ಪಾಂಡದ ಪರಿ-ಬಿದಿರೆಂಬ ಸಿರಿ: ಅಖಿಲೇಶ್ ಚಿಪ್ಪಳಿ


ಕಳೆದ 2 ವರ್ಷದಿಂದ ಕಳಲೆ ತಿಂದಿಲ್ಲ. ಕಳಲೆ ತಿನ್ನುವುದು ಕಾನೂನುಬಾಹಿರವೆಂದು ಅಂದು ಕೊಂಡಿದ್ದ ದಿನಗಳವು. ಆದರೂ ಮಳೆಗಾಲ ಬಂತೆಂದರೆ ಕಳಲೆಗೆ ಮುಗಿಬೀಳುವುದು ನಡದೇ ಇತ್ತು ಮತ್ತು ಇದೆ. ಕಳಲೆಗಾಗಿಯಲ್ಲವಾದರೂ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬಿದಿರನ್ನು ನೆಟ್ಟು ಬೆಳೆಸಿರುತ್ತಾರೆ. ಅದರಲ್ಲಿ ಮೂಡುವ ಕಳಲೆಗಳ (ಬ್ಯಾಂಬೂ ಶೂಟ್) ಲ್ಲಿ ಕೆಲವನ್ನು ಕತ್ತರಿಸಿ, ಸಂಸ್ಕರಿಸಿ ತಿನ್ನುವ ವಾಡಿಕೆ ಮಲೆನಾಡಿನಲ್ಲಿ ಇದೆ. ಹಿಂದಿನ ವಾಡಿಕೆಯಂತೆ ಬಿದಿರು ಹೂ ಬಿಟ್ಟ ನಂತರದಲ್ಲಿ ಸಾಯುತ್ತದೆ. ಬಿದಿರು ಹೂ ಬಿಡುವುದು 60 ವರ್ಷಕ್ಕೊಮ್ಮೆ. 2013-14ರಲ್ಲಿ ಮಲೆನಾಡಿನ ಎಲ್ಲಾ ಬಿದಿರುಗಳು ಹೂ ಬಿಟ್ಟವು. ಜೊತೆಯಲ್ಲಿ ಕೋಟ್ಯಾಂತರ ಬೀಜಗಳನ್ನು ಬಿಟ್ಟವು. ಹಾಲಿ 2 ವರ್ಷದಿಂದ ಸಂಸ್ಕಾರಗೊಳ್ಳದ ಒಣಗಿದ ಬಿದಿರನ್ನು ಈ ಭಾಗದಲ್ಲಿ ಕಾಣಬಹುದೇ ವಿನ: ಜೀವಂತ ಬಿದಿರಿನ ಹಸಿರನ್ನು ನೋಡುವುದು ಸಾಧ್ಯವಿಲ್ಲ. ಮಲೆನಾಡಿನಲ್ಲಿ ಬಿದಿರು ಮರುಜೀವಗೊಳ್ಳಲು ಇನ್ನೂ 2 ವರ್ಷಗಳು ಬೇಕು. ಎಂತಹ ಬಾಯಿ ಚಪಲದವನಿಗೂ ಬಿದಿರು ಸಿಗುವುದಿಲ್ಲ. ಕಳಲೆಯ ಯಾವ ಪದಾರ್ಥಗಳು ಅಲಭ್ಯ. ಆದರೂ, ಕೆಟ್ಟ ನಾಲಗೆಯ ರುಚಿ ನೋಡಿ, ಅವರಿವರಿಗೆ ಹೇಳಿದೆ. ಕಳಲೆ ಸಿಕ್ಕರೆ ತಂದು ಕೊಡಿ. ಬಾಯಿರುಚಿ ವಾಸ್ತವವನ್ನೂ ಮರೆಮಾಚುತ್ತದೆ. ವಾಸ್ತವದ ಅರಿವಿದ್ದೂ, ಬಿದಿರಿನ ಬೀಜ ಮೊಳಕೆಯೊಡೆಯುವ ಸಮಯದಲ್ಲಿ, ಬಿದಿರು ಅಲಭ್ಯವಾದ ಈ ಸಮಯದಲ್ಲಿ ಬಿದಿರಿನ ಚಿಗುರನ್ನು ತಿನ್ನುವ ಆಸೆಯಾಗಿದ್ದು, ವಿಲಕ್ಷಣವಲ್ಲದೆ ಮತ್ತೇನು? ಇದಕ್ಕೇನು ಶಿಕ್ಷೆ ಎಂದು ಓದುಗರಿಗೇ ಬಿಟ್ಟಿದ್ದೇನೆ. ಬಿದಿರಿನ ಮಹತ್ತ್ವ ಮತ್ತು ಸೆಳೆತ ಅಂತದ್ದು. ಇದನ್ನು ಬರೆಯುವ ಹೊತ್ತಿನಲ್ಲಿ ಜ್ಞಾನೋದಯವಾಗಿ, ಬಿದಿರು ಹೆಚ್ಚುವರಿಯಾಗಿ ಬೆಳೆದರೆ ಮಾತ್ರ, ಅಂದರೆ ಎಲ್ಲಾ ಅವಲಂಬಿತ ಪ್ರಾಣಿಗಳು ತಿಂದ ನಂತರ ಉಳಿದ ಕಳಲೆಯನ್ನು (ಅದೂ ಉಳಿದರೆ ಮಾತ್ರ) ತಿನ್ನುವ ಪ್ರಚಂಡ ಪ್ರತಿಜ್ಞೆಯನ್ನು ಕೈಗೊಂಡಿರುವುದು ಸುಳ್ಳಲ್ಲ.

ಇಡೀ ಪ್ರಪಂಚದ ಕಾಡುಗಳಲ್ಲಿ ಇರುವ ಜೈಂಟ್ ಪಾಂಡಗಳ ಸಂಖ್ಯೆ 1-2 ಸಾವಿರ ಮಾತ್ರ (ಸಂಗ್ರಹಾಲಯದಲ್ಲಿ 100-200). ಪ್ರಕೃತಿಯ ಅದ್ಭುತ ಸೃಷ್ಟಿಯಲ್ಲಿ ಒಂದಾದ ಪಾಂಡಾಗಳು ನೋಡಲು ಅದೆಷ್ಟು ಸುಂದರ, ಮೂತಿ-ಕಣ್ಣು ಮತ್ತು ಕಿವಿಯನ್ನು ಬಿಟ್ಟು ಭುಜದವರೆಗಿನ ಹಾಗೂ ಹಿಂಭಾಗ, ಹೊಟ್ಟೆಯ ಭಾಗವನ್ನು ಹಿಮಕರಡಿಯಿಂದಲೂ ಹಾಗೂ ಕೈಕಾಲು ಮತ್ತು ಭುಜದ ನಂತರ ಅಷ್ಟು ಭಾಗವನ್ನು ನೆಲ ಕರಡಿಯಿಂದಲೂ ಎರವಲು ಪಡೆದಂತೆ, ಕಣ್ಣಿಗೆ ತಿದ್ದಿ ತೀಡಿಟ್ಟ ಕಾಡಿಗೆ ಹಚ್ಚಿದಂತೆ ಜೂಲು-ಜೂಲಾದ ಕೂದಲು, ಅಷ್ಟಗಲ ಪಾದ, ಸೀಲ್ ಮರಿಯ ಕಣ್ಣಿನಂತೆ ಹೊಳೆಯುವ ಕಂಗಳು. ಗಡುಸಾದ ವಿರಳ ಮೀಸೆಗಳು, ನಿಮಿರಿದ ಕಿವಿಗಳು ಜೊತೆಗೆ ಮುಖದಲ್ಲಿ ತುಂಟ ಮಗುವಿನ ಛಾಯೆ. ಇಷ್ಟು ಬಣ್ಣಿಸಿದರೆ ಪಾಂಡಾವನ್ನು ಬಣ್ಣಿಸಿದಂತಾಯಿತೇ? ಇಲ್ಲ ಅದರ ಸೌಂದರ್ಯವನ್ನು ನೋಡಿಯೇ ತೀರಬೇಕು. ಇಷ್ಟೆಲ್ಲಾ ಸುಂದರವಾಗಿರುವ ಈ ಪ್ರಾಣಿ ಅಷ್ಟೇಕೆ ಸೋಮಾರಿಯಾಗಿದೆ. ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇದರ ಪೂರ್ವಜರ ಆಹಾರ ಪದ್ದತಿಯನ್ನು ನೋಡಬೇಕಾಗುತ್ತದೆ. ಮೂಲತ: ಮಿಶ್ರಾಹಾರಿಯಾದ ಪಾಂಡಾದ ಪೂರ್ವಜರು ಮಾಂಸಹಾರವನ್ನೂ ಮಾಡುತ್ತಿದ್ದವು. ಅದೇಗೋ ವಿಕಾಸಪಥದಲ್ಲಿ ಮಾಂಸಹಾರವನ್ನು ತ್ಯಜಿಸಿ ಬರೀ ಸಸ್ಯಾಹಾರಕ್ಕೆ ಒಗ್ಗಿಕೊಂಡವು. ಅದರಲ್ಲೂ ಬಿದಿರು ಮಾತ್ರ ಇದರ ಆಹಾರ!!!

 

 

 

 

ಇವೇನೋ ಮಾಂಸಾಹಾರವನ್ನು ತ್ಯಜಿಸಿ ಬರೀ ಬಿದಿರನ್ನು ನೆಚ್ಚಿಕೊಂಡವು. ಆದರೆ ಪಾಂಡಾದ ಜೀರ್ಣಾಂಗ, ಕರಳು ಇನ್ನಿತರ ಆಹಾರ ಪಚನ ಕ್ರಿಯೆ ನಡೆಸುವ ಅಂಗಗಳೂ, ರಾಸಾಯನಿಕಗಳೂ ಕಾಲಕ್ಕೆ ತಕ್ಕ ಹಾಗೆ ಬದಲಾಗಲೇ ಇಲ್ಲ. ಆನೆಯಂತೆ ದಿನದ ಹದಿನಾರು ಗಂಟೆ ಬಿದಿರು ಜಗಿಯುವ ಪಾಂಡಾಗಳೂ ತಾವು ತಿಂದ ಒಟ್ಟೂ ಬಿದಿರಿನ ಶೇ.17ರಷ್ಟನ್ನೂ ಮಾತ್ರ ಜೀರ್ಣಿಸಿಕೊಳ್ಳಲು ಸಾಧ್ಯ. ಇನ್ನುಳಿದ 83% ಆಹಾರ ತ್ಯಾಜ್ಯರೂಪದಲ್ಲಿ ಹೊರಹೋಗುತ್ತದೆ. ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಪಾಂಡಾಗಳು ಈ ಪರಿ ಸೋಮಾರಿತನದಿಂದ ವರ್ತಿಸುತ್ತವೆ. ಶಕ್ತಿಯ ಅಪವ್ಯಯ ತಡೆಗಟ್ಟುವುದು ಇದರ ಹಿಂದಿನ ಮೂಲ ಉದ್ಧೇಶ. 0.017 ಮೈಲು ಪಾಂಡಾ ಪ್ರತಿಗಂಟೆಗೆ ಕ್ರಮಿಸುವ ದೂರ. ಹಾಗೆಯೇ ಇವುಗಳ ಮೆದುಳು, ಯಕೃತ್ತು, ಮೂತ್ರಪಿಂಡ ಇವೆಲ್ಲವೂ ಪಾಂಡಾದ ಗಾತ್ರಕ್ಕೆ ಹೋಲಿಸಿದರೆ ಅತಿ ಚಿಕ್ಕವು. ಈ ಎಲ್ಲಾ ಗುಣಗಳೇ ಪಾಂಡಾಗಳನ್ನು ಅಷ್ಟು ಸೋಮಾರಿಯಾಗುವಂತೆ ಮಾಡಿರುವುದು. ರಕ್ಷಿತಾರಣ್ಯದಲ್ಲಿ ನೆಲೆಗೊಂಡ ಪಾಂಡಾಗಳನ್ನು ಅಭ್ಯಸಿಸಿ, ಈ ವಿಷಯಗಳನ್ನು ಸಂಶೋಧಕರು ಇತ್ತೀಚಿಗೆ ಕಂಡುಕೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.

ಹಾಗಾದರೆ ಮಧ್ಯಚೀನಾದ ದಟ್ಟವಾದ ಗುಡ್ಡಗಾಡಿನಲ್ಲಿ ಮಾತ್ರ ಇರುವ ಪಾಂಡಾಗಳ ವರ್ತನೆಯೇನು? ಪಾಂಡಾಗಳು ಗುಂಪಾಗಿ ವಾಸಿಸುತ್ತವೆಯಾದರೂ, ಎರಡು ವಯಸ್ಕ ಗಂಡುಗಳು ಒಟ್ಟಿಗೆ ಇರುವುದಿಲ್ಲ. ನೋಡಲು ಸುಂದರವಾಗಿದ್ದರೂ, ಆಂತರಿಕ ಹಲವು ನ್ಯೂನತೆಗಳಿಂದಾಗಿ, ಆಹಾರ ಹುಡುಕುವುದು, ತಿನ್ನುವುದು, ಹೊರಹಾಕುವುದೂ ಇಷ್ಟರಲ್ಲೇ ದಿನದ ಬಹುಪಾಲು ಕಳೆದು ಹೋಗುತ್ತದೆ. ನಿಸರ್ಗ ನಿಯಮದಂತೆ ಸಂತತಿ ಮುಂದುವರೆಯುವುದಕ್ಕಾಗಿ ಹೆಣ್ಣು-ಗಂಡು ಸೇರುವುದು ಅನಿವಾರ್ಯ. ಗರ್ಭ ಕಟ್ಟಿದ 5 ತಿಂಗಳಲ್ಲಿ ಹೆಣ್ಣು ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದಾಗ ಬರೀ 140 ಗ್ರಾಂ ತೂಗುವ ಜೈಂಟ್ ಪಾಂಡಾ ಬೆಳೆದ ಮೇಲೆ 150 ಕೆ.ಜಿಯವರಗೂ ತೂಗಬಲ್ಲದು. ಇಷ್ಟೆಲ್ಲಾ ದೈಹಿಕ ನ್ಯೂನ್ಯತೆಗಳಿದ್ದರೂ ಕಾಡು ಜೈಂಟ್ ಪಾಂಡಾಗಳು ಮಧ್ಯಚೀನಾದಲ್ಲಿ ಬೇಸಿಗೆಯಲ್ಲಿ 3500-4000 ಮೀಟರ್‍ವರಗೆ ಎತ್ತರದವರೆಗೆ ಬಿದಿರನ್ನು ಅರಸಿ ಹೋಗಬಲ್ಲವು.

ನಮಗೆ ಸ್ವಾಭಾವಿಕವಲ್ಲದ ಆಹಾರವಾದ ಬಿದಿರಿನ ಕಳಲೆಯ ಬಗ್ಗೆ ನಮೆಗಿಷ್ಟು ಸೆಳೆತವಿರಬೇಕು ಎಂತಾದರೆ, ಬಿದಿರನ್ನೇ ನೆಚ್ಚಿಕೊಂಡ ಪಾಂಡಾಗಳ ಕತೆಯೇನು? ಅದರಲ್ಲೂ ಅವುಗಳ ಗಾತ್ರಕ್ಕೆ ಹೋಲಿಸಿದಲ್ಲಿ, ಅವುಗಳಿಗೆ ಬಿದಿರಿನ ಕಾಡೇ ಇರಬೇಕು. ಮಲೆನಾಡಿನಲ್ಲಿ ಬಿದಿರಕ್ಕಿ ಬಂದು ಬಿದಿರು ನಾಶ ಆದಂತೆ, ಮಧ್ಯಚೀನಾದ ಗುಡ್ಡ-ಗಾಡಿನ ಬಿದಿರುಗಳೂ ಹೂವಾಗಿ ಅರಳಿ ಬೀಜ ಬಿಟ್ಟು, ನಾಶವಾದರೆ,  ಪಾಂಡಾಗಳ ಕತೆಯೇನು?. ಇಲ್ಲೂ ನಮಗರಿವಿರದ ಅನೇಕ ಸೂತ್ರಗಳು ನಿಸರ್ಗದಲ್ಲಿವೆ. ಪಾಂಡಾಗಳು ಒಟ್ಟು 20 ಜಾತಿಯ ಬಿದಿರನ್ನು ತಿನ್ನುತ್ತವೆ. ಇದರಲ್ಲಿ ಒಂದೆರೆಡು ಜಾತಿಯ ಬಿದಿರು ತಾತ್ಕಾಲಿಕವಾಗಿ ಅಳಿದು ಹೋದರೂ, ಉಳಿದ 18-19 ಜಾತಿಯ ಬಿದಿರುಗಳು ಪಾಂಡಾಗಳನ್ನು ಪೊರೆಯುತ್ತವೆ. 

ಅರಣ್ಯ ಇಲಾಖೆ ಬಿದಿರನ್ನು ನಾಟಾವೆಂದು ಪರಿಗಣಿಸಿದ ಕಾಲವೊಂದಿತ್ತು. ಬಿದಿರು ಎಂದರೆ ವೇಗವಾಗಿ ಬೆಳೆಯುವ ಹುಲ್ಲಿನ ಜಾತಿಯ ಸಸ್ಯ ಎಂದು ಅರಿವಾದ ಮೇಲೆ, ಸ್ವಾಭಾವಿಕವಾಗಿ ಬೆಳೆಯುವ ಎಳೆ ಬಿದಿರು (ಕಳಲೆ) ಕಾನೂನುಬಾಹಿರವಾಗಿ ಸಾರ್ವಜನಿಕವಾಗಿ ಮಾರಾಟವಾಗುತ್ತಿದ್ದರೂ,  ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಸಿ ವರ್ತನೆಯನ್ನು ತೋರುತ್ತಿದ್ದರು. ಬಿದಿರಿನಿಂದ ಪಟ್ಟಿ ಮಾಡಲಾಗದಷ್ಟು ಉಪಯೋಗಗಳಿವೆ. ಗ್ರಾಮಾಂತರ ಪ್ರದೇಶದಲ್ಲಿ ಕಾಡುಪ್ರಾಣಿಗಳು ಬರದ ಹಾಗೆ ಬಿದಿರಿನ ಗೆಲ್ಲನ್ನು ಕಡಿದು ಬೇಲಿ ಮಾಡುವ ಸಂಪ್ರಾದಾಯವಿದೆ. ಅತ್ಯಂತ ಹೆಚ್ಚಿನ ಇಂಗಾಲಾಮ್ಲವನ್ನು ಪಡೆದು ಆಮ್ಲಜನಕವನ್ನು ಪೂರೈಸುವ ಬಿದಿರು ಯಾವಾಗಲೂ ನಾಗರೀಕ ಸಮಾಜಕ್ಕೆ ನಿಕೃಷ್ಟವಾಗಿಯೇ ಕಂಡಿದೆ ಎಂದರೆ ಆಶ್ಚರ್ಯವಾಗಲಿಕ್ಕಿಲ್ಲ. ಈಗಂತೂ ಗಂಗಾ ನದಿಯನ್ನೇ ಸ್ವಚ್ಛಗೊಳಿಸುವ ಅಭಿಯಾನ ನಡೆದಿದೆ. ಈ ಕೆಲಸ ನಿಜವಾಗಲೂ ಅಭಿನಂದನೀಯವಾದದು. ಆದರೆ, ಬಿದಿರನ್ನು ಅಲಕ್ಷಿಸಿ ಯಾವುದೇ ಜಲಮೂಲವನ್ನು ಸ್ವಚ್ಛಗೊಳಿಸುವುದು ಅಸಾಧ್ಯವಾದ ಕೆಲಸ. ಗಂಗೆಯ ಇಕ್ಕೆಲಗಳಲ್ಲಿ ಬಿದಿರನ್ನು ಬೆಳೆಸಿದರೆ, ಬರೀ ನಾಲ್ಕೇ ವರ್ಷಗಳಲ್ಲಿ ಇಡೀ ನದಿ ಯಾವುದೇ ಒಳಸುರಿಯಿಲ್ಲದೆ ಸ್ವಚ್ಛವಾಗಬಲ್ಲದು. ಕೋಟ್ಯಾಂತರ ರೂಪಾಯಿಗಳ ವ್ಯವಹಾರವಿರುವ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿದರಿರನ್ನು ಕೇಳುವವರ್ಯಾರು?? ಅಂತೆಯೇ ಪ್ರಕೃತಿಯ ಮುನಿಸಿನಿಂದಲೇ ಅಲ್ಪಸಂಖ್ಯಾತವಾಗಿರುವ ಪಾಂಡಗಳ ಚಿಂತೆ ಯಾರಿಗೆ ಬೇಕು?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x