್ದೆವು, ಮಾಡುವ ಚೇಷ್ಟೆಗಳನ್ನೂ ಗೆಳೆಯರು ಸೀರಿಯಸ್ ಆಗೇನೂ ತಿಳಿಯು ತ್ತಿದ್ದಿಲ್ಲ,  ಏನೇ ಮಾತಾಡಿದರೂ, ಏನೇ ಮಾಡಿದರೂ.  ಆದರೂ ಒಮ್ಮೊಮ್ಮೆ ಅಚಾತುರ್ಯ ನಡೆದುಬಿಡುತ್ತಿದ್ದವು.

ನಮ್ಮೂರಲ್ಲಿ ಇದ್ದ ಆಗಿನ  ಎರಡೇ ಥೀಯೇಟರ್ಗಳಲ್ಲಿ ಬಿಡುಗಡೆಯಾದ ಎಷ್ಟೋ ದಿನಗಳ ನಂತರ ಬರುತ್ತಿದ್ದ ಸಿನಿಮಾಗಳು… ಈಗೀಗ ಬಿಡಿ, ಹಳ್ಳಿಗೂ ರಿಲೀಜ್ ಆಗುತ್ತವೆ.. ಒಂದು ವೇಳೆ ರಿಲೀಜ್ ಸಿನಿಮಾ ನೋಡಲೇಬೇಕಾದ ಅನಿವಾರ್ಯ ಬಯಕೆಯಾದರೆ ಪಕ್ಕದ ಹೊಸಪೇಟೆಗೆ ಹೊರಡಲು ಐವತ್ತು ರೂಪಾಯಿ ಇದ್ದರೂ ಸಾಕು.. ರೈಟ್ ರೈಟ್…. ಅನ್ನುವುದು ರೂಢಿ. ಕಾಲಕಾಲಕ್ಕೆ ಬದಲಾಗುವ ಕೇಂದ್ರ ಮತ್ತು ರಾಜ್ಯ ಹಣಕಾಸು ಸಚಿವರ ಹೆಸರನ್ನು ನಮ್ಮ ಪರ್ಸ್ ಇಲ್ಲದ ಜೇಬಿನೊಳಗಿನ ದುಡ್ಡಿಗೆ ಹೆಸರಿಟ್ಟು  ಜೈ ಅನ್ನುವುದೂ ಬೇರೆ, ಅದೂ ಇದ್ದರೆ.  ಇಲ್ಲದಿದ್ದರೆ ಅಕ್ಕಪಕ್ಕ ಗೆಳೆಯರ ಹೆಸರಿನಲ್ಲಿ ಭೋಪರಾಕ್ ಹೇಳಿ ಸಿನೆಮ ನೋಡಿ ಬರುತ್ತಿದ್ದೆವು.. ಮತ್ತೊಂದು ಸಿನೆಮಾಕ್ಕೆ ನಮ್ಮ ಹೆಸರಲ್ಲಿ ಭೋಪರಾಕ್….

ಅದೊಂದು ಹಿಂದಿ ಸಿನೆಮಾ ಬಂದಿತ್ತು.  ಅನಿಲ್ ಕಪೂರ್ ತಮ್ಮ, “ತಬ್ಬು”ವ ಟಬು ಹೀರೋ ಹಿರೋ ಯಿನ್.. ಒಂದು ಸಂಜೆ ನಾನು “ಆಡಿಟರ್  ಆಫೀಸ್ ಸೂರಿ”  ಮತ್ತು ಜಮೀಲ್ ಮೂವರು ಯಥಾ ಪ್ರಕಾರ ಸಂಜೆ ಹರೆಟೆಗೆ ಕೂಡುವ ಬದಲು ಸಿನೆಮಾಕ್ಕೆ ಹೋಗಲು ರೆಡಿ ಆಗಿದ್ದೆವು.. ಇದ್ದದ್ದೇ ಒಂದು ಸೈಕಲ್. ಮೂವರು ಹೊರಟೆವು, ತ್ರಿಬ್ಬಲ್ ರೈಡಿಂಗ್. ಮೈಯೊಳಗಿನ ಕಸುವು ಅಷ್ಟಕಷ್ಟೇ, ಹೈಬ್ರಿಡ್ ದವಸ ತಿಂದ ನಾವು  ತೇಕುತ್ತಾ, ತುಳಿಯುತ್ತಾ ಹೊರಟಿದ್ದಾಯಿತು. ನಾನು ತುಳಿಯುತ್ತಿದ್ದೆ.   ನಮ್ಮೂರಲ್ಲಿ ಹಳೆಬೊಮ್ನಹಳ್ಳಿ ಮತ್ತು ಹೊಸಬೊಮ್ನಹಳ್ಳಿ ಅಂತಿವೆ.. ಮಧ್ಯೆ  ಈ ಹಿಂದೆ ಹರಿಯು ತ್ತಿದ್ದಂಥ ಹಗರಿಗೆ ಕಟ್ಟಿದ್ದ ಸೇತುವೆ ಪಶ್ಚಿಮದ್ದು ಹಳೇ ಊರು ಪೂರ್ವಕ್ಕೆ ಹೊಸ ಊರು.. ಥೀಯೇಟರ್ ಇದ್ದದ್ದು ಹಳೇ ಊರಲ್ಲಿ, ಹೆಸರು “ಪಂಪಾಪತಿ”.  ಬೆಂಗಳೂರಿನಂತೆ “ಊರ್ವಶಿ” “ಕಲ್ಪನಾ”  ಹೆಸರಿನ ತರಹ ಆಕರ್ಷಣೀಯವಾಗಿರದಿದ್ದರೂ, ಮಾಲಿಕರು ತಮ್ಮ ಹಿರೀಕರ ಹೆಸರಿಟ್ಟಿದ್ದರು. ನಮ್ಮೂರಿನ ಮಟ್ಟಿಗೆ ಸಿನೆಮಾ ನೋಡಿದರೆ ಸಾಕು. ಚಿಕ್ಕವರಿದ್ದಾಗ ಸಿನೆಮಾಕ್ಕೆ ಹೊರಟರೆ ಅದೊಂದು ಖುಷಿ. ಆರಂಭದಲ್ಲಿ “ಶುಕ್ಲಂ … ಬರದರಂ… ಶಶಿವರ್ಣಂ … ಚತುರ್ಭುಜಂ …. ಹಾಡು ಕೇಳಿದೊಡನೆ ಟಾಕು ಟೀಕಾಗಿ ವಿಧೇಯರಾಗಿ ಕುಳಿತು ಬಿಡುವುದು.  ಏಕೆಂದರೆ, ಸಿನಿಮಾ ನೋಡಿ ಬಂದ  ಮೇಲೆ ಮಾರನೆ ದಿನ ಶಾಲೆಯಲ್ಲಿ ಸಿನೆಮಾದ ಇಂಚಿಂಚು ವಿವರಣೆ ನೀಡಿ ನೋಡಿರದ ಹುಡುಗರಿಗೆ ಕ್ರೇಜ್ ಹುಟ್ಟಿಸಿ ಕಥೆ ಹೇಳುವ ಮಟ್ಟಿಗಾದರೂ ನೆನಪಿಟ್ಟುಕೊಳ್ಳಲೇಬೇಕಿತ್ತು. ಮುಂದೆ ಅದೇ ಹುರುಪು ಸಿನೆಮಾ ನೋಡಲು ಹೋಗಲೇನೋ ಇರುತ್ತಿತ್ತು. ಆದರೆ ಕಥೆ ಹೇಳುವ ಕಲೆ ಕೈ ತಪ್ಪಿತ್ತು.

ಸರಿ, ನಾವು   ಹೊರಟು  ಮೂರು  ನಿಮಿಷವಾಗಿದ್ದಿಲ್ಲ.  ನಮ್ಮ ಮುಂದೆ ಸೇತುವೆ ಮೇಲೆ ನಿಧಾನವಾಗಿ ಬಸ್ ಹೊರಟಿತ್ತು, ಅದನ್ನು ಓವರ್ ಟೇಕ್ ಮಾಡಿಕೊಂಡು ಬಂದೆವಷ್ಟೇ, ಎದುರಿಗೆ ಭಾರಿ ವೇಗವಾಗಿ ಒಂದು ಲಾರಿ ಬರುತ್ತಿದ್ದುದು ನೋಡಲೇ ಇಲ್ಲ.  ಆದ ಗಾಬರಿಗೆ ಎಡಕ್ಕೆ ತಿರುಗಲು ದಾರಿಯಿಲ್ಲ, ಬಲಕ್ಕೆ ಸರಿಯಲು ಸೇತುವೆ ಮೇಲೆ ಜಾಗವೇ ಇಲ್ಲ. ಸೇತುವೆಯ ಅಂಚಿಗೆ ಕಟ್ಟಿದ ಕಬ್ಬಿಣದ ಪಟ್ಟಿಗಳನ್ನು ಬಿಟ್ಟರೆ ಹಿಡಿಯಲು ಏನೇನೂ ಇಲ್ಲ.. ಏನೂ ತೋಚದೇ ತುರ್ತಾಗಿ ಬ್ರೇಕ್ ಹಾಕಿದ ಲಾರಿಯ ಮುಂದಿನ ಗಾಲಿಗೆ ಸೈಕಲ್ಲು ಇದ್ದರೆ ನಾವು ಮೂವರೂ ಎಗರಿ ಸೇತುವೆಯ ಅಂಚಿಗೆ ಅಡ್ಡಲಾಗಿ ಕಟ್ಟಿದ್ದ ಕಬ್ಬಿಣದ ಪಟ್ಟಿ ಹಿಡಿದು ಜೋತು ಬಿದ್ದಿದ್ದೆವು.. ಕೈ ತಪ್ಪಿದ್ದರೆ ಅರವತ್ತೆಪ್ಪತ್ತು ಅಡಿ ಕೆಳಗೆ ನೀರಿಲ್ಲದ ಬಂಡೆಗಲ್ಲಿನ ಮೇಲೆ ಬೀಳುವುದೊಂದೇ ಬಾಕಿ. ಆ ಕಡೆಯಿಂದ ಲಾರಿಯೊಳಗಿನ ಡ್ರೈವರು, ಜನ, ಈ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರಿಂದ ಭಲೇ ಮಂಗಳಾರತಿ ಆಯಿತು.  ಅಷ್ಟೊತ್ತಿಗೆ ಸಮಯ ಆರು ಗಂಟೆ ಹದಿನೈದು ನಿಮಿಷ.. ಹಾಗೂ ಹೀಗೂ ಬೈಸಿಕೊಂಡು ಮತ್ತೆ ಸೈಕಲ್ಲು ಏರಿ ಮೂವರು ಹೋಗಿ ಥೀಯೇಟರ್ ಮುಂದೆ ನಿಂತು ಒಂದೆರಡು ನಿಮಿಷ ಒಬ್ಬರಿಗೊಬ್ಬರು ಮುಖ ನೋಡಿಕೊಂಡೆವು.. ಜಮೀಲ್, ಸೂರಿ ಇಬ್ಬರೂ “ನಿನ್ ಮಕ್ಕಿಷ್ಟು” ಅಂದರು. ಸಿನೆಮಾ ಹೇಗಿದ್ದರೂ ನೋಡಲೇ ಬೇಕೆಂದರೆ ನೋಡುವುದಷ್ಟೇ…ಆಗಿತ್ತು.  ನಾವು ನೋಡಿ ಬಂದ ಸಿನೆಮಾ “ಪ್ರೇಮ್ ” ಮತ್ತದು ಪುನರ್ಜನ್ಮದ ಕಥಾವಸ್ತುವುಳ್ಳದ್ದು.. ನಮ್ಮದೂ ಅದೇ ಹಣೆ ಬರಹವಾಗಿತ್ತು,  ಆ ದಿನ ಪುನರ್ಜನ್ಮ .  ಆದರೆ ಪ್ರೇಮ ಒಂದಿದ್ದಿಲ್ಲ, ಮದುವೆ ಕೂಡ.

ಅದಾಗಿ ಎಷ್ಟೋ ವರ್ಷಗಳ ನಂತರ ಮೂವರಿಗೂ ಮದುವೆ ಮಕ್ಕಳು ಸಣ್ಣದೊಂದು ಕೆಲಸ, ದುಡಿಮೆ ಎಲ್ಲಾ ಆದವೆನ್ನಿ. ಬಳ್ಳಾರಿಯಿಂದ ವರ್ಗವಾಗಿ ನಾನು ಗೋರಿಗಳ ಊರು ಸುಲ್ತಾನರ ಆಳ್ವಿಕೆ ಕುರುಹಾದ ಬಿಜಾಪುರಕ್ಕೆ ಹೋದೆ. ಬಿಜಾಪುರ ಭಾಷೆ, ಅಡುಗೆ ರುಚಿ, ತರಕಾರಿ, ಅಲ್ಲಿನ ಜನಗಳು,   ಒಮ್ಮೆ ಹಚ್ಚಿಕೊಂಡರೆ ಸಲುಗೆ ಇದೆ ನೋಡಿ? ಬಿಟ್ಟು ಬಂದು ಮೂರು ವರ್ಷವಾದರೂ ನೆನೆಸಿಕೊಂಡು ಮಾತಾಡುವುದು, “ಒಮ್ಮ್ ಬಂದೊಗ್ರಲಾ” ಅನ್ನುವ ಆತ್ಮೀಯತೆ ಮರೆಯುವಂತಿಲ್ಲ.  ಅದೊಮ್ಮೆ ಇದೇ  ಡಿಸೆಂಬರ್ ಛಳಿಯ  ದಿನಗಳಲ್ಲಿ ನಾನು, ನನ್ನ ಹೆಂಡತಿ ಮಕ್ಕಳು ಸಾಲದ್ದಕ್ಕೆ ಅಳಿಯ ಮತ್ತು ಮನೆ ಮಾಲೀಕನ ಪತ್ನಿಯನ್ನು  ಕರೆದುಕೊಂಡು  ಲಿಂಗಸೂಗೂರು ಹತ್ತಿರದ ಗುರುಗುಂಟದ ಅಮರೇಶ್ವರ ದೇವಸ್ಥಾನಕ್ಕೆ ಕಾರೊಂದನ್ನು ಬಾಡಿಗೆ ಮಾಡಿಕೊಂಡು ಹೋಗಿದ್ದೆ.  ಕಾರಿನ ಚಾಲಕ, ಮಾಲಿಕನೂ ಮತ್ತು ನಮ್ಮ ಕಚೇರಿಯ ಪಕ್ಕದ ಸಣ್ಣ ಹೋಟೆಲ್ ಒಂದರ ಮಾಲಿಕನೂ ಆಗಿದ್ದ ಕಾಶಿನಾಥ್ ಮುಂಜನ್ನವರ್ ತಾನೇ ಡ್ರೈವ್ ಮಾಡಿಕೊಂಡು ಬಂದಿದ್ದರು. ಹೋಗಿ ವಾಪಸ್ ಬರುವಾಗ ಇನ್ನೇನು ಬಿಜಾಪುರ ಒಂದೆರಡು ಕಿ. ಮೀ. ಇತ್ತಷ್ಟೇ.. ಇಳಿ ಸಂಜೆ ಹೊತ್ತು ಎದುರಿಗೆ ಬಂದ ಕಾರುಗಳನ್ನು ಹೊತ್ತ್ಯೊಯುತ್ತಿದ್ದ ಲಾರಿಯ ಚಾಲಕ ಒಮ್ಮಿಂದೊಮ್ಮಲೇ  ಹೆಡ್ ಲೈಟ್ ಆನ್ ಮಾಡಿದ. ಕನಿಷ್ಠ ೧೨೦ ರ ವೇಗದಲ್ಲಿ ಹೋಗುತ್ತಿದ್ದ ನಮ್ಮ ಕಾರಿನ ಮುಂದೆ ಸಾಲಾಗಿ ಹೊರಟ ನಾಲ್ಕೈದು ಬಂಡಿಗಳು ಚಾಲಕನ ಕಣ್ಣಿಗೆ ಕಾಣಲೇ ಇಲ್ಲ.  ಕಾರಿನ ವೇಗ ಹಿಡಿತ ತಪ್ಪಿದ್ದು ಗಮನಿಸಿದೆ.  ನನ್ನ ಇಬ್ಬರೂ ಮಕ್ಕಳು ಸಮರ್ಥ ಮತ್ತು ಅಭಿಯನ್ನು ಜೊತೆಗಿರಿಸಿಕೊಂಡು  ಚಾಲಕನ ಪಕ್ಕದಲ್ಲೇ ಕುಳಿತ್ತಿದ್ದ ನನಗೆ ಅಪಘಾತ ವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿ ಎರಡು ಹುಡುಗರನ್ನು ಎದೆಗವಚಿಕೊಂಡು ಕಾಲನ್ನು ಸಿ ಡಿ ಇಡುವ ಡಿಕ್ಕಿಗೆ ಒತ್ತಿ ಸೀಟನ್ನು ಹಿಂದಕ್ಕೆ ಮಾಡಿ ಬಿಗ್ಗ ಬಿಗಿಯಾಗಿ ಹಿಡಿದುಕೊಂಡು ಹಿಂದಕ್ಕೊರಗಿದೆ. ಹಿಂದೆ ಇದ್ದವರಿಗೆ ಇದೆಲ್ಲಾ ಗೊತ್ತೇ ಆಗಲಿಲ್ಲ.

“ದಡ್ ” ಅನ್ನುವ ಸದ್ದು ಕೇಳಿದಾಗಲೇ ಅವರು ಬೆಚ್ಚಿ ಬಿದ್ದಿದ್ದರು. ಬಂಡಿಯ ಕಬ್ಬಿಣದ ರಾಡ್ ಗಳು ಕಾರಿನ ಗಾಜು ಒಡೆದು ನನ್ನೆದುರಿಗೆ ಒಂದರ್ಧ ಅಡಿ ಅಂತರದಲ್ಲಿ ನಿಂತಿದ್ದವು. ಕಾರಿನ ಬಾನೆಟ್ಟು ಇಂಜೀನ್  ಎಲ್ಲಾ ನುಜ್ಜು ಗುಜ್ಜು. ಕಾರು ಗುದ್ದಿದ ರಭಸಕ್ಕೆ ಮೂರು ಬಂಡಿಗಳ ಎತ್ತುಗಳು ಕೊರಳು ಹರಿದುಕೊಂಡು ದಿಕ್ಕೆಟ್ಟು ಹೊರಟರೆ ಆ ಕಡೆ  ಬರುವ, ಹೋಗುವ ವಾಹನಗಳು ತಮ್ಮ ನಿಯಂತ್ರಣ ತಪ್ಪಿ ಮತ್ತೆ ನಮ್ಮ ಕಾರಿನತ್ತಲೇ ಮುಖ ಮಾಡಿದ್ದವು… ಎದುರಿಗಿದ್ದ ಕ್ರುಶರ್ ಗಾಡಿಯಲ್ಲಿ ಒಂದು ಹಿಂಡು  ಜನ, ಒಂದೇ ಕುಟುಂಬದವರು.  ಆ ವಾಹನ ಚಾಲಕ ಏನಾದರು ಸ್ವಲ್ಪ ಯಾಮಾರಿ ದ್ದರೂ ನಾವು, ಅವರು ಒಟ್ಟಿಗೆ ಅನಾಹುತ ಎದುರಿಸಬೇಕಿತ್ತು.

ಸಾವಿನ ಭಯ ಎಂಥವನನ್ನೂ ರಕ್ತ ಕುದಿಯುವಂತೆ ಮಾಡಿಬಿಡುತ್ತೆ.  ನಮ್ಮ ಡ್ರೈವರ್ ಕಾಶಿನಾಥ ಗಾಬಿರಿ ಬಿದ್ದು ಇಳಿಯುತ್ತಲೇ,ಅವರಿಗೆ  ಧರ್ಮದೇಟುಗಳು ಬಿದ್ದವು. ನಾನು ಕಾರಿನಿಂದ ಇಳಿಯೋಣ ವೆಂದರೆ ಬಾಗಿಲುಗಳು ಜಾಮ್ ಆಗಿದ್ದವು.. ಆ ಕತ್ತಲಲ್ಲೇ ಪಾಪ, ಎದುರು ಗಾಡಿಯವರು “ಒಳಾಗಿ ರೋರು, ಅದಾರೋ ಹೊಗ್ಯಾರೋ ಕಡೀಗೆ ಎಳೀರಿ”ಅಂದದ್ದು  ಕೇಳಿತು. ನಮ್ಮ ಪುಣ್ಯ ಅಲ್ಲಿ ಯಾರೊಬ್ಬರಿಗೂ ಏನೂ ಪೆಟ್ಟು ಆಗಿದ್ದಿಲ್ಲ, ನನ್ನ ದೊಡ್ಡ ಮಗ ಸಮರ್ಥ ಒಂಚೂರು ತುಟಿ ಕಚ್ಚಿಕೊಂಡಿದ್ದು ಬಿಟ್ಟರೆ. ಆಗಾಗ ಬಿಜಾಪುರದಿಂದ ಊರಿಗೆ ಬಸ್ಸಲ್ಲಿ ಹೋಗುವಾಗ ಹುನುಗುಂದ ಮತ್ತು ಆಲಮಟ್ಟಿ ಮಧ್ಯೆ ಒಂದು ಜಾಗದಲ್ಲಿ ಪ್ರತಿ ಬಾರಿ ನೂರಿನ್ನೂರು ಮೀಟರ್ ಅಂತರದಲ್ಲೇ ಅಪಘಾತ ಗಳನ್ನು ನೋಡುತ್ತಿದ್ದೆ. ಕಣ್ಣೆದುರಿಗೆ ಪ್ರಾಣ ಬಿಟ್ಟ ಹಾಗೂ ೧೦೮ ಕ್ಕೆ ಫೋನ್ ಮಾಡಿ ಆಂಬುಲೆನ್ಸ್ ಕರೆಸುವುದು ಮಾಡಿದ್ದ ನಮಗೆ ನಾವು ಹೊರಟ ಗಾಡಿಯೇ ಅಪಘಾತಕ್ಕೊಳಗಾಗಿದ್ದು ಬಹಳ ದಿನ ಮರೆಯಲಾಗಲಿಲ್ಲ..

ಮನೆಯವರೆಲ್ಲರನ್ನೂ ಇನ್ನೊಂದು ಗಾಡಿಯಲ್ಲಿ ಮನೆಗೆ ಕಳಿಸಿದ ನಂತರ ಪೋಲೀಸು, ಕೇಸು, ೧೦೮ ಗಾಡಿ ಕರೆಸಿ, ಬಂಡಿಗಳಲ್ಲಿದ್ದಂಥ ಗಾಯಗೊಂಡ ಜನರ ಗೋಳಾಟ ಇವೆಲ್ಲಾ ಬಗೆಹರಿಸಿ, ಪಕ್ಕದಲ್ಲೇ ಇದ್ದ ಧಾಭಾ ಹೊಕ್ಕು ಕುಂತು ಚುರುಗುಡುವ  ಕರುಳು ಬೆಚ್ಚಗಾಗಿಸಿಕೊಂಡಿದ್ದೆ. ಆಗ ತಾನೇ ಮುಗ್ಗುಲಾದ ಕಾರನ್ನು ನೋಡಿ ಬಂದವನೊಬ್ಬ ನನ್ನೆದುರಿಗೆ ಕುಳಿತು “ನೋಡಿದ್ರೆನ್ ಸರ್ರ ಕಾರ್ನಾ,  ಇವ್ನಾಪ್ನಾ,  ಕಾರ್ನ್ಯಾಗ್ ಇದ್ದವ್ವು ಬಲು ಗಟ್ಟಿ ಪಿಂಡ ಅದಾವು ನೋಡ್ರಿ” ಅಂದ.  ನಾನು ಸುಮ್ಮನೆ ಎದ್ದು ಬಂದೆ. ಸೇತುವೆ ಮೇಲಿನ ತಪ್ಪಿದ ಅಪಘಾತ, ಮತ್ತು ಪುನರ್ಜನ್ಮದ ಕಥೆ “ಪ್ರೇಮ್ ” ಬಹಳ ನೆನಪಾಗಿತ್ತು ಆಗ ಸಮಯ ರಾತ್ರಿ ಹನ್ನೆರಡು ಮುವ್ವತ್ತು.

 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Kotraswamy M
Kotraswamy M
10 years ago

Naija baraha! Baalya, cinema geelu, eradu apaghaathagalu, ella halavu varshagala antharadallina bidi bidi sanniveshagalaadaroo, ondakkondannu henedu arthavatthaagi hanchikondiddeeri Amar!

Ravishankar.S.B.
Ravishankar.S.B.
10 years ago

ನಾಳೆ ಓದಿ ಹೇಳಲ ದೀಪಣ್ಣ

Santhoshkumar LM
10 years ago

ಬರಹ ಚೆನ್ನಾಗಿದೆ ಸರ್. ಕೇವಲ ಅಪಘಾತಗಳನ್ನು ಅನುಭವಿಸಿದವರಿಗಷ್ಟೇ ಅಲ್ಲಿನ ತೀವ್ರತೆ ಅರ್ಥವಾಗುವುದು. ಅಬ್ಬಾ… ಬೇಡ…

ಸುರೇಂದ್ರ. ಜಿ.ಎಸ್.
ಸುರೇಂದ್ರ. ಜಿ.ಎಸ್.
10 years ago

ಅನಿರೀಕ್ಷಿತವಾಗಿ ನನ್ನ ಇ-ಮೇಲ್ಗೆ ಬಂದ ಈ ಸಂಚಿಕೆ. ನನ್ನ ಮನಸ್ಸಿಗೆ ಅತ್ಯಂತ ಆಪ್ತ ೆನಿಸಿದೆ.
ಸುರೇಂದ್ರ .ಜಿ.ಎಸ್.
ದಾವಣಗೆರೆ.

gaviswamy
10 years ago

nice one sir

Rajshekhar Daggi
Rajshekhar Daggi
10 years ago

Cinema nododu mukhya apaghata edurisodu ide alle ade kanri vastava, adakkintlu vastava andre apaghata edurisi aad kelave kshanagalalle cinema nododu adu punarjanmada kathe hondiro cinema andre nindu nijakku gundige samanyaddu alla amar

ganesh
ganesh
10 years ago

Nan close friend obba ondu thingala hinde accidentnalli theeri hoda.  Nanage avaginda jeevana estu kshanika antha annisbittide.  accident nalli sayodu bahala novina sangathi hagu yakendre igiddavaru kshanadalli illandre hege alva? Nimma lekhana sogasagi moodi bandide.

 

Dr Vani Sundeep
Dr Vani Sundeep
10 years ago

baraha tumba chennagi, naijavaagi moodibandide.

8
0
Would love your thoughts, please comment.x
()
x