ಪಾದಗಟ್ಟಿ: ಆನಂದ ಈ. ಕುಂಚನೂರ

 

 

II ಶ್ರೀ ಕಾಡಸಿದ್ಧೇಶ್ವರ ಪ್ರಸನ್ನ II

ದಿ: 13-09-2010

ಮಾನ್ಯರೇ,

ನಮ್ಮೂರಿನ ಮಗನಂತಿದ್ದ ಶ್ರೀ ಕಾಡಸಿದ್ಧೇಶ್ವರರ ವರಪುತ್ರನೆನೆಸಿದ್ದ ಕಾಡಪ್ಪನು  ನಿನ್ನೆ ರಾತ್ರಿ 2 ಗಂಟೆಗೆ ವಿಧಿವಶನಾಗಿರುತ್ತಾನೆ ಎಂದು ತಿಳಿಸಲು ವಿಷಾದವೆನಿಸುತ್ತದೆ. ಇಂದು ಮುಂಜಾನೆ 10 ಗಂಟೆಗೆ ನಡೆಯುವ ಅವನ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ. 

 –  ಬನಹಟ್ಟಿಯ ದೈವಮಂಡಳಿ.

ಹೀಗೊಂದು ಸಂಗತಿ ಊರಿನ ಪ್ರಮುಖ ನಾಮಫಲಕಗಳ ಮೇಲೆ ರಾರಾಜಿಸುತ್ತಲೇ ಎಲ್ಲರ ಗಂಟಲು ಉಬ್ಬಿಬಂದಿದ್ದುವು. 'ಯವ್ವಾs, ದೈವದ ಮಗಾsನ ಹ್ವಾದಲ್ಲಬೇ…' ಎಂದು ಹೆಂಗಸರು ಜಮಾಯಿಸುವುದರೊಂದಿಗೆ, 'ಈ ಸೂಳಿಮಗಾ ಬದುಕಿದ್ದಾಗೂ ವಿಚಿತ್ರ, ಸಾಯೂವಾಗೂ ವಿಚಿತ್ರ! ಇವನ ಹಕೀಕತ ಆ ಕಾಡಪ್ಪಗs ಗೊತ್ತ' ಅಂತ ಬೆಳ್ಳಿಕೂದಲಿನ ಗಂಡಸರು ಮಾತಾಡಿಕೊಂಡು ಕಾಡ್ಯಾನ ಚಿಟಪಾಲ್ಕಿ ಎತ್ತೂದ್ರೊಳಗ ಮಧ್ಯಾನ ದೋನಿ ಆಗಿತ್ತ. ಹಿಂಗs ಕಾಡ್ಯಾ ಅನ್ನೂ ಕಿಂದರಿಜೋಗಿ ಹಿಂದ ಊರಿಗಿ ಊರs ಬೆನ್ನತ್ತಿತ್ತ. ಮಣ್ಣ ಕೊಡಾಕ ಹೋದಾವ್ರಿಗೆ ಅಂಥಾದ್ದೊಂದ ತಿಳವಳಿಕೆ ಇರ್ತೈತಿ ನೋಡ್ರಿ, ಸತ್ತಾವ್ನ ಗುಣಗಾನ ಮಾಡೂದ ಬಿಟ್ಟ ಬ್ಯಾರೆ ಏನೂ ಮಾತಾಡ್ಬಾರ್ದನ್ನೂದ!

 

'ಹ್ಹೆ ಹ್ಹೇ..ಹೇ..ಹ್ಹೀ..ಹೀ..ಹಿ…' ಎನ್ನುತ್ತಲೆ ಚಿಟಪಾಲ್ಕಿಯೊಳಗಿಂದ ಕಾಡ್ಯಾ ಕಣ್ಣುಬಿಟ್ಟಿದ್ದ. ಸುತ್ತಲೂ ಊರ ಮಂದಿ. ಕಾಡಪ್ಪನ ಜಾತ್ರಿ ತೇರಿಗೆ ಕೂಡಿದಾಂಗ ಕೂಡ್ಯಾರ. ಏನೇನೋ ಗುಸುಗುಸು ಮಾತಾಡಾಖತ್ಯಾರ. 'ಹೇ..ಹೇ..ಮೈಮ್ಯಾಲೆಲ್ಲಾ ಹೂವಾ..ಚಕ್ಳಾಮಕ್ಳಿ ಹಾಕಿಸಿ ಥೇಟ್ ಸ್ವಾಮಾರ ದಿನ ಕಾಡಪ್ಪಗ ಹೂವಿನಲಂಕಾರ ಮಾಡಿದ್ಹಂಗ ಮಾಡ್ಯಾರ!' ಕಾಡ್ಯಾ ಈ ಪರಿ ಖುಷಿಯಾಗುತ್ತಲೇ ತನ್ನನ್ನೊಮ್ಮೆ ನೋಡಿಕೊಂಡ. ಅದೇ ಹಳೆ ಬನಿಯನ್, ಖಾಕಿ ಚಡ್ಡಿ. 'ಹ್ಞಾ, ಖಾಕಿ ಚಡ್ಡಿ ಅನುತ್ಲೆ ನೆನಪಾತು – ಈಗೊಂದ ಹತ್ತ ವರ್ಸದಿಂದ ಇದನ್ನ ಹಾಕೊಳಾಕತ್ತೇನಿ. ಅದ ಅವತ್ತ ಐತಾರ ಅಮಾಸಿ ದಿನ ರಾತ್ರಿ ಯಾರೋ ತಾಯ್ಗಂಡ ನನ್ಮಕ್ಳ ಕಾಡಪ್ಪನ ಗುಡಿ ತೆಳಗ ನಿಧಿ ಐತೆಂತ ಹಡ್ಡಾಕ ಬಂದಿದ್ರ. ನಮ್ಮ ಮನಿ ಕಟ್ಟಿ ಮ್ಯಾಲ ಮಲಗಿದ್ದಾಂವ ನಾ, ಯಾರ ಎಬ್ಸಿದ್ರೊ ಗೊತ್ತಿಲ್ಲ. ಎದ್ದ ಹೋಗಿ ಪೋಲಿಸ್ರಿಗೆ ತಿಳಿಸಿದ್ದಕ್ಕ ಮರದಿನ ಆ ಪೋಲೀಸನ ಹೆಂಡ್ತಿ ಮನಿಗಿ ಕರದ ಊಟಾ ಹಾಕಿ ಈ ಖಾಕಿ ಚಡ್ಡಿ ಕೊಟ್ಟಿದ್ಲ. ಅರೇ, ಆ ಹೆಣ್ಮಗಳೂ ಇಲ್ಲೇ ಚಿಟಪಾಲ್ಕಿ ಹಿಂದ ಬರಾಕತ್ಯಾಳ…'  

‘ಆssಲ್ಲೆ ಮುಂದ ಹೊಂಟಾನ ನಮ್ಮ್ ಬಸು ಕಾಕಾ. ಯಪ್ಪಾ ಈಗೂ ಅಂಜಿಕಿ ಬರ್ತೈತಿ..ಅಂಥಾ ರಾವ ಮನಶ್ಯಾ ಅಂವ. ಈ ಕಡೆ ಎಡಕಿನ ಮಗ್ಗಲ ನಮ್ಮವ್ವ ಎದಿಬಡಕೊಂಡ ಅಳಕೋತ ಬರಾಖತ್ಯಾಳ..ಅಕಿಗೆರೆ ನನ್ನ ಮ್ಯಾಲ ಎಷ್ಟ್ ಪ್ರೀತಿ. ಊರ ಮಂದೆಲ್ಲಾ ಹುಚ್ಚಾ, ವಿಚಿತ್ರ ಮನಶಾ ಅಂತ ಎಷ್ಟ ಕಾಡಸ್ತಿದ್ರೂ ನನ್ನ ಕರದ ಸಮಾಧಾನ ಮಾಡಿ ಊಟಾ ಹಾಕ್ತಿದ್ದಕ್ಕೆಂದ್ರ ಅಕಿನ. ನಮ್ಮಪ್ಪ ಸತ್ತ ಮ್ಯಾಲಿಂದ ನನ್ನ, ನಮ್ಮವ್ವನ ಸಾಕ್ತಿದ್ದಾಂವಂದ್ರ ನಮ್ಮ ಕಾಕಾನs. ಸಾಲಿ ಕಲಿಯೂ ಅವರ ಮಕ್ಕಳ ಮುಂದ ಊರೂರ ಅಡ್ಡ್ಯಾಡೂ ನನ್ನ ಕಂಡ್ರ ಕಾಕಾ ಕೆಲಸಿಲ್ಲದ ಹಡಶಿಮಗಾ ಅಂತ ಯಾವಾಗೂ ಬೈಯಾಂವ. ಬೈಯೂದಷ್ಟ ಅಲ್ಲ, ಒಮ್ಮೊಮ್ಮಿ ಅವನ ಹೊಡತನೂ ಹಂಗ…ಅದನ ನೆನಸ್ಕೊಂಡ್ರ ಈಗೂ ಮೈ ನುಸ್ತೈತಿ. ಸಿಟ್ಟಿಗೆದ್ದ ನಮ್ಮವ್ವ, 'ಲೇ ಶಂಕ್ರ್ಯಾ..ಕಾಡ್ಯಾನೂ ನಿನ್ನ ಮಗಾನ ಅಲ್ಲನ…ಬಡಿಬ್ಯಾಡೊ ಅವ್ನ..ನನ್ನ ಕಳ್ಳ ಕಿತ್ತ ಬಂದಾಂಗಾಗತೈತಿ' ಅಂದಾಗ ಸುಮ್ನಿರ್ತಿದ್ದ. ಮನಸಿಲ್ದಿದ್ರೂ ಇಷ್ಟ ಜುಲ್ಮಿsಲೆ ನಮ್ಮನ್ನ ಮನಿಯಿಂದ ಹೊರಗಹಾಕ್ದ ಇಟಗೊಂಡಿದ್ದಕ್ಕ ಕಾರಣ, ನನ್ನ ಹೆಸರಿಗಿದ್ದ ಆ ಮನಿ!’

‘'ನಾನರೆ ಹುಟ್ಟಿದಾಗಿಂದ ಏನ ಮಾಡೇನಿ? ನನಗ ಬುದ್ಧಿ ತಿಳಿಯೂ ಹೊತ್ತಿಗೆ  ನನ್ನ ಬೆನ್ನ ಗೂನಾಗಿತ್ತ. ಹೊಟ್ಟಿ ಬೆನ್ನಿಗಿ ಹತ್ತಿತ್ತ. ತೆಲಿಕೂದ್ಲ ಬೆಳ್ಳಗಾಗಿದ್ದು. ಗೂಗಿ ಮುಖಾ ಅಂತ ಎಲ್ಲಾರೂ ಅಣಗಸ್ತಿದ್ರ. ನಮ್ಮವ್ವ ನಾ ಕಾಡಸಿದ್ಧೇಶ್ವರ ಜಾತ್ರಿ ದಿನ ಹುಟ್ಟೇನೆಂತ ಕಾಡಪ್ಪ ಅಂತ ಹೆಸರಿಟ್ಟಿದ್ಲ. ಪ್ರೀತಿ ಬಂದ್ರ ಕಾಡೂ, ಸಿಟ್ಟ ಬಂದ್ರ ಕಾಡ್ಯಾ, ಹಿಂಗ ಊರ ಮಂದೆಲ್ಲಾ ನನ್ನ ಆಡ್ಸಾವ್ರ. ಸಾಲಿ ಪಡಸಾಲಿಯಾಗಿತ್ತು, ಕೆಲಸ ಪರದೇಶಿಯಂಗಿತ್ತ – ಬಿಟ್ಟೂ ಬಿಡದ ಪ್ರತಿ ದಿನ ಕಾಡಪ್ಪನ ಗುಡಿಗೆ ಹೋಗಿ ಅಲ್ಲಿ ಮಂಗ್ಳಾರತಿ ಭಜನಾ ಎಲ್ಲಾ ಮುಗಿಸಿ ಕಲ್ಸಕ್ರಿ ಪ್ರಸಾದ ತಂದ ಊರ ಮಂದಿಗೆಲ್ಲಾ ಹಂಚೂದ. ಹ್ಞಾ, ನನ್ನ ಚಿಟಪಾಲ್ಕಿ ಹೊತ್ತಾವ್ರ ಸಿದ್ಧಪ್ಪ ಸಾವ್ಕಾರ್ ಇಲ್ಲೇ ಅದಾರ! ಅವ್ರಿಗೂ ನನ್ನ ಮ್ಯಾಲ ಎಷ್ಟ ಕಕ್ಕಲಾತಿ, ನಾ ಕಲ್ಸಕ್ರಿ ಕೊಡಾಕ್ ಹೋದ್ರ ಸೀರಿ ತುಗೋಳಾಕ ಬಂದ ಗಿರಾಕಿಗೋಳ್ನ ಬಿಟ್ಟ ತಮ್ಮ ಮಗ್ಗಲದಾಗ ನನ್ನ ಕುಂಡ್ರಸ್ಕೊತಿದ್ರ. ಅವರ ಮನ್ಯಾಗ ನಾ ಪಾದಾ ಊರಿದ್ರ ಅವರ ಮನಿ ಬೆಳಕಾಗ್ತೈತೆಂತ ಹೇಳಾವ್ರ. ಲಕ್ಷಕ್ಕೊಬ್ರ ನಮ್ಮ ಸಿದ್ಧಪ್ಪ ಸಾವ್ಕಾರ!’

'ಮತ್ತ..ಊರಾಗ ಬಸವಣ್ಣ, ಮಾದೇವ, ಲಕ್ಕವ್ವ, ಈರಭದ್ರ, ಹನಮಪ್ಪ, ಲಕ್ಷ್ಮಿ, ವಿಠೋಬಾ, ಎಷ್ಟೊಂದ ಗುಡಿಗೋಳ ಅದಾವ. ಆದ್ರ ದಿನಾ ನನ್ನ ಕರಸ್ಕೊಳ್ಳಾಂವಂದ್ರ ಗುಡ್ಡದ ಮ್ಯಾಲಿರೂ ಕಾಡಸಿದ್ಧೇಶ್ವರ ಒಬ್ಬನ – ನಮ್ಮಪ್ಪ. ದಿನಾ ಸಂಜೀಕ ಯೋಳೆಂಟ ಮಂದಿ ಹಿರ್ಯಾರು ಗುಡಿ ಮುಂದ ಕುಂತ ಏನೇನೋ ಚರ್ಚೆ ಮಾಡಾವ್ರ. ಆಗ ಒಂದಿನ ಮಾತಾಡ್ತಿದ್ರ, ಬನಟ್ಟಿ ಊರಿನ ಮಂದಿಗೆ ಛಲೋ ಆಗ್ಲೆಂತೆಳಿ ಶರಣ ಕಾಡಸಿದ್ಧೇಶ್ವರರು ಇಲ್ಲಿಗೆ ಬಂದ ತಪಸ್ಸ ಮಾಡಿ ಈ ಜಾಗ ಪಾವನಗೊಳಿಸ್ಯಾರ. ಆ ಗರ್ಭಗುಡಿ ನೆಲಮಾಳಗ್ಯಾಗ ಬಂಗಾರ, ವಜ್ರದ ದೊಡ್ಡ ನಿಧಿನ ಐತೆಂತ. ಅದನ ಯೋಳ ಹೆಡಿ ಸರ್ಪ ಕಾಯಾಕತ್ತೇತೆಂತ!…ಹಿಂಗ ಅವರು ಹೇಳುತ್ಲೆ ಅದನ್ನ ನೋಡಬೇಕನ್ನೂ ಆಸೆ ಆತ…ಆದ್ರss…’

ಮದ್ಯಾನ ದೋನಿ ಬಿಸಿಲಿಗೆ ಬನಟ್ಟಿ ಊರ ಜಂಗ ಹಿಡದ ತಗಡಿನಂಗ ಕಾದಿತ್ತ. ಮಗ್ಗದ ಸಪ್ಪಳ ಇರ್ಲಿಲ್ಲ. ಹಂಗಾಗಿ ಮುಂದ ಹೊಂಟಿದ್ದ ಹಿರ್ಯಾರು ಸಿದ್ಧಪ್ಪ ಸಾವ್ಕಾರ್ ಜೋಡಿ ಕೂಡಿ ಮಾತಾಡೂದ ಕೇಳಸ್ತಿತ್ತ – 

'ಎಂಥಾ ಅದ್ದಭುತ ಮನಶ್ಯಾರಿ ಕಾಡ್ಯಾ' 

'ಹೇ ಹೌದ, ನೀವ್ ಹೇಳೂದು ಖರೇನ' 

'ಈ ಸಿದ್ಧಪ್ಪ ಸಾವ್ಕಾರ್ ಮನ್ಯಾಗ ನೋಡ್ರೆಲ್ಯಾ..ಬೋರ ತಗಸ್ಬೇಕಂತ ಎಂಥೆಂಥಾ ಶ್ಯಾಣ್ಯಾರನ್ನ ಕರ್ಕೊಂಡ ಬಂದ ತೋರ್ಸಿದ್ರೂ ಕೆಲಸಾಗ್ಲಿಲ್ಲ. ನೀರಿನ ಪಾಯಿಂಟ ಹತ್ತಲಿಲ್ಲ ಅವ್ರಿಗೆ. ಕಲ್ಸಕ್ರಿ ಕೊಡಾಕ ಬಂದ ಕಾಡ್ಯಾ ಸುಮ್ಮನ ಬಟ್ಟ ಮಾಡಿ, ಇಲ್ಲಿ ತಗಸ್ರಿ ಬೋರ ಅಂದಿದ್ಡಕ್ಕ, ಅಲ್ಲಿ ತಗಸಾಕಾಗ್ಲಿ, ಎಂಥಾ ದೊಡ್ಡ ನೀರಿನ ಸೆಲೀನ ಸಿಕ್ಕಿತ್ತ! ಮುಂದ ಗೌಡ್ರ ಹೊಲದಾಗ, ಶಿವಾನಂದ ಸಾವ್ಕಾರು, ಶೇಡಜಿಗೋಳು, ಹಿಂಗ ಎಷ್ಟ್ ಮಂದಿ? ಛೆ, ಲೆಖ್ಖನ ಇಲ್ಲ ಬಿಡ್ರಿ. ಎಲ್ಲಾರಿಗೂ ನೀರ ಕೊಡ್ಸಿದ್ದ. ಭಗೀರಥ ತಪಸ್ಸ ಮಾಡಿ ಗಂಗೇನ ಭೂಮಿಗೆ ಕರ್ಸಿದ್ರ, ನಮ್ಮ ಕಾಡ್ಯಾ ನಿಂತಲ್ಲೇ ಗಂಗೀನ ನಮ್ಮ ಮನಿಯೊಳಗ ಹರಿಯೂವಂಗ ಮಾಡಿದ್ದ'

'ಹೌದ್ಹೌದ…ಅಂವೊಂದ ನಮನಿ ಹುಚ್ಚಂದ್ರ ಹುಚ್ಚ, ಶ್ಯಾಣ್ಯಾ ಅಂದ್ರ ಶ್ಯಾಣ್ಯಾ. ಮತ್ತ ಇಂಥಾ ಪವಾಡ ಮಾಡಾವ್ರು ಹುಚ್ಚರಂಗ ಬದಕಿರ್ತಾರ. ನೋಡಾಕ ನಮಗ ಕಣ್ಣಿರಬೇಕಷ್ಟ' ಸಿದ್ಧಪ್ಪ ಸಾವ್ಕಾರು ದನಿಗೂಡಿಸಿದ್ರು. 

'ಎಲ್ಲಾರಿಗೂ ಎಷ್ಟ ಬೇಕಾಗಿದ್ನಿ ನಾ…ಆಮ್ಯಾಲ ಯಾರ ಮನ್ಯಾಗ ಮದಿವಿ, ಮುಂಜಿ, ಮಂಗ್ಳಾರತಿ ಹಿಂಗ ಏನ ಕಾರ್ಯಕ್ರಮ ನಡದ್ರೂ ನನ್ನ ಮುಂನ್ದ ಮಾಡಾವ್ರ. ದೈವದ ಮಗಾ ಅಂತ ಬಿರದ ಕೊಟ್ರ. ಆಗ ನಾ ಕಾಡಪ್ಪನ ಖರೆ ಮಗಾ ಆದ್ನಿ ಅನ್ಸಾಕತ್ತಿತು. ನಾ ಎಲ್ಲಿ ಪಾದಾ ಊರ್ತನ ಅಲ್ಲಿ ಲಕ್ಷ್ಮಿ ಒಲದ ಬರ್ತಾಳ, ಹನಮಪ್ಪ ಶಕ್ತಿ ಕೊಡ್ತಾನ, ಈರಭದ್ರ ಬೆಂಗಾವಲಾಗಿ ನಿಲ್ತಾನ, ಮಾದೇವ ಮನಿ ಕಾಯ್ತಾನಂತ. ಇಂಥಾ ನನ್ನ ಪಾದಕ್ಕ ಕಿಮ್ಮತ್ತ ಬಂದಿದ್ದು ಆವಾಗ…ಕುತ್ತ ಬಂದಿದ್ದುನೂ ಆವಾಗನ! ಆ ಸೇರೆಹಾಳ ಮಲ್ಯಾ, ಭಜಂತ್ರಿ ಈಶ್ಯಾ, ನಡಮನಿ ಸಂಗ್ಯಾ, ಐಗೋಳ್ರ ಬಾಳ್ಯಾ, ಚೌಕಿದಾರ ಯಲ್ಲ್ಯಾ, ಎಲ್ಲಾರೂ ಕೂಡ್ಕೊಂಡ ಈ ಪಾದಕ್ಕ ಮುಳ್ಳ ಮುರದ್ರ. ಬ್ಯಾಡಬ್ಯಾಡಂದ್ರೂ ಈರಭದ್ರ ದೇವರ ಅಗ್ಗ್ಯಾಗ ಹಾಯೂವಂಗ ಮಾಡಿದ್ರ. ಕಾಡಪ್ಪನ ಜಾತ್ರಿ ದಿನ ಪಟಾಕ್ಷಿ ಹಾರ್ಸೂವಾಗ ನನ್ನ ನಡೂ ನಿಂದರ್ಸಿ ಮೈಮ್ಯಾಲೆಲ್ಲ ಪಟಾಕ್ಷಿ ಹಾರ್ಸಿದ್ರ. ಸತ್ನ್ಯೋ ಯಪ್ಪಾ..ಅಂತ ವದರ್ಯಾಡ್ಕೊಂಡ ಅತ್ತನಿ. ಯಾರೂ ಕೇಳಾವ್ರು ಗತಿ ಇರ್ಲಿಲ್ಲ. ಸೂಳಿ ಮಕ್ಕಳ್ರ್ಯಾ, ಕಾರ್ಖಾನಿಗಿ ಹೋಗಿ ಸೀರಿ ನೇಯ್ರಿ..ನಾಕ ದುಡ್ಡರೆ ದುಡಿತೀರಿ. ನನ್ನ ಕಾಡಿದ್ರ ನೀವ ಮೂಗ ಕೊಯ್ಕೊಂಡ ಸಾಯ್ತಿರಿ ನೋಡ್ರಿ ನಿಮ್ಮೌವ್ವನ…ಅಂತ ನಾ ಬಯ್ದಾಡ್ತಿದ್ರ, ನನ್ನ ನೋಡಿ ಹಲ್ಲ ಕಿಸಿತಿದ್ರ. ಆದ್ರ ಅವೊತ್ತೊಂದಿನೇಎ ಎಲ್ಲಾ ಮಕ್ಳೂ ಸಣಮನಿ ಗುರುಲಿಂಗ ಸಾವ್ಕಾರ ಜೋಡಿ ಬಂದ, 'ಕಾಡ್ಯಾ, ಕಾಡಪ್ಪ ಗುಡಿ ನೆಲಮಾಳಿಗಿ ತೋರಸ್ಬಾ…ನಮಗ ನಿಧಿ ಸಿಕ್ಕಿತಂದ್ರ ಅದರಾಗ ನಿನಗೂ ಪಾಲ ಕೊಡ್ತೀವ. ಎಲ್ಲೆತಿ ಹೇಳ..' ಅಂದಿದ್ದಕ್ಕ ನಾ ಒಪ್ಪಲಿಲ್ಲ. ಮಂಗ್ಳಾರ ಪ್ಯಾಟಿ ಚೌಕ್ಯಾಗ ಎಲ್ಲಾರೂ ನನ್ನ ಹಣದ್ರ. ಮುಂಜಾನೆ ಎದ್ದ ನೋಡಾಕಾಗ್ಲಿ, ಹಣಿಯಿಂದ ರಕ್ತಾ ಸೋರಿಸ್ಕೋತ ಕಾಡಪ್ಪನ ಗುಡಿ ಪಾದಗಟ್ಟಿ ಮ್ಯಾಲ ಬಿದ್ದಿದ್ನಿ. ಕಾಡಪ್ಪನ ಗುಡಿಗೆ ಸಿದ್ಧಪ್ಪ ಸಾವ್ಕಾರು ಅರ್ಪಿಸಿದ್ದ ಬೆಳ್ಳಿ ಪಾದಗಟ್ಟಿ ಅದ. ನನ್ನ ರಕ್ತ ಚೆಲ್ಕೊಂಡ ಕೆಂಪಾಗಿತ್ತ'

‘ಇನ್ನs ಈಗ ಇಪ್ಪತ್ತೈದ ವರ್ಸ ಕಾಡ್ಯಾಗ. ಸತ್ತ. ಪಾಪ! ಆದ್ರೂ ಎಂಥಾ ಗಟ್ಟಿ ಪಾದಾ ಈ ಮಗಂದು. ಪ್ರತಿ ವರ್ಸ ತೇರ ಎಳಿಯೂ ನೀತಿ ನೇಮ ಮೀರಿ ಊರಾಗಿನ ಕೆಲವೊಂದ ಕಿಡಿಗೇಡಿಗೊಳು ಮುಂಜಾನೇನ ತೇರ ಎಳಿಬೇಕಂತ ಹ್ವಾದಾಗ ಈ ಕಾಡ್ಯಾ ಅಡ್ಡಗಾಲ ಹಾಕಿ ತೇರನ್ನ ತಡದಿದ್ದ. ಅಷ್ಟ ಶಕ್ತಿ ಎಲ್ಲಿಂದ ಬಂತ ಇಂವಗ? ನೋಡಾಕ ಮಾತ್ರ ಗುಬ್ಬಿ, ಉಬ್ಬಿ ನಿಂತ್ರ ಗೂಳಿ!' ಬಾಗೇವಾಡಿ ಬಸವಣ್ಣೆಪ್ಪರು ಮಾತಾಡ್ತಿದ್ರು. ಅದಕ್ಕ ಬಾಗಲಕೋಟ ಮಾಸ್ತರು, 'ಹೌದ್ರಿ ಅಜ್ಜಾರ, ಆಮ್ಯಾಲ ಆ ಸೋಗಲಾಡಿ ಸೂಳಿಮಕ್ಕಳ ಕಥಿ ಏನಾತ ಗೊತ್ತಿಲೊ..ಒಬ್ಬ ಪಾದಗಟ್ಟಿ ಎಡವಿ ಹಣಿ ಒಡ್ಕೊಂಡ, ಒಬ್ಬಗ ಗುಡ್ಯಾನ ಗಂಟಿ ತೆಲಿ ಮ್ಯಾಲ ಬಿದ್ದ ತೆಲಿ ಒಡ್ಕೊಂಡ, ಒಬ್ಬ ಕಪ್ಪರಾ ಹಚ್ಚಾಕ ಹೋಗಿ ಕೈ ಸುಟಗೊಂಡ, ಹಿಂಗs ಎಲ್ಲಾರೂ ಅನಭವಿಸಿದ್ರ ಬಿಡ್ರಿ. ಊರಂದ್ರ ಒಂದ ಸಂಸ್ಕೃತಿ ಅಂತ ಇರ್ತದ. ಸಂಸ್ಕೃತಿನ ವಿಕೃತಿ ಮಾಡೂ ಇಂಥಾ ಹಲಬಾಲಿ ಮಕ್ಳು ಇರ್ತಾರು, ಕಾಡ್ಯಾನಂಥಾ ಸಾಂಸ್ಕೃತಿಕ ರಾಯಭಾರಿಗೋಳು ಇರ್ತಾರು'

        

'ಅವತ್ತ ರಾತ್ರಿ…ಕಟ ಕಟ ಕಟಾಂತ ಹಲ್ಲ ಕಡಕೊಂತ ತೆಲಿಗಿ ಪಟ ಪಟಾಂತ ಬಡಕೊಂತ..ಆss…ಅಂತ ಚೀರ್ಕೊಂತ ಎದ್ದ ಓಡಾಡಿದ್ನಿ. ಮೈತುಂಬ ಬೆಂಕಿ, ಹೊಟ್ಟ್ಯಾಗ ಮುದ್ದಿ ಕಿವುಚಿದಂಗ ಸಂಕಟ…ಯಾಕ, ಏನಾತ ನನಗ? ಮನಶ್ಯಾ ಅನ್ನೂ ಮನಶ್ಯಾ ರಾಟ್ಲಾ ತಿರಗಿದಂಗ ತಿರಗಿದ್ನಿ. ಮಗ್ಗದಾಗ ಓಡ್ಯಾಡ್ತಿದ್ದ ಲಾಳಿ ಒಮ್ಮಿಗ್ಲೇ ಸಿಡದ ಬಿದ್ದ್ಹಂಗ ನೆಲಕ್ಕ ಬಿದ್ನಿ. ನನ್ನ ಮೈ ನಾನ ಸುಟಗೊಂಡಾಂಗ ಕಂಡಾಪಟ್ಟಿ ಜ್ವರಾ ಬಂದ ದವಾಖಾನ್ಯಾಗ ಮಲಗ್ಸಿದ್ರ. ಅವತ್ತಿಂದ ನನ್ನ ನಾಲಿಗಿ ಮಾತಿನ ಹಂಗ ಬಿಟ್ಟಿತ್ತ. ಮೈಯಾಗಿನ ರಸಾ ಎಲ್ಲಾ ಹಿಂಡಿ ತಗದ ನಿಂಬಿಕಾಯಿಗತೆ ಆಗಿಬಿಟ್ಟಿದ್ನಿ. ಈಗ ಯಾರೂ ನನ್ನ ಮಾತಾಡಸ್ತಿದ್ದಿಲ್ಲ. ಎಲ್ಲ್ಯೂ ಕರಿತಿದ್ದಿಲ್ಲ. ಒಂದ ಮೂಲಿ ಹಿಡದ ಕುಂತ್ರ ಆ ಮೂಲಿನ ನಾ ಆಗಿಬಿಡತಿದ್ನಿ. ನನ್ನ ನೋಡಿದಾವ್ರೆಲ್ಲ ದೈವದಾಟ, ಏನೂ ಮಾಡಾಕ ಬರಾಂಗಿಲ್ಲ ಅಂತ್ಹೇಳಿ ಹೋಗ್ತಿದ್ರು'

******

'ನಿನ್ನೆ ರಾತ್ರಿ ದೀಡಕ್ಕ ಮಲಕೊಂಡಾಂವ ಎದ್ನಿ. ಎದ್ದ ನಡದ್ನಿ. ಮಂಗ್ಳಾರ ಪ್ಯಾಟಿ ಚೌಕಿ, ಅಲ್ಲ, ಈಗ ಒಂದ ಬಟಾ ಬಯಲ ಭೂಮಿ! ಹನಮಪ್ಪ ತಡದ ಕೇಳಿದ, 

‘ನೀತಿ ಇಲ್ಲ ನೇಮ ಇಲ್ಲ, ಯಾಕೆ ಬಂದೆ ಇಲ್ಲಿಗೆ

ಧೂಪವಿಲ್ಲ ದೀಪವಿಲ್ಲ ಹೋಗು ನಿನ್ನ ಮನೆಗೆ..’

ಈರಭದ್ರ ಕತ್ತಿ ಬೀಸಿ, 

'ಅಕಟಕಟಾ ಬಂದೆಯಾ ಕೂಸೆ

ನಿನ್ನ ಶಿರವ ಕಡಿಯದೆ ತೆರದು ನನ್ನಾಸೆ..ಬಾ.'

ಮಾದೇವ,

'ಬೆಲ್ಲವಿಲ್ಲವೊ ಹಿಡಿ ಸಕ್ಕರೆಯಿಲ್ಲವೊ ನಿನ್ನಲಿ

ಕುಲವಾವುದೊ ನಿನ್ನ ಹುಟ್ಟಡಗಿಸುವೆ ಚಣದಲಿ'

ಎನುವಾಗ ಲಕ್ಕವ್ವ, ವಿಠೋಬಾ, ಬಸವಣ್ಣ, ದಾನಮ್ಮ, ಲಕ್ಷ್ಮಿ, ಎಲ್ಲರೂ ತಮ್ಮ ಗುಡಿಗಳಿಂದೆದ್ದು ಆಯುಧ ವಾಹನಧಾರಿಯಾಗಿ ಬಂದು ನನ್ನ ಸುತ್ತ ಕುಣ್ಯಾಕಹತ್ತಿದ್ರು. ಇಷ್ಟ ದಿನಾ ನಾ ಅವರ ಗುಡಿಗೆ ಹೋಗಿಲ್ಲಂತ ಒಬ್ಬೊಬ್ರಿಗೂ ಒಂದೊಂದಥರಾ ಸಿಟ್ಟ. ಆದ್ರ ನನಗ ಕಾಡಪ್ಪ ಒಬ್ನ ದೇವ್ರ. ಅವರೆಲ್ಲಾ ನನ್ನ ಸುತ್ತ ಕುಣಿಯೂ ರಭಸಕ್ಕ ತೆಲಿ ಕೆಟ್ಟಂಗಾಗಿ ಇನ್ನೇನ ಬೀಳಬೇಕನ್ನೂದ್ರಾಗ ಕಾಡಪ್ಪ ನನ್ನ ಕೈಹಿಡದ ಕರ್ಕೊಂಡ ಹ್ವಾದ'

'ನನ್ನ ಮಗಾನೋ ನೀ ಬಾ..ಇಷ್ಟ ದಿನಾ ನಿನ್ನ ಭಾಳ ಕಾಡೇನಿ. ಇನ್ನ ಕಾಡೂದಿಲ್ಲ ಬಾ…'ಅಂತ ಕಾಡಪ್ಪ ನನ್ನ ಕೈಹಿಡದ ತನ್ನ ನೆಲಮಾಳಿಗಿಯೊಳಗ ಕರ್ಕೊಂಡ ಹ್ವಾದ. ಊರ ಮಂದೆಲ್ಲ ಅನ್ಕೊಂಡಿದ್ದಿದ್ದು, ನಾ ಇಷ್ಟ ದಿನ ನೋಡಬೇಕಂತ ಆಸೆ ಪಟ್ಟದ್ದು ಇದ ಅಲ್ಲನ…ಹೌದ, ಎಷ್ಟೊಂದ ಬಂಗಾರ, ವಜ್ರ, ವೈಡೂರ್ಯ! ಇದನ ನೋಡಾಕೂ ಪುಣ್ಯ ಮಾಡಿರ್ಬೇಕ. ಮತ್ತ ಆ ಯೋಳ ಹೆಡಿ ಸರ್ಪ! ಕಾಡಪ್ಪ, ಇನ್ನ ನನಗ ಈ ಜೀವನ ಬ್ಯಾಡಾ..ಸಾಕು ನನಗ' ಅಂದಿದ್ದಕ್ಕ, 'ಹೌದೋ ಮಗನಾ, ನಿನ್ನಂಥಾ ಗಟ್ಟಿ ತೊಲಿ ಈ ಊರಾಗ ಹುಟ್ಟಾಂಗಿಲ್ಲ. ಬಾ ಇಲ್ಲಿ, ನನ್ನ ಮುಂದಿನ ಪಾದಗಟ್ಟಿ ನೀ ಆಗು. ನನ್ನ ನೋಡಾಕ ಬರಾವ್ರೆಲ್ಲ ನಿನಗ ಮದಲ ಹಣಿ ಹಚ್ಚಿ ಆಮ್ಯಾಲ ನನ್ನಂತೆಲಿ ಬರ್ಲಿ'

'ಕಾಡಪ್ಪನ ಪಾದಗಟ್ಟಿಯೊಳಗ ನನ್ನ ಜೀವಾ ಊರಿದ್ನಿ'

'…ಈಗ ಕಣ್ಣ ತಗದನಿ..ಒಳ ಹೊರಗಿನ ನಡು, ಬಯಲ ಆಲಯದ ನಡು, ಹಗಲ ರಾತ್ರಿ ನಡು, ಸತ್ಯಾ ಸುಳ್ಳಿನ ನಡು, ಸಂಸ್ಕೃತಿ ವಿಕೃತಿ ನಡು, ಸಾಕ್ಷಿಯಂಗ ನನ್ನಪ್ಪನ ಗುಡಿ ಮುಂದ ಆಗೇನಿ ಪಾದಗಟ್ಟಿ, ಸ್ವಚ್ಛಮನಸಿನಾವ್ರ ನಮಸ್ಕಾರ ಮಾಡ್ರಿ ಹಣೆಮುಟ್ಟಿ…'

ಆನಂದ ಈ. ಕುಂಚನೂರ,

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಶಿವಕುಮಾರ ಚನ್ನಪ್ಪನವರ
ಶಿವಕುಮಾರ ಚನ್ನಪ್ಪನವರ
9 years ago

ಆನಂದ ಸರ್ ನಮಸ್ತೆ

ಈ ಕತೆ ಬೆಂದ್ರೆ ಕಥಾಸ್ಪಧೆ೯ಯಲ್ಲಿ ಆಯ್ಕೆಯಾದ ಕತೆಯಲ್ಲವೇ…….?

Anand Kunchanur
Anand Kunchanur
8 years ago

Yes Shivakumar.

Tejaswi C
Tejaswi C
8 years ago

Very good story Anand… Keep up the impetus!!!

3
0
Would love your thoughts, please comment.x
()
x