ಹೋದವಾರ ಸಂಜಿಮುಂದ ನಮ್ಮ ತಮ್ಮ ತನ್ನ ಗೆಳೆಯಾ ರಮ್ಯಾ(ರಮೇಶ)ನ್ನ ಕರಕೊಂಡ ನಮ್ಮನಿಗೆ ಬಂದಿದ್ದಾ. ಅವತ್ತ ರವಿವಾರಾ ಮುಂಝಾನೆ ದ್ವಾಸಿ ಮಾಡಿದ್ದೆ. ಇನ್ನು ಹಿಟ್ಟು ಉಳದಿತ್ತು. ನನ್ನ ತಮ್ಮಾ ಅಕ್ಕಾ ಹಸಿವ್ಯಾಗಲಿಕತ್ತದ ಎನರೆ ಮಾಡಿಕೊಡು ಅಂದಾ ಅದಕ್ಕ ನಾ " ತಡಿ ಮುಂಝಾನಿದು ಹಿಟ್ಟ ಅದ ಬಿಸಿ ಬಿಸಿ ಫಡ್ಡ ಮಾಡಿಕೊಡತೇನಿ ಅಂದೆ" ಅದಕ್ಕ ಅವನ ಗೇಳೆಯಾ ಘಾಬರ್ಯಾಗಿ "ಅಕ್ಕಾರ ನಿಮಗ ಕೈ ಮುಗಿತೇನಿರಿ ನೀವ ಎನ್ಕೊಟ್ರು ತಿಂತೇನಿ ಆದ್ರ ಫಡ್ಡ ಮಾತ್ರ ಕೋಡಬ್ಯಾಡ್ರಿ ಅಂದು ಮಾರಿ ಹುಳ್ಳಗ ಮಾಡಕೊಂಡು ದೈನಾಸ ಬಟಗೋತ " ಅಕ್ಕಾ ತಮ್ಮಾ ಇಬ್ಬರು ಪಾಳಿಪ್ರಕಾರ ನನಗ ಫಡ್ಡ ತಿನ್ನಿಸೊ ಗುತ್ತಿಗಿ ಹಿಡದಿರೇನ " ಅಂತ ಅಂದು ನನ್ನ ತಮ್ಮನ ಮಾರಿ ನೋಡಲಿಕತ್ತಾ.ನನ್ನ ತಮ್ಮಾ ಜೋರಾಗಿ ಬಿದ್ದ ನಗಲಿಕ್ಕೆ ಶುರು ಮಾಡಿದಾ. ನನಗ ವಿಚಿತ್ರ ಅನಿಸ್ತು ಫಡ್ಡು ಅಂದ್ರ ಇವರಿಬ್ಬರು ಹಿಂಗ್ಯಾಕ ಮಾಡಲಿಕತ್ತಾರ ಅಂತ. ಅದಕ್ಕ ನಮ್ಮ ತಮ್ಮಾ " ಅಕ್ಕಾ ಈ ಫಡ್ಡಿನ ಹಿಂದ ಒಂದ ಸಣ್ಣ ಸ್ಟೋರಿನ ಅದ ಹೇಳ್ತೇನಿ ತಡಿ ಅಂತ ಹೇಳಿಕ್ಕೆ ಶುರು ಮಾಡಿದಾ." ಒಂದಿನಾ ಮಧ್ಯಾನ್ಹಾ ರಣಾ ರಣಾ ಬಿಸಲಾಗ ಮನಿಗೆ ಊಟಕ್ಕ ಹೊಂಟಿದ್ದೆ, ಅಲ್ಲೆ ಹೋರಗ ಎನರೆ ತಿನ್ನೊಣು ಅಂದ್ರ ಪರ್ಸಬ್ಯಾರೆ ಮನ್ಯಾಗ ಬಿಟ್ಟಬಂದಿದ್ದೆ, ಹಸಿವ್ಯರ ಜೋರ ಆಗಿತ್ತು. ಅಮ್ಮ ಬ್ಯಾರೆ ಮುಂಝಾನೆನ ಊರಿಗೆ ಹೋಗಿದ್ಲು. ಎರಡ ಒಬ್ಬಿ ಆಗೊ ಅಷ್ಟು ದ್ವಾಸಿ ಹಿಟ್ಟ ಇತ್ತು ಅದನ್ನ ಮಾಡಕೊಂಡ ತಿಂದ್ರಾತು ಅಂತ ಅವಸರದಲೆ ಮನಿಗೆ ಹೋಂಟಿದ್ದೆ. ಇನ್ನೆನ ಮನಿ ಸಂದಿಗೆ ಹೋಗಬೇಕನ್ನೊದ್ರಾಗ ಈ ರಮ್ಯಾ ಭೆಟ್ಟಿಯಾದಾ."ಯಾಕಲೇ ಇಷ್ಟ ಜಲ್ದಿ ಜಲ್ದಿ ಹೊಂಟಿ ವತ್ರ ಎನರೆ ಬಂದೆತೆನ ಅಂತ ಕೇಳಿದಾ, ಅದಕ್ಕನಾ ಹೊಗಲೇ ಮಗನ ಹೊಟ್ಟ್ಯಾಗ ಎನರೆ ಇದ್ರ ಅಲ್ಲಾ ಬರೋದು, ಹಸಿವ್ಯಾಗೆದ ಅದಕ್ಕ ಲಗೂನ ಮನಿಗೆ ಹೊಂಟೆನಿ ಅಂದೆ.
ಅದಕ್ಕ ಆಂವಾ ಲೇ ನಂಗೂ ಹಸಿವ್ಯಾಗೇತಿ, ನೀವು ಬ್ರಾಹ್ಮಣರ ಮಂದಿ ಎನೇನೊ ರುಚಿ ರುಚಿ ಅಡಗಿ ಭಾಳ ಮಾಡಕೊಂಡ ತಿಂತಿರಿ. ನಾನು ನಿಮ್ಮನಿಗೆ ಬರತೇನಿ ನಡಿ "ಅಂತ ಹೇಳಿದಾ. ಇದ್ದದ್ರಾಗ ಹಂಚಕೊಂಡ ತಿನ್ನೊಣ ನಡಿ ಅಂಥೇಳಿ ಕರ್ಕೊಂಡ ಹೋದೆ.ಮನಿಗೆ ಹೋಗಿ ಕೈಕಾಲಮಾರಿ ತೋಳಕೊಂಡ, ಟಿವ್ಹಿ ಹಚ್ಚಿ ರಮ್ಯಾನ ಅದರ ಮುಂದ ಕುಡಿಸಿ, ಅಡಗಿ ಮನಿಗೆ ಹೋಗಿ ಹಿಟ್ಟೇಷ್ಟ ಅದ ಅಂತ ನೋಡಿದೆ.ಇಬ್ಬರಿಗು ಎರಡೆರಡು ದ್ವಾಸಿ ಆಗೋ ಅಷ್ಟು ಇತ್ತು.ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ,ಕೊತ್ತಂಬರಿ,ಟೊಮ್ಯಾಟೊ ಎಲ್ಲಾ ಹೆಚ್ಚಿ ಹಾಕಿ ಮಸ್ತ ಎರಡ ಉತ್ತಪ್ಪಾ ಮಾಡಿ ಆಂವಗು ಕೊಟ್ಟ ನಾನು ತಿಂದೆ. ರಮ್ಯಾಗ ಇನ್ನು ಹೊಟ್ಟಿ ತುಂಬಿದ್ದಿಲ್ಲಾ. ನಂಗೂ ಅರಹೊಟ್ಟ್ಯಾಗಿತ್ತು ಮತ್ತ ಅಡಗಿ ಮನಿಗೆ ಹೋಗಿ ಎನರೆ ಅದ ಎನಂತ ನೋಡ್ಲಿಕ್ಕೆ ಹೋದೆ. ನಿನ್ನೆ ಮನಿ ಮಾಲಕರ ಸೊಸಿ ಒಂದಹತ್ತ ಗುಂಡಪಂಗಳಾ(ಫಡ್ಡು) ಕೊಟ್ಟಿದ್ವು ಇದ್ದುವು. ಅದನ್ನ ಬಿಸಿ ಮಾಡಿ ಕೊಟ್ರಾತು ಅಂಥೇಳಿ ಫಡ್ಡಿನ ಹಂಚ ಗ್ಯಾಸ್ ಮ್ಯಾಲಿಟ್ಟು ಬುಟ್ಟ್ಯಾಗಿನ ಫಡ್ಡ ಹಿಡದ ನೋಡಿದೆ ಆಗಲೇ ಅವು ಪಥ್ಥರ ದಿಲವಾಲೆ ಆಗಿದ್ವು ಅಂದ್ರ ಕಲ್ಲಾಗಿದ್ವು. ಉದ್ದಿನಬ್ಯಾಳಿ ಕಡಮಿ ಆಗಿದ್ವು ಅನಿಸ್ತದ. ಮತ್ತ ಇನ್ನೆನ ಮಾಡೊದು ಅಂತ ಹೇಳಿ ಅವನ್ನ ಬಿಸಿ ಮಾಡಿ ರಮ್ಯಾನ ತಾಟಿಗೆ ತಂದು ಸುರವಿದೆ. "ಮದಲ ಉತ್ತಾಪ್ಪಾ ಆಮ್ಯಾಲೆ ಫಡ್ಡು ಇವತ್ತ ನಿಮ್ಮನಿಗೆ ಬಂದದ್ದ ಭಾಳ ಛೊಲೊ ಆತ ನೋಡಲೇ ಅನಕೋತ ಫಡ್ಡ ತಗೊಂಡ ಬಾಯಾಗ ಇಟಗೊಂಡ ತಿನ್ನಲಿಕ್ಕೆ ಹೋದಾ ಅದೇನ್ ಒಂದ ಪೆಟ್ಟಿಗೆ ತುಂಡಾಗ್ಲಿಲ್ಲಾ. ಹಾಕ್ಕಿ ರಬ್ಬರ ಎಳಧಂಗ ಎಳದ ಮ್ಯಾಲೆ ತುಂಡಾತು. ಫಡ್ಡ ಹಳಸಲಿಕ್ಕೆ ಬಂದಿದ್ವು ಅನಿಸ್ತದ ಅಡ್ಡವಾಸನಿ ಬ್ಯಾರೆ ಆಗಿದ್ವು. ಫಡ್ಡ ಎಳದ ಜೋರಿಗೆ ನೋವಾಗಲಿಕತ್ತ ಹಲ್ಲ ಹಿಡಕೊಂಡ " ಲೇ ಮಗನ ಮದ್ಲ ಮೆತ್ತಗ ತಿನ್ನಿಸಿದ್ದಕ್ಕ ಈಗ ಹಿಂಗ ಮಾಡಿ ವಸೂಲಿ ಮಾಡಾಕತ್ತಿ ಎನ್ಲೇ. ಎಷ್ಟ ದಿನದ್ದ ತಂಗಳ ಫಡ್ಡ ನನಗಂತ ಇಟ್ಟ ತಿನಸಾಕತ್ತಿ ಲೇ ಮಗನ್ ಅಂತ ಒದ್ರಿದಾ." ಬರೋ ನಗು ತಡಕೊಂಡ ಸುಮ್ನಿದ್ದೆ. ಅವನ ಆವಸ್ಥಿ ನೋಡಿ ನಂಗಂತು ಮಸ್ತ ಬಿದ್ದ ಬಿದ್ದ ನಗೊ ಹಂಗಾಗಿತ್ತಕ್ಕ ಅಂತ ಹೇಳಿ ತನ್ನ ಫಡ್ಡಿನ ಪ್ರಹಸನಾ ಹೇಳಿ ಮುಗಿಸಿದಾ.
ನನ್ನ ತಮ್ಮನ ಮಾತಿಗೆ ಅಲ್ಲೆ ಕುತ ರಮ್ಯಾ" ಲೇ ಮಗನ ನೀನು ತಂಗಳ ಫಡ್ಡು ತಿಂದು ರಾತ್ರೆಲ್ಲಾ ಒದ್ದ್ಯಡಿದ್ರ ಗೊತ್ತಾಗತಿತ್ತ ಮಗನ ಅಂದು "ನನ್ನ ಕಡೆ ತಿರಗಿ " ಅಕ್ಕಾರ ಅವತ್ತ ಇಂವಾ ಕೊಟ್ಟ ಫಡ್ಡ ತಿಂದು ರಾತ್ರೆಲ್ಲಾ ಹೊಟ್ಟಿ ನೋವಾಗಿ, ಕಮರಡೇಗ ಬಂದು ವಾಂತಿಯಾಗಿ, ಹಿತ್ತಲಕ್ಕ ಎಡತಾಕಿ ಹೈರಾಣಬಿದ್ದ ಹೋಗಿದ್ದೆ. ಫಡ್ಡ ನೆನಿಸಿಕೊಂಡ್ರನ ಹೆಸಿಗಿ ಬರೊಹಂಗ ಮಾಡಿ ಇಟ್ಟಾ ಇಂವಾ ಭಟ್ಟಾ" ಅಂದಾ. ಮದಲ ಮನ್ಯಾಗ ಫಡ್ಡ ಮಾಡಿದ್ರ ಎನರೆ ಹೇಳಿ ತಪ್ಪಿಸ್ಕೊತಿದ್ದೆ, ಆದ್ರ ನಮ್ಮವ್ವಾ ಮತ್ತ ಹೆಂಡತಿ ಕೂಡೆ ಮನ್ಯಾಗ ಯಾಕ ತಿನ್ನಂಗಿಲ್ಲಾ ಹೋರಗ ಯಾರ ಮನಿಗೆ ಹೋಗತಿ ಅಂತ ಕೇಳಿ ಜೀವಾ ತಿಂತಾರ ಅದಕ್ಕ ಅವರು ನಾಷ್ಟಾದ್ದ ಪ್ಲೇಟ್ ನನ್ನ ಮುಂದ ಇಟ್ಟ ಅತ್ತಲಾಗ ಹೋದಮ್ಯಾಲೆ, ಒಂದ ಸಲಾ ಬಟ್ಟಿಲೇ ಫಡ್ದಗೋಳನ ಒತ್ತಿ ತಿವದ ಮೆತ್ತಗವ ಅಂದ ಮ್ಯಾಲೆ ,ವಾಸನಿ ನೋಡಿ ತಾಜಾ ಅವ ಅಂತ ಖಾತ್ರಿ ಮಾಡಕೋಂಡಮ್ಯಾಲೆನ ತಿಂತೆನ್ರಿ, ಅದೇನ ನಾಯಿ ಹಂಗ ಮೂಸಿ ನೋಡಿ ತಿನ್ನತಿ ಮೂಳಾ ಅಂತ ನಮ್ಮವ್ವ ಬೈತಿರತಾಳ ರಿ ಅಂದಾ." ಈ ಸಲಾ ನಂಗು ಜೋರ ನಗು ತಡಿಲಿಕ್ಕಾಗಲೆ ಇಲ್ಲಾ. ನಾನು ನನ್ನ ತಮ್ಮ ನಗೊದ ನೋಡಿ ರಮ್ಯಾ" ಲೇ ಅಕ್ಕಾ ತಮ್ಮಾ ಎನೋ ಪ್ಲ್ಯಾನ ಮಾಡಿನ ನನ್ನ ಕರಸಿಧಂಗದ. ಖರೆ ಹೇಳ ಅಂತ ಎಬ್ಬಂಕನಂಘ ಮಾರಿ ಮಾಡಕೊಂಡ ನನ್ನ ತಮ್ಮನ ಕಡೆ ನೋಡಲಿಕ್ಕತ್ತಾ. ಇನ್ನ ಆಂವನ್ನ ಭಾಳ ಕಾಡೊದ ಬ್ಯಾಡಂತ ಬಿಸಿ ಅವಲಕ್ಕಿ ಸೂಸಲಾ ಮಾಡಿ ತಿನ್ನಿಸಿ ಕಳ್ಸಿದೆ…..
******
ಫಡ್ಡ ಪುರಾಣ ಭಾರಿ ಬೆಸ್ಟ್ ಐತಿ ಬಿಡ್ರಿ. ಚಲೊತ್ನಾಗ ಬರದೀರಿ.
ಹ್ಹಾ ಹ್ಹಾ ಹ್ಹಾ !!!! ಪರವಾಗಿಲ್ವೆ !!! ಛ೦ದ ಬರಿಲಿಕತ್ತಿರಿ ಇತ್ತಿತ್ಲಾಗಿ !!!
ಶ್ರೀವಲ್ಲಭ ಕುಲಕರ್ಣಿ