ಪರಸಗಡ ನಾಟಕೋತ್ಸವ 2020: ವೈ. ಬಿ. ಕಡಕೋಳ

ಜನೇವರಿ 25 ರಿಂದ ಪೆಬ್ರವರಿ 2 ರ ವರೆಗೆ ಸವದತ್ತಿ ಕೋಟೆಯಲ್ಲಿ ಪರಸಗಡ ನಾಟಕೋತ್ಸವ 2020

ಈ ವರ್ಷ ಸವದತ್ತಿ ಕೋಟೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ(ರಿ) ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ಇದೇ ಜನೇವರಿ 25 ರಿಂದ ಆರಂಭವಾಗುತ್ತಿದೆ. ಈ ಸಂಘಟನೆಯವರು ಶ್ರೀ ವಿಶ್ವೇಶ್ವರತೀರ್ಥ ಪೇಜಾವರ ಶ್ರೀಗಳ ಹಾಗೂ ಶ್ರೀ ಗಿರೀಶ್ ಕಾರ್ನಾಡ್ ಸ್ಮರಣೆಯೊಂದಿಗೆ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು. ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳ ಷಷ್ಯಬ್ದಿಯೂ ಕೂಡ ನೆರವೇರಿಸುವ ಸಂಕಲ್ಪದೊಂದಿಗೆ ಪ್ರತಿದಿನ ವಿಭಿನ್ನ ಪ್ರಯೋಗಾತ್ಮಕ ನಾಟಕಗಳನ್ನು ಆಯೋಜಿಸಿರುವರು. ಈ ಸಂಘಟನೆಯ ರೂವಾರಿ ನಟ ನಿರ್ದೇಶಕ ಝಕೀರ್ ನದಾಫ್ರಿಗೆ ಕರ್ನಾಟಕ ಸರ್ಕಾರದ ರಂಗ ಪ್ರಶಸ್ತಿ ಕೂಡ ಈ ವರ್ಷ ಘೋಷಣೆಯಾಗಿರುವುದು ಮಹತ್ವದ ಸಂಗತಿ. ಇದು ಈ ಸಂಘಟನೆಗೆ ಸಂದ ಗೌರವ ಕೂಡ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ. ಈಗ ಇದು ಸವದತ್ತಿ ಎಲ್ಲಮ್ಮಾ ವಿಧಾನ ಸಭಾ ಕ್ಷೇತ್ರವೆಂದೂ ಹೆಸರಾಗಿದೆ. ಇದು ಬೆಳಗಾವಿ ಜಿಲ್ಲಾ ಕೇಂದ್ರದಿಂದ 88 ಕಿ, ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ 38 ಕಿ. ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು. ಮುನವಳ್ಳಿ ಐತಿಹಾಸಿಕ ತಾಣ, ಮುರಗೋಡ. ಸೊಗಲ. ಯರಗಟ್ಟಿ. ಇಂಚಲ, ದಂತಹ ಅನೇಕ ಪ್ರಸಿದ್ದ ತಾಣಗಳನ್ನು ಹೊಂದಿದ ತಾಲೂಕಾ ಕೆಂದ್ರ.

ಸವದತ್ತಿ ಪ್ರವೇಶವಾಗುತ್ತಿದಂತೆ ಕೋಟೆಯೊಂದು ಕಾಣತೊಡಗುತ್ತದೆ. ಇದು ಎರಡನೇ ಜಾಯಗೊಂಡ ದೇಸಾಯಿ ನಿರ್ಮಿಸಿದ ಕೋಟೆ. ಸರಕಾರ ಹಾಗೂ ಸ್ಥಳೀಯ ಪುರಸಭೆ ಈ ಕೋಟೆಯನ್ನು ಅಭಿವೃದ್ದಿಪಡಿಸಿದ ಕಾರಣ ಇದೊಂದು ಐತಿಹಾಸಿಕ ಪ್ರವಾಸೀ ತಾಣವಾಗಿದೆ. ಈ ಕೊಟೆಯೊಳಗಡೆ ಪ್ರತಿವರ್ಷ ಸ್ಥಳೀಯ ರಂಗ ಕಲಾವಿದರ ಸಂಘಟನೆಯಾದ ರಂಗಾರಾಧನಾ ಸಂಸ್ಥೆಯು ನೀನಾಸಂ. ರಂಗಾಯಣ, ದಂಥಹ ರಾಜ್ಯದ ಖ್ಯಾತ ನಾಟಕ ಸಂಘಟನೆಗಳ ನಾಟಕಗಳನ್ನೊಳಗೊಂಡ ನಾಟಕೋತ್ಸವ ನಡೆಸುತ್ತಿದೆ.

ಹೀಗಾಗಿ ಹಗಲು ಪ್ರವಾಸೀ ತಾಣವಾದ ಈ ಕೋಟೆ ಪ್ರತಿವರ್ಷ ಹಲವು ದಿನಗಳು ರಾತ್ರಿಯಾಗುತ್ತಿದ್ದಂತೆ ಕೋಟೆಯೊಳಗಿನ ಹುಲ್ಲುಹಾಸು, ಅಲ್ಲಿನ ಕಟ್ಟೆ, ರಂಗ ಆರಾಧಕರ ಮೂಲಕ ನಾಟಕ ತಾಣವಾಗಿ ಗಮನ ಸೆಳೆಯುತ್ತದೆ. ತಂಪಾದ ಗಾಳಿ ಮೆತ್ತನೆಯ ಹುಲ್ಲುಹಾಸು, ತೆರೆದ ಕಟ್ಟೆಯ ಮೇಲೆ ಪರದೆಗಳು ರಂಗ ಸಜ್ಜಿಕೆಗಳು ದ್ವನಿವರ್ಧಕಗಳು ಬಣ್ಣಬಣ್ಣದ ವಿದ್ಯುತ್ ದೀಪಗಳು ಪ್ಲಾಸ್ಟಿಕ್ ಖುರ್ಚಿಗಳು ಕಾಣತೊಡಗುತ್ತವೆ. 7 ಗಂಟೆಗೆ ನಾಟಕ ಪ್ರಾರಂಭಗೊಂಡು ಎರಡು ತಾಸುಗಳವರೆಗೆ ಪ್ರದರ್ಶನಗೊಳ್ಳುವ ಮೂಲಕ ರಂಗಾಸಕ್ತರ ಮನಸೂರೆಗೊಳ್ಳುವ ಈ ನಾಟಕಗಳು ಪ್ರತಿದಿನ ಒಂದರಂತೆ ಇದೇ ಜನೇವರಿ 25 ರಿಂದ ಪೆಬ್ರುವರಿ 2 ರ ವರೆಗೆ ಪರಸಗಡ ನಾಟಕೋತ್ಸವವನ್ನು ಆಯೋಜಿಸಿದ್ದು 25-1-2020 ರಂದು ರಂಗ ಆರಾಧನಾ ಸಂಘಟನೆಯವರಿಂದ “ಮಹಮೂದ ಗಾವಾನ” ಇದನ್ನು ಚಂದ್ರಶೇಖರ ಕಂಬಾರ ರಚಿಸಿದ್ದು ಝಕೀರ ನದಾಪ್ ನಿರ್ದೇಶನವಿದೆ. ಈ ನಾಟಕದ ಕೇಂದ್ರಬಿಂದುವಾದ ಮಹಮೂದ ಗಾವಾನ ಒಬ್ಬ ವಿದೇಶಿಯ. ನಾಡಿಗೆ ಅದರ ನುಡಿಗೆ ಅನ್ಯ ಹೊರಗಿನವ. ಆತನ ವಿವೇಕ ತಾಳ್ಮೆ. ಜನಗಳು. ಜಾಗೆಗಳುಮತಗಳು ಹಾಗೂ ದೇವರುಗಳನ್ನು ಒಟ್ಟುಗೂಡಿಸುವ ಮಹಾತ್ವಾಕಾಂಕ್ಷೆ-ನಮ್ಮ ಕಾಲಕ್ಕೂ ನಮಗೂ ಬಹಳ ಪ್ರಸ್ತುತ. ಕ್ರೌರ್ಯ ಹಿಂಸೆಯಿಂದ ತುಂಬಿರುವಹಾಗೂ ಯಾವುದೇ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವ ನಮ್ ಈ ಕಾಲಕ್ಕೆ ಗವಾನನ ವ್ಯಕ್ತಿತ್ವದ ಮಾದರಿ ಮಹತ್ವದ್ದು. ಗಾವಾನನ ಜಗತ್ತಿನಲ್ಲಿ “ಅಲ್ಲಾ” ಮತ್ತು “ವಿಠ್ಠಲ” ನೇರವಾಗಿ ಕಾಣಿಸಿಕೊಂಡರೆ ಅಲ್ಲಾ ಕಥನದ ಹಿನ್ನಲೆಯಲ್ಲಿ ಎಲ್ಲೆಲ್ಲೂ ಇರುವುದು ಗೋಚರವಾಗುತ್ತದೆ. ಈ ನಾಟಕ ನಮ್ಮ ಮನಸ್ಸು ಮತ್ತು ಎದೆಯನ್ನು ತಿಳಿಯಾಗಿಸಿ ಸುತ್ತಲಿನ ಸಮಕಾಲೀನ ಬದುಕಿನ ಕಡೆ ವಿಮರ್ಶಾತ್ಮಕ ನೋಟ ಬೀರುವಂತೆ ಪ್ರೇರೇಪಿಸುತ್ತದೆ. ಈ ನಾಟಕ 120 ನಿಮಿಷಗಳ ಅವಧಿಯನ್ನು ಹೊಂದಿದೆ.

26-1`-2020 ರಂದು ರಂಗ ಆರಾಧನಾ ಸಂಘಟನೆಯವರಿಂದ ನಾ ಸತ್ತಿಲ್ಲ. ಮತ್ತು ಟೂರಿಂಗ್ ಟಾಕೀಜ್ ಧಾರವಾಡ ಇವರಿಂದ ಹುಚ್ಚರ ಸಂತೆ. ಎರಡು ನಾಟಕಗಳು ಪ್ರದರ್ಶಿತಗೊಳ್ಳಲಿದ್ದು “ನಾ ಸತ್ತಿಲ್ಲ” ವ್ಯಕ್ತಿಯೊಬ್ಬ ಜೀವಂತವಾಗಿ ಕೋರ್ಟಿನಲ್ಲಿ ಹಾಜರಾದರೂ ಅವನು ಜೀವಂತವಾಗಿದ್ದಾನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇಲ್ಲವೆಂಬ ಕಾರಣಕ್ಕೆ ಅವನ ಅಸ್ತಿತ್ವವನ್ನೆ ನಿರಾಕರಿಸುವ ಕತೆಯುಳ್ಳ ನಾಟಕ ನಾ ಸತ್ತಿಲ್ಲ. ಮೇಲು ನೋಟಕ್ಕೆ ಈ ನಾಟಕ ನಮ್ಮ ಕಾನೂನು ವ್ಯವಸ್ಥೆಯನ್ನು ವಿಡಂಬಿಸುತ್ತದೆ ಅನಿಸಿದರೂ ನಾಟಕದ ಮೂಲಕ ಆಶಯ ಬೇರತೆಯದೆ ಆಗಿದೆ; ಸ್ವಾತಂತ್ರ್ಯಾ ನಂತರ ನಮ್ಮ ದೇಶದಲ್ಲಿ ಮೌಲ್ಯಗಳು ಕುಸಿಯುತ್ತಿರುವುದನ್ನು ಧ್ವನಿಸುವ ನಾಟಕವಿದು. ಸತ್ಯ ಮತ್ತು ಹಣ ಮುಖಾಮುಖಿಯಾದಾಗ ಸತ್ಯ ಸೋತು ಹೋಗಿ ಹಣಕ್ಕೆ ಜಯವಾಗುವುದು ಎಂಬ ಭಾವನೆ ನಾಟಕದ ಕೊನೆಯಲ್ಲಿ ಪ್ರೇಕ್ಷಕನಿಗೆ ಮೂಡಿದರೂ ನಿರಾಸೆಯ ಆಳದಲ್ಲಿ ಜಯಿಸುವ ಆಸೆಯ ಕಿರಣಗಳಿರುವುದನ್ನು ನಾಟಕ ಪ್ರತಿಪಾದಿಸುತ್ತದೆ. ಹಾಗಾಗಿ ನಕಾರಾತ್ಮಕವೆನಿಸುವ ಅಂತ್ಯವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕಾಗುತ್ತದೆ. ಇದು ನಾಟಕ ಮೂಲ ಆಶಯವೂ ಹೌದು. ಈ ನಾಟಕ 60 ನಿಮಿಷ ಅವಧಿಯನ್ನು ಹೊಂದಿದೆ.

ಅದೇ ದಿನ “ಹುಚ್ಚರ ಸಂತೆ” ಎಂಬ ಮತ್ತೊಂದು ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕ ರಚನೆ ನಿರ್ದೇಶನ ಉಮೇಶ ತೇಲಿಯವರದು. ಟೂರಿಂಗ ಟಾಕೀಜ ಧಾರವಾಡದ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಇದೊಂದು ಯಶಸ್ವಿ ಸಿದ್ಧ ಮಾದರಿಯ ಹಾಸ್ಯ ನಾಟಕ. ಯಾರದೋ ತಪ್ಪಿನಿಂದಾಗಿ, ವ್ಯಕ್ತಿಗಳು ಅದಲು ಬದಲಾದಾಗ ಉಂಟಾಗುವ ಸನ್ನಿವೇಶಗಳು ಮನತಣಿಯುವಷ್ಟು ನಗೆ ಉಕ್ಕಿಸುತ್ತದೆ. ನಾಟಕದ ವಿಷಯ ಗಂಭೀರವಲ್ಲದಿದ್ದರೂ ನಗಬೇಕು ಎಂದು ಗಂಭೀರವಾಗಿ ಯೋಚಿಸುವವರಿಗಾಗಿ ಹೇಳಿ ಮಾಡಿಸಿದಂತಿದೆ. ಈ ನಾಟಕದ ಅವಧಿ 100 ನಿಮಿಷಗಳು.

27-1-2020 ರಂದು ರಂಗ ಸಂಪದ ಬೆಳಗಾವಿ ತಂಡದವರಿಂದ ಯು ಟರ್ನ. ನಾಟಕ ಪ್ರದರ್ಶಿಸಿತವಾಗುತ್ತಿದ್ದು ಈ ನಾಟಕವನ್ನು ಶ್ರೀಮತಿ ನೀತಾ ಇನಾಮದಾರ ರಚಿಸಿದ್ದು ಮೂಲ ಮರಾಠಿ ನಾಟಕವನ್ನು ಆನಂದ ಮಹಸವೇಕರ ರಚಿಸಿದ್ದು ನಿರ್ದೇಶನವನ್ನು ಶ್ರೀಪತಿ ಮಂಜನಬೈಲು ಮಾಡಿದ್ದು ರಂಗ ಸಂಪದ ಬೆಳಗಾವಿಯ ಕಲಾವಿದರು ಇಲ್ಲಿ ಅಭಿನಯಿಸಿದ್ದು ಹೊಸ ಪೀಳಿಗೆಯವರು ಆಧುನಿಕತೆ ಹೊಸ ವಿಚಾರಗಳನ್ನು ತಮ್ಮಷ್ಟಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ ಅದನ್ನೆ ತಂದೆ ತಾಯಿ ಹಿರಿಯರು ಮಾಡಿದರೆ ಅದನ್ನು ಒಪ್ಪಲಾರದೆ ಕ್ರೀಡಾ ಮನೋಭಾವದಿಂದ ಸ್ವೀಕರಿಸಲಾರದ ಮನಸ್ಥಿತಿಯನ್ನು ಇಂದಿನ ಪೀಳಿಗೆ ಹೊಂದಿದೆ. ಆಧುನಿಕ ಪರಂಪರೆ ತಮಗಷ್ಟೇ ಸೀಮಿತವಾದುದು. ಹಿರಿಯರು ಮಾಡಿದರೆ ಸಹಿಸಲಾರವು ಎಂಬ ಹೊಸ ಪೀಳಿಗೆಯ ಮನಸ್ಥಿತಿಯನ್ನು ಈ ನಾಟಕ ತೆರೆದಿಡುತ್ತದೆ. ಈ ನಾಟಕದ ಅವಧಿ 110 ನಿಮಿಷಗಳು.

28-1-2020 ರಂದು ರಂಗಾಯಣ ಮೈಸೂರು ಇವರಿಂದ ರೆಕ್ಸ ಅವರ್ಸ ಡೈನೋ ಏಕಾಂಗಿ ಪಯಣ. ಇದರ ಪ್ರಸ್ತುತಿಯನ್ನು ರಂಗಾಯಣ ಮೈಸೂರು ಪ್ರಸ್ತುತಿ ಪಡಿಸಿದ್ದು ಶ್ರವಣಕುಮಾರ ನಿರ್ದೇಶನ ಮಾಡಿದ್ದು “ರೆಕ್ಸ ಅವರ್ಸ ಪಪೆಟ್ ಶೋನಲ್ಲಿ ಬಳಸುತ್ತಿರುವ ಮಾನವನ ದೇಹ ರಚನೆಯ ಮೇಲೆ ರಚಿಸಲ್ಪಟ್ಟ ಗೊಂಬೆಯಾಗಿದೆ. ಪ್ರಸ್ತುತ ಪ್ರದರ್ಶನದಲ್ಲಿ ಮಾನವ ದೇಹ ರಚನೆಯ ಗೊಂಬೆಗಳ ಬದಲಾಗಿ ಪ್ರಾಣಿಗಳ ದೇಹ ರಚನೆಯ ಗೊಂಬೆಗಳನ್ನು ಬಳಸಲಾಗಿದೆ. ರೆಕ್ಸ ಅವರ್ಸ ಒಂದು ತಾಯಿಂದ ಬೇರ್ಪಟ್ಟ ಟಿ-ರೆಕ್ಸನ ಮೊಟ್ಟೆಯ ಕತೆ. ಹಲವು ತೊಡಕುಗಳ ನಡುವೆ ಮೊಟ್ಟೆ ಒಡೆದು ಹೊರಬಂದ ಪುಟ್ಟ ಟಿ-ರೆಕ್ಸನ ಮರಿ ಸಹಜವಾಗಿ ನಿಸರ್ಗದ ಅಚ್ಚರಿಯನ್ನು ಗಮನಿಸುತ್ತ ಅದಕ್ಕೆ ಹೊಂದಿಕೊಳ್ಳುತ್ತ ಸಾಗುತ್ತದೆ. ಅದು ಹಸಿದ ರ್ಯಾಪ್ಟರಗಳ ಕೈಗೆ ಸಿಕ್ಕು ಆ ರ್ಯಾಪ್ಟರನ್ನೇ ಅದು ತಾಯಿಯಾಗಿ ಕಾಣಲಾರಂಭಿಸುತ್ತದೆ. ನೈಸರ್ಗಿಕ ಅಸಮತೋಲನಗಳು ಆರಂಭವಾಗಿ ಪ್ರಾಣಿಗಳೆಲ್ಲ ವಲಸೆ ಹೊರಡುವ ಸಂದರ್ಭ ಆ ಮರಿಯ ನಿಜವಾದ ತಾಯಿ ಟಿ-ರೆಕ್ಸ ಸಿಕ್ಕು ತಾಯಿ ಮಗುವಿನ ಭೇಟಿಯಾಗುತ್ತದೆ. ತನ್ನಂತೆಯೇ ದೇಹ ರಚನೆಯ ಅಪರಿಚಿತ ತಾಯಿಯನ್ನು ಕಂಡಾಗ ತನ್ನಂತಿಲ್ಲದಿದ್ದರು ಪೋಷಿಸಿದ ಸಾಕು ತಾಯಿಯೇ ತಾಯಿ ಎನ್ನಲಾರಂಭಿಸುತ್ತದೆ. ಆದರೆ ಆ ಮರಿಯ ರಕ್ಷಣೆ ಅದರ ಹೆತ್ತ ತಾಯಿ ಟಿ-ರೆಕ್ಸನಿಂದ ಮಾತ್ರ ಸಾಧ್ಯವಾಗುವುದರಿಂದ ರಾಪ್ಟರ್ಗಳು ತಾಯಿಯೊಂದಿಗೆ ಆ ಮರಿಯನ್ನು ಕಳುಹಿಸಿ ಕೊಡುತ್ತವೆ ಮಾಂಸಾಹಾರಿ ಪ್ರಾಣಿಗಳೆಲ್ಲ ದುಷ್ಟ ಪ್ರಾಣಿಗಳಲ್ಲ ಅವು ಸಹಜವಾಗಿ ನೈಸರ್ಗಿಕ ಅಸಮತೋಲನ ಕಾಯ್ದುಕೊಳ್ಳುವಂತವುಗಳು. ಈ ಸಂಗತಿಯನ್ನು ಮಕ್ಕಳಿಗೆ ತಿಳಿಸಿಕೊಡುವುದೆ ಈ ಪೊಪೆಟ್ ಶೋ ನ ಮೂಲ ಆಶಯ. ಈ ನಾಟಕದ ಅವಧಿ 70 ನಿಮಿಷಗಳು.

29-1-2020 ರಂದು ರಂಗಾಯಣ ಮೈಸೂರು ಇವರಿಂದ ಆರ್ಕೇಡಿಯಾದಲ್ಲಿ ಪಕ್ ನಾಟಕ ಪ್ರದರ್ಶಿತಗೊಳ್ಳುತ್ತಿದೆ. ಇದರ ರಚನೆಯನ್ನು ಎಸ್. ರಾಮನಾಥ ಮಾಡಿದ್ದು ಪರಿಕಲ್ಪನೆ ಮತ್ತು ನಿರ್ದೆಶನವನ್ನು ಚಂದ್ರಹಾಸನ್ ಮಾಡಿರುವರು. ಇದೊಂದು ಸಂಗೀತ ನಾಟಕ. ಎಲಿಜೆಬತ್ ಕಾಲದ ಆಸುಪಾಸಿನ ಬರಹಗಾರ ಫಿಲಿಫ ಸಿಡ್ನಿ ಮತ್ತು ಶೇಕ್ಸಫಿಯರನಿಂದ ಸ್ಪೂರ್ತಿಗೊಂಡು ರಚಿಸಿರುವ ನಾಟಕವಿದೆ. ಹಳೆ ಕಾಲದ ಆರ್ಕೇಡಿಯ ನಾಡಿನ ಪ್ರೀತಿ, ಪ್ರೇಮ, ಸೇಡು ರಾಜಕಾರಣಗಳ ಹೂರಣವುಳ್ಳ ರೋಚಕ ಕಥೆಯಲ್ಲಿ “ಮಿಡ್ ಸಮರ್ ನೈಟ ಡ್ರೀಮ್” ನಾಟಕದ ತುಂಟ ಪಕ್ ಮ್ಯಾಕಬೆತ್ ನಾಟಕದ ಜಕ್ಕಿಣಿಯರ ಮಾಯದ ನಿಗೂಢತೆಗಳು ಆವರಿಸಿಕೊಂಡಿದ್ದು ಜ್ಯೂಲಿಯಸ್ ಸೀಸರ್, ಈಡಿಪಸ್, ಕಿಂಗಲಿಯರ್ನ ಫಾಲ್ಸ್ಟಫ್ ಇತ್ಯಾದಿ ಹಲವು ನಾಟಕಗಳ ಪಾತ್ರಗಳು ಅರಳಿವೆ. ಯುರೋಪಿನ ಕಥೆಯಾದರೂ ಭಾರತೀಯ ನಿರೂಪಣೆ ಶೈಲಿಯಲ್ಲಿ ಈ ನಾಟಕವಿದೆ. ಈ ನಾಟಕದ ಅವಧಿ 105 ನಿಮಿಷಗಳು.

30-1-2020 ರಂದು ಮೈಸೂರು ರಂಗಾಯಣ ತಂಡದವರಿಂದ ಬೆಂದಕಾಳು ಆನ್ ಟೋಸ್ಟ. ಇದೊಂದು ಸದ್ಯದ ನಾಗರೀಕ ಬದುಕು ನಾಗಾಲೋಟದಲ್ಲಿ ಮಂಕುಕವಿದ ಸಾವಿರಾರು ತಲೆಗಳಿಗೆ ಸ್ವಾದಿಷ್ಟ ಆಹಾರವಾಗುತ್ತಿರುವ ಮಾಯಾ ನಗರಿಯ ನಿಜ ಬಿಕ್ಕಟ್ಟಿನೆಡೆಗೆ ಸೃಜನಶೀಲ ನಾಟಕದ ಮೂಲಕ ಒಂದು ನೋಟವಾಗಿದೆ. ಹೊಟ್ಟೆ ಬಟ್ಟೆಗಳ ಹಸಿವಿನಿಂದ ಹಿಡಿದು ಮುಗಿಲು ಮುಟ್ಟುವ ಸ್ಟೇಟಸನ್ ದಾಹಕ್ಕೆ ನಾನಾ ಚಿಟ್ಟೆಗಳ ನಗರ ಮಕರಂದದ ಶೋಕಿಯಾಸೆಗೆ ಊರು ಬಿಟ್ಟ ಹೈವೆಗಳ ಅಮಲಿಗೆ ಕಪಟ ಕಳ್ಳಾಟಗಳ ತಾಪಕ್ಕೆ ಗಿಜಿಗುಡುವ ನಗರ ಬೇಕೆ ಬೇಕೆಂಬ ಕೊಳ್ಳುಬಾಕರ ದಾಹಕ್ಕೆ ತುತ್ತಾಗಿ ತತ್ತರಿಸುತ್ತಿರುವ ಐತಿಹಾಸಿಕವಾಗಿ ಸಾಂಸ್ಕøತಿಕವಾಗಿ ಸಂಪನ್ನವಾಗಿದ್ದ ಬೆಂದಕಾಳೂರೆಂಬ ನಗರದ ಚಿತ್ರಣವಿದು. ಈ ನಾಟಕದ ಅವಧಿ 110 ನಿಮಿಷಗಳು.

31-1-2020 ರಂದು ರಂಗ ಆರಾಧನಾ ಸಂಘಟನೆ ಸವದತ್ತಿ ಇವರಿಂದ ಚಾಳಪೋಳ. ಪ್ರರ್ಶಿತವಾಗಲಿದೆ. ಇದರ ಕಥೆ ವಾಮನ ಕುಲಕರ್ಣಿ ಬರೆದಿದ್ದು ರಚನೆ ಮತ್ತು ನಿರ್ದೇಶನವನ್ನು ಝಕೀರ ನದಾಫ ಮಾಡಿರುವರು. ಇದು ಸತ್ಯ ಘಟನೆಯನ್ನಾಧರಿಸಿದ ನಾಟಕ. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕಥೆ ಆರಂಭವಾಗುತ್ತದೆ. ಅಥನಿ ತಾಲೂಕಿನ ಕೋ ಹಳ್ಳಿಯ ವೆಂಕೋಬರಾವ್ ಕುಲಕರ್ಣಿ ವೈರಾಗ್ಯದತ್ತ ತಿರುಗಿ ಮನೆ ತೊರೆದಾಗ ಮನೆಯಲ್ಲಿ ಕೇವಲ ಹೆಣ್ಣು ಮಕ್ಕಳಿದ್ದಾರೆ. ಮನೆ ಜವಾಬ್ದಾರಿಯನ್ನು ಆ ಮನೆಯ ಸೊಸೆ ಸಮರ್ಥವಾಗಿ ನಿಭಾಯಿಸಿ ಸಮಾಜಕ್ಕೆ ಮಾದರಿಯಾಗುತ್ತಾಳೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭವನ್ನು ಹಬ್ಬದಂತೆ ಆಚರಿಸುತ್ತದೆ ಬ್ರಾಹ್ಮಣ ಕುಟುಂಬ. , ಇತ್ತ ಮಹಾತ್ಮ ಗಾಂಧಿಯ ಹತ್ಯೆಯಾಗಿ ನಾಥುರಾಂ ಗೊಡ್ಸೆ ಬ್ರಾಹ್ಮಣ ಎಂದು ತಿಳಿದು ಬಂದಾಗ ಬ್ರಾಹ್ಮಣರ ಮನೆಗಳನ್ನು ಹುಡುಕಿ ಬೆಂಕಿ ಹಚ್ಚುವುದು(ಜಾಳ) ಮತ್ತು ದರೋಡೆ (ಪೋಳ) ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಆ ಕುಟುಂಬ ಅನುಭವಿಸುವ ಕಷ್ಟಗಳ ಅನಾವರಣವೆ ನಾಟಕದ ಕಥಾವಸ್ತು, ಭಾವೈಕ್ಯತೆಯನ್ನು ಸಾರುವುದು ಈ ನಾಟಕದ ಉದ್ದೇಶ. ಈ ನಾಟಕದ ಅವಧಿ 100 ನಿಮಿಷಗಳು.

ಪೆಬ್ರುವರಿ 1 ರಂದು ರಂಗ ಆರಾಧನಾ ಸಂಘಟನೆಯವರಿಂದ ಕಾತ್ರಾಳ ರತ್ನಿ ಚಾದಂಗಡಿ. ಇದು ದು. ನಿಂ. ಬೆಳಗಲಿಯವರ ರಚನೆಯಾಗಿದ್ದು ರಂಗರೂಪ ನಿರ್ದೇಶನಕವನ್ನು ಝಕೀರ ನದಾಫ ಮಾಡಿರುವರು. ಸ್ವಾತಂತ್ರ್ಯಾ ನಂತರ ಭಾರತ ದೇಶದ ಹಳ್ಳಿಗಳ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಕೆಳವರ್ಗದಲ್ಲಿ ಅಂತರ್ಜಾತಿ ವಿವಾಹವಾಗಿ ಹುಟ್ಟಿದ ಮಗು ಹೆಣೂ “ರತ್ನಾ” ಅವಳ ಮದುವೆಯೂ ಆಗಿ ಬೇರೊಬ್ಬನೊಡನೆ ಓಡಿ ಹೋಗಿ ನಂದೂರಿಗೆ ಬಂದು ನೆಲೆಯಾಗಿ ಊರವರ ಕೆಂಗೆಣ್ಣಿಗೆ ಗುರಿಯಾದವಳು. ಕ್ರಮೇಣ ಆ ಊರಿನ ಪ್ರಮುಖ ವಿಷಯಗಳನ್ನು ನಿರ್ಧರಿಸುವ ಹಂತಕ್ಕೆ ಬೆಳೆಯುತ್ತಾಳೆ. ಊರ ಗರತಿಯರ ಶೀಲಕ್ಕೆ ಸಂಚಕಾರ ಒದಗಿ ಬಂದಾಗ ತನ್ನ ಶೀಲವನ್ನೇ ಪಣಕ್ಕಿಟ್ಟು ಅವರ ಮಾನ ಕಾಪಾಡುವಲ್ಲಿ ನಾಟಕ ಕೊನೆಯಾಗುತ್ತದೆ.

ಇವೆಲ್ಲವುಗಳ ನಡುವೆ ರತ್ನ ತನ್ನ ಬದುಕನ್ನು ಕಟ್ಟಿಕೊಳ್ಳುವ ರೀತಿ ಎಲ್ಲರಿಗೂ ಮಾದರಿಯಾಗುತ್ತದೆ. ಜಾತಿಯ ಕಾರಣಗಳಿಂದಾಗುವ ಅವಮಾನಗಳು ಮೇಲ್ ವರ್ಗದವರ ದೌರ್ಜನ್ಯ ಹೆಣ್ಣುಮಕ್ಕಳ ಮೇಲಿನ ಶೋಷಣೆ ಹೀಗೆ ಹಳ್ಳಿ ಬದುಕಿನ ಎಲ್ಲ ಆಯಾಮಗಳು ಈ ನಾಟಕದಲ್ಲಿವೆ. ಈ ನಾಟಕದ ಅವಧಿ 100 ನಿಮಿಷಗಳು.

2-2-2020 ರಂದು ರಂಗಭೂಮಿ ಉಡುಪಿ ತಂಡದವರಿಂದ “ಕಾಮ್ಯ ಕಲಾ ಪ್ರತಿಮಾ (ವಿರಾಟಪರ್ವ ಕುಮಾರವ್ಯಾಸ ಭಾರತ ಹಾಗೂ ದಶಾನನ ಸ್ವಪ್ನಸಿದ್ದಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ) ಈ ನಾಟಕವನ್ನು ಗಣೇಶ ಮಂದಾರ್ತಿ ಉಡುಪಿ ನಿರ್ದೇಶನ ಮಾಡಿರುವರು. ಅಜ್ಞಾತವಾಸದಲ್ಲಿದ್ದ ಪಾಂಡವರು ವಿರಾಟಪುರಿಗೆ ಬಂದು ತಲೆ ಮರೆಸಿ ಬದುಕ ಕಳೆಯುವಾಗ ಸೈರೇಂದ್ರಿನಾಮಕ ದ್ರೌಪತಿ ಆ ರಾಜ್ಯದ ಕಾಮುಕ ಕೀಚಕನ ಕೈಲಿ ಎಷ್ಟೆಲ್ಲಾ ಕಷ್ಟಪಡುತ್ತಾಳೆ ಮತ್ತು ಅದನ್ನು ಎದುರಿಸುವ ಪರಿಯನ್ನು ಕಥೆ ಕಾಣಿಸುತ್ತದೆ. ಅಲ್ಲದೇ ನೋಡುಗರ ದೃಷ್ಟಿಯಲ್ಲಿ ಕೀಚಕ ಒಬ್ಬ ಮಹಾ ಕಾಮುಕನ ಪ್ರತಿಮೆ ಆತನಿಗೂ ಒಂದು ಒಳ ಮನಸ್ಸಿದ್ದರೆ ಆ ಮನಸ್ಸಿನ ತುಮುಲ ಹೇಗಿರಬಹುದೆಂಬ ಗುಮಾನಿ ಈ ನಾಟಕದಲ್ಲಿದೆ. ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಕಾವ್ಯ ಇದು ಈ ರಾಮಾಯಣ ಮಹಾಕಾವ್ಯದಲ್ಲಿ ಬರುವ ರಾನವಣ ಕೊನೆ ದಿನಗಳಲ್ಲಿನ ಅಂತ್ಯಸಂಸ್ಕಾರದ ಸಂಕಟದ ಕುರಿತು ಈ ನಾಟಕ ಮಾತಾಡುತ್ತದೆ. ಈ ಚಿತ್ರಣದಲ್ಲಿ ಪೂಜೆಗೆ ರಾವಣನ ಅಂತರ್ ದೃಷ್ಟಿಗೆ ತಾನು ಮತ್ತು ತನ್ನ ತಮ್ಮ ಕುಂಭಕರ್ಣ ಸೀತೆಗೆ ಅವಳಿ ಮಕ್ಕಳಾಗಿ ಹುಟ್ಟಿ ನಲಿಯುತ್ತಿದ್ದಂತೆ ಭಾಸವಾಗುತ್ತದೆ. ಸಾಯುವ ಕೊನೆ ಗಳಿಗೆಯಲ್ಲಿ ರಾವಣ. , ಸೀತೆಯ ಬಗೆಗೆ ಕಾಮದಿಂದ ಹೊರಬಂದು ಮಾತೃತ್ವ ಭಾವ ತಾಳುವ ಈ ಅಭುತಪೂರ್ವ ಕ್ಷಣ. ಕಾಮುಕ ಗಂಡು ಭಾವಕ್ಕೊಂದು ಉತ್ತರವಾಗಿ ಗೋಚರಿಸುತ್ತದೆ. ಕಾಮ ಶುದ್ಧ ಪ್ರೇಮವಾಗಿ ಅರಳಿ ನಿಲ್ಲುವ ಪರಿಕಲ್ಪನೆ ಈ ಕುವೆಂಪು ಕಾವ್ಯ ಪ್ರತಿಮೆ. ಈ ನಾಟಕದ ಅವಧಿ 110 ನಿಮಿಷಗಳು.
ಒಟ್ಟು 9 ನಾಟಕಗಳು ಈ ವರ್ಷ ಪ್ರದರ್ಶನಗೊಳ್ಳಲಿದ್ದು. ಇವರ ಈ ಆಮಂತ್ರಣ ಪತ್ರಿಕೆಯಲ್ಲಿ ನಾಟಕದ ಅವಧಿಯನ್ನೂ ಹಾಕಿದ್ದು ವಿಶೇಷ.

ನಾವೆಲ್ಲ ನಾಟಕಗಳನ್ನು ಥಿಯೇಟರ್ ಅಥವ ಟೆಂಟ್ಗಳಲ್ಲಿ ನಾಟಕ ನೋಡುವುದು ಸಾಮಾನ್ಯ ಸಂಗತಿ. ಆದರೆ ಸವದತ್ತಿಯ ರಂಗಾಸಕ್ತರು ಐತಿಹಾಸಿಕ ಕೋಟೆಯ ಒಳಗಿನ ಆವರಣವನ್ನು ತಮ್ಮ ರಂಗ ಚಟುವಟಿಕೆಗಳಿಗೆ ಪ್ರತಿ ವರ್ಷಕ್ಕೊಂದು ಸಲ ಬಳಕೆ ಮಾಡಿಕೊಂಡು ಕೋಟೆಯ ಚಾರಿತ್ರಿಕ ಹಿನ್ನಲೆಯನ್ನು ಕೂಡ ಜನ ಗಮನಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಅದು ಕೂಡ ಕಳೆದ 23 ವರ್ಷದಿಂದ ಈ ಪ್ರಕ್ರಿಯೆ ಜರುಗುತ್ತ ಬಂದಿದ್ದು ದಾಖಲಾರ್ಹ ಸಂಗತಿ.

ಸವದತ್ತಿಯ ರಂಗಾಸಕ್ತ ಮಿತ್ರರೆಲ್ಲ ವೃತ್ತಿರಂಗಭೂಮಿ ಶೈಲಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ಬದಲಾವಣೆ ಬಯಸಿ ಹವ್ಯಾಸಿ ನಾಟಕಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿ, 1997 ರಲ್ಲಿ ಹುಟ್ಟುಹಾಕಿದ ರಂಗಸಂಸ್ಥೆಯೇ ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ. ಝಕೀರ್ ನದಾಪ್ ರ ಈ ಸಂಘಟನೆಯಲ್ಲಿ ಇದ್ದವರಾರೂ ವೃತ್ತಿ ರಂಗಭೂಮಿಯಿಂದ ಬಂದವರಲ್ಲ. ಹವ್ಯಾಸಿ ಕಲಾವಿದರು. ಒಬ್ಬೊಬ್ಬರದು ಒಂದೊಂದು ವೃತ್ತಿ ಈ ತಂಡದಲ್ಲಿ ಉಪನ್ಯಾಸಕರಿದ್ದಾರೆ, ಶಿಕ್ಷಕರಿದ್ದಾರೆ, ಪರ್ತಕರ್ತರಿದ್ದಾರೆ. ವ್ಯಾಪಾರಿಗಳಿದ್ದಾರೆ. ವಿದ್ಯಾರ್ಥಿಗಳಿದ್ದಾರೆ ಹೀಗೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವರ್ಷಕ್ಕೊಮ್ಮೆ ಕೋಟೆಯ ಆವರಣದಲ್ಲಿ ರಂಗ ಆರಾದನಾ ಸಂಸ್ಥೆಯ ಮೂಲಕ ನಾಟಕಗಳನ್ನು ಮಾಡುತ್ತ ತಮ್ಮ ಹವ್ಯಾಸಕ್ಕೊಂದು ಇಂಬು ಕೊಡುತ್ತಿರುವರು.

ಇವರೆಲ್ಲರೂ ಸೇರಿ 1997 ರಲ್ಲಿ ರಂಗತಜ್ಞ ವಿನೋದ ಅಂಬೇಕರ ನಿರ್ದೇಶನದಲ್ಲಿ ಒಂದು ತಿಂಗಳ “ರಂಗ ತರಬೇತಿ ಶಿಬಿರ” ನಡೆಸಿ, “ಮೃಚ್ಛಕಟಿಕ” ನಾಟಕದ ಎರಡು ಪ್ರದರ್ಶನವನ್ನು ಇಲ್ಲಿ ನೀಡಿದರು. ಅದು ಜನರ ಗಮನ ಸೆಳೆಯಿತಲ್ಲದೇ ಅವರಿಂದ ಮತ್ತೆ ಮುಂದಿನ ವರ್ಷ ನಾಟಕ ಪ್ರದರ್ಶನ ನೀಡುವಂತೆ ಪ್ರೋತ್ಸಾಹ ಕೂಡ ದೊರೆಯಿತು. ಅದರ ಫಲವಾಗಿ 1998 ರಲ್ಲಿ ಮತ್ತೆ ಅದೇ ನಿರ್ದೇಶಕರಿಂದ “ಉದ್ಭವ” ನಾಟಕದ ಎರಡು ಪ್ರದರ್ಶನ ನೀಡಲಾಯಿತು. ಇದು ಕೂಡ ರಂಗಾಸಕ್ತರ ಗಮನ ಸೆಳೆಯಿತು.

1999 ರಲ್ಲಿ ವಿಭಿನ್ನ ರೀತಿಯಲ್ಲಿ ಸವದತ್ತಿಯ ಕೋಟೆಯ ಆವರಣವನ್ನೇ ರಂಗಸಜ್ಜಿಕೆ ಯನ್ನಾಗಿ ಪರಿವರ್ತಿಸಿ, ದೆಹಲಿ ನಾಟಕ ಶಾಲೆಯ ಪದವೀಧರ ದಿ. ಜಯತೀರ್ಥ ಜೋóಶಿಯವರ ನಿರ್ದೇಶನದಲ್ಲಿ “ಗುಲಾಮನ ಸ್ವಾತಂತ್ರ್ಯಯಾತ್ರೆ” ಎನ್ನುವ ನಾಟಕವನ್ನು ಪ್ರದರ್ಶಿಸಿದಾಗ, ನಾಡಿನ ಬಹುತೇಕ ರಂಗಾಸಕ್ತರು ಹಾಗೂ ರಂಗಕರ್ಮಿಗಳು ಬಂದು ನಾಟಕವನ್ನು ವೀಕ್ಷಣೆ ಮಾಡಿದ್ದು ಈ ತಂಡದ ಹೆಮ್ಮೆಯ ಸಂಗತಿ. ಮತ್ತು ಆ ನಾಟಕ 11 ಪ್ರದರ್ಶನಗಳನ್ನು ಕಂಡು, ಕಲಬುರಗಿಯ ದೂರದರ್ಶನ ಕೇಂದ್ರದಿಂದ ಪ್ರಸಾರಗೊಂಡಿತು.

2000ನೇ ಇಸ್ವಿಯಲ್ಲಿ “ಪರಸಗಡ ನಾಟಕೋತ್ಸವ” ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರಾರಂಭಿಸಿ ಬೇರೆ ಬೇರೆ ನಾಟಕಗಳ ಪ್ರದರ್ಶನಗಳನ್ನು ಕೋಟೆಯ ಆವರಣದಲ್ಲಿ ಆಯೋಜಿಸಲಾಯಿತು. ಇದರಲ್ಲಿ ಧಾರವಾಡ, ಬೆಳಗಾವಿ, ಗದಗದ ಹವ್ಯಾಸಿ ಕಲಾ ತಂಡಗಳು ಭಾಗವಹಿಸಿದವು. ಹಾಗೂ ಹೆಗ್ಗೋಡಿನ ನೀನಾಸಂ, ಸಾಣೆ ಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ ಕಲಾಲೋಕ ತಂಡಗಳು ಕೂಡ ಇವರ ಕರೆಗೆ ಓಗೊಟ್ಟು ಇಲ್ಲಿನ ರಂಗಪ್ರೇಮಿಗಳಿಗೆ ತಮ್ಮ ಪ್ರಯೋಗಾತ್ಮಕ ನಾಟಕದ ಸವಿಯನ್ನು ಉಣಬಡಿಸಿದವು. ಇದರ ಪ್ರತಿಫಲ ಕಳೆದ 23 ವರ್ಷಗಳಿಂದ ಸಂಸ್ಥೆ ತನ್ನ ರಂಗಸೇವಾ ಕಾಯಕವನ್ನು ಮುಂದುವರೆಸಿದೆ.

ಪ್ರತಿ ವರ್ಷ ಹೊಸ ನಾಟಕ ತಯಾರಿಸುವ ಸಂಸ್ಥೆ ಇಲ್ಲಿಯ ವರೆಗೆ 21 ಬೇರೆ ಬೇರೆ ನಾಟಕಗಳ 45ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಸವದತ್ತಿ ಹಾಗೂ ಬೇರೆ ಊರುಗಳಲ್ಲಿ ನೀಡಿದೆ. ಹಾಗೂ ಹೊರಗಿನ ತಂಡಗಳ 100ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನವನ್ನು ಸವದತ್ತಿಯಲ್ಲಿ ಆಯೋಜಿಸಿದೆ.

ತಂಡ ಇದುವರೆಗೂ ಅಭಿನಯಿಸಿದ ನಾಟಕಗಳು: ಮೃಚ್ಛಕಟಿಕ, 1998. ಉದ್ಭವ, 1999. ಗುಲಾಮನ ಸ್ವಾತಂತ್ರ್ಯ ಯಾತ್ರೆ, 2000. ಮಿಂಚು, 2001. ಮೆಟ್ಟಲೇರುವ ಗಡಿಬಿಡಿಯಲ್ಲಿ ಕೊಡೆ ಮರೆತವರು, 2002. ಪ್ರತಿಶೋಧ, 2003. ದಾರಿಯಾವುದಯ್ಯಾ ವೈಕುಂಠಕೆ, 2004. ಹಸಿರೆಲೆ ಹಣ್ಣೆಲೆ, 2005. ಚೋರ ಚರಣದಾಸ, 2007. ಹಸ್ತಾಂತರ, 2009. ಬಿಳುಪಿನ ಹೆಣ, 2010. ತ್ಯಾಗವೀರ ಶಿರಸಂಗಿ ಲಿಂಗರಾಜರು, 2011. ತೇರು, 2013. ಗಾಂಧಿಯ ಅಂತಿಮ ದಿನಗಳು, 2014. ಕಲ್ಲೂರ ವಾಡೆದಾಗ, ಮತ್ತು ಮಣ್ಣು, 2015. ಶಿವರಾತ್ರಿ, ಮತ್ತು ಕದಡಿದ ನೀರು 2016. ಲವ್ ಇನ್ ಚಿತ್ರದುರ್ಗ ಮತ್ತು ಬೀರವ್ವನ ಬಾಳೆಹಣ್ಣು 2017. ಗುಲಾಮನ ಸ್ವಾತಂತ್ರ್ಯ ಯಾತ್ರೆ ಮತ್ತು ಲವ್ ಇನ್ ಚಿತ್ರದುರ್ಗ 2018. ರುದ್ರಸರ್ಜನ ಪ್ರೇಮ ಪ್ರಸಂಗ 2019. ಜಾಳಪೋಳ ಮತ್ತು ಸುಡುಗಾಡ ಸಿದ್ದನ ಪ್ರಸಂಗ 2020 ರಲ್ಲಿ ಮಹಮೂದ ಗಾವಾನ ಮತ್ತು ಕಾತ್ರಾಳ ರತ್ನಿ ಚಾದಂಗಡಿ.

ಅಂದಹಾಗೆ ಇದೇ ಜನೇವರಿ 25 ರಿಂದ ಪೆಬ್ರುವರಿ 2 ರ ವರೆಗೆ ಪರಸಗಡ ನಾಟಕೋತ್ಸವವನ್ನು ಆಯೋಜಿಸಿದ್ದು 25-1-2020 ರಂದು ರಂಗ ಆರಾಧನಾ ಸಂಘಟನೆಯವರಿಂದ “ಮಹಮೂದ ಗಾವಾನ” 26-1`-2020 ರಂದು ರಂಗ ಆರಾಧನಾ ಸಂಘಟನೆಯವರಿಂದ “ನಾ ಸತ್ತಿಲ್ಲ. ” ಮತ್ತು ಟೂರಿಂಗ್ ಟಾಕೀಜ್ ಧಾರವಾಡ ಇವರಿಂದ “ಹುಚ್ಚರ ಸಂತೆ. ” 27-1-2020 ರಂದು ರಂಗ ಸಂಪದ ಬೆಳಗಾವಿ ತಂಡದವರಿಂದ “ಯು ಟರ್ನ. ” 28-1-2020 ರಂದ ರಂಗಾಯಣ ಮೈಸೂರು ಇವರಿಂದ “ರೆಕ್ಸ ಅವರ್ಸ” 29-1-2020 ರಂದು ರಂಗಾಯಣ ಮೈಸೂರು ಇವರಿಂದ “ಆರ್ಕೇಡಿಯಾದಲ್ಲಿ ಪಕ್” 30-1-2020 ರಂದು ಮೈಸೂರು ರಂಗಾಯಣ ತಂಡದವರಿಂದ “ಬೆಂದಕಾಳು ಆನ್ ಟೋಸ್ಟ. ” 31-1-2020 ರಂದು ರಂಗ ಆರಾಧನಾ ಸಂಘಟನೆ ಸವದತ್ತಿ ಇವರಿಂದ “ಚಾಳಪೋಳ”. ಪೆಬ್ರುವರಿ 1 ರಂದು ರಂಗ ಆರಾಧನಾ ಸಂಘಟನೆಯವರಿಂದ “ಕಾತ್ರಾಳ ರತ್ನಿ ಚಾದಂಗಡಿ. ” 2-2-2020 ರಂದು ರಂಗಭೂಮಿ ಉಡುಪಿ ತಂಡದವರಿಂದ “ಕಾಮ್ಯ ಕಲಾ ಪ್ರತಿಮಾ” ನಾಟಕಗಳು ಪ್ರದರ್ಶನಗೊಳ್ಳಲಿದ್ದು. ಪ್ರತಿಯೊಂದು ನಾಟಕಗಳು ವೈಶಿಷ್ಟ್ಯತೆಯಿಂದ ಕೂಡಿದ್ದು ಇವರ ರಂಗ ಚಟುವಟಿಕೆಗಳು ಸದಾ ನಿರಂತರವಾಗಿ ಹೊರಹೊಮ್ಮುವಂತಾಗಲಿ.

ಅಂದಹಾಗೆ ಈ ಎಲ್ಲ ನಾಟಕಗಳ ರಚನೆ. ನಿರ್ದೇಶನ. ಕತೆಯ ವಿಶೇಷತೆ, ರಂಗ ಆರಾಧನಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದವರನ್ನೆಲ್ಲ ನೆನೆಯುವ ವಿವರಣೆ ಇತ್ಯಾದಿ ಒಳಗೊಂಡ ಕಿರು ಪುಸ್ತಕವನ್ನು ಕೂಡ ಪ್ರಕಟಿಸುವ ಮೂಲಕ ಹೊಸತನವನ್ನು ಮರೆದಿರುವರು.

ಹೊಸ ರೀತಿಯ ಪ್ರಯೋಗಾತ್ಮಕ ಜೊತೆಗೆ ಸ್ಥಳೀಯ ಲೇಖಕರ ಕಥೆಗಳನ್ನು ಕೂಡ ನಾಟಕಗಳನ್ನಾಗಿಸಿ ಅದಕ್ಕೊಂದು ಸ್ವರೂಪ ನೀಡುತ್ತಿರುವ “ರಂಗ ಆರಾಧನಾ ಸಂಸ್ಥೆ”ಯು ಇನ್ನೂ ಉತ್ತರೋತ್ತರವಾಗೆ ಬೆಳೆಯಬೇಕು ಇದಕ್ಕೆ ಸ್ಥಳೀಯ ಸಂಸ್ಥೆಗಳು ರಂಗಾಸಕ್ತರೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಲಿ. ಇಂದು ಅಳಿಯುತ್ತಿರುವ ರಂಗ ಚಟುವಟಿಕೆಗಳು ನಿರಂತರವಾಗಿ ಇಂತಹ ಪ್ರತಿಭೆಗಳ ಮೂಲಕ ರಂಗ ಕಲೆಯನ್ನು ಉಳಿಸುವಂತಾಗಬೇಕು.

ವೈ. ಬಿ. ಕಡಕೋಳ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x