ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೨: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ
ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು ಪಡೆಯುವುದು, ಇದರಲ್ಲಿ ಶಾಸಕರು ಮತ್ತು ಸಂಸದರ ಅಭಿಪ್ರಾಯವನ್ನು ಗಮನಿಸುವುದು. ಈ ಸಮಿತಿಯು ಒಂದುವರೆ ವರ್ಷಗಳ ಕಾಲ ಕ್ಷೇತ್ರ ಅಧ್ಯಯನ, ಜನಸಾಮಾನ್ಯರ ಅಭಿಪ್ರಾಯ, ಹೂಡಿಕೆದಾರರೊಂದಿಗೆ ಚರ್ಚೆ ನಡೆಸಿ, ಪಶ್ಚಿಮಘಟ್ಟಗಳನ್ನು ಮೂರು ರೀತಿಯ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ, ಮೂರು ಸೂಕ್ಷ್ಮ ಪ್ರದೇಶಗಳ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ಬೇರೆ ಬೇರೆ ರೀತಿಯ ಮಾರ್ಗಸೂಚಿಗಳನ್ನು ಸೂಚಿರುವುದರ ಜೊತೆಗೆ ಪಶ್ಚಿಮಘಟ್ಟ ರಕ್ಷಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತು (ಪ್ರೋ:ಮಾಧವ ಗಾಡ್ಗಿಳ್ ಸಮಿತಿಯ ಮುನ್ನುಡಿಯ ಸಾರಾಂಶವಿಷ್ಟು).

ಡಾ:ಕಸ್ತೂರಿರಂಗನ್ ಸಮಿತಿಯು ಜನಪ್ರತಿನಿಧಿಗಳ ವಿರೋಧವನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ತುಂಬಾ ಹುಷಾರಿಯಾದ ಹೆಜ್ಜೆಗಳನ್ನು ಲೋಕ ಲೌಕಿಕ ಸಮ್ಮತವಾಗಿ ಇಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿತು. ಹಳ್ಳಿಗಳು, ನಗರಗಳು ಮತ್ತು ಕಾರ್ಖಾನೆಗಳು ಪಶ್ಚಿಮಘಟ್ಟಗಳನ್ನು ನುಂಗಿ ಹಾಕಿವೆ. ಆದ್ದರಿಂದ ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಪೂರ್ವದಲ್ಲಿ ಅತ್ಯಂತ ಬಿಗಿಯಾದ ಪರಿಶೀಲನಾ ವ್ಯವಸ್ಥೆಗೆ ಶಿಪಾರಸ್ಸು ಮಾಡಬೇಕೆಂಬ ಸಲಹೆಯನ್ನು ಮಾಡಿದೆ. ಈ ಸಮಿತಿಯು ಕೊಡಗಿನ ಸಾವಯವ ಕಾಫಿ ತೋಟ ಮತ್ತು ವಯನಾಡಿನ ಏಲಕ್ಕಿ ತೋಟಗಳನ್ನು ಹೆಸರಿಸಿ, ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳನ್ನೊಳೊಗೊಂಡ ಪ್ರದೇಶದಲ್ಲೂ ಪ್ರಕೃತಿಯ ಸೂಕ್ಷ್ಮತೆ ಮತ್ತು ಮಾನವನ ಅಭಿವೃದ್ಧಿ ಏಕತ್ರಗೊಂಡಿವೆ ಎಂಬುದನ್ನು ಬಿಂಬಿಸಲಾಗಿದೆ. ಅಂತಯೇ, ಬಹು ಆಯಾಮಗಳ ಪಶ್ಚಿಮಘಟ್ಟ ಶ್ರೇಣಿಗಳನ್ನು ಸಂರಕ್ಷಿಸಲು ಕಾಲ-ಕಾಲಕ್ಕೆ ಅನುಗುಣವಾಗುವಂತೆ ವರದಿಯ ಅಂಶಗಳನ್ನು ಮಾರ್ಪಾಟು ಮಾಡಿಕೊಳ್ಳಬೇಕೆಂಬ ಅಂಶವನ್ನು ಹೇಳಲಾಗಿದೆ (ಇದಿಷ್ಟು ಡಾ:ಕಸ್ತೂರಿರಂಗನ್ ವರದಿಯ ಮುನ್ನುಡಿಯ ಸಾರಾಂಶ).

ಪ್ರೊ:ಮಾಧವ ಗಾಡ್ಗಿಳ್ ಸಮಿತಿಯ ವರದಿ ಭಾಗ-೧: ವ್ಯಾಪಕವಾದ ಕ್ಷೇತ್ರ ವೀಕ್ಷಣೆ, ತಜ್ಞರ ಜೊತೆ ಸಮಾಲೋಚನೆ, ಹೂಡಿಕೆದಾರರೊಂದಿಗೆ ಚರ್ಚೆ, ಜನಸಾಮಾನ್ಯರ ಅಭಿಪ್ರಾಯ ಮತ್ತು ಮಾಹಿತಿಯನ್ನು ಪಡೆದು ಈ ಸಮಿತಿಯು ಪಶ್ಚಿಮಘಟ್ಟ ಶ್ರೇಣಿಗಳನ್ನು ಮುಖ್ಯವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಿತು. ಸೂಕ್ಷ್ಮಪ್ರದೇಶ-೧ (ಇ.ಎಸ್.ಝಡ್-೧), ಸೂಕ್ಷ್ಮಪ್ರದೇಶ-೨ (ಇ.ಎಸ್.ಝಡ್-೨) ಹಾಗೂ ಸೂಕ್ಷ್ಮಪ್ರದೇಶ-೩ (ಇ.ಎಸ್.ಝಡ್-೩). ಅಲ್ಲದೆ, ಸಂಘ-ಸಂಸ್ಥೆಗಳು ಮತ್ತು ಗ್ರಾಮಪಂಚಾಯ್ತಿ ಮಟ್ಟದ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಕೆಲವು ಜನವಸತಿ ಪ್ರದೇಶಗಳನ್ನೂ ಪಾರಿಸಾರಿಕವಾದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಯಿತು.

ಈ ಮೊದಲು ಕೇಂದ್ರ ಸರ್ಕಾರ ಈ ಸಮಿತಿಗೆ ಕೆಲವು ನಿರ್ಧಿಷ್ಟ ನಿರ್ದೇಶನಗಳನ್ನು ನೀಡಿ ಮುಂದುವರೆಯಲು ಕೇಳಿಕೊಂಡಿತ್ತು. ಇದರಲ್ಲಿ ಮುಖ್ಯವಾದವವುಗಳು ಇಂತಿವೆ:

೧. ಪ್ರಸ್ತುತ ಸಮಯದಲ್ಲಿ ಪಶ್ಚಿಮಘಟ್ಟಗಳ ವಾಸ್ತವಿಕ ಸ್ಥಿತಿ-ಗತಿಯ ವ್ಯಾಪಕ ನೋಟ
೨. ಸೂಕ್ಷ್ಮಪ್ರದೇಶಗಳ ಗಡಿಗಳನ್ನು ನಿಖರವಾಗಿ ಗುರುತಿಸಿ, ಈ ಪ್ರದೇಶಗಳನ್ನು ಪರಿಸರ ರಕ್ಷಣಾ ಕಾಯ್ದೆ ೧೯೮೬ರ ಅಡಿಯಲ್ಲಿ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲು ಶಿಪಾರಸ್ಸು ಮಾಡುವುದು ಹಾಗೂ ಇದಕ್ಕೂ ಮುಂಚಿತವಾಗಿ ಈಗಾಗಲೇ ಪಶ್ಚಿಮಘಟ್ಟ ಕುರಿತು ಲಭ್ಯವಿರುವ ಮೋಹನ್ ರಾವ್ ಸಮಿತಿಯ ವರದಿ, ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ಣಯಗಳು ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಶಿಪಾರಸ್ಸು, ಹಾಗೂ ಆಯಾ ರಾಜ್ಯಗಳ ಅಭಿಪ್ರಾಯಗಳನ್ನು ಸಂಗ್ರಹಿಸುವುದು.
೩. ಪಶ್ಚಿಮಘಟ್ಟಗಳ ಉಳಿವಿಗೆ, ರಕ್ಷಣೆಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಘಟ್ಟಗಳ ಶ್ರೇಣಿಯಲ್ಲಿ ಬರುವ ಎಲ್ಲಾ ರಾಜ್ಯಗಳ ಜನಸಾಮಾನ್ಯರ ಅಭಿಪ್ರಾಯ ಪಡೆಯುವುದು.
೪. ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಭಾರತ ಸರ್ಕಾರ ಹಾಗೂ ಕೇಂದ್ರ ಪರಿಸರ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡುವುದು.
೫. ಪರಿಸರ ರಕ್ಷಣಾ ಕಾಯ್ದೆ ೧೯೮೬ ಅಡಿಯಲ್ಲಿ ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ ರಚಿಸುವಲ್ಲಿ ವೃತ್ತಿಪರ ಸೂತ್ರಗಳನ್ನು ಅಳವಡಿಸಿಕೊಳ್ಳುವುದು.
೬. ಪಶ್ಚಿಮಘಟ್ಟಗಳ ಪ್ರಸ್ತುತ ಪರಿಸರ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳ ಕುರಿತಂತೆ ಈಗಾಗಲೇ ಕೇಂದ್ರ ಪರಿಸರ ಇಲಾಖೆ ಗಮನಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು.
೭. ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಘಟ್ಟ ಶ್ರೇಣಿಗಳ ಹಾಗೂ ಕರಾವಳಿಯ ಪರಿಸ್ಥಿತಿಯನ್ನು ಸಂಪೂರ್ಣ ಅಧ್ಯಯನ ಮಾಡುವುದು, ಕರ್ನಾಟಕದ ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆ ಹಾಗೂ ಕೇರಳದ ಅತಿರಪಳ್ಳಿ ಜಲವಿದ್ಯುತ್ ಯೋಜನೆಗಳ ಕುರಿತು ವ್ಯಾಪಕ ಅಧ್ಯಯನ ನಡೆಸಿ ಸಾಧಕ-ಬಾಧಕಗಳ ಪಟ್ಟಿ ತಯಾರಿಸುವುದರ ಜೊತೆಗೆ ಗೋವಾ ರಾಜ್ಯದಲ್ಲಿ ಹೊಸದಾಗಿ ನೀಡಲಾಗುವ ಗಣಿಗಾರಿಕೆ ಅನುಮತಿ ನೀಡಲ್ಪಡುವ ಪ್ರದೇಶಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವುದು. 

ಡಾ:ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಗಾಡ್ಗಿಳ್ ವರದಿಯ ಆಕ್ಷೇಪಾರ್ಹ ಅಂಶಗಳನ್ನು ಕಡಿತಗೊಳಿಸುವತ್ತ ಹೆಚ್ಚು ಗಮನ ಹರಿಸಿತು. ಕೇಂದ್ರ ಸರ್ಕಾರದ ಸೂಚನೆಯಂತೆ ಪಶ್ಚಿಮಘಟ್ಟಗಳ ಶುದ್ಧ ಪರಿಸರವನ್ನು ಉಳಿಸಲೇಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ನೀಡಿದ ಗಾಡ್ಗಿಳ್ ವರದಿಯು ಬದಲಾದ ರಾಜಕೀಯ ಮೇಲಾಟಕ್ಕೆ ಮತ್ತು ಆಯಾ ರಾಜ್ಯಗಳ ರಾಜಕೀಯ ಷಢ್ಯಂತ್ರಗಳಿಗೆ ಬಲಿಯಾಗಬೇಕಾಯಿತು. ರಂಗನ್ ವರದಿಯನ್ನು ತಯಾರಿಸುವಾಗ ಗಾಡ್ಗಿಳ್ ವರದಿಯನ್ನೇ ಮಾನದಂಡವಾಗಿಟ್ಟುಕೊಂಡು, ಹಲವು ಮಾರ್ಪಾಡುಗಳನ್ನು ಮಾಡುವಲ್ಲಿ ಗಮನ ಹರಿಸಿತು. ಗಾಡ್ಗಿಳ್ ವರದಿಯ ಮಹತ್ವವನ್ನು ಎತ್ತಿಹಿಡಿಯುತ್ತಲೇ, ರಂಗನ್ ತಂಡವು ಗಾಡ್ಗಿಳ್ ವರದಿಯನ್ನು ಸಾಕಷ್ಟು ದುರ್ಭಲಗೊಳಿಸಿತು. ಉತ್ತರದ ಗುಜರಾತಿನ ತಪಿ ನದಿಯಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗಿನ ೧೫೦೦ ಕಿ.ಮಿ. ಪ್ರದೇಶದಲ್ಲಿ ಬರುವ ೧೮೮ ತಾಲ್ಲೂಕುಗಳ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಕ್ಯಾರಿ ಹಾಗೂ ಮರಳು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಮತ್ತು ಈಗಾಗಲೇ ಅನುಮತಿ ನೀಡಿದ ಗಣಿಗಳನ್ನು ಮುಂದಿನ ೫ ವರ್ಷಗಳಲ್ಲಿ ಹಂತ-ಹಂತವಾಗಿ ಸ್ಥಗಿತಗೊಳಿಸಬೇಕು ಎಂದು ಶಿಪಾರಸ್ಸು ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾರಣದಿಂದ ಉಷ್ಣಸ್ಥಾವರಗಳನ್ನು ನಿರ್ಮಿಸುವ ಹಾಗಿಲ್ಲ. ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸುವುದಾದಲ್ಲಿ, ಈ ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು:

೧. ಆಣೆಕಟ್ಟುಗಳನ್ನು ಕಟ್ಟುವಾಗ ಕನಿಷ್ಠ ೩೦% ನದಿಯ ನೀರನ್ನು ಹರಿದು ಹೋಗಲು ಬಿಡಬೇಕು.
೨. ಆಣೆಕಟ್ಟು ನಿರ್ಮಿಸುವಾಗ ಆಗುವ ಪರಿಸರ ವಿನಾಶದ ಕರಾರುವಕ್ಕು ಅಂಕಿ-ಅಂಶಗಳನ್ನು ಅಧ್ಯಯನ ಮಾಡಲೇಬೇಕು
೩. ಒಂದು ಆಣೆಕಟ್ಟಿನಿಂದ ಕನಿಷ್ಟ ಮೂರು ಕಿ.ಮಿ. ಅಂತರವನ್ನು ಕಾಪಾಡಬೇಕು ಹಾಗೂ ಯಾವುದೇ ಕಾರಣಕ್ಕೂ ೫೦% ಹೆಚ್ಚು ನದಿ ಪಾತ್ರ ಮುಳುಗಡೆಯಾಗಬಾರದು.

(ಮುಂದುವರೆಯುವುದು. . .)

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x