
ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು ಯೋಚನೆಗಳು ಬಂದು ಹೋಗುತ್ತದೆ. ಬೇರೊಬ್ಬರ ಪತ್ರಿಕೆಯನ್ನು ನಕಲು ಮಾಡಿ ಬರೆಯುವುದೇ. . ? ಅಥವಾ ನಕಲು ಮಾಡಲು ಚೀಟಿಗಳನ್ನು ತಯಾರು ಮಾಡುವುದೇ. . ? ಇಲ್ಲ. ಅಂತಹ ಉಪಾಯಗಳೆಲ್ಲವನ್ನೂ ಪುಟ್ರಾಜು ನಿರಾಕಸುತ್ತಾನೆ. ನಮ್ಮ ಪುಟ್ರಾಜು ಕಲಿಯುವುದರಲ್ಲಿ ಸ್ವಲ್ಪ ಹಿಂದೆ ಇರಬಹುದು ಆದರೆ ತುಂಬಾ ಒಳ್ಳೆಯ ಹುಡುಗ ನಕಲು ಮಾಡಲು ಪ್ರಯತ್ನ ಪಟ್ಟು ಎಲ್ಲಾದರು ಸಿಕ್ಕಿ ಬಿದ್ದು ಮರ್ಯಾದೆ ಹೋಗುವುದಕ್ಕಿಂತ ಕಡಿಮೆ ಅಂಕ ಗಳಿಸಿದರೂ ಪಾಸೋಗುತ್ತಿದ್ದೇನಲ್ಲ, ಅದುವೇ ವಾಸಿ ಎಂದುಕ್ಕೊಳ್ಳುತ್ತಾನೆ.
ಕೊನೆಗೆ ಪುಟ್ರಾಜುಗೆ ಒಂದು ಉಪಾಯ ಹೊಳೆಯುತ್ತದೆ. ದೇವರೊಬ್ಬನೇ ತನಗೆ ಸಹಾಯ ಮಾಡುತ್ತಾನೆ ಎಂದು ನಿರ್ಧರಿಸುತ್ತಾನೆ. ಆದರೆ ಯಾವ ದೇವರನ್ನು ಪೂಜಿಸಲಿ, ಯಾವ ದೇವರು ಹೆಚ್ಚು ಶಕ್ತಿಶಾಲಿ ಎಂಬುದು ಆತನಿಗೆ ಗೊಂದಲ. ಕೊನೆಗೆ ಹಲವು ಮೂಲಗಳಿಂದ ದೇವರ ಬಗ್ಗೆ ಶೋಧನೆ ಮಾಡಿ ಗಣೇಶನೇ ಅತಿ ಶಕ್ತಿಶಾಲಿ ಎಂಬ ನಿರ್ಧಾರಕ್ಕೆ ಬಂದು ಪುಟ್ರಾಜು ಗಣಪತಿಯ ಮೂರ್ತಿಯನ್ನು ತಂದು ಪೂಜಿಸಲು ಶುರುಮಾಡುತ್ತಾನೆ. ಗಣೇಶನೇ ಯಾಕೆ ಎಂದರೆ ಪ್ರತಿ ವರ್ಷವೂ ಗಣೇಶ ಚತುರ್ಥಿ ಯನ್ನು ದೇಶಾದ್ಯಂತ ಜನರು ಸಂಭ್ರಮದಿಂದ, ವಿಜ್ರಂಭಣೆಯಿಂದ ಆಚರಿಸುತ್ತಾರಲ್ಲವೇ ಹಾಗಾಗಿ ಗಣೇಶನೇ ಅತ್ಯಂತ ಶಕ್ತಿಶಾಲಿ ದೇವರು ಎಂಬುದು ಪುಟ್ರಾಜುನ ನಂಬಿಕೆ. ಅದೂ ಅಲ್ಲದೆ ಗಣೇಶ ಅವರ ಮನೆದೇವರು ಕೂಡ ಹೌದು. ಹಾಗೆಂದು ಇದಕ್ಕಿಂತ ಮುಂಚೆ ದೇವರನ್ನು ನಂಬುತ್ತಿರಲಿಲ್ಲ ಎಂದೇನಲ್ಲ. ಈ ಮುಂಚೆ ದಿನದಲ್ಲಿ ಎರಡು ಬಾರಿ ದೇವರನ್ನು ಪೂಜಿಸುತ್ತಿದ್ದ ಪುಟ್ರಾಜು, ಈಗ ದಿನವಿಡೀ ದೇವರನ್ನು ಬೇಡುವುದೇ ಕೆಲಸವಾಯಿತು.
ಕೊನೆಗೂ ಪರೀಕ್ಷೆ ಬಂತು. ಪುಟ್ರಾಜು ಪ್ರತಿವರ್ಷ ದಂತೆ ಪರೀಕ್ಷೆ ಬರೆದ. ಆದರೆ ಫಲಿತಾಂಶದ ದಿನ ಪುಟ್ರಾಜುಗೆ ಆಘಾತ ಕಾದಿತ್ತು. ಈ ಮುಂಚೆಗಿಂತಲೂ ಕಡಿಮೆ ಅಂಕ ಪುಟ್ರಾಜುಗೆ ಬಂದಿತ್ತು. ಪಾಸಾದೆನೆಂಬುದೇ ಸಮಧಾನವಷ್ಟೆ. ತಾನು ನಂಬಿದ ದೇವರೆದುರು ಬೇಸರದಿಂದ ಕುಳಿತು ಪುಟ್ರಾಜು ಮನಬಂದಂತೆ ಬೈಯತೊಡಗಿದ. ಆ ದಿನದಿಂದ ದೇವರಿಗೆ ಕೈಮುಗಿಯುದನ್ನೇ ಬಿಟ್ಟುಬಿಟ್ಟ. ದಿನಗಳು ಕಳೆದವು. , ಪುಟ್ರಾಜು ತೇರ್ಗಡೆಯಾಗಿ ಆರನೇ ತರಗತಿಯಲ್ಲಿದ್ದ. ಅವನ ತರಗತಿಯಲ್ಲಿ ರುಕ್ಸಾನಾ ಎಂಬ ಹುಡುಗಿ ಇದ್ದಳು. ಆಕೆ ಇಡೀ ಶಾಲೆಯಲ್ಲಿ ಎಲ್ಲರಿಗಿಂತಲೂ ಓದುವುದರಲ್ಲಿ ಮುಂದೆ ಇದ್ದಳು. ಶಾಲೆಯಲ್ಲಿ ಪ್ರತಿಯೊಬ್ಬರೂ ಆಕೆಯನ್ನು ಹೊಗಳುವವರೇ ಆಗಿದ್ದರು. ಒಂದು ದಿನ ಪುಟ್ರಾಜು ಆಕೆಯ ಹತ್ತಿರ ಹೋಗಿ, “ನೀನು ಹೇಗೆ ಇಷ್ಟು ಅಂಕ ಗಳಿಸುತ್ತೀಯ. . ? ನೀನು ಹೇಗೆ ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೀಯ. . ? “ಎಂದೆಲ್ಲಾ ಪ್ರಶ್ನೆ ಗಳನ್ನು ಕೇಳುತ್ತಾನೆ. ಆಗ ರುಕ್ಸಾನ ಎಲ್ಲಾವೂ ಅಲ್ಲಾನ ಕೃಪೆ ಎಂದು ಹೇಳಿ ಹೊರಟುಹೋಗುತ್ತಾಳೆ. ಆಗ ಪುಟ್ರಾಜು ತಾನೂ ಕೂಡ ಅಲ್ಲಾನನ್ನು ಪೂಜಿಸಿದರೆ ಹೆಚ್ಚು ಅಂಕ ಪಡೆಯಬಲ್ಲೆ ಎಂದು ಅಂದುಕ್ಕೊಳ್ಳುತ್ತಾನೆ. ಮರುದಿನವೇ ಪುಟ್ರಾಜು ಅಂಗಡಿಯಿಂದ ಚಿತ್ರಪಟವನ್ನು ತರುತ್ತಾನೆ. ಅದರಲ್ಲಿ ಒಂದು ಮಸೀದಿಯ ಚಿತ್ರವೂ, ಅದರೆ ಕೆಳಗೆ ಅರೇಬಿಕ್ ಅಕ್ಷರ ದಲ್ಲಿ ಏನನ್ನೋ ಬರೆದಿರಲಾಗಿರುತ್ತದೆ. ಆ ಇಡೀ ವರ್ಷ ಓದುವುದಕ್ಕಿಂತ ಜಾಸ್ತಿ, ಆ ಚಿತ್ರದ ಎದುರು ಕುಳಿತು ಬೇಡಿಕ್ಕೊಳ್ಳುವುದರಲ್ಲೇ ಕಾಲ ಕಳೆಯುತ್ತಾನೆ.
ಅಲ್ಲಾನನ್ನು ಬೇಡಿದರೂ ಪುಟ್ರಾಜುಗೆ ಪ್ರಯೋಜನವಾಗುವುದಿಲ್ಲ. ಆ ವರ್ಷವೂ ಕಡಿಮೆ ಅಂಕವೇ ಆತನಿಗೆ ಒಲಿದಿರುತ್ತದೆ. ಈ ಬಾರಿ ಅಲ್ಲಾಹು ಕೂಡ ತನಗೆ ಈ ರೀತಿ ಕೈಕೊಟ್ಟದ್ದನ್ನು ನೋಡಿ ಪುಟ್ರಾಜುಗೆ ಏನು ಮಾಡಬೇಕೆಂಬುದೇ ತೋಚದಂತಾಗುತ್ತದೆ. ಹೀಗೆ ಒಂದು ದಿನ ಶಾಲೆ ಮುಗಿಸಿ ಪುಟ್ರಾಜು ಯೋಚಿಸುತ್ತಾ ಶಾಲೆಯ ಗೇಟಿನ ಎದುರು ಒಂದು ಕಟ್ಟೆಯ ಮೇಲೆ ಕುಳಿತಿರುತ್ತಾನೆ. ಆಶಾಲೆಯ ಎದುರು ಒಂದು ಚರ್ಚ್ ಇರುತ್ತದೆ. ಪುಟ್ರಾಜುನ ದೃಷ್ಟಿ ಆ ಚರ್ಚಿನ ಮೇಲೆ ಹೋಗುತ್ತದೆ. ಚರ್ಚನ್ನು ನೋಡಿದ ಕೂಡಲೆ ಪುಟ್ರಾಜುಗೆ ಉಪಾಯ ಒಂದು ಹೊಳೆದು ಎದ್ದು ನಿಲ್ಲುತ್ತಾನೆ. “ಛೆ. . . ಇಷ್ಟು ದಿನ ಇದು ನನಗೆ ಹೊಳೆಯಲೇ ಇಲ್ಲವಲ್ಲ. ದೊಡ್ಡ ದೊಡ್ಡ ವಿಜ್ಞಾನಿಗಳು, ದೊಡ್ಡ ದೊಡ್ಡ ಶ್ರೀಮಂತರು, ವಿಧ್ಯಾವಂತರು ಇವರೆಲ್ಲರೂ ಇರುವುದು ಫಾರಿನ್ ನಲ್ಲೇ. . . ಅವರೆಲ್ಲರೂ ಕ್ರಿಶ್ಚಿಯನ್ನರು. ಒಂದು ವೇಳೆ ನಾನೂ ಕೂಡ ಏಸುವನ್ನು ಪೂಜಿಸಿದರೆ ಖಂಡಿತ ಹೆಚ್ಚು ಅಂಕ ಪಡೆಯಬಲ್ಲೆ” ಎಂದುಕ್ಕೊಂಡು ಪುಟ್ರಾಜು ಚರ್ಚಿಗೆ ಹೋಗಲು ಶುರುಮಾಡುತ್ತಾನೆ. ಪ್ರತಿದಿನವೂ ತಪ್ಪದೇ ಚರ್ಚಿಗೆ ಹೋಗುತ್ತಿರುತ್ತಾನೆ. ಒಂದು ದಿನ ಪುಟ್ರಾಜುವಿನ ಟೀಚರ್ ಆದ ತಾರಾಮಿಸ್ ಪುಟ್ರಾಜು ಚರ್ಚ್ ಗೆ ಹೋಗುತ್ತಿರುವುದನ್ನು ನೋಡುತ್ತಾರೆ.
ಪರೀಕ್ಷೆ ಯ ದಿನ ಬಂದಿರುತ್ತದೆ. ಪುಟ್ರಾಜು ಪ್ರತಿಯೊಂದು ಪ್ರಶ್ನೆಗೂ ಏಸುನನ್ನು ನೆನೆಯುತ್ತಲೇ ಉತ್ತರ ಬರೆಯುತ್ತಾನೆ. ಆದರೆ ಪರೀಕ್ಷೆ ಮುಗಿದು ಅಂಕ ಪಟ್ಟಿ ಕೈಗೆ ಸಿಕ್ಕಾಗ ಅಂಕಗಳು ಈ ಹಿಂದಿನ ಅಂಕಗಳಿಗಿಂತಲೂ ಕಡಿಮೆ ಬಂದಿರುತ್ತದೆ. ಇದನ್ನು ಕಂಡು ಪುಟ್ರಾಜುಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗುತ್ತದೆ. ಮನೆಗೆ ಹೋಗಲು ಧೈರ್ಯ ವಿಲ್ಲದೆ ಶಾಲೆ ಮೈದಾನದಲ್ಲಿ ಒಂದು ಕಡೆ ಅಳುತ್ತಾ ಕುಳಿತಿರುತ್ತಾನೆ. ಆಗ ತಾರಾ ಮಿಸ್ ಅಳುತ್ತಿರುವ ಪುಟ್ರಾಜುನನ್ನು ಕಂಡು ಅವನ ಹತ್ತಿರ ಹೋಗಿ ವಿಚಾರಿಸುತ್ತಾರೆ. ಆಗ ಪುಟ್ರಾಜು ನಡೆದುದೆಲ್ಲವನ್ನೂ ಹೇಳುತ್ತಾನೆ. ಇದನ್ನು ಕೇಳಿದ ತಾರಾಮಿಸ್ ಪುಟ್ರಾಜುನ ಬೆನ್ನು ಸವರುತ್ತಾ. . “ದೇವರುಗಳ ಹೆಸರು ಬೇರೆ ಬೇರೆ ಯಾಗಿರಬಹುದು, ಧರ್ಮ ಬೇರೆ ಬೇರೆ ಯಾಗಿರಬಹುದು ಆದರೆ ಆ ಎಲ್ಲಾ ದೇವರುಗಳ ಶಕ್ತಿ ಒಂದೇನಪ್ಪ. ನಾನು ಅವತ್ತೇ ನೀನು ಚರ್ಚಿಗೆ ಹೋಗುತ್ತಿರುವುದನ್ನು ನೋಡಿದ್ದೆ ಆದರೆ ಅವತ್ತು ನಾನು ನಿನ್ನ ಬಳಿ ಏನನ್ನೂ ಕೇಳಲು ಹೋಗಲಿಲ್ಲ. ಆ ಭಗವಂತ ನಾವು ಎಷ್ಟು ಪ್ರಯತ್ನ ಮಾಡುತ್ತೀವೋ ಅದರ ಆಧಾರದ ಮೇಲೆ ನಮಗೆ ಪ್ರತಿಫಲವನ್ನು ನೀಡುತ್ತಾನೆ. ಆದರೆ ನೀನು ಪ್ರಯತ್ನ ಪಡದೆ ಬರೀ ದೇವರ ಬಳಿ ಹೋಗಿ ಬೇಡುತ್ತಿದ್ದರೆ ಏನೂ ಪ್ರಯೋಜನ ಇಲ್ಲ ಪುಟ್ರಾಜು. ಬಾಕಿ ಎಲ್ಲಾ ಚಿಂತೆಗಳನ್ನು ಬಿಟ್ಟು ಬರೀ ಓದುವುದರಲ್ಲೇ ನಿನ್ನ ಗಮನ ಹರಿಸು” ಎಂದು ಹೇಳಿ ತಾರಾಮಿಸ್ ಅಲ್ಲಿಂದ ಹೊರಟು ಹೋಗುತ್ತಾರೆ. ಪುಟ್ರಾಜು ತಾರಾ ಮಿಸ್ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ಬೇಡದ ವಿಚಾರಗಳನ್ನು ತಲೆಗೆ ಹಾಕಿಕೊಳ್ಳದೆ ಬರೀ ಓದಿನತ್ತಲೇ ಗಮನ ಹರಿಸಿ ಮುಂದಿನ ಪರೀಕ್ಷೆಗೆ ತಯಾರಾಗುತ್ತಾನೆ. ಇದರ ಫಲವಾಗಿ ಪುಟ್ರಾಜು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಾನೆ. ಟೀಚರ್ಗಳು ಮತ್ತು ಹೆತ್ತವರು ಇವನ ಉನ್ನತಿ ಕಂಡು ಹೊಗಳುತ್ತಾರೆ. ಪುಟ್ರಾಜು ಬಹಳ ಸಂತೋಷದಿಂದ ಇರುತ್ತಾನೆ. ಮನೆಯಲ್ಲಿ ಗಣೇಶನ ಎದುರು ಕೂತು ತಾನು ಮಾಡಿದ ತಪ್ಪಿಗಾಗಿ ಕ್ಷಮೆ ಕೇಳುತ್ತಾನೆ. ಇನ್ನು ಮುಂದೆ ಇಂಥಹ ಮೂರ್ಖತನ ನಿರ್ಧಾರಗಳಿಂದ ತನ್ನನ್ನು ಕಾಪಾಡು ಎಂದು ಬೇಡಿಕ್ಕೊಳ್ಳುತ್ತಾನೆ.
-ಅಭಿಜಿತ್. ಎಮ್