ಪವಾಡ?: ಗುರುಪ್ರಸಾದ ಕುರ್ತಕೋಟಿ

(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೫):

ಈ ಸಲ ಒಂದು ಚಿಕ್ಕ ಘಟನೆಯಾ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, ಉಪವಾಸವೋ ಅಥವಾ ಉರುಳುಸೇವೆಯೋ ಹೀಗೆ ಯಾವುದೋ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಅದರಲ್ಲೊಂದು ಶೃದ್ಧೆಯೂ ಇತ್ತು. ರಾಯರು ತನ್ನ ರಕ್ಷಣೆಗಿರುವರೆಂಬ ಬಲವಾದ ನಂಬಿಕೆಯೂ ಅವಳಲ್ಲಿತ್ತು. ರಾಯರ ಮೇಲಿನ ಈ ಪ್ರೀತಿಯಿಂದಾಗಿ ಮನೆಯಲ್ಲಿ ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅವಳು  ಇಟ್ಟಿದ್ದ ಹೆಸರುಗಳಲ್ಲಿ ಬುಹುತೇಕವು ರಾಯರಿಗೆ ಸಂಬಧಿಸಿದವೇ! ಅಮ್ಮನ ಹೆಸರು ಪರಿಮಳ, ಒಬ್ಬ ಮಾಮಾ ರಾಘವೇಂದ್ರ, ಇನ್ನೊಬ್ಬ ಸುಧೀಂದ್ರ, ನಾನು ಗುರುಪ್ರಸಾದ…!  

ಹೀಗೆ ಅವಳು ಮಾಡುತ್ತಿದ್ದ ಅಸಂಖ್ಯಾತ ಸೇವೆಗಳು ಗದಗಿನ ಮಠದಲ್ಲಿ ಅಥವಾ ಮನೆಯಲ್ಲಿ ನಡೆಯುತ್ತಿದ್ದವು. ಆದರೆ  ಕೆಲವು ಸೇವೆಗಳನ್ನು ರಾಯರ ಸನ್ನಿಧಿಯಾದ ಮಂತ್ರಾಲಯಕ್ಕೆ ಹೋಗಿಯೇ ಮಾಡುತ್ತಿದ್ದಳು. ಗಂಡ ಹೆಂಡತಿಯರಿಬ್ಬರೂ ವರ್ಷಕ್ಕೊಮ್ಮೆ ಎರಡೋ ಮೂರೋ ದಿನಗಳು ಅಲ್ಲಿಯೇ ಉಳಿದುಕೊಂಡು, ಸೇವೆಗಳ ಮುಗಿಸಿಕೊಂಡು ಹಿಂತಿರುಗಿ ಬರುತ್ತಿದ್ದರು. ಹೀಗೇ ಒಂದು ಸಲ ಅಜ್ಜ ಅಜ್ಜಿ ಇಬ್ಬರೂ ಮಂತ್ರಾಲಯದಲ್ಲಿದ್ದರು. ಅಜ್ಜಿಯ ಸ್ವಭಾವಕ್ಕೆ ವಿರುದ್ಧವಾಗಿ ನನ್ನ ಅಜ್ಜ. ಅವರು ತುಂಬಾ ನಾಸ್ತಿಕರು ಹಾಗೂ ನಿರ್ಲಿಪ್ತ. ದೇವರು ದಿಂಡರೆಂದರೆ ಅವರಿಗಷ್ಟಕ್ಕಷ್ಟೆ. ಆದರೆ ಅಜ್ಜಿಯ ಭಕ್ತಿಗೆ ಎಂದೂ ಅಡ್ಡಿ ಮಾಡುತ್ತಿರಲಿಲ್ಲ. ಅಜ್ಜಿ ತನ್ನ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರೆ, ಇವರು ತಮ್ಮಷ್ಟಕ್ಕೆ ತಾವು ಅಲ್ಲಿ ಇಲ್ಲಿ ಅಡ್ಡಾಡಿಕೊಂಡಿರುತ್ತಿದ್ದರು. ಮಂತ್ರಾಲಯದಲ್ಲಿ ಎಷ್ಟು ಹೊತ್ತು ತಾನೇ ಅಡ್ಡಾಡಬಹುದು? ಅದೇ ಕಾರಣಕ್ಕೆ ಅವರು ಹೊತ್ತು ಕಳೆಯುವ ಬೇರೆ ಬೇರೆ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದರು. ಅವರಿಗೆ ನೀರಿನಲ್ಲಿ ಈಜುವುದು ಚೆನ್ನಾಗಿ ಗೊತ್ತಿತ್ತು. ಮಠದ ಪಕ್ಕದಲ್ಲೇ ತುಂಗೆ ಮೈದುಂಬಿ ಹರಿಯುತ್ತಿದ್ದಳಲ್ಲವೇ? ನನ್ನಜ್ಜನಿಗೆ ಅದೊಂದು ಒಳ್ಳೆ ವಿಹಾರ ಧಾಮವಾಗಿ ಕಂಡಿರಬೇಕು.  ಆರಾಮವಾಗಿ ನದಿಯಲ್ಲಿ ಈಜಾಡಿಕೊಂಡಿರುತ್ತಿದ್ದರು. ಮದ್ಯಾಹ್ನ ಈಜಲು ಶುರು ಮಾಡಿ ಸಂಜೆಯವರೆಗೂ ಹಾಗೆ ವಿಹರಿಸುತ್ತಿದ್ದರು. ಅದೂ ಆಗ ಬೇಸಿಗೆ  ಕಾಲವಾಗಿದ್ದರಿಂದ ನೀರಿನಿಂದ ಎದ್ದು ಬರಲು ಮನಸ್ಸೇ ಆಗುತ್ತಿರಲಿಲ್ಲ.

ಹೀಗೆ ಒಂದು ದಿನ ನೀರಿನಲ್ಲಿ ಈಜಾಡಿಕೊಂಡಿದ್ದರು. ಅವತ್ತು ಗುರುವಾರ ಬೇರೆ. ಅಜ್ಜಿಯ ಸೇವೆಗಳು ಸ್ವಲ್ಪ ಜಾಸ್ತಿಯೇ ಇದ್ದವೆಂದು ಕಾಣುತ್ತದೆ. ಅವಳು ಇನ್ನೂ ಮಠದಲ್ಲೇ ಇದ್ದಳು. ಆಗಲೇ ಸಂಜೆ ಆಗಿತ್ತು, ಬೆಳಕು ಕೂಡ ಕಡಿಮೆಯಾಗುತ್ತಿತ್ತು. ಇವರೂ ಉಮೇದಿಯಲ್ಲಿ, ನದಿಯಲ್ಲಿ ಮುಂದೆ ಮುಂದೆ ಈಜಿಕೊಂಡು ಹೋಗುತ್ತಿದ್ದರು. ದಡದಿಂದ ಸುಮಾರು ದೂರ ಹೋಗಿದ್ದರು. ಅಷ್ಟರಲ್ಲೇ ಅವರ ಎದುರಿನಿಂದ ಒಬ್ಬ ವ್ಯಕ್ತಿ ಈಜಿಕೊಂಡು ಬಂದರಂತೆ. ಅವರು ಸುಮಾರು ವಯಸ್ಸಾದವರೆ. ನನ್ನಜ್ಜನಿಗೆ 

'ಇನ್ನೂ ಮುಂದ ಹೋಗಬ್ಯಾಡ್ರೀ. ಅಲ್ಲ್ಯೊಂದು ಸುಳಿ ಅದ.' ಅಂದು ಹಾಗೆ ಮುಂದೆ ಹೋದರಂತೆ. ಸುಳಿಯಲ್ಲಿ ಸಿಕ್ಕರೆ  ಬದುಕುವುದು ಸಾಧ್ಯವಾಗದ ಮಾತು. ಅಜ್ಜ ಅವರ ಮಾತಿಗೆ ಬೆಲೆ ಕೊಟ್ಟು ದಡಕ್ಕೆ ವಾಪಸ್ಸಾದರು. ಮೈ ಒರೆಸಿಕೊಳ್ಳುತ್ತ , ಆ ವ್ಯಕ್ತಿಯನ್ನು ಹುಡುಕಿದರೆ ಅವರಲ್ಲಿರಲಿಲ್ಲ. ಆಮೇಲೆ ಅಜ್ಜ ಯೋಚಿಸಿದಾಗ ಅವರಿಗೆ ರೋಮಾಂಚನವಾಗಿತ್ತು! ಯಾಕೆಂದರೆ ಆ ವ್ಯಕ್ತಿ, ಯಾವ ಕಡೆ ಸುಳಿ ಇದೆ ಅತ್ತ ಹೋಗಬೇಡಾ ಅಂತ ಹೇಳಿದ್ದರೋ ಅದೇ ಜಾಗದಿಂದಲೇ ಈಜಿಕೊಂಡು ಬಂದಿದ್ದರು! ಅದೂ ಅಲ್ಲದೇ ಅವರು ತೋರಿಸಿದ್ದ ಜಾಗದಲ್ಲಿ ನಿಜವಾಗಿಯೂ ಸುಳಿ ಇರುವದನ್ನು ಜನ ಮರುದಿನ ಹೇಳಿದರಂತೆ! 

ಅಂದರೆ? ರಾಘವೇಂದ್ರ ಸ್ವಾಮಿಗಳು ನನ್ನ ಅಜ್ಜಿಯ ಸೇವೆಗೆ ಮೆಚ್ಚಿ, ಮಾನವ ರೂಪದಲ್ಲಿ ಬಂದು ನನ್ನಜ್ಜನನ್ನು ಉಳಿಸಿದರೆ. ಅಜ್ಜಿಯ ಮಾಂಗಲ್ಯ ರಕ್ಷಣೆ ಮಾಡಿ, ಅವಳ ಸೇವೆಗೊಂದು ಪುರಸ್ಕಾರ ನೀಡಿದರೆ? ಅಲ್ಲೊಂದು ಪವಾಡ ನಡೆದಿರಬಹುದೇ? ಪವಾಡವೇ ನಡೆದಿದ್ದರೆ ಬೇರೆ ಯಾರೋ ಮನುಷ್ಯನ ಮುಖಾಂತರ ಹೇಳಿಸಬಹುದಿತ್ತಲ್ಲವೆ? ಅಥವಾ ಅಷ್ಟು ಸಮಯವಿಲ್ಲವೆಂದು ತಾವೇ ಖುದ್ದಾಗಿ ದೇವರು ಬಂದು ಕಾಪಾಡಿರಬೇಕೆ? 

ಈ ಪ್ರಶ್ನೆಗಳಿಗೆ ಉತ್ತರ ರಾಯರೇ ಹೇಳಬೇಕು!!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
ವನಸುಮ
9 years ago

ಎಲ್ಲಾ ದೇವರ ಲೀಲೆ… ಚೆನ್ನಾಗಿದೆ ಬರಹ. ಶುಭವಾಗಲಿ.

Guruprasad Kurtkoti
9 years ago

ಗಣೇಶ, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

umesh desai
9 years ago

ಖರೆ ಅದ ರಾಯರ ಉತ್ತರ ಹೇಳಬೇಕು.. ನಿಮ್ಮ ಬರಹ ಸೊಗಸಾಗೇದ..

Guruprasad Kurtkoti
9 years ago
Reply to  umesh desai

ಉಮೇಶ, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Akhilesh Chipli
Akhilesh Chipli
9 years ago

ಅಜ್ಜಿ ಮಾಡಿದ ಪುಣ್ಯ ಅಜ್ಜನನ್ನು ಉಳಿಸಿತು.
ತರ್ಕಕ್ಕೆ ನಿಲುಕದ ಸಂಗತಿಗಳು.
ಬರಹ ಆಪ್ತವಾಗಿದೆ. ಧನ್ಯವಾದಗಳು ಕುರ್ತಕೋಟಿಯವರೆ.

Guruprasad Kurtkoti
9 years ago

ಅಖಿಲೇಶ್, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಪವಾಡ  ಅಲ್ಲದೇ ಮತ್ತೇನು? ಬರಹ ಚೆನಾಗಿದೆ ದೊಸ್ತ್..

Guruprasad Kurtkoti
9 years ago

ಅಮರ್, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

prashasti.p
9 years ago

ಅರಿವುಗಳ ನಿಲುವಿಗೆ ನಿಲುಕದ್ದೇ ಪವಾಡ !!

Guruprasad Kurtkoti
9 years ago
Reply to  prashasti.p

ಪ್ರಶಸ್ತಿ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!

10
0
Would love your thoughts, please comment.x
()
x