ಪರಶುವಿನ ದೇವರು (ಕೊನೆ ಭಾಗ): ಶಾಂತಿ ಕೆ. ಅಪ್ಪಣ್ಣ

ಇಲ್ಲಿಯವರೆಗೆ…

"ಅವ್ವ, ಚಡ್ಡಿ ಹಾಕ್ಕೊಡು" ಮಗು ಕೈ ಜಗ್ಗಿದಾಗ ಅದರ ಬೆನ್ನಿಗೆ ಗುದ್ದಿದಳು ಸುಜಾತ. "ಏ ಮುಂಡೇದೇ,  ಎಷ್ಟು ಸಲ ಹೇಳಿಲ್ಲ, ಮಮ್ಮಿ ಅನ್ಬೇಕು ಅಂತ, ಇನ್ನೊಂದ್ಸಲ ಅವ್ವ ಪವ್ವ ಅಂದ್ರೇ ಹೂತಾಕ್ಬುಟ್ಟೇನು" ಮಾತೇನೋ ಆಡಿ ಮುಗಿಸಿದಳು. . ಆದರೆ ಅವಳಿಗೆ ತನ್ನದೇ ವರಸೆಯ ಬಗೆ ನಾಚಿಕೆಯೆನಿಸಿತು. ಅಪರೂಪಕ್ಕೂ ಅವಳಲ್ಲಿ ಇಂಥ ಬಯ್ಗುಳಗಳು ಹೊರಬಿದ್ದದ್ದಿಲ್ಲ ಆದರೆ ಇಲ್ಲಿಗೆ ಬಂದ ಮೇಲೆ ತನಗೆ ಇವೆಲ್ಲ ಸಲೀಸಾಗಿ ಬರುತ್ತಿದೆ. ಏಟು ತಂದು ಮಗು ಅಳುವುದಕ್ಕೂ ಕೆಳಗಿನಿಂದ ಪಾಪಯ್ಯನ ಹೆಂಡತಿ ಅವಳನ್ನು ಕೂಗಿ ಕರೆಯುವುದಕ್ಕೂ ಸರಿ ಹೋಗಿತ್ತು. "ಏ ಬೆಂಗ್ಳೂರೋಳೇ" ಅವಳ ದನಿ ಕಾಫಿ ತೋಟದ ಮೇಲೆ ಹಾದು, ಗುಡ್ಡ ಹತ್ತಿ ಕಾಳಿಯ ಮನೆಯಂಗಳದಲ್ಲಿ ಇಳಿದಿತ್ತು. ಅವಳ ದನಿಯಲ್ಲಿದ್ದ ಆವೇಗದಲ್ಲೇ ಅಲ್ಲೇನೋ ನಡೆದಿದೆಯೆಂಬುದು ಸುಜಾತಳಿಗೆ ಮನವರಿಕೆಯಾಗಿತ್ತು. ಅಂದುಕೊಂಡಂತೆಯೇ ಪರಶು ವಾಲಗಕ್ಕೆ ತಯಾರಾಗುತ್ತಿದ್ದವರ ಡೋಲು ಮೋರಿಯನ್ನೆಲ್ಲ ಎತ್ತಿ ಬಿಸಾಕಿದ್ದ. "ಯೇ, ನನ್ನ ಮಕ್ಕಳೇ, ಇನ್ನೂ ಯಾಕ್ರಲಾ ಕೊಡಗರಿಗೆ ವಾಲಗಕ್ಕೋಯ್ತೀರ?, ಮೊದೂಲೋಗಿ, ಕಡೀಗ್ ಉಂಡು, ಉಳಿಕೆ ಪಳಿಕೆ ಕಟ್ಕೊಂಡು ಬತ್ತೀರಲ್ಲ, ನಾಚ್ಕೆ ಆಕ್ಕಿಲ್ವೇನ್ರುಲಾ? ಇದೆಲ್ಲ ಒಂದು ಬೊದ್ಕಾ, ಇನ್ಮ್ಯಾಕೆ ಯಾರೂ ವಾಲಗಕ್ಕೆ ವೋಗ್ಬೇಡಿ" ದೇವರ ಅವತಾರಕ್ಕೆ ಅಲ್ಲಿದ್ದವರು ಕಂಗಾಲಾಗಿದ್ದರು. ಅವನ ಕೈಯಲ್ಲಿ ಪಾಪಯ್ಯನ ಜುಟ್ಟಿತ್ತು. " ಯೇಯ್ ನಿನ್ ಹೆಂಡ್ತೀ ಸಂಗಬುಟ್ಟು ಕೇರಿ ಹೆಂಗಸರ ಕಡೆ ಕಣ್ಣ್ ಹಾಕುದ್ರೆ ನಿನ್ ಕಣ್ ಬೆಂಕಿಗೆ ಹಾಕ್ತೀನಿ, ನೀನೂ ಅಷ್ಟೇ ಕಣ್  ಬೋಜಿ, ಗೋಡ್ರು ತೋಟುಕ್ಕೆ ಗೇಯ್ಮೆ ಮಾಡೋಕಷ್ಟೇ ವೋಗ್ಬೇಕು, ಎಲ್ಲ ನಾ ನೋಡ್ತಿವ್ನಿ " ಅನ್ನುತ್ತ ನಿಂತಿತ್ತು. ಇಲ್ಲೂ ಶುರುವಾದ ಈ ಹೊಸ ವರಾತ ಸುಜಾತಳಿಗೆ ಏನು ಮಾಡುವುದೆಂದೇ ಇಳಿಯಲಿಲ್ಲ. ತಂತಮ್ಮ ಬುಡಕ್ಕೆ ಬರುತ್ತಿರುವ ದೇವರ ಆಟಕ್ಕೆ ಹೆದರಿ ಒಬ್ಬೊಬ್ಬರಾಗಿ ಕಣ್ಣೆದುರಿಂದ ಮರೆಯಾಗಿ ನಿಲ್ಲುವ ಪ್ರಯತ್ನ ಮಾಡತೊಡಗಿದರು. ಮುಂದೆ ದೇವರು ಖುದ್ದು ಸುಜಾತಳ ಕಡೆಗೆ ತಿರುಗಿತು. " ನೀನೇನು ಅಂತ ಗೊತ್ತು ಬಿಡಮ್ಮಿ, " ದೇವರೀಗ ಸುಜಾತಳನ್ನು ಹೊಡೆಯಲು ಮುಂದೆ ಬಂದಿತ್ತು. ಮೊದಲೇ ಅವಳಿಗೆ ಈ ಎಲ್ಲ ಆಟವನ್ನೂ ನೋಡಿ ಸಾಕು ಸಾಕಾಗಿತ್ತು. ಅವನನ್ನು ಅಲ್ಲಿಂದ ಹೊರಡಿಸಿಕೊಂಡು ಬರುವ ಪ್ರಯತ್ನವನ್ನು ಮಂಕಾಳಿಯ ತಲೆಗೆ  ಬಿಟ್ಟು ಸುಜಾತ ಕಾಫೀ ತೊಟದೊಳಗೆ ಕಳೆದು ಹೋದಳು. ಅದಿನ್ನೂ ಮುಂಗಾರಿನ ಮೊದಲ ಮಳೆ ಹೊಡೆದು ನೆಲ ಹದವಾಗಿತ್ತು. . ಕಾಫೀ ಗಿಡಗಳು ಬೆಳ್ಳನೆಯ ಹೂಗಳನ್ನು ತುಂಬಿಕೊಂಡು ಮಧುರವಾಗಿ ಪರಿಮಳಿಸುತ್ತಿದ್ದವು. ಅದಕ್ಕೆ ಮುತ್ತುತ್ತಿದ್ದ ಹೂದುಂಬಿಗಳ ಹಿಂಡು ಸಂಜೆಯ ಕೆಲಸ ಮುಗಿಸಿ ಅವಸರವಸರವಾಗಿ ಹೊರಡುವ ತರಾತುರಿಯಲ್ಲಿದ್ದಂತೆ ಕಾಣುತ್ತಿದ್ದವು. ತನಗೆ ಇದೆಲ್ಲ ಯಾವತ್ತಿಗೂ ಇಷ್ಟವೇ. . ಎಂದಿಗಾದರೊಮ್ಮೆ ಬದುಕಿನಲ್ಲಿ ತಾನೂ ಎಕರೆಗಟ್ಟಲೆ ಕಾಫೀ, ಏಲಕ್ಕಿ ತೋಟದ ಒಡತಿಯಾಗಿ ಬಂಗಲೆಯಂಥ ಮನೆಯಲ್ಲಿ ವಾಸಿಸಬೇಕೆಂಬುದು ತಾನು ಯಾವಾಗಲೂ ಕಾಣುವ ಕನಸು. ಇದೆಲ್ಲ ಅತಿರೇಕದ ಕನಸುಗಳೇನೋ ಅಂತ ಅವಳಿಗೆ ಒಮ್ಮೊಮ್ಮೆ ಅನಿಸುವುದು. . ಆದರೆ ಕನಸು ಕಾಣಲ್ಯಾವ ಅಡ್ಡಿ. . ಅಂತ ತನ್ನನ್ನೇ ಸಮಾಧಾನಿಸಿಕೊಳ್ಳುವಳು. ತನ್ನ ಬಿಡುವಿನಲ್ಲಿ ಮೊಳೆವ ಈ ಕನಸಿನಲ್ಲಿ ತಾನು ಒಡತಿಯಾಗಿ ನಡೆಯುತ್ತಿದ್ದರೆ ಅಂಗಳದಲ್ಲಿ ಅನೇಕ ಆಳು ಕಾಳುಗಳು ಕೆಲಸ ಮಾಡುತ್ತಿರುತ್ತಿದ್ದರು. . ಅದು ಹಾಗೇ ಮುಂದುವರಿದು ದಿಟ್ಟಿಸಿ ನೋಡುವಾಗ ತಮ್ಮ ಕೇರಿಯವರಂತೇ ಕಂಡು, ಕಡೆಗೆ ತನ್ನ ಅಪ್ಪ ಅಮ್ಮ ಅಣ್ಣನಂತೇ ಕಾಣತೊಡಗಿ ತಾನು ತಲೆಕೊಡವಿ  ಆ ಕನಸನ್ನು ಕರಗಿಸುತ್ತಿದ್ದಳು. ಅಷ್ಟಕ್ಕೇ ಬಿಡದೆ  ಹೊಸ ಹುಮ್ಮಸ್ಸಿನಲ್ಲಿ, ತನ್ನೂರಿನ ಅಷ್ಟೂ ಶ್ರೀಮಂತರನ್ನ ಕನಸಿನಲ್ಲಿ ಕೆಲಸ ಮಾಡಿಸಿ ದಣಿಯುತ್ತಿದ್ದಳು. ಇದು ಯಾಕಾಗ ಬಾರದು? ಹೀಗೇ ಆಗಬೇಕು. . ನಾವೇ ಸಾಯುತ್ತಿರಬೇಕಾ. . ಅದಕೆ ಪೂರಕವೆಂಬಬಂತೆ ಇತ್ತೀಚೆಗೆ ಪರಶು ಮಾದಾಪುರದಲ್ಲಿ ಒಂದು ಎಕರೆಯಷ್ಟು ಕಾಫೀ ತೋಟ ಕೊಳ್ಳುವ ಮಾತಾಡುತ್ತಿದ್ದ. . ಅದು ಯಾಕಿರಬಹುದು ? ಬಹುಃಶ ದೇವು ಸಾವ್ಕಾರನ ಹೆಂಡತಿ ಇಂಥದ್ದೊಂದು ಆಸೆಯನ್ನ ಅವಳೊಳಗೆ ತುಂಬಿದ್ದರೂ ತುಂಬಿದ್ದಳೇ. ಅಷ್ಟಿಲ್ಲವಾದರೆ. . ಇಷ್ಟೂ ವರ್ಷಗಳಲ್ಲಿ ಇಲ್ಲದ ಈ ಹೊಸ ಆಸೆ ಅವನಲ್ಲಿ ಹೇಗೆ ಮೊಳೆತಿರಬೇಕು. ತಾನಾದರೂ ಆಗ ಅವನಲ್ಲಿ ಏನೂ ಕೇಳಲೇ ಇಲ್ಲ. . ಸುಮ್ಮನೆ ಕನಸುಗಳ ಸಾಕುತ್ತ ಹೋಗಿದ್ದೆ. ಹತ್ತಿರದ ಮನೆಯವರಿಗೆ ಕೂಡ ಹೇಳಿಕೊಂಡಿದ್ದಳು. . ನಾವು ಊರಲ್ಲಿ ಕಾಫೀ ತೋಟ ಮಾಡ್ತಾ ಇದೀವಿ. . ಇವತ್ತಿಗೆ ಏನಿಲ್ಲವೆಂದರೂ ಆ ಸುಳ್ಳು ಒದಗಿಬಂದಿದೆ. ಬೆಂಗಳೂರಿನಿಂದ ಹಾಗೆ ಅನಾಮತ್ತಾಗಿ ಹೊರಟು ಬರುವಾಗ ತಾನು ಇದೇ ಸುಳ್ಳನ್ನು ಹೇಳೀ ಬಂದಿದ್ದೆ. ಯಾರೆಷ್ಟು ನಂಬಿದರೋ. . . . ಸುಜಾತ ಮತ್ತೆ ಎಲ್ಲವನ್ನೂ ನೆನಪಿಸುತ್ತ ನಿಟ್ಟುಸಿರಾದಳು. 

 ಹತ್ತು ಹನ್ನೆರಡು ವಯಸ್ಸಿಗೆಲ್ಲ ಪರಶು ಬೆಂಗಳೂರು ಸೇರಿದ್ದ, ಅದಿನ್ನೂ ಹೊಸತಾಗಿ ಮದುವೆಯಾಗಿದ್ದ ಗಂಡ ಹೆಂಡತಿ ಜೊತೆಗೆ ಅವನ ಪ್ರೆಸ್ ಕೆಲಸಕ್ಕೆ ಕೈ ಕೆಲಸಕ್ಕೆ ಸಣ್ಣದೊಂದು  ಹುಡುಗ. ಅವನನ್ನ ಓದು ಅಂತ ಯಾರೂ ಹೇಳಲಿಲ್ಲ, ಅವನೂ ಕೇಳಲಿಲ್ಲ, ಪ್ರೆಸ್ಸಿನಲ್ಲಿ ಕಸ ಹೊಡೆಯುವುದು, ಮಾರ್ಕೆಟ್ ಹೋಗುವುದು. ದೇವು ಸಾವ್ಕಾರ ಹೊರಗೆಲ್ಲಾದರೂ ಹೋದರೆ ಒಡತಿಯೊಂದಿಗೆ ಕಾವಲಿಗೆಂಬಂತೆ ಜೊತೆಗಿರುವುದು, ಐರನ್ ಮಾಡುವುದು, ಸೊಪ್ಪು ತರಕಾರಿ ಬಿಡಿಸಿಕೊಡುವುದು, ನಾಯಿ ಮೀಸುವುದು ಅದಕ್ಕೆ ಊಟ ಹಾಕುವುದು ಇಂಥವೇ ಕೆಲಸಗಳು. ರಾತ್ರಿ ಪ್ರೆಸ್ಸಿನಲ್ಲೆ ಮಲಗುತ್ತಿದ್ದ. ಅವನಿಗೆ ಯಾವತ್ತಿಗೂ ಅಮ್ಮನನ್ನ  ನೋಡಬೇಕು ಅನಿಸಿರಲಿಲ್ಲ, ಊರು ಜನ ಯಾವುದೂ ನೆನಪಾಗಿರಲಿಲ್ಲ. ಬದುಕೆಂದರೆ ದೇವು ಸಾವ್ಕರ ಅವನ ಮನೆ ಅಷ್ಟೇ ಆಗಿತ್ತು. ದೇವು ಸಾವ್ಕಲಾರ ಆಂಥೋರಿಯಮ್ ಹೂವಿನ ಎಕ್ಸ್ಪೋರ್ಟ್ ಬ್ಯುಸಿನೆಸ್ಗೆ ಇಳಿಯದೇ ಹೋಗಿದ್ದರೆ ಇಷ್ಟಾಗುತ್ತಿತ್ತಾ ಬಹುಃಶ ಇಲ್ಲವೇನೋ. ಆಗ್ಗಾಗೆ ಕೊಡಗಿಗೆ ಹೋಗಿ ಅಲ್ಲೇ ತನ್ನ ಬ್ಯುಸಿನೆಸ್ ನೋಡಿಕೊಂಡು ತಾನು ಅಲ್ಲೇ ಉಳಿಯುವಾಗ ಇದ್ದ ಒಬ್ಬಳೇ ಮಗಳನ್ನು ಎದೆಗವಚಿಕೊಂಡು ಬೆಂಗಳೂರಿನಂಥ ಊರಲ್ಲಿ ಇರುವುದು ಅಷ್ಟು ಸೇಫಲ್ಲ ಅನ್ನುವುದು ದೇವಯ್ಯನ ಅಭಿಪ್ರಾಯವಾಗಿತ್ತು. ಅಂಥ ಸಮಯದಲ್ಲಿ ಪರಶು ಮನೆಗೆ ಬಂದು ಮಲಗುತ್ತಿದ್ದ. ಮನೆ ಮಗನಂತೆ ಎಂದು ಭಾವಿಸಿದ್ದ ಹುಡುಗನ್ನು ತನ್ನದೇ ಒಳಕೋಣೆಯಲ್ಲಿ! ಕನಸಲ್ಲಿ ಕೂಡ ಕಲ್ಪಿಸದ ತಪ್ಪಿಗೆ ಇಂದು ದೇವು ಸಾವ್ಕಾರ ಹುಚ್ಚನಂಥಾಗಿದ್ದ. "ಇವತ್ತು ನಿನಗೆ ಬರ್ತಾನೆ, ನಾಳೆ ಮಗಳಿಗೂ ಬರ್ತಾನೆ, ನಾನಿಲ್ಲವೇನೆ ? ಬೀಟಿ ಮರದ ಹಾಗೆ ಇದ್ದೇನೆ. . ನನಗಿಂತ ಅವನಲ್ಲಿ ಅದೇನು ಕಂಡೆ ಸೂಳೆ ನೀನು?"ಅನ್ನುವಷ್ಟರಲ್ಲಿ ದೇವಯ್ಯನ ಉಸಿರು ಮೇಲಕ್ಕೆ ಬಂದು ಸೋಫಾದಲ್ಲಿ ಕುಕ್ಕರಿಸಿದ. 
ಕೂಗಾಡುವುದರಲ್ಲಿ ಯಾವ ಅರ್ಥವೂ ಇರಲಿಲ್ಲ, ತನಗೆ ಆಗಲೋ ಈಗಲೋ ಅಂತ ಅಲ್ಲಾಡುತ್ತಿದ್ದ ಪ್ರೆಸ್ ಬಿಟ್ಟರೆ ಇದ್ದದ್ದೇ ಅವಳ ಅಪಾರ ಆಸ್ತಿ, ಅಷ್ಟೂ ಆಸ್ತಿಯನ್ನ ಅವನೇ ಮಾಡುತ್ತಿದ್ದ, ಕಳೆದ ವರ್ಷವಷ್ಟೇ ಕೊಡಗಿನ ಪೇಪರಿನಲ್ಲಿ ಇವನ ಯಶಸ್ವೀ ಉದ್ಯಮದ ಬಗೆ ಸವಿಸ್ತಾರ ವರದಿ ಬಂದಿತ್ತು, ಕೊಡವ ಸಂಘದವರು ಕರೆಸಿ ಸನಾನಿಸಿದ್ದರು, ಊರಿನಲ್ಲಿ ವಿಶೇಷ ಮರ್ಯಾದಿಯಿತ್ತು. ಈಗ ಗುಲ್ಲು ಮಾಡಿದರೆ ನಷ್ಟ ತನಗೇ. . !ತಾನಾದರೂ ಊರಿಗೆ ಹೋದಾಗ ಸುಮ್ಮನಿದ್ದೆ ಅನ್ನಲಾಗದು, ತೋಟಕ್ಕೆ ಬಂದವರಿರಲಿ, ಸುತ್ತಲಿದ್ದ ಒಬ್ಬ ಯರವತಿಯನ್ನೂ ಬಿಟ್ಟಿರಲಿಲ್ಲ. ಅದು ಆ ನಿಮಿಷಕ್ಕೆ ದೇಹಕ್ಕೆ ಅಗತ್ಯವೆಂದು ತೋರಿದ ಹಸಿವು, ಅಥವಾ ಅನಾಯಾಸವಾಗಿ ಸಿಕ್ಕ ಊಟ. ಅದರಾಚೆಗೆ ಅಲ್ಲಿ ಏನೊಂದೂ ಇರಲಿಲ್ಲ. ಪ್ರೀತಿಯೆಂದರೆ ಏನೆಂದು ತಾನು ಯೋಚಿಸಬೇಕಾಗಿದೆ. ಅದು ಬಹುಃಶ ತನ್ನಲ್ಲಿ ಅದು ಯಾವತ್ತಿಗೂ ಇರಲಿಲ್ಲ. ಹೇಗೋ ಮದುವೆಯಾಯ್ತ, ದೇಹಗಳು ಮಾತಾಡಿಕೊಂಡ ಘಳಿಗೆಯಲ್ಲಿ ಮಗುವೂ ಆಯ್ತ. ಬದುಕು ನೆಲೆನಿಂತ ಘಳಿಗೆಯದು, ದಾರಿಗೊಂದು ಗುರಿ ಸಿಕ್ಕ ಹುರುಪು, ಬೆನ್ನಿಗ್ಯಾರೋ ಇದ್ದಾರೆಂಬ ಭರವಸೆ, ದುಡಿಮೆ, ಹಣ ಹೆಸರು. . ಬದುಕು ಇದರ ಹಿಂದೆ ಓಡುತ್ತಿರುವಾಗ ಪ್ರೀತಿಯ ಕುರಿತಾದ ಯೋಚನೆ ಹೊಳೆದಿರಲೇ ಇಲ್ಲ. . , ಬೆಳಗೆ ಹೆಂಡತಿ ತರುವ ಕಾಫಿಯಷ್ಟೇ ಯಾಂತ್ರಿಕತೆ ರಾತ್ರಿ ಹಾಸಿಗೆ ಹಂಚಿಕೊಂಡಾಗಲೂ ಇತ್ತು. . ಅದರ ಹಿಂದೆ ಅಕ್ಕರೆಯನ್ನೆಲ್ಲ ಹುಡುಕುತ್ತ ಕೂರುವ ಅಗತ್ಯತೆ ಅವನಿಗೆ ಎಂದೂ ತೋರಿರಲೇ ಇಲ್ಲ. . ಇಟ್ ಇಸ್ ಅಂಡರ್ಸ್ಟೂಡ್. . ಅವಳು ಹೆಂಡತಿ ಅವಳು ಹೀಗೇ ಇರುತ್ತಾಳೆ, ತಾನು ಗಂಡ ತಾನು ಹೀಗೆ ಇರಬೇಕು. . ಇನ್ನು ಮಗು ಅದು ನಮ್ಮ ಹೆಸರಿಗೆ ಬಿದ್ದ ಮೊಹರು. . ಇದನ್ನು ಹೀಗೇ ಸುಮ್ಮನೆ ಬಿಡುವುದರಲ್ಲಿ ಜಾಣತನವಿದೆ ಅನಿಸಿ  ಅದನ್ನು ಬೇರೆಯದೇ ರೀತಿ ಹ್ಯಾಂಡಲ್ ಮಾಡಬೇಕೆಂದುಕೊಂಡವನು ಮೊದಲನೆಯದಾಗಿ ಪರಶುವನ್ನು ಸುಳ್ಳು ಕೇಸಿನಲ್ಲಿ ಜೈಲು ತಲುಪಿಸಲು ನೋಡಿದ ನಂತರ ಅದಾಗದೇ ಹೋದಾಗ ಊರನ್ನೇ ಬಿಡಿಸಿದ. ಪರಶುವನ್ನ ಜೈಲಿಗೆ ಕಳಿಸುವ ಹುನ್ನಾರದಲ್ಲಿದ್ದಾಗ ಅವನ ಹೆಂಡತಿಯನ್ನ ಅಣುಅಣುವಾಗಿ ಅನುಭವಿಸುವ ದುಷ್ಟ ಆಲೋಚನೆಯೊಂದು ಆತನಲ್ಲಿ ಕುದ್ದುಬಂದಿತ್ತು. . ಅದು ನೆರವೇರುವ ಮೊದಲೇ ಅವರು ಬೆಂಗಳೂರು ಬಿಟ್ಟಿದ್ದರು. ಹಾಗೆ ಅವರು ಊರು ಬಿಡುವ ದಿನವೂ ಪರಶುವಿಗೆ ದೇವರು ಬಂದಿತ್ತು ಮೆಜೆಸ್ಟಿಕ್ಕಿನ ಬಸ್ಟ್ಯಾಂಡಿನಲ್ಲಿ ಎಲ್ಲರೆದುರು ಬಂದ ದೇವರು. . ಸುಜಾತಳ ಮೌನ ಕಣ್ಣೀರು ಕುಡಿಯುತ್ತ ಬಹಳ ಹೊತ್ತು ಕುಣಿದಿತ್ತು. ಅವ್ವನ ಸೆರಗಿನಲಿ ಅವಿತ ಮಕ್ಕಳು. . ಅಪ್ಪನ ಅಪರಾವತಾರದಿಂದ ಅವನಿಂದ ದೂರ ಉಳಿದಿದ್ದವು. ಅದೇ ಕೊನೆ. . ಊರಿಗೆ ಬಂದ ಮೇಲೆ ಯಾವತ್ತೂ ಪರಶುವಿಗೆ ದೇವರು ಬಂದಿರಲಿಲ್ಲ. . . ಇವತ್ತು ಮತ್ಯಾಕೆ ಬಂತೋ. . ಸುಜಾತ ಯೋಚಿಸಿ ದಣಿದಳು.  . . . . 

ಪರಶುವಿನ ಹೊಲೆದೇವರು ಹೇಳಿದ ಹಾಗೆ  ಆ ವರ್ಷ ತಡೆ ಹಿಡಿದಿದ್ದ ಹೊಲೆದೇವರ ಪೂಜೆಯನ್ನ. . ಸಾಂಗವಾಗಿ ನೆರವೇರಿಸುವ ಮಾತಾಗಿ ಅಂತೆಯೇ ಡೊಳ್ಳನ ಕೇರಿಯಿಂದ ಅರಿಕೆ ತೆಗೆದುಕೊಂಡು ಬೋಜ, ಬಿಕ್ಕರೆ, ಪಾಪಯ್ಯ, ಗಿಣಿಯೆಲ್ಲರೂ ಸೋಮೇಗೌಡನ ಮನೆಗೆ ಹೋಗಿ ಪರಶುವಿಗೆ ದೇವರು ಬರುತ್ತಿರುವ ವಿಚಾರವನ್ನೂ, ಈ ಬಾರಿ ಹೊಲೆದೇವರ ಹಬ್ಬ ಮಾಡಲೇಬೇಕೆಂದೂ ಹಟ್ಟಿಯ ಮೂಲೆಯಲ್ಲಿ ನಿಂತು ಮನವಿಯಿಟ್ಟು ಕೈ ಮುಗಿದಿದ್ದರು. ಸೋಮೇಗೌಡನ ಗಮನವೆಲ್ಲ ಪರಶುವಿನ ಮೇಲೇ ಇತ್ತು. . ತನ್ನದೇ ಉದ್ದ, ತನ್ನದೇ ಎತ್ತರ, ತನ್ನದೇ ಬಣ್ಣ. . ಎಷ್ಟೊಂದು ಹೋಲುತ್ತಾನೆ ಅನಿಸಿ ಸೋಮೇಗೌಡ ಕಸಿವಿಸಿಗೊಂಡ. ನೋಡು ಒಳಗೆ ಹೋಗಿ ಇವರಿಗೆ ಕಾಫಿ ತಾ, ರೊಟ್ಟಿ ಮಿಕ್ಕಿದೆಯಾ ನೋಡು" 

ಪಾಲಿಯ ಚುರುಕು ಕಂಗಳು ಅದಾಗಲೇ ಗುಂಪಿನಲ್ಲಿ ಎದ್ದು ಕಾಣುತ್ತಿದ್ದ ಪರಶುವನ್ನು ಗುರುತಿಸಿದ್ದವು. . "ಥೂ ಇಂಥ ಸೂಳೆ ಮಕ್ಕಳಿಗೆಲ್ಲ, ಕಾಫೀ ಕೊಡಬೇಕಾಗಿರೋದೊಂದು ಕರ್ಮ. . , ಇವರು ಪೂಜೆ ಮಾಡಿದರೆಷ್ಟು ಬಿಟ್ಟರೆಷ್ಟು, ಈ ಭಂಡಾರ ಪೆಟ್ಟಿಗೆಯನ್ನಯಾಕೆ ನಮ್ಮನೆಲಿ ಇಟ್ಟುಕೋ ಬೇಕು? ಇವರಲ್ಲೇ ಯಾರಾದರೂ ಇಟ್ಟಕೋತಾರೆ, ಇದನ್ನ ಮನೆಲಿಟ್ಟುಕೊಂಡು ನಮಗೆ ತಲೆನೋವು, " ಅವಳು ಹೇಳಿದ್ದು ಅಸ್ಪಷ್ಟವಾಗಿ ಕಿವಿಗೆ ಬಿದ್ದಿತ್ತು. ಸೋಮೇ ಗೌಡ ತನ್ನ ಎಂದಿನ ಪೆಕರು ನಗು ನಕ್ಕು ಪರಿಸ್ಥಿತಿಯನ್ನ ಸಂಭಾಳಿಸಲೆತ್ನಿಸಿದ. " ಸರಿ ಗೌಡ್ರೇ, ಬರದಾ ಹಂಗಾರೇ, ಮುಂದಿನ ಸ್ವಾಮಾರದೊತ್ಗೆ ಪೂಜೆ ತೆಗಿಯನಾಂತ ಮಾಡ್ಕಂಡಿವಿ, ನೀವು ದೊಡ್ ಮೊನ್ಸು ಮಾಡಿ ಮುಂದ್ ನಿಂತು ನಡುಸ್ಕೊಡ್ಬೇಕು. " ಬೋಜಯ್ಯ ಹೊರಡುತ್ತೇವೆಂಬುದನ್ನ ಸೂಚ್ಯವಾಗಿ ಹೇಳಿದ. 

" ಇರಿ ಕಾಫಿ ಕುಡ್ಕಂಡೋಗಿ, ನಾವು ನಿಮ್ ಪೂಜೆ ಪುನಸ್ಕಾರಕ್ಕೆಲ್ಲ ನಿಲ್ತೀವಪ್ಪಾ, ಆದ್ರೆ ಈಗ ನೀವೆಲ್ಲ ಓದು ಬುದ್ದಿ ಅಂತ ಹೊರಟು ಬೆಂಗಳೂರು ಸೇರ್ಕೊಳ್ತಾ ಇದ್ದೀರಿ, ನಮ್ ತೋಟ ತುಡಿಕೆ ಬಗೆ ನಿಮ್ಗೊಂಚೂರೂ ಗೋಷ್ಟಿ ಇಲ್ಲ. ಆಕಾಶಕ್ಕೆ ಹಾರಿದ್ರೂ ಊರು ಮರೀಬಾರ್ದಪ್ಪಾ, " ಸೋಮೇಗೌಡ ಬುದ್ದಿ ಹೇಳುವವನಂತೆ ಮೃದುವಾಗಿ ಹೇಳಿದ. ಅವನಿಗೇ ಅಲ್ಲದೆ ಅಲ್ಲಿ ಬಹಳಷ್ಟು ಕೊಡವರಿಗೆ ಈ ವಿಷಯವಾಗಿ ಬೇಸರವಿತ್ತು. ಮುಂಚೆಲ್ಲ, ತೋಟಗದ್ದೆಯಲ್ಲಿ ಕೆಲಸಮಾಡಿಕೊಂಡು, ವಾಲಗ ಊದಿಕೊಂಡು ಊರಾಯ್ತು ಕೇರಿಯಾಯ್ತು ಅಂತ ಇದ್ದವರೀಗ ಓದಿ ಬರೆದು ಬೆಂಗಳೂರು ಮೈಸೂರು ಅಂತ ಸೇರಿಕೊಳ್ಳುತ್ತಿರುವುದರ ಬಗೆ ಅಸಮಾಧಾನವಿತ್ತು. ಈಗೆಲ್ಲ ತೋಟಕ್ಕೆ ಆಳುಗಳು ಸಿಗದೆ. ಮೂಡ್ಸೀಮೆಯಂದಲೋ, ತಮಿಳುನಾಡಿನಿಂದಲೋ ಕಡೆಗೆ ದೂರದ ಅಸ್ಸಾಮಿನಿಂದ ಕೂಡ ಆಳು ಹೊಂಚಿಕೊಂಡು ಬಂದು ಲೈನಿನಲ್ಲಿಟ್ಟು ಕಾಯಬೇಕಾಗಿತ್ತು. ಅವನ ಮಾತಿನ ಸೂಕ್ಷ್ಮ ತಿಳಿದೂ ಪಾಪದವನಂತೆ ಮುಖ ಮಾಡಿಕೊಂಡ ಭೋಜ "ಏ ಬುಡಿ ಗೋಡ್ರೇ ನಮ್ಮೂರು ನಮ್ಮೂರೆ ಬುಡಿ "ಎಂದು ಪರಿಸ್ಥಿತಿ  ಹಗುರಾಗಿಸಲು ನೋಡಿದ. ಸೋಮೇಗೌಡನ ಕಂಗಳು ಪರಶುವನ್ನ ನೋಡಿದವು. ಪರಶುವಿನ ಕಂಗಳು ಒಳಮನೆಯನ್ನು ದಾಟಿ ಹಿತ್ತಲ ಜಗುಲಿಯತ್ತ ನೆಟ್ಟಿತ್ತು. ಅಲ್ಲಿ ಪಾಲಿ ಮಾಡಿಗೆ ಸಿಕ್ಕಿಸಿದ್ದ ಹಳೆಯ ನಾಕಾರು ಗ್ಲಾಸುಗಳನ್ನ ಬೇಕು ಬೇಡವೆಂಬಂತೆ ಎತ್ತಿ ಜೋಡಿಸಿಕೊಂಡು, ಹಳೆಯದೊಂದು ಪ್ಲಾಸ್ಟಿಕ್ ಮಗ್ಗಿನಲ್ಲಿ ಕಾಫಿಸುರಿದುಕೊಂಡು ಹಾಗೇ ಹಿತ್ತಲಿಂದ ಬಳಸಿಕೊಂಡು ನಡೆದು ಮನೆಯ ಮುಂದಿನ ಹಟ್ಟಿಗೆ ಬಂದಿದ್ದಳು. ಇನ್ನೇನು ಅವಳ ಕೈಯಿಂದ ಗಿಣಿಯ ಕಾಫಿ ಇಸಿದುಕೊಳ್ಳಬೇಕು. . ಪರಶುವಿಗೆ ಮತ್ತೆ ದೇವರು ಬಂದಿತ್ತು. ಹೂಂಕರಿಸಿ ಅಬ್ಬರಿಸಿದ ದೇವರು ಮೊದಲ ಕೆಲಸವಾಗಿ ಅವಳ ಕಾಫಿ ಡಬರಿಯನ್ನೆತ್ತಿ ಬಾಳೆಬುಡಕ್ಕೆಸೆಯಿತು. ಅಷ್ಟೇ ಮುಂದೇನು ಅಂತ ಯೊಚಿಸುವಷ್ಟರಲ್ಲಿ ಅದು ನಡೆದೇ ಹೋಯ್ತು. ಪಾಲಿಯ ಮುಂದಲೆಗೆ ಕೈಹಾಕಿದ ದೇವರು ಅವಳ ಬೆನ್ನಿಗೆ ನಾಲ್ಕೇಟು ಬಿಟ್ಟಿತು. "ಸೂಳೆಮಕ್ಳು ಅಂತೀಯೇನೆ? ನಿನ್ನ ಗಂಡನೂ ಅವನ ಜಾತಿಯೋರು ಊರಿಡೀ ಮಕ್ಳುಟ್ಟಿಸ್ಲಿ. . ನಾವು ಸೂಳೇ ಮಕ್ಳಾಯ್ತೀವಿ! ನಿನ್ನ ಕಾಫಿ ನನ್ನವ್ವನ ಹಾಟಿಗೆ ಸಮ, ಇನ್ನೊಂದ್ಸಲ ಇಂಗ್ಮಾಡ್ತೀಯ?" ಸೋಮೇಗೌಡ ಅವಳನ್ನು ಬಿಡಿಸಲು ನೋಡಿ ಆಗದೇ ಒಳಗೆ ಹೋಗಿ ಅವಿತುಕೊಳ್ಳಲು ಓಡಿದ, ದೇವರು ಪಾಲಿಯನ್ನು ನೂಕಿ ಸೋಮೇಗೌಡನ ಬೆನ್ನಿಗೂ ಎರಡು ಹಾಕಿತು. " ಏ ಬಿಡುಸ್ರೋ, ಬಿಡುಸ್ರೋ. . " ಸೊಮೇಗೌಡ ಕೂಗಿದ. ಅಷ್ಟೂ ದಿನ ಗೌಡನ ಹಟ್ಟಿಯ ಮೂಲೆಯಲ್ಲಿ ಸೊಂಟ ಬಗ್ಗಿಸಿ ನಿಲ್ಲುತ್ತಿದ್ದವರು ಅವನ ಒಳಮನೆಹೊಕ್ಕು ಅವನನ್ನು ಬಿಡಿಸಬೇಕಾಯ್ತು. ಪರಶುವಿನ ಬಲವಾದ ಹಿಡಿತದಲ್ಲಿ ಸೋಮೇಗೌಡ ಹಣ್ಣಾಗಿದ್ದ. ಹಾಗೆ ಅವನನ್ನು ಹಣಿದ ದೇವರು " ಯಾರ್ರಲಾ ಅಲ್ಲಿ, ನಾನೀಗ ಈಶ್ವರ ದೇವಸ್ತಾನಕ್ಕೆ ಹೋಯ್ತಿವ್ನಿ, ನನ್ಯಾರು ತಡೀತಾರೆ ನೋಡನ " ಅನ್ನುತ್ತ   ಅಲ್ಲಿಂದ ಆವೇಶದಲ್ಲಿ ಈಶ್ವರ ದೇವಸ್ಥಾನದತ್ತ ಹೊರಟಿತು. ತಮಗೆ ಪ್ರವೇಶವಿಲ್ಲದ ಆ ದೇವಸ್ಥಾನಕ್ಕೀಗ ಪರಶುವಿನ ಹಿಂದೆ ನಾವು ಹೋಗುವದೋ ಬೇಡವೋ ಎಂದು ಭೋಜನೂ, ತಂಡವೂ ನಿಂತಲ್ಲೇ ಹಂದಾಡತೊಡಗಿದರು. ಚೇತರಿಸಿಕೊಂಡ  ಪಾಲಿಯೂ ಅಷ್ಟೇ ಆವೇಶದಲ್ಲಿ ಒಳಗೆ ಹೋಗಿ ಭಂಡಾರ ಡಬ್ಬಿ ತಂದವಳು ಅದನ್ನು ಬಿಸಾಡಲೇ ಬೇಡವೇ, ಬಿಸಾಡಿದರೆ ಏನಾಗಬಹುದೆಂಬ ಗೊಂದಲದದಲ್ಲಿ ನಿಂತೇ ಇದ್ದಳು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x