ರಾಜುವಿಗೆ ಏನೋ ಕುತೂಹಲ. ತಾನು ಮನೆಯಲಿಲ್ಲದ ಸಮಯದಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ತನ್ನ ಮದುವೆಯ ಬಗ್ಗೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದುದನ್ನು ಅಣ್ಣನ ಮಕ್ಕಳು ಆಟವಾಡುತ್ತಾ ಗಮನಿಸಿ ವಿಷಯ ತಿಳಿಸಿದ್ದರು. ಮದುವೆ, ರಾಜು ಹೆಸರು ಆಗಾಗ ಹೇಳುತ್ತಿದ್ದರು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಹೇಳಿ ಆಡಲು ಓಡಿದವು. ಆಟದ ಬಗ್ಗೆ ಲಕ್ಷ್ಯವಿದ್ದ ಮಕ್ಕಳಿಗೆ ದೊಡ್ಡವರ ಮಾತುಗಳಲ್ಲಿ ಆಸಕ್ತಿಯೇನೂ ಇರಲಿಲ್ಲ. ಸ್ವಲ್ಪ ದಿನದಲ್ಲಿ ರಾಜುವಿನ ಮದುವೆಯ ಬಗ್ಗೆ ಚರ್ಚೆ ಕಾವೇರತೊಡಗಿತ್ತು. ಮಕ್ಕಳಿಗೆ ವಿಷಯವೆಲ್ಲಾ ಸರಿಯಾಗಿ ಕೇಳಿಸಿಕೊಳ್ಳಲು ಚಾಕೊಲೇಟಿನ ಆಮಿಷವೊಡ್ಡಿ ಛೂ ಬಿಟ್ಟಿದ್ದ. ಮನೆಯಲ್ಲಿ ನಡೆಯುವುದನ್ನು ಚಾಚೂ ತಪ್ಪದೆ ವರದಿಮಾಡುತ್ತಿದ್ದವು. ತನ್ನ ಮದುವೆಯ ವಿಷಯದ ಸುದ್ದಿ ತಿಳಿದ ರಾಜೂವಿನ ಮನಸ್ಸಿನಲ್ಲಿ ಆಗಲೇ ಸಂತೋಷದ ಹಕ್ಕಿ ರೆಕ್ಕೆ ಬಿಚ್ಚಿ ಬಾನಿನಲ್ಲಿ ಹಾರಾಡತೊಡಗಿತ್ತು. ಆದರೆ ಅವನ ಮುಂದೆ ಯಾರೂ ವಿಷಯ ಎತ್ತುತ್ತಿರಲಿಲ್ಲ. ತನ್ನ ಮದುವೆ ವಿಷಯವನ್ನು ತನ್ನನ್ನು ಬಿಟ್ಟು ಚರ್ಚೆ ಮಾಡುತ್ತಿದ್ದುದೇ ಅವನನ್ನು ಕುತೂಹಲಗೊಳ್ಳುವಂತೆ ಮಾಡಿದ್ದು.
ಆಗಲೇ ಗೆಳೆಯರ ಮುಂದೆ ಕೊಚ್ಚಿಕೊಳ್ಳಲು ಶುರುಮಾಡಿದ್ದ. “ಮನೆಯಲ್ಲಿ ನನಗೆ ಹೆಣ್ಣು ನೋಡುತ್ತಿದ್ದಾರೆ ಕಣ್ರೋ, ನೋಡ್ತಾ ಇರಿ ಎಂತಹ ಸುಂದರ ಹುಡುಗಿಯನ್ನು ಮದುವೆಯಾಗುತ್ತೇನೆ ಅಂತ, ಐಶ್ವರ್ಯ ರೈ ಹಾಗಿರಬೇಕು. ಜೀವನದಲ್ಲಿ ಮದುವೆಯಾಗುವುದು ಒಮ್ಮೆ ಮಾತ್ರ, ಆದ್ದರಿಂದ ಮನಸಿಗೊಪ್ಪುವಳನ್ನೇ ಮದುವೆಯಾಗುತ್ತೇನೆ. ನಮ್ಮ ಜೋಡಿಯನ್ನು ಎಲ್ಲರೂ ತಿರುತಿರುಗಿ ನೋಡಬೇಕು” ಎನ್ನುತ್ತಿದ್ದ. ಸಂಗಾತಿಯ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ. ರಾಜು ನೋಡಲು ಥೇಟ್ ರಾಜಕುಮಾರನೇ, ಜೊತೆಗೆ ಒಳ್ಳೆಯ ಕೆಲಸದಲ್ಲಿದುದರಿಂದ ಅವನಿಚ್ಚೆಯಂತಹ ಬಾಳ ಸಂಗಾತಿ ಸಿಗುವುದು ಕಷ್ಟವೇನೂ ಇರಲಿಲ್ಲ. ಯಾವಾಗ ಮನೆಯವರು ತನ್ನ ಮದುವೆ ಬಗ್ಗೆ ಪ್ರಸ್ತಾಪಿಸುತ್ತಾರೋ ಎಂದು ಚಾತಕಪಕ್ಷಿಯ ಹಾಗೆ ಕಾಯುತ್ತಿದ್ದ.
ಆಂತೂ ಆ ದಿನ ಬಂದೇಬಿಟ್ಟಿತು. ಅಪ್ಪ ಒಂದು ದಿನ ರಾಜೂವನ್ನು ಕೂರಿಸಿಕೊಂಡು ಕೇಳಿದರು. “ಏನಪ್ಪಾ ರಾಜೂ ನಮ್ಮ ಸೀತಳನ್ನು ಮದುವೆಯಾಗುತ್ತೀಯೇನೋ?”. ಪಕ್ಕದಲ್ಲಿ ಬಾಂಬ್ ಸ್ಫೋಟಿಸಿದಂತಾಯಿತು. ತನಗೆ ಹೆಣ್ಣು ನೋಡಲು ನಾಲ್ಕಾರು ಕಡೆ ಕರೆದುಕೊಂಡು ಹೋಗುತ್ತಾರೆ, ಎಲ್ಲರ ಮನೆಯ ಉಪ್ಪಿಟ್ಟು ಕೇಸರಿಬಾತ್ ಸವಿಯಬೇಕು, ಮನಸಿಗೆ ಒಪ್ಪುವ ಹೆಣ್ಣು ಸಿಗುವವರೆಗೂ ಹುಡುಕಾಟ ನಡೆಸಬೇಕು ಎಂದೆಲ್ಲಾ ಕನಸುಗಳನ್ನಿಟ್ಟುಕೊಂಡಿದ್ದ. ಕನಸಿನ ಬಲೂನು ಹೀಗೆ ಟುಸ್ಸೆನ್ನುತ್ತದೆಯೆಂದು ಅವನು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಇಷ್ಟು ದಿನ ಅಕ್ಕನ ಮಗಳನ್ನು ಮದುವೆಯಾಗು ಎಂದು ಮನೆಯವರೆಲ್ಲಾ ಅವನಿಗೆ ಗಂಟು ಬಿದ್ದಿದ್ದರೂ ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ಸಾರಾಸಗಟಾಗಿ ಅವಳನ್ನು ನಿರಾಕರಿಸಿದ್ದ. ವಿದ್ಯೆ, ರೂಪ, ಗುಣ ಎಲ್ಲಾ ಇದ್ದ ಅಕ್ಕನ ಮಗಳನ್ನು ಏಕೆ ತಿರಸ್ಕರಿಸಿದ್ದನೋ ಅವನಿಗೂ ಅರ್ಥವಾಗಿರಲಿಲ್ಲ. ಈಗ ಕುಳ್ಳಗೆ, ದಪ್ಪಗೆ, ಕಪ್ಪಗೆ ಕೇವಲ ಹತ್ತನೆ ತರಗೆ ಓದಿದ(ಅದರಲ್ಲೂ ಪಾಸಾಗಿದ್ದಾಳೋ ಫೇಲಾಗಿದ್ದಾಳೋ ಗೊತ್ತಿಲ್ಲ) ಸೀತಾಳನ್ನು ಹೆಂಡತಿಯಾಗಿ ಕಲ್ಪನೆ ಮಾಡಿಕೊಳ್ಳಲೂ ಭಯವಾಯಿತು.
ಸೀತಾಳನ್ನು ನೋಡಲು ಬಂದ ಬಹಳ ಕನ್ಯಾರ್ಥಿಗಳಿಗೆ ಮನೆ ದಾರಿ ತೋರಿಸಲು ರಾಜೂವನ್ನೇ ಎಷ್ಟೋ ಸಲ ಜೊತೆ ಮಾಡಿ ಕಳಿಸುತ್ತಿದ್ದರು. ಅಲ್ಲಿ ಗಂಡುಗಳ ಜೊತೆಗೆ ಇವನಿಗೂ ಭರ್ಜರಿಯಾಗಿ ಉಪಚಾರವಾಗುತ್ತಿತ್ತು. ನಂತರ ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ದೊಡ್ಡ ಬಾರ್ಡರಿನ ರೇಷ್ಮ ಸೀರೆ ಉಟ್ಟು, ಮೈತುಂಬಾ ದೊಡ್ಡ ದೊಡ್ಡ ಒಡವೆಗಳನ್ನು ತೊಟ್ಟು ಹುಡುಗಿಯ ಜೊತೆ ತಮ್ಮ ಮನೆಯ ಶ್ರೀಮಂತಿಕೆಯ ಪ್ರದರ್ಶನ ಮಾಡುವಂತಿದ್ದ ಅವರ ಉಪಚಾರ,. ಗಜಗಾಮಿನಿಯಂತೆ ಬರುತ್ತಿದ್ದ ಸೀತಳನ್ನು ನೋಡಿದಾಗ ಚಿಕ್ಕಪ್ಪನಿಗೆ ಹಳ್ಳಿಗುಡಿಯಲ್ಲಿನ ಮಾರಮ್ಮ ದೇವಿಯ ಅಲಂಕಾರವೇ ಜ್ಞಾಪಕಕ್ಕೆ ಬರುತ್ತಿತ್ತು. ಅವಳನ್ನು ನೋಡುತ್ತಿದ್ದ ಹಾಗೆ ಗಂಡುಗಳ ಮುಖದಲ್ಲಾಗುವ ಬದಲಾನಣೆಯನ್ನು ಮೊದಲೇ ಊಹಿಸಿರುತ್ತಿದ್ದ ಅವನಿಗೆ ನಗು ತಡೆಯಲಾಗುತ್ತಿರಲಿಲ್ಲ. ಆದರೆ ಸಭ್ಯತೆಗಾಗಿ ಗಂಭೀರತೆಯಿಂದ ಕುಳಿತಿರುತ್ತಿದ್ದ. ಗಂಡುಗಳು ಊರಿಗೆ ವಾಪಾಸಾದ ತಕ್ಷಣ ಮನೆಯವರಿಗೆಲ್ಲಾ ಅಲ್ಲಿ ನಡೆದುದ್ದನ್ನು ವರದಿ ಮಾಡಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ.
ಸಂಕ್ರಾಂತಿಯಂದು ಸಂಜೆಯಾಗುತ್ತಿದ್ದಂತೆ ರಾಜುವಿಗೆ ಬರೀ ಎಳ್ಳು ಹಂಚಲು ಬರುವವರನ್ನು ಕಾಯುವುದೇ ಕೆಲಸ. ಚಂದಾಗಿ ಅಲಂಕಾರ ಮಾಡಿಕೊಂಡು ವಿವಿಧ ರೀತಿಯ ಎಳ್ಳಿನ ಪ್ಯಾಕೆಟ್ಟುಗಳನ್ನು, ತಟ್ಟೆಯಲ್ಲಿಟ್ಟು ಹೋದ ತಕ್ಷಣ ಅದೆಲ್ಲಾ ಮೊದಲು ಸೇರುತ್ತಿದ್ದುದು ರಾಜುವಿನ ಹೊಟ್ಟೆಯನ್ನೇ. ಅಣ್ಣನ ಮಕ್ಕಳ ಜೊತೆ ಸೇರಿಕೊಂಡು ಎಲ್ಲಾ ಸ್ವಾಹ ಮಾಡಿಬಿಡುತ್ತಿದ್ದ. ಅದರಲ್ಲೂ ಸೀತ ಬರುವುದನ್ನು ರಾಜು ಮತ್ತು ಮಕ್ಕಳು ತುಂಬಾ ಕಾಯುತ್ತಿದ್ದರು. ಸೀತಳಂತೆಯೇ ಅವಳು ತರುವ ಎಳ್ಳಿನ ಪ್ಯಾಕೆಟ್ಟೂ ಭಾರವಾಗಿರುತ್ತಿದ್ದುದೇ ಕಾರಣ. ಜೊತೆಗೆ ಸಕ್ಕರೆ ಅಚ್ಚು, ಕಬ್ಬು, ಬಾಳೆ ತಟ್ಟೆಯನ್ನು ಅಲಂಕರಿಸುತ್ತಿದ್ದವು. ಅವಳ ಭಾರದ ನಡಿಗೆಯನ್ನು ಆಣಗಿಸುತ್ತಾ ಭಾರದ ಪ್ಯಾಕೆಟ್ಟಿನೊಳಗಿದ್ದ ಎಳ್ಳಿನ ಮಿಶ್ರಣ ರಾಜೂವಿನ ಬಾಯಿ ಸೇರುತ್ತಿತ್ತು.
ಈಗ ತನ್ನ ಕುತ್ತಿಗೆಗೇ ಉರುಲು ಬಂದು ನಿಂತಿದ್ದಕ್ಕೆ ರಾಜು ಪೆಚ್ಚಾಗಿಬಿಟ್ಟಿದ್ದ. ಅವನ ನಗು ಮಾಯವಾಗಿತ್ತು. ಅಪ್ಪ. ಅಣ್ಣನ ಮೇಲೆ ತುಂಬಾ ಕೋಪ ಬಂದಿತ್ತು. ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ. ಆದರೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. . ಸೀತಳನ್ನು ರಾಜು ಮದುವೆ ಮಾಡಿಕೊಂಡರೆ ತಾನು ರಾಜುವಿನ ಅಕ್ಕನ ಮಗಳನ್ನು ಮದುವೆಯಾಗುವುದಾಗಿ ಸೀತಾಳ ಅಣ್ಣ ಕರಾರು ಹಾಕಿದ್ದ. ಸೀತಳನ್ನು ಮದುವೆಯಾಗದಿದ್ದರೆ ಅಕ್ಕನ ಮಗಳ ಮದುವೆಯಾಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಮನೆಯವರ ಕರಾರು. ರಾಜುವಿಗೆ ಈಗ ಇಕ್ಕಟ್ಟಿನ ಪರಿಸ್ಥಿತಿ. ಅಂತೂ ಅಣ್ಣ ಅತ್ತಿಗೆ ಎಲ್ಲರೂ ಸೇರಿ ಮದುವೆಗೆ ರಾಜುವನ್ನು ಒಪ್ಪಿಸಿಯೇಬಿಟ್ಟರು. ಅರೆಮನಸ್ಸಿನಿಂದಲೇ ಒಪ್ಪಿಗೆ ನೀಡಿದ. ಒಂದು ವಾರದಲ್ಲೇ ಮಾತುಕತೆಯೆಲ್ಲಾ ಮುಗಿದು ನಿಶ್ಚಿತಾರ್ಥವೂ ಆಯಿತು. ಆ ದಿನವೂ ರಾಜು ಬಿಗುಮಾನದಿಂದ ಸುಮ್ಮನೇ ಕುಳಿತಿದ್ದ. ಸೀತಳ ಕಡೆ ತಿರುಗಿಯೂ ನೋಡಲಿಲ್ಲ. ಮದುವೆ ಇನ್ನು ಮೂರು ತಿಂಗಳು ಬಿಟ್ಟು ಮಾಡುವುದೆಂದು ಹಿರಿಯರು ನಿಶ್ಚಯಿಸಿದರು. ಆ ಕಡೆ ಜೋಡಿ ನಿಶ್ಚಿತಾರ್ಥದ ನಂತರ ಶಾಪಿಂಗ್ , ಸಿನೆಮಾ ಎಂದು ಆಗಲೇ ತಿರುಗಲು ಪ್ರಾರಂಭಿಸಿದ್ದರು. ರಾಜು ಮಾತ್ರ ಒಂದು ತಿಂಗಳಾದರೂ ಒಮ್ಮೆಯೂ ಸೀತಳನ್ನು ಹೊರಗೆ ಕರೆದುಕೊಂಡು ಹೋಗುವುದು ಹಾಗಿರಲಿ ಮನಬಿಚ್ಚಿ ಒಮ್ಮೆಯೂ ಮಾತನಾಡಿಸಿರಲಿಲ್ಲ.
ಇದು ಹೀಗೇ ಮುಂದುವರಿದರೆ ಒಳ್ಳೆಯದಲ್ಲ ಎಂದರಿತ ರಾಜುವಿನ ಅಣ್ಣ ಅಂದು ತಾಕೀತು ಮಾಡಿದ್ದ. ಸಾಯಂಕಾಲ ಸೀತಳ ಮನೆಗೆ ಹೋಗಿ ಅವಳನ್ನು ಸಿನೆಮಾಕ್ಕೋ, ಪಾರ್ಕಿಗೋ ಕರೆದುಕೊಂಡು ಹೋಗಿಬಾ ಎಂದು. ಆಣ್ಣನ ಮಾತನ್ನು ರಾಜು ಎಂದೂ ಮೀರುತ್ತಿರಲಿಲ್ಲ. ಸಂಜೆ ಸೀತಳನ್ನು ಸಿನೆಮಾಕ್ಕೇ ಕರೆದೊಯ್ಯುವುದು ಎಂದು ನಿರ್ಧರಿಸಿದ್ದ (ಪಾರ್ಕ್ನಲ್ಲಾದರೆ ಗೆಳೆಯರೋ, ಸಂಬಂಧಿಕರೋ ತಮ್ಮಿಬ್ಬರ ಜೋಡಿಯನ್ನು ನೋಡಿ ಅಪಹಾಸ್ಯ ಮಾಡಬಹುದೆಂದು ಈ ಎಚ್ಚರಿಕೆ). ಸಂಜೆ ತನ್ನ ಅಣ್ಣನ ಮಕ್ಕಳ ಜೊತೆಗೂಡಿ (ಮಾತಾಡಲು ಮೀಡಿಯೇಟರ್ ಬೇಕೆತ್ತಲ್ಲ) ಸೀತಾಳ ಮನೆಗೆ ಪಾದಾರ್ಪಣೆ ಮಾಡಿದ. ಅವರದು ತುಂಬು ಕುಟುಂಬ. ಹಾಗಾಗಿ ಮನೆ ತುಂಬಾ ಜನ. ರಾಜು ಬಂದಿದ್ದು ಎಲ್ಲರಿಗೂ ಸಂತೋಷವನ್ನುಂಟು ಮಾಡಿತ್ತು. ಇವನು ಸಂಕೋಚದಿಂದಲೇ ಸಿನೆಮಾಕ್ಕೆ ಸೀತಳನ್ನು ಹೇಗೆ ಕರೆಯುವುದೆಂದು ಗೊತ್ತಾಗದೆ ಎಲ್ಲರನ್ನೂ ಆಹ್ವಾನಿಸಿದ. ಎಲ್ಲರೂ “ಸರಿ ನಡೆಯಿರಿ ಹೋಗಿ ಬರೋಣ” ಎಂದು ಹೊರಡಬೇಕೆ? ರಾಜುವಿಗೆ ದಿಗಿಲು ಹತ್ತಿತು. ಜೇಬಿನಲ್ಲಿರುವುದು ಬರೀ 100 ರೂಪಾಯಿ ಮಾತ್ರ. ಹೊರಟಿರುವುದು ಬರೊಬ್ಬರಿ ಹದಿನೈದು ಜನ. ಏನಪ್ಪಾ ಮಾಡುವುದೆಂದು ಯೋಚಿಸಿ “ಈಗ ಬರುತ್ತೇನೆ” ಎಂದು ಹತ್ತಿರದಲ್ಲಿದ್ದ ಸ್ನೇಹಿತರ ಮನೆಗೆ ಹೋಗಿ 500ರೂ ಕೇಳಿ ಪಡೆದುಕೊಂಡು ಬಂದ.
ಎಲ್ಲರೂ ಊಟ ಮುಗಿಸಿಕೊಂಡು ಹತ್ತಿರವಿದ್ದ ಸಿನೆಮಾಮಂದಿರಕ್ಕೆ ನಡೆದೇ ಹೊರಟರು. ಮುಂದೆ ರಾಜು ಮಕ್ಕಳ ಕೈಹಿಡಿದುಕೊಂಡು ಸೀತಳ ಅಣ್ಣಂದಿರ ಜೊತೆ ಹೊರಟಿದ್ದರೆ ಹಿಂದೆ ಸೀತಾ ಮನೆಯ ಹೆಂಗಸರೊಡನೆ ಬರುತ್ತಿದ್ದಳು. ಟಿಕೆಟ ತೆಗೆಸಲು ರಾಜು ಕೌಂಟರ್ ಹತ್ತಿರ ಹೋದಾಗ ಸೀತಳ ಕಡೆಯವರೆಲ್ಲಾ ಮುಸಿಮುಸಿ ನಗುತ್ತಾ “ನಮಗೆಲ್ಲಾ ಟಿಕೆಟ್ ತೆಗೆಸಬೇಡಿ, ನಾವ್ಯಾರೂ ಬರುವುದಿಲ್ಲ, ಸುಮ್ಮನೆ ತಮಾಷೆ ಮಾಡಿದೆವು, ನೀವು ಹೋಗಿ ಬನ್ನಿ ನಮ್ಮದು ವಾಕಿಂಗ್ ಆದ ಹಾಗಾಯಿತು, ನಾವಿನ್ನು ಹೊರಡುತ್ತೇವೆ” ಎಂದು ಎಲ್ಲರೂ ಟಾಟಾ ಮಾಡಿ ಹೊರಟರು. ಈಗ ಉಳಿದಿದ್ದು ರಾಜು, ಸೀತ ಹಾಗೂ ರಾಜುವಿನ ಅಣ್ಣನ ಮಕ್ಕಳು ಮಾತ್ರ. ಸಿನೆಮಾ ಮಂದಿರದೊಳಗೆ ಹೋದಾಗ ರಾಜು ತನ್ನ ಮತ್ತು ಸೀತಳ ನಡುವೆ ಮಕ್ಕಳನ್ನು ಕೂರಿಸಿಬಿಟ್ಟರೆ ಮಾತನಾಡುವ ಪ್ರಮೇಯವೇ ಬರುವುದಿಲ್ಲ ಎಂದು ಯೋಚಿಸಿ ಮಕ್ಕಳಿಗೆ ತಮ್ಮಿಬ್ಬರ ನಡುವಿನ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಹೇಳಿದ. ಆದರೆ ಮಕ್ಕಳು ಬಿಲ್ ಕುಲ್ ನಿರಾಕರಿಸಿ ರಾಜು ಮತ್ತು ಸೀತಳನ್ನು ಜೊತೆಗೆ ಕೂರಿಸಿ ತಾವು ಆಕಡೆಪಕ್ಕ ಈಕಡೆ ಪಕ್ಕ ಕುಳಿತುಬಿಟ್ಟವು. ರಾಜು ಹೀಗೇ ಮಾಡುತ್ತಾನೆಂದು ಮೊದಲೇ ಊಹಿಸಿದ್ದ ಅವರ ಅಣ್ಣ ಮಕ್ಕಳಿಗೆ ಸಿನೆಮಾಕ್ಕೆ ಹೋಗುವಾಗಲೇಮ ಏನು ಮಾಡಬೇಕೆಂಬ ಪಾಠ ಹೇಳಿ ಕಳುಹಿಸಿದ್ದರು. ರಾಜುವಿಗೆ ಕೋಪ ಬಂದರೂ ಎಲ್ಲರ ಮುಂದೆ ತಮಾಷೆಯಾಗುವುದು ಬೇಡ ಎಂದು ಸುಮ್ಮನೆ ಸೀತಾಳ ಪಕ್ಕದಲ್ಲಿ ಕುಳಿತ. ಸಿನೆಮಾ ಆರಂಭವಾಯಿತು. ಮಕ್ಕಳೇನೋ ಸಿನೆಮಾ ವೀಕ್ಷಿಸುವುದರಲ್ಲಿ ತಲ್ಲೀನರಾಗಿದ್ದವು. ಸೀತಾ ಮೆಲ್ಲನೆ “ಅಡುಗೆ ಚೆನ್ನಾಗಿತ್ತಾ, ನಾನೇ ಮಾಡಿದ್ದು” ಎಂದು ಮಾತಿಗೆಳೆದಳು. ಮೊದಮೊದಲು ಹಾಂ, ಹೂಂ ಎಂದು ಉತ್ತರಿಸುತ್ತಿದ್ದ ರಾಜು ನಂತರ ತಾನೂ ಮಾತಿನಲ್ಲಿ ಭಾಗಿಯಾದ. ಸಿನೆಮಾ ಮುಗಿಯುವಷ್ಟರಲ್ಲಿ ಸೀತಾ ರಾಜುವಿನ ನಡುವಿನ ಅಂತರ ದೂರಾಗಿತ್ತು. ಸಿನೆಮಾದ ಕಥೆ ಏನು ಎತ್ತ ಇಬ್ಬರಿಗೂ ಬೇಕಾಗಿರಲಿಲ್ಲ. ಇವರಿಬ್ಬರ ಮನಸುಗಳನ್ನು ಒಂದು ಮಾಡುವ ರಾಜುವಿನ ಅಣ್ಣನ ಯೋಜನೆ ಸಫಲವಾಗಿತ್ತು.
ಈಗ ರಾಜು ಮತ್ತು ಸೀತ ನೋಡದ ಸಿನೆಮಾಗಳಿಲ್ಲ, ಹೋಗದ ಸ್ಥಳಗಳಿಲ್ಲ, ಸುತ್ತದ ದೇವಸ್ಥಾನಗಳಿಲ್ಲ. ಜಗತ್ತಿನಲ್ಲಿರುವ ಎಲ್ಲಾ ಸುಂದರಿಗಳಿಗಿಂತಲೂ ಈಗ ರಾಜುವಿಗೆ ಸೀತಳೇ ಸುಂದರಿಯಾಗಿ ಕಾಣಿಸುತ್ತಾಳೆ. ಈ ವರ್ಷದ ಸಂಕ್ರಾಂತಿ ರಾಜುವಿಗೆ ಸುಗ್ಗಿಯ ಹಬ್ಬವೇ ಹೌದು. ಜೀವನದಲ್ಲಿ ಸೀತಾಳ ಆಗಮನವಂತೂ ಈಗ ಎಳ್ಳು-ಬೆಲ್ಲಕ್ಕಿಂತ ರುಚಿಯಾಗಿದೆ. ಸಂಕ್ರಾಂತಿಯ ನಂತರ ಒಂದು ತಿಂಗಳಿಗೆ ಎರಡೂ ಜೋಡಿಯ ಮದುವೆ ಸಂಭ್ರಮ ಸಡಗರದಿಂದ ನೆರವೇರಿತು. ಈಗ ತಿಪ್ಪನದು ಸುಖೀ ದಾಂಪತ್ಯ. ತನ್ನ ಸ್ನೇಹಿತರಿಗೆ ಈಗ ರಾಜು ಕೊಡುವ ಸಲಹೆ “ಮದುವೆ ಮಾಡಿಕೊಳ್ಳಲು ಹೆಣ್ಣಿನ ರೂಪಕ್ಕಿಂತ ಗುಣ ಮುಖ್ಯ ಕಣೋ”.
–ನಳಿನಿ. ಟಿ. ಭೀಮಪ್ಪ.
Nice