ಪಾತ್ರಗಳು ಎಂದರೆ ಯಾರು ?: ಸಚೇತನ


ಸಿನಿಮಾದ ತೆರೆಯ ಮೇಲೆ ಬಣ್ಣ ಹಚ್ಚಿ ಮುಖವಾಡವೊಂದವನ್ನು ಮೆತ್ತಿಕೊಂಡು, ಕೃತಕವಾದ ಪಾತ್ರ ಸ್ವರೂಪಿ ಭಾವಗಳನ್ನು ಆವಾಹಿಸಿಕೊಂಡು, ಸಿದ್ಧ ಸನ್ನಿವೇಶಗಳಿಗೆ, ಪ್ರಮಾಣಬದ್ಧವಾಗಿ ಅಭಿನಯಿಸುವದೇ ?
ಪಾತ್ರ ಎಲ್ಲಿಯೋ ಇರುವಂತದ್ದಲ್ಲ, ನಮ್ಮ ನಿಮ್ಮ ನಡುವಿನಿಂದಲೇ ಎದ್ದು ಬಂದಂತಹ  : ಮುಂದಿನ ಮನೆಯ ಕಾಲೇಜಿನ ಹುಡುಗಿ, ಕಳ್ಳೆ  ಕಾಯಿ ಮಾರುತ್ತಿರುವ ಬಿಹಾರಿ ಹುಡುಗ, ಸಿಗ್ನಲ್ಲುಗಳಲ್ಲಿ ಬಲೂನು ಮಾರುತ್ತಿರುವ ಪೋರಿ, ಸರಕ್ಕನೆ ಸಿಂಬಳ ಒಳಗೆಳೆದುಕೊಳ್ಳುವ ಚಿಕ್ಕ ಬಾಲಕ,  ಮಸಾಲೆ ದೋಸೆ ತಿಂದು ಟೀ ಗೆ ಕಾಯುತ್ತಿರುವ ಪಕ್ಕದ ಟೇಬಲ್ ನ ಜೋಡಿ, ಗ್ಯಾಸ್ ರಿಫಿಲ್ ಮಾಡಿಸಿಕೊಳ್ಳಲು ಓಡಾಡುತ್ತಿರುವ ಅಂಕಲ್, ವಿಧವಾ ವೇತನಕ್ಕೆ ಪೋಸ್ಟ ಆಫಿಸಿಗೆ ಹೊರಡುತ್ತಿರುವವರು, ಒಳ ಹತ್ತುವದೇ ಕಷ್ಟವಾದ  ತುಂಬಿದ ಬಸ್ಸಿನಲ್ಲಿ ಸಿಟ್ ಇರಬಹುದೇ ಎನ್ನುವ ಖಾತರಿಯ ಸುಳ್ಳು ಬಯಕೆಯವರು, ಕಿರಾಣಿ ಅಂಗಡಿಯ ರಾಮು, ಪೇಪರ್ ಹಾಕುವ ಸಣ್ಣಗಿನ ಹೇರ್ ಸ್ಟೈಲ್ ನ ಹುಡುಗ, ಪುಡಾರಿ, ಪಾರ್ಕನಲ್ಲಿನ ಮನೆಯಲ್ಲಿಯ ಹಾಸ್ಟೇಲಿನ  ಆಫೀಸಿನ, ಊರಿನ  ರಸ್ತೆಯ ಬಸ್ಸಿನ ಕಾರಿನ ತಿರುವಿನ…  ಪಾತ್ರಗಳು, ಕತೆಗಳು ಎಲ್ಲಿಯೋ ಸಿಕ್ಕ ಯಾರೋ ಅಥವಾ ಯಾರದೋ ಇರಬಹುದು. ಹೀಗಾಗಿ ದಿನನಿತ್ಯದ ನಮ್ಮ ಮುಖವಾಡವನ್ನೇ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಸರಳ ತಂತ್ರ, ಗೊತ್ತಿಲ್ಲದೇ  ನಾವೇ ಭಾಗವಾಗಿರುವ, ನಮ್ಮದೇ ಭಾಗವಾಗಿರುವ ಘಟನೆಯನ್ನು ನಮ್ಮ ಮುಂದೆ  ತಂದಿಡುವ ಸರಳ ಮಾಯಾ ವಾಸ್ತವ ಸಿನಿಮಾ. 

ಹತ್ತೊಂಬತ್ತನೆಯ ಶತಮಾನದ ಅಂತ್ಯ ಮತ್ತು  ಇಪ್ಪತ್ತನೆಯ ಶತಮಾನದ ಆದಿಯ ಕಾಲಘಟ್ಟದಲ್ಲಿ  ಸುಮಾರು ೧೯೬೦ ರವರೆಗೆ ಸಿನಿಮಾ ಎರಡು ಪ್ರಕಾರವಾಗಿ ಭಾಗವಾಗಿತ್ತು. Formalism (ನಿಯಮಬದ್ಧತೆ  ) ಮತ್ತು Realism (ವಾಸ್ತವಿಕತೆ ). 

'ನಿಯಮಬದ್ಧತೆ' ಯ ಪಂಗಡ ದೃಶ್ಯ ಮಾಧ್ಯಮಕ್ಕೆ ಸಾಂಪ್ರದಾಯಿಕವಾದ ಸಲಕರಣೆ ಮತ್ತು ವಿಧಾನಗಳಿಂದ ಸಿನಿಮಾವನ್ನು ಮಾಡುವದು ಮತ್ತು ನೋಡುವ ತತ್ವವನ್ನು ಪ್ರತಿಪಾದಿಸಿದವು. ಹೀಗಾಗಿ ಸಿನಿಮಾವೊಂದು ತನ್ನದೇ ಆದಂತಹ ಪ್ರತ್ಯೇಕ,  ಸ್ವತಂತ್ರ ಕಲಾ ರಚನೆಯ ಮಾರ್ಗ ಹೊಂದಿದೆ ಎನ್ನುವದು 'ನಿಯಮಬದ್ಧತೆ' ಯ ತಿರುಳಾಗಿತ್ತು. ಬದುಕಿನ ವಾಸ್ತವವನ್ನು ಕ್ಯಾಮರಾದ ಕಣ್ಣುಗಳಿಂದ ಸೆರೆ ಹಿಡಿದು ಮತ್ತೆ ಅದನ್ನು ತೆರೆಯ ಮೇಲೆ ರೀಲುಗಳಿಂದ ಓಡುವಂತೆ ಮಾಡುವದು ಯಾಂತ್ರಿಕ ಕ್ರಿಯೆ ಎನ್ನುವ ವಾದವೂ ಸಹ  Formalists ದಾರಿಯ ಪ್ರತಿಪಾದನೆ. ಇದೇ ಕಾರಣದಿಂದ ಸಿನಿಮಾದಲ್ಲಿ ದೃಶ್ಯವೊಂದನ್ನು ವಾಸ್ತವಕ್ಕೆ ದೂರವಾಗಿ, ಸ್ವಪ್ನ ಲೋಕಗಳಲ್ಲಿ ಕಟ್ಟಿ ಕೊಡುವ, ರೋಮಿಯೋ ಜೂಲಿಯೆಟ್ ನಡುವಿನ ಪ್ರೇಮವನ್ನು ನಮ್ಮೆಲ್ಲರ ನಡುವಿನ ಶತಮಾನದ ಪ್ರೇಮ ಎನ್ನುವಂತೆ ಚಿತ್ರೀಕರಿಸುವ, ಪಳಗಿದ ನಟರು ನಟಿಯರು ಹದ ಬೆರೆಸಿದ ಭಾವನೆಗಳನ್ನು, ಸಿದ್ಧ ಸೂತ್ರಗಳಲ್ಲಿ ಬೆರೆಸಿ, ಅತ್ಯಂತ ರುಚಿಕಟ್ಟಾಗಿ ಪ್ರೇಕ್ಷಕನಿಗೆ ಉಣಬಡಿಸುವದು ಸಹ ಸಾಧ್ಯವಾದವು. ಹೀಗಾಗಿ ಸಿನಿಮಾ ಎನ್ನುವದು ನಿತ್ಯ ಬದುಕಿನ ಭಾಗವಾಗದೇ, ಪ್ರತ್ಯೇಕ ಟೆಲಿಸ್ಕೋಪಿನ ಮಸೂರಗಳಾದವು. ( ಇವತ್ತಿಗೂ ಸಹ ಬಹುತೇಕ ಸಿನಿಮಾಗಳು ಟೆಲಿಸ್ಕೋಪಿನ ಮಸೂರಗಳು ಮತ್ತು ಜನರನ್ನು ಹತ್ತಿರವೆನಿಸುವ ದೂರಕ್ಕೆ ಕರೆದೊಯ್ಯುತ್ತಿವೆ ).
ಇದಕ್ಕೆ ತದ್ವಿರುದ್ಧವಾಗಿ ಹುಟ್ಟಿಕೊಂಡ ಸಿನಿಮಾ ಪ್ರಕಾರ 'ವಾಸ್ತವತೆ'. ಬದುಕಿನ ಕಟು ಸತ್ಯಗಳನ್ನು, ವಾಸ್ತವಿಕತೆಯ ಮಗ್ಗುಲನ್ನು , ಇರುವಂತೆಯೇ ತೋರಿಸುವ ಪ್ರಕಾರವಾಗಿ ಹುಟ್ಟಿಬಂದ 'ವಾಸ್ತವತೆಯ ' ಪ್ರಾಕಾರವೇ ಇಟಾಲಿಯನ್ ನಿಯೋ ರಿಯಲಿಸಂ. (ನವೀನವಾಸ್ತವವಾದ). 

ಇಟಾಲಿಯನ್ ನವೀನವಾಸ್ತವವಾದ ಪ್ರೇರಿತ ಸಿನಿಮಾ ಕ್ಷೇತ್ರ  ಎರಡನೆಯ ವಿಶ್ವಯುದ್ಧದ ಕಾಲದಿಂದ    1951 ರವರೆಗೆ  ನಡೆದ  ಸಂಕ್ಷಿಪ್ತ ಆದರೆ ಪ್ರಭಾವಿ  ಆಂದೋಲನ. ಮುಸೋಲನಿಯ ಆಳ್ವಿಕೆಯ ಕಾಲದಲ್ಲಿ ರಾಜಕೀಯ ವಿಷಯಗಳನ್ನು ಬರೆಯುವದರ, ಚಿತ್ರಿಸುವದರ  ಕುರಿತು ಹೇರಲಾಗಿದ್ದ ನಿರ್ಬಂಧಗಳಿಗೆ ಬಂಡಾಯವೆದ್ದ ಚಿತ್ರ ವಿಮರ್ಶಕರು  ನಿರ್ದೇಶಕರು ಶುರು ಮಾಡಿದ ಚಳುವಳಿ ನವೀನ ವಾಸ್ತವವಾದ. ಹೀಗಾಗಿ ಸರ್ವಾಧಿಕಾರ ವಿರುದ್ಧದ ಸಾಮಾಜಿಕ-ಆರ್ಥಿಕ ಅಂಶಗಳು ನವೀನವಾಸ್ತವವಾದದ  ಅಭಿವೃದ್ಧಿಯಲ್ಲಿ ಪ್ರಭಾವಶಾಲಿಯಾಗಿ ವಸ್ತುಗಳು  ಮತ್ತು  ಕೇವಲ ಇವೇ ವಸ್ತುಗಳ ಅವಲಂಬನೆ ನವೀನವಾಸ್ತವವಾದದ  ಅವನತಿಗೆ ಕಾರಣವಾಯಿತು. ಆದರೆ ನವೀನವಾಸ್ತವವಾದ ಬಹು ಮುಖ್ಯ ಕೊರತೆಯೆಂದರೆ   ವಾಸ್ತವವಾದವನ್ನು ತೋರಿಸುವ ಬಹುತೇಕ ಹಂತದಲ್ಲಿ , ಬದುಕಿನ ವಾಸ್ತವದಲ್ಲಿ ನಡೆಯುವ  ಋಣಾತ್ಮಕ ಚಿಂತನೆ ಮತ್ತು ಚಿತ್ರಣ. Neorealist ಚಿತ್ರನಿರ್ಮಾಣದ  ಪ್ರಮುಖ ಪರಿಕಲ್ಪನೆ ಸಾಮಾನ್ಯ ಜನಜೀವನದ ಬದುಕಿಗಾಗಿ ಹೋರಾಟ. ಈ ಸಿನಿಮಾಗಳು ಬಡ, ಕೆಳ, ಮಧ್ಯಮ ವರ್ಗದ ಜನರ ದೈನಂದಿನ, ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು , ಹತಾಶೆ, ಬದುಕಲೇ ಬೇಕಾದ ಅನಿವಾರ್ಯತೆಯಲ್ಲಿನ ನೈತಿಕ ದ್ವಂದ್ವಾರ್ಥತೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟವು. ನವೀನ ವಾಸ್ತವವಾದವೆಂದರೆ ಕೇವಲ ಸಿನಿಮಾದ ವಿಷಯಗಳಲ್ಲಿನ ಈ ಅರ್ಥ ಮತ್ತು ವಿಭಾಗಗಳಷ್ಟೇ ಆಗಿದ್ದರೆ ಅವನ್ನು ಬೇರೊಂದು ಸಿನಿಮಾ ಚಳುವಳಿ ಎಂದು ಕರೆಯುತ್ತಿರಲಿಲ್ಲವೇನೋ, ಇವು ಸಿನಿಮಾವನ್ನು ಚಿತ್ರ ಶೈಲಿಯಲ್ಲೂ ಸಹ ವಿಶಿಷ್ಟ ಬದಲಾವಣೆಯನ್ನು ತಂದವು.  ೧೯೪೫ ರ ಯುದ್ಧಾನಂತರ  ಭಾಗದಲ್ಲಿ ಇಟಾಲಿಯನ್ ಸಿನಿಮಾಗಳ ಕೇಂದ್ರವಾಗಿದ್ದ Cinecittà ಎನ್ನುವ  ರೋಮನ್ ಸ್ಟುಡಿಯೋ ಸಂಕೀರ್ಣ ಬಹುತೇಕ ನಾಶವಾಗಿತ್ತು ಮತ್ತು ಅಳಿದುಳಿದ ಸ್ಟುಡಿಯೋಗಳನ್ನು  ನಿರಾಶ್ರಿತರು ಆಕ್ರಮಿಸಿಕೊಂಡಿದ್ದರು. ಅಲ್ಲದೆ ಯುಧ್ಧ ಮುಗಿದ ಕಾಲವಾದ್ದರಿಂದ  ಸಿನಿಮಾಗೆ ಬೇಕಾದ ಕ್ಯಾಮೆರಾ ಮತ್ತು ಧ್ವನಿ ಉಪಕರಣ ಮುಂತಾದವುಗಳ ಅಭಾವವು ಇದ್ದಿತ್ತು. ಇದೇ ಕಾರಣದಿಂದ ನವೀನವಾಸ್ತವಾದದ ಅಡಿಯಲ್ಲಿನ ಸಿನಿಮಾಗಳನ್ನು ಸಾಮಾನ್ಯವಾಗಿ  ಹೊರಾಂಗಣದಲ್ಲಿ ಚಿತ್ರಿಸಲಾಗಿದೆ ಮತ್ತು ಸಿನಿಮಾಗಳಲ್ಲಿ ಕಂಡು   ಬರುವ ಛಾಯಾಚಿತ್ರಿಕರಣ ದೃಶ್ಯಗಳನ್ನು ಪರಿಷ್ಕರಿಸದೇ ತೋರಿಸುತ್ತವೆ. ಜೊತೆಗೆ, ಧ್ವನಿ ಉಪಕರಣದ  ಕೊರತೆಯಿಂದಾಗಿ ಚಿತ್ರೀಕರಣ ತಂಡ ಕಡಿಮೆ  ಸಣ್ಣ ಸಿಬ್ಬಂದಿಗಳನ್ನು ಹೊ೦ದಿದ್ದರಿಂದ , ನಟರಿಗೆ, ಚಿತ್ರೀಕರಣ ತಂಡಕ್ಕೆ ಹಲವಷ್ಟು ದೃಶ್ಯಗಳನ್ನು ವಿವಿಧ ಕೋನ ಮತ್ತು ದೂರಗಳಿಂದ ಚಿತ್ರೀಕರಿಸುವ ಅವಕಾಶವಾಗಿದ್ದು ಸಹ ಹೌದು.  ಸಿನಿಮಾ ಎನ್ನುವದು ಜನರ ಜಾತ್ರೆಯಾಗದೆ ಸಣ್ಣ ಸಣ್ಣ ತಂಡಗಳ ಕೆಲಸವಾಗಿ ಮಾರ್ಪಟ್ಟಿದ್ದರಿಂದ ಹೆಚ್ಚು ಸಮರ್ಥವಾಗಿರುವ   ಕ್ಯಾಮೆರಾ ಕೆಲಸಕ್ಕೆ ಅನುಕೂಲವಾಯಿತು.   ಛಾಯಾಚಿತ್ರೀಕರಣದಲ್ಲಿನ  ಸೂಕ್ಷ್ಮತೆ ಹೆಚ್ಚಾದಂತೆ ವೀಕ್ಷಕನಿಗೆ  ದೃಶ್ಯಗಳಲ್ಲಿನ ವಿವರಗಳು ಸ್ಪುಟವಾದವು. ಸೂಕ್ಷ್ಮ ವಿವರಗಳನ್ನು ನೋಡುಗನಿಗೆ ತಲುಪಿಸುವದರ ಬಹು ದೊಡ್ಡ ಅಗತ್ಯತೆಯೆಂದರೆ, ನೋಡುಗನಿಗೆ ದೃಶ್ಯದ ಮಹತ್ವ ಮತ್ತು ಅರ್ಥ ಸ್ವಂತ ಯೋಚನೆಯಿಂದ  ತಿಳಿಯುವಂತೆ ಮಾಡುವದು.  ನಿರ್ದೇಶಕ ಅಥವಾ ನಟ ಅಥವಾ ಛಾಯಾಗ್ರಾಹಕನ ಗ್ರಹಿಕೆಯನ್ನು ಸಿದ್ಧಪಡಿಸಿ ನೋಡುಗನ ಮೇಲೆ ಹೇರುವ ಚಿತ್ರಗಳಿಗಿಂತ ವಿವರಗಳನ್ನು ನೋಡುಗನಿಗೆ ಬಿಡಿಸಿಟ್ಟು, ನೋಡುಗ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವ ಚಿತ್ರಗಳು ಪರಿಣಾಮಕಾರಿಯಾಗಬಲ್ಲದು ಎನ್ನುವದನ್ನು ತೋರಿಸಿ ಕೊಡುವಲ್ಲಿ ನವೀನವಾಸ್ತವವಾದ ಬಹು ಮುಖ್ಯ ಪಾತ್ರ ವಹಿಸುತ್ತದೆ. 

ನವೀನವಾಸ್ತವವಾದದ  ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ  ವೃತ್ತಿಪರರಲ್ಲದ ನಟರ  ಬಳಕೆ. 
ವೃತ್ತಿಪರರಲ್ಲದ ನಟರ ಜೊತೆ  ಜೊತೆಗೆ, ಸಿನಿಮಾಗಳಲ್ಲಿ ಸಾಹಿತ್ಯಿಕ ಸಂಭಾಷಣೆಗೆ ಬದಲಾಗಿ  ದೈನಂದಿನ  ಭಾಷ ಬಳಕೆಯ ಪ್ರಯೋಗವನ್ನು ಮಾಡಲಾಯಿತು. ಸಾಮಾನ್ಯವಾಗಿ Neorealist  ಸಿನಿಮಾಗಳಲ್ಲಿ ಚಿಕ್ಕ ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿ ತೋರಿಸುತ್ತಾರೆ, ಮಕ್ಕಳ ಅಮಾಯಕ, ಕಳಂಕರಹಿತ ವಸ್ತುನಿಷ್ಠ ದೃಷ್ಟಿಯನ್ನು ಸಿನಿಮಾಕ್ಕೆ ತರುವ ಪ್ರಯತ್ನವಾಗಿ ಈ ಪ್ರಯೋಗ ( Neorealist  ಸಿನಿಮಾ ತಂತ್ರಜ್ಞರ ಮುಖ್ಯ ಉದ್ದೇಶವೂ ಸಹ ಕಳಂಕರಹಿತ ವಸ್ತುನಿಷ್ಠ, ಪಕ್ಷಪಾತರಹಿತ ದೃಷ್ಟಿಕೋನ )  

ನಿರೂಪಣಾ ಶೈಲಿ Neorealist ಸಿನಿಮಾಗಳ ಇನ್ನೊಂದು ಶಕ್ತಿ. ಈ ಸಿನಿಮಾಗಳು ಮಾತಿಗಿಂತ ಪಾತ್ರ ಕೇಂದ್ರಿತ, ಅಲ್ಲದೇ Neorealist ಸಿನಿಮಾಗಳ ಪಾತ್ರಗಳು ಕಥಾವಸ್ತು ಅರಳುವಂತೆ ಮಾಡುತ್ತವೆ. ಕಥಾವಸ್ತು ಪಾತ್ರಗಳಿಂದ ಹುಟ್ಟುತ್ತವೆ. ಈ ಪಾತ್ರಗಳು ಯಾರೋ ಬರೆದಿಟ್ಟ ಕಥೆಯಲ್ಲಿನ ನಿರ್ದಿಷ್ಟ ಪಾತ್ರಧಾರಿಗಳಲ್ಲ. ಪಾತ್ರಗಳಿಗೆ ವೈಭವೀಕರಣದ ಮುಖವಾಡವಿಲ್ಲ. ಬದಲಾಗಿ ಪ್ರತಿ ಪಾತ್ರಕ್ಕೂ ಅದರದ್ದೇ ಆದ ಸಂವೇದನೆಯಿದೆ ವೇದನೆಯಿದೆ ನೋವಿದೆ ಬದುಕಿದೆ ವಾಸ್ತವವನ್ನು ಎದುರಿಸುವ ಅಗತ್ಯತೆಯಿದೆ. ಇಲ್ಲಿರುವ ಪಾತ್ರಗಳು ಸಹಜ.  ಇವತ್ತಿನ ಸಿನಿಮಾಗಳಂತೆ  ಪ್ರತಿ  ದೃಶ್ಯದಲ್ಲೂ  ಹಿಂದಿನ ದೃಶ್ಯದ ನಿರಂತರತೆಯನ್ನು ಕಾಪಾಡಿಕೊಂಡು ಹೋಗಲು ಮಾಡುವ ಅಸಹಜ ಕ್ರಿಯೆಗಳಿಲ್ಲ, ಆದಷ್ಟು ಬೇಗ ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವ  ಅಗತ್ಯತೆಯಿಲ್ಲ . (ವಾಸ್ತವದಲ್ಲಿ ನಾವು ಮಾಡುತ್ತಿರುವ ಎಲ್ಲ ಕ್ರಿಯೆಗಳು ಹಿಂದಿನ ಕ್ರಿಯೆಯ ಮುಂದುವರಿಸುವಿಕೆಯಲ್ಲ, ಹೀಗಾಗಿ ಮಾತನಾಡುತ್ತಿರುವಾಗ ಆಕಳಿಕೆ ಬಂದಾಗ ಪಾತ್ರವೊಂದು ಆಕಳಿಸಬಹುದು ಮತ್ತು ಆಮೇಲೆ ಮಾತು ಮುಂದುವರಿಸಬಹುದು)

Neorealist ಸಿನಿಮಾಗಳು   ಬಹಳಷ್ಟು ಬಾರಿ ಸುಖಾಂತ್ಯ ಕಾಣುವದು ಕಡಿಮೆ ಮತ್ತು ಈ ಸಿನಿಮಾಗಳು ಯಾವುದೇ ರೀತಿಯ ಕಥಾ ನಿರ್ಣಯವನ್ನು ನೀಡುವದಿಲ್ಲ.  ಹೀಗಾಗಿ ನಿರ್ಣಯ ಜ್ಞಾನಕ್ಕೆ ಸಂಬಂಧಿಸಿದ ದ್ವಂದ್ವಾರ್ಥತೆಯನ್ನು ನಾವು ಕಾಣಬಹುದು. ಬದುಕಿನ ಒಂದು ಆಯಾಮದಲ್ಲಿ ಸರಿ   ಎನಿಸಿದ್ದು ಇನ್ನೊಂದು ಆಯಾಮದಲ್ಲಿ ತಪ್ಪು ಎನಿಸಬಹುದು, ಸರಿ ಮತ್ತು ತಪ್ಪುಗಳು ಅವರವರ ದೃಷ್ಠಿಕೋನಕ್ಕೆ ಎನ್ನುವದು ಈ ಸಿನಿಮಾಗಳ ಸಿದ್ಧಾಂತವಾಗಿರುವದರಿಂದಲೇ 'ಸುಖಾಂತ್ಯ' ಎನ್ನುವದನ್ನು ನೋಡುಗರ ನಿರ್ಣಯಕ್ಕೆ ಬಿಡುತ್ತಾರೆ ಎನ್ನಬಹುದು. ಈ ದ್ವಂದ್ವ,ನಿಜ ಜೀವನದ ವಾಸ್ತವಿಕತೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವದು ಅಸಾಧ್ಯ ಎನ್ನುವ ತತ್ವವೂ  ಸಹ. 

ಕೆಲವೊಮ್ಮೆ Neorealist  ಸಿನಿಮಾಗಳಲ್ಲಿ  ಯಾವುದೇ ಉತ್ತರವಿಲ್ಲ, ಬದುಕಿನ ಹಲವು ಘಟನೆಗಳಂತೆ ಉತ್ತರವಿಲ್ಲದ ಪ್ರಶ್ನೆಗಳು, ಉತ್ತರಕ್ಕಾಗಿ ಪ್ರಶ್ನೆಗಳು. ಅಗಾಧ ಬದುಕನ್ನು ವಾಸ್ತವತೆಯ ಕಿಟಕಿಯಿಂದ ನೋಡುವ ಪುಟ್ಟ ಪ್ರಯತ್ನ. 

ಇಂತಿ, 
ಸಚೇತನ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x