ದಿಗಿಲು ನೀಡುವಂತಹ ಸನ್ನಿವೇಶವನ್ನು ನಾವಾಗಿಯೇ ಸೃಷ್ಟಸಿ, ಅನಾವಶ್ಯಕ ಆತಂಕ ಬಯಲುಪಡಿಸಿ ನಾವು ನಾವಾಗಿರದಂತೆ ದಿನಗಳ ಕಾಲ ತಲ್ಲಣಗೊಳಿಸಿಬಿಡುತ್ತದೆ ಈ ಪರೀಕ್ಷೆಯೆಂಬ ಮಾಯಕ. ಬದುಕು ಕ್ರಮಿಸುವ ಹಾದಿಯಲ್ಲಿ ಪರೀಕ್ಷೆಯೆ ಅತ್ಯಮೂಲ್ಯ. ಎಂಬುದು ಪ್ರತಿಯೊಬ್ಬರ ತಲೆಯಲ್ಲಿ ತುಂಬಿದ ನಂತರ ಇದು ಸುಲಭದಲ್ಲಿ ಬಿಟ್ಟು ಹೋಗುವಂತದ್ದಲ್ಲ. ಬದುಕು ಪಾಠ ಕಲಿಸಿ ಏಳು ಬೀಳುಗಳ ಸಮರ ಸಾರಿದ ನಂತರ ನಮಗಾಗಿಯೆ ಅರ್ಥವಾಗುವ ಮುನ್ನ ಪರೀಕ್ಷೆಯೆಂಬ ಚಿಂತೆ ಎಲ್ಲರಲ್ಲಿಯು ಇದ್ದೇ ಇರುತ್ತದೆ. ಈ ಅರ್ಥವಾಗುವ ಕಾಲ ಬಂದಾಗ ನಮ್ಮ ಅಂಕ ಗಳಿಕೆಯ ಪರೀಕ್ಷೆಗಳೆಲ್ಲವು ಮುಗಿದಿರುತ್ತದೆ! ಅವ್ಯಕ್ತ ಭಯವೆಂವ ಅಮೂರ್ತ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳಿಗಂತು ಪರೀಕ್ಷೆಯೆ ಪ್ರಮುಖವಾಗಿರುವಂತದು. ಎಂದೂ ಇಲ್ಲದ ಕಳವಳ, ತಾತ್ಕಾಲಿಕ ತನ್ಮಯತೆ, ಅನಗತ್ಯ. ಕಿರಿಕಿರಿ ಎಂದೆನಿಸುವುದು ಪರೀಕ್ಷೆಗೆ ತಯಾರಿ ನಡೆಸುವಂತಹ ಸಂದರ್ಭದಲ್ಲಿ ಕಾಣುವುದು ಸರ್ವೇಸಾಮಾನ್ಯ. ಪರೀಕ್ಷೆ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ತಯಾರಿ ಪ್ರಾರಂಭಿಸುವುದು ವಿದ್ಯಾರ್ಥಿಗಳಿಗೆ ಖಂಡಿತ ಸಾದುವಲ್ಲ. ಪಾಠಗಳು ಪ್ರಾರಂಭವಾದೊಡನೆಯೆ ಕೊನೆಗೊಮ್ಮೆ ಪರೀಕ್ಷೆ ಇದೆ ಎಂಬ ವಿಚಾರ ತಿಳಿದಿರುವಾಗ ದಿನಂಪ್ರತಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಅನಗತ್ಯ. ಆತಂಕವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದಲ್ಲವೇ? ನಮ್ಮ ಗುರುಗಳೊಬ್ಬರು ಆಗಾಗ್ಗೆ ಹೇಳುತ್ತಿದ್ದರು. ಇಡೀ ವರ್ಷ ಓದಿದನ್ನು ಕೇವಲ ಮೂರು ಗಂಟೆಯಲ್ಲಿ ಬರೆದು ಮುಗಿಸಬೇಕು. ಈ ವ್ಯವಸ್ಥಯೆ ಸರಿ ಇಲ್ಲ ಎನ್ನುತ್ತಿದ್ದರು.ಈ ಸರಿ ಇಲ್ಲದ ವ್ಯವಸ್ಥೆ ಈಗ ಸುಧಾರಿಸಿ ಸೆಮಿಸ್ಟರ್ ಬಂದ ನಂತರ ಇಡೀ ವರ್ಷ ಕಲಿತು ಬರಿಯುವಂತಹ ವ್ಯವಸ್ಥೆ ಬದಲಾಗಿದ್ದಂತು ನಿಜ. ಅಂದರೆ ಮಕ್ಕಳಿಗೆ ಓದುವಿಕೆಯಲ್ಲು ಸುಧಾರಣೆ ಬಂದಿದೆ. ಹೀಗಿರುವಾಗ ಇರುವ ಸ್ವಲ್ಪವೇ ಅಧ್ಯಯಗಳನ್ನು ಓದಿ ಸುಲಭವಾಗಿ ಪರೀಕ್ಷೆಯನ್ನು ಎದುರಿಸಬಹುದು.
ಪ್ರತಿದಿನ ಅಂದು ಮಾಡಿದ ಪಾಠಗಳನ್ನು ಓದದ ಬಾವಿಗಳು ಪರೀಕ್ಷೆ ಬಂತೆದರೆ ಧುತ್ತೆಂದು ಧಾವಿಸುವ ನಮ್ಮ ಮನೋಸ್ಥತಿ ಬಲು ಸೋಜಿಗವೆಂದೆನಿಸಿಬಿಡುತ್ತದೆ.ಪರೀಕ್ಷೆಯಂದು ಪ್ರತಿನಿತ್ಯ. ಹೋಗುವ ಬಸ್ಸಿಗಿಂತ ಮೊದಲೇ ತೆರಳುವುದು, ತಪ್ಪಿದ್ದಲ್ಲಿ ಗೆಳತಿಯರ ಮನೆಯಲ್ಲಿ ಉಳಿಸಿಕೊಳ್ಳುವುದು ಸಾಮಾನ್ಯ..ಇದು ಪರೀಕ್ಷೆಗೆ ತೆರಳಲು ತಡವಾಗುವುದಿಲ್ಲ ಎಂಬ ಸಾಧ್ಯತೆಯಿದ್ದರು ತಡವಾದರೆ ಎಂಬ ಭಯ. ಅಥವ ಕೊಂಚ ಸಮಯ ಉಳಿಸಿ ಏನಾದರು ಓದೋಣ ಎಂಬ ಹುಸಿ ನಂಬಿಕೆಗಳು. ಲೇಖನಿ ಸಾಮಾಗ್ರಿಗಳ ಬಗ್ಗೆ ವಿಶ್ವಾಸವಿದ್ದರು ಎರಡೆರಡು ತೆಗೆದಿರಿಸಿಕೊಳ್ಳುವುದು ಸಾಮಾನ್ಯ. ಯಾವಾಗಲೂ ಆರು ಗಂಟೆಗೆ ಹಾಸಿಗೆ ಬಿಟ್ಟೇಳುವ ವಿದ್ಯಾರ್ಥಿ ಪರೀಕ್ಷೆಯಂದು ನಾಲ್ಕಕ್ಕೆ ಏಳುವ ಪರಿಪಾಠ, ಪರೀಕ್ಷೆಯಂದು ದಿನಪತ್ರಿಕೆ ಓದಿದರೆ ಸಮಯ ವ್ಯರ್ಥವೆಂಬ ಆಲಾಪ,ಮಾಮೂಲಿನಂತೆ ಮಾಡುವ ಅಲಂಕಾರಕ್ಕೆ ಪರೀಕ್ಕೆಯಂದು ಸ್ವಲ್ಪ. ರಿಯಾಯಿತಿ,ಪಕ್ಕದ ಮನೆಗೆ ಹಾಲಿಗೆ ಹೋಗುವ ಪರಿಪಾಠ ಆದಿನ ರದ್ದು,ಎಂದೂ ಇಲ್ಲದ ದೇವರ ನೆನಪು ಪರೀಕ್ಷಾ ದಿನಗಳಲ್ಲಿ ಉಕ್ಕಿ ಬರುತ್ತದೆ, ಮಾತು ಕಡಿಮೆ ಮುಂತಾದ ತಳಮಳಗಳ ಗೋಜಲು ಪ್ರಕ್ರಿಯೆಗಳನ್ನು ಎಲ್ಲರು ಅನುಭವಿಸಿಯೇ ತಮ್ಮ. ವಿದ್ಯಾರ್ಥಿ ದಿಶೆಯನ್ನು ಕಳೆದಿರುತ್ತಾರೆ.ನಾವೆಲ್ಲರು ಇದಕ್ಕೆ ಹೊರತಾಗಿಲ್ಲ.ಇಂತಹ ಅವಶ್ಯಕ ಇಲ್ಲದಿರುವ ವಿಚಾರಗಳನ್ನು ಪರೀಕ್ಷೆ ಪರೀಕ್ಷೆ ಎಂದು ದುಂಬಾಲು ಬಿದ್ದು ನಮ್ಮ ದಿನಚರಿಯನ್ನೇ ಬದಲಾಯಿಸಿಕೊಳ್ಳುವುದರಲ್ಲಿ ಯಾವುದೇ ಹುರುಳಿಲ್ಲ ಎಂಬುದು ನಿರ್ವಿವಾದ ಸಂಗತಿ. ಯಾಕೆಂದರೆ ಪರೀಕ್ಷೆ ಬರುವ ಮೊದಲೇ ಅಭ್ಯಾಸಗಳನ್ನು ಮನದಟ್ಟು ಮಾಡಿಕೊಂಡರೆ ಅದೆಷ್ಟೋ ನಿರಾಳತೆಯನ್ನು ನಾವು ಪಡೆದುಕೊಳ್ಳಬಹುದು. ಮೊದಲೇ ಎಲ್ಲವನ್ನು ಕಲಿತ್ತಿದ್ದು ಪರೀಕ್ಷೆ ಬಂದಾಗಲೊಮ್ಮೆ ಮನನ ಮಾಡಿಕೊಂಡು ಹಾಯಾಗಿ ಖುಷಿಖುಷಿಯಾಗಿ ಪರೀಕ್ಷೆಯ ದಿನ ಇದ್ದುಬಿಡಬಹುದು ಅಲ್ಲವೇ?
ಇದಕ್ಕಿಂತ ಇನ್ನು ಆಘಾತಕಾರಿ ವಿಷಯವೆಂದರೆ ಫಲಿತಾಂಶ ಬಂದಾಗ ಆತ್ಮಹತ್ಯೆ ಇಲ್ಲವೆ ಮನೆ ಬಿಟ್ಟು ಹೋಗುವಂತಹ ಆಲೋಚನೆಗಳನ್ನು ಮಾಡಿ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು.ಅಂಕಗಳಿಕೆಯೆ ಭವಿಷ್ಯಕ್ಕೆ ಬದುಕಿಗೆ ಮಾನದಂಡ ಅಲ್ಲ ಎಂಬ ಅರಿವು ಮೂಡಿಸುವಲ್ಲಿ ಪಾಲಕರು,ಪೋಷಕರು, ಶಿಕ್ಷಕರು ಒಟ್ಟಿನಲ್ಲಿ ಸಮಾಜ ಮಕ್ಕಳಿಗೆ ಅರ್ಥೈಸಿಬಿಡಬೇಕು.ಪರೀಕ್ಷೆ ಎಂಬುದು ಆತಂಕಕಾರಿಯಾಗಿ ಭಯವೇ ಮೂಡಿಸುವಂತಿದ್ದರೆ ಈ ಪರೀಕ್ಷೆ ಎಂಬ ಪರಿಕಲ್ಪನೆಗೆ ಅರ್ಥವಿದೆಯೇ?ಇನ್ನೂ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ಹಂತದಲ್ಲಿ ಶಿಕ್ಷಕರಿಗೆ ಅಚ್ಚರಿಯಾಗುವಂತಹ ಹಲವಾರು ವಿಚಾರಗಳು ಅದರಲ್ಲಿ ಇರುತ್ತವೆ.ವಿಷೇಷವಾದದನ್ನು ಪತ್ರಿಕೆಯಲ್ಲಿ ಪ್ರಕಟಿಸಿತು ಇರುತ್ತಾರೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಚಿಕ್ಕ ಚಿಕ್ಕ. ಅಂಕ ವ್ಯತ್ಯಾಸದಿಂದ ದೊಡ್ಡ ದೊಡ್ಡ ಅವಕಾಶಗಳಿಂದ ವಂಚಿತರಾದವರು ಹಲವರಿದ್ದಾರೆ.ಇಂತಹ ಅವಕಾಶವನ್ನು ಕಳೆದುಕೊಂಡವರು ತಮ್ಮ ಆಶಾವಾದವನ್ನು ಖಂಡಿತ ಕಳೆದುಕೊಳ್ಳಬಾರದು.ಆಶಾವಾದದ ನಡಿಗಯೇ ನಮ್ಮ ಜೀವನವಾಗಬೇಕು ಅದುವೆ ನಮ್ಮ ಧ್ಯೇಯವಾಗಬೇಕು. ನಮ್ಮ ಬದುಕೇ ನಮಗೊಂದು ಅತ್ಯಮೂಲ್ಯ ಉಡುಗೊರೆ. ಈ ಉಡುಗೊರೆಯನ್ನು ಪರೀಕ್ಷೆ ಎಂಬ ಸಣ್ಣ ಕಾರಣಕ್ಕೆ ನಾವು ಕಳೆದುಕೊಳ್ಳುಲು ತಯಾರಿರಬಾರದು.ಬದುಕಿನಲ್ಲಿ ಪಾಠದ ಪರೀಕ್ಷೆ ಹೊರತಾಗಿ ಅದೆಷ್ಟೋ ಪರೀಕ್ಷೆಗಳನ್ನು ನಾವು ಎದುರಿಸುತ್ತಲೇ ಇರುತ್ತೇವೆ.ತರಗತಿಯಲ್ಲಿ ಪಾಠ ಮಾಡುವಾಗ ಮನಸ್ಸಿಟ್ಟು ಆಲಿಸಿದರೆ ಅರ್ಧ ಪರೀಕ್ಷೆ ಎದುರಿಸಿದಂತೆ ಸರಿ. ಪ್ರತಿದಿನ ಅಂದಿನ ಪಾಠವನ್ನು ಓದುವ ಅಭ್ಯಾಸ ಇದ್ದರೆ ಪರೀಕ್ಷೆಗೆಂದೇ ಓದುವ ಜಾಯಮಾನವು ಇರುವುದಿಲ್ಲ. ಮುಖ್ಯವಾಗಿ ಪರೀಕ್ಷೆ ಎಂದು ಭಯ ಬೀಳದಿದ್ದರೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಹುದು.
ಪರೀಕ್ಷೆ ಸನಿಹ ಬಂದಾಗಲೇ ಪೋಷಕರ ಅತಿಯಾದ ಹೇರಿಕೆಯು ಸಲ್ಲದು.ಪ್ರತಿದಿನ ಓದಲು ಸಮಯ ನಿಗದಿ ಪಡಿಸಿ ಅದರಂತೆಯೇ ಆಯಾ ದಿನಗಳಲ್ಲಿ ಮಾಡಿದಂತಹ ಪಾಠಗಳನ್ನು ಓದುವ ಹವ್ಯಾಸ ಬೆಳೆಯಿಸಿದರೆ ಪರೀಕ್ಷೆಯೆಂಬುದು ಭಯಮುಕ್ತವಾಗುತ್ತದೆ. ವಿದ್ಯಾರ್ಥಿಗಳ ಅಂಕಗಳನ್ನು ನೀಡಿದ ಮೇಲೆ ಮುಂದಿನ ಸಲ ಇನ್ನು ಹೆಚ್ಚು ತೆಗೆಯಬೇಕೆಂಬ ಪ್ರೋತ್ಸಾಹದ ನುಡಿಗಳನ್ನಾಡಬೇಕು.ಪರೀಕ್ಷೆ ಬಂದಾಗಲೇ ಒತ್ತಡ ಹೇರಿದರೆ ಆ ಮಕ್ಕಳಾದರು ಏನು ಮಾಡಲು ಸಾಧ್ಯ? ಇತ್ತೀಚೆಗಷ್ಟೆ ನನ್ನ ಗೆಳತಿಯ ಮನೆಗೆ ಹೋದಾಗ ಅಲ್ಲಿ ಸೂಜಿ ಬೀಳಿಸಿದರು ಕೇಳಿಸುವಷ್ಟು ನಿಶ್ಯಬ್ದ. ಕರೆಗಂಟೆ ಒತ್ತುವ ಮೊದಲೇ ಬಾಗಿಲು ತೆರೆದದ್ದಾಯಿತು.ಬಂದದ್ದು ತಿಳಿಯಿತೇ ಎಂದು ಕೇಳಿದರೆ ಶ್ಶ್ ….ಮೆಲ್ಲನೆ ಮಾತಾನಾಡು ಮಕ್ಕಳು ಓದುತ್ತಿದ್ದಾರೆ, ಹಾಗಾಗಿ ಕರೆಗಂಟೆ ಕನೆಕ್ಷನ್ ತೆಗೆದು ಹೊರಬಾಗಿಲು ನೋಡುತ್ತಾ ಇರುತ್ತೇನೆ ಅಂದಳು.ಮೊಬೈಲ್ ಸೈಲೆಂಟ್ ಮೋಡ್, ಪಾತ್ರೆಗಳದ್ದು ಸದ್ದಿಲ್ಲ ದ ಕೆಲಸ ಇನ್ನೂ ಏನೇನೋ ನಿಶ್ಯಬ್ದಕ್ಕೆ ಸೂತ್ರಗಳು. ಇಲ್ಲಿಯವರೆಗೆ ಬಂದು ಮಕ್ಕಳನ್ನು ಸ್ವಲ್ಪ ಮಾತಾಡಿಸಿ ಹೋಗುತ್ತೇನೆಂದು ಅವರ ಕೋಣೆಗಳಿಗೆ ತೆರಳಿದರೆ ಕೂತಲ್ಲಿಯೇ ತೂಕಡಿಸುತ್ತಿದ್ದ ಮಗರಾಯ, ಮಗಳಂತು ಪುಸ್ತಕವನ್ನು ಅವುಚಿ ಆಗಲೇ ನಿದ್ರೆಗೆ ಶರಣಾಗಿದ್ದಳು.
ನಾವೇ ನಮ್ಮ ನಡವಳಿಕೆಯನ್ನು ಮನನ ಮಾಡಿಕೊಂಡು ಪರೀಕ್ಷೆಯ ಆಸುಪಾಸು ದಿನಗಳಲ್ಲಿ ಇವೆಲ್ಲವೂ ಅವಶ್ಯಕತೆ ಇದೆಯೇ ಎಂಬುದನ್ನು ಆಲೋಚನೆ ಮಾಡಿಕೊಳ್ಳಬೇಕು. ನಮ್ಮ ದಿನನಿತ್ಯದ ಪರಿಪಾಲನೆಯನ್ನು ಅನುಸರಿಸಿ ಪರೀಕ್ಷೆ ಬರೆದರೆ ಏನಾಗುತ್ತದೆ? ಏನೂ ಆಗುವುದಿಲ್ಲ. ಫಲಿತಾಂಶದಲ್ಲಿ ಎಷ್ಟು ವ್ಯತ್ಯಾಸ ಬರಬಹುದು?ನಮ್ಮ ಬುದ್ಧಿ ಮತ್ತೆಯ ಮಿಗಿಲಾಗಿ ಏನೂ ಅಂಕ ದೊರೆಯಲು ಸಾಧ್ಯವಿಲ್ಲ. ಪರೀಕ್ಷೆ ಸಮಯದಲ್ಲಿ ಮಾತ್ರವೇ ಇರುವ ವಿಶೇಷವಾದ ನಡೆ ನುಡಿಗಳನ್ನು ಪ್ರಾರಂಭದಲ್ಲೇ ಪ್ರಾರಂಭಿಸಿದರೆ ಪರೀಕ್ಷೆಯನ್ನು ಮಕ್ಕಳು ಎಷ್ಟು ನಿರಾಳವಾಗಿ ಬರೆಯಬಹುದು ಅಲ್ಲವೇ?ಚಿಂತೆರಹಿತ ಮಕ್ಕಳ ಮುಖಗಳನ್ನು ನಾವೆಲ್ಲರು ನೋಡಬಹುದು. ಬದುಕು ಕಲಿಸುವ ಪಾಠದ ಮುಂದೆ ನಾವು ಕಲಿಯುವ ಪಠ್ಯ. ಏನೇನೂ ಅಲ್ಲ. ಜೀವನ ಪರೀಕ್ಷೆಗಳು ಹಂತ ಹಂತವಾಗಿ ಬರುವಾಗ ಈ ಪಾಠದ ಪರೀಕ್ಷೆಯು ನಮಗೆ ಜೀವನ ಪರೀಕ್ಷೆಯನ್ನು ಎದುರಿಸುವ ಕಲೆಗಾರಿಕೆಯನ್ನು ಕಲಿಸಬೇಕು. ಆಗ ಪರೀಕ್ಷೆಯ ಅರ್ಥ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ವಿದ್ಯಾರ್ಥಿಗಳು ತರಗತಿಯ ಪರೀಕ್ಷೆಗಳನ್ನು ಸಂಯಮ, ಧೈರ್ಯ,ಮತ್ತು ಆತ್ಮವಿಶ್ವಾಸದಿಂದ ಎದುರಿಸಿದರೆ ಅಷ್ಟೇ ಸಾಕಾಗುತ್ತದೆ.
-ಸಂಗೀತ ರವಿರಾಜ್