ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೭): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಉದ್ದೇಶಿತ ಜನವಸತಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆ:

ತಮಿಳುನಾಡು: ವಾಲ್‌ಪರಿ, ಕೊಡೈಕೆನಾಲ್ ಮತ್ತು ನೀಲಗಿರಿ ಜಿಲ್ಲೆ
ಕೇರಳ: ಮಂಡಕೋಲ್, ಪನತಾಡಿ, ಪೈತಾಲ್‌ಮಾಲ, ಬ್ರಹ್ಮಗಿರಿ-ತಿರುನೇಲಿ, ವಯನಾಡ್, ಬನಸುರ-ಕುಟ್ಟಿಯಾಡಿ, ನೀಲಂಬರ್-ಮೇಪಾಡಿ, ಸೈಲೆಂಟ್‌ವ್ಯಾಲಿ, ಅಮರಂಬಲಂ, ಸಿರುವಾಣಿ, ನೀಲಂಪತೈ, ಅತ್ರಿಪಳ್ಳಿ, ಕಾರ್ಡ್‌ಮಮ್ ಹಿಲ್ಸ್, ಪೆರಿಯಾರ್, ಅಗಸ್ತ್ಯಮಾಲ.

ಆರು ರಾಜ್ಯಗಳ ವಿವಿಧ ಜಿಲ್ಲೆಗಳ ತಾಲ್ಲೂಕುವಾರು ಪ್ರಸ್ತಾವಿತ ಸೂಕ್ಷ್ಮಪ್ರದೇಶಗಳ ಪಟ್ಟಿ

ರಾಜ್ಯ ಜಿಲ್ಲೆ ತಾಲ್ಲೂಕು ಇಎಸ್‌ಝಡ್1 ತಾಲ್ಲೂಕು ಇಎಸ್‌ಝಡ್2 ತಾಲ್ಲೂಕು ಇಎಸ್‌ಝಡ್3
ಗುಜರಾತ್ 3 1 1 1
ಮಹಾರಾಷ್ಟ್ರ 10 32 4 14
ಗೋವಾ  2
ಕರ್ನಾಟಕ 11 26 5 14
ಕೇರಳ 12 15 14 37
ತಮಿಳುನಾಡು 6 9 2 8
ಒಟ್ಟು 44 83 26 74


ಸಿಂಧುದುರ್ಗ ಜಿಲ್ಲೆಯ ದೋಡಾಮಾರ್ಗ್ ತಾಲ್ಲೂಕಿನ ತಾಲ್ಕಟ್ ಪಂಚಾಯ್ತಿಯ ಗ್ರಾಮಸಭೆಯ ನಡಾವಳಿಯನ್ನು ಮರಾಠಿಯಿಂದ ತರ್ಜುಮೆ ಮಾಡಿದ ಭಾಗ: ನಮ್ಮ ಊರಿನಲ್ಲಿ ನಿರಂತರ ಹರಿಯುವ ಚಿಕ್ಕ-ಚಿಕ್ಕ ನದಿಗಳಿವೆ. ಇವುಗಳನ್ನು ಪರಿಣಾಮಕಾರಿಯಾಗಿ ಬಳಸದೇ ಇರುವುದರಿಂದಾಗಿ ನಮ್ಮ ತೋಟಗಳು ಬೇಸಿಗೆಯಲ್ಲಿ ಒಣಗುತ್ತಿವೆ. ನದಿಗೆ ಅಡ್ಡಡ್ಡಲಾಗಿ ಚಿಕ್ಕ-ಚಿಕ್ಕ ಬದುಗಳನ್ನು ನಿರ್ಮಿಸುವುದು ಇತ್ಯಾದಿಗಳಿಂದ ತುಂಬ ಯೋಜನಬದ್ದವಾಗಿ ಕಾರ್ಯಯೋಜನೆಯನ್ನು ಸರ್ಕಾರಗಳು ರೂಪಿಸಿ ನೀಡಬೇಕು. ಮುಂಬಯಿ ಶಹರದಿಂದ ಹತ್ತಿರವಿರುವ ಈ ಊರು ಪರಿಸರ ಪ್ರವಾಸೋಧ್ಯಮಕ್ಕೂ ಹೇಳಿ ಮಾಡಿಸಿದಂತಿದೆ. ಇದಕ್ಕೂ ಕೂಡ ಸರ್ಕಾರ ಪ್ರೋತ್ಸಾಹ ನೀಡಬೇಕು. ಕೃಷಿ ಮತ್ತು ಇನ್ನಿತರ ಚಟುವಟಿಕೆಗಳಿಂದಾಗಿ ಅರಣ್ಯ ಪ್ರದೇಶ ಒತ್ತುವರಿ ಮತ್ತು ಛಿದ್ರವಾಗಿರುತ್ತದೆ. ಇದೇ ಕಾರಣಕ್ಕೆ ಹಿಂದೆ ಇರದಿದ್ದ, ವನ್ಯಜೀವಿಗಳ ಉಪಟಳ ಈಗ ಹೆಚ್ಚಾಗಿರುತ್ತದೆ. ವನ್ಯಜೀವಿಗಳು ಪರಿಸರದ ಭಾಗವೇ ಆಗಿರುವುದರಿಂದ, ನಮ್ಮಲ್ಲಿ ಹೊಂದಾಣಿಕೆ ಅನಿವಾರ್ಯವಾದ್ದರಿಂದ ಯಾವುದೇ ಯೋಜನೆಗಳನ್ನು ರೂಪಿಸುವ ಪೂರ್ವದಲ್ಲಿ ಇದರ ಬಗ್ಗೆ ವೈಜ್ಞಾನಿಕ ಸ್ತರದಲ್ಲಿ ಚಿಂತನೆ ಮಾಡಬೇಕು. ಯಾವುದೇ ದೊಡ್ಡ ಕಾರ್ಖಾನೆಗಳು ಆಥವಾ ಗಣಿಗಾರಿಕೆಗಳು ಇಲ್ಲಿನ ಜನಜೀವನವನ್ನು ಅಸ್ತವ್ಯಸ್ತ್ಯಗೊಳಿಸಬಲ್ಲವು. ಆದ್ದರಿಂದ ಮೇಲೆ ಹೇಳಿದ ಕಾರಣಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಈ ಪ್ರದೇಶವನ್ನು ಸೂಕ್ಷ್ಮಪ್ರದೇಶವೆಂದು ಘೋಷಿಸಬಹುದಾಗಿದೆ. 

ದೇಶದ ಗುಡ್ಡ-ಬೆಟ್ಟ, ಪರ್ವತಗಳಲ್ಲಿಯ ಕನಿಷ್ಟ ೬೬% ಪ್ರದೇಶವನ್ನು ಕಾಪಿಡುವುದು ನಮ್ಮ ರಾಷ್ಟ್ರದ ಗುರಿಯಾದ್ದು, ಪಶ್ಚಿಮಘಟ್ಟಗಳು ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಪ್ರದೇಶವಾಗಿರುವುದರಿಂದ ಈ ಪ್ರದೇಶದ ೭೫% ಭಾಗಗಳನ್ನು ಸಂರಕ್ಷಿಸುವುದು ಆದ್ಯತೆಯಾಗಬೇಕಿದೆ. ಈ ಘಟ್ಟ ಪ್ರದೇಶಗಳಡಿಯಲ್ಲಿ ಬರುವ ಎಲ್ಲಾ ಸ್ತರಗಳನ್ನು ಇಎಸ್‌ಝಡ್೧, ಇಎಸ್‌ಝಡ್೨ ಇಎಸ್‌ಝಡ್೩ ಅಡಿಯಲ್ಲಿ ವಿಂಗಡಿಸಿ, ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ಹಾಗೆಯೇ ಗುಜರಾತ್‌ನ ಡಾಂಗ್ಸ್  ಮತ್ತು ಕೇರಳದ ಅಶಂಭು ಬೆಟ್ಟಗಳು ಪಶ್ಚಿಮಘಟ್ಟಗಳ ಸಾಲಿಗೆ ಸೇರದಿದ್ದರೂ ಇವುಗಳನ್ನು ರಕ್ಷಿಸುವಲ್ಲಿ ಗಮನಹರಿಸಬೇಕಿದೆ. ಅಲ್ಲದೆ, ಸಮುದ್ರ ತೀರದಿಂದ ೧.೫ ಕಿ.ಮಿ. ಹೊರತು ಪಡಿಸಿ ಉಳಿದ ಪ್ರದೇಶವನ್ನು ಸೂಕ್ಷ್ಮ ಪ್ರದೇಶಗಳ ಸಾಲಿಗೆ ಸೇರಿಸುವ ಪ್ರಸ್ತಾವನೆಯನ್ನು ಗಾಡ್ಗಿಳ್ ವರದಿಯಲ್ಲಿ ಹೇಳಲಾಗಿದೆ. ೨೦೦೦ ನೇ ಇಸವಿಯಲ್ಲಿ ಪ್ರಣಭ್ ಸೇನ್ ಸಮಿತಿ ನೀಡಿದ ವರದಿಯಲ್ಲಿ ಸೂಕ್ಷ್ಮ ಪ್ರದೇಶಗಳ ಗುರುತಿಸುವ ಪ್ರಸ್ತಾವನೆಯಲ್ಲಿ ಹಲವು ನೂನ್ಯತೆಗಳು ಇದ್ದವು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಈ ಸೂಕ್ಷ್ಮಪ್ರದೇಶಗಳನ್ನು ಗುರುತಿಸಿ ನಿರ್ವಹಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡಿತು. ಆದರೆ ಈ ಸಮಿತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಬರೀ ಅಧಿಕಾರಿ ವರ್ಗದವರೇ ನಿರ್ವಹಿಸುವ ಹಾಗೂ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಅನೇಕ ತರಹದ ಆಡಳಿತಾತ್ಮಕ ಲೋಪಗಳು ಆಗುವ ಎಲ್ಲಾ ಸಂಧರ್ಭಗಳು ಎದುರಾಗುತ್ತಿದ್ದು. ಕಾನೂನನ್ನು ಅಸ್ತ್ರವಾಗಿಟ್ಟುಕೊಂಡು ದಲಿತರ, ಆದಿವಾಸಿಗಳ ಹಾಗೂ ಹಿಂದುಳಿದವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಹಾಗೂ ಉಳ್ಳವರಿಗೆ ಇನ್ನಷ್ಟು ವಿನಾಯಿತಿಗಳನ್ನು ತೋರುವ ಸಾಧ್ಯತೆಗಳಿದ್ದವು. 

ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ನೋಡೋಣ. ಪ್ರಣಭ್ ಸೇನ್ ವರದಿಗಿಂತ ಪೂರ್ವದಲ್ಲಿ ಪರಿಸರ ಸಂರಕ್ಷಣಾ ಕಾನೂನು ೧೯೮೬ರಂತೆ ದಿನಾಂಕ:೧೯/೧೨/೧೯೯೬ರಂದು ಮಹಾರಾಷ್ಟ್ರದ ದಹಾನು ತಾಲ್ಲೂಕಿನ ಕೆಲವು ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ ಮಾಡಲಾಯಿತು. ಹಾಗೂ ಇದರ ನಿರ್ವಹಣೆಗಾಗಿ ದಹಾನು ತಾಲ್ಲೂಕು ಪರಿಸರ ಸಂರಕ್ಷಣಾ ಮಂಡಳಿಯನ್ನು ರಚಿಸಲಾಯಿತು. ಆದರೆ ಈ ಸಮಿತಿಗೆ ನಿರ್ದಿಷ್ಟವಾದ ನಿಯಮಗಳಿರಲಿಲ್ಲ. ಸಮಿತಿಯನ್ನು ನಿರ್ವಹಣೆ ಮಾಡುವ ಅಧಿಕಾರಿಗಳು ಲಂಚಕೋರರಾಗಿ ಅಲ್ಲಿನ ಬಡವರಿಗೆ ವಿಪರೀತ ತೊಂದರೆ ನೀಡುತ್ತಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಕೊಳವೆ ಬಾವಿ ತೆರೆಯಲು ೨೦ ಸಾವಿರ ಲಂಚ ಕೇಳಲಾಗಿತ್ತು. ಅಧಿಕಾರಿಗಳ ಇಂತಹ ನಡೆಯಿಂದ ಅಲ್ಲಿನ ಜನರಿಗೆ ಸೂಕ್ಷ್ಮ ಪ್ರದೇಶವೆಂದು ಘೋಷಣೆಯಾದ ನಂತರ ಕಾನೂನುಗಳು ಉಸಿರುಗಟ್ಟಿಸುತ್ತವೆ. ಬಡವರ ವಿರೋಧಿಯಾಗಿ, ಉಳ್ಳವರಿಗೆ ಮಣೆ ಹಾಕುವ ಹುನ್ನಾರವಾಗಿದೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. ೨೦೧೧ರಲ್ಲಿ ದೇವ್ ಮೆಹ್ತಾ ಎನ್ನುವವರು ಮಂಡಳಿಯ ಅಧ್ಯಕ್ಷರಾದ ನಂತರದಲ್ಲಿ ಅಲ್ಲಿನ ಜನರ ಕಷ್ಟಗಳನ್ನು ಆಲಿಸಿ, ಪರಿಹಾರ ಸೂಚಿಸುವ ಕೆಲಸಕ್ಕೆ ಕೈ ಹಾಕಿದರು. ಲಾಗಾಯ್ತಿನಿಂದ ಇರುವ ರಸ್ತೆಗಳನ್ನು ಅಗೆದು ಅಗಳ ತೆಗೆದು ಜನರ ಓಡಾಟಕ್ಕೆ ತೊಂದರೆ ಮಾಡಿದ್ದನ್ನು ಗಾಡ್ಗಿಳ್ ಸಮಿತಿಯು ಗಮನಿಸಿದೆ. 

ಕಸ್ತೂರಿರಂಗನ್ ವರದಿ: ಕೇಂದ್ರ ಸರ್ಕಾರದ ಹತ್ತು ಸಚಿವಾಲಯಗಳು ಪಶ್ಚಿಮಘಟ್ಟಗಳ ರಕ್ಷಣೆಗೆ ನೀಡಿದ ಈ ವರದಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿವೆ. ಕೇಂದ್ರ ವಿದ್ಯುತ್ ಸಚಿವಾಲಯ ಅಭಿಪ್ರಾಯ ಇಂತಿದೆ. ಸರ್ಕಾರದ ಜಲವಿದ್ಯುತ್ ಯೋಜನೆಯನ್ನು ಸಂಪೂರ್ಣ ತಿರಸ್ಕರಿಸುವುದು ಸೂಕ್ತವಲ್ಲ. ಉದಾ: ಅತ್ರಿಪಳ್ಳಿ ಹಾಗೂ ಗುಂಡ್ಯ ಜಲವಿದ್ಯುತ್ ಯೋಜನೆಗಳನ್ನು ಮರುಪರಿಶೀಲಿಸಿ ಒಪ್ಪಿಗೆ ನೀಡುವುದು ಸೂಕ್ತವಾಗಿದೆ. ಕೇಂದ್ರ ಗಣಿ ಇಲಾಖೆಯು ಪಶ್ಚಿಮಘಟ್ಟಗಳಲ್ಲಿ ಗಣಿಗಾರಿಕೆ ನಿಷೇದಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ವಾಣಿಜ್ಯ ಇಲಾಖೆಯು ಗಾಡ್ಗಿಳ್ ವರದಿಯನ್ನು ಜಾರಿ ಮಾಡಿದರೆ ಸಾಂಬಾರು ಪದಾರ್ಥಗಳಾದ ಏಲಕ್ಕಿ-ಕಾಳುಮೆಣಸು ಉತ್ಪಾದನೆ ಕುಂಠಿತಗೊಂಡು ವಿದೇಶಿ ವಿನಿಮಯಕ್ಕೆ ಹೊಡೆತ ಬೀಳಲಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ಪಶ್ಚಿಮಘಟ್ಟಗಳ ಗಡಿಯನ್ನು ನಿಖರವಾಗಿ ಗುರುತಿಸುವುದರಿಂದ ಪ್ರವಾಸೋಧ್ಯಮಕ್ಕೆ ಪೆಟ್ಟು ಬೀಳಲಿದೆ ಎಂದು ಕೇಂದ್ರ ನಗರಾಭಿವೃದ್ದಿ ಹಾಗೂ ಪ್ರವಾಸೋಧ್ಯಮ ಇಲಾಖೆ ಅಭಿಪ್ರಾಯವಾಗಿದೆ. 

ಇಡೀ ಜಗತ್ತು ಹವಾಮಾನ ವೈಪರೀತ್ಯಕ್ಕೆ ಈಡಾಗಿದೆ. ಭಾರತದಂತಹ ಜನಸಂಖ್ಯೆಯಿರುವ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ತುಂಬಾ ಕಡಿಮೆಯಿದೆ. ೭೦% ಜನರು ಕೃಷಿಯಲ್ಲಿ ತೊಡಗಿಕೊಂಡಿರುವುರಿಂದ ಆಹಾರ ಭದ್ರತೆಗೆ ಧಕ್ಕೆಯುಂಟಾಗುತ್ತದೆ. ನೀರಿನ ಸಮಸ್ಯೆಯಿಂದಾಗಿ ಕೃಷಿ ಸೊರಗುವ ಅಪಾಯವಿದೆ. ಭಾರತದಲ್ಲಿ ಹವಾಮಾನ ವೈಪರೀತ್ಯದಿಂದ ವಿವಿಧ ಕ್ಷೇತ್ರಗಳ ಮೇಲಾಗುವ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ. ಹೀಗೆ ಈ ವರದಿಯಲ್ಲಿ ಹವಾಮಾನ ವೈಪರೀತ್ಯದ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x