1. ಉಕ್ಕಿ ಹರಿಯುತ್ತಿದ್ದ ಉತ್ಸಾಹ ಅವರ ಬೆನ್ನಾರೆ ಹೊರಟೇಹೋಯಿತೇನೋ ಅನ್ನುವ ಹಾಗೆ…
ಅವರ ನೆನಕೆಯ ನೂಲಿನಲಿ
ಕಥೆಯೆಷ್ಟೋ ನೇಯ್ದುಬಿಡುವವರು ನಾವು
ದೂರದಲಿದ್ದುಕೊಂಡೇ ಅವರೆಂದರೆ,
ಎದೆಯೊಳಗಿನ ಪ್ರಾಣಕೆದುರಾಗುವವರು
ಬಳಿಯಿದ್ದುಬಿಡು ಸದಾ ಎನ್ನಲೇಕೆ;
ಜೊತೆಗಿರುವುದು ಸಾಲದೇನು?
ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು;
ಬೆರೆತ ಮನಸುಗಳೆದುರು ಈ ದೂರವೇನು ಮಾಡೀತು?
ಹಾರಲು ಕಲಿಯುವ ಹಕ್ಕಿಯದು
ನೆಲದ ನೆಲೆಯ ತೊರೆಯಲೇಬೇಕು
ಚೂರುಚೂರೇ ತಮ್ಮೆದೆಯನಿಬ್ಬರೂ
ಚೂರುಚೂರಾಗಿಸಲೇಬೇಕು
ಮನಸಿನಪ್ಪಣೆಯಿದ್ದಮೇಲಿನ್ನು
ಒಪ್ಪುವ ಯಾ ಒಪ್ಪದ ಲೋಕವೇನು ಮಾಡೀತು?
ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು;
ಬೆರೆತ ಮನಸುಗಳೆದುರು ಈ ದೂರವೇನು ಮಾಡೀತು?
ತುಟಿಯ ಮೇಲಿರಲಿ ನಿನದೆ ಹಾಡು
ಮನಸಿನಲ್ಲಿರಲಿ ನಿನದೆ ಮಾತು
ಜಗದಲೆಲ್ಲಿದ್ದರೂ ನಾನು
ನಿನ್ನ ಜೊತೆಯಲಿರಲಿ ಈ ಮನಸು
ಘಟನೆ ಘಟಿಸಲಿ ಬಿಡು ನೂರೇನು, ನೂರಾರು
ಕೆಟ್ಟದೆನಿಸೀತೇನು ಕಥೆಯಾಗಿ ಒಂದಾದರೂ
ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು;
ಬೆರೆತ ಮನಸುಗಳೆದುರು ಈ ದೂರವೇನು ಮಾಡೀತು?
ಹಿಂದಿ ಧಾರಾವಾಹಿಯೊಂದರ ಹಾಡಿನ ಭಾವಾರ್ಥವಿದು. ಮೊದಲಸಲ ಕೇಳಿದಾಗಲೇ ಮಗಳು ಕಣ್ಣರಳಿಸಿ “ಎಷ್ಟು ಚಂದ ಹಾಡು, ಎಷ್ಟು ಚಂದ ಸಾಹಿತ್ಯ! ನೀನು ಬರಿಯಮ್ಮಾ ಇದರ ಬಗ್ಗೆ..” ಅಂತ ಹೇಳಿಬಿಟ್ಟಿದ್ದಳು.
ಒಂದು ಹೇಳಿಕೆ ಹೀಗನ್ನುತ್ತದೆ-
“ನಿಜವಾದ ಪ್ರೀತಿಯಲ್ಲದ್ದು ಒಂದು ಸೌಲಭ್ಯ, ಒಂದು ಅನುಕೂಲತೆ.
ಮಳೆಯಲ್ಲಿ, ಬಿಸಿಲಲ್ಲಿ ಒದಗುವ ಕೊಡೆಯ ಹಾಗೆ.
ಮಳೆಯಲ್ಲಿ ಬಿಸಿಲಲ್ಲಿ ನಡೆಯುತ್ತಲೂ ಅಂತಿಮವಾಗಿ ನಮ್ಮೊಳಗಿನ ಹಂಬಲ ನಮ್ಮ ಮನೆಯಾಗಿರುತ್ತದೆ”
– ಘೋಷಣಾತ್ಮಕದಂತೆ ಧ್ವನಿಸುತ್ತದೆಯಲ್ಲವೇ? ಹೌದು. ಆದರೆ, ಅನುಭವವೊಂದು ತಾನಿಳಿಯಬಹುದಾದಷ್ಟೂ ಆಳಕಿಳಿದ ಗಳಿಗೆ ಅಲ್ಲಿಂದ ಹೊಮ್ಮಿದ ಸತ್ಯವಾದ ಮಾತು ಇದು ಅನಿಸಿತು ನನಗೆ ಯಾಕೋ..
ಮಳೆಯಿದ್ದಾಗ, ಬಿಸಿಲಿದ್ದಾಗ ಕೊಡೆಯೊಂದಿಗೆ ನಡೆಯುವುದು ಹಿತವೆನಿಸೀತು. ಅವಿಲ್ಲದ ಹೊತ್ತು ಅದು ತನ್ನಷ್ಟಕ್ಕೆ ಅತ್ಯಂತ ಸಹಜವೆಂಬಂತೆ ಮೂಲೆ ಸೇರುತ್ತದೆ. ಆದರೆ ಮನೆಯೆಂಬುದು ಅಲ್ಲೇ ಇದ್ದು, ನಾವು ಒಳಗಿದ್ದಾಗಲೂ, ಹೊರಗಿದ್ದಾಗಲೂ, ದೂರವಿದ್ದಾಗಲೂ, ಯಾವಾಗಲೂ ನಮ್ಮದೆಂಬ ಬೆಚ್ಚನೆಯ ಭಾವಕ್ಕೆ ಒದಗಬಲ್ಲದ್ದು. ಪ್ರೀತಿಯೂ ಹಾಗೇ ಅನ್ನುತ್ತದೆ ಈ ಮೇಲಿನ ಮಾತು.
ಆದರೆ, ಯಥಾರ್ಥದಲ್ಲಿ ಸಂಪರ್ಕವಿಲ್ಲದ ಸಂಬಂಧವೊಂದು ಅಸಾಧ್ಯದ ವಿಷಯವೆಸುವುದಿಲ್ಲವೇ? ಪ್ರೀತಿಪಾತ್ರರು ಹತ್ತಿರವೇ ಇರಬೇಕನಿಸುತ್ತದೆ. ದೂರಹೋಗುವ ಯೋಚನೆಯೂ ಎಷ್ಟು ಯಾತನಾದಾಯಕ! ಸಾಮಾನ್ಯ ಪ್ರೀತಿಯಲ್ಲಿದ್ದವರು ಪ್ರೀತಿಯಿತ್ತ ಸವಿಯನ್ನು ಮೆಲುಕು ಹಾಕುವುದಕ್ಕಿಂತಲೂ ವಿರಹವನ್ನು, ಅದರ ಸಂಭವನೀಯತೆಯನ್ನು ಮೆಲುಕು ಹಾಕುವುದೇ ಹೆಚ್ಚೇನೋ! ಬದುಕನ್ನು ಅಭಿವ್ಯಕ್ತಿಸುವ ಮಾರ್ಗಗಳೇ ಆಗಿರುವ ಕಲಾಪ್ರಕಾರಗಳಲ್ಲೂ ವಿರಹವನ್ನು ಸಂಗೀತಸಾಹಿತ್ಯ-ನೃತ್ಯ-ನಾಟಕಗಳುಗಳು ಬಿಂಬಿಸಿದಷ್ಟು ಸಾಮೀಪ್ಯದ ಸುಖವನ್ನು ಬಿಂಬಿಸಿಲ್ಲ ನೋಡಿ..
ಜೊತೆಯಲ್ಲಿದ್ದಾಗ ದಕ್ಕಿದ ಗಳಿಗೆಗಳು ಅವರು ಒಂದೆರಡೇ ಹೆಜ್ಜೆ ಆಚೆ ಹೋಗುತ್ತಲೂ ಸಂಕುಚಿಸಿದವೇನೋ ಎಂಬಂತೆ ಇಷ್ಟೇ ಇಷ್ಟು ಚಿಕ್ಕದಾದಂತೆನಿಸತೊಡಗುತ್ತವೆ. ಅವರ ಸಾಮೀಪ್ಯವಿಲ್ಲದಾಗ ಕ್ಷಣಗಳು ಉದ್ದುದ್ದವಾಗತೊಡಗುತ್ತವೆ. ಮಾತು, ನಗು, ಕಣ್ಣಲ್ಲಿ ಕಣ್ಣಿಟ್ಟು ಪೊರೆದ ನಿಶ್ಶಬ್ದ, ಅದು ರವಾನಿಸಿದ ಸಂದೇಶ, ಒಂದು ಸಣ್ಣ ಸ್ಪರ್ಶ ಕೊಟ್ಟ ಭರವಸೆ, ಮೆಲು ಅಪ್ಪುಗೆ ಹೇಳಿದ ಸತ್ಯ, ಹಣೆಯ ಮೇಲಿನೊಂದು ಮುತ್ತು ಕೊಟ್ಟ ಅಶ್ವಸ್ಥಭಾವ, ಮುಚ್ಚಿದ ಕಣ್ಣಿನೊಳಗಿಂದ ತುಳುಕಿದ ಸಂತೃಪ್ತಿ… ಓಹ್! ಕಾಲ ಮಡಿಚಿಟ್ಟ ನೆನಕೆಯ ಮಡಿಕೆಗಳು ಬಿಚ್ಚಿಕೊಳ್ಳುತ್ತ ಹೋದಹಾಗೆ ಒಂದು ಅಸಾಧ್ಯ ದಾಹ ಹುಟ್ಟಿ, ಈಗಿಂದೀಗಲೇ ಅವರನ್ನು ಕಾಣದೇಹೋದರೆ, ಅಥವಾ ಕಡೇಪಕ್ಷ ಅವರೊಂದಿಗೆ ಮಾತಾಡದೇಹೋದರೆ ಸಾಧ್ಯವೇ ಇಲ್ಲ ಅನಿಸಿಬಿಡುತ್ತದೆ. ಅವರೊಂದಿಗಿನ ಜೀವನದಲ್ಲಿ ಉಕ್ಕಿ ಹರಿಯುತ್ತಿದ್ದ ಉತ್ಸಾಹ ಅವರ ಬೆನ್ನಾರೆ ಹೊರಟೇಹೋಯಿತೇನೋ ಅನ್ನುವ ಹಾಗೆ…
ಅತ್ಯಂತ ಪ್ರೀತಿಪಾತ್ರರು ಕಣ್ಣಿಂದಾಚೆ ಹೋದಾಗ ಅವರ ಸಹವಾಸಕ್ಕೆ ಹಾತೊರೆಯುವುದರ ಜೊತೆಗೆ ನನ್ನಂತೆಯೇ ಅವರೂ ಒದ್ದಾಡುತ್ತಿದ್ದಾರೋ ಇಲ್ಲವೋ ಎಂಬ ಯೋಚನೆಯೂ ಕಾಡುತ್ತದೇನೋ… ಒಂದುವೇಳೆ ದೂರದಲ್ಲಿರುವ ಜೀವ ಆರಾಮಾಗಿದೆ ಅನ್ನುವ ಸುಳಿವು ಸಿಕ್ಕಿದರಂತೂ, ಅದೆಷ್ಟೇ ಅವರ ಹಿತ ಬಯಸುವ ಮನಸಾಗಿದ್ದರೂ ಅಸುರಕ್ಷಿತತೆಯಿಂದ ನರಳತೊಡಗುತ್ತದೆ. ನನ್ನ ಸಹವಾಸಕ್ಕೆ ಅವರೂ ಹಾತೊರೆಯಲಪ್ಪಾ, ನನ್ನ ಯೋಚನೆಗಳಿಂದಾಚೆ ಬರದಿಲಪ್ಪಾ.. ಅನ್ನುವ ಸ್ವಾರ್ಥ!
ಈ ಜಗತ್ತಿನ ಎಲ್ಲದರಂತೆಯೇ ಪ್ರೀತಿಯೂ ಮೂಡಲು ಎಡೆ ಸಿಕ್ಕಿದ್ದೇ ವಿಸ್ತೃತವಾಗತೊಡಗುತ್ತದೆ, ಕವಲೊಡೆಯಲಾರಂಭಿಸುತ್ತದೆ. ಅದರದೇ ಹಲವು ಆಯಾಮಗಳಂತೆ ಕಾಣುವ ಅಧಿಕಾರ, ಅವಲಂಬನೆ, ನಿರೀಕ್ಷೆ, ಅಪೇಕ್ಷೆಯೆಂಬ ಈ ಕವಲುಗಳು ತುಸುವೇ ಹದ ತಪ್ಪಿದರೂ ಪ್ರೀತಿ ಅದಲ್ಲವೇ ಆಗಿ ಬಿಡುವ ಅಪಾಯವೂ ಇದೆ.
ಮೇಲೆ ಹೇಳಿದ ಹಿಂದಿ ಧಾರಾವಾಹಿಯಲ್ಲಿ ಆತ ಪ್ರಸಿದ್ಧ ವ್ಯಕ್ತಿ. ಸಂತೋಷದಿಂದ ಹೆಂಡತಿ ಮಗಳೊಂದಿಗೆ ಬಾಳುತಿರುತ್ತಾನೆ. ಮದುವೆಗೆ ಮುಂಚೆ ಪ್ರೀತಿಸಿದ್ದವಳ ಮಗಳು ಅದುಹೇಗೋ ಇವನ ಮನೆಗೆ ಬಂದು ಸೇರಿಕೊಂಡು, ಅವಳು ಇವನದೇ ಮಗಳೆಂದು ಆಮೇಲೆ ಇಬ್ಬರಿಗೂ ಗೊತ್ತಾಗಿ, ಬದುಕು ಅತಂತ್ರವಾಗಿಬಿಡುತ್ತದೆ. ಪರಿಸ್ಥಿತಿಯ ಸುಳಿಗೆ ಸಿಕ್ಕಿ ಅಪ್ಪ ಮಗಳು ಒಂದೇ ಮನೆಯಲ್ಲಿದ್ದೂ ತಮ್ಮ ಸಂಬಂಧವನ್ನು ಜಗತ್ತಿನೆದುರು, ಅಷ್ಟೇ ಯಾಕೆ ಪರಸ್ಪರರೆದುರೂ ಬಿಚ್ಚಿಹೇಳಿಕೊಳ್ಳಲು ಸಾಧ್ಯವಾಗದ ಹಾಗಿರುತ್ತಾರೆ. ತಮ್ಮ ಸಂಬಂಧಕ್ಕೆ ಅನುಗುಣವಾಗಿ ನಡಕೊಳ್ಳಲಾಗದೇ ಪರಸ್ಪರರ ಮೇಲೆ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದಕ್ಕೆ ಅವಕಾಶವಿಲ್ಲದೆ ಒದ್ದಾಡುತ್ತಿರುತ್ತಾರೆ. ಸಾಮೀಪ್ಯಕ್ಕಾಗಿ ಹಾತೊರೆಯುತ್ತಿರುತ್ತಾರೆ. ಆದರೆ ವ್ಯವಸ್ಥಿತವಾಗಿ ಬದುಕುತ್ತಿರುವ ಆ ಮನೆಮಂದಿಯ ನೆಮ್ಮದಿಯನ್ನು ಈ ಭೂತಕಾಲದ ಸತ್ಯವು ಕದಡದಿರಲಿ ಎಂದು ಒಬ್ಬರಿಂದೊಬ್ಬರು ದೂರ ಆಗುತ್ತಾರೆ, ದೂರವೇ ಉಳಿದಿರುತ್ತಾರೆ. ಪ್ರೀತಿಗೆ ಸಾಮೀಪ್ಯವಷ್ಟೇ ಮುಖ್ಯವಲ್ಲ ಅಂತ ಸಮಾಧಾನಿಸಿಕೊಳ್ಳುತ್ತಲೇ ಅದೇ ಸಾಮೀಪ್ಯಕ್ಕಾಗಿ ಒದ್ದಾಡಿಬಿಡುವ ಅವರ ಮನಸಿನ ನೋವನ್ನು ನಮಗೆ ತಿಳಿಹೇಳಲು ಪದೇಪದೇ ಈ ಹಾಡು ಅಲ್ಲಿ ಬರುತ್ತಿರುತ್ತದೆ`
ಮಗುವನ್ನು ಬೆಳೆಸುವುದು ತಪಸ್ಸು ಎಂಬಂತೆ ಬದುಕಿದ ತಾಯಿಯೊಬ್ಬರು ನೆನಪಾಗುತ್ತಿದ್ದಾರೆ. ಅವರ ಮುತುವರ್ಜಿಯ ಫಲವಾಗಿ ಓದು, ವೃತ್ತಿ, ರೂಪ, ಗುಣ ಎಲ್ಲದರಲ್ಲೂ ಚಂದದ ವ್ಯಕ್ತಿತ್ವವಾಗಿ ಬೆಳೆದ ಮಗಳಿಗೆ ಮದುವೆ ಮಾಡಿಕಳಿಸಿಕೊಟ್ಟವರು, ಅಲ್ಲಿಯವರೆಗೆ ಅನಾರೋಗ್ಯವೇನೆಂದು ಗೊತ್ತಿಲ್ಲದ ಹಾಗೆ ಬದುಕಿದ್ದವರು ಒಂದೇವರ್ಷದಲ್ಲಿ ಸರಿಪಡಿಸಲಾಗದಷ್ಟು ಮಾನಸಿಕ ಹಾಗೂ ದೈಹಿಕವಾಗಿ ಸೊರಗಿಹೋದರು. ಇಡೀ ಕುಟುಂಬದಲ್ಲಿ ಏನಾದರೂ ಸಂಕಟ ಬಂದಾಗ ತಾನೇ ಮುಂದೆ ನಿಂತು ಅದನ್ನು ಪರಿಹರಿಸುತ್ತಿದ್ದ ದಿಟ್ಟ ವ್ಯಕ್ತಿತ್ವವೊಂದು ಮಗಳು ತನ್ನಿಂದ ದೂರಾಗಿಯೂ ತನ್ನ ಸಲಹೆ ಮಾರ್ದರ್ಶನವಿಲ್ಲದೆಯೂ ಸಹಜವಾಗಿಯೇ ಬದುಕುತ್ತಿದ್ದಾಳೆ ಅಂತ ತಿಳಿದಾಗ, ತನ್ನ ಅವಲಂಬನೆಯ ಕೊಂಡಿ ಕಳಚಿಕೊಳ್ಳುವತ್ತ ಅವಳ ಹೆಜ್ಜೆಗಳನ್ನು ನೋಡಿದಾಗ ಅದನ್ನು ಅರಗಿಸಿಕೊಳ್ಳಲಾರದೆ ಕುಗ್ಗಿಹೋಯಿತು.ಯಾವ ಔಷಧಿಗೂ ಸರಿಪಡಿಸಲಾಗದಷ್ಟು ಬಡವಾಯಿತು.
ಹಾಗಾದರೆ, ಪ್ರೀತಿಯಲ್ಲಿ ಸದಾ ಸಾಮೀಪ್ಯದ ಅಗತ್ಯ ಎಷ್ಟು, ಅದರ ಪಾತ್ರವೆಷ್ಟು ಮತ್ತು ಅದರ ಅನಿವಾರ್ಯತೆ ಎಷ್ಟು?
ಆಸಕ್ತಿಯೊಂದು ಸಂಪರ್ಕದ ಮೂಲಕ ಸಂಬಂಧ, ಅನುಬಂಧ ಅನ್ನುವ ಘಟ್ಟಗಳನ್ನು ಹಾದುಬರುತ್ತಾ ಸಾಮೀಪ್ಯ ಬಹುಶಃ ಒಂದು ಅಗತ್ಯವೂ ಹೌದು, ಅನಿವಾರ್ಯವೂ ಹೌದು. ಯಾವಾಗ ಅಲ್ಲಿ ಪ್ರೀತಿ ಮೂಡಿತೋ, ಒಂದು ಭರವಸೆಯೂ ಹುಟ್ಟಿಬಿಡುತ್ತದೆ. ಎಲ್ಲಿದ್ದರೂ ಆ ಜೀವ ನನಗಾಗಿ ತುಡಿಯುತ್ತಿರುತ್ತದೆ, ಮಿಡಿಯುತ್ತಿರುತ್ತದೆ, ಹಾರೈಸುತ್ತಿರುತ್ತದೆ, ನನ್ನದರ ಜೊತೆ ಹಾಸುಹೊಕ್ಕಾದ ಆ ಬದುಕಿನಲ್ಲಿ ನನ್ನ ಸ್ಥಾನವನ್ನು ತುಂಬುವುದು ಯಾರಿಂದಲೂ ಆಗದು ಅನ್ನುವ ಭರವಸೆ! ದಿನಗಳೆದಂತೆ ಅದು ಬೆಳೆಯುತ್ತಾ ಹೋಗುತ್ತದೆಯೇ ಹೊರತು ಕ್ಷೀಣವಾಗುವುದಿಲ್ಲ. ಹಾಗಾದಾಗ ಪ್ರೀತಿಪಾತ್ರರ ಸಾಮೀಪ್ಯ ಬೇಕನಿಸಿದರೂ ಅದೊಂದು ತುದಿಮೊದಲಿಲ್ಲದ, ತಾಳ್ಮೆಸಹನೆಯಿಲ್ಲದ ದಾಹವನ್ನು ಹುಟ್ಟುಹಾಕುವಷ್ಟು ತೀವ್ರವಾದ ಕಾಡುವಿಕೆ ಆಗಿರದು. ಹಾಗಾಗದೇ ಹೋಯಿತು ಅಂತಾದಾಗ ಅದು ಮೇಲಿನ ಆ ಸಾಲುಗಳಲ್ಲಿ ಹೇಳಿದ ಹಾಗೆ ಪ್ರೀತಿಯೇ ಆಗಿರದೇ ಅದರಂತನಿಸುವ ಒಂದು ತಾತ್ಕಾಲಿಕ ಸೌಲಭ್ಯ, ಅನುಕೂಲತೆ ಅಥವಾ ಸಾಂದರ್ಭಿಕ ವ್ಯವಸ್ಥೆಯಷ್ಟೇ ಹೌದು.
ಎರಡು ಕೂಡಿಸು ಎರಡು ಅನ್ನುವ ಲೆಕ್ಕದ ಹಾದಿ ಹಿಡಿದು ಹೋದರೆ ಈ ಮಾತು ಹೌದು ಅನಿಸುತ್ತದೆ ಅಲ್ಲವೇ?
ಆದರೆ ಪ್ರೀತಿ ಎಂದು ತಾನು ಕಂಡುಕೊಂಡದ್ದರ ಹೆಸರಿಗೆ ಉಸಿರನ್ನೇ ಬರೆದುಬಿಡುವ ಅಪ್ಪಟ ಮಾನುಷ ತುಡಿತಕ್ಕೆ ಈ ಲೆಕ್ಕಾಚಾರಗಳೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. “ಹೌದಾ, ಪ್ರೀತಿ ಅಲ್ಲವಾ, ಅಲ್ಲದಿದ್ದರೆ ಹೋಗಲಿಬಿಡಿ. ನನ್ನೊಳಗೆ ಆ ಜೀವಕ್ಕಾಗಿ ಹುಟ್ಟುವ ತುಡಿತಮಿಡಿತಗಳಿಗೆ ಹೆಸರೇ ಬೇಡ. ನನ್ನದಾಗಿರುವ ಆ ಬೇನಾಮಿ ಸಂವೇದನೆ ಕೊಡುವ ನೋವುನಲಿವುಗಳೆಲ್ಲವೂ ನನಗೆ ಮನಸಾರೆ ಸಮ್ಮತ” ಅನ್ನುವ ಮನಸ್ಥಿತಿಯು ತಾನು ಶರಣಾಗತಿಯಲ್ಲಿ ಆಸ್ವಾದಿಸುವ ಸೊಗಸೊಂದಕ್ಕೆ ಒಂದು ಸೌಲಭ್ಯ, ಒಂದು ಅನುಕೂಲತೆ ಅನ್ನುವ ಅವಸ್ಥೆಗಳನ್ನು ಆರೋಪಿಸಿದರೆ ನೊಂದುಕೊಂಡೀತು. ಎಷ್ಟಂದರೂ ಅತ್ಯಂತ ಹೆಚ್ಚು ಬಲಶಾಲಿಯಾಗಿರುವ ಮನುಷ್ಯನ ಮನಸಿಗೆ ಅತ್ಯಂತ ಹೆಚ್ಚು ಬಲಹೀನತೆಗಳಿರುವುದೂ ಸುಳ್ಳಲ್ಲ. ಚುಚ್ಚಿ ಕಾಡುವ ಭ್ರಮೆಯೊಳಗಾದರೂ ಇದ್ದೇನು, ಆ ಭ್ರಮೆ ಕೊಟ್ಟ ಅಪ್ಪಟಸತ್ಯವೆನಿಸುವ ಈ ನೋವಿಂದ ಆಚೆಗೊಯ್ಯುತ್ತೇನೆ ಎನ್ನುವ ವಾಸ್ತವ ನನಗೆ ಬೇಡವೆಂಬ ಚಿಂತನೆಯೂ ಅದರಲ್ಲೊಂದು.
ಅಲ್ಲದಿದ್ದರೆ ದೂರದಲಿದ್ದುಕೊಂಡೇ ತನ್ನೆದೆಯೊಳಗಿನ ಪ್ರಾಣಕ್ಕೆ ಸದಾ ಎದುರಾಗುವ ಅವರ ನೆನೆಕೆಯ ನೂಲಿನಿಂದ ಬದುಕಿನ ಕಥೆಯನ್ನೇ ನೇಯಬಲ್ಲೆನೆನುವ ಪದ್ಯ, ಬಳಿಯಿರಬೇಕು ಯಾಕೆ, ಜೊತೆಗಿದ್ದರೆ ಸಾಲದೇ ಅನ್ನುವ ಪದ್ಯ, ಹಾರಲು ಕಲಿಯಹೊರಟ ಹಕ್ಕಿ ಮತ್ತು ಅದಕ್ಕಾಗಿ ಅದು ತೊರೆದ ನೆಲ- ಇವೆರಡೂ ತಮ್ಮೆದೆಯನ್ನು ನಿಧಾನಕ್ಕೆ ಚೂರಾಗಿಸಿಕೊಳ್ಳಲೇಬೇಕೆನ್ನುವ ಅನಿವಾರ್ಯತೆಯನ್ನು ಹೇಳುವಾಗ ಸಣ್ಣಗೆ ಕಂಪಿಸಿದಂತನಿಸುವುದು ಯಾಕೆ? ಪ್ರೀತಿಯೆದುರು ಅಸಹಾಯವೇ ಆಗಿಬಿಡುವ ಅದರ ಸಂಕಟಗಳು ಮತ್ತು ಬೆರೆತ ಮನಸುಗಳೆದುರು ನಿರ್ವೀರ್ಯವಾಗಿಬಿಡುವ ದೈಹಿಕ ಅಂತರದ ಬಗ್ಗೆ ಮಾತಾಡುವ ಪದ್ಯ ತನ್ನ ಉದ್ದಕೂ, ಕಾಡುವ ದೈಹಿಕ ದೂರವೊಂದು ಕೊಟ್ಟ ನೋವನ್ನೇ ಧ್ವನಿಸುವುದು ಯಾಕೆ ಹೇಳಿ?
–ಅನುರಾಧ ಪಿ. ಸಾಮಗ