ಮುಂದುವರೆದಿದೆ. . .
(ಮಾಧವ ಗಾಡ್ಗಿಳ್ ವರದಿಯು ೫೭೨ ಪುಟಗಳನ್ನು ಹೊಂದಿದ್ದು, ಅದೇ ಕಸ್ತೂರಿರಂಗನ್ ವರದಿಯು ಬರೀ ೧೫೨ ಪುಟಗಳನ್ನು ಹೊಂದಿದೆಯಾದ್ದರಿಂದ, ಮಾಧವ ಗಾಡ್ಗಿಳ್ ವರದಿಯು ವಿಸೃತವಾಗಿ ವ್ಯಾಖ್ಯಾನಿಸಿದಂತೆ ತೋರಬಹುದು, ಮಾಹಿತಿಗಳ ಅಗಾಧ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಓದುಗರು ಸಹಕರಿಸಬೇಕು)
ಬೆಂಗಳೂರಿನಲ್ಲಿ ೩೦ನೇ ಮಾರ್ಚ್ ೨೦೧೦ರಂದು ನಡೆದ ಸಭೆಯ ನಂತರದಲ್ಲಿ ಪ್ರೊ:ಮಾಧವ ಗಾಡ್ಗಿಳ್ ಸಮಿತಿ ರಚನೆಯಾಯಿತು. ನಂತರದಲ್ಲಿ ಈ ಸಮಿತಿಯು ೧೪ ಸಭೆಗಳನ್ನು ನಡೆಸಿ ನಿರ್ಣಾಯಕ ಸಭೆಯನ್ನು ೧೬-೧೭ ಆಗಸ್ಟ್ ೨೦೧೧ರಂದು ನಡೆಸಿತು. ಇದಕ್ಕೂ ಪೂರ್ವದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ನಾಗರೀಕ ಸಮಾಜ ಹಾಗೂ ತಜ್ಞರ ಜೊತೆ ಸೇರಿ ೭ ಉನ್ನತ ಮಟ್ಟದ, ಹಾಗೂ ೪೦ ಸಾಮಾನ್ಯ ಸಭೆಯನ್ನು ನಡೆಸಿ ೧೪ ಬಾರಿ ಕ್ಷೇತ್ರ ವೀಕ್ಷಣೆ ನಡೆಸಿತು. ಇದರ ಜೊತೆಯಲ್ಲಿ ಜನರಿಗೆ ಸುಲಭವಾಗಿ ಸಮಿತಿಯ ಮಾಹಿತಿಗಳನ್ನು ಒದಗಿಸಲು ಸಾಮಾಜಿಕ ಜಾಲತಾಣವನ್ನು ಆರಂಭಿಸಿತು. ಅತ್ಯಂತ ಸವಾಲಿನಿಂದ ಕೂಡಿದ ಈ ಜವಾಬ್ದಾರಿಯನ್ನು ಸಮಿತಿ ವಹಿಸಿಕೊಂಡು ೧೨೯೦೩೭ ಚ.ಕಿ.ಮಿ. ಪ್ರದೇಶದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟಗಳ ಅಧ್ಯಯನ ನಡೆಸಿ, ಈಗಾಗಲೇ ಶ್ರೀ ಪ್ರಣಭ ಸೇನ್ ಸಮಿತಿ ಶಿಪಾರಸ್ಸು ಮಾಡಿದ ಕೆಲಸ-ಕಾರ್ಯಗಳನ್ನು ಕೈಗೆತ್ತಿಕೊಂಡಿತು. ಇದರಲ್ಲಿ ಮುಖ್ಯವಾದ ಕೆಲಸವೆಂದರೆ, ಪಶ್ಚಿಮಘಟ್ಟಗಳ ನಿಖರವಾದ ವ್ಯಾಪ್ತಿಯನ್ನು ಗುರುತಿಸುವುದಾಗಿತ್ತು. ೧೯೮೬ರ ಪರಿಸರ ಸಂರಕ್ಷಣೆ ಕಾನೂನಿಗೆ ಅನ್ವಯವಾಗುವಂತೆ ಸೂಕ್ಷ್ಮಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಲು ಅನುಕೂಲವಾಗುವಂತೆ ಒಂದು ಪ್ರತ್ಯೇಕ ಸಾಫ್ಟ್‌ವೇರ್ ತಯಾರಿಸಿ, ಅಂಕಿ-ಅಂಶಗಳನ್ನು ೨೫ನೇ ಜನವರಿ ೨೦೧೧ರಂದು ಸಾರ್ವಜನಿಕವಾಗಿ ಕರಂಟ್ ಸೈನ್ಸ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಯಿತು. ಪಾರಿಸಾರಿಕ ದೃಷ್ಟಿಕೋನದಿಂದ ಪಶ್ಚಿಮಘಟ್ಟಗಳನ್ನು ಗುರುತಿಸುವ ಪ್ರಯತ್ನ ಮಾಡಲಾಯಿತು. ಹೆಸರೇ ಸೂಚಿಸುವಂತೆ ಪಶ್ಚಿಮಘಟ್ಟವೆಂದರೆ ಗುಜರಾತಿನ ತಪಿ ನದಿ ಪ್ರದೇಶದಿಂದ ಕನ್ಯಾಕುಮಾರಿಯವರೆಗೆ (ಪಾಲಕ್ಕಾಡ್ ಪ್ರದೇಶ ಹೊರತುಪಡಿಸಿ) ಎಲ್ಲೂ ಮುಕ್ಕಾಗದ ಪರ್ವತಶ್ರೇಣಿ ಅಥವಾ ಉತ್ತರದಿಂದ (ತಪಿ) ದಕ್ಷಿಣಕ್ಕೆ (ಕನ್ಯಾಕುಮಾರಿ) ೧೫೦೦ ಕಿ.ಮಿ. ದೂರಕ್ಕೆ ಅರಬ್ಬಿ ಸಮುದ್ರಕ್ಕೆ ಸಮಾನಾಂತರವಾಗಿ ಇಳಿಜಾರಾಗಿರುವ ಪ್ರದೇಶ. ಪಶ್ಚಿಮಘಟ್ಟಗಳಿಗೆ ಸಹ್ಯಾದ್ರಿ ಶಿಖರಗಳು ಎಂದು ಕರೆಯುಲಾಗುತ್ತದೆ, ಇದರಲ್ಲಿ ನೀಲಗಿರಿ, ಅನ್ನಾಮಲೈ, ಕಾರ್ಡಮಮ್ ಬೆಟ್ಟ ಮತ್ತು ಅಗಸ್ತ್ಯಮಲೈ ಬೆಟ್ಟಗಳನ್ನು ದಕ್ಷಿಣ ಭಾಗದ ಸಹ್ಯಾದ್ರಿ ಶಿಖರಗಳೆನ್ನಲಾಗುತ್ತದೆ. ಪಶ್ಚಿಮಘಟ್ಟಗಳ ಪೂರ್ವಭಾಗ ಭಾಗವನ್ನು ಭೌಗೋಳಿಕವಾಗಿ ಗುರುತಿಸುವಲ್ಲಿ ಪೂರ್ವಘಟ್ಟಗಳೆಂದು ಹೆಸರಿಸಿದರೂ ಕೂಡ ಕೆಲವು ಸೂಕ್ಷ್ಮಪ್ರದೇಶಗಳು ಪಶ್ಚಿಮಘಟ್ಟಗಳ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಪಶ್ಚಿಮಘಟ್ಟಗಳ ನಿಖರವಾದ ಗಡಿರೇಖೆಯನ್ನು ಗುರುತಿಸುವಲ್ಲಿ ಗೊಂದಲಗಳಿವೆ. ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಾದ ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಹಾಗೂ ಕನ್ಸರ್‍ವೇಷನ್ ಇಂಟರ್‌ನ್ಯಾಷನಲ್ ಸಂಸ್ಥೆಗಳು ಪಶ್ಚಿಮಘಟ್ಟಗಳ ಗಡಿರೇಖೆಗಳನ್ನು ಗುರುತಿಸುವಲ್ಲಿ ಕೆಲಸ ಮಾಡಿವೆಯಾದರೂ ಪರಸ್ಪರ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿವೆ. ಇಂತಹ ಸನ್ನಿವೇಶದಲ್ಲಿ ಈ ಎಲ್ಲಾ ಸಂಸ್ಥೆಗಳ ಹಾಗೂ ಫಾರೆಸ್ಟ್ ಸರ್‍ವೆ ಆಫ್ ಇಂಡಿಯಾ ಮಾಡಿದ ಮೋಜಣಿಯನ್ನು ಗಮನದಲ್ಲಿರಿಸಿಕೊಂಡು, ಅರಣ್ಯಗಳ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಸಮುದ್ರದ ತೀರ ಪ್ರದೇಶವನ್ನು ಪೂರ್ವಘಟ್ಟಗಳ ತಪ್ಪಲು ಪ್ರದೇಶವೆಂದು ಪರಿಗಣಿಸಿ, ಉಳಿದ ಘಟ್ಟ ಪ್ರದೇಶವನ್ನು ಪಶ್ಚಿಮಘಟ್ಟಳೆಂದು ತೀರ್ಮಾನ ಮಾಡಲಾಯಿತು. ಈ ಕೆಳಗೆ ತೋರಿಸಿದ ಭಾರತದ ಭೂಪಟದಲ್ಲಿ ಪಶ್ಚಿಮಘಟ್ಟಗಳನ್ನು ಹಸಿರು ಬಣ್ಣದಿಂದ ಗುರುತಿಸಲಾಗಿದೆ. ಉಳಿದ ವಿವರಗಳು ಟೇಬಲ್ ೧ರಲ್ಲಿ ನಮೂದಾಗಿದೆ.
ಆದಾಗ್ಯೂ, ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಬಹುದಾದ ಕೆಲವು ಪ್ರದೇಶಗಳು ಪಶ್ಚಿಮಘಟ್ಟಗಳ ವ್ಯಾಪ್ತಿಯಿಂದ ಹೊರಗುಳಿದಿವೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದಪೋಲಿ, ಗುಹಾಗರ್ ಹಾಗೂ ಥಾಣೆ ಮತ್ತು ರಾಯ್‌ಗಡ್ ಜಿಲ್ಲೆಯ ತುಂಗಾರೇಶ್ವರ್, ಮನೋರ್, ತಾನ್ಸಾ, ವೈತಮಾ, ಪ್ರಭಾಲ್ ಇತ್ಯಾದಿಗಳು ಬಿಟ್ಟು ಹೋದ ಪ್ರದೇಶಗಳಾಗಿವೆ.
Table 1 Geographical attributes of the Western
Ghats Attributes of the Western Ghats
Northern limit 8019’ 8‛ – 210 16’ 24‛ (N)
Eastern limit 720 56’ 24‛ – 780 19’ 40‛ (E)
Total area 129037 sq km
End-to-end length 1490 km
Min width 48 km
Max width 210 km
ಕಸ್ತೂರಿ ರಂಗನ್ ವರದಿಯ ಪ್ರಕಾರ ಪವನ ವಿದ್ಯುತ್ ತಯಾರಿಕೆ ಪ್ರಕ್ರಿಯೆಯನ್ನೂ (EIA-ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ನೋಟಿಫಿಕೇಶನ್-೨೦೦೬ ಅಥವಾ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ-೨೦೦೬) ರ ನಿಯಮಗಳಿಗೆ ಒಳಪಡಿಸಬೇಕು ಮತ್ತು ಇ.ಐ.ಎ. ಅನುಮತಿ ನೀಡಿದ ನಂತರದಲ್ಲಿ ಯೋಜನೆಯನ್ನು ಜಾರಿಗೊಳಿಸಬೇಕು. ಎಲ್ಲಾ ರೀತಿಯ ಕೆಂಪು ವರ್ಗಗಳ ಅಡಿಯಲ್ಲಿ ಬರುವ, ಅಂದರೆ, ಡಿಸ್ಟಿಲರೀಸ್, ಉಕ್ಕು-ಕಬ್ಬಿಣ ಕಾರ್ಖಾನೆ, ಔಷಧೋತ್ಪಾದನೆ, ಕೀಟನಾಶಕಗಳು, ತಾಮ್ರ, ಸತು, ಅಲ್ಯೂಮಿನಿಯಂ, ತೈಲ ಶುದ್ಧಿಕರಣ, ಸಿಮೆಂಟ್, ಕಾಗದ ಕಾರ್ಖಾನೆ, ಹೀಗೆ ಒಟ್ಟು ೪೭ ಬಗೆಯ ಕಾರ್ಖಾನೆಗಳನ್ನು ಪ್ರಾರಂಭಿಸುದಕ್ಕೆ ಅನುಮತಿ ನೀಡಲೇ ಬಾರದು. ಇನ್ನೂ ಕಿತ್ತಳೆ ವರ್ಗದಡಿಯಲ್ಲಿ ಬರುವ ಆಹಾರ ಸಂಸ್ಕರಣೆ, ಹತ್ತಿಯ ಗಿರಣಿ, ಹಿಟ್ಟಿನ ಗಿರಣಿ, ಹೋಟೆಲ್‌ಗಳು, ಹೀಗೆ ೨೫ ಬಗೆಯ ಉದ್ಯಮಗಳನ್ನು ನಿಷೇಧಕ್ಕೆ ಒಳಪಡಿಸದಿದ್ದರೂ, ಪರಿಸರ ಸ್ನೇಹಿ ಧೋರಣೆಗೆ ಒತ್ತು ನೀಡಬೇಕು ಎಂದು ಹೇಳಲಾಗಿದೆ. ಇನ್ನು ಹಸಿರು ವರ್ಗಗಳ ಅಡಿಯಲ್ಲಿ ಬರುವ ಅಡಕೆ, ಗೋಧಿ, ಭತ್ತ, ಬಟ್ಟೆಯಂಗಡಿ, ಬಟ್ಟೆ ತಯಾರಿಕೆ, ಚಿನ್ನ-ಬೆಳ್ಳಿ ವ್ಯಾಪಾರ, ಐಸ್‌ಕ್ರೀಮ್ ತಯಾರಿಕೆ, ಬೇಕರಿ, ಪ್ರಿಂಟಿಂಗ್ ಪ್ರೆಸ್ ಇತ್ಯಾದಿ ೫೫ ಉದ್ಯಮಗಳ ನಿಷೇಧಕ್ಕೆ ವಿನಾಯತಿ ನೀಡಲಾಗಿದೆ. ೨೦ ಸಾವಿರ ಚದರ ಅಡಿಗಿಂತ ದೊಡ್ಡದಾದ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು. ನಿಷೇಧಿತವಲ್ಲದ ಯಾವುದೇ ರೀತಿಯ ಉದ್ಯಮಗಳನ್ನು ಸ್ಥಾಪಿಸುವ ಪೂರ್ವದಲ್ಲಿ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಅನುಮತಿ ನೀಡುವುದಾದಲ್ಲಿ ಪರಿಸರ ಇಲಾಖೆಯಿಂದ ಪರವಾನಿಗೆ ಪಡೆಯುವುದು ಕೂಡ ಕಡ್ಡಾಯವಾಗಿದೆ. ಅಲ್ಲದೆ, ಸೂಕ್ಷ್ಮ ಪ್ರದೇಶಗಳಡಿಯಲ್ಲಿ ಬರುವ ಅರಣ್ಯ ಪ್ರದೇಶವನ್ನು, ಅರಣ್ಯೇತರ ಉದ್ಧೇಶಕ್ಕೆ ಬಳಸುವ ಮುನ್ನ ಸೂಕ್ಷ್ಮಪ್ರದೇಶ ವ್ಯಾಖ್ಯೆಗೆ ಇನ್ನಷ್ಟು ಬಲ ನೀಡಬೇಕು ಮತ್ತು ಯಾವ ಉದ್ಧೇಶಕ್ಕಾಗಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲಾಗುವುದು ಎಂಬುದನ್ನು ಆಯಾ ಸೂಕ್ಷ್ಮ ಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರ ಗಮನಕ್ಕೆ ತರುವುದು (ಇದರಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೂ ಇರಬೇಕು). ಯಾವ ಹಳ್ಳಿ ಅಥವಾ ಪ್ರದೇಶಗಳು ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಸೇರುತ್ತವೆಯೋ ಅಲ್ಲಿಯ ಜನಜೀವನವನ್ನು ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಉಲ್ಲಂಘನೆ ಮಾಡಬಾರದು ಮತ್ತು ಗ್ರಾಮಸಭೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ರಾಜ್ಯ ಸರ್ಕಾರಗಳು ಕೂಡ ಯಾವುದೇ ವನ್ಯಜೀವಿ ಸಂರಕ್ಷಣಾ ಮಾರ್ಗವನ್ನು ಘೋಷಿಸುವ ಪೂರ್ವದಲ್ಲಿ ಸ್ಥಳೀಯರ ಅಭಿಪ್ರಾಯವನ್ನು ಪಡೆಯಬೇಕು. ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಅಭಿವೃದ್ದಿಪಥದಲ್ಲಿ ನಡೆಸುವ ಪೂರ್ವದಲ್ಲಿ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು.
******