ವೆಂಕಣ್ಣ ಪರಿವಾರ ಸಮೇತ ಬೆಂಗಳೂರಿನ ವಿಮಾನಾಲಯದ ಪ್ರವೇಶದ್ವಾರಕ್ಕೆ ಪಾದಸ್ಪರ್ಶ ಮಾಡಿದಾಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ಮುಂಜಾನೆ ಎರಡು ಗಂಟೆಗೆ ಪ್ಲೇನು ಹೊರಡುವದಿತ್ತಾದರೂ ಆದಕ್ಕಿಂತ ನಾಲ್ಕು ತಾಸು ಮೊದಲೇ ಅಲ್ಲಿರಬೇಕಿತ್ತು. ಎಲ್ಲ ಔಪಚಾರಿಕತೆಗಳನ್ನು ಮುಗಿಸಬೇಕಲ್ಲ. ಅಮೆರಿಕಾಕ್ಕೆ ಹೋಗುವುದೆಂದರೆ ಅಷ್ಟು ಸುಲಭವೇ? ಬೆಂಗಳೂರಿನಿಂದ ಜರ್ಮನ್ ದೇಶಕ್ಕೆ ಮೊದಲ ಫ್ಲೈಟು. ಅಲ್ಲಿಂದ ಅಮೇರಿಕಾದ ಚಿಕ್ಯಾಗೊ ನಗರಕ್ಕೆ ಇನ್ನೊಂದು ಫ಼್ಲೈಟು. ಕೊನೆಗೆ ಇವನು ಹೋಗಬೇಕಾಗಿದ್ದ ಊರಾದ ಸ್ಯಾಂಡಿ ಗೆ ಮತ್ತೊಂದು! ಒಂದೇ ಫ್ಲೈಟಿನಲ್ಲಿ ಅಷ್ಟು ದೂರ ಕ್ರಮಿಸುವುದು ಕಷ್ಟ. ಆ ದೇಶಕ್ಕೆ ಹೋಗೋದು ಅಂದ್ರೆ ಹೆಚ್ಚು ಕಡಿಮೆ ಭೂಗೋಳದ ಅರ್ಧ ಪ್ರದಕ್ಷಿಣೆ ಹಾಕಿದಂತೆ! ವೆಂಕಣ್ಣ ಯೋಚಿಸುತ್ತಿದ್ದ, ಒಂದುವೇಳೆ ಬೆಂಗಳೂರಿನಲ್ಲಿ, ಅದೃಷ್ಟವಶಾತ್ ಒಂದು ಖಾಲಿ ಸೈಟು ಸಿಕ್ಕು, ಅಲ್ಲೊಂದು ಸುರಂಗ ಕೊರೆಯುತ್ತಾ ಹೋದರೆ ಅದು ಅಮೆರಿಕಾಕ್ಕೆ ತೆರೆದುಕೊಳ್ಳುತ್ತದೇನೋ, ಅಷ್ಟು ಸರಿಯಾಗಿ ನಮ್ಮ ಭೂ ಪ್ರದೇಶದ ಕೆಳಗೆ ಇದೆ ಆ ದೇಶ. ಬಹುಶಃ ಪುರಾಣಗಳಲ್ಲಿ ಪ್ರಸ್ತಾಪಿಸಿದ ಪಾತಾಳ ಇದೆ ಆಗಿದ್ದಿರಬೇಕು. ಅದಕ್ಕೆ ಇರಬೇಕು ಅಮೆರಿಕನ್ನರು ರಾಕ್ಷಸರಂತೆ ಹಗಲು ರಾತ್ರಿ ತನ್ನನ್ನು ಕಾಡುತ್ತಾರೆ! ವೆಂಕಣ್ಣ ತನ್ನ ವಿಚಿತ್ರವಾದ ಕಲ್ಪನೆಗೆ ತನ್ನಲ್ಲೇ ನಗುತ್ತಿದ್ದ. ಜಾನುಗೆ ಇದೆಲ್ಲ ಮಾಮೂಲು. ಅವನನ್ನು ಮದುವೆಯಾದ ಹೊಸತಾಗಿ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿತ್ತು. ಹೊತ್ತಿಲ್ಲದ ಹೊತ್ತಿನಲ್ಲಿ ಅವನು ಆಫೀಸಿನ ಕೆಲಸ ಮಾಡುವುದು, ಮಧ್ಯರಾತ್ರಿ ಅಮೆರಿಕಾದ ಕಸ್ಟಮರುಗಳು ಅವನಿಗೆ ಫೋನ್ ಮಾಡಿ ಎಬ್ಬಿಸುವುದು, ಇವನು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಾನ್ಫರನ್ಸ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತಾಡೋದು, ಮಲಗಿದಾಗಲೂ ನಿದ್ದೆಗಣ್ಣಲ್ಲಿ ಬಡಬಡಿಸುವುದು… ಇವೆಲ್ಲ ಅವಳಿಗೆ ಕ್ರಮೇಣ ಅಭ್ಯಾಸವಾಯ್ತು. ಹಾಗೆಯೇ ಏನೋ ನೆನಸಿಕೊಂಡು ನಗುತ್ತಿರಬೇಕೆಂದು ಸುಮ್ಮನಾದಳು. ತಮ್ಮ ಬ್ಯಾಗುಗಳ ತೂಕ ನೋಡಿ ಅದಕ್ಕೊಂದು ಚೀಟಿ ಅಂಟಿಸುವ ಕೌಂಟರಿನ ಮುಂದೆ ಸರದಿಯಲ್ಲಿ ನಿಂತಿದ್ದರವರು. ಹೆಚ್ಚುಕಡಿಮೆ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಬ್ಯಾಗುಗಳಲ್ಲಿ ತುಂಬಿಸಿದ್ದಳು ಜಾನು. ತಲೆಗೆ ಎರಡು ಬ್ಯಾಗು, ಒಂದೊಂದರಲ್ಲಿ ೨೩ ಕಿಲೋ ಭಾರವನ್ನು ವಿಮಾನದಲ್ಲಿ ಕೊಂಡೊಯ್ಯುವ ಅವಕಾಶವಿತ್ತು. ಹಾಗೆ ಪ್ರಯಾಣಿಕರು ತಂದ ಬ್ಯಾಗುಗಳನ್ನೆಲ್ಲಾ ತೂಕ ಮಾಡಿ, ವಿಶೇಷವಾದ ಸ್ಕ್ಯಾನರಿನ ಒಳಗಣ್ಣಿನಿಂದ ಕಂಪ್ಯೂಟರಿನ ಪರದೆಯ ಮೇಲೆ ಮೂಡುತ್ತಿದ್ದ ಚಿತ್ರಗಳನ್ನು ನೋಡುತ್ತಾ ಕೂತಿದ್ದವನೊಬ್ಬ ಬ್ಯಾಗುಗಳ ಒಳಗೆನಿರಬಹುದು ಅಂತ ತಪಾಸಣೆ ಮಾಡುತ್ತಿದ್ದ. ಅಂತೂ ಇವರ ತಪಾಸಣೆಗಳಲ್ಲ ಮುಗಿದು ವಿಮಾನದೊಳಗೆ ಪ್ರವೇಶ ಪಡೆದು ತಂತಮ್ಮ ಆಸನದಲ್ಲಿ ಉಸ್ಸಪ್ಪಾ ಅಂತ ಕೂತಾಗ ಒಂದು ಗಂಟೆ. ಎರಡು ಗಂಟೆಗೆ ಸರಿಯಾಗಿ ವಿಮಾನ ತನ್ನ ರೆಕ್ಕೆ ಬಿಚ್ಚಿ ಹಾರತೊಡಗಿತ್ತು. ಇನ್ನೂ ಎಂಟು ಗಂಟೆಗಳು ಇವರು ಅಂತರ್ ಪಿಶಾಚಿಗಳಂತೆ ಆಕಾಶದಲ್ಲೇ ಇರುವ ಅನಿವಾರ್ಯತೆಯಿತ್ತು!
ಬೆಂಗಳೂರಿನಿಂದ ಫ್ರ್ಯಾಂಕ್ ಫ಼ರ್ಟ್ ಗೆ ಪಯಣಿಸುತ್ತಿದ್ದ ಆ ವಿಮಾನದಲ್ಲಿ ಜರ್ಮನ್ ದೇಶದವಳಾದ ಗಗನ ಸಖಿ ಸಖತ್ತಾಗಿದ್ದುದರಿಂದಲೋ ಏನೋ ವೆಂಕಣ್ಣನಿಗೆ ಬಾಯಾರಿಕೆ ಸ್ವಲ್ಪ ಜಾಸ್ತಿನೆ ಆಗತೊಡಗಿತ್ತು. ಆಗಾಗ ಅವಳನ್ನು ಕರೆದು "can I have water please?" ಅನ್ನೋದು, ಅವಳು ತಂದು ಕೊಟ್ಟಾಗ 'Thank you!" ಅನ್ನೋದು ನಡೆದೇ ಇತ್ತು. ತನಗೆ ಮಾತ್ರ ಒಂದು ಸಲವೂ ಯಾವುದಕ್ಕೂ "Thank you" ಹೇಳದ ಗಂಡ ನೀರು ಕುಡಿಸುತ್ತಿದ್ದ ಈ ಬೆಕ್ಕಿನ ಕಣ್ಣಿನ ಚೆಲುವೆಗೆ ಇಷ್ಟೊಂದು ಆದರ ತೋರಿಸುತ್ತಿದ್ದುದು ಜಾನುಗ್ಯಾಕೋ ಸರಿ ಕಾಣಲಿಲ್ಲ.
"ನೀರು ಭಾಳ ಕುಡಿಬ್ಯಾಡ್ರಿ, ಅಜೀರ್ಣ ಆದೀತು!" ಅಂತ ಎಚ್ಚರಿಸಿದಳು.
"ಎಲ್ಲಾದಕ್ಕೂ ಕಿರಿಕಿರಿ ನೋಡಲೇ ನಿಂದು. ಏನೂ ತಿನ್ಲಿಕ್ಕಂತೂ ಬಿಡಂಗಿಲ್ಲ, ಕುಡಿಲಿಕ್ಕರೆ ಬಿಡ್ತೀಯಾ ಅದೂ ಇಲ್ಲಾ." ಅಂತ ಸ್ವಲ್ಪ ಜೋರಾಗೆ ಹೇಳಿದ್ದು ಕನ್ನಡದಲ್ಲೇ ಆಗಿದ್ದರು ಜರ್ಮನ್ ಸಖಿಗದು ಹೇಗೋ ಅರ್ಥವಾಗಿ ಅವಳು ಕಣ್ಣು ಮಿಟುಕಿಸಿ ನಕ್ಕಂತೆನಿಸಿತು! ಅಂತೂ ನೀರು ಕುಡಿಯುವುದಕ್ಕೂ ರೇಷನ್ನು ಲಾಗು ಆದ ಮೇಲೆ, ವೆಂಕಣ್ಣ ನಿಗೆ ಇನ್ನೂ ೮ ಗಂಟೆ ಕಾಲಹರಣ ಮಾಡುವ ಬಗೆ ತಿಳಿಯದೆ ಅತ್ತಿತ್ತ ಪಿಳಿ ಪಿಳಿ ನೋಡತೊಡಗಿದ. ಮಗಳು ಖುಷಿ ತನ್ನ ಆಸನದ ಎದುರಿಗಿನ ಸಣ್ಣ ಟೀವಿ ಪರದೆಯಲ್ಲಿ ಕಾಣುತ್ತಿದ್ದ ಕಾರ್ಟೂನುಗಳನ್ನು ನೋಡುತ್ತಾ ಅನಂದದಿಂದಿದ್ದಳು. ಜಾನು ಕಿವಿಗೆ ಈಯರ್ ಫೋನ್ ಹಾಕಿಕೊಂಡು ಯಾವುದೋ ಸಂಗೀತ ಕೇಳುತ್ತಿದ್ದಳು. ಆದರೂ ಗಂಡನ ಮೇಲೆ ಒಂದು ಕಣ್ಣಿಟ್ಟಿದ್ದಳು! ಪಕ್ಕದ ಕಿಟಕಿಯ ಹೊರಗೆ ಕಣ್ಣು ಹಾಯಿಸಿದವನಿಗೆ ಕೆಳಗೆ ಬರೀ ಮೋಡಗಳು ಕಾಣುತ್ತಿದ್ದವು. ವಿಮಾನಯಾನದ ಏಕತಾನತೆಯಿಂದ ಬೇಸರ ಮೂಡಿತವನಿಗೆ. ಟ್ರೇನು, ಬಸ್ಸಿನಲ್ಲಾದರೆ ನಾವು ಚಲಿಸುತ್ತಿರುವ ಅನುಭವವಾದರೂ ಆಗುತ್ತೆ. ಇಲ್ಲಿ ಅದೂ ಗೊತ್ತಾಗದು. ವಿಮಾನದ ಎದುರಿಗೊಂದಿಷ್ಟು ಗಾಳಿಕುಳಿಗಳು (air packets) ಬಂದಾಗಲಷ್ಟೆ, ಬೆಂಗಳೂರಿನ ಕೆಟ್ಟ ರಸ್ತೆಯ ಮೇಲೆ ಹೋದಂತೆ ವಿಮಾನ ತಡಪಡಿಸಿದಂತಾಗಿ ಧಡಿಕೆಯಾಗಿ ಚಲನೆಯ ಅನುಭವವಾಗುತ್ತಿತ್ತು. ಇಲ್ಲವೆಂದರೆ ಒಂದು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತುಕೊಂಡ ಅನುಭವ ಅಷ್ಟೇ. ಟ್ರೇನಿನಲ್ಲಿ ಬೇಸರವಾದರೆ ಬಾಗಿಲ ಬಳಿ ಹೋಗಿ ನಿಂತು ಹೊರಗಿನ ಪ್ರಕೃತಿ ಸೌಂದರ್ಯ ನೋಡುತ್ತಾ ತಾಜಾ ಗಾಳಿಯನ್ನು ಸವಿಯಬಹುದು. ವಿಮಾನದಲ್ಲಿ ಅದೂ ಸಾಧ್ಯವಿಲ್ಲವಲ್ಲವಲ್ಲ ಅಂತ ಪೇಚಾಡಿದನವನು. ಇತ್ತೀಚಿಗೆ ಚೈನಾದವರು ತಮ್ಮ ದೇಶದಿಂದ ಅಮೆರಿಕಾದವರೆಗೂ ಟ್ರೇನ್ ಸಂಚಾರ ಶುರು ಮಾಡಿದ್ದಾರೆಂಬ ಸುದ್ದಿ ಕೇಳಿದ್ದ. ಮುಂದಿನ ಸಲ ಅಮೆರಿಕಾಕ್ಕೆ ಹೋದರೆ ಚೈನಾಕ್ಕೆ ಹೋಗಿ ಅಲ್ಲಿಂದ ಟ್ರೇನಿನಲ್ಲೇ ಹೋಗುವುದು ಒಳ್ಳೆಯದು ಅಂತ ನಿರ್ಧರಿಸಿ, ಈಗ ಸಧ್ಯಕ್ಕೆ ನಿದ್ದೆ ಮಾಡುವುದೊಂದೇ ಒಳ್ಳೆಯ ಉಪಾಯ ಅಂತ ಮನಗಂಡು ಕಣ್ಣು ಮುಚ್ಚಿ ನಿದ್ದೆಗೆ ಶರಣಾದ.
****
ಬೆಂಗಳೂರಿನ ತನ್ನ ಸುಸಜ್ಜಿತವಾದ ಫ್ಲ್ಯಾಟಿನಲ್ಲಿ ಮಲಗಿದ್ದ ಸುಜಯ್ ಗೆ, ಗಂಟೆ ಮೂರಾದರೂ ನಿದ್ದೆ ಹತ್ತಿರ ಸುಳಿಯುಲಾರದಾಗಿತ್ತು. ನಿನ್ನೆ ಮೊನ್ನೆ ಕಂಪನಿ ಸೇರಿದ್ದ ವೆಂಕಟ್ ಅಮೆರಿಕಾಕ್ಕೆ ಹೊರಟಿದ್ದಾನೆ ಅನ್ನುವ ಸಂಗತಿಯೇ ಅವನ ನಿದ್ರಾ ಹೀನತೆಗೆ ಕಾರಣವಾಗಿತ್ತು. ಸುಜಯ್ ಹಾಗೂ ವೆಂಕಟ್ ಇಬ್ಬರಿಗೂ ಸುಧೀರ್ ನೆ ಬಾಸ್. ತನ್ನನ್ನು ಅಮೆರಿಕಕ್ಕೆ ಕಳಿಸುತ್ತೇನೆ ಎಂದು ಹೇಳಿದ್ದ ಬಾಸು ಕೊನೆಯ ಕ್ಷಣದಲ್ಲಿ ತನಗೆ ಕೈ ಕೊಟ್ಟಿದ್ದು ಇವನಿಗೆ ಸಿಟ್ಟು ಬರಿಸಿತ್ತು. ಕಸ್ಟಮರ್ರು ವೆಂಕಟ್ ನೇ ಅಲ್ಲಿಗೆ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆಂದೂ, ಮುಂದಿನ ಸಲ ನಿನ್ನನ್ನು ಕಳಿಸುವೆನೆಂದೂ ಹೇಳಿದ ಸುಧೀರನ ಮಾತು ಆ ಮಟ್ಟಿಗಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಉತ್ತರವಾಗಿತ್ತೆಂದು ಅವನಿಗೆ ಸ್ಪಷ್ಟವಾಗಿತ್ತು. ಅದೂ ಅಲ್ಲದೆ ಹೊಸದಾಗಿ ಇವನ ಟೀಮಿಗೆ ಸೇರಿದ್ದ ನಿಶಾ, ನೀನು ಅಮೆರಿಕಾಕ್ಕೆ ಹೋಗುತ್ತಿಲ್ಲವೇ ಅಂತ ಆಶ್ಚರ್ಯ ಚಕಿತಳಾಗಿ ಕೇಳಿದ್ದು ಇವನಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆ ದೇಶದ ಮಣ್ಣನ್ನು ಮುಟ್ಟುವ ಸುಜಯ್ ನ ಬಹುದಿನದ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು.
(ಮುಂದುವರಿಯುವುದು…)
ಜರ್ಮನ್ ದೇಶದವಳಾದ ಗಗನ ಸಖಿ ಕೊಟ್ಟದ ನೀರ ಕುಡದ್ರ ಅಜೀರ್ಣ ಆಗತದ ಅಂತ ಗೊತ್ತಾತು… 🙂
ಸುಜಯ್ ಬಗ್ಗೆ ಇರೊ ಪ್ಯಾರ ಭಾಳ ಕೌತುಕ ಮಾಡ್ಯದ ನನಗ ಜಲ್ದಿ ಬರಿರಿ ಮುನ್ದಿನದು… ಛ್ಹೊಲೊ ಅನಸ್ತು
ಗೆಳೆಯ ವಿಟ್ಠಲ, ಓದಿ ನಿನ್ನ ಅಭಿಪ್ರಾಯ ತಿಳಿಸಿದ್ದಕ್ಕೆ ಖುಷಿಯಾಯ್ತು! ಕೊನೆ ಪ್ಯಾರಾ ಕುತೂಹಲ ಮೂಡಿಸಿದ್ದು ಕೇಳಿ ಇನ್ನೂ ಸಂತೋಷ! ಜಲ್ದಿ ಬರೀತೀನಿ 🙂
ಪಾತಾಳದ ಪರಿಕಲ್ಪನೆ ಹಾಗೂ ಅದರಲ್ಲಿ ವ್ಯಕ್ತಪಡಿಸಿರುವ ವಿಷಯದ 'ಆಳ' ಚೆನ್ನಾಗಿದೆ. 'ಗಾಳಿ ಕುಳಿ'ಯಂತ ಶಬ್ದಸೃಷ್ಟಿ ತಮಗೆ ಮಾತ್ರ ಸಾಧ್ಯ…!!! ಕನ್ನಡ ಇಂತಹ ಹೊಸ ಶಬ್ದಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡು, ಒಪ್ಪಿಕೊಂಡರೆ ಆಗಬಹುದಾದ ಪ್ರಯೋಜನಗಳ ಬಗ್ಗೆ ನನಗೆ ಅಚ್ಚರಿಯಿದೆ. ಹಾಗೂ ಆ ನಿಟ್ಟಿನಲ್ಲಿ ತಮ್ಮಿಂದ ಅನೇಕ ಬರಹಗಳಲ್ಲಿ ಆಗುತ್ತಿರುವ ಕೊಡುಗೆಯ ಬಗ್ಗೆ ಹೆಮ್ಮೆಯಿದೆ.
ಪೂರ್ಣ ಬರಹದ ಬಿಡಿ ಭಾಗಗಳು ಒಂದರ ಹಿಂದೆ ಒಂದರಂತೆ ಪ್ರತಿವಾರ ಬರಬೇಕು. ಇಲ್ಲದಿದ್ದರೆ, ರುಚಿಯಾದ ಭೋಜನ ಸವಿಯುತ್ತಿರುವವನ ಬಾಳೆ ಖಾಲಿಯಾಗಿದ್ದರೂ 'ಇದೋ ಬಂದೆ' ಎಂದು ಹೋದ ಬಡಿಸುವವನಿಗೆ ಕಾಯುತ್ತಾ ಕುಳಿತ ಅನುಭವವಾಗುತ್ತದೆ. ಇನ್ನು ಮುಂದಾದರೂ ಬೆರಳು ನೆಕ್ಕುತ್ತಾ ಕೈ ಒಣಗಿಸಿ ಬಾಳೆಯ ಎದುರು ಕಾಯುವ ಸ್ಥಿತಿ ಓದುಗರಿಗೆ ತಂದೊಡ್ದದಿರಿ !
ಮೂರ್ತಿ ಬಾವ, ನಿಮ್ಮ ಪ್ರೋತ್ಸಾಹದಾಯಕ ಅನಿಸಿಕೆಗಳು ನನಗೆ ಒಳ್ಳೆಯ ಟಾನಿಕ್! ನಿಮ್ಮ ಕೈ ಒಣಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುವೆ… 🙂
ಚೂರು ಉಪ್ಪು, ಚೂರು ಖಾರ, ಚೂರು ಮಸಾಲೆ, ಅಲ್ಪ ಹುಳಿ-ಸಿಹಿ ಒಟ್ಟಾರೆ ಪಟ್ಟಾದ ಅಡುಗೆ, ಅಹಾ!!. ಧನ್ಯವಾದಗಳು ಕುರ್ತಕೋಟಿ.
ಪ್ರಿಯ ಅಖಿಲೇಶ್, ಅಡುಗೆ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಧನ್ಯವಾದಗಳು! 🙂
ಗುರು,ಅಮೇರಿಕಾ ಜನತೆಯ ಬಗ್ಗೆ ವೆಂಕಟನ ಅಭಿಪ್ರಾಯ ತಿಳಿಯಲು ನಾವು ಕಾತರರಗಿದ್ದೇವೆ !
ಪ್ರಿಯ ಮಂಜು, ನಿನ್ನ ಪ್ರೋತ್ಸಾಹಕ್ಕೆ ಧನ್ಯವಾದಗಳು! ಅಮೆರಿಕಾದ ಜನತೆಗಿಂತ ಹೆಚ್ಚಾಗಿ ಅಲ್ಲಿ ವಾಸಿಸುತ್ತಿರುವ ಭಾರತೀಯರ ಬಗ್ಗೆ ಅವನ ಅಭಿಪ್ರಾಯ ವ್ಯಕ್ತವಾಗುವ ಸಾಧ್ಯತೆಗಳು ಜಾಸ್ತಿ ಇವೆ ಅನಿಸುತ್ತದೆ 🙂
ಗುರು, ನಂಗೂ ನೀರಡಿಕೆ ಆಯ್ತು……….ಎದುರಿಗೆ ನೀರಿನ ಬಾಟಲಿ ಮಾತ್ರ ಇತ್ತು ಅನ್ನೋದೇ ಬೇಜಾರು….:P
ಅಮರ್ ಭಾಯ್, ಹ್ಹ ಹ್ಹ … :). ಪ್ರೀತಿಯಿಂದ ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು!
ವೆಂಕಣ್ಣನ ಪಾತಾಳ ಯಾತ್ರೆ ಚೆನ್ನಾಯಿತು.
ಅಮೆರಿಕವೆಂದರೆ ಭಾರತದ ಸರಿಯಾಗಿ ತಲೆ ಕೆಳಗಾಗಿ ಅಂಟಿಕೊಂಡ ದೇಶ ಎನ್ನುವ ಯಾವುದೋ ತೆಲುಗು ಚಿತ್ರದ ಸಂಭಾಷಣೆ ನೆನಪಾಯಿತು, ಸುರಂಗದ ಪ್ರಸ್ತಾವನೆ ಓದಿ!
ಸುಜಯ್ ಸಹ ಪಾತಾಳ ಮುಖಿಯಾಗಲಿ!
ಪ್ರಿಯ ಶ್ರೀ. ಬದರಿ, ನೀವು ಪ್ರೀತಿ ಮತ್ತು ತಾಳ್ಮೆಯಿಂದ ಲೇಖನಗಳನ್ನು ಓದಿ ಪ್ರೋತ್ಸಾಹಿಸುವ ಪರಿ ನಿಜಕ್ಕೂ ಇಷ್ಟವಾಯ್ತು! ಇದು ತುಂಬಾ ಅಪರೂಪ ಹಾಗೂ ಅನುಕರಣೀಯ.. ಧನ್ಯವಾದಗಳು!