ಪತ್ರ ಬರೆಯಲಾ: ಅನಿತಾ ನರೇಶ್ ಮಂಚಿ


ಅದೊಂದು ಕಾಲವಿತ್ತು.. ಅದನ್ನು ಕಾಯುವಿಕೆಯಲ್ಲಿನ ಪರಮ ಸುಖದ ಕಾಲ ಅಂತ ಕರೆದರೂ ಸರಿಯೇ. ಕಾಯುವಿಕೆ  ಅನಿವಾರ್ಯವಾದ ಕಾರಣ ’ತಾಳುವಿಕೆಗಿಂತನ್ಯ ತಪವು ಇಲ್ಲ’ ಎಂದುಕೊಂಡೇ ಎಲ್ಲರೂ ಆ ಸುಖವನ್ನು ಅನುಭವಿಸುತ್ತಿದ್ದರು. ಹೇಳಲಾರದ  ಚಡಪಡಿಕೆ, ಕಣ್ಣೋಟ ದೂರ ದಾರಿಯ ಕಡೆಗೇ.. ಕಾಲುಗಳು ನಿಂತಲ್ಲಿ ನಿಲಲರಿಯದೇ ಅತ್ತಿಂದಿತ್ತ ಇತ್ತಿಂದತ್ತ.. ಕಿವಿಗಳು ಅವನ ಹೆಜ್ಜೆಯ ಸಪ್ಪಳದ ಸದ್ದಿಗಾಗಿ ಹಾತೊರೆಯುತ್ತಾ.. ನಿಜಕ್ಕೂ ಅದು ರಾಮನ ಬರುವಿಕೆಗಾಗಿ ಕಾದಿರುವ  ಶಬರಿಯ ಧ್ಯಾನದಿಂದ ಕಡಿಮೆಯದ್ದೇನು ಅಗಿರಲಿಲ್ಲ.  ಏನಿರಬಹುದು ಇದು ಎಂಬ ಕುತೂಹಲವೇ.. 

’ವಸಂತ ಬರೆದನು ಒಲವಿನ ಓಲೆ .. ಚಿಗುರಿತು ಎಲೆ ಎಲೆ ಮೇಲೆ..’ ಹೂಂ ಇದೇ ನಾನು ಹೇಳಿದ ಕಾಯುವಿಕೆಯ ಅಂತ್ಯ. ಅಂದರೆ ವರುಷಕ್ಕೊಮ್ಮೆ ಬರುವ ವಸಂತ ಕಾಲವಲ್ಲ ಅವರ ಧ್ಯಾನದ ಮೂಲ.. ಪ್ರಿಯರಿಂದ ಬರುವ ಓಲೆಗಾಗಿಯೇ ಇದ್ದದ್ದು ಆ ಕನವರಿಕೆ ಕಾತರಗಳು.. 
ಕುಶಲವೇ.. ಕ್ಷೇಮವೇ.. ಎಂದು ಕೇಳುವ ಅಲ್ಲಿಂದ ಬಂಧು ಬಾಂಧವರ ಕುಶಲವನ್ನು ತಿಳಿಸುವ ಪತ್ರಗಳೇ ಇಲ್ಲಿನ ನಾಯಕರು. ಹಾಗಾಗಿಯೇ ಏನೋ ಅದನ್ನು ಹೊತ್ತು ತರುತ್ತಿದ್ದ ಅಂಚೆಯಣ್ಣನಿಗೆ ರಾಜೋಪಚಾರ. 

ಮದುವೆಯಾಗಿ ಹೋದ ಮಗಳ ಪತ್ರಕ್ಕೆ ಕೊರಳುದ್ದ ಮಾಡಿ ನಿಂತಿರುವ ತಾಯಿಯ ಆತಂಕ, ದೂರದೂರಿಗೆ ಕಲಿಯಲು ಹೋದ ಅಣ್ಣನ ಪತ್ರದಲ್ಲಿರುವ ಹೊಸ ವಿಷಯಗಳನ್ನು ಹಂಚಲು ಕಾಯುವ ಮುದ್ದು ತಂಗಿ, ಶಾಲೆಯ ರಜೆ ಹತ್ತಿರ ಬರುವಾಗ ಅಜ್ಜನ ಮನೆಯಿಂದ ಬರುವ ಕಾಗದಕ್ಕಾಗಿ ಎದುರು ನೋಡುತ್ತಿರುವ ಮೊಮ್ಮಕ್ಕಳು, ಕೋಣೆಯಲ್ಲೇ ಶತಪಥ ಹಾಕುತ್ತಾ, ತನ್ನ ನೋವನ್ನು  ಹೊರಗೆಡಹಲಾರದೇ ಬಳಲುತ್ತಿರುವ ಪ್ರೇಮಿಕೆ.. ಒಂದೇ ಎರಡೇ.. ಎಲ್ಲರ ಕಣ್ಣುಗಳು ಖಾಕಿ ಅಂಗಿ ತೊಟ್ಟು ಬರುವ ಅಂಚೆಯಣ್ಣನನ್ನು ಕಂಡೊಡನೇ ಆನಂದದಿಂದ ಅಗಲವಾಗುತ್ತಿತ್ತು. 

ಪತ್ರ ಬಂದರಂತೂ ಆ ದಿನ ಮನೆಯಲ್ಲಿ ಹಬ್ಬದ ವಾತಾವರಣ. ಡವಗುಟ್ಟುವ ಎದೆಯೊಂದಿಗೆ ಅಂಚೆಯವನ ಸೈಕಲ್ಲಿನ ಎದುರು ಕೈ ಚಾಚಿ ನಿಲ್ಲುತ್ತಿದ್ದವರು ಕೈಗೆ ಬಿದ್ದ ಕಾಗದವನ್ನು ಪರಮ ಭಕ್ತಿಯಿಂದಲೇ ಸ್ವೀಕರಿಸುತ್ತಿದ್ದರು. ಸಾಧಾರಣವಾಗಿ ನಸು ಹಳದಿ ಬಣ್ಣದ ಪೋಸ್ಟ್ ಕಾರ್ಡಿನಲ್ಲೇ ಜೀವನದ ಪರಮ ರಹಸ್ಯವನ್ನೂ ಬರೆಯುತ್ತಿದ್ದ ಕಾಲವದು. ಎಲ್ಲಾದರೂ ಮುಚ್ಚಿದ ನಸು ನೀಲಿ ಬಣ್ಣದ ಕಾಗದ ಬಂದರಂತೂ ಅಂಚೆಯಣ್ಣ ಕೂಡಾ ಅದರೊಳಗಿನ ವಿಷಯ ತಿಳಿಯದೇ ಕಾಲು ಹೊರಗಿಡುತ್ತಿರಲಿಲ್ಲ. ಕಾಗದದಲ್ಲಿ ಬಂದ ವಿಷಯಗಳು ಅವನ ಬಾಯಿಯಿಂದಲೇ ಒಬ್ಬರಿಂದ ಇನೊಬ್ಬರಿಗೆ ಹರಡಿ ಊರಿಡೀ ಕಾಗದದ ವಿಷಯ ಡಂಗುರವಾಗುತ್ತಿತ್ತು. ಪತ್ರದ ವಿಷಯ ದುಃಖಕರವಾಗಿದ್ದರಂತೂ ಊರಿಗೆ ಊರೇ ಸೇರುತಿತ್ತಲ್ಲಿ.

ಕಾಗದ ಬರೆಯಲು ಇಂತಹುದೇ ಕ್ರಮ ಎಂದಿತ್ತು. ಮೇಲಿನ ಸಾಲುಗಳು ಶುರು ಆಗುತ್ತಿದುದು ಹಿರಿಯರ ಆಶೀರ್ವಾದವನ್ನು ಬೇಡಿಯೇ.. ಮತ್ತಿನ ಸಾಲಿನಲ್ಲಿ ಕಾಗದ ಬರೆಯುವವನು ಯಾವ ಆಪತ್ತಿನಲ್ಲಿ ಸಿಲುಕಿದ್ದರೂ ನಾನು ಕ್ಷೇಮ ನಿಮ್ಮ ಕ್ಷೇಮವನ್ನು ಬಯಸುತ್ತೇನೆ ಎಂದೇ ಇರುತ್ತಿತ್ತು. ಮತ್ತುಳಿದ ಜಾಗದಲ್ಲಿ ಎಲ್ಲಾ ಸಮಾಚಾರಗಳನ್ನು ತುಂಬುತ್ತಿದ್ದರು. ಅದೂ ಇನ್ ಲ್ಯಾಂಡ್ ಲೆಟರಿನಲ್ಲಂತೂ ಅದರ ಬದಿಯ ಗಮ್ ಹಚ್ಚುವ ಜಾಗವನ್ನೂ ಬಿಡದೇ ಎಷ್ಟು ಸಾಧ್ಯವೋ ಅಷ್ಟು ವಿಷಯಗಳನ್ನು ಬರೆಯುತ್ತಿದ್ದರು. ಸೊಟ್ಟ ಸೊಟ್ಟದಾಗಿ ಅಕ್ಷರ ಬರೆಯುವವರು ಕಾಗದಗಳನ್ನು ಬೇರೊಬ್ಬರಿಂದ  ಬರೆಸುತ್ತಿದ್ದುದೂ ಇತ್ತು. 

ಸಾಮಾನ್ಯವಾಗಿ ಮನೆಯ ಗೋಡೆಯ ಮೂಲೆಯಲ್ಲಿ ಒಂದು ಕೊಡೆಯ ತಂತಿ ತುದಿಯ ಭಾಗ ಮಡಚಿಕೊಂಡು ನೇತು ಹಾಕಿರುತ್ತಿತ್ತು. ಅದರಲ್ಲಿ ಮನೆಗೆ ಬಂದ ಕಾಗದಗಳನ್ನೆಲ್ಲಾ ಚುಚ್ಚಿ ಇಡುತ್ತಿದ್ದರು. ಆಗೆಲ್ಲ ಕಾಗದಗಳು ಎಂದರೆ ಮನೆಯವರೆಲ್ಲರಿಗೂ ಓದಬಹುದಾದಂತವುಗಳು. ಯಾರ ಹೆಸರಿಗೇ ಬಂದಿರಲಿ ಕಾಗದ ಕೈಗೆ ಸಿಕ್ಕಿದವನು ಒಡೆದು ಓದುತ್ತಿದ್ದ. ಈಗಿನಂತೆ ಮುಟ್ಟಬಾರದು, ಬೇರೆಯವರ ಹೆಸರಿನ ಕಾಗದ ಓದಬಾರದು ಎಂಬ ನಿಯಮಗಳೆಲ್ಲಾ ಮನೆಯಲ್ಲಿ ನಡೆಯುತ್ತಿರಲಿಲ್ಲ.  

ನನ್ನೊಬ್ಬಳು ಗೆಳತಿಗೆ ಮಿಲಿಟ್ರಿಯಲ್ಲಿದ್ದ ಹುಡುಗ ನಿಶ್ಚಯವಾಗಿದ್ದ. ವಾರಕ್ಕೊಮ್ಮೆ ನಿರ್ದಿಷ್ಟ ದಿನಗಳಲ್ಲೇ ಬರುವ ಪತ್ರ ತನ್ನ ತಂದೆಯ ಕೈ ಸೇರಬಾರದೆನ್ನುವ ಉದ್ದೇಶದಿಂದ ಆಕೆ ಅವನಿಗೆ ಹುಡುಗಿಯ  ಹೆಸರಿನಲ್ಲೇ ಪತ್ರ ಬರೆಯುವಂತೆ ವಿನಂತಿಸಿದ್ದಳು.ಹುಡುಗಿಯ ಹೆಸರಲ್ಲಿ ಬರುವ ಪತ್ರವಾದ ಕಾರಣ ಅಪ್ಪನಿಗೆ ಸಂಶಯ ಬಾರದೆಂಬ ಮುನ್ನೆಚ್ಚರಿಕೆ ಅವಳದ್ದು.  ಆ ಪತ್ರ ಬರುವ ದಿನ ತಾನೇ ಖುದ್ದಾಗಿ ತನ್ನ ಮನೆಯ ಹತ್ತಿರವೇ ಇರುವ ಪೋಸ್ಟ್ ಆಫೀಸು ಬಾಗಿಲು ತೆಗೆಯುವುದನ್ನೇ ಕಾದು ಅಲ್ಲಿಗೆ ಹೋಗಿ ಕಾಗದ ಪಡೆದುಕೊಳ್ಳುತ್ತಿದ್ದಳು. ಒಂದು ದಿನ ಅವಳು ಹೋದಾಗ  ಪತ್ರ ಇಲ್ಲವೆಂದು ಅಂಚೆಯವನು ತಾರಮ್ಮಯ್ಯ ಎಂದು ಕೈ ಆಡಿಸಿದ. ಅವಳಿಗೆ ಎದೆ ಒಡೆಯುವಂತಹಾ ದುಃಖ. ಏನಾಗಿರಬಹುದು ತನ್ನ ಪ್ರಿಯನಿಗೆ ಎನ್ನುವ ಆತಂಕ ಒಂದು ಕಡೆಗಾದರೆ ಯಾರೊಡನೆ ಇದನ್ನು ಹಂಚಿಕೊಳ್ಳುವುದು ಎಂಬ ತೊಳಲಾಟ.. ಅಳು ಮುಖ ಹೊತ್ತ ಅವಳು ಮನೆಗೆ ಬಂದರೆ ಅವಳ ಅಪ್ಪನ ಕೈಯಲ್ಲಿ  ಬಿಡಿಸಿದ್ದ ಅವಳ ಹೆಸರಿನ ಕಾಗದ. ಅಲ್ಲಿಯವರೆಗಿದ್ದ ಅವಳ ದುಃಖ ಈಗ ಭಯವಾಗಿ ಮಾರ್ಪಟ್ಟಿತು. 

’ಅಲ್ಲಾ ಅವನ ಹೆಸರಲ್ಲಿ ಕಾಗದ ಬರೀಲಿಕ್ಕಾಗದ ಹುಡುಗ ಅದೆಂತಾ ಮಿಲಿಟ್ರಿ ಹುಡುಗನೇ? ಅಷ್ಟು ಧೈರ್ಯ ಇಲ್ವಾ ಅವನಿಗೆ.. ನಮ್ಮ ಕಾಲದಲ್ಲಿ ನಾವು ಹೀಗಿರಲಿಲ್ಲ.. ನಿನ್ನಮ್ಮನಿಗೆ ಧೈರ್ಯವಾಗಿ ನಾನೇ ಕಾಗದ ಬರೀತಿದ್ದೆ ಅದೂ ನನ್ನ ಹೆಸರಲ್ಲೇ ಗೊತ್ತಾ’ ಎಂದು ಅಪ್ಪ ಎದೆಯುಬ್ಬಿಸಿ ಹೇಳುವಾಗ ಅಪ್ಪನ ಹರೆಯದ ನೆನಪು ಮೊಗದ ಮೇಲಿದ್ದರೆ ಅವಳ ಅಮ್ಮ ಕೆಂಪಾಗಿ ನಾಚುತ್ತಿದ್ದಳು. ನಂತರ ಅವಳ ಪ್ರಿಯಕರನ ಕಾಗದವೆಲ್ಲಾ ಮೀಸೆ ಹೊತ್ತ ಅವನ ಹೆಸರನ್ನೇ ಹೊತ್ತು ಬಂತು ಎಂದು ಬೇರೆ ಹೇಳಬೇಕಿಲ್ಲ ತಾನೇ.. 

ನಾವಿದ್ದದ್ದು ಪುಟ್ಟ ಊರಾದ ಕಾರಣ ಪೇಟೆಯಿಂದ ದೂರದಲ್ಲಿರುವ ಹಳ್ಳಿಯವರು ದೂರದೂರುಗಳಲ್ಲಿರುವ ತಮ್ಮ ಬಂಧುಗಳಿಗೆ ತಮ್ಮ ಮಕ್ಕಳ ಶಾಲಾ ವಿಳಾಸ ನೀಡುತ್ತಿದ್ದರು. ಮೈಲುಗಟ್ಟಲೆ ಅಲೆಯುವ ಪರಿಶ್ರಮ ತಪ್ಪಿಸಲು ಈ ಉಪಾಯವನ್ನು ಅಂಚೆಯಣ್ಣನೇ ಹೇಳಿಕೊಟ್ಟಿದ್ದ ಎಂಬುದು ಬೇರೆ ಮಾತು.  ಶಾಲೆಗಳಲ್ಲಿ ಆಗ ಯಾರ ಹೆಸರಿಗಾದರೂ ಪತ್ರ ಬಂತು ಎಂದಾದರೆ ಅವರನ್ನು ಅಸೆಂಬ್ಲಿ ಹಾಲಿಗೆ ಕರೆದು ಎಲ್ಲರೆದುರು ದೊಡ್ಡ ಅವಾರ್ಡ್ ಕೊಟ್ಟಂತೆ ಕಾಗದ ಕೊಡುತ್ತಿದ್ದರು.ಕಾಗದ ಸ್ವೀಕರಿಸಿದವರೂ ಅಷ್ಟೇ ಗತ್ತಿನಲ್ಲಿ ಅದನ್ನು ಎಲ್ಲರಿಗೂ ಕಾಣುವಂತೆ ಕೈಯಲ್ಲಿ ಹಿಡಿದೇ ಮನೆ ಸೇರುತ್ತಿದ್ದರು. ಅದರಲ್ಲೂ ಹುಡುಗಿಯರ ಹೆಸರಿಗೆ ಕಾಗದ ಬಂತೆಂದರೆ ಅದು ಹೆಡ್ ಮಾಷ್ಟ್ರ ಸೆನ್ಸಾರ್ ಬೋರ್ಡಿಗೆ ಒಳಗಾಗಿಯೇ ಹುಡುಗಿಯ ಕೈ ಸೇರುತ್ತಿತ್ತು. ಹಾಗಾಗಿಯೇ ಕೆಲವು ಹುಡುಗಿಯರು ತಮಗೆ ಕಾಗದ ಬಂದಿದೆ ಎನ್ನುವ ಸುದ್ದಿ ತಿಳಿದರೆ ಸಾಕು ಯಾರು ಬರೆದಿದ್ದಪ್ಪಾ ಎಂದು ಹೆದರಿ  ಅಳುತ್ತಿದ್ದರು. ಕಾಗದ ಕೈಗೆ ಸಿಗುವವರೆಗೆ ಅವರ ಆತಂಕ ತಪ್ಪುತ್ತಿರಲಿಲ್ಲ. 

ಆಗಷ್ಟೇ ಮದುವೆಯಾದ ಹುಡುಗಿಯರ ಅಮ್ಮಂದಿರ ಕಾಗದಗಳಲ್ಲಿ ಮೊದಲಿಗೆ ಒಂದಷ್ಟು ಉಪದೇಶಗಳಿದ್ದರೆ ಉಳಿದ  ಭಾಗದಲ್ಲಿ ಹೊಸ, ಹಳೇ ಅಡುಗೆ ಮಾಡುವ ವಿಧಾನಗಳಿರುತ್ತಿದ್ದವು. ಮಗಳು ಪಾಕಪ್ರವೀಣೆಯಾಗಿ ಎಲ್ಲರ ಜಿಹ್ವಾ ಚಾಪಲ್ಯವನ್ನು ತಣಿಸಿ ಗಂಡನ ಮನೆಯವರ  ಅಚ್ಚು ಮೆಚ್ಚಿನ ಸೊಸೆಯಾಗಲಿ   ಎಂಬ  ಅಮ್ಮನ ಸಹಜ ಬಯಕೆ ಕಾಗದದಲ್ಲಿ ಮೂಡುತ್ತಿತ್ತು. ಇನ್ನು ತವರಿನ ಮನೆಯಂಗಳದ ಯಾವ ಗಿಡ ಹೂ ಬಿಟ್ಟಿದೆ, ಯಾವ ಮರ ಫಲ ಕೊಟ್ಟಿದೆ, ಯಾವ ದನ ಕರು ಹಾಕಿದೆ ಎಂಬೆಲ್ಲ ವಿಷಯಗಳು ಇರುತ್ತಿತ್ತು. ಪ್ರತಿ ಕಾಗದದಲ್ಲೂ ಯಾವಾಗ ಮಗಳ ಭೇಟಿ ಎನ್ನುವ ನಿರೀಕ್ಷೆಯೊಂದಿಗೆ  ಕೊನೆಯಲ್ಲಿ ಎರಡೇ ಎರಡು ಸಾಲಿನ ಅಪ್ಪನ ಆಶೀರ್ವಾದ.. ಹಾಗಾಗಿಯೇ ಏನೋ ಅವಳಿಗೆ ಈ ಕಾಗದ ಬಂದಾಗ ತವರಿನ ಅಂಗಳದಲ್ಲಿ ನಡೆದಾಡಿದ ಅನುಭವವಾಗಿ ಜೀವಕ್ಕೆ ಚೇತೋಹಾರಿ ಎನ್ನಿಸುತ್ತಿತ್ತು. 

ಕಾಗದಗಳು ಸಂತಸ ತರುವುದು ಮಾತ್ರವಲ್ಲು ದುಃಖವನ್ನೂ ಕೆಲವೊಮ್ಮೆ ಹೊತ್ತು ತರುತ್ತಿತ್ತು. ಅದು ಸೇರಬೇಕಾದವರ ಕೈ ಸೇರುವಾಗ ತಡವಾಗಿ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಲು ಸಾಧ್ಯವಾಗದ ನೋವು ಕೂಡಾ ಅದರ ಜೊತೆಗೆ. ಅಪುರೂಪಕ್ಕೆ ಬರುತ್ತಿದ್ದ ಟೆಲಿಗ್ರಾಮುಗಳನ್ನು ಎಲ್ಲರೂ ತೆಗೆದುಕೊಳ್ಳುವಾಗಲೇ ಅಳುತ್ತಿದ್ದರು. ಅಂತಹ ತುರ್ತು ಇಲ್ಲದಿದ್ದರೆ ಟೆಲಿಗ್ರಾಮ್ ಬರುತ್ತಲೇ ಇರಲಿಲ್ಲ. ಒಮ್ಮೆ ನಮ್ಮ ಪಕ್ಕದ ಮನೆ ಹುಡುಗಿಯ ಅಣ್ಣನ ಹೆಸರಿಗೆ ಟೆಲಿಗ್ರಾಮ್ ಬಂದಿತ್ತು. ಅವನೋ ತನ್ನ ಗೆಳೆಯರ ಜೊತೆ ಈಜಲು ಊರ ಹೊರಗಿನ ನದಿಗೆ ಹೋಗಿದ್ದ. ಅವನಮ್ಮ ಜೀವ ಕೈಯಲ್ಲಿ ಹಿಡಿದು ಅಳುತ್ತಲೇ ಅಲ್ಲಿಯವರೆಗೆ ಓಡಿದ್ದಳು. ಇನ್ನೂ ಅವನು ದಡ ತಲುಪುವ ಮೊದಲೇ ಅವನ ಕೈಗೆ ಟೆಲಿಗ್ರಾಮ್ ಕೊಡುವ ಆತುರದಲ್ಲಿ ಅದು ಜಾರಿ ನೀರಿಗೆ ಬೀಳಬೇಕೇ? ಅವನು ಈಜಿ ಅದನ್ನು ಹಿಡಿಯ ಹೊರಟರೂ ಅದು ನೀರಲ್ಲಿ ತೇಲಿ ಮಾಯವಾಯಿತು. ಅದರಲ್ಲೇನಿತ್ತು ವಿಷಯ ಎಂದು ತಿಳಿಯದ ಆತ ಅಳುತ್ತಿದ್ದ ಅಮ್ಮನನ್ನು ಬಯ್ಯುತ್ತಾ ಮತ್ತಷ್ಟು ಅಳಿಸಿದ. ಟೆಲಿಗ್ರಾಮ್ ಬಂದದ್ದು ಎಲ್ಲಿಂದ ಯಾರಿಂದ ಯಾಕೆ ಎಂಬೆಲ್ಲ ಪ್ರಶ್ನೆಗಳು ಆ ದಿನ ಆ ಮನೆಯರ ನಿದ್ದೆಯನ್ನು ಕಸಿದಿತ್ತು. ಮರು ದಿನ ಬೆಳ್ಳಂ ಬೆಳಿಗ್ಗೆ ಆ ಮನೆಗೆ  ಆ ಮನೆಯ ಹುಡುಗಿಯ ಸೋದರ ಮಾವ ಪ್ರತ್ಯಕ್ಷವಾದ. ಅವಳ ತಾಯಿಗೆ ಈಗ ಇನ್ನಷ್ಟು ಅಳು. ಆದರೆ ಆತ ನಗುತ್ತಲೇ ನನಗೆ ಮದುವೆ ನಿಶ್ಚಯವಾಯ್ತು. ಅಕ್ಕನನ್ನು ಒಂದೆರಡು ದಿನಕ್ಕೆ ಮದುವೆಯ ಒಡವೆ ವಸ್ತ್ರದ ಆಯ್ಕೆಗಾಗಿ ತವರಿಗೆ ಕರೆದೊಯ್ಯಲು ಬಂದಿದ್ದೇನೆ. ನಿನ್ನೆಯೇ ನಿಮಗೆ ಟೆಲಿಗ್ರಾಮ್ ಕಳ್ಸಿದ್ದೆ ಸಿಗಲಿಲ್ವಾ ಅಂತ ಕೇಳಿದಾಗ ಎಲ್ಲರ ಎದೆ ಬಡಿತದ ವೇಗ ಸಹಜ ಸ್ಥಿತಿಗೆ ಬಂತು.

ಒಮ್ಮೆ ಕಣ್ಮುಚ್ಚಿ ಆ ಕಾಲಕ್ಕೆ ಚಲಿಸಿ ನೋಡಿ. ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಸುವ ಫೋನ್ ಎಂಬ ಮಾಂತ್ರಿಕ ಇಲ್ಲದ ಕಾಲವದು. ಈಗಲೂ ಅದೇ ಆತಂಕ, ಅದೇ ಸುಖವನ್ನು ಅನುಭವಿಸುವ ಆಸೆಯಿದೆಯೇ..ಒಂದೆರಡು ದಿನ ನಿಮ್ಮ ಮೊಬೈಲ್ ಫೋನ್ ಗಳನ್ನು ಆಫ್ ಮಾಡಿ, ಕಾಗದದ ಅಕ್ಷರಗಳಿಗಾಗಿ ಕಾಯಿರಿ. ಆಗ ತಿಳಿಯುತ್ತದೆ ಆ ಸ್ವರ್ಗ ಸುಖದ ಅಮಲು ಎಷ್ಟರದು ಎಂದು.. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Anil T
Anil T
10 years ago

ನಮ್ಮ ಮನೆಯಲ್ಲಂತೂ ಇನ್ ಲ್ಯಾಂಡ್ ನಲ್ಲಿ ಬರೆಯುವದಕ್ಕೆ ದೊಡ್ಡ ಸ್ಪರ್ಧೆಯೆ ಇರುತ್ತಿತ್ತು -ಕೊನೆಯ (ಅಡ್ರೆಸ್ ಮೇಲಗಡೆಯ ಭಾಗ) ಜಾಗ ಭರ್ತಿ ಮಾಡುವ ಕೆಲಸ ನನ್ನದಾಗಿರುತ್ತಿತ್ತು -ಕೆಲವೊಮ್ಮೆ ಅಂತೂ ಅಡ್ರೆಸಗೂ ಜಾಗವಿಲ್ಲದಂತೆ ಬರಿದೆ ಬರೆಯುತ್ತಿದ್ದೆವು. ಆ ದಿನಗಳ ನೆನಪಿಸಿದವು ನಿಮ್ಮ ಸುಂದರ ಬರಹ.

-Anil

rukmini nagannavar
rukmini nagannavar
10 years ago

ಚೆಂದದ ಬರಹ..

ಹೌದು ಕಾಗದಗಳು ಕೊಡುತಿದ್ದ ಕಾತರತೆ ಈಗ ಮಾಯವಾಗಿದೆ…. 
ನನಗಿನ್ನು ಪತ್ರ ವಿನಿಮಯ ಪದ್ಧತಿಗಳೆ ಇ‍ಶ್ಟ ಅಗುತ್ತೆ…

ರುಕ್ಮಿಣಿ ಎನ್. 

amardeep.ps
amardeep.ps
10 years ago

ಪತ್ರಗಳ ಓದುವ, ಬರೆಯುವ ಅಭ್ಯಾಸ ಮತ್ತು ಕುತೂಹಲ ಈಗ ಇಲ್ಲ. ಆದರೆ ಅವುಗಳ ಸಹವಾಸ ನನಗೆ ಬಹಳ ಇಷ್ಟ. ಈಗಲೂ ನನ್ನ ಹತ್ತಿರ ಇಪ್ಪತ್ತು ವರ್ಷಗಳ ಪತ್ರಗಳಿವೆ… 

Santhoshkumar LM
10 years ago

🙂 chennagide

ಮಂಜುಳಾ
ಮಂಜುಳಾ
10 years ago

ಪತ್ರ ಬರೀಬೇಕು ಅನಿಸ್ತಿದೆ! 🙂

Shree Varaprasad
Shree Varaprasad
10 years ago

When I was in PU, my highschool teachers used to write letter to my college address. I would like to mention 2 names of teachers here. 1. Seetharama Peraje  2. Kusuma. Kusuma madam used to write, from address as "KUSUM" and Seetharama Sir used to write as "SEEMA PERAJE". Always I used to recieve Seetharama sir's letter, in open condition. (As he used to write as Seema and our Primcpal used to read all the letters if the genders are diffrent in FROM and TO addresses), but Kusum's never. Genarally  the letter will start with sentence, "Olavina Tamma ….". 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ನಿಮ್ಮ ಲೇಖನವು ತೇಜಸ್ವಿರವರ ಅಬಚೂರಿನ ಪೋಸ್ಟಾಫೀಸಿನ ನೆನಪು ತಂದಿತು.. 🙂

ಸ್ವಾರಸ್ಯಕರ ಲೇಖನ, ಧನ್ಯವಾದಗಳು ಮೇಡಂ 🙂

7
0
Would love your thoughts, please comment.x
()
x