ಬದುಕನ್ನು ರೂಪಿಸಿಕೊಳ್ಳಲು ಒಂದು ಕೆಲಸ ಬೇಕು. ಕೆಲವರು ವೈಟ್ ಕಾಲರ್ ವೃತ್ತಿಯನ್ನೆ ಹುಡುಕುತ್ತಾರೆ. ಕೆಲವರು ಕಮಾಯಿ ಅಧಿಕವಿರುವುದನ್ನು ಅಪೇಕ್ಷಿಸುತ್ತಾರೆ. ಮತ್ತೆ ಕೆಲವರು ಆದರ್ಶಗಳ ಬೆನ್ನು ಹತ್ತುತ್ತಾರೆ. ದೇಶ ಪ್ರೇಮದ ತುಡಿತವುಳ್ಳವರು ಸೈನಿಕರಾಗುತ್ತಾರೆ. ಅರ್ಪಣಾ ಮನೋಭಾವ ಇರುವವರು ಶಿಕ್ಷಕರಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ‘ತಮ್ಮ ಗುರುಗಳನ್ನು ಅನುಕರಿಸಿ ಶಿಕ್ಷಕರಾಗಬೇಕೆಂದು’ ಹೊರಡುತ್ತಾರೆ . ಕೆಲವರು ಸ್ವ- ಉದ್ಯೋಗದ ದಾರಿ ಹಿಡಿದು ಬದುಕು ಕಟ್ಟಿಕೊಳ್ಳುತ್ತಾರೆ. ಎಷ್ಟೋ ದಿನಗಳ ನಂತರ, ಎದುರು ಸಿಕ್ಕಾಗಲೋ, ಪೋನ್ ಕರೆ ಮಾಡಿದಾಗಲೋ, ನೆನಪುಗಳಿಗೆ ಮತ್ತಷ್ಟು ಹಸಿರು ಬಣ್ಣ ಬಳಿಯುತ್ತಾರೆ. ನಮಸ್ಕಾರ ಹೊಡೆಯುತ್ತಾರೆ. ಗುರುವಿನ ಮುಖದಲ್ಲಿ ಸಂತೃಪ್ತಿಯ ನಗೆ ಉಕ್ಕಿಸುತ್ತಾರೆ. .
ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಮೂರು ವರ್ಷಗಳ ಹಿಂದೆ ನನಗೆ ಮೊದಲ ವ್ಯಾಟ್ಸಪ್ ವೀಡಿಯೋ ಕರೆ ಬಂತು. ಆ ಕಡೆಯಿಂದ “ಸರ್ ನಾನು ಸುಮಂತ್, ಚೆನ್ನಾಗಿದ್ದೀರಾ ?, ದರ್ಶನ್ ನಿಮ್ಮ ನಂಬರ್ ಕೊಟ್ಟ, ಕಾಶ್ಮೀರದಿಂದ ಕಾಲ್ ಮಾಡ್ತಾ ಇದೀನಿ, ಆರೋಗ್ಯನಾ ಸರ್” ಎಂದಾಗ ಆಶ್ಚರ್ಯವೂ ಆನಂದವೂ ಒಟ್ಟಿಗೆ ಆಯಿತು. ಒಂದೆರಡು ಮಾತುಗಳ ನಂತರ ಆತ ಆರ್ಮಿ ಸೇವೆಯಲ್ಲಿರುವುದು ತಿಳಿಯಿತು. ಆಗ ನಾನು “ಬಹಳ ಸಂತೋಷ, ದೇಶ ಕಾಯುವ ಸೌಭಾಗ್ಯ ದೊರೆಯಿತಲ್ಲ” ಎಂದಾಗ ;”ಎಲ್ಲಾ ನಿಮ್ಮ ದಯೆ ಸರ್, ಒಂಭತ್ತನೇ ತರಗತಿಯಲ್ಲಿ ಶಾಲೆ ಬಿಟ್ಟ ನಾನು ಈ ಹಂತಕ್ಕೆ ಮುಟ್ಟಿದ್ದು ನಿಮ್ಮಿಂದಲೇ” ಎಂದಾಗ ಖುಷಿಯಾಯಿತು. “ನಮ್ಮದೇನಿದೆ? ಎಲ್ಲ ದೇವರ ಕೃಪೆಯೆಂದೆ”. ಫೋನ್ ಸಂಪರ್ಕ ಕಡಿತಗೊಂಡಿತು. ನನ್ನ ಮನಸ್ಸು ಮತ್ತೆ ಐದಾರು ವರ್ಷಗಳ ಹಿಂದಕ್ಕೆ ಪಯಣ ಬೆಳೆಸಿತು.
ಒಂದು ದಿನ ಹತ್ತನೇ ತರಗತಿಯಲ್ಲಿ ಬೇಂದ್ರೆ’ಯವರ ‘ಬೆಳಗು’ಪದ್ಯ ಬೋಧಿಸುತ್ತಿದ್ದೆ. ಪರಿಚಿತ ಹೆಣ್ಣು ಮಗಳೊಬ್ಬಳು ಬಾಗಿಲಲ್ಲಿ ಕಾಣಿಸಿಕೊಂಡರು. ನನ್ನನ್ನೇ ಕುರಿತು ಬಂದಿದ್ದಾರೆ ಎನಿಸಿ ಹತ್ತಿರ ಹೋದೆ. “ಸಾರ್ ಒಂದು ವಾರದಿಂದ ನನ್ನ ಮಗ ಶಾಲೆಗೆ ಬರ್ತಿಲ್ವಂತೆ, ನಾವಿಬ್ರೂ ಬೆಳಿಗ್ಗೆ ೯ ಗಂಟೆಗೆಲ್ಲ ಕೆಲಸಕ್ಕೆ ಹೋಗ್ತೀವಿ. ಆಮೇಲೆ ಅವ್ನು ಶಾಲೆಗೆ ಬರ್ತಾನೆ. ರಾತ್ರಿ ಹೆಡ್ಮಾಸ್ಟ್ರು ಫೋನ್ ಮಾಡಿದಾಗ್ಲೇ ಗೊತ್ತಾಯ್ತು, ಅವರಪ್ಪ ಬೈದ್ರು, ಹೊಡೆದ್ರು, ಬುದ್ಧಿ ಹೇಳಿದ್ರೂ ಜಗ್ಗುತ್ತಿಲ್ಲ. ಹಸು ಸಾಕ್ತೀನಿ, ವ್ಯವಸಾಯ ಮಾಡ್ತೀನಿ, ಶಾಲೆಗೆ ಮಾತ್ರಾ ಹೋಗಲ್ಲ ಅಂತಾನೆ. ಜಾಸ್ತಿ ಒತ್ತಾಯ ಮಾಡಿದ್ರೆ ಏನಾದ್ರೂ. . . . . ಮಾಡ್ಕೋತೀನಿ
ಅಂತಾನೆ. ಹೆಚ್ಚೆಮ್ಮು ನಿಮ್ಮ ಹತ್ರ ಹೋಗಿ, ಪರಿಹಾರ ಹುಡುಕುತ್ತಾರೆ, ಹುಡುಗನ್ನು ಸರಿ ಮಾಡ್ತಾರೆ ಅಂತ ಕಳಿಸಿದ್ರು. ಏನಾರಾ ಮಾಡಿ ಸಾರ್ ಅಂತ ಅವಲತ್ತುಕೊಂಡರು.
ನನಗೆ ಮುಂದಿನ ಜವಾಬ್ದಾರಿ ಏನೆಂದು ಅರ್ಥವಾಯ್ತು. ಈ ಮಕ್ಕಳು ಎಸ್ಸೆಸ್ಸೆಲ್ಸಿನಾದ್ರೂ ಪಾಸಾದ್ರೆ ಬದುಕಿಗೊಂದು ದಾರಿಯಾದೀತು ಅಂದುಕೊಂಡೆ. ಬಂದವರನ್ನು ಸಮಾಧಾನ ಪಡಿಸಿ ಕಳುಹಿಸಿದೆ. ಮುಖ್ಯಶಿಕ್ಷಕರ ಜೊತೆ ಚರ್ಚಿಸಿ, ಬಿಡುವಿನ ವೇಳೆ ಶಾಲೆಯಿಂದ ೫ ಕಿ. ಮೀ. ದೂರವಿದ್ದ ಅವರ ತೋಟದ ಮನೆಗೆ ಹೋದೆ. ನನ್ನ ಬೈಕ್ ಶಬ್ದ ಕೇಳಿದ ಹುಡುಗ ಕೋಣೆಗೆ ಹೋಗಿ ಬೀಗ ಜಡಿದುಕೊಂಡುಬಿಟ್ಟ. ಏನೆಲ್ಲಾ ಕಾರಣ ಹೇಳಿ ಪುಸಲಾಯಿಸಿದರೂ ಹೊರಗೆ ಬರಲಿಲ್ಲ. ಕಠಿಣ ವಿಷಯಗಳ ಶಿಕ್ಷಕರು ಕೊಡುವ ಮನೆಗೆಲಸಗಳ ಹೊರೆ, ತರಗತಿ ಕೋಣೆಯ ಅತಿ ಸ್ಟ್ರಿಕ್ಟ್ ವಾತಾವರಣ ಮಗುವಿನ ಮನಸ್ಸನ್ನು ಕುಗ್ಗಿಸಿತ್ತು. ತಾನು ಓದಿ ಉದ್ಧಾರವಾಗಲಾರೆ ಎಂಬ ವಿಷಣ್ಣ ಭಾವನೆ ಆವರಿಸಿಬಿಟ್ಟಿತ್ತು. ಆತ ಶಾಲೆಯನ್ನು ದ್ವೇಷಿಸುವಂತೆ ಮಾಡಿತ್ತು. ಸಾಮಾನ್ಯವಾಗಿ ಆಟೋಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಓದಿನಲ್ಲಿ ಹಿಂದುಳಿದಿರುತ್ತಾರೆ. ಗ್ರಾಮೀಣ ಭಾಗದ ಕ್ರೀಡಾಸಕ್ತ ಮಕ್ಕಳು ಅಧ್ಯಯನವನ್ನು ಅಲಕ್ಷಿಸುತ್ತಾರೆ. ಫಲಿತಾಂಶವೇ ಮುಖ್ಯ ಉದ್ಧೇಶವಾಗಿರುವ ಶಿಕ್ಷಕರು ತರಗತಿಯಲ್ಲಿ ಬಿಗಿಪಟ್ಟನ್ನು ಸ್ವಲ್ಪವೂ ಸಡಿಲಿಸುವುದಿಲ್ಲ. ಮನೆಯಲ್ಲೂ ಅವರ ಬೇಕು ಬೇಡಗಳನ್ನು ಗಮನಿಸುವವರು ಇರುವುದಿಲ್ಲ. ಇಂತಹ ವಾತಾವರಣದ ನಡುವೆ ಮಗು ಹೈರಾಣಾಗುತ್ತದೆ. ಉದ್ಧೇಶ ಪಲಾಯನ ತಂತ್ರಕ್ಕೆ ಬಲಿಯಾಗುತ್ತದೆ.
ಅಂತ ಮಗುವಿನೊಡನೆ ಮನಬಿಚ್ಚಿ ಮಾತನಾಡಿ ಕೌನ್ಸಿಲಿಂಗ್ ನಡೆಸದೆ ವಾಪಸ್ಸು ಹೋಗುವಂತಿಲ್ಲ. ಆಗ ನಾನು ಬೇರೆ ತಂತ್ರ ಬಳಸಿದೆ. ‘ ನಿನ್ನ ಮನೆವರೆಗೂ ಬಂದ ನನ್ನನ್ನು ಬರಿಗೈಲಿ ಕಳಿಸುವೆಯಾ ಎಳನೀರು, ಸೀಬೆಹಣ್ಣು ಕೊಟ್ಟು ಸತ್ಕರಿಸುವುದಿಲ್ಲವಾ?. ಶಾಲೆಗೆ ಬರದಿದ್ದರೂ ಸರಿ ;ಮನೆಗೆ ಬಂದವರನ್ನು ಉಪಚರಿಸುವ ಗುಣವನ್ನಾದರೂ ಕಲಿತುಕೋ ಎಂದು ಬೇಸರದಿಂದ ಮಾತನಾಡಿದೆ. ಸರಿ ಬರ್ತೇನೆ ಎಂದು ಹೊರಟೆ. ಆಗ ಬಾಗಿಲು ತೆರೆಯಿತು. ಎಳನೀರು ಕಿತ್ತು ತಂದನು. ಸತ್ಕಾರದ ಮುಗಿದ ನಂತರ ಮತ್ತೊಂದು ತಂತ್ರ ಬಳಸಿದೆ, “ಆ ಮೂರೂ ಶಿಕ್ಷಕರು ಡಯಟ್ ಗೆ ಒಂದುವಾರ ತರಬೇತಿಗೆ
ಹೋಗಿದ್ದಾರೆ. ಈಗ ಯಾರೂ ನಿನ್ನನ್ನು ಏನೂ ಕೇಳದಂತೆ ನೋಡಿಕೊಳ್ಳುತ್ತೇನೆ. ತರಗತಿಗಳು ಆರಾಮಾಗಿವೆ ಬಾ ಎಂದು ಬೈಕಿನಲ್ಲಿ ಕೂರಿಸಿಕೊಂಡು ಹೊರಟೆ. ಹೋದ ನಂತರ ಶಿಕ್ಷಕರನ್ನೂ ವಿನಂತಿಸಿಕೊಂಡೆ. ನಿಧಾನವಾಗಿ ಹುಡುಗ ಶಾಲಾ ಪರಿಸರಕ್ಕೆ ಮರು ಹೊಂದಿಕೊಂಡ. ಹತ್ತನೇ ತರಗತಿಯಲ್ಲಿ ಉತ್ತೀರ್ಣನೂ ಆದ. ಪಿ. ಯು. ಸಿ. ಯ ಕ್ರೀಡೆಗಳಲ್ಲಿ ಬಹಳ ಶೈನ್ ಆಗಿಬಿಟ್ಟ. ಮಿಲಿಟರಿ ಸೇವೆಗೆ ಆಯ್ಕೆಯೂ ಆದ.
ಇವನಂತೆಯೆ ಲಾರಿ ಡ್ರೈವರುಗಳ ಸಹವಾಸದಿಂದ ಶಾಲೆ ಬಿಟ್ಟ ದರ್ಶನ, ಎಳೆಯ ವಯಸ್ಸಿನಲ್ಲಿ ಲವ್ ಆಕರ್ಷಣೆಗೆ ಒಳಗಾಗಿ ತಲೆಕೆಡಿಸಿಕೊಂಡು ವ್ಯವಸ್ಥೆಗೆ ಹೆದರಿ ಓಡಿಹೋಗಿದ್ದ ರವೀಶ ;ಮೂವರನ್ನೂ ಮನೆಗೆ ಹುಡುಕಿಕೊಂಡು ಹೋಗಿ ಮನವೊಲಿಸಿ, ಪೋಷಕರಿಗೆ ಅರಿವು ಮೂಡಿಸಿ ಕರೆತಂದದಾಯ್ತು. ಇವರ ಜೊತೆ ಇನ್ನೂ ಅನೇಕರಿದ್ದಾರೆ. ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸಿಗುತ್ತಾರೆ. ಕೃತಜ್ಞತೆಯ ಭಾವದಿಂದ ನೆನೆಯುತ್ತಾರೆ. ಲೈಫ್ ಲಾಂಗ್ ನಿಮ್ಮನ್ನು ಮರೆಯುವುದಿಲ್ಲವೆಂದಾಗ ಸಂತೃಪ್ತಿಯ ಹೂ ನಗೆ ನನ್ನನ್ನು ಆವರಿಸುತ್ತದೆ. ಸಣ್ಣಪುಟ್ಟ ಕಾರಣದಿಂದ ದಾರಿ ತಪ್ಪಿ, ಶಾಲೆ ತೊರೆದ ಮಕ್ಕಳನ್ನು ಹೀಗೆ ಮುಖ್ಯವಾಹಿನಿಗೆ ತರುವ ಒಂದು ಸಣ್ಣ ಪ್ರಯತ್ನ ಎಷ್ಟೊಂದು ಫಲಕೊಟ್ಟಿತಲ್ಲ!ಎಂದು ಆನಂದತುಂದಿಲಿತನಾಗುತ್ತೇನೆ. ಕೆಲವೊಮ್ಮೆ ತಂದೆ ತಾಯಂದಿರ ಮಾತಿಗೆ ಸೊಪ್ಪು ಹಾಕದ ಈ ಮಕ್ಕಳು ಗುರುಗಳ ಮಾತಿಗೆ ಬೆಲೆ ಕೊಡುತ್ತಾರಲ್ಲ ಎಂದು ಖುಷಿಯಾಗುತ್ತೇನೆ. ಗುರುವಿಗೆ ಬೆಲೆ ಕೊಡುವ ಹಳೆಯ ಪರಂಪರೆ ಇನ್ನೂ ಜೀವಂತವಾಗಿದೆ ಎಂದು ಹೆಮ್ಮೆ ಪಡುತ್ತೇನೆ. ನಾವು ನಾಲ್ಕಕ್ಷರ ಕಲಿಸಿದ ಶಿಷ್ಯರು ನಮಗಿಂತಲೂ ಎತ್ತರಕ್ಕೆ ಏರಿದಾಗ ಅಭಿಮಾನ ಪಡುತ್ತೇನೆ. ಮರೆತ ಹೋಗಿದ್ದ ಹಳೆಯ ಸುಂದರ ಕ್ಷಣಗಳು ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತವೆ. ಒಣಗಿದ ಕಾಂಡದಲ್ಲಿ ಚಿಗುರು ಮೂಡಿದಂತೆ!. ಅಡಿಗರ ಕವಿತೆಯ ಸಾಲುಗಳನ್ನು ಮೆಲುಕು ಹಾಕುತ್ತೇನೆ. ‘ಅಮೃತ ವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ. . . . ‘. ಇಂತಹ ಅವಕಾಶ ಕೊಟ್ಟ ಶಿಕ್ಷಕವೃತ್ತಿಯನ್ನು ಧನ್ಯತಾಭಾವದಿಂದ ಅಭಿವಂದಿಸುತ್ತೇನೆ.
ಗುರುವು ನಾನೆಂಬ ಗರುವ ಎನಗಿಲ್ಲ
ಹಿರಿಯರು ಅನಿಬರಿಹರು ಎನಗಿಂತ
ಕಲಿತುದನು ಕಲಿಸುತಿಹೆನೆಂಬ ಹೆಮ್ಮೆ
ಹಸನಾದರೆ ಶಿಷ್ಯರ ಬಾಳು ಸಾರ್ಥಕವು ಜನುಮ
-ಎಂ. ಡಿ. ಚಂದ್ರೇಗೌಡ ನಾರಮ್ನಳ್ಳಿ,