ಅಮರ್ ದೀಪ್ ಅಂಕಣ

ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

ಕಣ್ ಕಣ್ಣ ಸಲಿಗೆ….  ಸಲಿಗೆ ಅಲ್ಲ ಸುಲಿಗೆ….. 

ನೀನಿನ್ನು ನನಗೆ ನನಗೆ…………….. ನನ್ನನಗೇ………..

ಆರು ತಿಂಗಳಿಂದ  ಹೀಗೇ ಬಿಡದೇ ಕಾಡುತ್ತಿದ್ದಾಳೆ. ಅದ್ಯಾಕೆ ನಾನು ಇವಳ ಹಿಂದೆ ಬಿದ್ದೆನೋ ಏನೋ.  ಇವಳ ಸಲುಗೆ, ಸರಸ ಅತಿಯಾಗಿದೆ.   ಇವಳೇ ಮೊದಲೇನಲ್ಲ.  ಸರಿಸುಮಾರು ಒಂಭತ್ತು ವರ್ಷಗಳಿಂದ  ಇಂಥವಳ ಹಲವರ ಸಹವಾಸಕ್ಕೆ ಬಿದ್ದು ನಾನು ನಾನಾಗಿ ಉಳಿದಿಲ್ಲ.  ಆದರೆ, ನಾನು ಈ ಹಿಂದೆ ಬೆನ್ನು ಬಿದ್ದ ಯಾರೂ ಈ ಮಟ್ಟದಲ್ಲಿ ಕಾಡಿದ್ದಿಲ್ಲ.  ನನ್ನ ದುರಾದೃಷ್ಟ ನೋಡಿ ಇಂಥ ರತಿಯರೊಂದಿಗೆ “ಸರಸ” ಸಲ್ಲಾಪವಾಡತೊಡಗಿದ್ದು ನನ್ನ ಮದುವೆಯಾದ ನಂತರವೇ.  ಮೊದಮೊದಲು ಪತ್ರ ಬರೆಯಲಾ…… ಇಲ್ಲಾ…. ಚಿತ್ರ ಬಿಡಿಸಲಾ…… ಎನ್ನುತ್ತಿದ್ದವನು ಈಗ ಹೀಗಾಗಿಬಿಟ್ಟಿದ್ದೇನೆ.  ಇದು ವ್ಯಸನವೋ, ದಾಸ್ಯವೋ, ಲಾಲಸೆಯೋ, ಮೋಹವೋ ವ್ಯಾಮೋಹವೋ ಒಂದೂ ತಿಳಿಯುತ್ತಿಲ್ಲ.  ನನ್ನ ಹೆಂಡತಿ ಈ ಸವತಿಯರ ಸಹವಾಸಕ್ಕೆ ಬಿದ್ದ ಹೊಸತರಲ್ಲಿ “ಹೋಗ್ಲಿ ಬಿಡು, ಹೊರಗೆ ಓಡಾಡುವ ಇವನ್ ಜೊತೆ ಒಬ್ಬ ಸಂಗಾತಿ ಇರಲಿ” ಅಂದು ಸುಮ್ಮನಿದ್ದಳು.  

ಮೊದಮೊದಲು ನನ್ನೊಂದಿಗೆ “ಸರಸ”ಕ್ಕೆ ಬಿದ್ದ ಕಪ್ಪು ಸುಂದರಿ ಅರವತ್ತು ಎಪ್ಪತ್ತರ ದಶಕದ ಸಿನಿಮಾ ನಾಯಕಿಯರಂತೆ ಹೆಚ್ಚೆಂದರೆ, ಮುಟ್ಟಿ ಮಾತಾಡಿಸುವಷ್ಟರ ಮಟ್ಟಿಗೆ ಸಲುಗೆಯಿಂದಿದ್ದಳು.  ನಂತರ ಬಂದವಳು ಶ್ವೇತ ವರ್ಣದ ಕನ್ಯೆ ಮುಟ್ಟಿದರೆ ಸಾಕು ಚಂಗನೆ ಕಣ್ಣು ಬಿಟ್ಟು ನಿದ್ದೆಗೆಡಿಸಿ ಗುಂಗು ಹಿಡಿಸಿದ್ದಳು. ಮೂರನೆಯವಳು ಸ್ವಲ್ಪ ತುಂಟಿ. ಮಲಗಿದಂತೆ ನಟಿಸಿ ನನ್ನಿಂದಲೇ ಬಡಿದೆಬ್ಬಿಸಿಕೊಂಡು ಎಚ್ಚರವಾದಂತೆ ಮಿನುಗುತ್ತಿದ್ದಳು. ಮೂರಕ್ಕೆ ಮೂರು ಲಲನೆಯರು ಈಗಿದ್ದರು, ಈಗಿಲ್ಲವೆನ್ನುವಂತೆ ಬಂದು ಮಾಯವಾದರು.  ಈಗ ಬಂದಿದ್ದಾಳಲ್ಲ ಮಾಟಗಾತಿ? ಅದೇನು ಒನಪು, ವ್ಯಯಾರ, ನುಣುಪು ಕೆನ್ನೆ, ಚೂಪುಗಣ್ಣು, ಎಳೆ ಬಿಸಿಲಿನ ಚುರುಕು,  ಆಹಾ….. ಸಟ್ಟನೇ ಮುಟ್ಟಿ ಮುದ್ದು ಮಾಡೋಣವೆಂದರೆ, ದೇಹ ಸೌಂದರ್ಯವನ್ನು ಎಲ್ಲಿ ಎಲ್ಲರೂ ನೋಡಿದೊಡನೆ  ದೃಷ್ಟಿ ತಾಕಿ ಸೊರಗಿಬಿಡುತ್ತಾಳೇನೋ ಎನ್ನುವಂತೆ ಮುಖದ ಮೇಲೊಂದು ಪರದೆ ಇಳಿಬಿಟ್ಟುಕೊಂಡಿರುತ್ತಾಳೆ. ಯಾರು ಜೊತೆಗಿದ್ದರೂ, ಒಂಟಿಯಾಗೇ ಬಿದ್ದಿದ್ದರೂ ತನ್ನತ್ತಲೇ ನನ್ನ ಗಮನ  ಕಾಯ್ದಿರಿಸಿಕೊಂಡಿರುತ್ತಾಳೆ.  

ಪ್ರತಿ ಬಾರಿ ನುಣುಪು ಕೆನ್ನೆಯನ್ನು ನವಿಲು ಗರಿ ಸವರಿದಂತೆ ಮುಟ್ಟಿ ಮುದ್ದು ಮಾಡಿಯೇ ರಮಿಸಬೇಕು, ಜೊತೆಗೆ ವಿಹರಿಸಲು  ಸಮಯ ಮೀಸಲಿಡಬೇಕು.  ನನ್ನ ಹೆಂಡತಿ ನೋಡಿದರೆ, “ಮದುವೆ ಆದಮೇಲೆ ಈ ಸುಂದರಿಯರ ಸಹವಾಸಕ್ಕೆ ಬಿದ್ದು, ಹೆಂಡ್ರು ಮಕ್ಳು ಕಡೆ ದ್ಯಾಸ ಕಮ್ಮಿಯಾಗಿದೆ” ಅಂತ ಗೋಳಾಡುವುದನ್ನು ನಾನು ನೋಡಿಯೂ ಸುಮ್ಮನಿರಬೇಕಾದ ಅನಿವಾರ್ಯತೆಗೆ ಬಿದ್ದಿದ್ದೇನೆ. ಮನೆ ಅಂದರೆ ಮನೆ, ಆಫೀಸು, ಬೈಕ್ ರೈಡಲ್ಲಿ ಸೈಡ್ ರೋಡಲ್ಲಿ, ಗೆಳೆಯರ ಗುಂಪಿನಲ್ಲಿ, ಮದುವೆ ಮುಂಜಿಯಲ್ಲಿ, ಎಲ್ಲೆಂದರಲ್ಲಿ ಈ ಬಿನ್ನಾಣಗಿತ್ತಿ ಜೊತೆ ಏಗಿ ಏಗೀ ಸಾಕಾಗಿ ಒಂದಿನ  “ನೋಡೆ, ಮನೆಯಿಂದ ಹೊರಗೆ ನಾನು ನೀನು ಹೆಂಗಿರ್ತೀವೋ ಹಾಳಾಗಿ ಹೋಗ್ಲಿ, ಅದು ಬೇರೆ ಮಾತು.  ಆದ್ರೆ, ಮನೆಯಲ್ಲಿ ನನ್ನ ಹೆಂಡತಿ ಜೊತೆ ಇದ್ದಾಗ ಮಾತ್ರ ಕಾಡಬೇಡ” ಅಂತಂದ್ರೂ ಬಿಡುತ್ತಿಲ್ಲ.  

“ಪುಣ್ಯ ಮಾಡಿದೀಯ, ನನ್ ಸಹವಾಸ ಮಾಡಿ.  ಏನಿಲ್ಲಾ ಹೇಳು ನನ್ನಲ್ಲಿ? ಗ್ಲಾಮರ್ರು, ಗ್ರಾಮರ್ರು, ಹಾಡು ಕೇಳ್ತಿಯೋ, ಅಡುಗೆ ಮಾಡೋದನ್ನು ಕೇಳ್ತಿಯೋ ಕೇಳು. ನಿನ್ನ ಮಕ್ಕಳಿಗೆ ಸುಂದರ ‘ಜಗತ್ತು’ ತೋರಿಸ್ತೇನೆ. ಚೆಂದಗೆ ಆಡ್ತಾ ಆಡ್ತಾ   ನಿದ್ದೆಗಣ್ಣಲ್ಲೂ ನಾನು ಪಾಠ ಹೇಳಿಕೊಡ್ತೇನೆ. ನೀನು ನಿನ್ನ ಹೆಂಡತಿ ಜೊತೆಗೇನೇ ವಾಸ ಮಾಡ್ತಿದ್ದರೂ  ನಿನ್ನ ಬಂಧುಗಳಿಗೆ, ಸ್ನೇಹಿತರಿಗೆ  ಆಕೆಯ ಜೊತೆಗೆ ನನ್ನ ಪರಿಚಯ ಮಾಡಿಸಲೇಬೇಕೆಂದೇನೂ ದುಂಬಾಲು ಬೀಳಲ್ಲ. ಬಂಗಾರದ ಬಳಿ, ಹೈದರಾಬಾದಿನ ಮುತ್ತಿನ ಸರ ಬೇಕು ಅಂತೇನೂ ಗೋಳಾಡುವುದಿಲ್ಲ. ಜಸ್ಟ್ ನನಗೆ ದಿನಕ್ಕೆ ಒಂದೇ ಒಂದು ಹೊತ್ತು ಊಟ  ಸಾಕು. ನಿನ್ನ ಬೆಳಗಿನ ಗುಡ್ ಮಾರ್ನಿಂಗು, ರಾತ್ರಿಯ ಸ್ವೀಟ್ ಡ್ರೀಮ್ಸ್ ಮಧ್ಯಾಹ್ನದ ಹಸಿವಿನ ನೆನಪು, ಮರೆತ ಸಂಜೆಯ ಅಜೆಂಡಾ ಎಲ್ಲಾ ನಾನಾಗಿರುತ್ತೇನೆ. ಆದರೆ, ಒಂದು ಮಾತು ನೆನಪಿಟ್ಕೋ. ನಾನು ಜೊತೆ ಇದ್ರೆ, ಅದರ ಕಂಫರ್ಟೇ ಬೇರೆ.  ಕಾಲೇಜ್ ಹುಡುಗ್ರು ನಾನಂದ್ರೆ ಮುಗಿ ಬೀಳ್ತಾರೆ.  ಅಪ್ಪಿ ತಪ್ಪಿ ನನ್ನ ಕಣ್ಣಿಗೆ ಬಿದ್ದಿದೀಯಾ ನೀನು. ಆದರೇನಂತೆ, ತೆಕ್ಕೆಗೆ ಬಿದ್ದವರನ್ನು ತಳ್ಳಲಾದೀತೇ? ನೀನು  ಪ್ರತಿ ಬಾರಿ ಏಕಾಂತದಲ್ಲಿದ್ದರೂ ಗುಂಪಿನಲ್ಲಾದರೂ ಒಟ್ಟಿನಲ್ಲಿ ನೀನು ನನ್ನ ಮುಖದ ಮೇಲಿನ ಪರದೆ ಸರಿಸಿ ಸೇಸಮ್ಮಾ ಸೇಸಮ್ಮಾ ಬಾಗ್ಲೂ ತೆಗ್ಯೆಮ್ಮಾ……… ಅಂತಿರಬೇಕು.  ನಾನು;  ಪರದೆ ಮೇ ರಹೆನೋ ದೋ…. ಪರದಾ ನ ಹಠಾವೋ………  ಅಂತ ಪರೆದೆ ಮುಚ್ಚಿಕೊಳ್ಳುತ್ತಿರಬೇಕು ”.  ಅಂತೆಲ್ಲಾ ಪಲುಕಿ ಕುಲುಕುತ್ತಾಳೆ.  

ಮೊದಲಿದ್ದ ಡಿಸೇಂಟ್ ಡಾರ್ಲಿಂಗ್ ಗಳನ್ನು ನೆನೆದು ಈಗಲೂ ಕೊರಗುತ್ತೇನೆ. ಏಕೆಂದ್ರೆ, ಅವರು ಯಾವತ್ತೂ ನನ್ನ ವೈಯುಕ್ತಿಕ ಚರ್ಯೆಗಳ ಬಗ್ಗೆ ಚಕಾರವೆತ್ತಿದವರಲ್ಲ.  ನನ್ನ ಮೇಲ್ ಚೆಕ್ಕು ಮಾಡುತ್ತಿರಲಿಲ್ಲ. ಪಾಸ್ ವರ್ಡ್ ಕೇಳುತ್ತಿರಲಿಲ್ಲ. ಫೇಸ್ಬುಕ್ಕು, ವಾಟ್ಸಪ್ಪು?  ಊಹ್ಞೂಂ…. ತಲೆ ಹಾಕಿದವರಲ್ಲ. ಇತ್ತೀಚೆಗೆ ಅವೆಲ್ಲವುಗಳ ಮೇಲೆ “ಮಾಯಾವಿ”ಯ ದಾಳಿಯಾಗಿದೆ.  ತೀರಾ ಈ ಪರಿ ನನ್ನ ಕೈವಶ ಮಾಡಿಕೊಂಡ ಮಾಯಾವಿ ಸಧ್ಯಕ್ಕೆ ನನ್ನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿಲ್ಲವೆಂಬ ಸಮಾಧಾನ  ಮತ್ತು ನನ್ನ ಹೆಂಡತಿ ಮಕ್ಕಳು ನನ್ನಿಂದ ದೂರವಾಗಿಲ್ಲವೆನ್ನುವುದೇ ಪರಮಾಶ್ಚರ್ಯ.

ಕೊನೆ ಪಕ್ಷ ಈ ಮಾಯಾವಿ ನನ್ನ ಹೆಂಡತಿಗೆ ಹೆದರುತ್ತಿದ್ದಳು. ನನ್ನಿಬ್ಬರ ಗಂಡು ಮಕ್ಕಳು ಕದ್ದು ನೋಡಿ ಮಾಯಾವಿಯಿಂದ ಮುದ್ದಿಸಿಕೊಳ್ಳುತ್ತಿದ್ದರು.  “ಈ ಗಂಡ್ಸು ಜಾತೀನೇ ಇಷ್ಟು, ಕಿಲಕಿಲ ಅಂತ ಸೌಂಡ್ ಬಂದ್ರೆ ಸಾಕು, ಕಚುಗುಳಿ ಇಟ್ಟಂಗೆ ಆಡ್ತಾರೆ” ಅಂತೆಲ್ಲಾ ಗೊಣಗಿ ನನ್ನ ಹೆಂಡತಿ ಸುಮ್ಮನಿರುತ್ತಿದ್ದಳು.  ಕೆಲ ದಿನಗಳಿಂದ ನಾನಿಲ್ಲದ ಸಂಧರ್ಭದಲ್ಲಿ “ಮಾಯಾವಿ” ನನ್ನ ಹೆಂಡತಿಯನ್ನು ಮಕ್ಕಳನ್ನು ಅದ್ಯಾವ ಮಟ್ಟಿಗೆ ಮರುಳು ಮಾಡಿಬಿಟ್ಟಿದ್ದಾಳೆಂದರೆ, ಮೊದಲಿದ್ದ ಹಾಗೆ ನನ್ನ ಹೆಂಡತಿ ದುಸುಮುಸು ಮಾಡಿ “ಮಾಯಾವಿ”ಯನ್ನು ದ್ವೇಷಿಸದೇ ಜೊತೆಗಿರುತ್ತಾರೆ.  

ನಮ್ಮ ಹಳ್ಳಿಯಲ್ಲಿದ್ದ ಗಾಳೆಮ್ಮನ ಮೇಲಾಣೆ ಅಂತೂ ನನ್ನ ಹೆಂಡತಿಯನ್ನು ಕನ್ವಿನ್ಸ್ ಮಾಡುವಂಥ ಮಾಯಾವಿಯೇ ನನ್ನ ತೆಕ್ಕೆಗೆ ಬಿದ್ದುದಕ್ಕೆ ಧನ್ಯನಾಗಿದ್ದೆ. ಇದೆಲ್ಲಾ ಎಷ್ಟು ದಿನ ನಡೆಯುತ್ತೆ ಹೇಳಿ?  ಗಂಡ ಹೆಂಡತಿ ಮಧ್ಯೆ ಇನ್ನೊಬ್ಬರ್ಯಾದರೂ ಮಧ್ಯೆ ಬಂದಿದ್ದೇ ಆದರೆ, ಒಂದೋ ಹೆಂಡತಿಯಿಂದ ದೂರಾಗಬೇಕು ಇಲ್ಲವಾ? “ಮಾಯಾವಿ” ಯಂಥವರನ್ನು ದೂರವಿಡಬೇಕಾದ ದರ್ದು ಗಂಡನಾದ ನನ್ನಂಥವಿನಿಗಿರುತ್ತೆ.   ಇಲ್ಲಿ ಆಗಿದ್ದೇ ಬೇರೆ.  ಹೆಂಡತಿ ಮತ್ತು ಮಾಯಾವಿ ಇಬ್ಬರ ಹೆಚ್ಚಿನ ಒಡನಾಟದಿಂದ ನಾನೇ ದೂರಾಗುವಂತಾಯಿತು.  ಅಷ್ಟರಮಟ್ಟಿಗೆ ಈ ಮಾಯಾವಿಯು ಆವರಿಸಿದ್ದಾಳೆ.  

ಇದೇ ದು:ಖ ಬೇರೆ ಯಾರಿಗಾದರೂ ಆಗಿದ್ದರೆ ಹೈವಾರ್ಡ್ಸ್-2000  ಹೈವಾರ್ಡ್ಸ್ 5000 ಅಂತೆಲ್ಲಾ ಬ್ರಾಂಡ್ ಹೆಸರಲ್ಲಿ ಸಂಕಟಕ್ಕೂ ಚೀಯರ್ಸ್ ಹೇಳಿ ಸೆಲೆಬ್ರೇಟ್ ಮಾಡುತ್ತಿದ್ದರೋ ಏನೋ.  ಏನು ಮಾಡೋದು ಈ ಮಾಯಾವಿಯ ಕಿಕ್ಕು ಅದಕ್ಕಿಂತ ಚೂರೇ ಹೆಚ್ಚಿದೆ. ಹೆಸರು ಲೆನೆವೋ…….ಸ್ಮಾರ್ಟ್ ಫೋನು……………ಟಚ್ಚು….. ಸ್ಕ್ರೀನು……

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

  1. ಆಸಕ್ತಿದಾಯಕವಾಗಿದೆ. ಒಳ್ಳೆಯ ಲೇಖನ. ಸ್ಮಾರ್ಟ್‌ಫೋನಿನ ಇನ್ನಷ್ಟು ಪೀಕಲಾಟಗಳನ್ನು ವಿವರಿಸಬೇಕಿತ್ತು.

  2. ಪರದೆ ಹಿಂದೆ ಎನಿದೆ ಹುಡುಕಲು ಹೊರಟರೆ ಹೀಗೆ ಆಗೋದು.. ಲೇಖನ ಚೆನ್ನಾಗಿದೆ.

     

     

Leave a Reply

Your email address will not be published. Required fields are marked *