ಪಂಜು-ವಿಶೇಷ

ಪರಿಸರ ವಿನಾಶ ಮತ್ತು ಆರ್ಥಿಕ ಅಸಮಾನತೆಯಿಂದ ನಾಗರೀಕತೆಯ ಅಳಿವು: ಜೈಕುಮಾರ್.ಹೆಚ್.ಎಸ್

ಪ್ರಳಯ ಸಂಭವಿಸಿ ಇಡೀ ವಿಶ್ವವೇ ವಿನಾಶಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ ಸ್ವಾಮೀಜಿ-ಜ್ಯೋತಿಷಿಗಳು ಪ್ರಳಯ ಸಂಭವಿಸದೇ ಇದ್ದಾಗ ಸಬೂಬು ಹೇಳುವುದನ್ನು ಗಮನಿಸಿದ್ದೇವೆ. ವಿಶ್ವದಲ್ಲಿ ಮನುಷ್ಯ ಸಮಾಜ ಹೇಗೆ ವಿನಾಶಗೊಳ್ಳುತ್ತದೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ ಸವೆಸಿರುವ ಕಾಲಘಟ್ಟವನ್ನು ನಾಗರೀಕತೆ ಎನ್ನುತ್ತೇವೆ. ಮಾನವ ಇತಿಹಾಸದ ಉದ್ದಕ್ಕೂ ಹಲವು ನಾಗರೀಕತೆಗಳು ಏಳಿಗೆ ಕಂಡು ಅವಸಾನ ಹೊಂದಿವೆ. ಮಾನವ ನಾಗರೀಕತೆಗಳು ಹೇಗೆ ಅವಸಾನ ಕಾಣುತ್ತವೆ ಎಂಬುದರ ಕುರಿತು ಇತ್ತೀಚೆಗೆ ಅಮೇರಿಕಾದ ನಾಸಾ ಸಂಸ್ಥೆಯ ನೆರವಿನಿಂದ ಗಣಿತ ಮಾದರಿಯಲ್ಲಿ ವಿಜ್ಞಾನಿ ಸಫ ಮೊಟೆಷೆರಿ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ. ಅತ್ಯಧ್ಬುತ ತಾಂತ್ರಿಕ ಸಾಮರ್ಥ್ಯ, ವೈಜ್ಞಾನಿಕ ತಿಳುವಳಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಆಧುನಿಕ ನಾಗರೀಕ ಸಮಾಜವೂ ಕೂಡ ಪರಿಸರದ ವಿನಾಶ ಮತ್ತು ಅಸಮಾನತೆಗಳ ಕಾರಣಗಳಿಂದ ಅವಸಾನಗೊಳ್ಳುವುದು ಗ್ಯಾರಂಟಿ ಎಂದು ಅಧ್ಯಯನ ಹೇಳುತ್ತದೆ. 

ಅವಸಾನ ಕಂಡ ನಾಗರೀಕತೆಗಳು:
ಮಾನವ ಇತಿಹಾಸದಲ್ಲಿ ನಮಗೆ ಹೆಚ್ಚು ತಿಳಿದಿರುವ ನಾಗರೀಕತೆಗಳ ವಿನಾಶದ ಕಾರಣಗಳನ್ನು ಈ ಅಧ್ಯಯನ ಪಟ್ಟಿ ಮಾಡಿದೆ. ಕ್ರಿಶ್ತಪೂರ್ವ ೯೦೦ – ೭೬೬ರ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿದ್ದ ರೋಮನ್ ಸಾಮ್ರಾಜ್ಯದ ಪತನವು ಆರ್ಥಿಕ ಬಿಕ್ಕಟ್ಟು, ಜೊತೆಗೆ ಬೌದ್ದಿಕವಾಗಿ ಹಿಂದುಳಿದದ್ದು, ಸಾಕ್ಷರತೆ ಕುಸಿತಗೊಂಡದ್ದು, ಜನಸಂಖ್ಯೆಯ ಇಳಿತ, ಇತ್ಯಾದಿ ಕಾರಣಗಳಿಂದ ಸಂಭವಿಸಿದೆ ಎಂದು ಅಧ್ಯಯನ ತಿಳಿಸಿದೆ. ಹಾಗೆಯೇ ನಾಗರೀಕತೆಯ ತೊಟ್ಟಿಲು ಎಂದು ಕರೆಯಲಾಗುವ ಕ್ರಿಶ್ತಪೂರ್ವ ೩೧೦೦ ರಲ್ಲಿ ಮೆಸೊಪೋಟಮಿಯಾ (ಇಂದಿನ ಇರಾಕ್ ದೇಶದ ಭಾಗ) ನಾಗರೀಕತೆ ಏಳಿಗೆ ಕಂಡು ನಾಶವಾಯಿತು. ಭಾರತದಲ್ಲಿ ಸಿಂಧೂ ಕಣಿವೆಯ ನಾಗರೀಕತೆಯು (ಕ್ರಿಶ್ತಪೂರ್ವ ೩೩೦೦-೧೬೦೦ ರವರೆಗೆ) ಮತ್ತು ಮುಂದುವರೆದ ನಾಗರೀಕತೆಗಳಾದ ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯಗಳು ಕೂಡ ಮಹತ್ತರ ಏಳಿಗೆ ಹೊಂದಿ ಹಾಗೆಯೇ ಅವಸಾನಗೊಂಡವು. ಕ್ರಿಶ್ತಪೂರ್ವ ೨೦೦೦ – ಕ್ರಿಶ್ತಸಕ ೨೫೦ ರವರೆಗೆ ಅಸ್ತಿತ್ವದಲ್ಲಿದ್ದ ಮಾಯಾ ನಾಗರೀಕತೆಯು (ಅಮೇರಿಕಾದ ಭಾಗ) ಸಂಪೂರ್ಣವಾಗಿ ಕಣ್ಮರೆಯಾಗಿದೆ. ಇದೇ ರೀತಿಯ ಇತರೆ ನಾಗರೀಕತೆ ಅವಸಾನಗಳು ಪ್ರಪಂಚದ ಇತರೆಡೆಗಳಲ್ಲೂ ಸಂಭವಿಸಿವೆ. 

ಅಳಿವಿನ ಸಂಶೋಧನೆಗೆ ಈ ಹಿಂದೆ ನಡೆಸಿದ ಅಧ್ಯಯನ: 

ನವಶಿಲಾ ಯುಗದ ಅವಧಿಗೆ (ಕ್ರಿಶ್ತಪೂರ್ವ ೧೦೨೦೦ – ೨೦೦೦) ಸಂಬಂಧಿಸಿದಂತೆ ೨೦೧೩ರಲ್ಲಿ ವಿಜ್ಞಾನಿ ಸ್ಟೀಫನ್ ಷೆನ್ನನ್ ರವರು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯವು ಪ್ರತಿಯೊಂದು ನಾಗರೀಕತೆಯ ’ಏಳಿಗೆ ಮತ್ತು ವಿನಾಶ’ಕ್ಕೆ ಒಂದಕ್ಕಿಂತ ಹೆಚ್ಚಿನ ಕಾರಣಗಳನ್ನು ನೀಡುತ್ತದೆ ಮತ್ತು ಜನಸಂಖ್ಯೆಯು ಶೇ. ೩೦-೬೦ ರಷ್ಟು ಇಳಿತ ಕಂಡಿದ್ದನ್ನು ತೋರಿಸುತ್ತದೆ. ಇದಕ್ಕೆ ಆಯಾಯ ನಾಗರೀಕತೆಯ ಆಂತರಿಕ ವಿದ್ಯಮಾನಗಳೇ ಕಾರಣವೆಂದು ಹಾಗೂ ಇಂತಹ ನಾಗರೀಕತೆಯ ’ಏಳಿಗೆ ಮತ್ತು ವಿನಾಶ’ದ ಆವರ್ತವು ೩೦೦-೫೦೦ ವರ್ಷಗಳ ಅವಧಿಗೊಂದು ಬಾರಿ ಸಂಭವಿಸುತ್ತವೆ. ನಾವು ಭಾವಿಸುವಂತೆ ’ಸಮಾಜದ ವಿನಾಶವು ಅಪರೂಪ’ ಎಂಬುದಕ್ಕೆ ವಿರುದ್ದವಾಗಿ ಇದು ಇತಿಹಾಸದಲ್ಲಿ ಆಗಾಗ್ಗೆ ಮರುಕಳಿಸುತ್ತದೆ ಮತ್ತು ಜಾಗತಿಕವಾಗಿ ಹರಡಿಕೊಂಡಿದೆ ಎಂದು ಅಧ್ಯಯನ ಹೇಳುತ್ತದೆ. ಈ ಅಧ್ಯಯನದಲ್ಲಿ ಪ್ರತಿಯೊಂದು ವಿನಾಶದ ಪ್ರಕರಣಕ್ಕೂ ಹಲವು ಕಾರಣಗಳನ್ನು ನೀಡಲಾಗಿದೆ: ನೈಸರ್ಗಿಕ ವಿಕೋಪಗಳು, ನದಿ ಹರಿವಿನ ಪಾತ್ರದಲ್ಲಿ ಬದಲಾವಣೆ, ಮಣ್ಣಿನ ಸವಕಳಿ, ಅರಣ್ಯ ನಾಶ, ಹವಾಮಾನ ಬದಲಾವಣೆ, ಆದಿವಾಸಿಗಳ ವಲಸೆ, ವಿದೇಶಿ ಆಕ್ರಮಣ, ತಂತ್ರಜ್ಞಾನದಲ್ಲಿ ಬದಲಾವಣೆ, ಯುದ್ದ ಶಸ್ತ್ರಾಸ್ತ್ರಗಳಲ್ಲಿ ಬದಲಾವಣೆ, ಜನಪ್ರಿಯ ಬಂಡಾಯಗಳು ಮತ್ತು ನಾಗರೀಕ ಯುದ್ದ, ಇತ್ಯಾದಿ.

ಅಸಮಾನ ಸಮಾಜ ಬಹುಬೇಗ ವಿನಾಶ:
ಆದರೆ ಪ್ರಸಕ್ತ ಅಧ್ಯಯನವು ಇಷ್ಟೆಲ್ಲ ಕಾರಣಗಳ ಪೈಕಿ ನಾಗರೀಕತೆಯ ವಿನಾಶಕ್ಕೆ ಅತ್ಯಂತ ಪ್ರಧಾನವಾದ ಸಾರ್ವತ್ರಿಕ ಕಾರಣವನ್ನು ಶೋಧಿಸಲು ಪ್ರಯತ್ನಿಸುತ್ತದೆ. ಇದಕ್ಕಾಗಿ ’ಮಾನವ ಮತ್ತು ನೈಸರ್ಗಿಕ ಚಲನಶಾಸ್ತ್ರ’ (handy) ಎಂಬ ಗಣಿತ ಮಾದರಿಯನ್ನು ಬಳಸಲಾಗಿದೆ. 

’ಪರಿಸರದ ಮೇಲಿನ ಆಕ್ರಮಣ’ ಮತ್ತು ’ಆರ್ಥಿಕ ಅಸಮಾನತೆ’ ಗಳು ನಮ್ಮ ಸಮಾಜವನ್ನು ಕಾಡುತ್ತಿರುವ ಎರಡು ಪ್ರಧಾನ ಅಂಶಗಳಾಗಿರುವುದರಿಂದ ಈ ಗಣಿತ ಮಾದರಿಯಲ್ಲಿ ಶ್ರೀಮಂತರು, ಜನಸಾಮಾನ್ಯರು, ನಿಸರ್ಗ ಮತ್ತು ಸಂಪತ್ತು ಎಂಬ ನಾಲ್ಕು ಪರಿಸೂಚಕಗಳ ಪರಿಕಲ್ಪನೆ ಬಳಸಲಾಗಿದೆ. ಇವುಗಳನ್ನು ಗಣಿತದ ಸೂತ್ರದಲ್ಲಿ ಅಳವಡಿಸಿ ವಿವಿಧ ತರಹದ ಸಮಾಜಗಳ ವಿಧಿಯನ್ನು (!) ಲೆಕ್ಕಾಚಾರ ಮಾಡಲಾಗಿದೆ. 

ಅಸಮಾನ ಸಮಾಜ ಅಂದರೆ ಇಂದು ನಾವು ಬದುಕುತ್ತಿರುವ ಶ್ರೀಮಂತ ಮತ್ತು ಬಡವರ ಸಮಾಜ. ಇದರ ಮೊದಲ ಪ್ರಕರಣದಲ್ಲಿ ಸುಮಾರು ೭೫೦ ವರ್ಷಗಳ ಹೊತ್ತಿಗೆ ಶ್ರೀಮಂತರು ಸಮಾಜದ ಇಡೀ ಸಂಪತ್ತನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ಸಂಪನ್ಮೂಲ ಅಲಭ್ಯತೆಯಿಂದಾಗಿ ’ದುಡಿಮೆಗಾರರು ಇಳಿಮುಖ’ಗೊಂಡು ನಾಗರೀಕತೆಯು ೧೦೦೦ ವರ್ಷದ ಹೊತ್ತಿಗೆ ಅವಸಾನಗೊಳ್ಳುತ್ತದೆ. 

ಅಸಮಾನ ಸಮಾಜ ದ ಎರಡನೇ ಪ್ರಕರಣದಲ್ಲಿ ಸುಮಾರು ೩೫೦ ವರ್ಷಗಳ ಹೊತ್ತಿಗೆ ಶ್ರೀಮಂತರು ಮತ್ತು ಜನಸಾಮಾನ್ಯರು ಭೂಮಿಯ ಸಂಪನ್ಮೂಲಗಳನ್ನು ರಿಪೇರಿಯಾಗದಷ್ಟು ಕೊಳ್ಳೆ ಹೊಡೆದು ಸುಮಾರು ೫೦೦ ವರ್ಷಗಳ ಹೊತ್ತಿಗೆ ಮನುಷ್ಯರು ಮತ್ತು ಭೂಗ್ರಹ ಎರಡೂ ವಿನಾಶಗೊಳ್ಳುತ್ತವೆ. 

ಪರಿಸರ ವಿನಾಶ ಮತ್ತು ಶ್ರೀಮಂತರು: 
ಇವೆರಡೂ ಪ್ರಕರಣಗಳಲ್ಲೂ ಅತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ತಮ್ಮಲ್ಲಿರುವ ಅಗಾಧ ಸಂಪತ್ತಿನ ಕಾರಣದಿಂದಾಗಿ ಶ್ರೀಮಂತರು ಪರಿಸರ ವಿನಾಶದ ಅಪಾಯಕಾರಿ ದುಷ್ಟರಿಣಾಮಗಳಿಗೆ ಬಲಿಯಾವುದಿಲ್ಲ. ಹಾಗೆ ಬಲಿಯಾಗುವುದೇನಿದ್ದರೂ ಜನಸಾಮಾನ್ಯರು ಬಲಿಯಾದ ಮೇಲಷ್ಟೇ. ಪರಿಸರದ ವಿನಾಶವು ಜನಸಾಮಾನ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಯಾವ ಅನಾಹುತವೂ ಸಂಭವಿಸಿಯೇ ಇಲ್ಲವೇನೋ ಎಂಬಂತಿರುವ ಶ್ರೀಮಂತರಿಂದಾಗಿಯೇ ಮಾಯಾ ಮತ್ತು ರೋಮನ್ ನಾಗರೀಕತೆಗಳು ವಿನಾಶಗೊಂಡವು ಎಂದು ಸಂಶೋಧಕರು ಹೇಳುತ್ತಾರೆ. ಏಕೆಂದರೆ ಮೊದಲಿಗೆ ದುಡಿಮೆಗಾರರು ಬಲಿಯಾದ ಮೇಲೆ, ಶ್ರೀಮಂತರು ಕೂಡ ನಂತರ ನಾಶಗೊಳ್ಳುತ್ತಾರೆ ಎನ್ನುತ್ತದೆ ಅಧ್ಯಯನ.

ಯಾರೂ ಸಾಯದೇ ಉಳಿಯಬಲ್ಲ ಪ್ರಕರಣಗಳೆಂದರೆ: ಒಂದು, ಜನಸಂಖ್ಯೆಯನ್ನು ನಿಯಂತ್ರಣ ಮಾಡುವುದು, ಅಥವಾ ಎರಡು, ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವುದು.

ಸಮಾಜವೊಂದು ಉತ್ಪಾದನೆ, ಸಂಪನ್ಮೂಲಗಳ ಬಳಕೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಯಾವ ರೀತಿಯ ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದರ ಆಧಾರದಲ್ಲಿ ಅದರ ಅಳಿವು-ಉಳಿವು ನಿಂತಿದೆ. ಹಾಗಾಗಿ ಸಮಾನತೆಯಿಂದ ಸಂಪನ್ಮೂಲಗಳನ್ನು ಹಂಚಿಕೊಂಡು ಸಮತೆಯಿಂದ ಬದುಕುವುದರಿಂದ ನಾಗರೀಕತೆ ಉಳಿಯುತ್ತದೆ ಎನ್ನುವುದು ಈ ಅಧ್ಯಯನದ ಮುಖ್ಯ ತಿರುಳು.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪರಿಸರ ವಿನಾಶ ಮತ್ತು ಆರ್ಥಿಕ ಅಸಮಾನತೆಯಿಂದ ನಾಗರೀಕತೆಯ ಅಳಿವು: ಜೈಕುಮಾರ್.ಹೆಚ್.ಎಸ್

  1. ಈಗಿನ ಶ್ರೀಮಂತರ ಹಪಾಹಪಿತನ ಈ ಭೂಮಿಯನ್ನೇ
    ನುಂಗಿಹಾಕುತ್ತದೆ. ಸಂಶೋಧನೆಯ ವರದಿ
    ಮಾಹಿತಿಪೂರ್ಣವಾಗಿದೆ. ಧನ್ಯವಾದಗಳು

Leave a Reply

Your email address will not be published. Required fields are marked *