ಪವನ್ ಒಡೆಯರ್ ಸಂದರ್ಶನ ಲೇಖನ: ಗುಂಡೇನಟ್ಟಿ ಮಧುಕರ

ಇತ್ತೀಚೆಗೆ ಬೆಳಗಾವಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ’ಪ್ರೀತಿ ಗೀತಿ ಇತ್ಯಾದಿ’  ಚಿತ್ರದ ಚಿತ್ರಕರಣ ನಡೆದಿತ್ತು. ಈ ಚಿತ್ರದ ನಾಯಕ ಪ್ಯಾರೆ ಆಗಬಿಟ್ಟೈತೆ ಪವನ ಒಡೆಯರ. ಗೋವಿಂದಾಯ ನಮಃ ಚಿತ್ರದಲ್ಲಿಯ ಆ ಉರ್ದು ಮಿಶ್ರಿತ ಹಾಡು ನನಗೆ ಮತ್ತೆ ಮತ್ತೆ ಕೇಳುವಂತೆ ಮಾಡಿತ್ತು. ಅದನ್ನು ಬರೆದಿರುವವರು ಪವನ ಒಡೆಯರ ಎಂದು ತಿಳಿದಾಗ ಅಚ್ಚರಿಪಟ್ಟಿದ್ದೆ. ಇಷ್ಟೊಂದು ಕಿರುವಯಸ್ಸಿನಲ್ಲಿ ಇಂತಹ ಒಂದು ಒಳ್ಳೆಯ ಸಾಹಿತ್ಯವನ್ನು ನೀಡಿರುವ ಪವನನ್ನನ್ನು ಭೇಟಿಯಾಗಿ ಮಾತನಾಡಬೇಕೆಂದು ಅಂದೇ ಅಂದುಕೊಂಡಿದ್ದೆ. ಅನಂತರ ಹಲವಾರು ಬಾರಿ ಸಂದರ್ಶನ ಮಾಡುವ ಕುರಿತು ಅವರೊಂದಿಗೆ ಮಾತನಾಡಿದ್ದೆ. ಬ್ಯೂಜಿ ಹುಡುಗ ಪವನ ಭೇಟಿಯಾಗುವ ಸಮಯ ಕೂಡಿ ಬಂದಿರಲಿಲ್ಲ. ಈಗ ನಮ್ಮೂರಿನಲ್ಲಿಯೇ ಪವನ ನಾಯಕ ನಟನಾಗಿ ನಟಿಸುತ್ತಿರುವ ಚಿತ್ರದ ಚಿತ್ರಿಕರಣ ನಡೆದಿರುವ ವಿಷಯ ತಿಳಿದು ಸಂತೋಷವಾಯಿತು. ಅವರನ್ನು ಭೇಟಿಯಾದೆ. ನಿಗರ್ವಿ ಪವನ ಮನಬಿಚ್ಚಿ ಮಾತನಾಡದರು. ಅಂತಹ ಚಿತ್ರಿಕರಣದ ಸಮಯಾಭಾವದ ಮಧ್ಯೆಯೂ ನಮ್ಮ ಮನೆಗೆ ಬಂದು ಆದರಾತಿಥ್ಯ ಸ್ವೀಕರಿಸಿದುದು ನನಗೆ ಹೆಚ್ಚಿನ ಖುಷಿಯನ್ನುಂಟು ಮಾಡಿತು. ಅವರೊಂದಿಗೆ ನಡೆಸಿದ ಮಾತುಕತೆ ನಮ್ಮ ಓದುಗರಿಗಾಗಿ. 

ಗುಂ.ಮ. ನೀವು ನಟನೆ ನಿರ್ದೇಶನದ ಗೀಳು ಅಂಟಿಕೊಂಡದ್ದು ಹೇಗೆ?

ಪವನ ಒಡೆಯರ: ನನಗೆ ಕಾಲೇಜಿಗೆ ಹೋಗ್ತಾಯಿದ್ದಾಗಿಂದಲೂ ನನಗೆ ಈ ನಾಟಕದ ಗೀಳು ಇದ್ದೇ ಇತ್ತು. ಕಾಲೇಜನಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳಿದ್ದಾಗ, ರಂಗಾಸಕ್ತ ನನ್ನ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ಅವರಿಂದ ನಾಟಕ ಮಾಡಿಸುವುದು, ನಿರ್ದೇಶನ ಮಾಡುವುದು ಅಲ್ಲದೇ ನಾನು ಕೆಲ ಪಾತ್ರಗಳಲ್ಲಿ  ಕಾಣಿಸಿಕೊಳ್ಳುತ್ತಿದ್ದೆ. ಹಾಡು ಅನ್ನುತ್ತಿದ್ದೆ, ಡಾನ್ಸ ಮಾಡತಿದ್ದೆ. ಶ್ರೀರಾಮ ನವಮಿ ಸಂದರ್ಭದಲ್ಲಿ ನಮ್ಮ ಬ್ರಾಹ್ಮಣ ಸಂಘದ ವತಿಯಿಂದ ಕಾರ್‍ಯಕ್ರಮಗಳನ್ನು ಮಾಡಿಸ್ತಾಯಿದ್ವಿ ಹೀಗೆ  ನನಗೆ ನಾಟಕ ಬಣ್ಣಲೋಕದ ನಂಟು ಮೊದಲಿನಿಂದಲೂ ಇತ್ತು.

ಇದಕ್ಕಿಂತಲೂ ನಾನು ಹೇಳಲೇಬೇಕಾದ ವಿಷಯವೆಂದರೆ ನನ್ನ ಅಜ್ಜ ಅಂದರೆ ತಂದೆಯ ತಂದೆ ಡಿ. ಎನ್. ಒಡಿಯರ ಅಂತಾ ಅವರದೊಂದು ಗಜಾನನ ನಾಟಕ ಮಂಡಳಿ, ಜಮಖಂಡಿ ಅಂತಾ ಇತ್ತು. ಈ ಕಂಪನಿಯಿಂದ ಹಲವಾರು ನಾಟಕಗಳನ್ನು ಆಡಿಸ್ತಾಯಿದ್ದರು. ಅವರು ರಾಜ್ಯಪ್ರಶಸ್ತಿ ವಿಜೇಯಿರರು. ಅವರಾಡಿಸಿದ ’ಶ್ರೀ ಸತ್ಯನಾರಾಯಣ ಕಥೆ’ ನಾಟಕ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿತು. ನಟ ವಿಷ್ಣುವರ್ಧನ ಅವರ ತಂದೆ ನಾಟಕಗಳನ್ನು ಬರೆದು ಕೊಡತಾಯಿದ್ದರಂತೆ. ಧೀರೆಂದ್ರ ಗೋಪಾಲ ಮುಂತಾದವರೆಲ್ಲ ಈ ಕಂಪನಿಯಲ್ಲಿ ನಟಿಸಿದ್ದಾರೆ. ಹೀಗೆ ರಕ್ತಗತವಾಗಿ ಬಂದ ಕಲೆಯೂ ಇದಾಗಿದೆಯಂದು ಹೇಳಬಹುದು.

ಗುಂ.ಮ.: ಅಂದರೆ ನಿಮ್ಮ ಚಿತ್ರರಂಗ ಪ್ರವೇಶ ಹೇಗಾಯಿತು?

ಪವನ ಒಡೆಯರ: ನಾನು ಬಿ.ಕಾಂ. ಪದವಿಯನ್ನು ಪಡೆಯುತ್ತಿದ್ದಂತೆ; ನನಗೆ ವಿದೇಶಿ ಬ್ಯಾಂಕೊಂದರಲ್ಲಿ ಕೆಲಸ ಸಿಕ್ಕಿತು. ನನ್ನಲ್ಲಿರುವ ಕಲೆ, ಪ್ರತಿಭೆಯನ್ನು ಹತ್ತಿಕ್ಕಿ ಕಂಪ್ಯೂಟರ್ ಮುಂದೆ ಕುಳಿತು ಎಲ್ಲೆ ವೇಳೆಯನ್ನು ಹಾಳು ಮಾಡುತ್ತಿದ್ದೆನೆಯೋ, ಬೇರೆ ಯಾವುದೋ ದೇಶದ ಸಲುವಾಗಿ ನನ್ನ ಸಮಯವನ್ನು ಸವಿಸುತ್ತಿರುವೆ.  ನನ್ನಲ್ಲಿರುವ ಕಲೆಯಿಂದ ತಾಯ್ನಾಡಿಗಾಗಿ ಋಣ ಸಲ್ಲಿಸದೇ ಹೋದೆನಲ್ಲ ಎಂಬ ಕೊರಗು ನನ್ನನ್ನು ಆಗಾಗ ಕೊರೆಯುತ್ತಲೇ ಇತ್ತು. ಇದೇ ಸಮಯದಲ್ಲಿ  ಕಂಪನಿಯ ಆಚರಣೆಯ ಕಾರ್‍ಯಕ್ರಮದ ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ನಾನು ಭಾಗವಹಿಸಿ, ಹದಿನೈದು ನಿಮಿಷ ಒಂದು ಡಾನ್ಸ ಮಾಡಿದ್ದೆ. ಇದನ್ನು ನೋಡಿದ ನನ್ನ ಸ್ನೇಹಿತರು ’ನಿನ್ನಲ್ಲಿ ಎಂತಹ ಪ್ರತಿಭೆಯಿದೆ. ನೀನು ಫಿಲ್ಮಲ್ಯಾಂಡಿನಲ್ಲಿಯೇ ಇರಬೇಕ ಕಣೊ’ ಅಂತಾ ಪ್ರೋತ್ಸಾಹದ ನುಡಿಗಳನ್ನಾಡಿದರು. ನನಗೂ ಅದು ನಿಜವೆನ್ನಿಸಿತು.

ನಾನು ನೇರವಾಗಿ ಹೋಗಿ ಯೋಗರಾಜ ಭಟ್ಟ ಅವರನ್ನ ಭೇಟಿಯಾಗಿ ’ನಿಮ್ಮೊಂದಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಬೇಕು ಅಂತಾ ಆಸೆ ಸಾರ್’ ಎಂದೆ. ಅವರು ನೀನು ಏನ ಮಾಡ್ತಾಯಿದ್ದೀಯಾ? ಎಷ್ಟ ಸಂಬಳ ತೆಗೆದುಕೊಳ್ತಾಯಿದೀಯಾ? ಎಂದೆಲ್ಲ ಕೇಳಿ ಅವರು ’ಚಿತ್ರರಂಗಕ್ಕೆ ಬರಬೇಡ ಕಣೋ ಬಾಳು ಚಿತ್ರಾನ್ನವಾಗಿ ಹೋಗಿಬಿಡುತ್ತೆ’ ಎಂದರು ನಾನು ’ಇಲ್ಲಾ ಸಾರ್, ನನಗೆ ಟಿಫಿನ್‌ನಲ್ಲಿ ಚಿತ್ರಾನ್ನ ಎಂದರೆ ತುಂಬಾನೇ ಇಷ್ಟ’ ಎಂದೆ.  ನನ್ನಲ್ಲಿರುವ ಆತ್ಮವಿಶ್ವಾಸ, ಭರವಸೆಯನ್ನು ನೋಡಿದ ಅವರು ’ಪಂಚರಂಗಿ’ ಚಿತ್ರದಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಲು ಕೊಟ್ಟರು ಹೀಗೆ ನಾನು ಬಣ್ಣದ ಲೋಕವನ್ನು ಪ್ರವೇಶ ಮಾಡಿದೆನೆಂದು ಹೇಳಬಹುದು.

ಗುಂ.ಮಂ.: ಮುಂದೆ ನಿಮ್ಮ ಚಿತ್ರಪ್ರಪಂಚ ಹೇಗೆ ಮುಂದುವರೆಯಿತು?

ಪವನ ಒಡೆಯರ: ಮುಂದೆ ’ಗೋವಿಂದಾಯ ನಮಃ’ ಚಿತ್ರವನ್ನು ಕೈಗೆತ್ತಿಕೊಂಡೆ. ಇದರಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವೂ ನನ್ನದೇ ಈ ಚಿತ್ರ ನೂರು ದಿನಗಳಷ್ಟು ಕಾಲ ಪ್ರದರ್ಶನಗೊಂಡು ಜನಪ್ರಿಯತೆ ತಂದು ಕೊಂಡಿತು. ಈ ಚಿತ್ರದಲ್ಲಿಯ ’ನಮ್ದು ಕೆ ಪ್ಯಾರ ಆಗಿ ಬಿಟ್ಟೈತೆ……’ ಮಕ್ಕಳಿಂದ ಮುದುಕರವರೆಗೆ ಎಲ್ಲ ಬಾಯಲ್ಲಿ ನಲಿದಾಡಿತು. ಮುಂದೆ ’ಗೂಗ್ಲಿ’ ಚಿತ್ರ ಶತದಿನಗಳತ್ತ ಓಡುತ್ತಲಿದೆ. ಗಡಿಪ್ರದೇಶ ಬೆಳಗಾವಿಯಲ್ಲಿ ಎಪ್ಪತ್ತು ಎಂಬತ್ತು ದಿನಗಳ ಕಾಲ ಓಡಿತು. ಡಿಸೆಂಬರ ತಿಂಗಳಿನಲ್ಲಿ ಶತದಿನ ಕಾರ್‍ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಆಚರಿಸಲಿದ್ದಾರೆ. ಅಲ್ಲದೇ ’ಗೋವಿಂದಾಯ ನಮಃ’ ಚಿತ್ರ ತಮಿಳಿನಲ್ಲಿ ರಿಮೇಕ ಆಯ್ತು ’ಪೋಟುಲಾಡು’ ಅಂತಾ ಅದನ್ನ ನಾನೇ ನಿರ್ದೇಶನ ಮಾಡಿದೆ. ಅದು ಹ್ಯಾಟ್ರಿಕ್ ಹಿಟ್ ಆಯ್ತು. ಈಗ ಕನ್ನಡದಲ್ಲಿ ಹ್ಯಾಟ್ರಿಕ್ ಹಿಟ್ ಮಾಡಬೇಕು ನಾನು ಮುಂದಿನ ಚಿತ್ರ ಪುನಿತರಾಜಕುಮಾರ ಅವರಿನ್ನಿಟ್ಟು ಚಿತ್ರ ನಿರ್ದೇಶನ ಮಾಡುವವನಿದ್ದೇನೆ. 

ಈ ಸದ್ಯ ಬೆಳಗಾವಿಯಲ್ಲಿ ಚಿತ್ರಿಕರಣ ನಡೆಯುತ್ತಿರುವ ’ಪ್ರೀತಿ ಗೀತಿ ಇತ್ಯಾದಿ……..’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸ್ತಾಯಿದ್ದೀನೆ. ನಾಯಕ ನಟನಾಗಿ ಅಭಿನಯಿಸ್ತಾಯಿರೋ ಮೊದಲ ಚಿತ್ರ. ಇದರ ನಿರ್ದೇಶಕರು ವೀರೇಂದ್ರ ಅಂತಾ.  ಈ ಚಿತ್ರದ ಹೆಚ್ಚಿನ ಭಾಗ ಬೆಳಗಾವಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರಿಕರಣಗೊಂಡಿದೆ. ಯೋಗರಾಜ ಭಟ ಈ ಚಿತ್ರದ ಕತೆ, ಚಿತ್ರಕತೆ ಬರೆದಿದ್ದಾರೆ. ವೀರೇಂದ್ರ ಅವರ ನಿರ್ದೇಶನವಿರುವ ಈ ಚಿತ್ರದ ನಾಯಕಿಯಾಗಿ ಸಂಗೀತಾ ಭಟ್ಟ ಅಭಿನಯಿಸುತ್ತಿದ್ದಾರೆ.

ಗುಂ.ಮ.: ನೀವು ನಾಯಕ ನಟರಾಗಿ ಅಭಿನಯಿಸುತ್ತಿರುವ  ’ಪ್ರೀತಿ ಗೀತಿ ಇತ್ಯಾದಿ…..’ ಚಿತ್ರ ಬೆಳಗಾವಿಯಲ್ಲಿ ಚಿತ್ರಿಕರಣಗೊಳ್ಳುತ್ತಿರುವುದನ್ನು ನೋಡಿದರೆ ಬಹಷಃ ಉತ್ತರ ಕರ್ನಾಟಕದ ಭಾಷೆಯನ್ನೇ ಈ ಚಿತ್ರದಲ್ಲಿ ಬಳಿಸಿಕೊಂಡಿರಬಹುದೆಂದು ಅನಿಸುತ್ತದೆ?

ಪವನ ಒಡೆಯರ: ಇಲ್ಲಾ ಹಾಗೇನೂ ಇಲ್ಲ…. ಭಾಷೆ ಬೆಂಗಳೂರಿನ ಕಡೆಯದ್ದೇ ಆದರೆ ರಾಜ್ಯದ ಬೇರೆ ಬೇರೆ ಪ್ರದೇಶಗಳನ್ನು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಬೆಳಗಾವಿಯನ್ನೂ ಆರಸಿಕೊಂಡಿದ್ದಾರೆ ಅಷ್ಟೆ. ಪುನಿತ ರಾಜಕುಮಾರ ನಾಯಕ ನಟರಾಗಿ ಅಭಿನಯಿಸುತ್ತಿರು ನನ್ನ ನಿರ್ದೇಶನದಲ್ಲಿರುವ ಮುಂದಿನ ಚಿತ್ರವೂ ಕೂಡ ಸುಮಾರು ನಾಲ್ವತ್ತು ದಿನಗಳ ಕಾಲ ಬೆಳಗಾವಿಯಲ್ಲಿಯೇ ಚಿತ್ರಿಕರಣಗೊಳ್ಳಲಿದೆ.

ಗುಂ.ಮ. :  ನೀವೂ ಒಬ್ಬ ನಿರ್ದೇಶಕರಾಗಿ, ಬೇರೆಯೊಬ್ಬ ನಿರ್ದೇಶಕರ ಕೈಯಲ್ಲಿ ಕೆಲಸ ಮಾಡುವ ಈ  ಅನುಭವ ಹೇಗಿದೆ?

ಪವನ ಒಡೆಯರ: ಕಾಲೇಜ ದಿನಗಳಿಂದಲೂ ನಾನು ಈ ಕ್ಷೇತ್ರಕ್ಕೆ ಬಂದದ್ದೇ ನಟನಾಗಿ.  ಅಲ್ಲದೇ ಈಗ ನಿರ್ದೇಶನ ನೀಡುತ್ತಿರುವ ವೀರೇಂದ್ರ ಅವರು ನನಗೆ ಅತ್ಯಂತ ಆಪ್ತರು. ’ಪಂಚರಂಗಿ’ ಯಲ್ಲಿ ಅವರು, ನಾನು ಕೂಡಿಯೇ ಸಹನಿರ್ದೇಶಕರಾಗಿ ಕೆಲಸ ಮಾಡಿದ್ವಿ. ನನಗಿಂತ ಹಿರಿಯರು ಅವರಿಂದ ಸಾಕಷ್ಟು ನಾನು ಕಲಿತಿದ್ದೀನಿ. ಹೀಗಾಗಿ ನನಗೇನೂ ಹಾಗೆ ಅನ್ನಿಸುವುದಿಲ್ಲ. ಒಂದು ರೀತಿಯಲ್ಲಿ ಅವರು ನನ್ನ ಗುರುಗಳು. 

ಗುಂ.ಮ.: ’ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ಕಥಾವಸ್ತು ಏನು?

ಪವನ ಒಡೆಯರ: ಇಲ್ಲಿ ತುಂಬಿಕೊಂಡಿರುವುದೆಲ್ಲವೂ ಪ್ರೀತಿಯೇ. ಬಾರ್ ಮಾಲಿಕನಾದ ನಾಯಕನಿಗೆ ತಾನು ಪ್ರೀತಿಯ ಸೆಳತಕ್ಕೆ ಒಳಗಾಗಿದ್ದು ಗೊತ್ತೇ ಇರುವುದಿಲ್ಲ. ಅದು ಗೊತ್ತಾದ ಮೇಲೆ ಏನೇನು ಎಡವಟ್ಟುಗಳು ಆಗುತ್ತವೆ ಎಂಬುದೇ ಚಿತ್ರಕತೆಯ ಸಾರ. ಪ್ರೀತಿ ಎಂದರೆ ಅದೊಂದೆ ಇರುವುದಿಲ್ಲ. ಅದರೊಂದಿಗೆ ವಿಸ್ಮಯ, ಸೋಜಿಗಗಳೂ, ವಾತ್ಸಲ್ಯಗಳೂ ಸೇರಿಕೊಂಡಿರುತ್ತವೆ ಇವೆಲ್ಲವನ್ನೂ ಒಂದೆ ಸಾಲಿನಲ್ಲಿ ಹೇಳಬೇಕೆಂದರೆ ’ಪ್ರೀತಿ ಗೀತ ಇತ್ಯಾದಿ…..’ ಎಂದು.

ಗುಂ.ಮ.: ಹೀರೋ ಆಗಿ ನಿಮ್ಮ ಮುಂದಿನ ಚಿತ್ರ ಯಾವುದು?

ಪವನ ಒಡೆಯರ: ಬಹುಷಃ ಹೀರೋ ಆಗಿ ಇದೇ ಕೊನೆ ಚಿತ್ರ. ಯೋಗರಾಜ ಭಟ್ಟರ ಒತ್ತಾಸೆಯ ಮೇರೆ ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದೆ. ನನ್ನದೇನಿದ್ದರೂ ನಿರ್ದೇಶನ. ನಟನೆಗಿಂಗ ಚಿತ್ರ ನಿರ್ದೇಶನದಲ್ಲಿಯೇ ಹೆಚ್ಚು ಆಸಕ್ತಿ.

ಗುಂ.ಮ. : ನೀವು ಚಿತ್ರರಂಗ ಪ್ರವೇಶ ಮಾಡ್ತೀವಿ ಅಂದಾಗ ನಿಮ್ಮ ತಂದೆ – ತಾಯಿ ಪ್ರತಿಕ್ರಿಯೆ ಯಾವ ರೀತಿ ಇತ್ತು?

ಪವನ ಒಡೆಯರ: ಎಲ್ಲ ತಂದೆ ತಾಯಿಗಳಲ್ಲಿ ಇರವಂತೆ ಇವರಿಗೂ ಆತಂಕ ಕಾಡುತ್ತಲೇ ಇತ್ತು. ಎಲ್ಲಿ ಮಗ ಪ್ರತಿ ತಿಂಗಳೂ ಆದಾಯವಿರುವ ಬ್ಯಾಂಕ್ ಕೆಲಸವನ್ನು ಬಿಟ್ಟು ಎಲ್ಲಿ ಪಶ್ಚಾತಾಪ ಪಡುವಂತಾಗುತ್ತದೆಯೋ ಎಂಬ ಅಳುಕು, ಭಯವಿದ್ದೇ ಇತ್ತು. ನಾನೂ ’ನನಗೆ ಒಂದು ವರ್ಷ ಸಮಯ ಕೊಡಿ; ನಾನು ಅಂದುಕೊಂಡದ್ದನ್ನು ಮಾಡಿ ತೋರಸ್ತೀನಿ ಇಲ್ಲದಿದ್ದರೆ ನೀವು ಹೇಳಿದ ಹಾಗೇ ಮತ್ತೆ ಅದೇ ಬ್ಯಾಂಕನ್ನ ಸೇರಿಕೊಳ್ಳತೀನಿ’ ಎಂದು ಹೇಳಿದೆ.  ನನ್ನ ತಾಯಿ ಧೈರ್ಯ ಕೊಟ್ಟಳು. ತಾಯಿ ಚಾಮುಂಡೇಶ್ವರಿ ಆಶಿರ್ವಾದದಿಂದ ನಾನಂದುಕೊಂಡದ್ದನ್ನ ಮಾಡಿ ತೋರಿಸಿದೆ. ಈಗ ತಂದೆ ತಾಯಿಗೆ ಈ ಕ್ಷೇತ್ರದಲ್ಲಿ ನಾನು ಹೆಸರು ಮಾಡಬಹುದೆಂಬ  ಭರವಸೆ ಮೂಡಿದೆ.

ಗುಂ.ಮ.: ನಿಮಗೆ ಸಾಹಿತ್ಯ ರಚನೆಯತ್ತ ಒಲವು ಮೂಡಿದ ಬಗೆ? 

ಪವನ ಒಡೆಯರ: ನನ್ನ ಸಾಹಿತ್ಯ ಅಂದರೆ ಸಿನಿಮಾ ಸಾಹಿತ್ಯ. ಸಾಹಿತ್ಯವೆಂದರೆ ಅದರ ವ್ಯಾಪ್ತಿ ಬಹಳ ದೊಡ್ಡದಿದೆ. ಚಿತ್ರಕಥೆ, ಸಂಭಾಷಣೆ, ಚಿತ್ರಗೀತೆ ಹೀಗೆ ಚಲನಚಿತ್ರಕ್ಕೆ ಸಂಬಂಧಿಸದ ಸಾಹಿತ್ಯ ಮಾತ್ರ ನನಗೆ ಗೊತ್ತು. ಸಾಹಿತಿ ಎಂದೇನಿಸಿಕೊಳ್ಳಲು ಅವನ ಓದು, ಗ್ರಹಣ ಶಕ್ತಿ ಅಪಾರವಾಗಿರಬೇಕಾಗತದೆ. ನಾನು ಸಾಹಿತಿ ಎಂದು ಹೇಳಿಕೊಳ್ಳುವಷ್ಟು ದೊಡ್ಡವನಲ್ಲ. ಏನೋ ಅಷ್ಟಿಷ್ಟು ಚಲನಚಿತ್ರಕ್ಕೆ ಸಂಬಂಧಿಸಿದವುಗಳನ್ನು ಬರೆದಿದ್ದೀನಿ ಅಷ್ಟೆ.    

ಗುಂ.ಮ.: ’ನಮ್ದು ಕೆ ಪ್ಯಾರ ಆಗ ಬಿಟ್ಟೈತೈ……..’ ಹಾಡು ಎಲ್ಲರ ಬಾಯಲ್ಲಿಯೂ ನಲಿದಾಡಿತು. ಆದರೆ ಪವನ ವಡೆಯರ ಬರೆದದ್ದು ಅಂತಾ ಬಹಳಷ್ಟು ಜನಕ್ಕೆ ಗೊತ್ತಗಲೇ ಇಲ್ಲ ಇದಕ್ಕೆ ಕಾರಣ….?

ಪವನ ಒಡೆಯರ:  ಪರದೆಯ ಹಿಂದೆ ಕೆಲಸ ಮಾಡುವವರ ಹೆಸರು ಅಷ್ಟಾಗಿ ಕೇಳಿ ಬರುವುದಿಲ್ಲ. ಅಲ್ಲದೇ ನಾನು ಹೊಸಬನೆಂಬುದು ಕಾರಣವಿದ್ದರೂ ಇರಬಹುದು. ಈ ಪ್ರದೇಶದಲ್ಲಿ ಹಾಗಾಗಿರಬಹುದು. ಆದರೆ ಬೆಂಗಳೂರ ಕಡೆಗೆ ನನ್ನನ್ನು ಗುರ್‍ತು ಹಿಡಿಯುವುದೇ ’ಪ್ಯಾರ ಆಗಬಿಟ್ಟೈತೆ ಪವನ ವಡೆಯರ’ ಎಂದು. ನನಗೆ ತುಂಬ ಜನಪ್ರಿಯತೆಯನ್ನು ತಂದು ಕೊಟ್ಟ ಗೀತೆ. ಎಲ್ಲಿ ನೋಡಿದಲ್ಲಿ ಮೊಬೈಲ್ ರಿಂಗಟೋನ್ ಕೇಳಿ ಬರುತ್ತಿತ್ತು.  

ಗುಂ.ಮ.: ಉರ್ದು ಮಿಶ್ರಿತ ಕನ್ನಡ ಹಾಡು ಬರೆಯುವ ವಿಚಾರ ನಿಮ್ಮಲ್ಲಿ ಹೇಗೆ ಬಂದಿತು?

ಪವನ ಒಡೆಯರ: ನನಗೇನೋ ಮೊದಲಿನಿಂದಲೂ ಉರ್ದು ಮಿಶ್ರಿತ ಕನ್ನಡ ಭಾಷೆಯತ್ತ ಆಕರ್ಷಣೆ. ಯಾರಾದರೂ ಮಾತನಾಡುತ್ತ ಕುಳಿತಿದ್ದಾಗ ನಾನು ಅದನ್ನೇ ಕೇಳುತ್ತ ಕೂಡುತ್ತಿದ್ದೆ. ಈ ರೀತಿ ಸಂಭಾಷಣೆಯ ಪಾತ್ರಗಳು; ನಾಟಕ ಹಾಗೂ ಸಿನಿಮಾಗಳಲ್ಲಿ ಬಹಳಷ್ಟು ಬರುತ್ತಿದ್ದವು. ನಾನೂ ಅಂತಹದೊಂದು ಏನನ್ನಾದರೂ ಬರೆಯಬೇಕೆಂಬ ತುಡಿತ ನನ್ನನ್ನು ಕಾಡುತ್ತಲೇ ಇತ್ತು. ಗೋವಿಂದಾಯ ನಮಃ ಚಿತ್ರದಲ್ಲಿ ನಾಯಕಿ ಮುಸ್ಲಿಂ ಸಮಾಜದವಳು ಇರುವುದರಿಂದ ಇಂತಹ ಒಂದು ಗೀತೆಯನ್ನೇಕೆ ಬರೆಯಬಾರದೆಂದು ಅನ್ನಿಸಿತು; ಬರೆದೆ. ಎಲ್ಲರೂ ಈ ಗೀತೆಯನ್ನು ಮೆಚ್ಚಿಕೊಂಡರು.

ಗುಂ.ಮ.: ಎಲ್ಲರಂತೆ ನೀವೂ ನಿಮ್ಮ ಹೆಸರನ್ನು ಪವನಕುಮಾರ, ಪವನರಾಜ್ ಅಂತಾ ಸಿನಿಮಾ ಲೋಕಕ್ಕಾಗಿ ಬದಲಾವಣೆ ಮಾಡಿಕೊಳ್ಳಲಿಲ್ಲ.? 

ಪವನ ಒಡೆಯರ: ಹೌದು ನಮ್ಮ ’ಒಡೆಯರ’ ಮನೆತನದ ಕುರಿತು ಅಪಾರ ಪ್ರೀತಿ ಅಭಿಮಾನ. ಒಡೆಯರ ಹೆಸರನ್ನು ಮುಂದೆ ತರಬೇಕು. ಎಲ್ಲರ ಬಾಯಲ್ಲಿ ಇರಲಿ ಎಂಬ ಉದೇಶದಿಂದ ’ಪವನ ಒಡೆಯರ’ ನನ್ನ ಮೂಲ ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.    

ಗುಂ.ಮ.: ನಿಮ್ಮ ನಿಜ ಜೀವನದ ನಾಯಕಿ ಯಾವ ರೀತಿ ಇರಬೇಕೆಂದು ಇಚ್ಛೆ ಪಡುತ್ತೀರಿ?

ಪವನ ಒಡೆಯರ: ನಮ್ಮ ವೃತ್ತಿಯೊಂದು ಎಲ್ಲವುಗಳಿಗಿಂತ  ಬಿನ್ನವಾದದ್ದು ಇದಕ್ಕೆ ಸಮಯದ ಮಿತಿಯಿಲ್ಲ. ಮನೆಯಲ್ಲಿರುವುದಕ್ಕಿಂತ ಹೊರಗಡೆ ಜೀವನವೇ ಹೆಚ್ಚು. ಎಲ್ಲರಿಗೂ ಚಿತ್ರರಂಗ ಜೀವನ ಗೊತ್ತೆಯಿರುತ್ತದೆ. ಇದನ್ನರಿತು ಜೀವನ ನಡಿಸುವಂತಹ ಹುಡುಗಿ ಇರಬೇಕು. ಇವೆಲ್ಲವುಗಳಿಗಿಂತ ಮುಖ್ಯವಾಗಿ ನಮ್ಮ ತಂದೆ ತಾಯಿಯನ್ನ ಚನ್ನಾಗಿ ಗೌರವದಿಂದ ನೋಡಿಕೊಳ್ಳುವಂತಹಳಿರಬೇಕೆಂಬುದೆ ನನ್ನಾಸೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

all the very best to pawan odeyar……ji.

purushottam Kulkarni.
purushottam Kulkarni.
10 years ago

Dear Sir, 

           The interview with Shri Pawan Odeyar, is an excellent one.We experienced that " Shri Gu Ma."&" Shri Pawan Odeyar"r infront of us  & Talking to each other freely.

We wish all the best to shri Pawan Kumar, & Expect more such interesting interviews with artists in art & culture music etc. fields..

Thank u very much.

with warm wishes.

purushottam.kulkarni.

ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
8 years ago

Thanks

 

3
0
Would love your thoughts, please comment.x
()
x