” ನಿನ್ನ ಮಗನಿಗೆ ಎಷ್ಟು ಪರ್ಸೆಂಟು ಬಂತೂ . . ? 89% ?? ಅಯ್ಯೋ . . . ಇನ್ನು ಸ್ವಲ್ಪ ಓದಿದ್ದಿದ್ದರೆ 9ಂ% ಬರುತ್ತಿತ್ತು , ಹೋಗ್ಲಿ ಬಿಡು . . . ಇನ್ನೇನ್ ಮಾಡೋಕಾಗುತ್ತೆ . ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ . . ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊಂಡಳು ??”
ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಫಲಿತಾಂಷ ಹೊರಬಿದ್ದರೆ ಸಾಕು, ಎಲ್ಲೆಲ್ಲೂ ಕೇಳಿ ಬರುವ ಸಂಭಾಷಣೆ ಇದು . ಬಹಳಷ್ಟು ಪೋಷಕರು ಈ ಅನಗತ್ಯ ಕಾಳಜಿ ತೋರೋ ಹಿತ ಶತ್ರುಗಳ ಬಾಯಿಗೆ ಆಹಾರ ಆಗದಿರಲಿ ಎಂದೇ ತಮ್ಮ ಮಕ್ಕಳಿಗೆ ಒತ್ತಡ ಹೇರಿ ಓದಿಸುತ್ತಾರೆ. ಕೆಲವೊಮ್ಮೆ ಮಕ್ಕಳು ಎಷ್ಟೇ ಓದಿದರೂ ಪೋಷಕರ ನಿರೀಕ್ಷೆಯ ಮಟ್ಟಕ್ಕೆ ಏರಲು ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಮಕ್ಕಳ ಬೌದ್ಧಿಕ ಮಟ್ಟಕ್ಕನುಗುಣವಾಗಿ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ , ಅಲ್ಲವೇ ? ಇದನ್ನರಿಯದೆ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಫಲಿತಾಂಷ ಬಂದ ತಕ್ಷಣ ಅಂಕ ತಿಳಿದುಕೊಳ್ಳಲು ಆತುರ ಪಡುವ ನಮ್ಮ ಬಂಧುಗಳು ಪರೀಕ್ಷೆಗೆ ಮುನ್ನ ನಮಗೆ ಕಾಣ ಸಿಕ್ಕಾಗ ಏನು ಹೇಳುತ್ತಾರೆ . . ??
“ನಿಮ್ ಮಗನಾ . ? ಓದ್ಕೊತಾನೆ ಬಿಡಿ ” ಅಂತ. ನಮ್ಮ ಮನೆಗೆ ಬರೋ ನೆಂಟರಿಷ್ಟರ ಎದುರು “ಓದ್ಕೊ ಹೋಗು ” ಎಂದು ನಮ್ಮ ಮಕ್ಕಳಿಗೆ ಹೇಳಿದರೆ ಸಾಕು . . ಅವರ ಕರುಳು ಚುರ್ರ್ ಅನ್ನುತ್ತೆ. “ಪಾಪ . . ಯಾಕೆ ಹಿಂಸೆ ಮಾಡ್ತೀರಾ ?” ಅಂತ ಕರುಣೆ ತೋರೋ ಮಾತುಗಳನ್ನು ಆಡುತ್ತಾರೆ. ಓದಬೇಕಾದ ದಿನಗಳಲ್ಲಿ ಮಕ್ಕಳೊಡನೆ ಜೀವ ತೇಯೋರು ಪೋಷಕರು ಮತ್ತು ಶಿಕ್ಷಕರು, ಆದರೆ ಫಲಿತಾಂಷ ಬಂದ ಮೇಲೆ ನಮಗಾಗಿ , ನಮ್ಮ ಮಕ್ಕಳಿಗಾಗಿ ಕೊರಗೋರು ಇವರು !
ಪರೀಕ್ಷೆಗೂ ಮುನ್ನ ಇವ್ರೆಲ್ಲ ಯಾಕೆ ಕಾಳಜಿ ತೆಗೆದುಕೊಂಡು ಮಕ್ಕಳನ್ನು ಓದುವಂತೆ ಪ್ರೇರೇಪಿಸಬಾರದು ? ಬೇರೆಯವರ ಮಕ್ಕಳ ಚಿಂತೆ ನಮಗೇಕೆ ಎಂದಲ್ಲವೇ . ? ಹಾಗಿರುವಾಗ ಫಲಿತಾಂಷ ತಿಳಿದುಕೊಳ್ಳುವ ಕಾತುರ . . ಬಳಿಕ ತಳಮಳ ಇವೆಲ್ಲ ಏಕೆ ?
ಕಳೆದ ವರ್ಷ ನನ್ನ ಗೆಳತಿಯ ಮಗು ಹತ್ತನೇ ತರಗತಿಯ ಪರೀಕ್ಷೆ ಬರೆದಿತ್ತು. ಓದಿನಲ್ಲಿ ಸಾಧಾರಣ ಮಟ್ಟಕ್ಕಿಂತ ಕೆಳಗಿದ್ದ ಆ ಮಗು ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿಚಾರವನ್ನು ಫಲಿತಾಂಷ ಬಂದೊಡನೆ ಆಕೆಯೇ ನನಗೆ ಹೇಳಿದಳು. ಹೀಗೆ . . ಮಕ್ಕಳ ಸಾಧನೆ ಬಗ್ಗೆ ಹೇಳಬೇಕು ಅನಿಸಿದರೆ ಅವರೇ ಹೇಳುತ್ತಾರೆ. ನಾವೇಕೆ ಮಾನಸಿಕ ಹಿಂಸೆ ಕೊಡಬೇಕು ? ಫಲಿತಾಂಷ ಕೇಳೋಣ ತಪ್ಪಿಲ್ಲ ; ಆದರೆ ಅದು ನೋವು ಕೊಡದ ಹಾಗಿರಲಿ. ಪ್ರಶಂಸೆಯನ್ನು ಸರ್ವರ ಸಮ್ಮುಖದಲ್ಲಿ, ವೇದನೆಯನ್ನು ಏಕಾಂತದಲ್ಲಿ ಅನುಭವಿಸಬೇಕು ಎನ್ನುವ ಮನೋಧರ್ಮದ ಸಾರ ತಿಳಿಯದ ಕೆಲವರು ಬೇಕೆಂದೇ ಮನನೋಯಿಸುವಂತೆ ಮಾತನಾಡುತ್ತಾರೆ. ಹಿರಿಯರ ಮಾತು ಮಕ್ಕಳ ಮನ ನೋಯಿಸದಂತಿದ್ದರೆ ಚೆನ್ನ, ಅಲ್ಲವೇ ?
ಹಿರಿಯರಾದ ನಾವು ಈ ಸೂಕ್ಷ್ಮವರಿತು ಸಂಯಮಕಾಯ್ದುಕೊಂಡರೆ ಮಕ್ಕಳ ಮನಸ್ಸೂ ನಿರಾಳವಾಗಿರುತ್ತದೆ. ಪೋಷಕರೂ ಅಷ್ಟೇ, ಓಡಿಸಬೇಕಾದ ದಿನಗಳಲ್ಲಿ ಮಕ್ಕಳಲ್ಲಿ ಓದೋ ಆಸಕ್ತಿಯನ್ನು ಬೆಳೆಸಬೇಕು. . ಮನೆಗಳಲ್ಲಿ ಅಂತಹ ವಾತಾವಾರಣ ಕಲ್ಪಿಸಬೇಕು. ಅದು ಬಿಟ್ಟು ಫಲಿತಾಂಶ ಬಂದ ಮೇಲೆ ಮಕ್ಕಳ ಮನಕ್ಕೆ ನೋವು ಕೊಡಬಾರದು. ಅಂತಿಮ ಫಲಿತಾಂಶ ಬಂದಾಗ ತಮ್ಮ ಮಕ್ಕಳ ಸಾಧನೆಯನ್ನು ಬೇರೆ ಮಕ್ಕಳ ಸಾಧನೆಯೊಂದಿಗೆ ತುಲನೆ ಮಾಡದೆ ಸಂತೃಪ್ತರಾಗಬೇಕು. ಹೇಗೆ ಐದು ಬೆರಳುಗಳು ಒಂದೇ ಸಮನಾಗಿ ಇಲ್ಲವೋ ಹಾಗೇ ಎಲ್ಲಾ ಮಕ್ಕಳ ಬೌದ್ಧಿಕ ಮಟ್ಟ ಒಂದೇ ತೆರನಾಗಿರಲು ಸಾಧ್ಯ ಇಲ್ಲ. ಅಷ್ಟಕ್ಕೂ ಮಕ್ಕಳು ಗಳಿಸೋ ಅಂಕಗಳೇ ಅವರ ಭವಿಶ್ಯವನ್ನು ನಿರ್ಧರಿಸೋ ಮಾನದಂಡವಲ್ಲ. ಅಂಕಗಳಿಂದಾಚೆಗೊಂದು ಬದುಕಿದೆ.
ಮಕ್ಕಳು ನಮ್ಮ ನಿರೀಕ್ಷಾಮಟ್ಟ ತಲುಪಿದರೆ ಖುಷಿ ಪಡೋಣ. ಇಲ್ಲ ಅಂದರೆ ಮುಂದೆ ಹೇಗೆ ಓದಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡೋಣ. ಸೂಕ್ಷ್ಮವಾಗಿರೋ ಮಕ್ಕಳ ಮನಸ್ಸನ್ನು ನೋಯಿಸಿ ನಕಾರಾತ್ಮಕ ಭಾವನೆಗಳು ಅವರಲ್ಲಿ ಬೆಳೆಯದಂತೆ ನೋಡಿಕೊಂಡು “ನಿನ್ನ ಬುದ್ಧಿ ಮನಸು ನಿನ್ನ ಮುಷ್ಟಿಯೊಳಗೆ ಇದ್ದರೆ ಲೋಕವನ್ನೇ ಗೆಲ್ಲಬಹುದು ” ಎಂದು ಹೇಳಿ ಅವರಲ್ಲಿ ಆತ್ಮವಿಶ್ವಾಸ ತುಂಬೋಣ.
ತಮ್ಮ ಪರ್ಸೆಂಟೇಜನ್ನು ಮಕ್ಕಳು ಹಾಗೂ ಮಕ್ಕಳ ಸಾಧನೆಯನ್ನು ಅವರ ಪೋಷಕರು ಹೇಳುವವರೆಗೂ ನಾನಾಗಿ ಯಾರನ್ನೂ ಕೇಳಲ್ಲ . . . . ಮತ್ತೆ ನೀವು ? ಪರಿವರ್ತನೆ ನನ್ನಿಂದಲೇ . . .
–ಜಯಲಕ್ಷ್ಮಿ ಕೆ. , ಮಡಿಕೇರಿ