ಪಿನ್ನಿ ಮಾಡಿಕೊಟ್ಟ ದಪ್ಪ ದಪ್ಪ ಥಾಲಿಪೆಟ್ಟಿನ ನಾಷ್ಟಾ ಗಡದ್ದಾಗಿ ತಿಂದು ಪೆಪರ್ ಓದಕೊತ ಕುತಿದ್ದಾ ಪಲ್ಲ್ಯಾ (ಪಲ್ಲಣ್ಣ). ಅಲ್ಲೆ ಅವನ ಬಾಜುಕ್ಕ ಪಿನ್ನಿ ಸಾಕಿದ್ದ ನಾಯಿ “ ಬ್ರೌನಿ “ ನು ಕೂತು ತುಕಡಿಸ್ಲಿಕತ್ತಿತ್ತು. ಒಬ್ಬರಿಗೊಂದ ಇನ್ನೊಬ್ಬರಿಗೊಂದ ಎಲ್ಲೆ ಬ್ಯಾರೆ ಬ್ಯಾರೆ ಮಾಡೊದಂತ, ಪಿನ್ನಿ ನಾಯಿಗು ಮತ್ತ ಪಲ್ಲ್ಯಾಗು ಒಂದಸಲಾ ದಪ್ಪ ದಪ್ಪನ್ನು 4 ಥಾಲಿಪೆಟ್ಟ ಮಾಡಿ ತಿನ್ನಿಸಿ ಕೈಬಿಟ್ಟಿದ್ಲು. ಗಡದ್ದ ಹೊಟ್ಟಿ ತುಂಬಿದ್ರಿಂದ ನಾಯಿಗು ಮೈ ವಝ್ಝಾ ಆಗಿ ಅಲ್ಲೆ ಮೆತ್ತನ್ನ ಕಾರ್ಪೇಟ್ ಮ್ಯಾಲೆ ತುಕಡಿಸಿಕೋತ ಕುತಿತ್ತು. ಪಲ್ಲ್ಯಾನ ಮನಿ ನಾಯಿದು ರಾಜಯೋಗನ ಮತ್ತ. ಆರಾಮಾಗಿ ಮೂರ ಹೊತ್ತು ಊಟಾ. ವಾರದಾಗ ಮೂರ ಸರ್ತೆ ಹೊರಗ ನಾನ್-ವೇಜ್ ಡಿನ್ನರ್. ಮಲ್ಕೊಳ್ಳಿಕ್ಕೆ ಮೆತ್ತನೆ ಕಾರ್ಪೆಟ್. ಮುಂದ ಟಿವ್ಹಿ.
ಪಿನ್ನಿ ನೋಡೊ ಎಲ್ಲಾ ಧಾರಾವಾಹಿನು ನೋಡ್ತದ ಅದು. ಪಲ್ಲ್ಯಾನ ಜೋಡಿ ವಾರ್ತಾ, ಮಕ್ಕಳ ಜೋಡಿ ಕಾರ್ಟೂನ್. ಮತ್ತ ಪಲ್ಲ್ಯಾನ ಹಿರೇ ಮಗಳು ರಾತ್ರಿ ಕದ್ದು ಮುಚ್ಚಿ ನೊಡೊ ಫ್ಯಾಶನ್ ಮತ್ತ ಮಿಡ್ ನೈಟ್ ಮಸಾಲಾನು ಬಿಟ್ಟು ಬಿಡದಂಗ ನೋಡದತದ. ಟಿವ್ಹಿಯೊಳಗಿನ ಎಲ್ಲಾ ಕಾರ್ಯಕ್ರಮದ್ದು ಟೈಮಿಂಗ್ “ ಬ್ರೌನಿ” ಗೆ ಗೊತ್ತಿರದ.. ಬರೊಬ್ಬರಿ ಆ ಟೈಮಿಗೆ ಅದು ಅಲ್ಲೆ ಹಾಜರ ಇರತದ.
ಪೇಪರ್ ಓದೊದ್ರಾಗ ಮುಳುಗಿದ್ದ ಪಲ್ಲ್ಯಾಗ ಕಾಲಿಂಗ್ ಬೆಲ್ಲ ಆಗಿದ್ದ ಕೇಳಿ ಬ್ಯಾಸರದಿಂದ ಬಾಗಲ ಕಡೆ ನೊಡಿದಾ. ತುಕಡಿಸ್ಲಿಕತ್ತ ನಾಯಿನು ಪಲ್ಲ್ಯಾನ ಮಾರಿ ನೋಡ್ತು. ಅದರ ನೋಟಾ ಒಂಥರಾ ಹೇಂಗಿತ್ತಂದ್ರ, “ ಆಲಸಿತನದಿಂದ ಪಲ್ಲ್ಯಾಗ “ ನೀ ಎದ್ದ ಬಾಗಲಾ ತಗಿತಿಯೋ, ಎನ ನಾನ ತಗಿಬೇಕೊ ಅಂತ ಕೇಳಿಧಂಗಿತ್ತು.
ಈ ಸಿಟಿಯೊಳಗಿನ ಸೊಫೆಸ್ಟಿಕೇಟೆಡ್ ಸಾಕು ನಾಯಿಗೊಳ ದಿಮಾಕು,ದೌಲತ್ತನ ಭಾಳ ಇರತದ. ಸಾಕಿದ ಮಾಲಕರ ನನಗೇನು ಸಂಬಂಧ ಇಲ್ಲಾ ಅನ್ನೊ ಹಂಗ ಇರತಾವ. ಮನಿ ಕಾಯಬೆಕು ಅನ್ನೊದು ಏನ ಅಷ್ಟ ಜರೂರ ನು ಇರುದಿಲ್ಲಾ ಯಾಕಂದ್ರ ಸಿಟಿ ಒಳಗ ಎಲ್ಲಾರು ಮನಿ ಸುತ್ತ ಕಬ್ಬಿಣದ್ದ ಗ್ರೀಲ್ ಹಾಕಿ ತಾವು ಸಾಕಿದ್ದ ನಾಯಿ ಜೋಡಿ ಬಂದೊಬಸ್ತ ಆಗಿರತಾರ. ಒಳಗನ ಬೆಚ್ಚಗ ತಿಂದುಂಡು ನಾಯಿಗೊಳು ಸೂಷ್ಮ ಮತ್ತ ಆಲಸಿಮಟ್ಟಿಗೊಳಾಗಿರತಾವ. ಅವುಗೊಳ ಹೆಸರು ಸುಧ್ಧಾ ಸೂಷ್ಮನ ಇರತಾವ “ಜೂಲಿ” “ಪೊಮ್ಮಿ” ” ‘ಚಿನ್ನಿ” “ಸೊನಿ” ಅಂತ.
ಅದಾ ಹಳ್ಳ್ಯಾಗಿನ ನಾಯಿಗೋಳ ನೋಡ್ರಿ ಬೇಕಾದ್ರ ಎಷ್ಟ ಚುರಕಾಗಿರತಾವ . ಹಳಸಿದ್ದ ಬಳಸಿದ್ದ, ತಂಗಳದ್ದ ತಿಂದು ಹುಲಿ ಹಂಗಿರತಾವ. ಅವುಕರ ಹೆಸರರ ಹೇಂಗಿರತಾವ ಅಂತಿರಿ, “ಕಾಳ್ಯಾ” ಬಿರ್ಯಾ” “ರಾಜಾ” “ಶೇರು” ಅಂತ ಝಕ್ಕಾಸ ಪೈಲ್ವಾನಗೊಳ ಹೆಸರಿನ್ಹಂಘ ಅನಿಸ್ತಾವ. ಅಪರಿಚಿತರ್ಯಾರರ ಮನಿಮುಂದ ಹಾದು ಹೊಂಟಿದ್ರು ಗುರ್ರ್ ಅಂತಾವ. ಯಾರನ್ನು ಮನಿ ಸನೇಕ ಹಾಯಿಸಿಗೊಡುದಿಲ್ಲಾ. ಅದ ಯಾರರ ಗೊತ್ತಿದ್ದವರು ಬಂದ್ರ ಮನಿ ಮಾಲಕರಕಿಂತಾ ಮದಲ ಗೇಟಿನ ಹತ್ರ ಬಂದು ಪ್ರೀತಿಯಿಂದ ಬಾಲಾ ಅಲ್ಲಾಡಿಸಿಕೊತ ಸ್ವಾಗತಾ ಮಾಡ್ತಾವ. ಅಷ್ಟು ಸಂಸ್ಕಾರವಂತ ಇರತಾವ.
ಕಾಲಿಂಗ್ ಬೆಲ್ ಸಪ್ಪಳಾಗಿದ್ದ ಕೇಳಿ ಪಲ್ಲ್ಯಾ ಬಿಟ್ಟಿಬ್ಯಾಸರಕಿಲೇ ಹೋಗಿ ಬಾಗಲಾ ತಗದಾ. ಯಾರಿದ್ರು ಅಷ್ಟ, ಬಿಟ್ರು ಅಷ್ಟ ಬಾಗಲಾ ತಗಿಯೊದ ಇಂವಂದ ಪ್ರಾರಭ್ಧಕರ್ಮ. ಮನ್ಯಾಗ ಪಲ್ಲ್ಯಾನ ಬಾಳೆ ಒಂಥರಾ ಆಂಡು-ಪಂಡು ಗತೆ ಇರತದ. ಮನ್ಯಾಗ ಸಾಕಿದ್ದ ನಾಯಿ ಸುಧ್ಧಾ ಟಬರ ಮಾಡೊವಷ್ಟು ಕ್ಷೀಣ ಮಟ್ಟಕ್ಕ ಅದ.
ಹಂಗುಹಿಂಗು ನಾಷ್ಟಾ ಮಾಡಿದ್ದ ವಝ್ಝಾ ಹೊಟ್ಟಿ ಹೊತಗೊಂಡು ಬಂದು ಬಾಗಲಾ ತಗದು ನೋಡಿದ್ರ ಸಾಡೇಸಾತಿ ಶನಿ ಹಂಗ ಯಾವದೊ ಕಂಪನಿಯ ಪ್ರಚಾರಕ್ಕ ಬಂದಿರೊ ಸೇಲ್ಸಮನ್ ನಿಂತಿದ್ದಾ. ಆಂವನ್ನ ನೋಡಿದಕೂಡ್ಲೆ ಪಲ್ಲ್ಯಾಗ, ಇನ್ನ ಕಿಸೆಕ್ಕ ಕೊಡ್ಲಿ ಬಿಳೋದ ಖಾತ್ರಿ ಅಂತ ಗೊತ್ತಾತು. ಅದೆಲ್ಲಿದ್ಲೊ ಎನೊ ಪಿನ್ನಿ ಬಂದ ಬಾಗಲ ಹತ್ರ ಪ್ರತ್ಯಕ್ಷ ಆದ್ಲು. ಪಲ್ಲ್ಯಾನ ಹಣೆಬರಕ್ಕ ಅವತ್ತ ಆ ಸೇಲ್ಸಮನ್ ಹೇಳಿಕೇಳಿ ಸೌಂದರ್ಯವರ್ಧಕ ಕ್ರೀಮು,ಪಾವ್ಡರ್ ತಂದಿರಬೇಕ. ಆಂವಾ ಪಾಂಡುನ್ನ ಮುಲ್ಯಾಗ ಸರಿಸಿ ಪಿನ್ನಿನ್ನ ಹಾಡಿ ಹೊಗಳಿ ತಾ ತಂದಿದ್ದ ಒಂದಿಷ್ಟ ಪ್ರೋಡಕ್ಟ್ಸ್ ಗೊಳನ್ನ ಅಮರಿಸಿದಾ. ಪಲ್ಲ್ಯಾ ಇನ್ನೆನ ನಾ ರೊಕ್ಕಾ ಕೊಡಂಗಿಲ್ಲಾ ಅನಬೇಕು ಅಷ್ಟರಾಗ ಪಿನ್ನಿ ,ಆಂವನ್ನ ಕಡೆ ಮುಗುಳ್ನಕ್ಕೋತ ನೋಡಿ “ ಯಾರು ಹೆಂಡ್ತಿನಾ ಪ್ರೀತಿಸ್ತಾರೊ,ಅವರು ಹೆಂಡ್ತಿ ಕೇಳಿದ್ದನ್ನು ಕೋಡಿಸಲು ಹೇಗೆ ನಿರಾಕರಿಸ್ತಾರೆ “ ಅಂತ ಅಂದಾಗ, ಪಲ್ಲ್ಯಾ ಕ್ಲೀನಬೋಲ್ಡ ಆಗಬೇಕಾತು. ಒಂಥರಾ ಸುಂದರವಾದಕ್ರೂರತೆಯಿರುವ ಬ್ಲ್ಯಾಕಮೇಲ್ ಮಾಡಿದ್ಲು ಪಿನ್ನಿ. ಅಕಿ ಹಿಂಗ ಮಾಡಿ ಮಾಡಿನ ಪಲ್ಲ್ಯಾನ್ನ ಪ್ರತಿಸಲಾ ಹಳ್ಳಕ್ಕ ಬೀಳಸ್ತಿದ್ಲು.
ಪಾಂಡುಗ ಮದ್ಲ ಇಂಥಾ ಜಾಹಿರಾತನ್ನ ಮಾಡೊವರ ಮ್ಯಾಲೆ ಭಾಳ ಸಿಟ್ಟು ಬರತಿತ್ತು. ಯಾಕಂದ್ರ ಮನ್ಯಾಗ ಎಲ್ಲಾರು ಜಾಹಿರಾತಿನ ಸ್ಟೈಲಿನ್ಯಾಗನ ಉತ್ತರಾ ಕೊಡತಿದ್ರು. ಒಂದಿನಾ ಮಗಳು ಕಾಲೇಜಿಗೆ ಹೊಂಟಾಗ ಆಕಿ ಹಾಕ್ಕೊಂಡಿದ್ದ ಸ್ಕರ್ಟ್ ಬರಬರತ ಮಣಕಾಲಮ್ಯಾಲ ಎರಲಿಕತ್ತಿದ್ದ ನೊಡಿ ಪಲ್ಲ್ಯಾ ಮಗಳನ್ನ ಜಬರಿಸಿ ಕೇಳಿದ್ದಕ್ಕ ಆಕಿ ಥಂಡಾ ಥಂಡಾ ಕೂಲ್ ಆಗಿ ಅದ್ಯಾವುದೊ ಆ್ಯಂಟಿ-ಡ್ಯಾಂಡ್ರಫ್ ಶಾಂಪೂದ್ದ ಜಾಹಿರಾತಿನ ಸಾಲುಗಳನ್ನ ಯಾವದಂದ್ರ “ ಜಂಹಾ ಛುಪಾನೆಕೆಲಿಯೇ ಕುಛ ನಹಿ ಬಚಾ ತೊ, ದುನಿಯಾಕೊ ದಿಖಾನೆಕೆಲಿಯೇ ಬಹೊತ ಕುಛ ಹೈ” ಅಂದು ಟಾ ಟಾ ಹೇಳಿ ಕುಣಕೊತ ಹೋಗಿದ್ಲು.
ಹದಿನಾರರ ಹರೆದ ಮಗನ್ನ ಶರ್ಟಿನ ಮ್ಯಾಲೆ ಲಿಪಸ್ಟಿಕ್ ಕಲೆ ನೋಡಿ ಏನಲೇ ಮಗನ ಅಂತ ಕೇಳಿದ್ದಕ್ಕ, ಮಗಾ “ ದಾಗ ಅಚ್ಛಾ ಹೈ” ಡ್ಯಾಡ್ ಅಂತ ಸರ್ಫ ಎಕ್ಸೇಲ್ ಜಾಹಿರಾತಿನ ಡೈಲಾಗ್ ಹೋಡದ ಹೊಗಿದ್ದಾ. ಮನ್ಯಾಗಿನ ನಾಯಿ ಸುಧ್ಧಾ ನಾಯಿ ತಿನ್ನೊ ಆಹಾರದ್ದ ಜಾಹಿರಾತ ಬಂದ ಕೂಡಲೇ “ ಸರಳ ತಗೊಂಡ ಬಾ ಅದನ್ನ” ಅಂತ ಪಲ್ಲ್ಯಾನ ಮಾರಿ ನೋಡತಿತ್ತ.
ಒಂದಿನಾ ಹಿಂಗ ತಲಿಕೆಡಿಸ್ಕೊಂಡ ಟಿವ್ಹಿ ನೋಡಬೇಕಾದ್ರ ಮ್ಯಾಗಿ ನ್ಯೂಡಲ್ಸದು ಜಾಹಿರಾತು ಬರಲಿಕತ್ತಿತ್ತು. “ಕಿಸಿ ಕಿ ಮಮ್ಮಿ ಕೊ ಅಪನಾ ಬನಾತಿ ಹೈ” ಅಂತ. ಫಕ್ಕನ ಪಲ್ಲ್ಯಾಗ ತನ್ನ ಗೇಳೆಯಾ ಶಿನ್ಯಾನ ಮನ್ಯಾಗ ಅವನ ಹೆಂಡ್ತಿ ಮ್ಯಾಗ್ಗಿ ಮಾಡಿ ಕೊಟ್ಟಿದ್ದನ್ನ ತಿಂದ ಬಂದ ನೆನಪಾಗಿ ಒಂದ ಮಸ್ತ ಐಡಿಯಾ ತಲ್ಯಾಗ ಹೋಳಿತು. ಅವತ್ತ ರಾತ್ರಿ ಸ್ವಲ್ಪ ತಡಾ ಮಾಡಿನ ಮನಿಗೆ ಬಂದಾ. ಆಂವಾ ಬಂದಕೂಡಲೆ ಪಿನ್ನಿ “ ಊಟಕ್ಕ ಬಾ” ಅಂತ ಕರದ್ಲು. ಆವಾಗ ಪಲ್ಲ್ಯಾ ಮುಗುಳ್ನಕ್ಕೊತ “ ಕಿಸಿ ಕಿ ಬಿವಿ ಕೊ ಅಪನಾ ಬನಾತಿ ಹೈ” ಅಂತ ಹಾಡಲಿಕ್ಕೆ ಶೂರು ಮಾಡಿದಾ. ಪಿನ್ನಿ ದುರುದುರು ನೋಡ್ಕೊತ “ ತಲಿಗಿಲಿ ನೆಟ್ಟಗದ ಇಲ್ಲೊ, ಊಟಕ್ಕ ಬಾ ಅಂದ್ರ ಹಿಂಗ್ಯಾಕ ಶೇರೆ ಕುಡದವರಂಘ ಹಾಡಲಿಕತ್ತಿರಿ, ಮದಲ ಕಟಗೊಂಡಾಕಿ ನನ್ನರ ಸಂಭಾಳಸರಿ, ಆಮ್ಯಾಲೆ ಮಂದಿ ಹೆಂಡ್ತಿನ್ನ ಅಪನಾ ಮಾಡ್ಕೊಳ್ಳಾಕ್ರಂತ “ ಅಂದ್ಲು. ಅದಕ್ಕ ಪಲ್ಲ್ಯಾ ಕೂಲ್ ಆಗಿ ಗೇಳೆಯಾ ಶಿನ್ಯಾನ ಮನಿಗೆ ಹೋಗಿದ್ದೆ ಆಂವನ ಹೆಂಡ್ತಿ ಮ್ಯಾಗಿ ಮಾಡಿಕೊಟ್ಟಳು ತಿಂದ ಬಂದೆ, ನಂಗ ಹಸಿವಿಲ್ಲ ಅಂತ ಹೇಳಿ ಮುಕಾಟಲೇ ರೂಮನ್ಯಾಗ ಸೆರ್ಕೊಂಡಾ.
ಪಲ್ಲ್ಯಾನ ಐಡಿಯಾ ಫಲಾ ಕೊಟ್ಟಿತ್ತು. ಆವತ್ತಿಂದ ಪಿನ್ನಿ ಜಾಹಿರಾತಿನ ಡೈಲಾಗ್ ಹೇಳಿ ಬ್ಲ್ಯಾಕಮೆಲ್ ಮಾಡೊದ ಬಿಟ್ಲು. ಇನ್ನೊಂದ ಮಜಾ ಅಂದ್ರ “ಮ್ಯಾಗಿ” ಜಾಹಿರಾತು ಬಂದ್ರ ಪಟ್ಟನ ಚಾನಲ್ ಬದಲಿ ಮಾಡಲಿಕ್ಕೆ ಶೂರು ಮಾಡಿದ್ಲು…….
*****
ಚೆನ್ನಾಗಿದೆ ಮೇಡಮ್ ನಿಮ್ ಲೇಖನ…….
ಹಾ ಹಾ ಹಾ…. ನಗು ಬ೦ತು ನೋಡ್ರಿ ಸುಮನ್…..
ಬರಿಯೋ ಶೈಲಿ ಛ೦ದ ಅದ… ಎಸ್ಟ ಅ೦ದ್ರೂ ಉತ್ತರ ಕರ್ನಾಟಕ ಭಾಷಾ ಗ೦ಡು ಭಾಷಾ
ಹಾ ಹಾ ಹಾ…. ನಗು ಬ೦ತು ನೋಡ್ರಿ ಸುಮನ್…..
ಬರಿಯೋ ಶೈಲಿ ಛ೦ದ ಅದ… ಎಸ್ಟ ಅ೦ದ್ರೂ ಉತ್ತರ ಕರ್ನಾಟಕ ಭಾಷಾ ಗ೦ಡು ಭಾಷಾ
ತುಂಬಾ ಚನ್ನಾಗಿದೆ….ಜಾಹಿರಾತಿನ ಡೈಲಾಗ್ ಕೂಡ ಒಮ್ಮೊಮ್ಮೆ ಎಷ್ಟು ಪ್ರಯೋಜನಕ್ಕೆ ಬರುತ್ತೆ ಅಲ್ವಾ ಮೇಡಂ..