ಪದ್ದಿಯ ಪತ್ರ: ಅಣ್ಣಪ್ಪ ಆಚಾರ್ಯ, ಹೊನ್ನಾವರ

ಪ್ರೀತಿಯ ಪತಿದೇವರಿಗೆ..,

ನಿಮ್ಮ ಪ್ರಾಣಕಾಂತೆ ಪದ್ದಿಯ ‘ಸಕ್ಕರೆಗಿಂತ ಸಿಹಿ’ಯಾದ ಮುತ್ತುಗಳು..!

ಏನ್ರೀ.., ನಾನು ಪ್ರೀತಿಯಿಂದ ನಾಲ್ಕು ಮಾತು ಬೈಯ್ದೆ ಅಂತ ಮನೆ ಬಿಟ್ಟು, ಆ ಸತ್ಯಾನಂದ ಸ್ವಾಮಿ ಆಶ್ರಮ ಸೇರುವುದಾ..? ಗಣೇಶನ ಹಬ್ಬಕ್ಕೆ ಬಿಗ್‍ಬಜಾರ್‍ನಲ್ಲಿ ಡಿಸ್ಕೌಂಟ್‍ನಿಂದ ನಾಲ್ಕು ಸೀರೆಯನ್ನು 2000 ರೂಪಾಯಿಗೆ ತಂದು 5000 ರೂಪಾಯಿ ಬಿಲ್ ತೊರಿಸಿದ್ದಕ್ಕೆ ಬೇಜಾರಾ..? ಅಥವಾ ಹಬ್ಬದ ದಿನ ನಾನು ಅಡುಗೆ ಮಾಡಿದ್ದಕ್ಕಾ..?!

ರೀ.., ಇನ್ಮುಂದೆ ಹಬ್ಬದ ದಿನವೂ ನೀವೇ ಅಡುಗೆಮಾಡಿ. ಗಣೇಶನ ಹಬ್ಬದ ದಿನ ನಾನು ಮಾಡಿದ ಅಡುಗೆ ಎಷ್ಟು ಕೆಟ್ಟದ್ದಾಗಿತ್ತಂದ್ರೆ, ಅದನ್ನು ತಿಂದ ಭಿಕ್ಷುಕ ಕೂಡ ನಮ್ಮನೆ ಅಂಗಳದಲ್ಲೇ ವಾಂತಿ ಮಾಡ್ಕೊಂಡ..! ನನ್ನ ಕರ್ಮಕ್ಕೆ ಅದನ್ನು ಕ್ಲೀನ್ ಮಾಡೋದಕ್ಕೆ ಮನೆಯಲ್ಲಿ ನೀವೂ ಇರ್ಲಿಲ್ಲ; ಅಡುಗೆ ತಿನ್ನೋಕೆ ನಾಯಿನೂ ಬರ್ಲಿಲ್ಲ..!!

ಏನೊಂದ್ರೇ.., “ನಿಮ್ಮ ಪಟಾಪಟಿ ಚಡ್ಡಿಯನ್ನು ಕೊನೆಯಲ್ಲಿ ಒಗೆಯಿರಿ” ಅಂದಿದ್ದಕ್ಕೆ ಕೋಪನಾ..? ಪರ್ವಾಗಿಲ್ಲ, ಇನ್ಮುಂದೆ ನಿಮ್ಮ ಚಡ್ಡಿಯನ್ನು ಒಗೆದ ನಂತರವೇ ನನ್ನ ಸೀರೆ ವಾಶ್ ಮಾಡಿ ಆಯ್ತಾ..? ಅಥವಾ ಆಫೀಸ್‍ನಿಂದ ಬಂದ್ಮೇಲೆ ತೊಳೆದ್ರೂ ಚಿಂತೆಯಿಲ್ಲ..!

ಏಯ್ ಪುರು (ಪುರುಷೋತ್ತಮ).., ನಾನು ಹೊಸ ನೆಕ್ಲೆಸ್ ತಕೊಂಡಿದ್ದು ನಿಂಗೆ ಇಷ್ಟವಾಗಿಲ್ವಾ..? ಆಯ್ತು, ನಿಂಗೆ ಇಷ್ಟವಿಲ್ಲ ಅಂದ್ಮೇಲೆ ಅದನ್ನು ವಾಪಸ್ ಕೊಡ್ತೀನಿ. ಅದರ ಬದ್ಲಿಗೆ ಯುಗಾದಿ ಹಬ್ಬಕ್ಕೆ ಎರಡೇ ಎರಡು ಬಂಗಾರದ ಬಳೆ ತಂದುಕೊಡಿ..! ಆಗಬಹುದಾ..?

ಪ್ರಾಣನಾಥ.., ನಿಜ ಹೇಳಿ, ನೀವು ಆ ದಿನ ನೀವು ಆಫೀಸ್‍ಗೆ ರಜೆಹಾಕಿ, “ನನ್ಹೆಂಡ್ತಿ ಸತ್ತು ಹೋದಳು” ಅಂತ ಲೀವ್‍ಲೆಟರ್ ಕೊಟ್ಟಿದ್ದು ಸರಿನಾ..? ಗುಂಡ್ಕಲ್ಲಿನ್ಹಾಗೆ ಇರೋ ಈ ಪದ್ದಿಯನ್ನ ‘ಸತ್ತು ಹೋದಳು’ ಅನ್ನೋದಕ್ಕೆ ನಿಮ್ಗೆ ಮನಸ್ಸಾದ್ರೂ ಹೇಗ್ ಬಂತು..?

ಅವೆಲ್ಲ ಇರ್ಲಿ.., ಮುಂದಿನ ತಿಂಗಳು ನನ್ನನ್ನು ‘ಅತ್ಯುತ್ತಮ ಗೃಹಿಣಿ’ ಅಂತ ಮಹಿಳಾ ಸಂಘಟನೆಯವ್ರು ಸನ್ಮಾನ ಮಾಡ್ತಿದ್ದಾರೆ. ಅದಕ್ಕಾಗಿಯಾದ್ರೂ ನಿಮ್ಮ ತಪ್ಪನ್ನು ಕ್ಷಮಿಸಿ ಮನೆಗೆ ಕರೆಯುತ್ತೀನಿ, ಪ್ಲೀಸ್ ಬನ್ರೀ…

ನಿಮ್ಮ ಬಾಸ್ ನಿನ್ನೆ ಫೋನ್ಮಾಡಿ, “ಪದ್ದಮ್ಮಾ.., ಆ ಪೆದ್ದ ಹೋದ್ರೆ ಹೋಗ್ಲಿ. ನಾನು ಗಂಡನಿಗಿಂತ ಚೆನ್ನಾಗಿ ನಿನ್ನನ್ನ ನೋಡ್ಕೋತೀನಿ” ಅಂತಿದ್ದಾರೆ. ಎದುರು ಮನೆ ಪಾಂಡು, “ಭಾಭೀ.., ನಿಮ್ಗೆ ಮನೆಲಿ ಭಯವಾದ್ರೆ ನನ್ನನ್ನ ಕೂಗ್ರಿ, ನಾನು ಬಂದು ನಿಮ್ಗೆ ಧೈರ್ಯ ಕೊಡ್ತೀನಿ” ಅಂತಿದ್ದಾನೆ. ನಾನು ಅಳೋದನ್ನ ನೋಡಿ, ‘ಹೃದಯ’ ಟಿವಿಯಲ್ಲಿ ಬರೋ ‘ಕಾಸಿಗೊಂದು ಕರಿಮಣಿ’ ಧಾರಾವಾಹಿ ನಿರ್ದೇಶಕರು ಆ ಧಾರಾವಾಹಿಯಲ್ಲಿ ಹಿರೋಯಿನ್ ಅಕ್ಕನ ಪಾತ್ರ ಕೊಡ್ತೀನಿ ಅಂದಿದ್ದಾರೆ..! ಇಷ್ಟೆಲ್ಲ ಸಪೋರ್ಟ್ ನನಗಿದ್ರೂ, ನಾನು ಆ ಸೀತೆ ಹಾಗೆ ನಿಮ್ಗೋಸ್ಕರ ಕಾಯ್ತಿದ್ದೀನಿ. ಯಾಕೆಂದ್ರೇ.., ಯಾರೆ ಎಷ್ಟೇ ಪ್ರೀತಿ ತೋರ್ಸಿದ್ರೂ ಗಂಡನಷ್ಟು ನೀಟಾಗಿ ಮನೆಗೆಲಸ ಮಾಡ್ತಾರಾ..?!

ಹೃದಯ ಪರಮೇಶ್ವರ.., ನಮ್ಮ ಪುಟ್ಟನಿಗೆ ನಿಮ್ಮದೇ ಧ್ಯಾನ. “ಮಮ್ಮಿ, ಡ್ಯಾಡಿ ಯಾವಾಗ ಬರ್ತಾರೆ..? ಅವ್ರು ಹೋಮ್‍ವರ್ಕ್ ಮಾಡ್ಕೊಟ್ರೆ ಮಾತ್ರ ಸರಿಯಾಗತ್ತೆ, ಇಲ್ಲಾಂದ್ರೆ ಕ್ಲಾಸಲ್ಲಿ ಪೆಟ್ಟು ತಿನ್ನಬೇಕಾಗತ್ತೆ..! ಪ್ಲೀಸ್.., ಆದಷ್ಟು ಬೇಗ ಡ್ಯಾಡಿಗೆ ಬರೋದಕ್ಕೆ ಹೇಳು…” ಅಂತ ಅಳ್ತಾನೆ. ನನ್ನ ಮಗನಿಗೆ ನಿಮ್ಮ ಮೇಲೆ ಎಷ್ಟೊಂದು ಪ್ರೀತಿ ಅಲ್ವಾ..?

ಡಾರ್ಲಿಂಗ್.., ನಾನು ಎಷ್ಟೇ ಚೆನ್ನಾಗಿ ಸೀರೆ ತೊಳೆದ್ರೂ, ನನ್ನ ಗೆಳತಿಯರು, “ಇದು ನಿಮ್ಮ ಯಜಮಾನ್ರು ತೊಳೆದಷ್ಟು ಕ್ಲೀನ್ ಆಗಿಲ್ಲ ಕಣೇ…” ಅಂತ ಹಂಗಿಸ್ತಾರೆ. ಆಗೆಲ್ಲ ನಿಮ್ಮನ್ನ ಎಷ್ಟು ಮಿಸ್ ಮಾಡ್ಕೋತೀನಿ ಗೊತ್ತಾ..? ಅದಿರ್ಲಿ, ಅಡುಗೆ ಮಾಡಲೂ ಮನಸ್ಸಿಲ್ಲದೇ ಉಡುಪಿ ಹೊಟೇಲ್‍ನಿಂದಲೇ ಊಟ ತರಿಸ್ಕೊಂಡು ಉಣ್ಣುತ್ತಿದ್ದೇನೆ. ಹೊಟೇಲ್ ಊಟ ಎಷ್ಟೇ ರುಚಿಯಾದ್ರೂ, ಗಂಡ ಮಾಡಿದ ಅಡುಗೆ ಹಾಗೆ ಆಗಲ್ವಲ್ಲ..!

ಮೈ ಸ್ವೀಟ್ ಹಾರ್ಟ್.., ನಿಮ್ಮ ಬೋಳು ತಲೆಯ ಮೇಲೆ ನಾನು ಲಟ್ಟಣಿಗೆಯಿಂದ ಹೊಡೆದು ಉಂಟಾದ ಗಾಯದ ಕಲೆಗಳ ಮೇಲೆ ಆಣೆಮಾಡಿ ಹೇಳ್ತೀನಿ, ನೀವು ಹೋದಾಗಿನಿಂದ ನಾನು ಫಿಲ್ಮನ್ನೇ ನೋಡಿಲ್ಲ. ಆದ್ರೂ ಸುಮ್ನೆ ಕೇಬಲ್ ಬಿಲ್ ಕೊಡ್ಬೇಕಾಗತ್ತಲ್ಲ ಅಂತ ಧಾರಾವಾಹಿಗಳನ್ನ ಮಾತ್ರ ನೊಡ್ತಿದ್ದೀನಿ..! ನಿಮ್ಮ ಚಿಂತೆಯಲ್ಲೇ ಕೊರಗಿ-ಕೊರಗಿ, ಕರಗಿ-ಕರಗಿ ಬರೀ 99 ಕೆ.ಜಿ. ಆಗಿದ್ದೀನಿ. ಹೀಗೆ ನಿಮ್ಮ ಪ್ರಾಣಕಾಂತೆ ಬಸವಳಿದು ಬಳ್ಳಿಯಂತಾದರೆ ಸಾಲಗಾರರಿಂದ, ವೈರಿಗಳಿಂದ ನಿಮ್ಮನ್ನು ರಕ್ಷಿಸುವವರು ಯಾರು..? ರೀ.., ನನ್ನ ಬ್ಯಾಗು ಕೂಡ ನಿಮ್ಮನ್ನೇ ನೆನೆಸಿಕೊಳ್ಳುತ್ತಿದೆ. ಯಾಕೆಂದ್ರೆ, ನಾನು ನೆಂಟರ ಮನೆಗೆ ಹೋಗುವಾಗ ಅದು ಪ್ರೀತಿಯಿಂದ ನಿಮ್ಮ ತಲೆಯೇರುತ್ತಿತ್ತಲ್ಲ..!

ರೀ.., ರೀ.., ನನ್ನ ಸೀರೆ, ಬ್ಯಾಗು, ಅಡುಗೆ ಪಾತ್ರೆಗಳೆಲ್ಲ ನಿಮ್ಮ ನಿರೀಕ್ಷೆಯಲ್ಲಿಯೇ ಇವೆ. ಪುಟ್ಟನಂತೂ ನಿಮ್ಮ ಕಾಣದೇ ಕಂಗಾಲಾಗಿದ್ದಾನೆ. ನನಗಂತೂ ಯಾವ ಪಾರ್ಟಿಗೂ ಹೋಗದೇ ಬೋರ್ ಬಂದುಬಿಟ್ಟಿದೆ. ಟಾಮಿಯೂ ಕೂಡ ಒಂದು ವಾರದಿಂದ ಸ್ನಾನ ಮಾಡಿಲ್ಲ ಗೊತ್ತಾ..?! ಹೀಗೆ ನೀವಿಲ್ಲದೇ ಈ ಇಡೀ ಮನೆಯ ಕೆಲಸ-ಕಾರ್ಯನೇ ನಿಂತು ಹೋಗಿದೆ. ಪ್ಲೀಸ್, ನೀವು ಸತ್ಯಾನಂದ ಸ್ವಾಮಿ ಆಶ್ರಮದಿಂದ ಆದಷ್ಟು ಬೇಗ ಬಂದುಬಿಡಿ. ಇಲ್ಲಾಂದ್ರೆ ಗೃಹಸ್ಥನ ಕರ್ತವ್ಯವನ್ನು ನೀವು ‘ಗೃಹ ಪಿಶಾಚಿ’ಯಾಗಿ ಅಂಡಲೆಯಬೇಕಾಗತ್ತೆ. ಆಮೇಲೆ ‘ಕುಂಡಲಿನಿಯಾಗ’ ಮಾಡಿದ್ರೂ ಪಾಪ ಪರಿಹಾರವಾಗೊಲ್ಲ..!

ನೋಡಿ ಇವ್ರೇ.., ನೀವು ಒಂದು ವಾರದೊಳಗೆ ಮನೆಗೆ ಬಂದ್ರೆ ಸರಿ. ಇಲ್ಲಾಂದ್ರೆ, ನಾನು ನಿಮ್ಗೆ ಡಿವೋರ್ಸ್ ಮಾಡಿ ಬೇರೆ ಮದ್ವೆಯಾಗ್ತೀನಿ, ಪುಟ್ಟನಿಗೆ ಬೇರೆ ಅಪ್ಪನನ್ನು ತರ್ತೀನಿ, ಟಾಮಿಗೆ ಹೊಸ ಫ್ರೆಂಡನ್ನ ಕರೆಸ್ತೀನಿ ಹಾಗೂ ಈ ಮನೆಗೆ ಹೊಸ ‘ಗಂಡಾಳು’ (ಗಂಡ+ಆಳು) ಕೊಂಡ್ಕೋತೀನಿ..! ಎಚ್ಚರವಿರಲಿ…

ಇಂತಿ ನಿಮ್ಮ ಪ್ರೀತಿಯ ಮಡದಿ,

ಪದ್ದಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x