ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೬): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಸೂಕ್ಷ್ಮ ಪ್ರದೇಶಗಳು: ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ ಕಲಂ ೩ರಂತೆ,  ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ನೀಡಿದೆ. ಈ ಕಾಯ್ದೆಯ ಪ್ರಕಾರ ಕೇಂದ್ರವು ಪರಿಸರವನ್ನು ಕಲುಷಿತಗೊಳಿಸುವ ಎಲ್ಲಾ ತರಹದ ಕಾರ್ಖಾನೆಗಳ ಸ್ಥಾಪನೆಯನ್ನು ತಡೆಯುವುದು ಮತ್ತು ಈಗಾಗಲೇ ಪ್ರಾರಂಭಿಸಲಾಗಿರುವ ಕಾರ್ಖಾನೆಗಳಿಗೆ ನಿಷೇಧ ಹೇರುವ ಅಧಿಕಾರವಿದೆ ಅಥವಾ ಕಟ್ಟುನಿಟ್ಟಾದ ಎಚ್ಚರಿಕೆ ಕ್ರಮಕೈಗೊಳ್ಳಲು ನಿರ್ದೇಶಿಸಬಹುದಾಗಿದೆ. ಕಲಂ ೫(೧)ರಂತೆ ಜೀವಿವೈವಿಧ್ಯ ನಾಶವಾಗುವಂತಹ ಕಾರ್ಖಾನೆಗಳಿಗೂ ನಿಷೇಧ ಹೇರುವ ಅಧಿಕಾರ ಕೇಂದ್ರಕ್ಕಿದೆ. ೧೯೯೧ರಲ್ಲಿ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರದ ಕಡಲತಡಿಯಲ್ಲಿರುವ ಮುರುದ್-ಜಂಝೀರಾ ಎಂಬ ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಸಾರಲಾಯಿತು. ಪರಿಸರ ಸೂಕ್ಷ್ಮ ಪ್ರದೇಶ, ಪಾರಿಸಾರಿಕವಾಗಿ ಅತ್ಯಂತ ನಾಜೂಕಿನ ವಲಯ, ಹೀಗೆ ಹಲವು ರೀತಿಯಲ್ಲಿ ಹೆಸರಿಸಲಾಯಿತು. ಹಾಗೂ ಈ ವರದಿಯಲ್ಲಿ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶವೆಂದು ಕರೆಯಲಾಯಿತು. ಪ್ರಣಭ್ ಸೇನ್ ನೇತೃತ್ವದ ಸಮಿತಿಯು ೨೦೦೦ನೇ ಇಸವಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ, ಭಾರತದ ಎಲ್ಲಾ ಸೂಕ್ಷ್ಮ ಪ್ರದೇಶಗಳನ್ನೂ ಮೋಜಣಿ ಮಾಡಿ, ಗಡಿ ಗುರುತಿಸುವ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತ್ತು. ಪ್ರಪಂಚದ ಬೇರೆ ಎಲ್ಲೂ ಕಾಣದ ಸಸ್ಯ, ಪ್ರಾಣಿ, ಪಕ್ಷಿ, ಕೀಟ ಇನ್ನಿತರ ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಕಂಡು ಬರುತ್ತವೆಯಾದ್ದರಿಂದ ಸಂಪೂರ್ಣ ಪಶ್ಚಿಮಘಟ್ಟ ಪ್ರದೇಶವನ್ನೇ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲು ಶಿಪಾರಸ್ಸು ಮಾಡಿತ್ತು. ಗಾಡ್ಗಿಳ್ ಸಮಿತಿಯು ಸೇನ್ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡರೂ, ವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತಿಸಿ, ಜನವಸತಿ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಹಲವು ಸ್ತರಗಳಲ್ಲಿ ವಿಂಗಡಿಸಿ ಪ್ರಯತ್ನವನ್ನು ಮಾಡಿತು.  (ಇSZ೧), (ಇSZ೨), (ಇSZ೩), ಈ ರೀತಿಯಲ್ಲಿ ಸೂಕ್ಷ್ಮ ಪ್ರದೇಶದ ವಿಂಗಡನೆಯನ್ನು ಮಾಡಲಾಯಿತು. 

ಜೈವಿಕ ಲಕ್ಷಣಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳ ಅನನ್ಯತೆ ಮತ್ತು ಸಂಪತ್ತನ್ನು ಪರಿಗಣಿಸುವುದು. ಜೈವಿಕ ಸಂಪತ್ತನ್ನು ವರ್ಗೀಕರಣ ಮಾಡುವುದು ಹಾಗೂ ಪ್ರಬೇಧಗಳ ಲಭ್ಯತೆ, ಅಪರೂಪದ ಪ್ರಬೇಧಗಳ ಶ್ರೇಣಿಕೃತ ವರ್ಗೀಕರಣ, ಆವಾಸಸ್ಥಾನದ ಪ್ರಾಮುಖ್ಯತೆ, ಒಟ್ಟೂ ಜೀವರಾಶಿಗಳ ಉತ್ಪಾದಕತೆ, ಜೈವಿಕ ಮತ್ತು ಪಾರಿಸಾರಿಕ ಸ್ಥಿತಿಸ್ಥಾಪಕತ್ವದ ಅಂದಾಜು, ಸಾಂಸ್ಕ್ರತಿಕ ಮತ್ತು ಐತಿಹಾಸಿಕ ಮಹತ್ವಗಳು, ಜೊತೆಗೆ ಸ್ಥಳಾಕ್ರತಿಯ ವೈಶಿಷ್ಠ್ಯಗಳು, ನೈಸರ್ಗಿಕ ವಿಕೋಪಗಳು, ಕಾಡ್ಗಿಚ್ಚು ಅಲ್ಲದೆ ಈಗಾಗಲೇ ಮಾನವ ಹೊಂದಿದ ನೈಸರ್ಗಿಕ ಪಾಲಿನ ಮೌಲ್ಯಾಂಕನ ಇತ್ಯಾದಿಗಳನ್ನು ಪರಿಗಣಿಸುವುದು. ಇಲ್ಲಿ ನೈಸರ್ಗಿಕ ಪಾಲಿನ ಮೌಲ್ಯಾಂಕನ ಮಾಡುವಾಗ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಸ್ಥಳೀಕರು ಹಾಗೂ ಸಂಘ-ಸಂಸ್ಥೆಗಳ ಅಭಿಪ್ರಾಯದಂತೆ ಯಾವ ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಭಾವಿಸಲಾಗುತ್ತದೆಯೋ ಅಂತಹ ಸ್ಥಳಗಳನ್ನು ಪರಿಗಣಿಸುವುದು, ಆದರೆ ಸಮಯದ ಅಭಾವದಿಂದ ಪಶ್ಚಿಮಘಟ್ಟಗಳ ಸಂಪೂರ್ಣ ಅಧ್ಯಯನ ಮಾಡಲಾಗಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಹಿಂದಿನ ವರದಿಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ಷ್ಮ ಪ್ರದೇಶಗಳ ಪಟ್ಟಿ ತಯಾರಿಸಲಾಗಿದೆ. ಸೂಕ್ಷ್ಮ ಪ್ರದೇಶಗಳೆಂದರೆ ವೈಜ್ಞಾನಿಕ ಹಿನ್ನೆಲೆಯನ್ನು ಮಾತ್ರ ಗಮನದಲ್ಲಿರಿಕೊಂಡು ಮಾಡುವ ವಿಂಗಡನೆಯಲ್ಲ, ಇದರ ಮಾನವೀಯ ಕಾಳಜಿಯ ಪಾತ್ರವು ಬಹುಮುಖ್ಯವೆಂದು ಸಮಿತಿಯು ಪರಿಗಣಿಸಿದೆ. ಈ ನಿಟ್ಟಿನಲ್ಲಿ ಸಮಿತಿಯು ಹೆಚ್ಚಿನ ಗ್ರಾಮಪಂಚಾಯತ್‌ನಿಂದ ಬಂದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಮುಖ್ಯವಾದುದು ಎಂದರೆ ಸಿಂಧುದುರ್ಗ ಜಿಲ್ಲೆಯ ೨೫ ಹಳ್ಳಿಗಳನ್ನು ಹೊಂದಿದ ಗ್ರಾಮಪಂಚಾಯ್ತಿಯ ನಡಾವಳಿ ಹಾಗೂ ಮಹಾರಾಷ್ಟ್ರದ ದೇವರಾಯ್ ಪ್ರದೇಶ. ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳು ಸೇರಿ ಸಮಿತಿಯು ಈ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸುವುದಕ್ಕಿಂತ ಪೂರ್ವದಲ್ಲೇ ಹಲವಾರು ಸಂಶೋಧನೆಗಳನ್ನು ಶಿವಾಜಿ ವಿಶ್ವವಿದ್ಯಾಲಯ ನಡೆಸಿ ಸೂಕ್ಷ್ಮ ಪ್ರದೇಶವೆಂದು ಸ್ವಯಂಘೋಷಿತವಾಗಿತ್ತು. 

ಉದ್ದೇಶಿತ ಜನವಸತಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆ:

ಮಹಾರಾಷ್ಟ್ರ ರಾಜ್ಯ: ಲೋನಾವಾಲ-ಖಂಡಾಲ, ಮಹಾರಾಷ್ಟ್ರ ಸಹ್ಯಾದ್ರಿ, ಸಾವಂತ್‌ವಾಡಿ ಹಾಗೂ ದೋಡಾಮಾರ್ಗ್ ೨೫ ಹಳ್ಳಿಗಳು ಹಾಗೂ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತಲ ರಕ್ಷಿತ ಪ್ರದೇಶಗಳು

ಗೋವಾ ರಾಜ್ಯ: ಸಹ್ಯಾದ್ರಿ, ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತಲ ರಕ್ಷಿತ ಪ್ರದೇಶಗಳು.

ಕರ್ನಾಟಕ ರಾಜ್ಯ: ಸಹ್ಯಾದ್ರಿ, ಕೊಡಚಾದ್ರಿ, ಕೊಡಗು ಮತ್ತು ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತಲ ರಕ್ಷಿತ ಪ್ರದೇಶಗಳು

ಕಸ್ತೂರಿ ರಂಗನ್ ವರದಿ ಎರಡನೇ ಭಾಗ: ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಸಮಿತಿ ಪಡೆಯಿತು. ಗಣಿ, ಕ್ವಾರಿ, ಮರಳು ಗಣಿಗಾರಿಕೆ, ಭೂಮಿಯನ್ನು ಹೊಂದಿದವರು, ಸಂಚಾರ ವಿಭಾಗ, ಜಲವಿದ್ಯುತ್ ಯೋಜನೆ, ಕೃಷಿ, ಪ್ರವಾಸ, ಅರಣ್ಯ ಇತ್ಯಾದಿಗಳ ಕುರಿತ ಇಲಾಖೆಗಳಿಂದ ವಿಸೃತ ಅಭಿಪ್ರಾಯವನ್ನು ಪಡೆಯಲಾಯಿತು. ಸಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ತಕ್ಕುದಾದ ಅಗತ್ಯ ಕಾನೂನು ರೂಪಿಸಲು ಸಲಹೆ ಮಾಡಿದೆ. ಸೂಕ್ಷ್ಮ ಪ್ರದೇಶ ೧ ದಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡದಿರಲು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದ್ದರೂ ಇತರೆ ರಾಜ್ಯಗಳು ಈ ಸಲಹೆಯನ್ನು ತಳ್ಳಿ ಹಾಕಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ವಾರಿ ಮತ್ತು ಮರಳು ಗಣಿಗಾರಿಕೆಯನ್ನು ಯಾವುದೇ ರಾಜಿಯಿಲ್ಲದೆ ನಡೆಸಬಹುದಾದ ತೀರ್ಮಾನವನ್ನು ಮಹಾರಾಷ್ಟ್ರ, ಕೇರಳ ಮತ್ತು ಗೋವಾ ತೆಗೆದುಕೊಂಡಿವೆ. ಹಾಗೂ ಈ ಮೂರು ರಾಜ್ಯಗಳು ಸಂಚಾರ ವ್ಯವಸ್ಥೆ ಸಂಬಂಧಿಸಿದಂತೆ ಸಮಿತಿ ನೀಡಿದ ಸಲಹೆಗಳನ್ನೂ ತಿರಸ್ಕರಿಸಿವೆ. ಆದರೆ ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಗೆ ಸಮ್ಮತಿ ನೀಡಿವೆ. ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ಜಲವಿದ್ಯುತ್ ಯೋಜನೆಗಳ ನಿರ್ಭಂದಕ್ಕೆ ಅಸಮ್ಮತಿ ಸೂಚಿಸಿವೆ. ಸಮಿತಿಯ ನದಿಜೋಡಣೆ ನಿಷೇಧಕ್ಕೂ ಈ ಮೂರು ರಾಜ್ಯಗಳು ಬಲವಾದ ವಿರೋಧ ವ್ಯಕ್ತ ಪಡಿಸಿವೆ. ಆದರೆ ನೀರಿಗೆ ಸಂಬಂಧಿಸಿದ ಅನೇಕ ಸಲಹೆಗಳನ್ನು ಮಹಾರಾಷ್ಟ್ರ ಮತ್ತು ಕೇರಳ ಒಪ್ಪಿಕೊಂಡಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ  ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಹಂತ-ಹಂತವಾಗಿ ಕಡಿಮೆ ಮಾಡುವ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಪ್ರಸ್ತಾವನೆಯನ್ನು ಒಪ್ಪಿಕೊಂಡಿವೆ. ಪರಿಸರ ಪ್ರವಾಸೋಧ್ಯಮವನ್ನು ಇನ್ನೂ ಹೆಚ್ಚಿನ ಪರಿಸರ ಸ್ನೇಹಿ ಉದ್ಯಮವನ್ನಾಗಿ ರೂಪಿಸಲು ಕರ್ನಾಟಕ ಮತ್ತು ಕೇರಳ ಒಪ್ಪಿಕೊಂಡಿವೆ. ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಹಾಗೂ ಕಲುಷಿತ ಪರಿಸರವನ್ನು ಉತ್ತಮವಾಗಿ ರೂಪಿಸುವ ಸಲಹಗೆ ಕರ್ನಾಟಕ ಮತ್ತು ಕೇರಳಗಳು ಒಪ್ಪಿಗೆ ಸೂಚಿಸಿವೆ. ಕೇರಳವು ವಿಷಯುಕ್ತ ತ್ಯಾಜ್ಯಗಳನ್ನು ಹೊರಸೂಸುವ ಕಾರ್ಖಾನೆಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ಸ್ಥಾಪಿಸಲು ನಿಷೇಧ ಹೇರಲು ಸಮ್ಮತಿಸಿದೆ. ಅತಿದೊಡ್ಡ ಕಟ್ಟಡ ನಿರ್ಮಾಣ ನಿಷೇಧಕ್ಕೆ ಕೇರಳ ತನ್ನ ಅಸಮ್ಮತಿ ಸೂಚಿಸಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕುಲಾಂತರಿ ತಳಿಯನ್ನು ಘಟ್ಟಪ್ರದೇಶದಲ್ಲಿ ನಿಷೇಧ ಹೇರುವುದಕ್ಕೆ ಸಮ್ಮತಿ ಸೂಚಿಸಿವೆ. ಪಶ್ಚಿಮಘಟ್ಟ ಪರಿಸರ ಸಮಿತಿಯನ್ನು ರಚಿಸುವ ಸಲಹೆಯನ್ನು ಎಲ್ಲಾ ಆರು ರಾಜ್ಯಗಳು ತಿರಸ್ಕರಿಸಿವೆ.

(ಮುಂದುವರೆಯುತ್ತದೆ. . .)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x