ಪಿತೃ ಪೂಜೆಯ ಊಟ: ಸಾವಿತ್ರಿ ವಿ. ಹಟ್ಟಿ


ನಾನು, ಅಕ್ಕ ಮತ್ತು ಅವ್ವ ಆಬಾಲಿ ಹೂವು ಹೆಣ್ಕೊಂತ ಕುಂತಿದ್ವಿ. ಅಕ್ಕ ಮತ್ತು ಅವ್ವ ಮನೆತನಕ್ಕ ಸಂಬಂಧ್ಸೀದ ವಿಷಯ ಮಾತಾಡ್ಕೊಂತ ಇದ್ರು. ಮಧ್ಯೆ ಮಧ್ಯೆ ನಾನು ಅವರ ಮಾಲೀಗೂ ನನ್ನ ಮಾಲೀಗೂ ಹೋಲಿಸಿ ನೋಡಿ ಜಾಸ್ತಿ ನಾನೇ ಕಟ್ಟಿದ್ದು ಅಂತ ಧಿಮಾಕಿನಿಂದ ಹೂವು ಹೆಣೆಯಾಕ್ಹ್ಹತ್ತಿದ್ದೆ. 
ಆ ಹೊತ್ಗೆ ಹೊರಬಾಗಿಲ ಹತ್ರ ಯಾರದಾ ನೆಳ್ಳು ಬಿದ್ದಂಗಾತು. ಬಾಗಿಲ ತೋಳು ಹಿಡಿದು ಹಣಕಿ ಹಾಕಿದಂಗಾತು. ಎದ್ದು ಹೋಗಿ ನೋಡಿದೆ. ಯಾರೂ ಇರಲಿಲ್ಲ. ಯಾವಾ ಸಣ್ಣ ಹುಡುಗ್ರು ಆಟ ಆಡ್ಕೊಂತ ಬಂದು ಹೋಗಿರಬಹುದು ಅನ್ಕೊಂಡು ಸುಮ್ಮನಾದೆ. ಹೂವು ಕಟ್ಟೂದ ಮುಂದ್ವರಿಸೀದೆ, ಈ ಸಲ ಮತ್ತೆ ಬಾಗಿಲ ತೋಳು ಹಿಡಕೊಂಡು ಯಾರೋ ನಿಂತಂಗಾತು. ತಲಿ ಎತ್ತಿ ನೋಡಿದೆ. ಚಿತ್ರಾ ನನ್ನ ಹೈಸ್ಕೂಲು ಗೆಳತಿ. ಇಬ್ಬರೂ ಒಮ್ಮೆಲೆ ನಕ್ವಿ. “ಬಾರಲೇ ಒಳಗ, ಅಲ್ಲೇ ನಿಂತೀಯಲ್ಲ ಹೊರಗಿನವರಂಗ” ಅಂದೆ. ನನ್ನ ತಾಯಿ, ಅಕ್ಕನೂ ಆಕೀನ ಪ್ರೀತಿಯಿಂದ ಬರಮಾಡಿಕೊಂಡು ಯೋಗಕ್ಷೇಮ ವಿಚಾರಿಸೀದ್ರು. ಆಕೀದು ಮದುವ್ಯಾಗಿ ಆಗ್ಲೇ ಐದಾರು ವರ್ಷ ಆಗಿತ್ತು. ಅಪರೂಪಕ್ಕೊಮ್ಮೆ ತವರಮನೀಗಿ ಬಂದಾಗ ನನ್ನ ಮಾತಾಡೀಸ್ದಾ ಹೊಕ್ಕಿರಲಿಲ್ಲ. ಈ ಸಲಾನೂ ಮಹಾನವಮಿ ಹಬ್ಬಕ್ಕ ಬಂದಾಕಿ, ನನ್ನ ನೆನಪಿಸ್ಕೊಂಡು ನಮ್ಮನೀಗಿ ಬಂದಿದ್ಲು. ಆಕೀನೂ ಲಕ್ಕುಂಡ್ಯಾಗ ಹುಟ್ಟಿ ಬೆಳೆದಾಕಿ ಆಗಿದ್ರಿಂದ ಸುಮ್ಕ ಕುಂತ್ಕೊಳಿಲ್ಲ. ದಾರ ತಗೊಂಡು ಹೂ ಕಟ್ಟಾಕ್ಹತ್ತೀದ್ಲು. ಹಂಗ ಚಿಗವ್ವ, ಹಿಂಗ ಚಿಗವ್ವ ಅಂತ ತನ್ನ ಒಗತಾನದ ಬಗ್ಗೆ ಮಾತಾಡಾಕ್ಹತ್ತೀದ್ಲು. “ಮಾತಾಡ್ಕೊಂತ ಕುಂತ್ಕೊ, ಚಾ ಮಾಡ್ತೀನಿ” ಅಂತಂದು ನಾನು ಅಡಿಗಿ ಮನಿಗಿ ಹ್ವಾದೆ. ಐದು ನಿಮಿಷದಾಗ ಚಹ ಕುದಿಸಿ ಸೋಸ್ಕೊಂಡು ತಂದು ಎಲ್ಲಾರ್ಗೂ ಕೊಟ್ಟೆ. ಚಹಾ ಗುಟ್ಕರಿಸ್ಕೊಂತ, “ ಇವತ್ತ ರಾತ್ರಿ ಊಟಾನ ನಮ್ಮನ್ಯಾಗನ ಮಾಡೂದಾ ಶಾರಿ, ಹಿರೇರ್ಗೆ ಧೂಪ ಹಾಕ್ತೀವಲ್ಲ ಅದ್ಕಾ” ಅಂದ್ಲು ಚಿತ್ರಾ. “ಸರಿ ಹಂಗಾದ್ರ ಅಲ್ಲೇ ಉಂತೀನಿ ಬಿಡು” ಅಂತ ನಾನು ಆಕೀ ಮಾತಿಗೆ ಒಪ್ಕೊಂಡೆ. ಚಾ ಕುಡಿದ ಮ್ಯಾಲೆ ಇಬ್ರೂ ಮಾತಾಡ್ಕೊಂತ ಮನಿಯಿಂದ ಹೊರಬಿದ್ವಿ.  
ಬಸ್ತಿ ಗುಡಿ(ಪದ್ಮಾವತಿ ಬಸದಿ) ದಾಟಿ, ಹಿರೇ ಮಸೂತಿ ದಾರಿ ಹಿಡಿದ್ವಿ. ಚಿತ್ರಾ ತನ್ನ ನಾದಿನಿ ನೆಗೆಣ್ಯಾರ್ಗೆ ಮಕ್ಕಳಾಗಿದ್ದು, ತನಗ ಒಂದೂ ಕೂಸು ಹುಟ್ಟದಾ ಇದ್ದುದು, ತನ್ನ ಅತ್ತಿ ಆಗಾಗ್ಗೆ ಮಕ್ಕಳಾ ಆಗ್ವಲ್ವು ಚಿತ್ರಾಗ ಅಂತ ಇಂಗಡಿಸಿ ಅನ್ನೂದು, ಮಕ್ಕಳಾಗ್ಲಿ ಅಂತ ಇತ್ತೀಚ್ಗಿ ಜಂದೀಪೀರ್ ದರಗಾಕ ನಡಕೊಳ್ಳಾಕ್ಹತ್ತಿದ್ದು, ಹಿಂಗ ಒಂದೊಂದ ಸಂಗತಿ ಹೇಳಿ, ದುಃಖ ಅನ್ನಿಸಿದಾಗ ಸೆರಗ್ನಿಂದ ಮೂಗು ಒರೆಸ್ಕೊಂತ ಮಾತು ಮುಂದ್ವರಿಸಿದ್ಲು. ಆಕೀ ಕಷ್ಟದ ಮಾತು ಕೇಳಿ ನನಗೂ ಗಂಟಲು ಉಬ್ಬಿ ದುಃಖಾಗಾಕ್ಹತ್ತಿತ್ತು. ಆಕೀ ಮಾತು ಕೇಳ್ಕೊಂತ ಹೊಂಟಿದ್ದ ನನಗ ದಾರಿ ಕಡೆ ಲಕ್ಷ್ಯನಾ ಇರಲಿಲ್ಲ. ಇಬ್ರೂ ಹೂಂ ಹೌದು ಅಲ್ಲ ಅಂತ ಮಾತಾಡ್ಕೊಂತ ದಾರಿ ತಪ್ಪಿದ್ವಿ. “ಅಯ್ಯಯ್ಯ ಅಲ್ಲಲೇ, ನಿಮ್ಮನೀಗಿ ಹೋಗಬೇಕಂದ್ರ ಕಂಚಗಾರ ಓಣ್ಯಾಗ ಹಾದು ಹೋಗೂದಲ್ಲೇನು?” ಅಂದೆ. “ಹೌದು ಬಿಡು, ಆದ್ರ ಹಿಂಗ್ಹಾದು ಹ್ವಾದ್ರೂ ಬರುತ್ತ ಬಾ ನಮ್ಮನಿ” ಅಂತ ಆಕಿ ಹೇಳೀದ್ಲು. “ಸರಿಯವ್ವ ನಡೀ” ಅಂತ ನಾನು ಹೊಸದಾಗಿ ತಲೆ ಎತ್ತಿದ ಅತ್ತಿಮಬ್ಬೆ ಬಡಾವಣ್ಯಾಗಿನ ಹೊಸ ಮನಿ ಮಟ ನೋಡ್ಕೊಂತ ಆಕೀ ಕೂಟ ಹೊಂಟೆ. 

ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದಿರೂ ಆಕೀ ತವರಮನಿ ಹಳೇ ಕಾಲದ ಬಂಕದ ದೊಡ್ಡ ಮನಿ. ಮನಿ ಮುಂದ ದೊಡ್ಡ ಅಂಗಳ. ಅಂಗಳದಾಗ ಹುಡುಗ್ರು ಕೇಕಿ ಹಾಕ್ಕೊಂತ ಆಡಾಕ್ಹತ್ತಿದ್ವು. ಅವರ ಮನಿ ತಲುಪೂ ಹೊತ್ಗೆ ಆಗ್ಲೆ ದೀಪ ಹತ್ತಿದ್ವು. ಅದಾಗ್ಲೆ ಒಬ್ಬೊಬ್ಬರ ಧೂಪ ಹಾಕಿ ಹಾಕಿ ಊಟ ಮಾಡಾಕ್ಹತ್ತಿದ್ರು. ನಾನೂ ಹೋಗಿ ತಾಟಿನ್ಯಾಗಿಟ್ಟಿದ್ದ ಲೋಬಾನ ತಗೊಂಡು ಹಿರೇರ ಭಾವಚಿತ್ರಗಳ ಮುಂದ ಅಲ್ಲೇ ಗುಂಪಿ ಹಾಕಿದ್ದ ಕಿಚ್ಚಿನ ಮ್ಯಾಲೆ ಹಾಕಿ, ನೆಲಕ್ಕ ಹಣಿ ಹಚ್ಚಿ ನಮಸ್ಕಾರ ಮಾಡಿದೆ. ಆಮ್ಯಾಲೆ ನಮ್ಮಿಬ್ರ ಮಾತು ಮತ್ತೆ ಮುಂದುವರಿದ್ವು. ಆಕೀ ರಾಟೀ ಕೋಣ್ಯಾಗ ಇಬ್ರೂ ಮಾತಾಡ್ಕೊಂತ ಕುಂತ್ವಿ.

ನಾವಿಬ್ರೂ ಕುಂತಿವೆಂದ್ರ ಇಂಥಾ ಮಾತು ಉಳೀತು ಅನ್ನೂವಂಗಿಲ್ಲ. ಹಂಗ ಎಲ್ಲಾನೂ ಮಾತಾಡಾರು. ಊರಾಗ ಯಾರು ಸತ್ರು, ಯಾರು ಮದುವಯಾದ್ರು, ಯಾರು ಓಡಿ ಹ್ವಾದ್ರು, ಯಾರು ಹಡದ್ರು, ಯಾರು ಕಳತನ ಮಾಡೀದ್ರು, ಯಾರ್ಗೆ ನೌಕರಿ ಸಿಕ್ತು , ಯಾರ್ಯಾರು ಜಗಳಾಡಿ ಮಾರೀಗಿ ಮರ ಕಟಕೊಂಡ್ರು ಅಂತ ಸರವುಟಗಿ ಎಲ್ಲಾನೂ ಗೊತ್ತಿದ್ದಾಕಿ ಗೊತ್ತಿಲ್ದಾಕೀಗಿ ವಾರ್ತಾ ಓದೂದು ನಮ್ಮಿಬ್ಬರ ಚಾಳಿ. ಅದೆಲ್ಲಾ ಮಾತಾಡ್ಕೊಂತ ಕುಂತಾಗ ಹೊತ್ತು ಹೋಗಿದ್ದಾ ತಿಳೀಲಿಲ್ಲ. ಚಿತ್ರಾನ ತಾಯಿ ಕ್ವಾಣಿ ಬಾಗಿಲಿಗಿ ಬಂದು “ಏಯ್ ತಂಗ್ಯಾರ, ಮಾತು ಸಿಕ್ರ ಸಾಕು ನಿಮಗಿಬ್ರಿಗೂ, ಸಾಕು ಬರ್ರೆಬೆ ತಾಯ್ಗೂಳ, ಉಂಡು ಕಣ್ಣು ತುಂಬ ನಿದ್ದಿ ಮಾಡ್ರಿ, ಹೊತ್ತು ಗೊತ್ತು ಇಲ್ಲದಾ ಬರೇ ಮಾತು ನಿಮ್ಮವು” ಅಂತ ಕಾಳಜಿಯಿಂದ ಬೈಯ್ದಾಗ್ಲೆ ನಾವು ಮಾತು ನಿಲ್ಲಿಸಿ, ತುಟ್ಟಿ ಕಡ್ಕೊಂಡು ಸುಮ್ಮನಾದ್ವಿ. “ಬರ್ತೀವಿ ತಡೀಬೆ, ದಿನಾ ಮಾತಾಡ್ತೀವೇನು? ಯಾವಾಗಾರ ಒಮ್ಮೆ ಸಿಕ್ಕಾಗ ಒಂದೀಟು ಕುಂತ್ಕೊಬೇಕು ಗೆಳತ್ಯಾರ ಕೂಟ ಅಂದ್ರ ನಿಂದೊಂದ ಸುರು ನೋಡವ್ವಾ ಪುರಾಣ..” ಅಂತ ಚಿತ್ರಾ ತಾಯಿಗೆ ಹುಸಿ ಮುನಿಸಿನಿಂದ ಬೈಯ್ದಳು. ಮತ್ತೆ ಹಂಗ ಹಿಂಗ ಅಂತ ಆಕೀನಾ ಮಾತು ಮುಂದುವರಿಸೀದ್ಲು. ಆ ಹೊತ್ಗೆ ತಾಯಿ ನಿಂಗಮ್ಮಗ ತಲಿ ಚಿಟ್ ಹಿಡಿದಿರಬೇಕು. ಆಕೀ ಎರಡು ತಾಟಿನ್ಯಾಗ ಊಟಕ್ಕೆ ಬಡಿಸಿಕೊಂಡು ನಾವಿದ್ದಲ್ಲಿಗೆ ತಂದು ಕೊಟ್ಲು. ಹಿರೇರ್ಗೆ ಯಡಿ ಇಡೂದಂದ್ರ ಏನು ಕೇಳೂದು? ಕೇಳಿದ್ದೆಲ್ಲಾ ಸಿಗುವಂಗ ಅಡಿಗಿ ಮಾಡಿರ್ತಾರ. ನಾಲ್ಕು ಜನ ಹಿರೇರ್ಗೆ ನಾಲ್ಕು ಥರಥರದ ಅಡಿಗಿ. ಹಪ್ಪಳ, ಸಂಡಿಗಿ, ಭಜಿಯಿಂದ ಹಿಡಿದು, ರೊಟ್ಟಿ, ಚಪಾತಿ, ಎಣ್ಣಿಗಾಯಿ, ಹೋಳಿಗಿ, ತುಪ್ಪ, ಹುಗ್ಗಿ ಹಾಲು, ಹಣ್ಣು, ಬೂಂದಿ ಉಂಡಿ, ಜಿಲೇಬಿ ಒಂದಾ ಎರಡಾ! ಚಿತ್ರಾನ ತಾಯಿ ಬದುಕಿದ್ದಾಗ ಅತ್ತೀ ಮಾವಗ ಅಷ್ಟು ಉಪಚಾರ ಮಾಡಿದ್ಲೊ ಇಲ್ಲ. ಅಂತೂ ಸತ್ತ ಮ್ಯಾಲೆ ಎಲ್ಲಾ ಹಿರೇರ್ಗೆ ಗಡದ್ದಾಗಿ ಯಡಿ ಮಾಡೂ ಹೆಣಮಗಳು. ನಾನೂ ಸತ್ತು ಹೋಗಿರೋ ಹಿರೇರ ಆರ್ಶೀರ್ವಾದ ಅಂತ ಬಾಯಿ ಚಪ್ಪರಿಸಿ ತಿಂದಾ ತಿಂದೆ. ಹೊಟ್ಟೆ ಬಿರಿಯುವಂಗ ಹಿಂದು, ಅಬ್ ಅಂತ ತೇಗು ಬಂತು. 

ಆಮ್ಯಾಲೆ ಚಿತ್ರಾ ಕೊಟ್ಟ ಎಲೆಗೆ ಸುಣ್ಣ ಸವರಿ ಅಡಿಕಿ ಹೋಳಿನ ಜೊತಿ ಬಾಯಿಗೆ ಹಾಕ್ಕೊಂಡೆ. ಗ್ವಾಡೀಗಿ ಹಾಕಿದ್ದ ಗಡಿಯಾರ ಹೊಡ್ಕೊಳ್ಳಾಕ್ಹತ್ತಿತು. ನೋಡಿದೆ. ಆಗಲೆ ಎಂಟೂವರೆ. “ರಾತ್ರಿ ಹೊತ್ತು ಬ್ಯಾರೆ, ಕರೆಂಟು ಗೊತ್ತಿಂದಲ್ಲ ಚಿತ್ರಾ ಮತ್ತೆ ಬರ್ತೀನಿ ತಗೊ, ಹೊತ್ತಾತು ಹೊಕ್ಕೀನಿ” ಅಂದೆ. “ಸರಿ ಬಿಡು, ಇನ್ನೂ ಹಬ್ಬ ಮುಗಿಸಿ, ಎಂಟು ದಿನ ಇಲ್ಲೇ ಇರ್ತೀನಿ ತಗೋ, ಭೇಟಿಯಾಗೂನು. ಕಳಿಸ್ತೀನಿ ನಡಿ ಅತಾತ”  ಅಂತ ಆಕೀ ನನ್ನ ಭುಜದ ಸುತ್ತ ಕೈ ಹಾಕೊಂಡು ಹೊರಬಂದ್ಲು. ಹೊರಗ ಬಂದಾಗ ಅಮಾವಾಸೆ ದಿನ ಬ್ಯಾರೆ. ಎಂಟೂವರೆಗೆ ಹತ್ತು ಗಂಟೆ ವ್ಯಾಳೆ ಆದಂಗ ಕಾಣ್ತಿತ್ತು. “ಭಾರೀ ಕತ್ಲಾಗೇತಲ್ಲಲೆ” ಅಂದೆ. “ಅದೇಟು ಕತ್ಲ ಬಿಡು, ಬೇಕಾದ್ರ ಕಲ್ಲಪ್ಪಣ್ಣನ ಅಂಗಡಿತನಕ ಕಳಿಸ್ತೀನಿ ನಡಿ, ಮುಂದ ಗೌಡ್ರ ಗಿರಣಿ, ದೇವಪ್ಪಜ್ಜಾರ ಮನಿ ದಾಟೀದ್ರ ನಿಮ್ಮನಿ ಕಾಣ್ಸುತ್ತ” ಅಂತ ಜೊತಿಗಿ ಬಂದ್ಲು. 

ಕಲ್ಲಪ್ಪಣ್ಣನ ಅಂಗಡಿ ತನಕ ಬಂದ್ಲು. “ಸರಿ ನೀನು ವಾಪಸ್ಸು ಹೋಗು, ನಾನು ಹೊಕ್ಕೀನಿ” ಅಂದೆ. ಅಲ್ಲೆಲ್ಲೆ ಕಟ್ಟೀ ಮ್ಯಾಲೆ ಜನರು ಉಂಡು ಮಾತಾಡ್ಕೊಂತ ಕುಂತಿದ್ರು. “ ಹೂಂ, ನೀನು ಹೋಗು, ನಾನು ಹೊಕ್ಕೀನಿ. ನಾಳೆ ಟೈಮ್ ಸಿಕ್ಕರ ಭೇಟಿಯಾಗೂನು” ಅಂತ ಹೇಳಿ ಆಕೀ ತನ್ನ ಮನಿ ಕಡೆ ನಡದ್ಲು. ನಾನೂ ಸರಿ ಅಂತ ಆಕಿಯಿಂದ ಬೀಳ್ಕೊಂಡು ನಮ್ಮನಿ ಕಡೆ ಅವಸರದಿಂದ ಹೆಜ್ಜಿ ಹಾಕಿದೆ. ಚಿತ್ರಾ ಕಣ್ಮರೆಯಾದ್ಲೊ ಏನೋ ಅಂತ ಒಮ್ಮೆ ತಿರುಗಿ ನೋಡಿದೆ. ನೋಡಿದ್ದಾ ತಡ, ನನ್ನ ಕಣ್ಣು ಮುಂದ ಗಿರ್ರನೆ ಬ್ರಹ್ಮಾಂಡ ತಿರುಗಿದಂಗಾತು. ನಾನು ಹೌಹಾರಿ ಸುತ್ತಲೂ ನೋಡಿದೆ. ಅಲ್ಲಿ ಯಾವ ಮನೀನೂ ಇರಲಿಲ್ಲ. ಯಾವ ಕಲ್ಲಪ್ಪಣ್ಣನ ಅಂಗಡೀನೂ ಇರಲಿಲ್ಲ. ಸೋಮನಕಟ್ಟಿ ದಾರ್ಯಾಗಿರೂ ನಮ್ಮೂರಿನ ಸುಡುಗಾಡಿನ ಹತ್ರ ನಾನೊಬ್ಬಾಕಿನ ಹೌಹಾರಿ , ಭಯಭೀತಳಾಗಿ ನಿಂತಿದ್ದೆ. ನಾಲ್ಕಾರು ಮಾರು ದೂರದಾಗ ಹಾಲುಗಂಡಿ ಬಸವಣ್ಣನ ಗುಡಿ, ಬಸವಣ್ಣನ ಕೆರಿ ಕಾಣಿಸ್ತಿದ್ವು. ಅಮಾವಾಸೆ ಇದ್ದುದ್ರಿಂದ ಹೊಲಮನಿಗಿ ಹೋಗಿ ಬರಾರ ಸುಳುವು ನಿಂತಿತ್ತು. ನನ್ನ ತೊಡೆಗುಂಟ ಉಚ್ಛೆ ಹೋಗಾಕ್ಹತ್ತಿತ್ತು. ಅಳಬೇಕೊ ಚೀರಬೇಕೊ ಒಂದೂ ತಿಳೀಲಿಲ್ಲಾ. ಸತ್ತೆನೊ ಕೆಟ್ಟೆನೊ ಅಂತ ಒಂದಾ ಸಮ ಓಟ ಕಿತ್ತೆ. ಎಷ್ಟು ಓಡಿದ್ರೂನು ಸುಡುಗಾಡಿನ ಸುತ್ತಲೆ ಸುತ್ತಾಕ್ಹತ್ತಿದ್ದೆ. ನನ್ನ ಕಾಲು ನಮ್ಮ ಮನಿ ಕಡೆ ಹೋಗ್ವಲ್ವು ಅಂತ ಬೋರಾಡಿ ಅಳಾಕ್ಹತ್ತೀದೆ. ನನ್ನ ಅಳು ಜೋರಾದಂಗೆಲ್ಲಾ ಹುಗಿದಿದ್ದ ಹೆಣಗಳ ಅಸ್ಥಿ ಪಂಜರ ಒಂದೊಂದಾ ಮ್ಯಾಲೆದ್ದು ನನ್ನ ಸುತ್ತಾ ಜಮಾಯ್ಸಿ ಕುಣಿಯಾಕ್ಹತ್ತೀದ್ವು. ನನ್ನ ಕತಿ ಮುಗದಾ ಬಿಡ್ತು ಅಂದ್ಕೊಂಡು ಗಂಟಲು ಹರಿಯುವಂಗ ಚೀರಿ ಭಯದಿಂದ ಮೂರ್ಛಿ ಬಂದು ಬಿದ್ದೆ. 

“ಯಾಕಬೇ ಎದ್ದೇಳು, ನಿಚ್ಚಳಾಗೇತಿ ಎದ್ದೇಳು, ಕನಸು ಬಿದ್ದಿತೇನು? ಹೆದರಿದೇನು?” ಅಂತ ಅವ್ವ ತಲಿ ನೇವರಿಸಿದಾಗ, ಮ್ಯಾಲೆದ್ದು, “ಎಪ್ಪಾ ಕನಸಾ ಈ ಪರಿ” ಅಂತ ಬೆವೆತಿದ್ದ ಕುತ್ತಿಗಿ, ಎದೆ ಒರೆಸಿಕೊಂಡೆ. ಕನಸಿನ್ಯಾಗ ತಿಂದಿದ್ದೆಲ್ಲಾ ನೆನಪಾಗಿ ವಾಕರಿಕೆ ಬಂತು. 

****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x