ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೪): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕಾದರೆ ಈ ಕೆಳಗಿನ ಕೆಲ ಅಂಕಿ-ಅಂಶಗಳನ್ನು ಗಮನಿಸಬೇಕು. ಭಾರತಾದ್ಯಂತ ಕಂಡು ಬರುವ ೪೦೦೦ ಜಾತಿಯ ಪುಷ್ಪವೈವಿಧ್ಯದಲ್ಲಿ ೧೦೮೦ ಜಾತಿಗಳು ಈ ಘಟ್ಟಪ್ರದೇಶದಲ್ಲಿವೆ. ದೇಶದಲ್ಲಿರುವ ೬೪೫ ನಿತ್ಯಹರಿಧ್ವರಣ ಜಾತಿಯ ಮರಗಳಲ್ಲಿ ೩೬೨ ಜಾತಿಯ ಮರಗಳು ಇಲ್ಲಿವೆ. ೧೦೦೦ ಜಾತಿಯ ನೆಲಮಟ್ಟದ ಪೊದೆ-ಬಳ್ಳಿಗಳ ಪ್ರಬೇಧಗಳಲ್ಲಿ ೬೮೨ ಪ್ರಭೇದಗಳು ಘಟ್ಟಗಳಲ್ಲಿವೆ ಹಾಗೂ ಇದರಲ್ಲಿ ೨೮೦ ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರ ಲಭ್ಯವಿದೆ. ಅಕಶೇರುಕ ಪ್ರಬೇಧಗಳ ಒಟ್ಟು ೩೫೦ರಲ್ಲಿ ೭೦ ಪ್ರಬೇಧಗಳು ಪ್ರಪಂಚದ ಬೇರೆ ಎಲ್ಲೂ ಇಲ್ಲ. ಇರುವೆಗಳ ೩೩೦ ಪ್ರಬೇಧಗಳಲ್ಲಿ ೩೬ ಜಾತಿಯವು ಘಟ್ಟಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಚಿಟ್ಟೆಗಳ ೧೭೪ ರಲ್ಲಿ ೭೦ ಇಲ್ಲಿ ಮಾತ್ರ ಕಂಡು ಬರುತ್ತವೆ. ಮೀನುಗಳ ೨೮೮ ಪ್ರಬೇಧಗಳಲ್ಲಿ ೧೧೮ ಪ್ರಬೇಧಗಳು ಇಲ್ಲಿ ಮಾತ್ರ ಲಭ್ಯ. ಉಭಯವಾಸಿಗಳ ೨೨೦ ಪ್ರಬೇಧಗಳಲ್ಲಿ ೧೫೪ ಪ್ರಬೇಧಗಳು ಬೇರೆಲ್ಲೂ ಇಲ್ಲ. ಹಾಗೆಯೇ ಇತ್ತೀಚಿಗೆ ಆವಿಷ್ಕಾರಗೊಂಡ ನಾಸಿಕಬ್ಯಾಕ್ಟ್ರಾಚಸ್ ಸಹ್ಯಾದ್ರೆನ್ಸೀಸ್ ಎಂಬ ಕಪ್ಪೆ ಪ್ರಬೇಧವು ಗೊಂಡವಾನ ಕಾಲದ ವಂಶಾವಳಿಗೆ ತಳಕು ಹಾಕಿಕೊಂಡಿದೆ. ಇಂತಹ ಅಪರೂಪದ ಜೀವಿವೈವಿಧ್ಯ ಪ್ರಪಂಚದ ಬೇರೆಲ್ಲೂ ಇಲ್ಲ. ಹಾಗೆಯೇ ಸರಿಸೃಪಗಳ ೨೨೫ರ ಪೈಕಿ ೧೬೦ ಇಲ್ಲಿಗೆ ಮಾತ್ರ ಸೀಮಿತವಾಗಿವೆ. ಅಲ್ಲದೆ ೫೦೦ ಪಕ್ಷಿ ಪ್ರಬೇಧಗಳು ೧೨೦ ಸ್ತನಿ ಪ್ರಬೇಧಗಳು ಇಲ್ಲಿವೆ. ಅಲ್ಲದೆ ಪಶ್ಚಿಮಘಟ್ಟಗಳು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕಡವೆ, ಜಿಂಕೆ ಹೀಗೆ ವೈವಿಧ್ಯಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಘಟ್ಟಗಳ ಕಾಳುಮೆಣಸು, ಏಲಕ್ಕಿ, ಮಾವು, ಹಲಸು, ಬಾಳೆಗಳು ರೈತರ ಕೃಷಿಭೂಮಿಗೆ ಬಂದಿವೆ. ಈ ಜೈವಿಕ ಸಂಪತ್ತಿನಿಂದಾಗಿ ಲಕ್ಷಾಂತರ ರೈತರ ಬದುಕು ಹಸನಾಗಿದೆ. 

ಈ ವೈವಿಧ್ಯಗಳು ಕಳೆದ ಶತಮಾನದಿಂದ ಕಡಿಮೆಯಾಗುತ್ತಾ ಬರುತ್ತಿದೆ. ಜೈವಿಕ ಸಂಪತ್ತನ್ನು ಕಾಪಿಟ್ಟುಕೊಂಡು ಬರುವ ಸಲುವಾಗಿ ದೇವರ ಕಾಡು, ಕೆರೆ ಇತ್ಯಾದಿಗಳು ಅಲ್ಪಮಟ್ಟಿಗೆ ಸಹಕಾರಿಯಾಗಿವೆ. ಕೆಲವು ಪ್ರದೇಶಗಳಲ್ಲಿ ಮಂಗನನ್ನು ಹನುಮಂತನ ಅವತಾರವೆಂದು ನಂಬಿದ್ದರಿಂದ ಅವುಗಳ ಸಂತತಿ ಉಳಿದುಕೊಂಡಿದೆ. ನವಿಲು ದತ್ತಾತ್ರೆಯನ ವಾಹನ ಎಂದು ಕೆಲವು ಜನಾಂಗಗಳು ನಂಬುತ್ತವೆ. ಅಲ್ಲದೆ ಸರ್ಕಾರವೂ ಕೂಡ ವನ್ಯಜೀವಿ ಮತ್ತು ಸಂಪತ್ತನ್ನು ರಕ್ಷಿಸುವ ಸಲುವಾಗಿ ರಕ್ಷಿತಾರಣ್ಯ, ಅಭಯಾರಣ್ಯ, ಹುಲಿಯೋಜನೆ ಇತ್ಯಾದಿಗಳನ್ನು ಹಮ್ಮಿಕೊಂಡಿದೆಯಾದರೂ ದುರದೃಷ್ಟವೆಂದರೆ ಮಾನವ-ವನ್ಯಜೀವಿಗಳ ಸಂಘರ್ಷ ದಿನೇ-ದಿನೇ ಹೆಚ್ಚುತ್ತಿದೆ. 

ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿ ಸಾಂಪ್ರದಾಯಿಕವಾದ ಕೃಷಿ-ಕಾಯಕಗಳೆಂದರೆ, ಭತ್ತ, ಕಿರುಧಾನ್ಯಗಳು, ಅಡಕೆ, ತೆಂಗು, ಮಾವು, ಹಲಸು ಇತ್ಯಾದಿಗಳು. ಇವುಗಳಿಗೆ ಪೂರಕವಾಗಿ ಹೈನುಗಾರಿಕೆಯನ್ನು ವ್ಯಾಪಕವಾಗಿ ನಡೆಸಲಾಗುತ್ತದೆ. ಐರೋಪ್ಯ ರಾಷ್ಟ್ರಗಳ ಪ್ರಭಾವದಿಂದಾಗಿ ಕಾಫಿ, ಟಿ, ರಬ್ಬರ್, ಗೇರು ಇತ್ಯಾದಿಗಳು ಘಟ್ಟಗಳನ್ನು ನಾಶ ಮಾಡಿ ಪರಿಚಯಿಸಲಾಯಿತು. ಕಾಳುಮೆಣಸು, ಏಲಕ್ಕಿಗಳು ಘಟ್ಟಗಳ ಸ್ವಾಭಾವಿಕ ಪರಿಸರದಲ್ಲಿ ಇರುತ್ತಿದ್ದವಾದರೂ, ಇವುಗಳನ್ನು ಲಾಭದ ಬೆಳೆಗಳೆಂದು ತಿಳಿದ ಮೇಲೆ ವ್ಯಾಪಕ ಕೃಷಿಯನ್ನು ಮಾಡಲಾಯಿತು. ಮರಾಠರ ಕಾಲದಲ್ಲೇ ತೇಗವನ್ನು ಬೆಳೆಯಲಾಗುತ್ತಿದ್ದರೂ, ಬ್ರಿಟೀಷರು ಭಾರತಕ್ಕೆ ಬಂದ ಮೇಲೆ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವೆಂದರೆ ಪಶ್ಚಿಮಘಟ್ಟಗಳು. ಇಲ್ಲಿನ ಮಿಣಿಸುತ್ತಿನ ಮರಗಳನ್ನು ಕಡಿದು, ರೈಲಿನ ಮೂಲಕ, ಹಡಗಿನ ಮೂಲಕ ತಮ್ಮ ದೇಶಕ್ಕೆ ಸಾಗಿಸಿದರು, ರೈಲ್ವೆ ಹಳಿ ನಿರ್ಮಿಸಲು ಅಪಾರವಾದ ಕಾಡು ಕಡಿಯಲಾಯಿತು. ಆಗಿನ ಕಾಲದಲ್ಲಿ ಆಯಾ ಗ್ರಾಮಗಳಿಗೆ ಸೇರಿದ ಅರಣ್ಯ ಪ್ರದೇಶದ ಮೇಲುಸ್ತುವಾರಿಯನ್ನು ಸ್ಥಳೀಯರೇ ಅರಣ್ಯ ಸಮಿತಿಗಳನ್ನು ರಚಿಸಿಕೊಂಡು ನಿರ್ವಹಿಸುತ್ತಿದ್ದರು. ಆಂಗ್ಲರು ಬಂದು ಅರಣ್ಯಗಳು ಸರ್ಕಾರದ ಆಸ್ತಿಯೆಂದು ಘೋಷಿಸಿ ಲೂಟಿಗೆ ಶುರುವಿಟ್ಟುಕೊಂಡರು. 

೧೯೫೦-೮೦ರವರೆಗೆ ಅರಣ್ಯದ ಮೇಲೆ ವಿಪರೀತ ಒತ್ತಡವುಂಟಾಯಿತು. ಪೇಪರ್, ಬೆಂಕಿಪೊಟ್ಟಣ, ಫ್ಲೈವುಡ್, ಪಾಲಿಫೈಬರ್ ಕಾರ್ಖಾನೆಗಳು ಸ್ಥಾಪನೆಯಾಗಿ ಪಶ್ಚಿಮಘಟ್ಟಗಳ ಮೆದು ಮರಗಳ ಬಳಕೆ ಹೆಚ್ಚಾಯಿತು. ಇಷ್ಟರಲ್ಲೇ ಸರ್ಕಾರಿ ಕೃಪಾಪೋಷಿತ ಏಕಜಾತಿ ನೆಡುತೋಪುಗಳ ಕಲ್ಪನೆ ಗಾಢವಾಯಿತು. ಎಲ್ಲೆಂದರಲ್ಲಿ ನೈಸರ್ಗಿಕ ಅರಣ್ಯಗಳನ್ನು ಸವರಿ, ಬೆಂಕಿ ಹಚ್ಚಿ ಸುಟ್ಟು, ಬುಲ್ಡೋಜರ್ ಹೊಡೆದು ಏಕಜಾತಿಯ ಅಕೇಶಿಯಾ, ನೀಲಗಿರಿ ಮರಗಳನ್ನು ಇಲಾಖಾವತಿಯಿಂದಲೇ ಬೆಳೆಸಲಾಯಿತು. ಅಳಿದುಳಿದ ಅರಣ್ಯಗಳಿಗೆ ಆಣೆಕಟ್ಟುಗಳಿಂದ ಮುಳುಗುವು ಭೀತಿಯುಂಟಾಯಿತು. ಜನಸಂಖ್ಯೆ ಹೆಚ್ಚಿದ್ದರಿಂದ ಕೃಷಿ ಚಟುವಟಿಕೆಗಳಿಗೂ ಅಪಾರ ಪ್ರಮಾಣದ ಘಟ್ಟ ಪ್ರದೇಶಗಳು ನಾಶವಾದವು. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯೂ ಕೂಡ ಅದಿರಿಗಾಗಿ ಈ ಘಟ್ಟಪ್ರದೇಶವನ್ನು ಅವಲಂಬಿಸಿತ್ತು. ಕಿರುಅರಣ್ಯ ಉತ್ಪನ್ನಗಳಿಗೂ ಅತೀವ ಬೇಡಿಕೆಯುಂಟಾಗಿ ಒತ್ತಡ ಇನ್ನಷ್ಟು ಹೆಚ್ಚಾಯಿತು. ಸಾವಿರಾರು ಸಾಮಿಲ್‌ಗಳು ತಲೆಯೆತ್ತಿದವು. ಸುಸ್ಥಿರ ಅಭಿವೃದ್ಧಿಯೆಂಬ ಕಲ್ಪನೆ ಸರ್ಕಾರಗಳಿಗೆ ಇರಲಿಲ್ಲ.

೧೯ನೇ ಶತಮಾನದ ಆದಿಯಿಂದ ಮಧ್ಯದವರೆಗೂ ವಾಹನಗಳು ಇಲ್ಲದ ಕಾಲದಲ್ಲಿ ಪಶ್ಚಿಮಘಟ್ಟಗಳು ಸುರಕ್ಷಿತವಾಗಿದ್ದವು. ಅಲ್ಲಿ ವಾಸಿಸುವ ವಿರಳ ಜನಸಂಖ್ಯೆ ಮುಖ್ಯವಾಗಿ ಘಟ್ಟಗಳನ್ನೇ ಆಶ್ರಯಿಸಿದ್ದರೂ ಪಶ್ಚಿಮಘಟ್ಟಗಳಿಗೆ ಧಕ್ಕೆಯಾಗಿರಲಿಲ್ಲ. ಘಟ್ಟಗಳಲ್ಲಿ ಸಂಚಾರ ವ್ಯವಸ್ಥೆ ದುಸ್ತರವಾಗಿದ್ದು, ಏರು-ಇಳಿ ಪ್ರದೇಶಗಳಲ್ಲಿ ಸ್ಥಳೀಯವಾದ ಸಾಗಾಣಿಕಾ ತಂತ್ರವನ್ನೆ ಬಳಸುತ್ತಿದ್ದರು. ಯಾವಾಗ ರೈಲು-ಬಸ್ಸು-ಲಾರಿಗಳು ಈ ಪ್ರದೇಶವನ್ನು ಆಳಲು ತೊಡಗಿದವೋ ಆಗಿನಿಂದ ಘಟ್ಟಗಳ ವೈವಿಧ್ಯಮಯ ವಾತಾವರಣ ಕ್ಷೀಣವಾಗುತ್ತಾ ಬಂದಿತು. ಸರ್ಕಾರಗಳು ಮತ್ತು ಇಲಾಖೆಯವರು ಈ ಅಪಾರವಾದ ಕಾಡಿನ ಸಂಪತ್ತು ಅಕ್ಷಯವಾದದು ಇದನ್ನು ಖಾಲಿ ಮಾಡಲು ಸಾಧ್ಯವೇ ಇಲ್ಲವೆಂಬಂತಾ ಧೋರಣೆ ತಳೆದಿದ್ದರು. 

ಕಸ್ತೂರಿ ರಂಗನ್ ವರದಿ: ಈ ಸಮಿತಿಯು ಪಶ್ಚಿಮಘಟ್ಟಗಳನ್ನು ಎರಡು ಭಾಗಗಳನ್ನಾಗಿ ವಿಂಗಡಿಸುವ ಸಲಹೆ ನೀಡಿದೆ. ನೈಸರ್ಗಿಕ ಭೂಪ್ರದೇಶಗಳು ಹಾಗೂ ಸಾಂಸ್ಕ್ರತಿಕ ಭೂಪ್ರದೇಶಗಳು. ನೈಸರ್ಗಿಕ ಭೂಪ್ರದೇಶವೆಂದರೆ, ಸೀಮಿತ ಜೈವಿಕ ವೈವಿಧ್ಯಗಳನ್ನೊಳಗೊಂಡ ಜನವಸತಿ ಪ್ರದೇಶಗಳು ಹಾಗೂ ಸಾಂಸ್ಕ್ರತಿಕ ಭೂಪ್ರದೇಶಗಳೆಂದರೆ, ಅತಿಹೆಚ್ಚು ಜೈವಿಕ ವೈವಿಧ್ಯಗಳನ್ನು ಹೊಂದಿದ ಪ್ರದೇಶ ಹಾಗೂ ಇಲ್ಲಿಯ ಎಲ್ಲಾ ಅಭಿವೃದ್ದಿಯ ಮೂಲಗಳು ಪಶ್ಚಿಮಘಟ್ಟಗಳಾಗಿವೆ. ಆದ್ದರಿಂದ, ಸಮಿತಿಯು ಈ ಪ್ರದೇಶಗಳ ಅಭಿವೃದ್ದಿಗೆ ಪ್ರತ್ಯೇಕವಾದ ನಿಯಮಗಳು ರೂಪಿಸುವುದು ಹಾಗೂ ಅನುದಾನಗಳನ್ನು ನೀಡುವ ಮೂಲಕ ಪರಿಸರಸ್ನೇಹಿ ಅಭಿವೃದ್ದಿಗೆ ಒತ್ತು ನೀಡಬೇಕು ಎಂಬ ಸಲಹೆ ನೀಡಿದೆ. ಅಲ್ಲದೆ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೬ ರಾಜ್ಯಗಳ ನಿಸರ್ಗಾಧಾರಿತ ಅಭಿವೃದ್ಧಿ ಪ್ರದೇಶಗಳ ಅರಣ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಹಾಯ ಪಡೆಯುವುದು. ಈ ಮೂಲಕ ಈ ಪ್ರದೇಶಗಲ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಒತ್ತು ನೀಡುವುದು. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರಗಳಾಗಲಿ ಅಥವಾ ಯಾವುದಾದರೂ ಸಂಘ-ಸಂಸ್ಥೆಗಳಾಗಲಿ ನಿರ್ವಹಣೆ ಮಾಡುವ ಹೊಣೆ ಹೊರುವುದು. ಸೂಕ್ಷ್ಮಪ್ರದೇಶದ ಪಾರಿಸಾರಿಕ ಸೇವೆಗಳನ್ನು ಗಣನೆಗೆ ತೆಗೆದುಕೊಂಡು, ಈ ಸೇವೆಗಳಿಗೂ ಹಣಸಂದಾಯ ಮಾಡುವ ಕ್ರಮ ಕೈಗೊಳ್ಳುವುದು ಹಾಗೂ ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಉತ್ತೇಜಿಸುವುದು. ಕೇಂದ್ರ ಯೋಜನಾ ಆಯೋಗವೂ ಕೂಡ ಪಶ್ಚಿಮಘಟ್ಟಗಳ ಸುಸ್ತಿರ ಅಭಿವೃದ್ದಿಗಾಗಿ ಪ್ರತ್ಯೇಕ ಹಣಕಾಸು ವ್ಯವಸ್ಥೆಯನ್ನು ಮೀಸಲಿಡುವುದು. ಹದಿನಾಲ್ಕನೇ ಹಣಕಾಸು ಆಯೋಗವು ಕೂಡ ಪಶ್ಚಿಮಘಟ್ಟಗಳ ಸುಸ್ತಿರ ಅಭಿವೃದ್ದಿಗೆ ಹಾಗೂ ಅಲ್ಲಿನ ಪಾರಿಸಾರಿಕ ಸೇವೆಗೆ ಸೂಕ್ತ ಹಣಕಾಸು ಹಂಚಿಕೆಯನ್ನು ನೇರವಾಗಿ ಸ್ಥಳೀಯರಿಗೆ ನೀಡುವ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಭಿವೃದ್ದಿಪಡಿಸಿದ ರಾಜ್ಯಾಧಾರಿತ ಪರಿಸರ ಸಾಮರ್ಥ್ಯ ಸ್ಯೂಚಂಕವನ್ನು ಗಮನದಲ್ಲಿರಿಸಿಕೊಂಡು ಯೋಜನಾ ಆಯೋಗವು ಅತಿಹೆಚ್ಚಿನ ಹಣಕಾಸಿನ ನೆರವನ್ನು ನೇರವಾಗಿ ಸ್ಥಳೀಯರಿಗೆ ನೀಡಲು ಕ್ರಮಕೈಗೊಳ್ಳುವುದು. ಹನ್ನೆರಡನೇ ಹಣಕಾಸು ಆಯೋಗ ರಚಿಸಿದ ಜಲಾನಯನ ಅಭಿವೃದ್ದಿಯಲ್ಲದೇ, ಆವಾಸಸ್ಥಾನಗಳ ಸೂಕ್ಷ್ಮತೆ ಹಾಗೂ ಜನರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು, ಸಂರಕ್ಷಣೆಗೆ ಮಹತ್ವ ನೀಡುವುದು, ಹೀಗೆ ಸ್ಥಳೀಯರ ಸಹಭಾಗಿತ್ವದಿಂದಲೇ ಎಲ್ಲಾ ಯೋಜನೆಗಳನ್ನು ನಿರ್ಮಿಸುವುದು ಹಾಗೂ ಇದಕ್ಕಾಗಿ ಪಶ್ಚಿಮಘಟ್ಟ ಅಭಿವೃದ್ದಿ ಯೋಜನೆಗೆ ೧೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದು ಮತ್ತು ಈ ಪ್ರದೇಶವನ್ನು ವಿಶೇಷ ಸ್ಥಾನವನ್ನು ನೀಡಿ ೯೦:೧೦ ರ ಅನುಪಾತದಂತೆ ಹಣ ಬಿಡುಗಡೆ ಮಾಡುವುದು. ಸಮಿತಿಯು ನೀಡಿದ ವರದಿಯ ಅನುಷ್ಠಾನವನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲೆ ನಡೆಸುವುದು, ಅಲ್ಲದೆ ಕಾಲ-ಕಾಲಕ್ಕೆ ವರದಿಯ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುವುದು. ಅರಣ್ಯ ನಿರ್ವಹಣೆ ಜೊತೆಯಲ್ಲಿ ಅಭಿವೃದ್ದಿ ಪಡಿಸುವಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಸ್ಥಳೀಯರಿಗೆ ಆರ್ಥಿಕ ಪ್ರಯೋಜನವನ್ನು ಒದಗಿಸುವಲ್ಲಿ ಅರಣ್ಯ ಇಲಾಖೆಗೆ ಸೂಕ್ತ ಕಾನೂನು ಮಾರ್ಪಾಡು ಮಾಡುವುದು. ಖಾಸಗಿ ಅರಣ್ಯ ಉತ್ಪನ್ನಗಳು ಹಾಗೂ ಸಹಭಾಗಿತ್ವದ ಅರಣ್ಯ ಉತ್ಪನ್ನಗಳ ಸಾಗಾಣಿಕೆ ಇರುವ ಕಾನೂನು ಅಡಚಣೆಗಳನ್ನು ಪರಾಂಬರಿಸಿ ಸರಿಪಡಿಸುವುದು. ಸುಸ್ಥಿರ ಕೃಷಿಯನ್ನು ಮಾಡುವಲ್ಲಿ ಸಾವಯವ ಕೃಷಿಗೆ ಒತ್ತು ನೀಡುವುದು. ಸೂಕ್ಷ್ಮ ಪ್ರದೇಶದ ಪರಿಸರ ಪ್ರವಾಸಿ ತಾಣಗಳಲ್ಲಿ ಪರಿಸರಕ್ಕೆ ಧಕ್ಕೆ ಬಾರದ ಹಾಗೆ ನಿಯಮಿಸಿದ ಕಾನೂನುಗಳನ್ನು ಬಿಗಿಗೊಳಿಸುವುದು. ಸೂಕ್ಷ್ಮಪ್ರದೇಶದ ಪ್ರವಾಸಿತಾಣಗಳ ನಿರ್ವಹಣೆಯನ್ನು ಸ್ಥಳೀಯರಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು. 

ಪಶ್ಚಿಮಘಟ್ಟಗಳ ಪರಿಸರ ನಿರ್ವಹಣೆಯಲ್ಲಿ, ಸಂರಕ್ಷಣೆ, ರಕ್ಷಣೆ ಮತ್ತು ಮರುಪೂರಣ ಹಾಗೂ ಸುಸ್ಥಿರ ಅಭಿವೃದ್ದಿ ಇವುಗಳು ಬಹುಮುಖ್ಯವಾದ ಅಂಶಗಳು. ಇವುಗಳನ್ನು ಪರಿಗಣಿಸಿ, ದೀರ್ಘಕಾಲಿನ ಪರಿಹಾರೋಪಾಯಗಳತ್ತ ಚಿಂತಿಸಬೇಕಾಗಿದೆ. ಪಶ್ಚಿಮಘಟ್ಟಗಳಲ್ಲಿ ಸುಸ್ಥಿರ ಅಭಿವೃದ್ದಿ ದೇಶದ ಇತರ ಪ್ರದೇಶಗಳಿಗೆ ಮಾದರಿಯಾಗುವಂತಿರಬೇಕು. ತಾಪಮಾನ ಏರಿಕೆಯು ಜಾಗತಿಕ ಸಮಸ್ಯೆಯಾಗಿದ್ದು, ಇದರಿಂದ ಪಶ್ಚಿಮಘಟ್ಟಗಳೂ ಹೊರತಾಗಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು, ಮಣ್ಣು ಸವಕಳಿ, ನೀರಿನ ಅತಿಯಾದ ಬಳಕೆ ಇತ್ಯಾದಿಗಳಿಂದ ಈ ಪ್ರದೇಶವು ಜರ್ಝರಿತವಾಗಿದ್ದು, ಇದಕ್ಕಾಗಿ ಮರು ಅರಣ್ಯ ಸೃಷ್ಟಿ ಮಾಡುವುದು ಸೂಕ್ತವಾಗಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ಬರಹ ತುಂಬಾ ಚೆನ್ನಾಗಿದೆ. ನೀವು ಒದಗಿಸಿದ ಅಂಕಿ ಅಂಶಗನ್ನು ಓದಿದಾಗ ಖುಷಿಯಾಗುತ್ತದಾದರೂ, ಎಷ್ಟೋ ಪ್ರಬೇಧಗಳು ನಾಶವಾಗುತ್ತಿರುವುದನ್ನು ಓದಿದಾಗ ಅಷ್ಟೇ ಕಳವಳವಾಗುತ್ತದೆ. ನಮ್ಮ ಹಿರಿಯರು ಗಿಡ,ಮರ, ಪ್ರಾಣಿಗಳನ್ನು ದೇವರು ಹಾಗೂ ದೇವರ ವಾಹನಗಳನ್ನಾಗಿ ಬಿಂಬಿಸಿದ್ದು ಅವುಗಳ ರಕ್ಷಣೆಗೆ ಅಲ್ಲವೇ! ಬುದ್ಧಿವಂತರೆಂದುಕೊಂಡಿರುವ(?) ಇಂದಿನ ಪೀಳಿಗೆಯ ನಾವು ಅದನ್ನೆಲ್ಲ ಮೂಢ ನಂಬಿಕೆಯೆಂದು ಕರೆದು, ಅವುಗಳ ನಾಶಕ್ಕೆ ಕಾರಣವಾಗುತ್ತಿರುವುದು ನಿಜವಾದ ಮೂಢತನ!    

1
0
Would love your thoughts, please comment.x
()
x