ಕೊಡಲಿಯೊಂದು ತಾನಾಗಿಯೇ ಹೋಗಿ ಯಾವುದೇ ಮರವನ್ನು ಕಡಿದ ದಾಖಲೆಯಿಲ್ಲ. ಆದರೆ, ಬೀಜವೊಂದು ತಾನಾಗಿಯೇ ಮಣ್ಣಿನಲ್ಲಿ ಸೇರಿ, ಮರುಹುಟ್ಟು ಪಡೆದ ದಾಖಲೆಗಳು ಎಲ್ಲೆಂದರಲ್ಲಿ ಸಿಗುತ್ತದೆ. ಅಂದರೆ, ನಾಶ ಮಾಡಲು ಪ್ರೇರಕ ಶಕ್ತಿ ಬೇಕು. ಹುಟ್ಟು-ಮರುಹುಟ್ಟು ಈ ಪ್ರಕ್ರಿಯೆ ನಿಸರ್ಗದಲ್ಲಿ ತನ್ನಿಂದ ತಾನೇ ಸಂಭವಿಸುತ್ತದೆ. ಬಿಲ್ಲು-ಬಾಣಗಳು ಖುದ್ದು ಹೋಗಿ ಬೇಟೆಯಾಡುವುದಿಲ್ಲ. ಬಂದೂಕಿನಿಂದ ಗುಂಡು ತಾನಾಗಿಯೇ ಸಿಡಿಯುವುದಿಲ್ಲ. ಇದಕ್ಕೆ ಇನ್ನೊಬ್ಬರ ಸಹಾಯ ಬೇಕು, ಗುರಿ ಇರಬೇಕು, ಶ್ರಮ ಬೇಕು. ಪ್ರಕೃತಿಯ ಸೃಷ್ಟಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗಳಿಗೆ ಶ್ರಮ ಬೇಕಿಲ್ಲ. ಅಡಚಣೆ-ಅಪಾಯಗಳಿಲ್ಲದಿದ್ದರೆ, ನಿಸರ್ಗದಲ್ಲಿ ಅದ್ಭುತಗಳು ಸೃಷ್ಟಿಯಾಗುತ್ತವೆ. ಆಸ್ತಿಕರು ಈ ಚರಾಚರಗಳನ್ನು ದೈವೀ ಸೃಷ್ಟಿಯೆಂದು ಪ್ರತಿಪಾದಿಸುತ್ತಾರೆ. ನಾಸ್ತಿಕರ ಇವೆಲ್ಲಾ ಬೊಗಳೆ ಎಂದರೆ, ವಿಜ್ಞಾನಿಗಳು ವೈಜ್ಞಾನಿಕ ಕಾರಣಗಳನ್ನು ನೀಡುತ್ತಾರೆ. ಈ ಚರ್ಚೆ ಈಗ ಬೇಡ ಬಿಡಿ. ಆದರೂ ನಮ್ಮ ಅನುಕೂಲದ ದೃಷ್ಟಿಯಿಂದ, ಈ ಜಗತ್ತು ದೈವೀ ಸೃಷ್ಟಿಯೆಂದೇ ಭಾವಿಸೋಣ. ಹೀಗೆ ಭಾವಿಸಿದಾಗ ಮೊತ್ತೊಂದಿಷ್ಟು ಪ್ರಶ್ನೆಗಳು ಪುಂಖಾನುಪುಂಖವಾಗಿ ಹರಿದು ಬರುತ್ತವೆ. ದೇವರು-ದೈವೀತನವೆಂದರೆ ಕೆಟ್ಟದಲ್ಲದ, ಕುವಿಚಾರಗಳಿಲ್ಲದ, ಸದಾ ಒಳಿತನ್ನು ಬಯಸುವ, ಸುಖ-ಶಾಂತಿ-ಸಮೃದ್ಧಿ ಬಯಸುವ ಕತೃ. ಎಲ್ಲವನ್ನೂ ಹಾಳುಗೈಯುವ ಎರೆಡು ಕಾಲಿನ ಈ ಪ್ರಾಣಿಯನ್ನೇಕೆ ಸೃಷ್ಟಿಸಿದ? ಇವನಲ್ಲಿ ಕುತೂಹಲನ್ನೇಕೇ ಹುಟ್ಟಿಸಿದ? ಪ್ರೀತಿ-ಪ್ರೇಮ-ಕಾಮ-ಹಸಿವು-ನಿದ್ದೆಗಳ ಹೊರತಾಗಿ ಕೂಡಿಡುವ-ಸಂಗ್ರಹಿಸುವ ಗುಣವನ್ನೇಕೆ ಇಟ್ಟ? ದೈವೀ ಸೃಷ್ಟಿಯಲ್ಲಿ ರಕ್ಕಸನ ಜನುಮವೇಕೆ ಆಯಿತು? ಅನುಮಾನ-ಅಹಂಕಾರಗಳು ವಿಜೃಂಭಿಸುವುದೇಕೆ? ಹೀಗೆ ಕೊನೆ-ಮೊದಲಿಲ್ಲದ ಪ್ರಶ್ನೆಗಳಿಗೆ ಉತ್ತರಿಸುವ ದೈವವಾವುದು?
ಭೂಮಿ ಸೃಷ್ಟಿಯಾದ ಮೇಲೆ ಹಲವು ವಿಪ್ಲವಗಳು ಸಂಭವಿಸಿವೆ. ಡೈನೋಸಾರಸ್‌ನಂತಹ ಮಹೋರಗಗಳು ಜನ್ಮತಳೆದು ಅಳಿದುಹೋಗಿವೆ. ಪ್ರಕೃತಿಯ ಈ ಕಡೆದಾಟದಲ್ಲಿ ಭೀಕರ ಭೂಕಂಪಗಳು, ಜ್ವಾಲಾಮುಖಿಗಳು, ಅತಿವೃಷ್ಟಿ-ಅನಾವೃಷ್ಟಿಗಳು, ಬಿರುಗಾಳಿ, ಚಂಡಮಾರುತಗಳು ಸಂಭವಿಸಿವೆ. ಇದು ಯಾವುದೂ ಮನುಷ್ಯ ನಿರ್ಮಿತವಾಗಿರಲಿಲ್ಲ. ಇಂತಹ ವಿಕೋಪ ಘಟನೆಗಳು ಸಂಭವಿಸದಾಗಲೂ ದೈವೀ ಸೃಷ್ಟಿಯ ಬಹುಪಾಲು ಆಯಾ ಪ್ರದೇಶಗಳಲ್ಲಿ ನಿರ್ನಾಮವಾಗಿ ಮತ್ತೆ ನಿರ್ಮಾಣವಾಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಮಾತ್ರ ಇದು ಹಿಂದು-ಮುಂದಾಗಿದೆ. ಈಗಿನ ಎಲ್ಲಾ ತರಹದ ವಿಕೋಪಗಳಿಗೆ ಮನುಷ್ಯನ ಎಣೆಯಿಲ್ಲದ ಕೃತ್ಯಗಳು ಕಾರಣವಾಗಿವೆ. ಜೀವಜಾಲದ ಸರಪಣಿಯಲ್ಲಿ ಪ್ರತಿಯೊಂದು ಕೊಂಡಿಯೂ ಮುಖ್ಯವಾಗಿದೆ. ಮುಂದೆ ವಿವರಿಸಲಾಗುವ ಘಟನೆಗಳಿಂದ, ಕೊಂಡಿಗಳನ್ನು ಕಳಚುವಲ್ಲಿ ನಮ್ಮ ಪಾತ್ರವೆಷ್ಟು? ಆಧುನಿಕ ಮನುಜನ ಮನ:ಸ್ಥಿತಿಯೇನು?
ಅಮೆರಿಕಾ ಹಾಗೂ ಚೀನಾದ ಹಸಿವಿಗೆ ಪ್ರತಿದಿನ ನೂರು ಆನೆಗಳು ಆಫ್ರಿಕಾ ಖಂಡದಲ್ಲಿ ಸಾಯುತ್ತವೆ. ೨೦೧೦ರಿಂದ ಈಚೆಗೆ ಅಲ್ಲಿ ೧ ಲಕ್ಷ ಆನೆಗಳನ್ನು ಹತ್ಯೆಗೈಯಲಾಗಿದೆ. ಇದರಿಂದ ಪ್ರತಿವರ್ಷ ೨೦೦ ಶತಕೋಟಿ ಡಾಲರ್‌ಗಳ ಅಂತಾರಾಷ್ಟ್ರೀಯ ವಹಿವಾಟು ಆಗಿದೆ. ಚೀನಾ ದೇಶದ ಬಾಯಿಚಪಲಕ್ಕೆ, ಮೂಢನಂಬಿಕೆಗೆ, ತೆವಲಿಗೆ ಆನೆಯೊಂದೆ ಅಲ್ಲ, ಘೇಂಡಾ, ಮಂಗ, ಜಿಂಕೆ, ಹೆಬ್ಬಾವು, ಚಿಪ್ಪು ಹಂದಿ, ಮುಂಗುಸಿ ಹೀಗೆ ಅಸಂಖ್ಯ ವನ್ಯಜೀವಿಗಳ ಹತ್ಯೆ ಅವ್ಯಾಹತವಾಗಿ ಸಾಗಿದೆ. ಅಲಂಕಾರದ ವಸ್ತುಗಳಿಗಾಗಿ ಆನೆಯ ದಂತ, ಔಷಧಕ್ಕಾಗಿ ಘೇಂಡಾ ಮೃಗದ ಕೊಂಬು, ಬಾಯಿಚಪಲಕ್ಕಾಗಿ ಜಿಂಕೆ, ಹೆಬ್ಬಾವಿನ ಕೊಬ್ಬು, ಚಿಪ್ಪುಹಂದಿಯ ಚಿಪ್ಪುಗಳು, ಮುಂಗುಸಿಯ ಚರ್ಮ, ಮೂಢನಂಬಿಕೆಗಾಗಿ ಎಲ್ಲಾ ತರಹದ ವಾನರ ಸಂತತಿಯ ಕೈ-ಕಾಲುಗಳು ಹೀಗಿದೆ ಚೀನಾದ ಬೇಡಿಕೆ. ಒಂದು ವರ್ಷದ ಮಟ್ಟಿಗೆ ಆನೆ ದಂತ ಆಮದನ್ನು ನಿಷೇಧಿಸಲಿದೆ ಎಂದು ಚೀನಾ ಕಳೆದ ತಿಂಗಳು ಹೇಳಿಕೆ ನೀಡಿದೆ. ಇದೇ ಸಂದರ್ಭದಲ್ಲಿ ಚೀನಾದ ಅಧ್ಯಕ್ಷರ ವಿಮಾನದಲ್ಲೇ ಸಾವಿರಾರು ಕೇಜಿ ಆನೆದಂತ ತಾಂಜೇನಿಯಾದಿಂದ ಕಳ್ಳಸಾಗಣಿಕೆಯಾದ ವರದಿಯೂ ಬಂದಿದ್ದರಿಂದ, ಚೀನಾದ ನಿಷೇಧದ ಹೇಳಿಕೆ ಬರೀ ಪೊಳ್ಳು ಎಂದು ಜಗಜ್ಜಾಹೀರಾಗಿದೆ.
ಮೂರನೇ ಮಹಾಯುದ್ಧ ನಡೆದರೆ ಈ ಜಗತ್ತು ಸಂಪೂರ್ಣ ನಾಶವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ದೇಶ-ದೇಶಗಳ ನಡುವೆ ನಡೆಯಬಹುದಾದ ಸಂಭಾವ್ಯ ಯುದ್ಧಕ್ಕೆ ಮೂರನೇ ಮಹಾಯುದ್ಧವೆಂದು ಹೆಸರಿಸಿದ್ದಾರೆ. ಈಗಾಗಲೇ ರಕ್ತ-ಸಿಕ್ತ ಯುದ್ಧ ದಟ್ಟಕಾಡುಗಳಲ್ಲಿ ನಡೆಯುತ್ತಿದೆ. ಬಲಿಯಾಗುತ್ತಿರುವುದು ಮಾತ್ರ ವನ್ಯಜೀವಿಗಳು. ವನ್ಯಜೀವಿಗಳನ್ನು ಹರಣ ಮಾಡಲು ಅತ್ಯಾಧುನಿಕ ಬಂದೂಕಿನಿಂದ ಹಿಡಿದು, ವಿಷ, ನೇಣು, ಬಲೆ ಹೀಗೆ ವಿಧ-ವಿಧದ ಶಸ್ತ್ರಗಳನ್ನು ಬಳಸಲಾಗುತ್ತಿದೆ. ಚೀನಾದ ಬಗಲಿಗೇ ಇರುವ ಆಗ್ನೇಯಾ ಏಷ್ಯಾದ ವಿಶಿಷ್ಟ ಅರಣ್ಯಗಳ ಕಣಿವೆಯ ಇಳಿಜಾರಿನಲ್ಲಿ ಹಾಗೂ ಏರಿಯಲ್ಲಿ ಮಾರಿಗೊಂದರಂತೆ ಕಿಲೋಮೀಟರ್‌ಗಟ್ಟಲೆ ಉರುಳು ಹಾಕಲಾಗಿರುತ್ತದೆ. ದಟ್ಟವಾದ ಎಲೆಗಳ ಅಡಿಯಲ್ಲಿ ಹಾಕಿದ ಉರುಳು ಪ್ರಾಣಿಗಳ ಗಮನಕ್ಕೆ ಬರುವುದೇ ಇಲ್ಲ. ಇತ್ತಲಿಂದ ಅತ್ತ ದಾಟುವಾಗ ಅಥವಾ ಅತ್ತಲಿಂದ ಇತ್ತ ಚಲಿಸುವಾಗ ಪ್ರಾಣಿ ಉರುಳಿಗೆ ಸಿಗಲೇ ಬೇಕು ಹಾಗಿದೆ ವನ್ಯಹಂತಕರ ಹತ್ಯೆಯ ಲೆಕ್ಕಾಚಾರ. ಇಳಿಜಾರಿನಲ್ಲಿ ನೈಸರ್ಗಿಕ ಬೇಲಿಯಂತೆ ಅಲ್ಲಲ್ಲಿ ಸೊಂಟಮಟ್ಟದವರೆಗಿನ ಪೊದೆಗಳಿವೆ, ಒಂದು ಪೊದೆಗೂ ಮತ್ತೊಂದು ಪೊದೆಗೂ ಇರುವ ಖಾಲಿ ಜಾಗವೇ ವನ್ಯಜೀವಿಗಳಿಗೆ ಮರಣ ದಾರಿಯಾಗಿ ಪರಿಣಮಿಸಿದೆ. ಇಂತಹ ಉರುಳುಗಳನ್ನು ಮೋಟಾರ್ ಸೈಕಲ್ ಬ್ರೇಕ್ ಕೇಬಲ್‌ಗಳಿಂದ ಅಥವಾ ಲಾರಿಗಳ ಅಚ್ಚುರಾಟೆ ಕೇಬಲ್‌ಗಳಿಂದ ತಯಾರಿಸಲಾಗುತ್ತದೆ. ಒಂದು ತುದಿಯನ್ನು ಮರದ ಕಾಂಡಕ್ಕೋ ಅಥವಾ ಇನ್ಯಾವುದೋ ವಸ್ತುವಿಗೋ ಬಿಗಿಯಾಗಿ ಬಿಗಿಯಾಲಾಗುತ್ತದೆ. ಈ ಉರುಳನ್ನೂ ಎಷ್ಟು ನೈಪುಣ್ಯದಿಂದ ನೇಯ್ದಿರುತ್ತಾರೆಂದರೆ, ಜಿಂಕೆಯನ್ನು ಕೊಲ್ಲಲು ಉಪಯೋಗಿಸುವ ಉರುಲಿಗೆ ಕಾಡುಕೋಳಿಗಳು ಸಿಕ್ಕಿದ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ.
ಈ ಲೇಖನವನ್ನು ಬರೆದ ವಿಲಿಯಮ್ ಡೀಬೈಸ್ ಮಾತಿನಲ್ಲೇ ಕೇಳಿ. ವಿಯಟ್ನಾಂನ ದಟ್ಟಕಾಡಿನಲ್ಲಿ ನಾವು ಒಟ್ಟು ಹದಿನಾಲ್ಕು ಜನ ಚಲಿಸುತ್ತಿದ್ದೆವು. ನಮಗೆ ಹೆಜ್ಜೆ-ಹೆಜ್ಚೆಗೂ ಬಲೆಗಳೂ, ಉರುಳುಗಳೂ ಸಿಗುತ್ತಿದ್ದವು. ಕೆಲವು ಉರುಳುಗಳಲ್ಲಿ ಪ್ರಾಣಿಗಳು ಸಿಕ್ಕಿ ಸತ್ತು ಕೊಳೆತು ಹೋಗಿದ್ದವು. ಒಂದು ಕಾನುಕುರಿಯಂತೂ ಉರಳುನಿಂದ ಬಿಡಿಸಿಕೊಳ್ಳುವಾಗ ತನ್ನ ಕಾಲನ್ನು ಕಳೆದುಕೊಂಡು ಅನತಿ ದೂರದಲ್ಲಿ ಹೋಗಿ ಅಸುನೀಗಿತ್ತು. ನದಿಯ ದಂಡೆಯ ಮೇಲೆ ನೀರುನಾಯಿಗಳ ಚರ್ಮವನ್ನು ಸುಲಿದು, ಮಾಂಸವನ್ನು ಹಾಗೆ ಎಸೆದದ್ದು ಕಣ್ಣಿಗೆ ರಾಚಿ, ಆಧುನಿಕ ಕಸಾಯಿಖಾನೆಯ ನೆನಪು ತರಿಸುತ್ತಿತ್ತು. ಇದಕ್ಕೂ ಅತ್ಯಂತ ದಾರುಣವಾದ ದೃಶ್ಯವೆಂದರೆ, ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೋತಿಯೆಂಬ ಹೆಗ್ಗಳಿಗೆ ಭಾಜನವಾದ ಕೆಂಪುಕಾಲಿನ ಲಂಗೂರ್ ಬೇಟೆಗಾರರ ಉರುಳಿಗೆ ಸಿಕ್ಕಿ ಹಾಕಿಕೊಂಡಿದ್ದು, ಇದರ ಕಾಲು ಉರುಳಿಗೆ ಸಿಕ್ಕಿಕೊಂಡು ಕಣಿವೆಯಲ್ಲಿ ತಲೆಕೆಳಗಾಗಿ ನೇತಾಡಿತ್ತು. ಬಹುಷ: ಅತ್ಯಂತ ದೀರ್ಘವಾದ ಅವಧಿಯ ನಂತರ ನರಳಿ-ನರಳಿ ಮೃತಪಟ್ಟಿರಬೇಕು. ಹದಿನಾಲ್ಕು ಜನರಿಗೂ ಹೊರಲಾರದಷ್ಟು ಉರುಳುಗಳನ್ನು ಒಟ್ಟು ಮಾಡಿದೆವು. ವಾಸ್ತವಿಕವಾಗಿ ನಾವು ಈ ಕಾಡಿಗೆ ಬಂದದ್ದು, ಯೂನಿಕಾರ್ನ್ ಎಂಬ ಪ್ರಾಣಿಯ ಅಸ್ತಿತ್ವವನ್ನು ಪತ್ತೆ ಮಾಡುವುದಾಗಿತ್ತು. ಒಬ್ಬ ಬೇಟೆಗಾರನ ಮನೆಯ ಗೋಡೆಯಲ್ಲಿ ಅತಿ ವಿಶಿಷ್ಟವಾಗ ಕೊಂಬು ನೇತು ಹಾಕಿದ್ದನ್ನು ಈ ಹಿಂದೆ ನೋಡಿದ್ದೆವು. ಇದು ಯಾವ ಪ್ರಾಣಿಯ ಕೊಂಬುಗಳು ಎಂದು ಕೇಳಿದಾಗ ಇದೊಂದು ಅತಿ ಅಪರೂಪದ ಮತ್ತು ವಿಶಿಷ್ಟವಾದ ಪ್ರಾಣಿ ಇದಕ್ಕೆ ಸ್ಥಳೀಯವಾಗಿ ’ಸಾವೋಲಾ’ ಎಂದು ಕರೆಯುತ್ತಾರೆ ಎಂದಿದ್ದನು.
ಜಿಂಕೆ-ಕಾನುಕುರಿಯ ಮಿಶ್ರಣದಂತಿರುವ ಈ ಪ್ರಾಣಿ ಸುಮಾರು ೮೦-೯೦ ಕಿಲೋ ತೂಗುತ್ತದೆ ಹಾಗೂ ವಿಯೆಟ್ನಾಂ ಹಾಗೂ ಲಾವೋಸ್ ಕಾಡುಗಳಲ್ಲಿ ಮಾತ್ರ ಅತಿ ವಿರಳ ಸಂಖ್ಯೆಯಲ್ಲಿದ್ದವು. ೧೯೯೨ರಲ್ಲಿ ಇವು ಸಂಪೂರ್ಣ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ, ೧೯೯೯ರಲ್ಲಿ ಈ ತರಹದ ಒಂದು ಪ್ರಾಣಿಯನ್ನು ಬೇಟೆಗಾರರು ಹತ್ಯೆ ಮಾಡಿದ ದಾಖಲೆ ವಿಶ್ವ ವನ್ಯಜೀವಿ ನಿಧಿಯವರಿಗೆ ಲಭ್ಯವಾಗಿತ್ತು. ಈಗಲೂ ಅಲ್ಲಿನ ಸ್ಥಳೀಯ ಅಳಿದುಳಿದ ಆದಿವಾಸಿಗಳು ಇವು ಜೀವಂತವಾಗಿವೆ ಎನ್ನುತ್ತಾರಾದರೂ, ವಿಯೆಟ್ನಾಂ ಅರಣ್ಯ ಇಲಾಖೆಗಾಗಲಿ, ವಿಶ್ವ ವನ್ಯಜೀವಿ ನಿಧಿ ಸಂಸ್ಥೆಗಾಗಲಿ ಭೌತಿಕವಾಗಿ ಲಭ್ಯವಾಗಿಲ್ಲ. ತನ್ಮಧ್ಯೆ ಈ ಪ್ರದೇಶದಲ್ಲಿ ಅಳವಡಿಸಿದ ಕ್ಯಾಮೆರಾ ಟ್ರಾಪ್‌ನಲ್ಲಿ ಒಂದು ಚಿತ್ರ ಲಭ್ಯವಾಗಿದೆ. ಇದೊಂದು ಆಶಾದಾಯಕ ಚಿತ್ರಣವಾಗಿದ್ದರೂ, ಚೀನಾ ದೇಶದ ಹಸಿವಿಗೆ ಬಲಿಯಾಗುತ್ತಿರುವ ಅಸಂಖ್ಯ ಪ್ರಬೇಧಗಳ ನಡುವೆ ಈ ವಿಶಿಷ್ಟವಾದ ಪ್ರಾಣಿಯ ಅಳಿವಿನ ಕ್ಷಣಗಣನೆ ಪ್ರಾರಂಭವಾಗಿದೆ ಎನ್ನಬಹುದು. ಅಪರೂಪದ, ಸುಂದರವಾದ ಸಾವೋಲಾ ಪ್ರಾಣಿಯ ಅಂಗಗಳಲ್ಲಿ ಔಷಧ ಗುಣವಿದೆ ಎಂಬ ಮಿಥ್ಯೆ ಸಧ್ಯಕ್ಕೆ ಇಲ್ಲದಿದ್ದರೂ, ಈಗಿನ ಸ್ಥಿತಿಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಈ ಪ್ರಬೇಧ ನಾಗರಿಕ ಸಮಾಜಕ್ಕೆ ಗೊತ್ತಾಗುವ ಹೊತ್ತಿಗೆ ಅಳಿದುಹೋಗಬಹುದಾದ ಎಲ್ಲಾ ಸಾಧ್ಯತೆಗಳಿವೆ.
ಅತ್ತ ಅಮೆರಿಕಾದ ಫ್ರಾಕಿಂಗ್ ತಂತ್ರಜ್ಞಾನ ಧ್ರುವಪ್ರದೇಶಗಳನ್ನು ಬಲಿತೆಗೆದುಕೊಳ್ಳುತ್ತಿದೆ, ಇತ್ತ ಅಮೇಜಾನ್-ಇಂಡೊನೇಷ್ಯಿಯಾ ಹಾಗೂ ಏಷ್ಯಾದ ಹಿಂದುಳಿದ ಹಾಗೂ ಮುಂದುವರೆಯುತ್ತಿರುವ ದೇಶಗಳ ಕಾಡು ಕಡಿಮೆಯಾಗುತ್ತಿದೆ. ಅತ್ತ ಆಫ್ರಿಕಾದ ವನ್ಯಜೀವಿಗಳು ಮುಂದುವರೆದ ದೇಶಗಳ ಐಷಾರಾಮಿ ಮನ:ಸ್ಥಿತಿಗೆ ಹಿಂಡು-ಹಿಂಡಾಗಿ ಅಳಿಯುತ್ತಿವೆ. ಕಡಲನ್ನೂ ಬಿಡದ ಮನುಷ್ಯ ಬರೀ ರೆಕ್ಕೆಗಳಿಗಾಗಿ ಪ್ರತಿವರ್ಷ ಲಕ್ಷಾಂತರ ಶಾರ್ಕ್‌ಗಳನ್ನು ಕೊಲ್ಲುತ್ತಿದ್ದಾನೆ. ಕಣ್ಣು ಬಿಡುವ ಮೊದಲೇ ಸೀಲ್ ಮರಿಗಳ ತಲೆಯನ್ನು ಹೋಳು ಮಾಡಲಾಗುತ್ತಿದೆ. ಮನುಷ್ಯ ಸ್ನೇಹಿಯೆಂದು ಪ್ರಸಿದ್ಧವಾದ ಡಾಲ್ಫಿನ್‌ಗಳನ್ನು ಲಕ್ಷಸಂಖ್ಯೆಯಲ್ಲಿ ಮಾಂಸಕ್ಕಾಗಿ ಕೊಲ್ಲಲಾಗುತ್ತದೆ. ಹಾರುವ ಪಕ್ಷಿಗಳನ್ನು ಮೋಜಿನ ಆಟಕ್ಕಾಗಿ ಬಲಿಪಡೆಯಲಾಗುತ್ತಿದೆ. ಹೀಗೆ ನೆಲ-ಜಲ-ಆಕಾಶದ ಯಾವ ಪ್ರಾಣಿಗಳೂ ಸುರಕ್ಷಿತವಾಗಿಲ್ಲ. ಆಧುನಿಕ ಮಾನವನ ಅಭಿವೃದ್ಧಿಯೆಂಬ ಬ್ರಹ್ಮಾಸ್ತ್ರಕ್ಕೆ ಇಡೀ ಪರಿಸರವೇ ತಲ್ಲಣಗೊಂಡಿದೆ. ನಿಶ್ಯಸ್ತ್ರವಾದ ಪರಿಸರ ಸೋಲಿನ-ಸಾವಿನ ದವಡೆಯತ್ತ ಸಾಗುತ್ತಿದೆ. ಪರಿಸರದ ಮೇಲಿನ ಮಾನವನ ಜಾಗತಿಕ ಯುದ್ಧಕ್ಕೆ ಕೊನೆಯೆಂದು?
*****