ಪಾಪದ ನಾಗರಿಕನೂ, ಪಾಲಿಟಿಕ್ಸೂ…: ಪ್ರಸಾದ್ ಕೆ.

prasad-naik

ಆಗ ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದೆ ಅನಿಸುತ್ತೆ. 

ಆ ದಿನ ನಮ್ಮ ಶಾಲಾಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸ್ಥಳೀಯ ರಾಜಕಾರಣಿಯೊಬ್ಬರು ಬಂದಿದ್ದರು. ಉಡುಪಿ ಕ್ಷೇತ್ರದಲ್ಲಿ ತಕ್ಕಮಟ್ಟಿನ ಹೆಸರು ಮಾಡಿದ್ದ ರಾಜಕಾರಣಿ ಅವರು. ಪ್ರಾರ್ಥನೆ, ಉದ್ಘಾಟನೆ ಇತ್ಯಾದಿಗಳನ್ನು ಮುಗಿಸಿ ಅಧ್ಯಕ್ಷೀಯ ಭಾಷಣವು ಶುರುವಾಯಿತು ನೋಡಿ. ಅಚ್ಚರಿಯೆಂದರೆ ಆ ವಯಸ್ಸಿನಲ್ಲೂ ನಾನು ಭಾಷಣಗಳನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ತೀರಾ ನೀರಸವಾಗಿದ್ದ ಉದಾಹರಣೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಭಾಷಣಗಳು ನನಗೆ ಬೋರುಹುಟ್ಟಿಸುತ್ತಿರಲಿಲ್ಲ. ಹೀಗೆ ವೇದಿಕೆಯಲ್ಲಿ ಮಾತನಾಡುತ್ತಲೇ “ನಾನು ಹಲವಾರು ಶಾಲೆಗಳಿಗೆ ವಿವಿಧ ಕಾರ್ಯಕ್ರಮಗಳಿಗೆಂದು ಹೋಗುತ್ತಿರುತ್ತೇನೆ. ಆದರೆ ಇಷ್ಟು ಒಳ್ಳೆಯ ಶಾಲೆಯನ್ನು ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳನ್ನು ನಾನು ನೋಡಿಯೇ ಇಲ್ಲ'', ಎಂದಿದ್ದರು ಅವರು. ಈ ಮಾತುಗಳನ್ನು ಕೇಳಿದ ನಾನೋ ಖುಷಿಯಿಂದ ಉಬ್ಬಿಹೋಗಿದ್ದೆ. ಸಂಜೆ ಮನೆಗೆ ಬಂದು ಈ ಬಗ್ಗೆ ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ನನ್ನ ಉತ್ಸಾಹವನ್ನು ಕಂಡು ಅಪ್ಪ ನಕ್ಕುಬಿಟ್ಟಿದ್ದರು. ಹಾಗೆಯೇ “ಆಯ್ತಪ್ಪ, ನೀವೇ ಉತ್ತಮರು'' ಎಂದು ತೀಪರ್ು ಕೊಟ್ಟು ನನ್ನ ವ್ಯಥರ್ಾಲಾಪಕ್ಕೆ ತೆರೆಯೆಳೆದಿದ್ದರು.  

ಇದು ರಾಜಕಾರಣಿಯೊಬ್ಬರೊಂದಿಗಿನ ನನ್ನ ಜೀವನದ ಮೊದಲ ಭೇಟಿ. ಈ ಡೈಲಾಗನ್ನು ಎಲ್ಲರೂ ಎಲ್ಲಾ ಕಡೆಗಳಲ್ಲೂ ಉರುಹೊಡೆಯುತ್ತಾರೆ ಎಂದು ಮುಂದೆ ಗೊತ್ತಾದಾಗ ಒಳಗೊಳಗೇ ಕೊಂಚ ಬೇಜಾರಾಗಿದ್ದು ಹೌದು. ಇನ್ನು ಭಾಷಣಗಳ ಬಗ್ಗೆ ದ್ವೇಷವೇನೂ ಹುಟ್ಟಿಕೊಳ್ಳದಿದ್ದರೂ ಕ್ರಮೇಣ ರಾಜಕಾರಣಿಗಳ ಭಾಷಣಗಳು ನೀರಸ ಅನಿಸತೊಡಗಿದ್ದವು. ಆಗ ನಾನು ಖುಷಿಯಿಂದ ಕೇಳುತ್ತಿದ್ದ ಭಾಷಣಗಳೆಂದರೆ ವಾಜಪೇಯಿಯವರದ್ದು ಮತ್ತು ಲಾಲೂಪ್ರಸಾದ್ ಯಾದವರದ್ದು ಮಾತ್ರ. ಸಂಸತ್ ಸದನದ ಚಚರ್ೆಗಳಲ್ಲಿ ಲಾಲೂ ಪ್ರಸಾದರ ನಗೆಚಟಾಕಿಗಳನ್ನು ಕೇಳುವುದು ನನಗೆ ತಮಾಷೆಯೆನಿಸುತ್ತಿತ್ತು. ತೊಂಭತ್ತರ ದಶಕದ ಮಕ್ಕಳೆಲ್ಲಾ ಕಾಟರ್ೂನು, ಶಕ್ತಿಮಾನ್ ಇಂಥವೆಲ್ಲಾ ನೋಡುತ್ತಿದ್ದರೆ ನಾನಂತೂ ಲೋಕಸಭಾ ಚಾನೆಲ್ಲಿನ ಖಾಯಂ ಗಿರಾಕಿಯಾಗಿದ್ದೆ. “ಅದರಲ್ಲೇನಿದೆ ಅಂತ ನೋಡುತ್ತಾನೋ…'', ಎಂದು ಅಮ್ಮನೇ ಹಲವು ಬಾರಿ ಈ ಬಗ್ಗೆ ಗೊಣಗಿದ್ದುಂಟು.   

ಹೀಗೆ ನನಗೂ ರಾಜಕಾರಣಕ್ಕೂ ಒಂದು ಕುತೂಹಲದ ನಂಟು. ಮನೆಯಲ್ಲಿ ಕೇಬಲ್ ಟಿವಿ ಇಲ್ಲದಿದ್ದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣವು ಆ ದಿನಗಳಲ್ಲಿ ನನಗೆ ಅಷ್ಟಾಗಿ ದಕ್ಕಲಿಲ್ಲ. ದೂರದರ್ಶನದ ವಾತರ್ೆಗಳಲ್ಲಿ ವಿದೇಶ ಸುದ್ದಿಗಳು ಸಂಕ್ಷಿಪ್ತವಾಗಿರುತ್ತಿದ್ದವು. ಅದು ಬ್ರೇಕಿಂಗ್ ನ್ಯೂಸ್ ಗಳ, ದಿನವಿಡೀ ಸುದ್ದಿಗಳನ್ನೇ ತೋರಿಸುವ ಖಾಸಗಿ ವಾಹಿನಿಗಳ ಕಾಲವಾಗಿರಲಿಲ್ಲವಲ್ಲಾ. ಇನ್ನು ಓದಿನ ಲೋಕಕ್ಕೆ ಬಂದರೆ ಪತ್ರಿಕೆಗಳಲ್ಲಿ ವಿಶ್ವ ರಾಜಕೀಯದ ಬಗೆಗಿನ ಲೇಖನಗಳನ್ನು ಓದುವ ಪ್ರಬುದ್ಧತೆಯಾಗಲೀ, ತತ್ಸಂಬಂಧಿ ಮಾರ್ಗದರ್ಶನವಾಗಲೀ ಇರಲಿಲ್ಲ. ಆಗ ನಮ್ಮ ಮನೆಯಲ್ಲಿ ಬೀಚಿಯವರ “ಕನ್ನಡ ಎಮ್ಮೆ'' ಅನ್ನೋ ಪುಸ್ತಕವೊಂದಿತ್ತು. ಪುಢಾರಿಗಳ ಮೋಜಿನ ಕೆಲ ಭಾಷಣಗಳು ಅದರಲ್ಲಿದ್ದರಿಂದ ನಾನು ಆ ಕೃತಿಯನ್ನು ಅದೆಷ್ಟು ಬಾರಿ ಓದಿದ್ದೆನೋ. ಜೊತೆಗೇ ಲೇಖನಗಳಿಗೆ ಪೂರಕವಾಗಿದ್ದ ಅಷ್ಟೇ ತಮಾಷೆಯಾಗಿ ಕಾಣುತ್ತಿದ್ದ ವ್ಯಂಗ್ಯಚಿತ್ರಗಳು ಬೇರೆ. ಆ ದಿನಗಳಲ್ಲಿ ನಾನು ಚಿತ್ರಕಲೆಯಲ್ಲೂ ತೊಡಗಿದ್ದರಿಂದ ಪುಢಾರಿಗಳ ವ್ಯಂಗ್ಯಚಿತ್ರಗಳನ್ನು ಚೆನ್ನಾಗಿ ಬಿಡಿಸುತ್ತಿದ್ದೆ. ಒಂದು ಜುಬ್ಬಾ, ನೆಹರೂ ಕೋಟು,    ಗಾಂಧಿಟೋಪಿ, ಡೊಳ್ಳು ಹೊಟ್ಟೆ, ದೊಡ್ಡದೊಂದು ನಗು, ಎದುರಿಗೊಂದು ಮೈಕು. ಇದು ನನ್ನ ರೇಖೆಗಳಲ್ಲಿ ಮೂಡುತ್ತಿದ್ದ ಪುಢಾರಿಗಳ ಎಂದಿನ ರೂಪ. 

ರಾಜಕೀಯವು ಬೇರೆ ಸ್ತರಗಳಲ್ಲೂ ಕೂಡ ನನ್ನಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಮಹಾತ್ಮಾ ಗಾಂಧಿಯವರು `ಸ್ವಾತಂತ್ರ್ಯ ಹೋರಾಟಗಾರರು' ಅಥವಾ `ಮಹಾತ್ಮ' ಅನ್ನುವುದಕ್ಕಿಂತಲೂ ಅವರಲ್ಲಿದ್ದ ರಾಜಕಾರಣಿ, ಮುತ್ಸದ್ದಿ ನನಗಿಷ್ಟವಾಗಿದ್ದ. ಐರಿಷ್ ಲೇಖಕ, ನಾಟಕಕಾರ ಜಾಜರ್್ ಬನರ್ಾಡರ್್ ಷಾ ಮತ್ತು ಖ್ಯಾತ ಮುತ್ಸದ್ದಿ ವಿನ್ಸ್ಟನ್ ಚಚರ್ಿಲರ ಪರಸ್ಪರರ ಕಾಲೆಳೆಯುವಿಕೆ, ಲಿಂಕನ್ನರ ಜನಪ್ರಿಯತೆ, ಹಿಟ್ಲರನ ವಾಕ್ಚಾತುರ್ಯಗಳು ಇಂಟರೆಸ್ಟಿಂಗ್ ಅನ್ನಿಸಿದ್ದವು. ಉಗಾಂಡಾದ ಈದಿ ಅಮೀನ್ ಭಯ ಹುಟ್ಟಿಸಿದ್ದ. ನೆಲ್ಸನ್ ಮಂಡೇಲಾರ ಜೈಲುವಾಸದ ಬಗ್ಗೆ ಕೇಳಿ ಅಬ್ಬಬ್ಬಾ ಅನ್ನಿಸಿತ್ತು. ಅಪ್ಪ ಬಾಲ್ಯದಲ್ಲಿ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದಾಗಲೂ ನನಗಿಷ್ಟವಾಗುತ್ತಿದ್ದ ಪಾತ್ರ ಮತ್ತು ಪ್ರಸಂಗಗಳೆಂದರೆ ಕೃಷ್ಣ ಮತ್ತು ಕೃಷ್ಣಸಂಧಾನ. ಕೃಷ್ಣ ಪರಮಾತ್ಮ ಆ ಕಾಲದ ಮಹಾ ಚಾಣಾಕ್ಷ ರಾಜಕಾರಣಿಯೆಂಬಂತೆ ನನಗೆ ಕಂಡಿದ್ದ. ರಾಜಕಾರಣ ಮತ್ತು ರಾಜಕಾರಣಿಗಳ ಬಗೆಗಿರುವ ಕುತೂಹಲವು ನನ್ನನ್ನು ಮುಂದೆಯೂ ಬಿಡಲಿಲ್ಲ. ಈಗಲೂ ರಾಜಕೀಯ ನಾಯಕರ ಜೀವನಚರಿತ್ರೆಗಳನ್ನು, ಆತ್ಮಕಥನಗಳನ್ನು ನಾನು ಒಂದೊಳ್ಳೆಯ ಕಾದಂಬರಿಯನ್ನು ಓದುವಷ್ಟೇ ಖುಷಿಯಾಗಿ ಓದಬಲ್ಲೆ.   

ಇತ್ತೀಚೆಗಷ್ಟೇ ನಾಲ್ಕು ರಾಜ್ಯಗಳ ಚುನಾವಣಾ ಪ್ರಕ್ರಿಯೆಯು ಮುಗಿದ ನಿಟ್ಟಿನಲ್ಲಿ ರಾಜಕಾರಣಿಗಳಲ್ಲಿರುವ ಕುಂದದ ಆಶಾವಾದದ ಬಗ್ಗೆ ಅಂಕಣವೊಂದರಲ್ಲಿ ಬರೆದಿದ್ದೆ. ಈ ಬಗ್ಗೆ ರಾಜಕಾರಣಿಗಳನ್ನು ಮೀರಿಸುವವರೇ ಇಲ್ಲವೇನೋ! ರಾಜಕಾರಣಿಯೊಬ್ಬ ಚುನಾವಣೆಯಲ್ಲಿ ದೊಡ್ಡ ಮತಗಳ ಅಂತರದಲ್ಲಿ ಸೋತು ಹೋದರೂ, ತನ್ನ ಪಡಸಾಲೆಯಲ್ಲಿ ಹಿಂಬಾಲಕರೇ ಇಲ್ಲದೆ ಸ್ಮಶಾನಮೌನವು ಕಾಡುತ್ತಿದ್ದರೂ ಗೆದ್ದವನಂತೆ ಪೋಸು ಕೊಡಬಲ್ಲ. “ಮುಂದಿನ ಬಾರಿ ಅಧಿಕಾರವು ನಮ್ಮದೇ'', ಎಂದು ಎಂದಿನ ಆತ್ಮವಿಶ್ವಾಸದಲ್ಲೇ ಮಾತನಾಡಬಲ್ಲ. ಮುಂದಿನ ಚುನಾವಣೆಯು ಬರುವ ಹೊತ್ತಿಗೆ ಅಷ್ಟೇ ಉತ್ಸಾಹದಲ್ಲಿ ಆತ ಮತ್ತೆ ಎದ್ದು ಬರುತ್ತಾನೆ ಅನ್ನುವುದೂ ಸತ್ಯವೇ. ವಯಸ್ಸಾಗುತ್ತಾ ಹೋದಂತೆ ಸಾಮಾನ್ಯರು ಕೈಕಾಲು ನೋವೆಂದು ಹಾಸಿಗೆ ಹಿಡಿದುಬಿಟ್ಟರೆ ಚಳುವಳಿ, ಪಾದಯಾತ್ರೆ, ಭಾಷಣ ಇತ್ಯಾದಿಗಳಲ್ಲೇ ವ್ಯಸ್ತರಾಗಿರುವ ಹಿರಿಯ ರಾಜಕಾರಣಿಗಳ ಜೀವನೋತ್ಸಾಹಕ್ಕೆ ತಲೆದೂಗದೇ ಇರಲಾಗುತ್ತದೆಯೇ?

ಅಪರಾಧಿಗಳಿಗೂ ರಾಜಕಾರಣ ಅನ್ನುವಂಥದ್ದು ತಮ್ಮ `ಸ್ಟಾರ್ ಇಮೇಜ್' ಅನ್ನು ಪಡೆಯಲು ಮತ್ತು ಕಾಪಾಡಲು ಒಂದು ರಕ್ಷಣಾಕವಚವಾಗಿ ಕೆಲಸ ಮಾಡಿದೆ. ಮುಂಬೈ ಭೂಗತಜಗತ್ತಿನ ದೊಡ್ಡ ಹೆಸರಾಗಿದ್ದ ಹಾಜಿ ಮಸ್ತಾನ್ ತನ್ನ ಜೀವನದ ಕೊನೆಯ ಭಾಗವನ್ನು ರಾಜಕಾರಣಕ್ಕೆಂದು ಮೀಸಲಿಟ್ಟಿದ್ದ. ದಾವೂದ್ ಇಬ್ರಾಹಿಂನ ಬದ್ಧ ವಿರೋಧಿಯಾಗಿದ್ದ, `ಹಿಂದೂ ಡಾನ್' ಎಂದೇ ಮುಂಬೈ ಮಾಫಿಯಾದಲ್ಲಿ ಹೆಸರಾಗಿದ್ದ ಅರುಣ್ ಗಾವ್ಲಿ ಮುಂದೆ ಎಮ್ಮೆಲ್ಲೆ ಆಗಿಬಿಟ್ಟ. ಆತನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದು ಪತ್ನಿ ಆಶಾ ಗಾವ್ಲಿ. ಆಶಾ ಗಾವ್ಲಿ ಕಾಪರ್ೊರೇಟರ್ ಆಗಿಯೂ ರಾಜಕಾರಣದಲ್ಲಿ ಒಂದು ಕೈ ನೋಡಿದವಳು. ಮುಂದೆ ತನ್ನ ಮಗಳಾದ ಗೀತಾ ಗಾವ್ಲಿಯನ್ನೂ ಈ ಅಖಾಡಕ್ಕಿಳಿಸಿ ಯಶಸ್ವಿಯಾಗಿದ್ದಳು ಆಕೆ. ಹೆಚ್ಚಿನ ಅವಧಿಯಲ್ಲಿ ಜೈಲಿನೊಳಗಿದ್ದುಕೊಂಡೇ ರಾಜಕಾರಣ ಮಾಡಿದ ಅಪರೂಪದ ನಾಯಕ(?)ನೆಂದರೆ ಬಹುಷಃ ಅರುಣ್ ಗಾವ್ಲಿಯೇ ಇರಬೇಕು. ಈ ಎಲ್ಲರ ನುಡಿಮುತ್ತುಗಳಲ್ಲೂ ಚಲಾವಣೆಯಲ್ಲಿದ್ದ ಪದವು ಒಂದೇ: “ಜನಸೇವೆ''. ಅದೆಷ್ಟು ಮಾಡಿದರೋ ಬಿಟ್ಟರೋ ಅವರಿಗೇ ಗೊತ್ತು. ಮುಂಬೈ ಮಹಾನಗರಿಯಲ್ಲಿ ವಿವಿಧ ಅಕ್ರಮ ಮತ್ತು ಸಕ್ರಮ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದ ಹಲವು ಮಹಾಕುಳಗಳು ತಮ್ಮ ರಾಜಕೀಯ ಮಹಾತ್ವಾಕಾಂಕ್ಷೆಗಾಗಿ ಭೂಗತ ಜಗತ್ತನ್ನು ಒಂದು ದಾಳವಾಗಿ ಬಳಸಲು ಪ್ರಯತ್ನಿಸಿರುವ ನಿದರ್ಶನಗಳೂ ಸಾಕಷ್ಟಿವೆ. ಬೆಂಗಳೂರು ಭೂಗತಜಗತ್ತಿನ ಚಂಡಮುಂಡರಂತಿದ್ದ ಕೊತ್ವಾಲ ರಾಮಚಂದ್ರ ಮತ್ತು ಜಯರಾಜ್ ಸಕ್ರಿಯ ರಾಜಕಾರಣಕ್ಕಿಳಿಯದಿದ್ದರೂ ಇವರಿಬ್ಬರ ಹಿಂದೆಯೂ ರಾಜಕೀಯ ಶಕ್ತಿಗಳ ಅಭಯಹಸ್ತವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.  

ದೇಶವಿದೇಶಗಳ ಇತರ ಖ್ಯಾತನಾಮರೂ ಕೂಡ ರಾಜಕೀಯದ ಅಖಾಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡವರೇ. ಮಾಜಿ ಕ್ರಿಕೆಟಿಗ, ಸ್ಫುರದ್ರೂಪಿ ಇಮ್ರಾನ್ ಖಾನ್ ಪಾಕಿಸ್ತಾನದ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಹೆಸರು. ನಮ್ಮಲ್ಲೂ ಹಲವು ಚಿತ್ರನಟರು, ಕ್ರಿಕೆಟ್ ಆಟಗಾರರು, ಸೆಲೆಬ್ರಿಟಿಯೆಂದು ಕರೆಸಿಕೊಳ್ಳುವವರು ರಾಜಕಾರಣದಲ್ಲಿ ಉತ್ಸಾಹದಿಂದಲೇ ಕೈಯಾಡಿಸಿದ್ದಾರೆ. ಆದರೆ ಎಂ.ಜಿ.ಆರ್, ಜಯಲಲಿತಾರಂತಹ ಬೆರಳೆಣಿಕೆಯ ಹೆಸರನ್ನು ಬಿಟ್ಟರೆ ಹೆಚ್ಚಿನವರು ಈ ಸಾಹಸದಲ್ಲಿ ಕೈಸುಟ್ಟುಕೊಂಡಿದ್ದೇ ಹೆಚ್ಚು. ರಾಜಕಾರಣವನ್ನು ಪಾಟರ್್ ಟೈಂ ಕೆಲಸವೆಂದೋ, ಸೈಡ್ ಬ್ಯುಸಿನೆಸ್ ಎಂದೋ ಅಂದುಕೊಳ್ಳುವ ಮೂರ್ಖನವು ಇದಕ್ಕೆ ಕಾರಣವಾಗಿರಬಹುದು. ನಮ್ಮ ನವಜೋತ್ ಸಿಂಗ್ ಸಿದ್ದು ಅವರನ್ನೇ ನೋಡಿ. ಸಂಸತ್ತೂ ಬೇಕು, ರಿಯಾಲಿಟಿ ಶೋಗಳೂ ಬೇಕು ಎನ್ನುತ್ತಾರೆ. “ಸಂಜೆ ಆರರ ನಂತರ ನನ್ನ ಖಾಸಗಿ ಜೀವನದ ಟೈಮು ಶುರು ಕಣ್ರಪ್ಪಾ. ನಾನೇನಾರ ಮಾಡ್ಕಂಡಿರ್ತೀನಿ. ನಿಮಗ್ಯಾಕಪ್ಪಾ ಇದೆಲ್ಲಾ?'', ಎಂದು ಶಾಯರಿಯೊಂದರ ಜೊತೆಗೇ ಕೇಳಿದ್ದಾರೆ ಸಿದ್ದು ಸಾಹೇಬ್ರು. ಮುಖ್ಯಮಂತ್ರಿಗಳೂ ಕೂಡ “ಆಯ್ತಪ್ಪ ನಿಮ್ಮಿಷ್ಟ'' ಅಂದವ್ರೆ. ಅಲ್ಲಿಗೆ ಎಲ್ಲವೂ ಸುಖಾಂತ್ಯ. 

ಈ ರಾಜಕಾರಣದ ಏಳುಬೀಳುಗಳು ಎಲ್ಲಾ ನಾಯಕರನ್ನೂ ಸೂಕ್ಷ್ಮವಾಗಿ ಗಮನಿಸುವಂತೆ ನಮ್ಮನ್ನೂ ಕೊಂಚ ಅಣಿಗೊಳಿಸಿದೆ. ಹಿಂದಿ ಚಿತ್ರನಟ ಗೋವಿಂದಾರಿಗೆ ರಾಜಕೀಯ ಒಗ್ಗಿಬರಲಿಲ್ಲ. ತೆಲುಗಿನ ಸ್ಟಾರ್ ಚಿರಂಜೀವಿ ಹುಟ್ಟುಹಾಕಿದ್ದ ಪ್ರಜಾರಾಜ್ಯಂ ಪಕ್ಷವು ಮುಂದೆ ರಾಷ್ಟ್ರೀಯ ಪಕ್ಷವೊಂದರ ಜೊತೆ ವಿಲೀನವಾಯಿತು. ರಾಜ್ ಬಬ್ಬರ್ ರವರ ನಾಯಕತ್ವದ ಲೆಕ್ಕಾಚಾರಗಳು ಈ ಬಾರಿಯ ಉತ್ತರಪ್ರದೇಶದ ಚುನಾವಣೆಯಲ್ಲಿ ಹಳ್ಳಹಿಡಿದವು. ಕೇಜ್ರಿವಾಲರ ಪೊರಕೆಯು ಮೂಲೆಯಿಂದ ಪಡಸಾಲೆಗೆ ಬಂದರೂ ಧೂಳನ್ನೇನೂ ಗುಡಿಸಿ ಹಾಕಲಿಲ್ಲ. ಹೇಮಾಮಾಲಿನಿ, ಪರೇಶ್ ರಾವಲ್ ಮುಂತಾದವರು ಏನು ಮಾಡುತ್ತಿದ್ದಾರೆಂದೇ ತಿಳಿಯುತ್ತಿಲ್ಲ. ರಾಜ್ಯಸಭೆಯ ಸದಸ್ಯರದ್ದೂ ಹೆಚ್ಚುಕಮ್ಮಿ ಇದೇ ಕಥೆ. ಕನ್ನಡಿಗರ ಕಣ್ಮಣಿಯಾದ ಅಣ್ಣಾವ್ರಿಗೂ ರಾಜಕೀಯದ ಆಫರ್ ಗಳು ಬಂದಿದ್ದವಂತೆ. ಆದರೆ ರಾಜಕೀಯದಿಂದ ದೂರವೇ ಇದ್ದು ತನ್ನ “ಕ್ಲೀನ್ ಇಮೇಜ್'' ಅನ್ನು ಉಳಿಸಿಕೊಂಡು ಕೊನೆಗೂ ಜನಮಾನಸದಲ್ಲಿ ಅಮರರಾಗಿಬಿಟ್ಟರು ಡಾ. ರಾಜ್. ಚಿತ್ರನಟ ರಜನೀಕಾಂತ್ ರವರಿಗೂ ಹಲವು ಪಕ್ಷಗಳು ಹಲವು ವರ್ಷಗಳಿಂದ ಗಾಳ ಹಾಕುತ್ತಿವೆಯಂತೆ. ಆದರೆ ರಜನೀಕಾಂತ್ ಈ ಬಗ್ಗೆ ಕೊಂಚ ಹೆಚ್ಚೇ ಹುಷಾರಾಗಿರುವಂತಿದೆ. ಈ ವಿಷಯದಲ್ಲಿ ರಜನೀಕಾಂತ್ ರವರು ಡಾ. ರಾಜ್ ರವರನ್ನೇ ಅನುಸರಿಸಿದರೂ ಅಚ್ಚರಿಯೇನಿಲ್ಲ.  

ಇನ್ನೇನು ದೇಶದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೂ ಶೀಘ್ರದಲ್ಲೇ ಚುನಾವಣೆಗಳು ಬರಲಿವೆ. ದೆಹಲಿಯ ರೈಸಿನಾ ಹಿಲ್ಸ್ ನ ಬಂಗಲೆಗೆ ಹೊಸ ಒಕ್ಕಲು ಬರುವ ಖುಷಿ. ಪ್ರಮುಖ ಪಕ್ಷಗಳ ಘಟಾನುಘಟಿಗಳು ಈ ಅತ್ಯುನ್ನತ ಹುದ್ದೆಗಳಿಗಾಗಿ ತೆರೆಮರೆಯಲ್ಲೇ ವ್ಯಸ್ತರಾಗಿರುವುದು ಗುಟ್ಟಿನ ವಿಷಯವಾಗಿಯೇನೂ ಉಳಿದಿಲ್ಲ. ಅಷ್ಟಕ್ಕೂ ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ಸೇರಿಹೋಗುವ ಸುವಣರ್ಾಕಾಶವನ್ನು ಯಾರು ತಾನೇ ಕಳೆದುಕೊಳ್ಳಲು ಇಚ್ಛಿಸುವರು! 

ಅಂದಹಾಗೆ ಮತಯಂತ್ರಗಳನ್ನೂ ಕೂಡ ಯಾಮಾರಿಸಲು ಸಾಧ್ಯವಿದೆ ಅನ್ನುವುದು ಈ ಬಾರಿಯ ಹೊಸ ಖುಲಾಸೆ. ಆಂಗ್ಲಭಾಷೆಯಲ್ಲಿ “ಎವರಿಥಿಂಗ್ ಈಸ್ ಫೇರ್ ಇನ್ ಲವ್ ಆಂಡ್ ವಾರ್'' ಅನ್ನೋ ಮಾತೊಂದಿದೆ. “ಪ್ರೀತಿಯಲ್ಲೂ ಯುದ್ಧದಲ್ಲೂ ಸರಿತಪ್ಪುಗಳು ಇಲ್ಲ'' ಅನ್ನುವುದು ಇದರರ್ಥ. ವಿದ್ಯುಚ್ಚಾಲಿತ ಮತಯಂತ್ರದ ಅವಾಂತರಗಳು ಮತ್ತು ಅವುಗಳ ಹಿಂದಿರುವ ಶಕ್ತಿಗಳನ್ನು ಗಮನಿಸುತ್ತಿದ್ದರೆ “ರಾಜಕೀಯದಲ್ಲೂ ಸರಿತಪ್ಪುಗಳಿಲ್ಲ'' ಎನ್ನುವ ಪರಿಕಲ್ಪನೆಯೂ ಶೀಘ್ರದಲ್ಲೇ ಬರುವಂತೆ ಕಾಣುತ್ತಿದೆ. ಹಾಗಾಗದಿರಲಿ ಎಂಬುದೇ ನನ್ನಂತಹ ಸಾಮಾನ್ಯ ನಾಗರಿಕನೊಬ್ಬನ ಆಶಯ.  

******** 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x