ಪರಿಸರದ ಮೇಲೆ ಮಾನವ ಹಲ್ಲೆ ನಿಲ್ಲುವುದು ಯಾವಾಗ?: ನರಸಿಂಹ ಮೂರ್ತಿ ಎಂ. ಎಲ್.

ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುವಾಗ ದೇಶ ರಾಜಧಾನಿಯು ವಾಯುಮಾಲಿನ್ಯದ ಹೊಡೆತಕ್ಕೆ ತತ್ತರಿಸುತ್ತಿರುವ ಬಗೆಯನ್ನು ಗಮನಿಸುತ್ತಿರಬಹುದು. ಶುದ್ಧಗಾಳಿಯನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿಗೆ ಈ ದೇಶವು ಬಂದು ತಲುಪಿದೆ ಎಂದರೆ ಮುಂದಿನ ದಿನಗಳಲ್ಲಿ ಜೀವ ಜಗತ್ತಿನ ಉಳಿವಿನ ಬಗ್ಗೆಯೇ ಸಂಶಯ ಮೂಡುತ್ತದೆ.

ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ, ಹೊನ್ನಂಪಲ್ಲಿ, ಮದಕವಾರಪಲ್ಲಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಆಶ್ರಯ ತಾಣವಾಗಿದ್ದ ಕೊರ್ಲಗುಡ್ಡಂ ಬೆಟ್ಟವನ್ನು ಅಕ್ರಮ ಕಲ್ಲು ಗಣಿಗಾರುಕೆಯವರು ನಾಶ ಮಾಡುತ್ತಿದ್ದಾರೆ. ಇದರ ಪರಿಣಾಮ ಬೃಹತ್ ಕಲ್ಲುಬಂಡೆಗಳು ರೈತರ ಜಮೀನುಗಳಿಗೆ ಉರುಳುತ್ತಿವೆ.

ಪರಿಸರದ ಮೇಲಿನ‌ ನಿರಂತರ ಹಲ್ಲೆ, ಪ್ರಾಕೃತಿಕ ಸಂಪನ್ಮೂಲಗಳ ಮೂಲಗಳನ್ನೇ ಮಂಗಮಾಯ ಮಾಡುತ್ತಿರುವ ಧನದಾಹಿ‌ಗಳು ನೆಲಜಲಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸರ್ವನಾಶ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುರುಡು ಸರ್ಕಾರಗಳು ಏನಾದರೂ ಕ್ರಮಗಳನ್ನು ಕೈಗೊಳ್ಳುತ್ತವೆ ಎಂಬ ಭರವಸೆಯೂ ಇಲ್ಲದೆ ಆತಂಕವನ್ನು ಸೃಷ್ಟಿಸುತ್ತಿವೆ. ಸರ್ಕಾರವನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ಬಂದಷ್ಟು ಬರಲಿ ಎಂದು ಬೆಟ್ಟಗುಡ್ಡಗಳನ್ನು ಒತ್ತೆ ಇಟ್ಟು ಭೂ ಸೌಂದರ್ಯವನ್ನು ವಿಕೃತವಾಗಿ ಅತ್ಯಾಚಾರ ಮಾಡುತ್ತಿದ್ದಾರೆ.

ಈ ಪರಿಸರದ ಸೂಕ್ಷ್ಮತೆ ಅರಿಯದೆ ಭ್ರಷ್ಟಾಚಾರಕ್ಕೆ ಒಳಗಾಗಿ ಗಣಿಗಾರಿಕೆ ಅನುಮತಿ ನೀಡುತ್ತಿರುವ ಪ್ರದೇಶಗಳಲ್ಲಿ ಸಾಮಾನ್ಯ, ಸಣ್ಣ ,ಅತಿ ಸಣ್ಣ ಜನರಿಗಾಗುತ್ತಿರುವ ತೊಂದರೆಗಳನ್ನು ಲೆಕ್ಕಿಸುತ್ತಿಲ್ಲ. ಕಲ್ಲುಗಣಿಗಾರಿಕಾ ಪ್ರದೇಶದಲ್ಲಿ ಬೆಟ್ಟಗುಡ್ಡಗಳನ್ನು ನಂಬಿಕೊಂಡು ಬದುಕುತ್ತಿರುವ ಕುರಿಗಾಹಿ, ದನಗಾಹಿ ಜನರ ಬದುಕಿಗೆ ಬೆಂಕಿ ಹಾಕಲಾಗುತ್ತಿದೆ. ಆ ಪ್ರದೇಶದ ಸಸ್ಯ ಸಂಪತ್ತನ್ನು ಹಾಳು ಮಾಡಿ ದಟ್ಟವಾದ ದೂಳಿನೋಕುಳಿ ಎರಚುತ್ತಿದ್ದಾರೆ.

ಕಲ್ಲುಬಂಡೆಗಳನ್ನು ಸ್ಪೋಟಿಸಲು ಬಳಸುತ್ತಿರುವ ಸ್ಪೋಟಕಗಳಿಂದ ವಾಯ ಮಾಲಿನ್ಯ, ನೆಲ ಮಾಲಿನ್ಯಗಳಾಗುತ್ತಿವೆ. ಶಬ್ಧದಿಂದಾಗಿ ಬೆಟ್ಟಗಳ ಸುತ್ತಲಿನ ರೈತಾಪಿ ಜನರು ಪ್ರತಿ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಸ್ಪೋಟಗೊಂಡ ಕಲ್ಲಿನ ಚೂರುಗಳು ಜಮೀನು ಕೆಲಸಗಳಲ್ಲಿ ನಿರತರಾದ ರೈತರ ಮೇಲೆ ಬೀಳುವ ಆತಂಕದಲ್ಲಿ ಪದೇ ಪದೇ ಭಯಕ್ಕೆ ಒಳಗಾಗುತ್ತಿದ್ದಾರೆ. ಇದರ ಕುರಿತು

ಸಂಬಂಧ ಪಟ್ಟ ಅಧಿಕಾರಿಗಳು ಸೌಜನ್ಯಕ್ಕೂ ಬೇಟಿ ಮಾಡಿ ಜನರ ಕಷ್ಟಗಳನ್ನು ವಿಚಾರಿಸುತ್ತಿಲ್ಲ. ಪ್ರತಿನಿತ್ಯ ಗಣಿಗಾರಿಕಾ ಪ್ರದೇಶದ ಸುತ್ತಲು ಹತ್ತಾರು ಕುರಿಗಾಹಿಗಳು ಕುರಿ ಮೇಯಿಸುತ್ತಿರುತ್ತಾರೆ, ಅವರಿಗೆ ಯಾವುದೇ ಸೂಚನೆಗಳಿಲ್ಲದೆ ಸ್ಪೋಟಗಳನ್ನು ಮಾಡುತ್ತಿರುತ್ತಾರೆ. ಪ್ರಶ್ನಿಸಿದವರ ಮೇಲೆ ಕೆಲ ಭ್ರಷ್ಟ ಅಧಿಕಾರಿಗಳಿಂದ ಬೆದರಿಕೆಗಳನ್ನು ಹಾಕಿಸಲಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯರೊಬ್ಬರು ನೋವು ಹೇಳಿಕೊಂಡರು.

ಇಂತಹ ವ್ಯವಸ್ಥೆಯೊಳಗೆ ಪರಿಸರ ಉಳಿವು ಅತ್ಯಗತ್ಯ ಎಂದು ಎಲ್ಲರೂ ಸಂರಕ್ಷಣೆಯತ್ತ ಕಾರ್ಯೋನ್ಮುಖರಾಗಬೇಕಾಗಿದೆ.

ನರಸಿಂಹ ಮೂರ್ತಿ ಎಂ. ಎಲ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x