ಲೇಖನ

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು…: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ ಅದೇಷ್ಟೋ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂತು/ ಫೇಲಾದೆ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.

ಪಾಸಾದವರು, ರ್ಯಾಂಕ್ ಪಡೆದವರಷ್ಟೇ ಪ್ರತಿಭಾವಂತರಲ್ಲ. ನೆನಪಿರಲಿ ಫೇಲಾದವರೂ ಜೀವನದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನೆನಪಿಸಿಕೊಂಡು, ಮುಂದಿನ ಗುರಿ-ಛಲದೊಂದಿಗೆ ಮುನ್ನುಗ್ಗಬೇಕು. ಜೀವನ ಮತ್ತು ಸಾಧನೆಗೆ ಶಿಕ್ಷಣವೊಂದೇ ಮುಖ್ಯವಲ್ಲ.

ಕನಿಷ್ಠ ಓದು ಬರಹ ಕಲಿತವರೆಷ್ಟೋ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಬರಹಗಾರರಾಗಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದಾರೆ. ಸಾಮಾಜಿಕ ಚಿಂತಕರಾಗಿ, ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಹೋರಾಟಗಾರರಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಮಾಡಿದವರಿದ್ದಾರೆ.

ಅಷ್ಟೇ ಅಲ್ಲ ಅದೇಷ್ಟೋ ಖ್ಯಾತ ಸಿನಿಮಾ ನಟರು, ಕಲಾವಿದರಿಗೆ ಶೈಕ್ಷಣಿಕ ವಿದ್ಯಾಭ್ಯಾಸ ಅವರ ಜೀವನದಲ್ಲಿ ಮುಖ್ಯವೆನಿಸದೇ ಇಡೀ ಜಗತ್ತು ಬೆರಗಾಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಉದಾಹರಣೆಗೆ: ನಮ್ಮ ಕನ್ನಡದ ಕಣ್ಮಣಿ, ವರನಟರೆಂದೇ ಖ್ಯಾತರಾಗಿ ಇಡೀ ಚಿತ್ರರಂಗವನ್ನೇ ಆಳಿದ ಡಾ. ರಾಜಕುಮಾರ ಅವರಿಂದ ಹಿಡಿದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರೌಢಶಾಲಾ ಶಿಕ್ಷಣವನ್ನೂ ಕಲಿಯುವಂಥ ಪರಿಸ್ಥಿಯಿರದ ಅವರ ಜೀವನದಲ್ಲಿ ಇವತ್ತು ಅದೆಂಥ ಅತ್ಯದ್ಭುತ ಸಾಧನೆಯನ್ನು ಮಾಡಿದ್ದಾರೆ ಎಂಬುದನ್ನು ಫೇಲಾದ ವಿದ್ಯಾರ್ಥಿಗಳು ಅಂತಹ ಮಹಾನ್ ಸಾಧಕರ ಜೀವನವನ್ನು ಒಮ್ಮೆ ತಿರುಗಿ ನೋಡಬೇಕು.

ಯಾಕೆಂದರೆ ಫೇಲಾದೆ/ ಪರೀಕ್ಷೆ ಫಲಿತಾಂಶದಲ್ಲಿ ಕಡಿಮೆ ಮಾರ್ಕ್ಸ್ ತಗೋಂಡೆ ಎಂಬ ಕಾರಣಕ್ಕೆ, ಖಿನ್ನತೆಗೊಳಗಾಗಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಧೈರ್ಯದಿಂದ ಜೀವನವನ್ನು ಎದುರಿಸಬೇಕಾಗಿದೆ.

ಯಾರೇ ಆಗಲಿ ಫೇಲಾದೆ, ತಂದೆ/ತಾಯಿ/ಪೋಷಕರು ಬೈತಾರೆ ಎಂಬ ಕಾರಣಕ್ಕೆ ಯಾರೂ ಕೂಡ ಆತ್ಮಹತ್ಯೆಯಂಥ ಮಾಡಿಕೊಳ್ಳುವ ಯೋಚನೆಯನ್ನು ಮಾಡದೇ, ಮುಂಬರುವ ದಿನಗಳಲ್ಲಿ ನಾನು ಪಾಸಾಗುತ್ತೇನೆ, ಉತ್ತಮ ಅಂಕಗಳನ್ನು ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದರ ಮೂಲಕ ಜೀವನವನ್ನು ಗೆಲ್ಲಬೇಕಾಗಿದೆ.

ಹತ್ತು ಹಲವು ಸಲ ಜೀವನವೆಂಬ ಪರೀಕ್ಷೆಯಲ್ಲಿ/ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಫೇಲಾದವರೆಷ್ಟೋ ಜನ ಇವತ್ತು ರಾಜ್ಯವನ್ನಾಳುವ ರಾಜಕಾರಣಿಗಳಾಗಿ, ಶಾಸಕರುಗಳಾಗಿ, ಮಂತ್ರಿ, ಸಂಸದರಾಗಿ, ವಿವಿಧ ಸಾಮಾಜಿಕ ಹುದ್ದೆಗಳಲ್ಲಿ ಸಾಧನೆಯನ್ನು ಮಾಡಿದವರು/ ಮಾಡುತ್ತಿರುವರು ಅದೆಷ್ಟೋ ಜನರನ್ನು ನೋಡಿ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ.

ಆದ್ದರಿಂದ ಫೇಲಾದೆ, ಕಡಿಮೆ ಮಾರ್ಕ್ಸ್ ತಗೊಂಡೆ ಎಂಬ ವಿಷಯಕ್ಕೆ ಯಾರೂ ಬೇಸರಿಸಿಕೊಳ್ಳದೇ, ಖಿನ್ನತೆಗೊಳಗಾಗದೇ ಜೀವನ ಮತ್ತು ಸಾಧನೆಗಾಗಿ ತಮಗೆ ಬೇಕಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಜೀವಿಸಬೇಕು. ನಿರಾಸೆಗೊಳಗಾದ ವಿದ್ಯಾರ್ಥಿಗಳಿಗೆ ಪಾಲಕರು, ಹೆತ್ತ ತಂದೆ ತಾಯಿಗಳು, ಪೋಷಕರು, ಸ್ನೇಹಿತರು ಅಧೈರ್ಯವನ್ನು ತುಂಬದೇ ಅಂಥವರನ್ನು ಧೈರ್ಯದಿಂದ ಜೀವನವನ್ನು ಎದುರಿಸುವಂತೆ ಅಭಯವನ್ನು ನೀಡಬೇಕಾಗಿದೆ.

ಇನ್ನೂ ಪಾಸಾದ ವಿದ್ಯಾರ್ಥಿಗಳು, ಹೆಚ್ಚಿನ ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿರುವರು ಫೇಲಾದ ತಮ್ಮ ಸಹಪಾಠಿ ಸ್ನೇಹಿತರನ್ನು, ವಿದ್ಯಾರ್ಥಿಗಳನ್ನು, ಬದುಕಿನ ಬಗ್ಗೆ ಅಭಯವನ್ನು ನೀಡಿ, ಸೋತವರನ್ನು ಕೂಡ ತಮ್ಮಂತೆ ಜೀವನವನ್ನು ಗೆಲ್ಲುವಂತೆ ಪ್ರೋತ್ಸಾಹಿಸಬೇಕಾಗಿದೆ. ಪರೀಕ್ಷೆಯಲ್ಲಿ ಫೇಲಾದವರನ್ನೂ ಸಹ ಅಪ್ಪಿಕೊಳ್ಳಬೇಕಾಗಿದೆ. ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನೆಲ್ಲ ಅಭಿನಂದಿಸುತ್ತಾ ಈ ನನ್ನ ಲೇಖನದ ಉದ್ದೇಶ ಸಾರ್ಥಕಗೊಳ್ಳಲೆಂದು ಆಶಿಸುತ್ತೇನೆ.

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು… ಜೀವನವನ್ನು ಗೆಲ್ಲಬೇಕಾಗಿದೆ. ಹಾಗಾಗಿ ಫೇಲಾದ ಅದೇಷ್ಟೋ ಸಾಧಕರ ಜೀವನದ ಪುಟವನ್ನೊಮ್ಮೆ ತೆರೆದು ನೋಡಬೇಕಾಗಿದೆ.

– ವೀರಣ್ಣ ಮಂಠಾಳಕರ್, ಬಸವಕಲ್ಯಾಣ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *